By Du Gu Lakshman, March 9, 2015.

Dr SR Ramaswamy receiving NAADOJA award from Hon Governor of Karnataka at Hampi Univerity on March 06-2015

Dr SR Ramaswamy receiving NAADOJA award from Hon Governor of Karnataka at Hampi Univerity on March 06-2015

ಅ ಯಾವಾಗಲೂ ಪಂಚೆ ಹಾಗೂ ಜುಬ್ಬದ ಅಪ್ಪಟ ಖಾದಿ ಉಡುಪು. ಹೆಗಲಿನಲ್ಲೊಂದು ನೇತಾಡುವ ಭಾರವಾದ ಚೀಲ. ಆ ಚೀಲದಲ್ಲಿ ಕಾಫಿ ಪ್ಲಾಸ್ಕ್, ಸುಗಂಧಭರಿತ ಅಡಿಕೆಪುಡಿ, ಒಂದಷ್ಟು ಪುಸ್ತಕಗಳು ಇತ್ಯಾದಿ. ಕಣ್ಣಿಗೊಂದು ದಪ್ಪ ಕನ್ನಡಕ. ಅವರು ನಮ್ಮನ್ನು ನೋಡುತ್ತಿದ್ದಾರೋ ಅಥವಾ ಬೇರೆ ಯಾರನ್ನಾದರೂ ದೃಷ್ಟಿಸುತ್ತಿದ್ದಾರೋ ಎಂಬ ಗೊಂದಲದ ನೋಟ. ಅವರು ನೋಡುತ್ತಿದ್ದುದೇ ಹಾಗೆ. ಗಾಂಧಿಬಜಾರಿನ ತರಕಾರಿ ಅಂಗಡಿಯ ಬಳಿ ಅಥವಾ ಬುಲ್ ಟೆಂಪಲ್ ರಸ್ತೆಯಲ್ಲಿ ಹೆಗಲಿಗೆ ಚೀಲ ಏರಿಸಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದುಕೊಂಡೇ ಓಡಾಡುತ್ತಿರುವ ದೃಶ್ಯ ಈಗಲೂ ಸಿಗುತ್ತದೆ. ಆದರೆ ಅವರ ವಯಸ್ಸಾದರೋ ಈಗ ೭೮ಕ್ಕೆ ತಲುಪಿದೆ!

‘ಹೇಗಿದ್ದೀರಿ ಸರ್?’ ಎಂದು ಆತ್ಮೀಯರು ಕೇಳಿದರೆ, ಅಷ್ಟೇ ಗಂಭೀರವಾಗಿ ‘`better than tomorrow’’ ಎಂಬ ಉತ್ತರ. ಆ ಉತ್ತರದಲ್ಲಿ ಒಂದು ಬಗೆಯ ತಿಳಿಹಾಸ್ಯ. ನಾಳೆಗಿಂತ ಇಂದು ಆರೋಗ್ಯ ಪರವಾಗಿಲ್ಲ ಎಂಬುದು ಅದರ ಅರ್ಥ. ಆದರೆ ಅವರ ಈ ಮಾತನ್ನು ಅರ್ಥಮಾಡಿಕೊಳ್ಳಲು ಪ್ರಶ್ನೆ ಕೇಳಿದವರಿಗೆ ಒಂದೆರಡು ನಿಮಿಷಗಳಾದರೂ ಬೇಕು! ತನಗಿಂತ ಕಿರಿಯರು ಭೇಟಿಯಾದಾಗ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡುವ ಸ್ವಭಾವ. ಗಣ್ಯರು, ಹಿರಿಯರೊಂದಿಗೆ ಅಷ್ಟೇ ಗೌರವದ ಗಂಭೀರ ವರ್ತನೆ. ತನ್ನ ವಯಸ್ಸಿನ ಕಾಲುಭಾಗದ ಪ್ರಾಯದ ಪಡ್ಡೆ ಹುಡುಗರೊಂದಿಗೆ ನಗುನಗುತ್ತಾ ಕೆಲವೊಮ್ಮೆ ಮಸಾಲೆಭರಿತ ನಾಟಕ, ಸಿನಿಮಾ ನೋಡಲು ಹೋಗುವ ಅವರು, ಉಳಿದ ವೇಳೆ ಶ್ರೀಮದ್ಗಾಂಭೀರ್ಯದ ಮೂರ್ತಿ. ಅನೇಕರಿಗೆ ಇವರು ಹೀಗೇಕೆ ಎಂಬ ಪ್ರಶ್ನೆ. ಆದರೆ ಅವರ ಅಂತರಂಗವನ್ನು ಅರಿತವರಿಗೆ ಅವರೆಷ್ಟು ಸಹೃದಯವಂತರು, ಆತ್ಮೀಯರು ಎಂಬ ಉಲ್ಲಾಸದ ಆಪ್ತ ಅನುಭವ.

