ಶ್ರಾವಣ ಹುಣ್ಣಿಮೆ, ಇಡೀ ದೇಶದಲ್ಲಿ ರಕ್ಷಾಬಂಧನದ ಸಂಭ್ರಮ: ‘ಸಮರಸ ಭಾರತ -ವೈಶ್ವಿಕ ಭಾರತ’

ಸಮರಸ ಭಾರತ: ವೈಶ್ವಿಕ ಭಾರತ
ಆಗಸ್ಟ್ ೧೦, ಭಾನುವಾರ ಶ್ರಾವಣ ಹುಣ್ಣಿಮೆ, ಇಡೀ ದೇಶದಲ್ಲಿ ರಕ್ಷಾಬಂಧನದ ಸಡಗರ. ಸಂಭ್ರಮ.
Raksha-Bandhan-Best-wallpapers-photos-2014
ಭಾರತ ಸೂಪರ್ ಪವರ್ ಆಗಬೇಕು, ಅಖಂಡ ಭಾರತ ಆಗಬೇಕು, ಜಾಗತೀರಣದ ಓಟದಲ್ಲಿ ಜಗತ್ತಿನ ಮೊದಲ ರಾಷ್ಟ್ರವಾಗಬೇಕು  ಎಂಬುದು ಪ್ರತಿಯೊಬ್ಬ ಭಾರತೀಯನು ಹೊತ್ತ ಆಶಯ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್‌ರಿಂದ ಪ್ರಧಾನಿ ನರೇಂದ್ರ ಮೋದಿವರೆಗೆ. ಅಷ್ಟೇ ಅಲ್ಲ, ಇಲ್ಲಿಯವರೆಗೆ ಭಾರತ ದೇಶದ ಏಳಿಗೆಗಾಗಿ ದುಡಿದ ಮತ್ತು ಮಡಿದ ಎಲ್ಲಾ ಆತ್ಮಗಳ ಒಟ್ಟು ಕೋರಿಕೆಯೇ ಇದೇ.
ಭಾರತ ವಿಶ್ವಶಕ್ತಿಯಾಗಲು ಬೇಕಾದ ಎಲ್ಲ ಶಕ್ತಿ ಅದಕ್ಕೆ ಇದೆ. ಜನಸಂಖ್ಯೆ, ಯುವಶಕ್ತಿ, ಬುದ್ಧಿವಂತಿಕೆ, ಶೌರ್ಯ, ಧೈರ್ಯ, ಸಾಹಸ, ವ್ಯಾವಹಾರಿಕ ಚಾಣಾಕ್ಷತನ, ತಂತ್ರಜ್ಞಾನ, ಪ್ರಾಚೀನ ಜ್ಞಾನ, ಕ್ರೀಡೆ-ಕಲೆ-ಸಾಹಿತ್ಯ ಮುಂತಾದ ಪ್ರತಿಭೆಗಳು, ರಾಜತಾಂತ್ರಿಕ ಕುಶಲತೆ ಇತ್ಯಾದಿ ಇತ್ಯಾದಿ ಎಲ್ಲವೂ ಇವೆ. ಹಾಗೆ ಇರುವುದಕ್ಕೆ ರಾಶಿ ರಾಶಿ ನಿದರ್ಶನಗಳು ಇವೆ. ಕೊರತೆಯಿರುವುದು ಈ ದೇಶದ ಜನರಿಗೆ ತಾವು ಒಂದು ತಾಯಿಯ ಮಕ್ಕಳು ಮತ್ತು ಅದರಿಂದಾಗಿ ಅಣ್ಣತಮ್ಮಂದಿರು ಎಂಬುದು ಮರೆತು ಹೋಗಿದೆ.
