ನಾಗಪುರ ಜ:೧೦: ಟಿಬೇಟಿಯನ್ನರ ಪರಮೋಚ್ಛ ಧಾರ್ಮಿಕ ನಾಯಕ, ನೋಬಲ್ ಪ್ರಶಸ್ತಿ ವಿಜೇತ ದಲಾಯಿ ಲಾಮಾ ಇಂದು ಇಲ್ಲಿನ ರೇಶಮ್ ಭಾಗ್ ಪ್ರದೇಶದಲ್ಲಿನ ಆರೆಸ್ಸೆಸ್ಸ್ ಮುಖ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿರುವ ಸಂಘ ಸ್ಥಾಪಕ ಡಾ. ಹೆಡಗೇವಾರ ಹಾಗೂ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜೀ ಅವರ ಸಮಾಧಿಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

HH Dalai Lama offering tributes to  SAMADHI of RSS Founder Dr KB Hedgewar

HH Dalai Lama offering tributes to SAMADHI of RSS
Founder Dr KB Hedgewar

ಈ ಸಂದರ್ಭದಲ್ಲಿ ಮಾತನಾಡಿದ ದಲಾಯಿ ಲಾಮಾ, ಭಾರತ ಮತ್ತು ಟಿಬೇಟ್ ನಡುವಿನ ಸಂಬಂಧ ಐತಿಹಾಸಿಕ ಹಾಗೂ ಪ್ರಾಚೀನವಾದುದು. ದೇಶಭ್ರಷ್ಟರಾಗಿ ಭಾರತಕ್ಕಾಗಮಿಸಿದ ಸಮಯದಿಂದಲೂ ಆರೆಸ್ಸೆಸ್ ಟಿಬೇಟಿಯನ್ನರ ಜೊತೆಯಲ್ಲಿದೆ ಹಾಗೂ ಅವರಿಗೆ ನೆರವಿನ ಹಸ್ತ ಚಾಚುತ್ತಿದೆ. ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ನಮ್ಮ ಸಂಘರ್ಷದಲ್ಲಿ ಸಂಘದ ಸಮರ್ಥನೆ ಸದಾ ನಮಗೆ ಪ್ರೇರಣೆದಾಯಿಯಾಗಿದೆ. ವಿವಿಧತೆಯಿಂದ ಕೂಡಿದ ಭಾರತದಂತಹ ರಾಷ್ಟ್ರದಲ್ಲಿ ಸಂಘ, ಶಿಸ್ತು ಮತ್ತು ಸಮರ್ಪಣೆಯಂತಹ ಮೌಲ್ಯಗಳನ್ನು ಬೆಳೆಸಲು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಆರೆಸ್ಸೆಸ್ ಕೇಂದ್ರ ಕಚೇರಿಗೆ ದಲಾಯಿ ಲಾಮಾ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಪೂರ್ವನಿರ್ಧಾರಿತ ಕಾರ್ಯನಿಮಿತ್ತ ಹೈದ್ರಾಬಾದ್‌ನಲ್ಲಿದ ಸರಸಂಘಚಾಲಕ ಡಾ.ಮೋಹನಜೀ ಭಾಗ್ವತ್ ದೂರವಾಣಿಯಲ್ಲಿ ದಲಾಯಿ ಲಾಮಾ ಅವರೊಂದಿಗೆ ಮಾತನಾಡಿ, ಈ ಸುಸಂದರ್ಭದಲ್ಲಿ ತಮ್ಮ ಅನುಪಸ್ಥಿತಿಯ ಬಗ್ಗೆ ಖೇದ ವ್ಯಕ್ತಪಡಿಸಿದರು. ತಮ್ಮ ಸಂದೇಶದಲ್ಲಿ ಡಾ.ಭಾಗ್ವತ್ ಟಿಬೇಟ್ ಮತ್ತು ಭಾರತದ ಮಧ್ಯದ ಆಧ್ಯಾತ್ಮಿಕ ಸಂಬಂಧಗಳನ್ನು ಸ್ಮರಿಸಿಕೊಂಡರಲ್ಲದೇ ಟಿಬೇಟಿಯನ್ನರ ಸಂಘರ್ಷದಲ್ಲಿ ಸಂಘ ಹಾಗೂ ಸ್ವಯಂಸೇವಕರು ಸದಾ ಟಿಬೇಟಿಯನ್ನರ ಜೊತೆ ಇದ್ದಾರೆ ಎಂದು ದಲಾಯಿ ಲಾಮಾ ಅವರಿಗೆ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪಶ್ಚಿಮ ಕ್ಷೇತ್ರ ಕಾರ್ಯವಾಹ ರವೀಂದ್ರ ಜೋಶಿ ದಲಾಯಿ ಲಾಮಾ ಅವರಿಗೆ ಸ್ಮರಣಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿದರ್ಭ ಪ್ರಾಂತ ಸಹ ಸಂಘಚಾಲಕ ರಾಮ್ ಹರಕರೆ, ನಾಗಪುರ ಮಹಾನಗರ ಸಂಘಚಾಲಕ ದಿಲೀಪ ಗುಪ್ತಾ ಸೇರಿದಂತೆ ಅನೇಕ ಹಿರಿಯ ಸಂಘದ ಅಧಿಕಾರಿಗಳು ಉಪಸ್ಥಿತರಿದ್ದರು.