ಮೊನ್ನೆ ಮಾರ್ಚ್ ೬ರಂದು ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿಗೆ ಪಾತ್ರರಾಗಿರುವ ಎಸ್.ಆರ್. ರಾಮಸ್ವಾಮಿಯವರನ್ನು ಹತ್ತಿರದಿಂದ ಬಲ್ಲವರಿಗೆ ಮೇಲಿನ ಮಾತುಗಳು ಅವರಿಗೆ ಅದೆಷ್ಟು ಅನ್ವರ್ಥಕವೆಂದು ಅನಿಸದಿರದು. ಹೌದು ಅವರಿದ್ದುದೇ ಹಾಗೆ. ಅವರೊಬ್ಬ ಅಸಾಧಾರಣ ಪಾಂಡಿತ್ಯದ ಗಣಿ. ಪ್ರಬುದ್ಧ ವಿದ್ವಾಂಸ. ಜ್ಞಾನದ ಭಂಡಾರ. ಅವರ ಅರಿವಿಗೆ ನಿಲುಕದ ವಿಷಯಗಳೇ ಇರಲಿಲ್ಲ. ಸಂಸ್ಕೃತ, ಹಿಂದಿ, ಕನ್ನಡ, ತೆಲುಗು, ಮರಾಠಿ, ಗುಜರಾತಿ, ಇಂಗ್ಲಿಷ್, ಬಂಗಾಳಿ….. ಹೀಗೆ ಹಲವು ಭಾಷೆಗಳ ಮೇಲೆ ಹಿಡಿತ. ಅಧ್ಯಯನದ ಕ್ಷೇತ್ರಗಳು ಹತ್ತಾರು. ಆದರೂ ಅವರು ತಮ್ಮನ್ನು ವಿಶೇಷವಾಗಿ ಗುರುತಿಸಿಕೊಂಡಿದ್ದು ಅಭ್ಯುದಯ ಅರ್ಥಶಾಸ್ತ್ರ, ಪತ್ರಿಕೋದ್ಯಮ ಮತ್ತು ಭಾರತೀಯ ಸಂಸ್ಕೃತಿಯ ವಿವಿಧ ಶಿಸ್ತುಗಳಲ್ಲಿ. ಈ ಕಾರಣಕ್ಕಾಗಿಯೇ ಅವರ ಓದು-ಬರಹಗಳಿಗೆ ಎಣೆಯಿಲ್ಲದ ಆಳ-ಅಗಲ, ಅಧಿಕೃತತೆ ಮತ್ತು ಸಮಗ್ರತೆಗಳ ಹದ. ಅವರ ಕನ್ನಡ-ಇಂಗ್ಲಿಷ್ ಭಾಷಾ ಶೈಲಿ ಗಂಭೀರವಾದ ವಿಷಯಗಳನ್ನು ದೀರ್ಘಕಾಲ ನಿಲ್ಲುವಂತೆ ಹೇಗೆ ಹೇಳಬಹುದೆಂಬ ಕಲೆಗೆ ನಿದರ್ಶನ. ‘ರಾಮಸ್ವಾಮಿಗಳೇ, ನಿಮ್ಮ ಈ ಬಾರಿಯ ಉತ್ಥಾನದ ಲೇಖನ ಬಹಳ ಉತ್ಕೃಷ್ಟವಾಗಿದೆ. ಆದರೆ ಅದನ್ನು ಪೂರ್ತಿ ಅರ್ಥಮಾಡಿಕೊಳ್ಳಲು ನಮಗೆ ಒಂದೆರಡು ಶಬ್ದಕೋಶಗಳೇ ಬೇಕಾಗುತ್ತದೆ’ ಎಂದು ಆಪ್ತ ವಲಯದ ಮಿತ್ರರು ಕೆಲವು ಬಾರಿ ತಮಾಷೆ ಮಾಡಿದ್ದುಂಟು. ಅಷ್ಟೊಂದು ವಿದ್ವತ್‌ಪೂರ್ಣ ಲೇಖನಗಳು ಅವು. ಆಪ್ತಮಿತ್ರರ ಇಂತಹ ಟೀಕೆಗಳಿಗೆ ರಾಮಸ್ವಾಮಿಯವರದು ಮೌನ ಉತ್ತರ. ಆ ಮೌನದಲ್ಲಿ ಏನು ಅಡಗಿರಬಹುದು? ‘ನನ್ನ ಲೇಖನದ ಹಲವು ಶಬ್ದಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಶಬ್ದಕೋಶದ ಅಗತ್ಯವಿದ್ದರೆ ಅದು ನಿಮ್ಮ ಹಣೆಬರಹ!’ ಎಂದು ಆ ಮೌನದ ಅರ್ಥವಾಗಿರಬಹುದೆ? ಗೊತ್ತಿಲ್ಲ.

ರಾಮಸ್ವಾಮಿಯವರು ಸುಪ್ರಸಿದ್ಧ ಪಂಡಿತ ವಂಶವಾದ ಮೋಟಗಾನಹಳ್ಳಿಯವರ ಕುಟುಂಬಕ್ಕೆ ಸೇರಿದವರು. ಸೊಂಡೇಕೊಪ್ಪದ ಮೂಲದವರು. ಅವರ ಕುಟುಂಬದ ಹಿರಿಯರಲ್ಲಿ ವಿದ್ವತ್ತು, ಪಾಂಡಿತ್ಯ, ಕಲಾಸಕ್ತಿ, ಸಾಹಸ ಸಾಮಾನ್ಯವೆಂಬಂತೆ ಸದ್ಗುಣಗಳಾಗಿದ್ದವು. ಚತುಶ್ಶಾಸ್ತ್ರ ಪಂಡಿತರು, ವೇದವರಿಷ್ಠರು, ಸೋಮಯಾಜಿಗಳು, ಪಂಡಿತ ಕವಿಗಳು, ಗೀತನಾಟಕ ಪ್ರವೀಣರು… ಹೀಗೆ ಹಲವರು ಅವರ ತಾಯಿ-ತಂದೆಯರ ವಂಶದಲ್ಲಿ ಆಗಿಹೋದರು. ಅವೇ ಸದ್ಗುಣಗಳು ರಾಮಸ್ವಾಮಿಯವರಲ್ಲೂ ಹರಿದು ಬಂದಿರಬಹುದು. ಮೋಟಗಾನಹಳ್ಳಿ ಮಹದೇವಶಾಸ್ತ್ರಿಗಳು, ಶಂಕರ ಶಾಸ್ತ್ರಿಗಳು, ಗಂಗಾಧರ ಶಾಸ್ತ್ರಿಗಳು, ನಾರಾಯಣ ಶಾಸ್ತ್ರಿಗಳು, ಶ್ರೀಕಂಠ ಶಾಸ್ತ್ರಿಗಳು ಇವರೆಲ್ಲಾ ಅವರ ಪೂರ್ವಜರು. ರಾಮಸ್ವಾಮಿಯವರು ಕೂಡಾ ಚಿಕ್ಕ ವಯಸ್ಸಿಗೇ ವೇದಾಧ್ಯಯನ ಮಾಡಿದವರು. ಶೃಂಗೇರಿಯ ಆಸ್ಥಾನ ಮಹಾ ವಿದ್ವಾಂಸರಾದ ಪಂಡಿತಪ್ರವರ ಮಾಗಡಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ವೇದಾಂತಾದಿ ಶಾಸ್ತ್ರಗಳ ಅಧ್ಯಯನ. ಬಳಿಕ ಸುಪ್ರಸಿದ್ಧ ಕನ್ನಡ-ಸಂಸ್ಕೃತ ಪಂಡಿತರಾದ ಮಹಾಮಹೋಪಾಧ್ಯಾಯ ಎನ್.ರಂಗನಾಥ ಶರ್ಮರ ಬಳಿ ವ್ಯಾಕರಣ ಕಲಿಕೆ. ಜೊತೆಗೆ ತಮ್ಮ ದೊಡ್ಡಪ್ಪ ಇತಿಹಾಸ-ಸಂಸ್ಕೃತಿ ಶಾಸ್ತ್ರಜ್ಞರಾದ ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರ ಸ್ಫೂರ್ತಿಯಿಂದ ಜರ್ಮನ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ಇಟಾಲಿಯನ್ ಭಾಷೆಗಳ ಪರಿಚಯ ಪಡೆದಿದ್ದರು.

ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಡಿವಿಜಿಯವರ ಕಣ್ಣು ಹಾಗೂ ಕೈ ಆಗಿದ್ದರು! ಡಿವಿಜಿಯವರು ಉಕ್ತಲೇಖನ ರೂಪದಿಂದ ಹೇಳುತ್ತಿದ್ದ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಬರೆದು, ಪ್ರತಿಮಾಡಿ, ಅಚ್ಚಿನ ಮನೆಯ ಎಲ್ಲಾ ಹಂತಗಳ ಕರಡನ್ನು ತಿದ್ದಿ ಅದಕ್ಕೊಂದು ಅಂತಿಮ ರೂಪವನ್ನು ನೀಡುತ್ತಿದ್ದವರು ಇದೇ ರಾಮಸ್ವಾಮಿಯವರು. ಡಿವಿಜಿಯವರ ಪ್ರತಿ ಪುಸ್ತಕದ ಮುನ್ನುಡಿಯಲ್ಲೂ ತಪ್ಪದೇ ಇಣುಕುತ್ತಿದ್ದ ಹೆಸರು ರಾಮಸ್ವಾಮಿಯವರದು. ಆದರೆ ರಾಮಸ್ವಾಮಿಯವರು ಡಿವಿಜಿಯವರ ಮಾತುಗಳನ್ನು ಕೈಬರಹಕ್ಕಿಳಿಸಿ ಅಚ್ಚಿನ ಮನೆಯ ವ್ಯವಸ್ಥೆ ನೋಡುವ ಗುಮಾಸ್ತರೆಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ಅನೇಕ ಬಾರಿ ಡಿವಿಜಿಯವರು ಉಕ್ತಲೇಖನ ಆರಂಭಿಸುತ್ತಿದ್ದಂತೆ ಅವರ ಮನದಿಂಗಿತ ಅರಿತು ಅವರು ಹೇಳುವ ಮುನ್ನವೇ ರಾಮಸ್ವಾಮಿ ಬರೆದದ್ದೂ ಉಂಟು. ಇದನ್ನು ಕಂಡು ಡಿವಿಜಿ ಹುಸಿ ಮುನಿಸಿನಿಂದ ಅವರ ಮೇಲೆ ರೇಗಿದ್ದೂ ಉಂಟು. ಇಷ್ಟೆಲ್ಲಾ ಮಾಡುವಾಗ ರಾಮಸ್ವಾಮಿಯವರ ವಯಸ್ಸಾದರೂ ಎಷ್ಟು? ಅಬ್ಬಬ್ಬಾ ಎಂದರೆ ೨೦ರ ಹರೆಯ ಇರಬಹುದೇನೋ! ಸುಮಾರು ೨ ದಶಕಗಳಿಗೂ ಹೆಚ್ಚಿನ ಕಾಲ ಹೀಗೆ ಡಿವಿಜಿಯವರ ಆಪ್ತ ಕಾರ್ಯದರ್ಶಿಯಂತೆ ಕಾರ್ಯ ನಿರ್ವಹಿಸಿದ ಘನ ಅನುಭವ ಅವರದು.