ಒಂದೇ ಮನೆಯಲ್ಲಿ ವಾಸಿಸುತ್ತಾ, ಪರಸ್ಪರ ಕರುಳ ಬಳ್ಳಿ ಹಂಚಿಕೊಂಡು, ಪ್ರತ್ಯಕ್ಷ  ಅಪ್ಪ ಅಥವಾ ಅಮ್ಮನ ಹೋಲಿಕೆ ಹೊಂದಿದ ಒಡಹುಟ್ಟಿದವರು ಸಹ ವರ್ಷಕ್ಕೊಮ್ಮೆ ತಾವು ಅಣ್ಣ-ತಂಗಿ, ಅಕ್ಕ-ತಮ್ಮ ಎಂಬುದನ್ನು ನೆನಪಿಸಿಕೊಳ್ಳುವ  ಅಗತ್ಯವಿರುವಾಗ ಇಷ್ಟೊಂದು ವಿಶಾಲ ದೇಶದ ಸಾವಿರಾರು ತರಹದ ಭಾಷೆ-ದೇವರು-ಊಟ-ಉಡುಗೆ-ರೂಪ-ವರ್ಣ-ವಿಚಾರವಾದ-ಪಕ್ಷ ಮುಂತಾದ ಭಿನ್ನತೆಗೆ ಸೇರಿದ ನಾವು ಒಂದು ತಾಯಿಯ ಮಕ್ಕಳು, ಅಣ್ಣ-ತಮ್ಮ-ಅಕ್ಕ-ತಂಗಿಯಂದಿರು ಎಂಬುದನ್ನು ನೆನಪಿಸಿಕೊಳ್ಳುವ ಅಗತ್ಯ ಇಲ್ಲವೇ? ಈ ಭಿನ್ನತೆಗೆ ಕಾರಣ ಪರಂಪರಾಗತವಾಗಿ ನಮಗೆ ದೊರೆತಿರುವ ಅಪರಿಮಿತವಾದ ವೈಚಾರಿಕ-ವ್ಯಾವಹಾರಿಕ-ಉಪಾಸನಾ ಸ್ವಾತಂತ್ರ್ಯ. ಆದರೆ ಈ ಸ್ವತಂತ್ರ ಹಾದಿಗಳು ಕಾಲಕ್ರಮೇಣ ಬಹುದೂರ ಸಾಗಿ ಇವೆಲ್ಲವು ಒಂದೇ ಮಾರ್ಗದ ವಿವಿಧ ಕವಲುಗಳು ಎಂಬುದು ಸಹ ಮರೆತು ಹೋಯಿತು.
ಆದರೆ ಇಂದು ಮರಳಿ ಆ ಮಹಾ ತಾಯಿಯ ನೆನಪು ಆಗುತ್ತಿದೆ. ಹತ್ತಾರು ಸಾವಿರ ವರ್ಷಗಳಿಂದ ನಮ್ಮ ಸಹಸ್ರಾರು ಪೀಳಿಗೆಗಳನ್ನು ಹೊತ್ತು ಸಾಕಿ ಸಲುಹಿರುವ ಭಾರತ ಮಾತೆಯ ನೆನಪು ಆಗುತ್ತಿದೆ. ಅದ್ವಿತೀಯ ಸಂನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೆಯ ಜನ್ಮ ವರ್ಷಾಚರಣೆ, ಏಪ್ರಿಲ್ ಮಹಾ ಚುನಾವಣೆ, ಬ್ರಿಕ್ಸನ ನಿಲುವುಗಳು, ಡಬ್ಲ್ಯೂ.ಟಿ.ಒ.ಗೆ ಸಂಬಂಧಿಸಿದ ಟಿ.ಎಫ್.ಎ.ದ ಬಿಗಿ ನಿಲುವಿನ ಮಾತುಕತೆಗಳು, ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡೆಗಳು, ಪುನರ್ನವೀಕರಣಗೊಂಡ ನೇಪಾಳ-ಭಾರತದ ಹೃದಯಸ್ಪರ್ಶಿ ಸಂಬಂಧಗಳು ಮೊದಲಾದ ಸಂದರ್ಭಗಳಲ್ಲಿ ಭಾರತ ಮಾತೆಯ ಹೆಮ್ಮೆಯ ಸ್ಮರಣೆಯು ದೇಶದ ಮೂಲೆ ಮೂಲೆಗಳಲ್ಲಿ ಆಗಿದೆ.
