ಬೆಂಗಳೂರು: ವಿಕ್ರಮ ಯೋಗ ವಿಶೇಷ ಸಂಚಿಕೆಯನ್ನು ಸನ್ಮಾನ್ಯ ರಾಜ್ಯಪಾಲರಾದ ಶ್ರೀ ವಜುಬಾಯಿ ವಾಲಾ ಅವರು 20.06.2015 ರಂದು ರಾಜಭವನದಲ್ಲಿ ಲೋಕಾರ್ಪಣೆ ಮಾಡಿದರು.

Gov Photo

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ  ‘ವಿಕ್ರಮ ಯೋಗ ವಿಶೇಷಾಂಕ

ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂನ್ 21ರಂದು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಹೀಗೆ ಜೂನ್ 21ಅನ್ನು ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಿಸಲು ಪ್ರಧಾನಿ ನರೇಂದ್ರಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಮಾಡಿದ ಆಗ್ರಹ ಮತ್ತು ಅದಕ್ಕೂ ಮೊದಲ ದಶಕಗಳ ಕಾಲ ಕೆಲವು ಸಂಘಟನೆಗಳು ಮಾಡಿದ ಅವಿರತ ಪ್ರಯತ್ನಗಳು ಕಾರಣ. ಜೂನ್ 21 – ಯೋಗ ದಿನ ಆಗಿರುವುದು ಯೋಗಾಭ್ಯಾಸ ಪ್ರೇಮಿಗಳಿಗಂತೂ ಅತೀವ ಸಂತಸ ತಂದಿದೆ. 177 ದೇಶಗಳು ಯೋಗ ದಿನ ಆಚರಣೆಗೆ ಸಜ್ಜಾಗಿವೆ. ಕೇಂದ್ರ ಸರ್ಕಾರ ‘ಯೋಗ ದಿನ’ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದೇಶದೆಲ್ಲೆಡೆ ಎದ್ದು ಕಾಣುವಂತೆ ಆಚರಿಸಲು ಮುಂದಾಗಿರುವುದು ಒಂದು ಒಳ್ಳೆಯ ಬೆಳವಣಿಗೆ.

ಆದರೆ ‘ಯೋಗ ದಿನ’ ಸಮೀಪಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಯೋಗದ ಸುತ್ತ ವಿವಾದದ ಹುತ್ತ ಬೆಳೆಯ ತೊಡಗಿರುವುದು ಒಂದು ಅನಪೇಕ್ಷಿತ ಬೆಳವಣಿಗೆ. ನಮ್ಮ ಚಿಂತನಾಕ್ರಮಗಳು ಒಂದು ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜಡವಾಗಿವೆ ಎಂಬುದಕ್ಕೆ ಇದು ಸೂಚಕ. ಯೋಗಕ್ಕೂ ಧರ್ಮಕ್ಕೂ ತಳಕು ಹಾಕಲಾಗುತ್ತಿರುವುದು ಸಂಕುಚಿತ ಮನಸ್ಸುಗಳ ವಿಕೃತ ಚಿಂತನೆಗೆ ನಿದರ್ಶನ. ಸುಮಾರು 6 ಸಾವಿರ ವರ್ಷಗಳಷ್ಟು ದೀರ್ಘ ಪರಂಪರೆ ಹೊಂದಿದ ಯೋಗದಲ್ಲಿ ಧರ್ಮ ಅಥವಾ ಮತದ ಪ್ರಸ್ತಾಪ ಎಲ್ಲೂ ಇಲ್ಲ. ಯೋಗಕ್ಕೆ ಒಂದು ಶಾಸ್ತ್ರೀಯ ಮತ್ತು ವೈಜ್ಞಾನಿಕ ಚೌಕಟ್ಟನ್ನು ಹಾಕಿಕೊಟ್ಟ ಪತಂಜಲಿಯ ‘ಯೋಗ ಸೂತ್ರ’ದಲ್ಲಿ ಕೂಡ ಇಂತಹ ಯಾವುದೇ ಪ್ರಸ್ತಾಪದ ನಂಟು ಇಲ್ಲ. ಯೋಗವೆನ್ನುವುದು ಮೂಲಭೂತವಾಗಿ ದೇಹ, ಮನಸ್ಸು ಮತ್ತು ಬುದ್ಧಿಗಳ ಸಮತೋಲನ ಹಾಗೂ ಸಮಗ್ರ ವಿಕಾಸಕ್ಕಾಗಿ ಭಾರತೀಯರು ಕಂಡುಕೊಂಡಿರುವ ತಮ್ಮದೇ ಆದ ಒಂದು ಆರೋಗ್ಯ ಪದ್ಧತಿ. ಇದರ ಜೊತೆಗೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳು ಒಟ್ಟಾಗಿ ಸಾಗುವುದನ್ನು, ಮನುಷ್ಯ ಮತ್ತು ನಿಸರ್ಗ ಪರಸ್ಪರ ಪೂರಕವಾಗಿ ಹೆಜ್ಜೆ ಹಾಕುವುದನ್ನು, ಆಸೆ ಮತ್ತು ಅದನ್ನು ನಿಯಂತ್ರಿಸುವ ಬಗೆಯನ್ನು ಯೋಗ ವಿವರಿಸುತ್ತದೆ.