ಡಿವಿಜಿ ಅಷ್ಟೇ ಅಲ್ಲ, ವಿ.ಸೀ, ಮಾಸ್ತಿ, ರಾಳ್ಲಪಲ್ಲಿ, ವೀರಕೇಸರಿ ಸೀತಾರಾಮಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ರಾಜರತ್ನಂ, ಪಿ. ಕೋದಂಡರಾವ್, ಯಾದವರಾವ್ ಜೋಷಿ ಮುಂತಾದ ಪ್ರಾತಃಸ್ಮರಣೀಯರೊಂದಿಗೂ ನಿರಂತರ ಸಾಹಚರ್ಯ. ಜೊತೆಗೆ ಎನ್. ಚನ್ನಕೇಶವಯ್ಯ, ವೀಣಾ ರಾಜರಾವ್, ರತ್ನಗಿರಿ ಸುಬ್ಬಾಶಾಸ್ತ್ರಿ, ನಾರಾಯಣಸ್ವಾಮಿ ಭಾಗವತರ್, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್, ಪಂಡಿತ ಶೇಷಾದ್ರಿ ಗವಾಯಿ, ರಾಮರಾವ್ ನಾಯಕ್ ಮುಂತಾದ ಅಸಂಖ್ಯಾ ಸಂಗೀತ ದಿಗ್ಗಜಗಳೊಂದಿಗೆ ಸ್ನೇಹ ಸೌಭಾಗ್ಯ. ಹೀಗೆ ಸಾಹಿತ್ಯಿಕ, ಸಾಂಸ್ಕೃತಿಕ ಲೋಕದ ಮೇರು ವ್ಯಕ್ತಿಗಳ ಒಡನಾಟದಲ್ಲಿ ಅರಳಿದ್ದು ರಾಮಸ್ವಾಮಿ ಎಂಬ ಅದ್ಭುತ, ಅಪ್ಪಟ ಪ್ರತಿಭೆ. ಇಷ್ಟೆಲ್ಲ ಅದಮ್ಯ ಧೀಮಂತಿಕೆಯಿದ್ದ ರಾಮಸ್ವಾಮಿಯವರಿಗೆ ಶಾಲಾ ಕಾಲೇಜುಗಳ ಶಿಕ್ಷಣ ನೀರಸವೆನಿಸಿದ್ದರೆ ಆಶ್ಚರ್ಯವಿಲ್ಲ. ಅವರು ಕಾಲೇಜು, ವಿ.ವಿ.ಗಳ ಮೆಟ್ಟಿಲು ತುಳಿದಿದ್ದು ವಿಶೇಷ ಉಪನ್ಯಾಸಕರಾಗಿ ಅಥವಾ ಇನ್ನಾವುದೋ ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭಕ್ಕಾಗಿ. ಡಿಗ್ರಿಗಳ ಪ್ರಾಪ್ತಿಗೆ ಅವರೆಂದೂ ಕಾಲೇಜು, ವಿ.ವಿ.ಗಳಿಗೆ ಎಡತಾಕಿದವರಲ್ಲ.