ಇಂದು ಭಾರತ ತಿರುವಿನ ಘಟ್ಟದಲ್ಲಿದೆ. ಹಿಂದೆಂದೂ ಮೂಡದ ವಿಶ್ವಾಸದ ಕಿರಣಗಳು ಕಾಣುತ್ತಿವೆ. ಇಂತಹ ಸುಸಂದರ್ಭವನ್ನು ವ್ಯರ್ಥ ಮಾಡಿಕೊಂಡರೆ ನಮಗಿಂತ ಹತಭಾಗ್ಯರು ಯಾರೂ ಇಲ್ಲ. ಹೀಗಾಗಿ ನಮ್ಮ ಮನಸ್ಸು-ಮನೆ-ಬಂಧುಬಳಗ ಎಲ್ಲರ ನಡುವೆ ನಾವು ಸರ್ವಪ್ರಥಮ ರಾಷ್ಟ್ರವಾಗಲು ಏಕೆ ಸಾಧ್ಯವಿಲ್ಲ ಎಂಬ ಚಿಂತನ ಮಂಥನ ನಡೆಸಿ, ಅದಕ್ಕೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಬೇಕಾಗಿದೆ.
ಈ ಜಗತ್ತಿನ ಸರ್ವಪ್ರಥಮ ರಾಷ್ಟ್ರವಾಗಲು ಮುಖ್ಯವಾದ ತೊಂದರೆ ಎಂದರೆ ದೇಶ ಮೊದಲು ಎಂಬ ಸಾಫ್ಟ್‌ವೇರ್ ವಿಕೃತಗೊಂಡು, ಕಡುಸ್ವಾರ್ಥದ ಕೆಟ್ಟ ವೈರಸ್‌ಗಳು ಸೇರಿಕೊಂಡಿವೆ. ಇನ್ನೂ ಪ್ರಮುಖವಾಗಿ ಒಳಗೊಳಗೇ ಕೊರೆಯುತ್ತಿರುವ ಜಾತಿ ಭೇದದ ವೈರಸ್‌ಗಳು ನಮ್ಮೊಳಗೆ ಸೇರಿ ಹೋಗಿವೆ. ಹೊರಗಿನ ಸವಾಲುಗಳು ಎಷ್ಟೇ ದೊಡ್ಡದಾಗಿದ್ದರೂ ನಾವು ಆಂತರಿಕವಾಗಿ ಶಕ್ತಿಶಾಲಿಯಾಗಿದ್ದರೆ ಅವು ನಮ್ಮನ್ನು ಏನೂ ಮಾಡಲಾರವು. ಇಂದು ನಾವು ಒಳಗಿನಿಂದ ದುರ್ಬಲರಾಗಿರುವ ಕಾರಣ ಹೊರಗಿನ ಶಕ್ತಿಗಳು ನಮಗಿಂತ ಪ್ರಬಲವಾಗಿವೆಯೇನೋ ಎಂದು ಎನಿಸುತ್ತಿದೆ ಅಷ್ಟೆ.
ನರನು ನಾರಾಯಣನಾಗಬಲ್ಲ, ಪ್ರತಿಯೊಬ್ಬನಲ್ಲಿ ಭಗವಂತನ ಅಂಶವಿದೆ, ಇನ್ನೂ ಮುಂದುವರಿದು ನಾನೇ ಆ ದೇವರು ಎಂದು ಘೋಷಣೆ ಮಾಡಿರುವ ಹಿಂದೂ ಜೀವನಪದ್ಧತಿಯಲ್ಲಿ ಅಸ್ಪೃಶ್ಯತೆ ಎಂಬ ಮಾನವ ವಿರೋಧೀ, ದೈವ ವಿರೋಧೀ ಆಚರಣೆಯು ಬಹಳ ವಿಚಿತ್ರವೆನಿಸಿದರೂ ಜಾರಿಯಲ್ಲಿರುವುದು ಒಂದು ನಗ್ನಸತ್ಯ.
