ಶಿವಮೊಗ್ಗ: ದೇಶ ನಿರ್ಮಾಣವಾಗುವುದು ಸರ್ಕಾರದ ಬದಲಾವಣೆಗಳಿಂದ ಅಲ್ಲ. ಬದಲಾಗಿ ವ್ಯಕ್ತಿ ನಿರ್ಮಾಣದಿಂದ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ.

DSC_0784

ತಾಲೂಕಿನ ಪಿಳ್ಳಂಗೆರೆಯಲ್ಲಿ ಆಯೋಜಿಸಲಾಗಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವುದು ಹಿಂದು ಧರ್ಮದಲ್ಲಿ ಮಾತ್ರ. ಆದರೆ ನಾವೇ ನಮ್ಮ ಧರ್ಮದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಹೀಗೆ ನಂಬಿಕೆ ಕಳೆದುಕೊಳ್ಳುತ್ತಿರುವುದನ್ನೇ ಕ್ರಿಶ್ಚಿಯನ್ನರು ಮತಾಂತರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಶೇ.೯೫ರಷ್ಟು ಮತಾಂತರ ನಡೆದಿದೆ. ಆದರೆ ಮತಗಳ ಬದಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಬೇಕಾಗಿವುದು ನಮ್ಮ ಮೂಲ ಚಿಂತನೆಯಲ್ಲಿ ಎಂದು ಹೇಳಿದರು.

ಭಾರತದಲ್ಲಿ ಹಿಂದುಗಳ ಸಂಖ್ಯೆ ಕ್ಷೀಣ

ನಾವು ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಕಥೆ ಹೇಳುವುದಕ್ಕೆ ಹಿಂಜರಿಯುತ್ತೇವೆ. ವಿವೇಕಾನಂದರಿಗೆ ಅನ್ನಿಸಿದಂತೆ ನಮಗೂ ಸಹ ನಾವೇ ದೇಶದ ಋಷಿ ಪರಂಪರೆಯವರು ಅನ್ನಿಸುವುದಿಲ್ಲ. ಇಸ್ರೇಲಿಗಳು ಮರುಭೂಮಿಯನ್ನೇ ಭಕ್ತಿಯಿಂದ ಪೂಜಿಸಿ ತಮ್ಮ ದೇಶವನ್ನು ಕಟ್ಟಿಕೊಂಡರು. ಆದರೆ ನಮಗೆ ಈ ಸಸ್ಯಶಾಮಲೆ ಭಾರತ ಮಾತೆಯನ್ನು ರಕ್ಷಿಸಿಕೊಳ್ಳಲು ಉದಾಸೀನತೆ ಕಾಡುತ್ತಿದೆ ಎಂದು ವಿಷಾದಿಸಿದರು.

ಲವ್ ಜಿಹಾದ್, ಗೋ ಹತ್ಯೆ, ಗಡಿಯಲ್ಲಿನ ಆಕ್ರಮಣ, ಭಯೋತ್ಪಾದನೆಯಂತಹ ಸಂಗತಿಗಳ ಬಗ್ಗೆ ನಮ್ಮ ಪ್ರತಿಕ್ರಿಯೆ ತೀರಾ ನಿರಾಶದಾಯಕವಾಗಿದೆ. ಈ ನಿರ್ಲಕ್ಷತೆಗೆ ನಾವು ನಮ್ಮ ಹಿಂದುತ್ವವನ್ನು ಮರೆತಿರುವುದೇ ಕಾರಣವಾಗಿದೆ. ನಮ್ಮನ್ನು ನಾವು ಜೀವಂತವಾಗಿದ್ದೇವಾ ಎಂದು ಪ್ರಶ್ನಿಸಿಕೊಂಡರೆ ಜೀವ ಮತ್ತು ಪ್ರಾಣ ಮಾತ್ರ ಇದೆ ಎಂದು ಹೇಳಬಹುದು. ನಮ್ಮ ದೇಶ ಚಿಕ್ಕದಾಗುತ್ತಾ ಹೋಗುತ್ತಿದೆ. ಹಿಂದುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದರು.

ಶೋಚನೀಯ ಸ್ಥಿತಿಯಲ್ಲಿ ಭಾರತೀಯತೆ

ಭಾರತವನ್ನು ಹೆಚ್ಚುದಿನ ಆಳಬೇಕಾದರೆ ಭಾರತೀಯರ ಕರುಳ ಬಳ್ಳಿಯನ್ನು ಕತ್ತರಿಸಬೇಕು ಎಂದು ಲಾರ್ಡ್ ಮೆಕಾಲೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಸಂದರ್ಭದಲ್ಲಿ ಹೇಳಿದ್ದ. ವಿದ್ಯೆಗೆ ಸರಸ್ವತಿ, ಆರ್ಥಿಕತೆಗೆ ಲಕ್ಷ್ಮಿ, ಶಿಕ್ಷಣಕ್ಕೆ ಕಾಳಿಯನ್ನು ಭಾರತ ಮಾತೆ ನಮಗೆ ಅನುಗ್ರಹಿಸಿದ್ದಾಳೆ. ಇವುಗಳೇ ನಮ್ಮ ಕರುಳ ಬಳ್ಳಿಗಳಾಗಿವೆ. ಇವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದ ಅವರು, ನೆಹರೂ ಆವರು ಭಾರತದಲ್ಲಿ ಹಿಂದುವಾಗಿ ಹುಟ್ಟಿದ್ದು ನನ್ನ ದುರಾದೃಷ್ಟ. ಹೊಸ ದೇಶವನ್ನು ಕಟ್ಟೋಣ ಎಂದು ಕೊಟ್ಟ ಹೇಳಿಕೆ ನಮಗೆ ಯಡವಟ್ಟಾಗಿ ಪರಿಣಮಿಸಿತು ಎಂದರು.

ಜೀವನಕ್ಕೊಂದು ಧ್ಯೇಯ, ಉದ್ದೇಶ ಸಿಕ್ಕಿರುವುದು ಸಂಘದಿಂದ ಎಂದು ಪ್ರಭಾಕರ ಭಟ್ಟರು, ಏನಾದರೂ ಆಗು-ದೇಶಕ್ಕೋಸ್ಕರ ಬದುಕುವವನಾಗು ಎನ್ನುವ ಸಾಂಸ್ಕೃತಿಕತೆಯನ್ನು ಸಂಘ ಕಲಿಸಿದೆ. ನಮ್ಮ ದೇಶ, ಸಮಾಜಗಳು ಜಗತ್ತು ಹುಟ್ಟಿದಾಗಲೇ ಹುಟ್ಟಿವೆ. ಈ ಸಮಾಜ ಸುಮ್ಮನೇ ಕುಳಿತು ವಿಸ್ತಾರವಾಗಿ ಬೆಳೆದಿಲ್ಲ. ಜಗತ್ತಿಗೆ ಒಳ್ಳೆಯದನ್ನು ಮಾಡಿ ಬದುಕಿದೆ. ಭಾರತೀಯರು ನದೀ ತಟಗಳಿಂದ ಬಂದವರಾಗಿದ್ದಾರೆ.  ಹಾಗಾಗಿ ಭಾರತೀಯರು ಶ್ರೇಷ್ಠರಾಗಿದ್ದಾರೆ. ಇನ್ನು ಆ ನದಿಗಳ ನೀರೆಷ್ಟು ಪವಿತ್ರವಾಗಿರಬಹುದು ಎಂದು ಅವಲೋಕಿಸಿದ ಅವರು, ಇಂದು ಅದೇ ಭಾರತೀಯ ಸಮಾಜದ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಕೃಷಿಕ ಪಿ.ವಿ. ಕೃಷ್ಣಮೂರ್ತಿ, ನಗರಪಾಲಿಕೆ ಸದಸ್ಯ ಎಸ್. ರಾಮು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಮತ್ತೂರಿನ ಶಾರದಾ ವಿಲಾಸ ಶಾಲೆಯಲ್ಲಿ ಒಂದು ವಾರ ಕಾಲ ಶಿಬಿರ ನಡೆಯಿತು. ಸುಮಾರು ೧೭೦ ಪ್ರಶಿಕ್ಷಣಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.