ನೇರನೋಟ: ಆರೆಸ್ಸೆಸ್ ವೇದಿಕೆಗೆ ಅಜೀಂ ಪ್ರೇಮ್‌ಜೀ ಆಗಮಿಸಿದಾಗ…

ನೇರನೋಟ – ೧೩.೦೪.೨೦೧೫

by Du Gu Lakshman

ಹೊಸದಿಲ್ಲಿಯಲ್ಲಿ ಏ.೪ ರಿಂದ ಏ.೬ ರವರೆಗೆ ಸೇವಾಭಾರತಿ ಆಶ್ರಯದಲ್ಲಿ ’ರಾಷ್ಟ್ರೀಯ ಸೇವಾಸಂಗಮ’ ಎಂಬ ೩ ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ ಚಟುವಟಿಕೆಗಳಿಗೆ ಸಂಬಂಧಿಸಿದ ೩ ಸಹಸ್ರಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಮಾವೇಶವನ್ನು ಉದ್ಘಾಟಿಸಿದವರು ಮಾತಾ ಅಮೃತಾನಂದಮಯಿ. ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದರು.

Wipro Chief Azim Premji  speaks at Rashtriya Seva Sangam, New Delhi
Wipro Chief Azim Premji speaks at Rashtriya Seva Sangam, New Delhi

ಸೇವಾಭಾರತಿ ಆಶ್ರಯದಲ್ಲಿ ಇಂತಹ ’ಸೇವಾಸಂಗಮ’ ಸಮಾವೇಶ ನಡೆಯುತ್ತಿರುವುದು ಇದೇ ಮೊದಲಬಾರಿಯೇನೂ ಅಲ್ಲ. ಪ್ರತಿವರ್ಷ ಇಂತಹ ಸಮಾವೇಶ ಜರುಗುತ್ತಲೇ ಇರುತ್ತದೆ. ಬೆಂಗಳೂರಿನಲ್ಲಿ ಕೂಡ ಒಮ್ಮೆ ಈ ಸಮಾವೇಶ ಜರುಗಿತ್ತು. ಸಂಘದ ಸೇವಾ ಚಟುವಟಿಕೆಗಳ ಪ್ರಗತಿ, ಕ್ರಮಿಸಬೇಕಾದ ದೂರ ಇತ್ಯಾದಿ ಸಂಗತಿಗಳ ಸಮಗ್ರ ಚರ್ಚೆ ಈ ಸಮಾವೇಶದಲ್ಲಿ ನಡೆಯುತ್ತದೆ. ಸಂಘದ ಸೇವಾ ಕ್ಷೇತ್ರದ ಕಾರ್ಯಕರ್ತರ ಪಾಲಿಗೆ ಈ ಸಮಾವೇಶ ಒಂದು ಚಿಂತನೆಗೆ ಹಚ್ಚುವ ದಿಕ್ಸೂಚಿ ಇದ್ದಂತೆ. ಆದರೆ ಈ ವರ್ಷದ ಸಮಾವೇಶ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿತ್ತು. ಅದಕ್ಕೆ ಕಾರಣ, ದೇಶದ ಪ್ರಮುಖ ಕೈಗಾರಿಕೋದ್ಯಮಿಯೊಬ್ಬರು ಆ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಬಂದು ಪಾಲ್ಗೊಂಡಿದ್ದು.