ಯೋಗಾಭ್ಯಾಸದಲ್ಲಿ ಸೂರ್ಯನಮಸ್ಕಾರ ಇರುವುದನ್ನು ಕೆಲವು ಅಲ್ಪಸಂಖ್ಯಾತ ವರ್ಗದ ಜನರು ವಿರೋಧಿಸಿ ವಿವಾದ ಸೃಷ್ಟಿಸಿದ್ದಾರೆ. ಯೋಗವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಬೇಕೇ ಹೊರತು, ಅದಕ್ಕೆ ಧರ್ಮ, ಮತದ ಲೇಪನ ಹಚ್ಚಿ ನೋಡುವುದು ಸಲ್ಲದು. ಯೋಗ ಯಾವುದೇ ಧರ್ಮದ ಸ್ವತ್ತಲ್ಲ. ವೇದಾದಿಗಳಲ್ಲಿ, ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಯೋಗ ಇಡೀ ಮನುಕುಲದ ಒಳಿತಿಗಾಗಿ ಇರುವ ಒಂದು ಶಾಸ್ತ್ರ ಎಂದು ಅರ್ಥವಿಸಿಕೊಂಡರೆ ಈಗ ಎದ್ದಿರುವಂತಹ ಯಾವುದೇ ವಿವಾದ ಸೃಷ್ಟಿಯಾಗದು.  ಕೇಂದ್ರ ಸರ್ಕಾರ ಇದೀಗ ಅಲ್ಪಸಂಖ್ಯಾತರ ವಿರೋಧಕ್ಕೆ ಹೆದರಿ, ಯೋಗದ ಆಚರಣೆಯಲ್ಲಿ ಸೂರ್ಯನಮಸ್ಕಾರ ಮತ್ತು ಶ್ಲೋಕಗಳ ಪಠಣದಿಂದ ವಿನಾಯಿತಿ ನೀಡಿರುವುದು ಅಷ್ಟೇನೂ ಉತ್ತಮ ಕ್ರಮವಲ್ಲ. ಒಂದು ರೀತಿಯಲ್ಲಿ ಅದೊಂದು ಓಲೈಕೆಯ ನೀತಿ. ಮುಸಲ್ಮಾನರು ಪ್ರತಿನಿತ್ಯ ಐದು ಹೊತ್ತು ಸಲ್ಲಿಸುವ ನಮಾಜು ಕೂಡ ಯೋಗವನ್ನು ಒಳಗೊಂಡಿದೆ. ಅಷ್ಟೇಕೆ, ಮನುಷ್ಯ ಪ್ರತಿನಿತ್ಯ ನಡೆಸುವ ಊಟ, ತಿಂಡಿ, ಕೆಲಸ, ನಡಿಗೆ, ನಿದ್ರೆ ಮುಂತಾದ ಎಲ್ಲ ದೈಹಿಕ ಕ್ರಿಯೆಗಳಲ್ಲೂ ಯೋಗ ಇದ್ದೇ ಇದೆ. ಯೋಗವಿಲ್ಲದ ಯಾವುದೇ ಕ್ರಿಯೆ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ‘ಯೋಗದಂತಹ ಸಂಗತಿಗಳನ್ನು ಧರ್ಮದ ಪರಿಧಿಯಲ್ಲಿಟ್ಟು ನೋಡಬಾರದು’ ಎಂದು ಹೇಳಿರುವುದು ಈ ಹಿನ್ನೆಲೆಯಲ್ಲಿ ಸ್ವಾಗತಾರ್ಹ. ನಾವು ಮನುಕುಲಕ್ಕೆ ಒಳಿತಾಗುವ ಸಂಗತಿಗಳನ್ನು ವಿಶಾಲವಾಗಿ ನೋಡುವ, ಸೂಕ್ಷ್ಮವಾಗಿ ಗ್ರಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು ಪ್ರತಿಯೊಂದನ್ನೂ ಬಣ್ಣದ ಕನ್ನಡಕದ ಮೂಲಕ ನೋಡುವ ಸಣ್ಣತನ ತೋರಬಾರದು.