ಅಸ್ಪೃಶ್ಯತೆ ಮುಂತಾದ ಭೇದಭಾವಗಳು ಒಂದು ಮಾನಸಿಕ ರೋಗ ಎಂಬುದು ಅತ್ಯಂತ ಸ್ಪಷ್ಟ. ಹುಟ್ಟುವಾಗ ಎಲ್ಲರೂ ಅದೇ ಮನುಷ್ಯರೇ. ಶ್ರೇಷ್ಠ ಜಾತಿ ಎಂದು ಕರೆದುಕೊಳ್ಳುವ ಪಂಗಡದ ವ್ಯಕ್ತಿಗೆ ದೇವರು ವಿಶೇಷವಾದದ್ದೇನೋ ಅಲಂಕರಿಸಿ ಕಳುಹಿಸಿಲ್ಲ. ಹಾಗೆ ಕನಿಷ್ಠ ಎಂದು ಕರೆಯಲಾಗುವ ಜಾತಿಗಳ ಮಕ್ಕಳೆಲ್ಲರೂ ಅಂಗವಿಹೀನರಾಗಿ ಹುಟ್ಟುವುದಿಲ್ಲ. ಕ್ರಮೇಣ ಆ ಮಗು ಬೆಳೆದು, ತನ್ನ ಜೀವನದ ಸಾಧನೆ ಮೂಲಕ ಜನಮಾನಸದಲ್ಲಿ ತನ್ನ ಸ್ಥಾನವನ್ನು ತಾನೇ ಪಡೆದುಕೊಳ್ಳುತ್ತದೆ. ವ್ಯಕ್ತಿಯ ಸಾಧನೆ-ಮಹತ್ವವನ್ನು ಜೀವನದ ಕೊನೆಯಲ್ಲಿ ಕಾಣಬಹುದು. ಅದಕ್ಕೇ ಹೇಳಿದ್ದು ಶರಣನನ್ನು ಮರಣದಲ್ಲಿ ಕಾಣು.
ರೋಗ ತಪಾಸಣೆ ಮಾಡುವಾಗ ರೋಗಿಯ ರಕ್ತ ಮೂತ್ರ ಕಫಗಳನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯ ತನ್ನ ರಕ್ತ ಮಾಂಸ ಮೂತ್ರ ಕಫ ಮುಂತಾದವನ್ನು ಸದಾಕಾಲ ಹೊತ್ತುಕೊಂಡೇ ತಿರುಗುತ್ತಾನೆ. ಹೀಗಾಗಿ ಎಲ್ಲಾ ಮನುಷ್ಯ ದೇಹಿಗಳು ವಾಕಿಂಗ್ ಪ್ಯಾಥಾಲಾಜಿಕಲ್ ಸ್ಪೆಸಿಮನ್‌ಗಳೇ. ಅಂದರೆ ಪ್ರತಿಯೊಬ್ಬ ಮನುಷ್ಯ ನಡೆದಾಡುವ ರಕ್ತ ಮೂತ್ರ ಕಫಗಳ ಬಾಟಲಿಗಳೇ. ಇದೇ ಸತ್ಯ. ಇದಕ್ಕೆ ಯಾರೂ ಹೊರತಲ್ಲ. ಮೂರೂ ಹೊತ್ತು ಪೂಜೆ-ಅನುಷ್ಠಾನ ಮಾಡುವ ಮಡಿಯಲ್ಲಿ ಮಡಿ ಆಚರಣೆ ಮಾಡುವವರೂ ಸಹ ಈ ಎಲ್ಲಾ ಶರೀರದ ಆಂತರಿಕ ಕೊಳೆಗಳಿಂದ ಕ್ಷಣಕಾಲಕ್ಕೂ ಮುಕ್ತರಾಗಲು ಸಾಧ್ಯವಿಲ್ಲ. ಇದೆಲ್ಲಾ ಅತ್ಯಂತ ಕಟು ವಾಸ್ತವ ಸತ್ಯವಾಗಿದ್ದರೂ ಸಹ ಯಾವನಾದರೂ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಕೀಳು ಎಂದು ಎಣಿಸುತ್ತಾನಾದರೆ ಅವನ ಮನಸ್ಸು ಕೊಳಕಾಗಿದೆ ಎಂದರ್ಥ. ಆಗ ಆ ಮಾನಸಿಕ ಕೊಳೆಯ ಕಾರಣದಿಂದ ಅವನು ವಾಕಿಂಗ್ ಸೈಕಾಲಾಜಿಕಲ್ ಸ್ಪೆಸಿಮನ್ ಆಗುತ್ತಾನೆ. ದುರಂತವೆಂದರೆ ಇವತ್ತು ಈ ರೀತಿಯ ರೋಗಿಷ್ಠ ಮನಸ್ಸುಗಳು ಕಡಿಮೆಯೇನಿಲ್ಲ. ನನ್ನ ಮನಸ್ಸು ರೋಗಿಷ್ಠವಾಗಿದೆಯೇ ಅಥವಾ ಆರೋಗ್ಯವಾಗಿದೆಯೇ? ಎಂಬುದನ್ನು ಪ್ರತಿಯೊಬ್ಬ ಹಿಂದುವೂ ಸದಾಕಾಲ ತನ್ನನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಪ್ರತಿಯೊಬ್ಬ ಹಿಂದು ಆರೋಗ್ಯವಂತನಾದ ಮೇಲೆ ಹಿಂದೂ ಸಮಾಜ ಆರೋಗ್ಯವಂತ ಸಮಾಜ ಆಗಿಯೇ ಆಗುತ್ತದೆ.
ಜಗತ್ತಿನಲ್ಲಿರುವ ಒಟ್ಟು ವಿವಿಧತೆಗಳಿಗಿಂತ ಹೆಚ್ಚು ವೈವಿಧ್ಯಗಳನ್ನು ಹೊಂದಿರುವ ಹಿಂದು ಸಮಾಜ ತನ್ನೊಳಗಿರುವ ಬೇಧಭಾವಗಳನ್ನು ತೊರೆದು ಒಂದಾಗಿ ನಿಂತಿದೆ ಎಂದರೆ, ಅದು ಜಗತ್ತಿನ ಎಲ್ಲ ಬೇಧಭಾವಗಳನ್ನು ಸರಿಪಡಿಸುವ ಸಾಮರ್ಥ್ಯ ಪಡೆದಿದೆ ಎಂದೇ ಅರ್ಥ. ಸಾವಿರಾರು ದೇವರು, ಪೂಜಾ ಪದ್ಧತಿ, ಭಾಷೆ ವೇಷ, ಆಹಾರ ವಿಹಾರಗಳನ್ನು ಅರಗಿಸಿಕೊಂಡ ಹಿಂದು ಸಮಾಜಕ್ಕೆ ಒಬ್ಬ ಗಾಡ್, ಒಬ್ಬ ಅಲ್ಲಾ, ಹೆಚ್ಚಾಗಲಾರರು.