ಕೈಗಾರಿಕೋದ್ಯಮಿಯೊಬ್ಬರು ಇಂತಹ ಸಮಾವೇಶದಲ್ಲಿ ಪಾಲ್ಗೊಂಡ ಮಾತ್ರಕ್ಕೆ ಆ ಸಮಾವೇಶ ಭಿನ್ನವಾಗಿ ನಡೆಯಿತೆಂದು ಹೇಳಲು ಸಾಧ್ಯವೆ? ಆದರೆ ಈ ಕೈಗಾರಿಕೋದ್ಯಮಿ ಅಂಥಿಂಥವರಲ್ಲ. ಪ್ರಸಿದ್ಧ ವಿಪ್ರೋ ಸಂಸ್ಥೆಯ ಅಧ್ಯಕ್ಷರು, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ರೀತಿಯ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರೂ ಆದ ಅಜೀಂ ಪ್ರೇಮ್‌ಜೀ ಅವರು ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಗತಿ ಈಗ ದೇಶದಾದ್ಯಂತ ಪ್ರಜ್ಞಾವಂತರ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಪ್ರೇಮ್‌ಜೀ ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಹೋದಬಳಿಕ ಡೆಕನ್ ಹೆರಾಲ್ಡ್ ಪತ್ರಿಕೆ Premji at RSS meet welcome gesture (ಏ.೭) ಎಂಬ ಶೀರ್ಷಿಕೆಯ ಸಂಪಾದಕೀಯವನ್ನು ಬರೆದು, ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಶ್ಲಾಘಿಸಿತು. ’ಪ್ರೇಮ್‌ಜೀ ಒಬ್ಬ ಮುಸ್ಲಿಂ ವ್ಯಕ್ತಿ. ಆರೆಸ್ಸೆಸ್ ಆದರೋ ಹಿಂದುತ್ವದ ಪ್ರಬಲ ಪ್ರತಿಪಾದಕ ಸಂಘಟನೆ ಎಂಬುದು ಜಗತ್ತಿನಾದ್ಯಂತ ಚಿರಪರಿಚಿತ. ಆದರೆ ತಾನು ಯಾರನ್ನೂ ಕೀಳರಿಮೆಯಿಂದ ನೋಡುತ್ತಿಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತೇವೆ ಎಂದು ಆರೆಸ್ಸೆಸ್ ಪ್ರಮುಖರು ಹೇಳುತ್ತಾರಾದರೂ ಈ ದೇಶದಲ್ಲಿರುವ ಎಲ್ಲ ಜನರೂ ಹಿಂದುಗಳು ಎಂದು ಅದು ಹೇಳುತ್ತಿದೆ. ಅಂತಹ ವ್ಯಾಖ್ಯಾನ ಎಲ್ಲ ಭಾರತೀಯರಿಗೆ ಸ್ವೀಕಾರಾರ್ಹವಲ್ಲ….’ ಎಂದು ಈ ಸಂಪಾದಕೀಯದಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಸಂಪಾದಕೀಯದ ಕೊನೆಯಲ್ಲಿ The very presence of Premji at an RSS function along with the Sangh leaders is a sign of inclusive India. The importance of that image and the meaning of the message should not be lost ಎಂದು ಅಭಿಪ್ರಾಯಪಟ್ಟಿದೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರೇಮ್‌ಜೀ ಅವರು ಮಾತ್ರ ಸ್ವಇಚ್ಛೆಯಿಂದಲೇ ಅದರಲ್ಲಿ ಪಾಲ್ಗೊಂಡಿದ್ದರು. ಯಾರದೋ ಬಲವಂತಕ್ಕೆ ಅವರು ಹೋಗಿರಲಿಲ್ಲ. ಹೋಗಬಾರದೆಂಬ ಕೆಲವರ ಒತ್ತಡಕ್ಕೂ ಅವರು ಮಣಿದಿರಲಿಲ್ಲ. ಇದನ್ನು ಅವರೇ ಆ ಸಮಾರಂಭದಲ್ಲಿ ವ್ಯಕ್ತಪಡಿಸಿದರು. ’ನಾನು ಈ ಸಮಾರಂಭದಲ್ಲಿ ಭಾಗವಹಿಸುವುದು ಕೆಲವರಿಗೆ ಇಷ್ಟವಾಗಲಿಲ್ಲ ಎಂಬುದನ್ನು ನಾನಿಲ್ಲಿ ಹೇಳಬೇಕು. ಇಂತಹ ಒಂದು ವೇದಿಕೆಯಲ್ಲಿ ಮಾತನಾಡುವುದರಿಂದ ನಾನು ಸಂಘದ ಸಿದ್ಧಾಂತವನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರು. ಆದರೆ ಅದು ಸರಿಯಲ್ಲ. ಏಕೆಂದರೆ ನಾನೊಬ್ಬ ರಾಜಕೀಯ ವ್ಯಕ್ತಿಯಲ್ಲ. ನನ್ನ ದೇಶದ ಹಿತದ ಬಗ್ಗೆ ನನಗೆ ಅತೀವವಾದ ಆಸಕ್ತಿ ಮತ್ತು ಕಾಳಜಿಗಳಿವೆ. ಆದ್ದರಿಂದ ದೇಶದ ಒಳಿತಿಗಾಗಿ ನಾವೇನು ಮಾಡಬಹುದು ಎಂದು ಚರ್ಚಿಸುವ ಒಂದು ಸಭೆಯಲ್ಲಿ ಭಾಗವಹಿಸುವುದಕ್ಕೆ ನನಗೆ ಯಾವ ಅಭ್ಯಂತರವೂ ಕಾಣುವುದಿಲ್ಲ. ಅಲ್ಲದೇ ಕೇವಲ ಒಂದು ವೇದಿಕೆಯಲ್ಲಿ ಭಾಷಣ ಮಾಡಿದ ಮಾತ್ರಕ್ಕೆ ಅಲ್ಲಿ ಚರ್ಚಿತವಾಗುವ ಯಾವುದೇ ಅಥವಾ ಎಲ್ಲ ಅಭಿಪ್ರಾಯಗಳನ್ನು ನಾನು ಒಪ್ಪಿಕೊಂಡಂತಾಗುವುದಿಲ್ಲ…’ ಎಂದು ಪ್ರೇಮ್‌ಜೀ ಆರಂಭದಲ್ಲೇ ಸ್ಪಷ್ಟಪಡಿಸಿದ್ದರು.

