ಬೆಂಗಳೂರು ಅಕ್ಟೋಬರ್ 4, 2015: “ದೇಸೀ ಹಸುವಿನ ಹಾಲು, ತುಪ್ಪದಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿದೇಶಿ ತಳಿಗಳಾದ ಜೆರ್ಸಿ, ಹೆಚ್‌ಎಫ್ ಹಸುಗಳ ಹಾಲಿನಿಂದ ಕ್ಯಾನ್ಸರ್ ಮೊದಲಾದ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ವಿದೇಶಗಳಲ್ಲಿ ನಡೆದಿರುವ ಸಂಶೋಧನೆಗಳು ತಿಳಿಸಿವೆ. ದೇಸೀ ಹಸುವಿನ ಉಪಯೋಗಗಳ ಬಗ್ಗೆ ನಮ್ಮ ದೇಶದಲ್ಲೂ ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯ. ಇದರ ಮಹತ್ತ್ವದ ಬಗ್ಗೆ ರೈತರಲ್ಲಿ ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿದಾಗ ದೇಸೀ ಗೋತಳಿ ಸಂವರ್ಧನೆ ಸಾಧ್ಯ” ಎಂದು ಹಿರಿಯ ಸಾಮಾಜಿಕ ಚಿಂತಕ ಚಂದ್ರಶೇಖರ ಭಂಡಾರಿ ಹೇಳಿದರು. ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಗೋಬಂಧು ಯೋಜನೆಯ ದಾನಿಗಳಿಗೆ ದೇಸೀ ಹಸುವಿನ ತುಪ್ಪ ವಿತರಿಸಿ ಅವರು ಮಾತನಾಡಿದರು.

RSS Press Ino-October-4-2015-BengaluruCh

ಸಾಮಾಜಿಕ ಚಿಂತಕ ಚಂದ್ರಶೇಖರ ಭಂಡಾರಿ ಅವರಿಂದ ದೇಸೀ ಹಸುವಿನ ತುಪ್ಪ ಸ್ವೀಕರಿಸುತ್ತಿರುವ ಬೆಂಗಳೂರಿನ ಸಾಫ್ಟ್‌ವೇರ್ ತಂತ್ರಜ್ಞ ಹರಿಪ್ರಸಾದ್ ಬೊಂಗಾಳೆ. ರಾಜ್ಯ ಸಾವಯವ ಕೃಷಿ ಪರಿವಾರಗಳ ಒಕ್ಕೂಟದ ಅಧ್ಯಕ್ಷರಾದ ಸಂಗನಗೌಡ ಪಾಟೀಲ್ (ಮಧ್ಯದಲ್ಲಿ) ಮತ್ತು ಸಾವಯವ ಕೃಷಿ ಪರಿವಾರದ ತುಮಕೂರು ಜಿಲ್ಲಾ ಸಂಚಾಲಕರಾದ ಎಸ್. ಶಂಕರಪ್ಪ (ಬಲಗಡೆ) ಅವರು ಚಿತ್ರದಲ್ಲಿದ್ದಾರೆ.
ಗೋಬಂಧು ಯೋಜನೆಯಲ್ಲಿ ಭಾಗವಹಿಸಿದ ಬೆಂಗಳೂರಿನ ಸಾಫ್ಟ್‌ವೇರ್ ತಂತ್ರಜ್ಞ ಹರಿಪ್ರಸಾದ್ ಬೊಂಗಾಳೆ ಅವರು ಸಾಂಕೇತಿಕವಾಗಿ ತುಪ್ಪ ಸ್ವೀಕರಿಸಿ ಮಾತನಾಡುತ್ತಾ, ಎಲ್ಲವೂ ಕಲಬೆರಕೆ ಆಗಿರುವ ಇಂದಿನ ದಿನಗಳಲ್ಲಿ ಶುದ್ಧ ದೇಸೀ ಹಸುವಿನ ತುಪ್ಪ ನಗರವಾಸಿಗಳಿಗೂ ಸಿಗುವಂತೆ ಮಾಡಿರುವ ಈ ಯೋಜನೆಯಿಂದ ಬಹಳ ಅನುಕೂಲವಾಗಿದೆ. ಇನ್ನೂ ಹೆಚ್ಚಿನ ನಾಗರಿಕರು ಈ ಯೋಜನೆಯಲ್ಲಿ ಭಾಗವಹಿಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಸಾವಯವ ಕೃಷಿ ಪರಿವಾರಗಳ ಒಕ್ಕೂಟದ ಅಧ್ಯಕ್ಷರಾದ ಸಂಗನಗೌಡ ಪಾಟೀಲ್ ಮತ್ತು ಸಾವಯವ ಕೃಷಿ ಪರಿವಾರದ ತುಮಕೂರು ಜಿಲ್ಲಾ ಸಂಚಾಲಕರಾದ ಎಸ್. ಶಂಕರಪ್ಪ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರವು ದೇಸಿ ಗೋತಳಿ ಸಂರಕ್ಷಣೆಗಾಗಿ ರೂಪಿಸಿರುವ ಈ ’ಗೋಬಂಧು’ ಯೋಜನೆಗೆ ರೂ. ೫,೦೦೦ ದಿಂದ ೨೫,೦೦೦ ರವರೆಗೆ ದೇಣಿಗೆ ನೀಡಿ ಗೋಬಂಧುಗಳಾಗಬಹುದು. ಬೆಂಗಳೂರಿನಲ್ಲಿರುವ ಅಂತಹ ಗೋಬಂಧುಗಳಿಗೆ ಒಂದು ವರ್ಷದ ಕಾಲ ಪ್ರತಿ ತಿಂಗಳು ಶುದ್ಧ ದೇಸೀ ಹಸುವಿನ ತುಪ್ಪವನ್ನು ಉಚಿತವಾಗಿ ನೀಡುವ ವ್ಯವಸ್ಥೆ ಈ ಯೋಜನೆಯಲ್ಲಿದೆ. ದಾನಿಗಳು ನೀಡಿದ ಹಣದಿಂದ ದೇಸೀ ಹಸು ಸಾಕುವ ರೈತರಿಂದ ಉತ್ತಮ ಬೆಲೆಯಲ್ಲಿ ತುಪ್ಪ ಖರೀದಿಸಿ ಅದನ್ನು ಪ್ರತಿ ತಿಂಗಳು ದಾನಿಗಳಿಗೆ ತಲುಪಿಸುತ್ತದೆ ಕೃಷಿ ಪ್ರಯೋಗ ಪರಿವಾರ. ಜೊತೆಗೆ ಅಂತಹ ರೈತರಿಗೆ ಪ್ರೋತ್ಸಾಹ ಧನವನ್ನೂ ನೀಡುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ೯೯೦೦೦೧೩೩೦೫, ೯೭೩೧೨೬೪೦೦೯ ಸಂಪರ್ಕಿಸಬಹುದು.