ತನ್ನದೇ ದೇವರನ್ನು ಪೂಜಿಸಿ, ತನ್ನೊಂದಿಗೇ ಬದುಕುತ್ತಿರುವ ಪಕ್ಕದ ಕೇರಿಯ ದಲಿತನನ್ನು ತನ್ನವನಂತೆ ನೋಡಲು ಸಾಧ್ಯವಾಗದವನು ವಿಶ್ವಧರ್ಮ, ಜಗದ್ಗುರು, ಮಾನವ ಧರ್ಮ, ಎಂದೆಲ್ಲಾ ಕೂಗಿಕೊಂಡರೆ ಇವೆಲ್ಲಾ ಬರೀ ಬೊಗಳೆ ಮಾತುಗಳು ಎನಿಸುವದರಲ್ಲಿ ತಪ್ಪೇನಿಲ್ಲ. ನಿಜ, ಕೋಟ್ಯಂತರ ಹಿಂದುಗಳು ಮುಸ್ಲಿಮರಾಗಿ ಕ್ರೈಸ್ತರಾಗಿ ದೂರ ಹೋಗಿದ್ದಾರೆ. ಅವರನ್ನು ವಾಪಾಸ್ಸು ಹಿಂದೂ ಪ್ರವಾಹಕ್ಕೆ ಕರೆತರಲು ತನ್ನಲ್ಲಿನ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಹಿಂದೂ ಸಮಾಜ ಗೆಲ್ಲಬೇಕು ತಾನೇ? ಇಂತಹ ಆತ್ಮವಿಶ್ವಾಸದ ಸ್ಥಿತಿ ತಲುಪಲು ಹಿಂದು ಸಮಾಜಕ್ಕೆ ಇನ್ನೆಷ್ಟು ಶತಮಾನಗಳು ಬೇಕು?
ಭಾರತವು ಅಖಂಡಭಾರತವಾದಾಗ ಮಾತ್ರ ಅದು ಸೂಪರ್ ಪವರ್ ಆಗಬಲ್ಲುದು. ಅಖಂಡವಾಗಲು ಮುಖ್ಯ ಪ್ರವಾಹದಿಂದ ದೂರ ಹೋಗಿರುವ ಕೊಟ್ಯಂತರ ಏಕದೇವೋಪಾಸಕ ಅಹಿಂದುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹಿಂದು ಸಮಾಜಕ್ಕೆ ಬೇಕು. ಆಗ ಭಾರತವು ಅಖಂಡಭಾರತ ಮಾತ್ರವಲ್ಲ, ವೈಶ್ವಿಕ ಭಾರತ ಆಗಬಲ್ಲುದು. ಅಂತಹ ಯೋಗ್ಯತೆ, ಸಾಧ್ಯತೆ ಎಲ್ಲವೂ ಹಿಂದು ಸಮಾಜಕ್ಕೆ ಇದೆ. ಆ ದಿಕ್ಕಿನಲ್ಲಿ ನನ್ನ ಮನಸ್ಸು, ನನ್ನ ಮನೆ ಸಿದ್ಧವಾಗಿದೆಯೇ ಎಂಬುದೇ ಸರ್ವ ಸಮಸ್ಯೆಗಳಿಂದ ಪೀಡಿತವಾಗಿರುವ ವ್ಯಾಕುಲ ಜಗತ್ತಿನ ಪ್ರಶ್ನೆಯಾಗಿದೆ. ರಕ್ಷೆ ಅದಕ್ಕೆ ಮೊದಲ ಮೆಟ್ಟಿಲಾಗಲಿ.
article by Sri ARUN KUMAR, Hubli
August 09, 2014

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Two Years; 8330km by walk; RSS veteran's Bharat Parikrama Yatra continues aiming Gram Vikas

Sat Aug 9 , 2014
Philibhit, Uttara Pradesh August 09: RSS former Akhil Bharatiya Seva Pramukh Sitarama Kedilaya lead Bharat Parikrama Yatra has successfully completed two years of non-stop journey on its 730th day, covering around 8330km by walk. Began on August 9, 2012 from Kanyakumari of Tamilnadu, 67 year old former RSS Pracharak Sitaram Kedilaya lead […]