ಇನ್ನೊಂದು ವಿಷಯವನ್ನೂ ಅವರು ಉಲ್ಲೇಖಿಸಿದರು. ’ಮೋಹನ್‌ಜೀ ಅವರನ್ನು ಭೇಟಿ ಮಾಡಿದ ಬಳಿಕ ನನಗೆ ದೇಶದಾದ್ಯಂತ ನೀವು ಎಷ್ಟೊಂದು ಜನ ನಮ್ಮ ದೇಶದ ನಿಜವಾದ ಉದ್ಧಾರಕ್ಕೆ ಸಂಕಲ್ಪಿಸಿ ಆಳವಾದ ಬದ್ಧತೆಯೊಂದಿಗೆ ಕಾರ್ಯಪ್ರವೃತ್ತರಾಗಿದ್ದೀರಿ ಎಂಬುದು ಗಮನಕ್ಕೆ ಬಂತು. ಒಂದು ಉತ್ತಮ ಭಾರತದ ಪರವಾಗಿ ಕೆಲಸ ಮಾಡುವವರೆಲ್ಲ ಸಾಧ್ಯವಾದಷ್ಟು ಕಡೆ ಪರಸ್ಪರ ಕೈಜೋಡಿಸಬೇಕು ಎಂದು ನನಗೆ ಅನ್ನಿಸಿತು. ಅಭಿಪ್ರಾಯಗಳಲ್ಲಿ ವ್ಯತ್ಯಾಸ ಹಾಗೂ ಚಿಂತನೆಗಳಲ್ಲಿ ವಿಭಿನ್ನತೆ ಇದ್ದರೆ ಅವುಗಳನ್ನು ಚರ್ಚೆ ಮತ್ತು ಸಂವಾದಗಳ ಮೂಲಕ ಪರಿಹರಿಸಿಕೊಳ್ಳಬಹುದು ಅನಿಸಿತು. ಆ ಕಾರಣಕ್ಕಾಗಿ ನಾನಿಂದು ಇಲ್ಲಿ ತಮ್ಮನ್ನೊಂದು ಧ್ಯೇಯಕ್ಕಾಗಿ ಅರ್ಪಿಸಿಕೊಂಡವರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದೇನೆ…’