ಇದೀಗ ಎಲ್ಲೆಡೆ ಜನಪ್ರಿಯವಾಗಿರುವ ಯೋಗದ ಕುರಿತು ‘ಯೋಗ ದಿನ’ದ ಅಂಗವಾಗಿ, ವಿಕ್ರಮ ಪತ್ರಿಕೆ ಯೋಗ ವಿಶೇಷಾಂಕವೊಂದನ್ನು ಓದುಗರ ಕೈಯಲ್ಲಿಟ್ಟಿದೆ. ಯೋಗ ಕ್ಷೇತ್ರದ ತಜ್ಞರು, ಲೇಖಕರು ಈ ವಿಶೇಷಾಂಕ ಸಮೃದ್ಧವಾಗಿ, ಸಂಗ್ರಾಹ್ಯವಾಗಿ ಹೊರ ಬರಲು ಲೇಖನಗಳ ಮೂಲಕ ನೆರವು ನೀಡಿದ್ದಾರೆ. ಎಂದಿನಂತೆ ಜಾಹೀರಾತುದಾರರು ಕೈಹಿಡಿದಿದ್ದಾರೆ. ಯೋಗಕ್ಕೆ ಸಂಬಂಧಿಸಿದ ಸಮಗ್ರ ಅಲ್ಲದಿದ್ದರೂ, ಸ್ಥೂಲವಾಗಿ ಹಲವು ಸಂಗತಿಗಳನ್ನು ಒಂದೆಡೆ ಸೇರಿಸಿ ಓದುಗರಿಗೆ ಒದಗಿಸಬೇಕೆಂಬ ಆಶಯ ಈ ವಿಶೇಷಾಂಕದ್ದು. ನಿಮಗಿದು ಇಷ್ಟವಾಗಬಹುದೆಂದು ನಮ್ಮ ಅನಿಸಿಕೆ. ನಿರಂತರ, ಕ್ರಮಬದ್ಧ ಯೋಗಾಭ್ಯಾಸದ ಮೂಲಕ ನೆಮ್ಮದಿ, ಆರೋಗ್ಯ, ದೀರ್ಘಾಯಸ್ಸು ನಿಮ್ಮೆಲ್ಲರಿಗೂ ಲಭಿಸಲೆಂದು ಹಾರೈಕೆ.

– ದು.ಗು.ಲಕ್ಷ್ಮಣ

ಸಂಪಾದಕರು