೧೯೭೨ ರಿಂದ ೭೯ ರವರೆಗೆ ಸುಧಾ ಕನ್ನಡ ವಾರಪತ್ರಿಕೆಯಲ್ಲಿ ಪ್ರಧಾನ ಉಪ ಸಂಪಾದಕರಾಗಿ ದುಡಿಮೆ. ನಂತರ ೧೯೭೯ ರಿಂದ ಇದುವರೆಗೂ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಉತ್ಥಾನ ಕನ್ನಡ ಮಾಸಿಕ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಅಹರ್ನಿಶಿ ಸೇವೆ. ನಿಜಕ್ಕೂ ಅದು ಸೇವೆಯೇ! ಏಕೆಂದರೆ ರಾಷ್ಟ್ರೋತ್ಥಾನ ಪರಿಷತ್‌ಗೆ ಅವರು ಕಾಲಿಟ್ಟಾಗ ನನಗೆಷ್ಟು ವೇತನ ಕೊಡುತ್ತೀರಿ ಎಂದು ಯಾರನ್ನೂ ಕೇಳಲಿಲ್ಲ. ನಾನೇನು ಕೆಲಸ ಮಾಡಬೇಕು, ನನ್ನ ಕೆಲಸದ ವ್ಯಾಪ್ತಿಯೇನು ಎಂದು ಮಾತ್ರ ಕೇಳಿದ್ದಿರಬಹುದು. ರಾಷ್ಟ್ರೋತ್ಥಾನದಲ್ಲಿದ್ದುಕೊಂಡೇ ಅವರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಗ್ರಂಥ ಸಂಪಾದನೆ, ಹಸ್ತಪ್ರತಿ ಪರಿಷ್ಕರಣ, ವಿವಿಧ ಸೂಚಿಗಳ ತಯಾರಿ, ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ, ರಾಷ್ಟ್ರ ಚಿಂತನೆ ಮತ್ತು ನಿರ್ಮಾಣಗಳಿಗೆ ಸಂಬಂಧಿಸಿದ ಅಸಂಖ್ಯ ವೇದಿಕೆಗಳಲ್ಲಿ ಸೇವಾವ್ರತಿಯಂತೆ ದುಡಿಮೆ. ಪರಿಸರ ಹೋರಾಟ, ಸ್ವದೇಶಿ ಆಂದೋಲನಗಳಲ್ಲೂ ಅವರದು ಅಪಾರ ಯೋಗದಾನ. ‘ಮಹಾಭಾರತದ ಬೆಳವಣಿಗೆ’ ಎಂಬ ಕೃತಿಯಿಂದ ಆರಂಭವಾದ ಅವರ ಸಾರಸ್ವತ ಜೀವನ ಇತ್ತೀಚೆಗೆ ಪ್ರಕಟವಾದ ‘ಕವಳಿಗೆ’ ಎಂಬ ಕೃತಿಯವರೆಗೆ ೪೦ ವರ್ಷಗಳಿಗೂ ಮಿಕ್ಕಿ ವ್ಯಾಪಿಸಿದೆ. ‘ಶತಮಾನದ ತಿರುವಿನಲ್ಲಿ ಭಾರತ’, ‘ಆರ್ಥಿಕತೆಯ ಎರಡು ಧ್ರುವ’, ‘ನಾಗರಿಕತೆಗಳ ಸಂಘರ್ಷ’, ‘ಭಾರತದಲ್ಲಿ ಸಮಾಜ ಕಾರ್ಯ: ಹಿನ್ನಲೆ-ಮುನ್ನೋಟ’, ‘ಸ್ವದೇಶಿ ಜಾಗೃತಿ’, ‘ಆರ್ಯರ ಆಕ್ರಮಣ: ಬುಡವಿಲ್ಲದ ವಾದ’… ಹೀಗೆ ಅನೇಕ ಮೌಲಿಕ ಕೃತಿಗಳ ಅಸಾಮಾನ್ಯ ದಾಖಲೆ. ಇಷ್ಟೆಲ್ಲಾ ಮೌಲಿಕ ಕೃತಿಗಳನ್ನು ಅವರು ರಚಿಸಿದ್ದರೂ ನಮ್ಮ ಅನೇಕ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಚಿಂತಕರಿಗೆ ರಾಮಸ್ವಾಮಿಯವರ ಅನುಪಮ ಕೊಡುಗೆ ಗೋಚರಿಸದಿರುವುದು ನಮ್ಮ ಬೌದ್ಧಿಕ ಜಗತ್ತಿನ ದುರಂತ! ರಾಮಸ್ವಾಮಿಯವರು ಬಲಪಂಥೀಯರ ದೇಗುಲವಾದ ರಾಷ್ಟ್ರೋತ್ಥಾನ ಪರಿಷತ್‌ನ ಪುರೋಹಿತರಾಗಿದ್ದಾರೆಂಬ ಕಾರಣ ಇರಬಹುದೆ?