ರಾಷ್ಟ್ರದ ಸಮಗ್ರ ಪ್ರಗತಿಯ ಚಿಂತನೆ ಮಾಡುವ ಪ್ರಾಮಾಣಿಕ ವ್ಯಕ್ತಿಗಳಿಂದ ಮಾತ್ರ ಇಂತಹ ಮುತ್ತಿನಂತಹ ಮಾತುಗಳು ಹೊಮ್ಮಲು ಸಾಧ್ಯ. ಅಜೀಂ ಪ್ರೇಮ್‌ಜೀ ಅಂತಹ ಪ್ರಾಮಾಣಿಕ ಕಳಕಳಿಯುಳ್ಳ ವ್ಯಕ್ತಿ. ಮಹಾನ್ ಭಾರತದ ಕನಸು ನನಸಾಗಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂಬ ಚಿಂತನೆ ಹೊಂದಿರುವ ಪ್ರೇಮ್‌ಜೀ ಅವರ ಬಾಯಿಂದ ಬೇರೆ ಒಡಕು ಮಾತುಗಳು ಬರಲು ಅಸಾಧ್ಯ. ಆ ಸಮಾವೇಶದಲ್ಲಿ ಅವರು ಮುಖ್ಯವಾಗಿ ಗಮನಸೆಳೆದಿದ್ದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬಹಳಷ್ಟು ಸುಧಾರಣೆಗಳ ಕುರಿತು. ’ಮಗುವಿನ ಬಹುಮುಖಿ ಆಯಾಮದ ಅಭಿವೃದ್ಧಿ ಎಂದರೆ ಅದರಲ್ಲಿ ಜ್ಞಾನವೃದ್ಧಿ ಮಾತ್ರವಲ್ಲ, ದೈಹಿಕ, ಸಾಮಾಜಿಕ, ಭಾವನಾತ್ಮಕ ಮತ್ತು ನೈತಿಕ ಅಭಿವೃದ್ಧಿಗಳು ಕೂಡಾ ಸೇರುತ್ತವೆ. ಒಳ್ಳೆಯ ಶಿಕ್ಷಣವೆಂದರೆ ಉರುಹೊಡೆದ ನೆನಪಿನಿಂದ ಬರೆಯುವುದು ಮತ್ತು ಉತ್ತಮ ಅಂಕ ಗಳಿಸುವುದಷ್ಟೇ ಅಲ್ಲ, ವಿಮರ್ಶಾತ್ಮಕವಾಗಿ ಚಿಂತಿಸುವುದು, ಪ್ರಶ್ನೆಗಳನ್ನು ಕೇಳುವುದು ಮತ್ತು ವ್ಯಕ್ತಿಯ ಸ್ವಾಯತ್ತೆ (ಸ್ವಾವಲಂಬನೆ)ಯನ್ನು ಬೆಳೆಸುವುದು ಅದರಲ್ಲಿ ಸೇರುತ್ತದೆ. ಒಳ್ಳೆಯ ಶಿಕ್ಷಣವೆಂದರೆ ಒಳ್ಳೆಯ ಮನುಷ್ಯರನ್ನು ತಯಾರಿಸುವುದು. ಅಂತಹ ವ್ಯಕ್ತಿಗಳು ಮಾಹಿತಿಪೂರ್ಣ ಮತ್ತು ನೀತಿಬದ್ಧ ತೀರ್ಮಾನಗಳನ್ನು ಕೈಗೊಳ್ಳಲು ಸಮರ್ಥರಾಗಿರಬೇಕು. ಜವಾಬ್ದಾರಿಯುತ ಮತ್ತು ಕಾಳಜಿಯುಳ್ಳ ನಾಗರಿಕರಾಗಿ ಅವರು ಬೆಳೆಯಬೇಕು…’ ಇವೆಲ್ಲಾ ಪ್ರೇಮ್‌ಜೀ ಅವರ ಭಾಷಣದಲ್ಲಿ ಹರಿದುಬಂದ ಅರ್ಥಪೂರ್ಣ ಮಾತುಗಳು.

ಶಿಕ್ಷಣ ವ್ಯವಸ್ಥೆಯ ಕುರಿತು ಇನ್ನಷ್ಟು ಮುಖ್ಯ ವಿಷಯಗಳನ್ನು ಆ ಸಮಾವೇಶದಲ್ಲಿ ಪ್ರೇಮ್‌ಜೀ ಎಲ್ಲರ ಗಮನಕ್ಕೆ ತಂದಿದ್ದಾರೆ: ’ಖಾಸಗಿ ಶಾಲೆಗಳ ಒಂದು ಬದಲಿ ವ್ಯವಸ್ಥೆಯನ್ನು ಕಟ್ಟುವುದು ನಮ್ಮ ಉದ್ದೇಶವಾಗಬಾರದು. ಬದಲಿಗೆ ಇದರ ಜೊತೆಗೆ ದೇಶದ ಬಹುತೇಕ ಎಲ್ಲ ಹಳ್ಳಿಗಳನ್ನು ಮುಟ್ಟುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪುನರ್ವ್ಯವಸ್ಥೆಗೆ ಒಳಪಡಿಸಿ ಗಟ್ಟಿಗೊಳಿಸಬೇಕು… ಶಿಕ್ಷಣ ಸಂಸ್ಥೆಗಳು ಸರಿಯಾದರಷ್ಟೇ ಸಾಲದು, ಮಿಲಿಯಗಟ್ಟಲೆ ಸಂಖ್ಯೆಯಲ್ಲಿರುವ ನಮ್ಮ ಅಧ್ಯಾಪಕರು ಕೂಡ ಬದಲಾಗಬೇಕು. ದುರದೃಷ್ಟವೆಂದರೆ, ದೇಶದಲ್ಲಿರುವ ಸುಮಾರು ೧೬ ಸಾವಿರ ಶಿಕ್ಷಕರ ಕಾಲೇಜುಗಳು ಬಹಳಷ್ಟು ವಾಣಿಜ್ಯಾತ್ಮಕವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ನಿಜವಾದ ಆಸಕ್ತಿ ಇಲ್ಲ. ಸಮಾಜದ ಬಹಳಷ್ಟು ಬಲಶಾಲಿ ವ್ಯಕ್ತಿಗಳು ಈ ಕಾಲೇಜುಗಳ ಮಾಲೀಕರಾಗಿದ್ದು, ಬದಲಾವಣೆಯನ್ನು ಅವರು ಇಷ್ಟಪಡುವುದಿಲ್ಲ… ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಮತ್ತು ಧೈರ್ಯ ಅಗತ್ಯ. ಇದನ್ನು ನಾವು ಮಾಡದಿದ್ದಲ್ಲಿ ಇನ್ನು ಬಹಳಷ್ಟು ಕಾಲ ಶಾಲಾಶಿಕ್ಷಣ ಸುಧಾರಿಸುವುದು ಅಸಂಭವ’.