ರಾಮಸ್ವಾಮಿಯವರ  ಸರಳತೆ, ಪ್ರಾಮಾಣಿಕತೆ, ಹಮ್ಮುಬಿಮ್ಮುಗಳಿಲ್ಲದ ನೇರವಂತಿಕೆ, ವಿನೋದ ಪ್ರವೃತ್ತಿಗಳನ್ನು ಹತ್ತಿರದಿಂದ ಗಮನಿಸಿದವರಿಗೆ ಇವರು ಅಷ್ಟು ದೊಡ್ಡ ವಿದ್ವಾಂಸರೇ ಎಂಬ ಸಂಶಯ ಬರುವುದು ಸಹಜ. ಆದರೆ ಅವರೊಬ್ಬ ಕನ್ನಡ ಸಾರಸ್ವತ ಲೋಕದ ಉಜ್ವಲ ನಕ್ಷತ್ರ ಎಂಬುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಅವರೊಬ್ಬ ಅಪ್ಪಟ ಸಂವೇದನಾಶೀಲರು ಹಾಗೂ ಮಾನವೀಯ ಕಳಕಳಿಯ ಗುಣವಂತರು. ಅವರೊಡನೆ ಒಂದಿಷ್ಟು ಹೊತ್ತು ಕಾಲ ಕಳೆದರೆ ಮನಸ್ಸಿಗೆ ಅದೇನೋ ಉಲ್ಲಾಸ, ಚೇತನ ಪ್ರಾಪ್ತಿ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್, ಈಗ ನಾಡೋಜ…. ಹೀಗೆ ಹಲವಾರು ಉನ್ನತ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಇನ್ನಷ್ಟು ಉನ್ನತ ಪ್ರಶಸ್ತಿಗಳು ಮುಂದೆಯೂ ಬರಬಹುದು, ಬರಲಿ. ಆದರೆ ಪ್ರಶಸ್ತಿಗಳ ರಾಶಿಯಿಂದ ಅವರೆಂದೂ ವಿಚಲಿತರಾಗಿಲ್ಲ. ಗೌರವ ಡಾಕ್ಟರೇಟ್ ಪ್ರಶಸ್ತಿ ಬಂದಿದ್ದರೂ ತಮ್ಮ ಹೆಸರಿನ ಹಿಂದೆ ಅವರೆಂದೂ ಡಾ. ರಾಮಸ್ವಾಮಿ ಎಂದು ಹಾಕಿಕೊಂಡಿಲ್ಲ. ಈಗ ನಾಡೋಜ ಪ್ರಶಸ್ತಿ ಬಂದಿದ್ದರೂ, ತಮ್ಮ ಹೆಸರಿನ ಹಿಂದೆ ನಾಡೋಜ ರಾಮಸ್ವಾಮಿ ಎಂದು ಅವರು ಖಂಡಿತ ಹಾಕಿಕೊಳ್ಳಲಾರರು. ಅಂತಹ ನಿರ್ಲಿಪ್ತ, ಪ್ರಸಿದ್ಧಿಪರಾಙ್ಮುಖ ಮಾನಸಿಕತೆ ಅವರದು. ಅಂತಹವರು ಕನ್ನಡ ಸಾರಸ್ವತ ಲೋಕದಲ್ಲಿ ಎಷ್ಟು ಮಂದಿ ಇದ್ದಾರು!