ಯಾವುದೇ ಪ್ರಾಮಾಣಿಕ, ಪ್ರಜ್ಞಾವಂತ ಶಿಕ್ಷಣತಜ್ಞರೊಬ್ಬರು ಹೇಳಬಹುದಾದ ಮಾತುಗಳಂತೆ ಇವು ಗೋಚರಿಸುತ್ತವಲ್ಲವೆ? ಪ್ರೇಮ್‌ಜೀ ಒಬ್ಬ ಶಿಕ್ಷಣತಜ್ಞರಲ್ಲದಿರಬಹುದು. ಆದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕೆಂದು ಆಗ್ರಹಿಸುತ್ತಿರುವವರಲ್ಲಿ ಅವರೂ ಒಬ್ಬರು. ಹಾಗೆಂದೇ ಅವರು ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡ, ಕರ್ನಾಟಕ ಮತ್ತು ಬಿಹಾರಗಳಲ್ಲಿರುವ ೩.೫೦ ಲಕ್ಷಕ್ಕೂ ಅಧಿಕ ಶಾಲೆಗಳಲ್ಲಿ ತಮ್ಮ ವಿಪ್ರೋ ಶಿಕ್ಷಣ ಪ್ರತಿಷ್ಠಾನದ ಮೂಲಕ ಬದಲಾವಣೆಯನ್ನು ತರಲು ಹೆಣಗುತ್ತಿರುವುದು. ಹಿಂದುಳಿದ ಜಿಲ್ಲೆಗಳ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಲು ಸಹಕರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ೧೦ ವರ್ಷಗಳ ಅನುಭವ ಗಳಿಸಿದ ಬಳಿಕ ಅವರ ಗಮನಕ್ಕೆ ಬಂದ ಸಂಗತಿಯೆಂದರೆ: ಯೋಗ್ಯ ಶಿಕ್ಷಣ, ವೃತ್ತಿಪರರ ಕೊರತೆ ಈ ಕ್ಷೇತ್ರದ ಪ್ರಮುಖ ಸಮಸ್ಯೆ.

ಸೇವಾಸಂಗಮ ಸಮಾವೇಶದಲ್ಲಿ ಪ್ರೇಮ್‌ಜೀ ಕೆಲವು ಒಳನೋಟಗಳನ್ನೂ ಹರಿಸಿದ್ದಾರೆ: ’ನನಗೆ ಮೌಲ್ಯಗಳು ತುಂಬಾ ಮುಖ್ಯ. ಇದು ದೊಡ್ಡ ಕೆಲಸಗಳಿಗೆ ಮಾತ್ರವಲ್ಲ, ಸಣ್ಣ ಕೆಲಸಗಳ ವಿಷಯದಲ್ಲಿ ಕೂಡ ಸತ್ಯ. ಏಕೆಂದರೆ ನಾವೇನು ಎನ್ನುವುದು ಸಣ್ಣ ವಿಷಯಗಳಿಂದ ತಿಳಿಯುತ್ತದೆಯೇ ಹೊರತು ದೊಡ್ಡ ವಿಷಯಗಳಿಂದಲ್ಲ. ಪ್ರಾಮಾಣಿಕತೆ (Iಟಿಣegಡಿiಣಥಿ)ಗಿಂತ ಮಹತ್ವದ ವಿಷಯ ಬೇರೆ ಇಲ್ಲ ಎಂಬುದು ನನ್ನ ಭಾವನೆ… ನಮ್ಮ ಸಾಮಾಜಿಕ ಬದ್ಧತೆ ಮತ್ತು ಮಾನವೀಯತೆಗಿರುವ ಪರೀಕ್ಷೆಯೆಂದರೆ ನಮ್ಮ ಸಹಜೀವಿಗಳಲ್ಲಿ ಅತ್ಯಂತ ದುರ್ಬಲರಾದವನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಹಾಗೂ ಅವರನ್ನು ಯಾವ ರೀತಿ ಗೌರವಿಸುತ್ತೇವೆ ಎನ್ನುವುದು. ನಮ್ಮ ನೈಜ ಸಂಸ್ಕೃತಿ ವ್ಯಕ್ತವಾಗುವುದು ಅಲ್ಲಿಯೇ…’

ಅಜೀಂ ಪ್ರೇಮ್‌ಜೀ ಶಿಕ್ಷಣದ ಕುರಿತು ವ್ಯಕ್ತಪಡಿಸಿದ ಈ ಎಲ್ಲ ಚಿಂತನೆಗಳು ಆರೆಸ್ಸೆಸ್ ಕೂಡ ಇದಕ್ಕೂ ಮುನ್ನ ವ್ಯಕ್ತಪಡಿಸಿರುವಂತಹದೇ. ಶಬ್ದಗಳ ವ್ಯತ್ಯಾಸವಿರಬಹುದು, ಆದರೆ ಭಾವನೆಗಳು ಒಂದೇ. ಪ್ರೇಮ್‌ಜೀಯಂತಹ ಒಬ್ಬ ಪ್ರಾಮಾಣಿಕ ದೇಶಭಕ್ತನ ಭಾವನೆಗಳನ್ನು ತನ್ನ ಕಾರ್ಯಕರ್ತರಿಗೂ ಹಂಚಬೇಕು. ಅದರಿಂದ ಅವರು ಉಪಯೋಗ ಪಡೆಯಬೇಕು ಎಂಬುದೊಂದೇ ಆರೆಸ್ಸೆಸ್‌ನ ಕಾಳಜಿಯಾಗಿತ್ತು. ಆ ಹಿನ್ನೆಲೆಯಲ್ಲೇ ಅವರನ್ನು ಸಂಘದ ಮುಖ್ಯಸ್ಥರು ಆ ಸಮಾವೇಶಕ್ಕೆ ಆಗಮಿಸುವಂತೆ ವಿನಂತಿಸಿದ್ದು. ಅವರೊಬ್ಬ ಮುಸ್ಲಿಂ ಎಂಬ ಕಾರಣಕ್ಕಾಗಲೀ ಅಥವಾ ಅವರನ್ನೂ ಆರೆಸ್ಸೆಸ್ ಬ್ರಾಂಡ್ ಮಾಡಬೇಕೆಂಬ ದುರುದ್ದೇಶದಿಂದಾಗಲಿ ಖಂಡಿತ ಅವರನ್ನು ಕರೆದಿರಲಿಕ್ಕಿಲ್ಲ. ರಾಷ್ಟ್ರದ ಸರ್ವಾಂಗೀಣ ಪ್ರಗತಿ ಬಯಸುವ ಆರೆಸ್ಸೆಸ್ ಎಲ್ಲ ಬಗೆಯ ಪ್ರಾಮಾಣಿಕ ವ್ಯಕ್ತಿಗಳನ್ನು ಆ ಕಾರ್ಯಕ್ಕೆ ಜೋಡಿಸತೊಡಗಿದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಹಿಂದುಗಳ ಜೊತೆಗೆ ಮುಸ್ಲಿಮರು, ಕ್ರೈಸ್ತರು… ಎಲ್ಲರೂ ಒಂದುಗೂಡಬೇಕು. ಆರೆಸ್ಸೆಸ್‌ನ ಮೂಲ ಆಶಯ ಇದೇ. ಆರೆಸ್ಸೆಸ್ ವಿರುದ್ಧ ವಿನಾಕಾರಣ ಕೆಂಡಕಾರುವ ಕೆಲವು ಬುದ್ಧಿಜೀವಿಗಳು, ವಿಚಾರವಾದಿಗಳು ಈ ಧನಾತ್ಮಕ ಬೆಳವಣಿಗೆಯನ್ನು ಮರೆಯದೆ ಗಮನಿಸಬೇಕಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'Community Radio is Voice for the Voiceless': RSS functionary J Nandakumar at Bengaluru

Mon Apr 13 , 2015
Bengaluru April 12: “Community radio is one of the most potential tool for mass communication, which can present, discuss, analyse the problems and solutions of a local geographic community. The sum total of little traditions prevailing in villages, the indigenous forms of arts and sports can be well preserved through […]