“ಸೇವೆಯೇ ಹಿಂದೂ ಧರ್ಮದ ಸಂಕೇತ” : ಶ್ರೀ ಶ್ರೀ ರವಿಶಂಕರ್ ಗುರೂಜೀ.
ಬೆಂಗಳೂರು ಡಿಸೆಂಬರ್ 13, 2015: ಹಿಂದೂ ಧರ್ಮವು ಯಾವುದೇ ಸೇವೆಯನ್ನು ಎಂದು ಪ್ರಚಾರ ಮಾಡಿಲ್ಲ. ಹಲವಾರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ, ಯಾವುದೇ ಪ್ರಚಾರವಿಲ್ಲದೇ, ತಮ್ಮ ಸೇವೆಯನ್ನು ಈ ದೇಶದಲ್ಲಿರುವ ಲಕ್ಷಾಂತರ ಮಠ-ಮಾನ್ಯಗಳು, ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಮತ್ತು ಸೇವೆಯೇ ಹಿಂದೂ ಧರ್ಮದ ಸಂಕೇತವೆಂದು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಡಾ.ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು.

IMG_1432
ಅವರು ಇಂದು ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿರುವ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದ ಕೊನೆಯ ದಿನವಾದ ಪರಮವೀರ ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಅನೇಕ ಧರ್ಮಗಳು ಸ್ವಲ್ಪ ಸೇವೆಯನ್ನು ಮಾಡಿ ಅಪಾರವಾದ ಪ್ರಚಾರವನ್ನು ತೆಗೆದುಕೊಳ್ಳುತ್ತವೆ. ಆದರೆ ಹಿಂದೂ ಧರ್ಮದ ಅನೇಕ ಮಠ-ಮಾನ್ಯಗಳು, ಸಂಘ ಸಂಸ್ಥೆಗಳು ಹಗಲಿರುಳು ಶ್ರಮವಹಿಸಿ ಸೇವೆಯನ್ನು ಮಾಡಿ ಯಾವುದೇ ಪ್ರಚಾರವಿಲ್ಲದೇ, ಯಾವುದೇ ಫಲಾಪೇಕ್ಷೆಯಿಲ್ಲದೇ ಗುಪ್ತವಾಗಿ ಕಾರ್ಯನಿರ್ವಹಿಸುವುದೇ ಹೆಮ್ಮೆ ಎಂದರು. ಪ್ರತಿ ರಾಜ್ಯದಲ್ಲೂ ಈ ರೀತಿಯ ಹಿಂದೂ ಆಧ್ಯಾತ್ಮಿಕ ಸೇವಾ ಮೇಳ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಮತ್ತು ಅವಶ್ಯಕತೆಯಿದೆ ಎಂದರು. ಇದು ಹಿಂದೂ ಸಂಸ್ಕೃತಿಯ ಸೇವಾವೃತ್ತಿಯನ್ನು ತೋರಿಸುತ್ತದೆ ಹರ್ಷವ್ಯಕ್ತಪಡಿಸಿದರು. ಈ ಸೇವಾ ಮೇಳವು ಇನ್ನು ಹೆಚ್ಚು ಜನಕ್ಕೆ ಪ್ರೇರಣೆಯನ್ನು ನೀಡುತ್ತದೆ. ಧರ್ಮದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಧರ್ಮದ ಹಿರಿಮೆ-ಗರಿಮೆ ಹೆಚ್ಚಾಗುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸೇವೆ ಎಂಬುದು ಇಲ್ಲಿ ನಮ್ಮ ಪ್ರತಿ ಭಾರತೀಯರೊಬ್ಬರ ವಂಶವಾಹಿನಿಯಲ್ಲಿದೆ, ಆದರೆ ಭಾರತದಂತಹ ದೇಶದಲ್ಲಿ ಮಾಡುವ ಸೇವೆಯನ್ನು ಪ್ರಪಂಚದ ಯಾವುದೇ ಭಾಗದಲ್ಲಿ ನಾವು ಕಾಣಲು ಸಾಧ್ಯವಿಲ್ಲವೆಂದು ಹೇಳಿದರು. ಸೇವೆ ಮಾಡಬೇಕೆನ್ನುವ ಮನೋಭಾವನೆ ನಮ್ಮ ಭಾರತೀಯರಲ್ಲಿದೆ. ಭಾರತೀಯರು ಎಂದಿಗೂ ಸೇವೆಯಲ್ಲಿ ಮುಂದಿದ್ದಾರೆ ಎಲ್ಲ ಭೇದ-ಭಾವ ಮರೆತು ಸೇವೆಯೇ ನಮ್ಮ ಗುರಿ ಎಂದು ಭಾರತೀಯ ಸಂಸ್ಕೃತಿಯಲ್ಲಿದೆ ಎಂದರು.
ದೇಶದಲ್ಲಿ ನಡೆದ ಯಾವುದೇ ಒಂದು ಚಿಕ್ಕ ಘಟನೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ದೇಶದ ಹೆಸರನ್ನು ಹಾಳು ಮಾಡುತ್ತಿರುವುದು ಸರಿಯಲ್ಲ ಎಂದರು. ದೇಶದ ಹೆಸರನ್ನು ಹಾಳು ಮಾಡಲು ಹಲವಾರು ವಿದೇಶದ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಭಾರತ ದೇಶವು ಯುವಶಕ್ತಿಯಿಂದ ಕೂಡಿದೆ. ಯುವಶಕ್ತಿಗೆ ಸರಿಯಾದ ಆತ್ಮವಿಶ್ವಾಸದಿಂದ ಅವರನ್ನು ಮುನ್ನಡೆಸಬೇಕಾಗಿದೆ. ಭಾರತದಲ್ಲಿ ಸಾಕಷ್ಟು ಕೆಲಸವಾಗಬೇಕಿದೆ. ನಾಡು, ನುಡಿ, ಜಲ ಸಂರಕ್ಷಣೆಗೆ ನಾವು ಮುಂದಾಗಬೇಕಾಗಿದೆ ಎಂದರು.
ಇನ್ನೊಬ್ಬ ಮುಖ್ಯ ವ್ಯಕ್ತಾರರಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ವಾಗ್ಮಿ, ಲೇಖಕ, ಯುವ ಬ್ರಿಗೇಡ್‌ನ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ದೇಶದಲ್ಲಿ ಯುದ್ದಗಳು ನಡೆದಿದ್ದು ಧರ್ಮಕ್ಕೋಸ್ಕರ, ಯಾವುದೇ ಸ್ವಾರ್ಥಕ್ಕಲ್ಲ, ಶತ್ರು ಪಾಕಿಸ್ತಾನವು ನಮ್ಮ ದೇಶದ ಮೇಲೆ ೧೯೪೭, ೧೯೬೫, ೧೯೭೫ ಮತ್ತು ೧೯೯೯ ರಲ್ಲಿ ಹಲವಾರು ಭಾರಿ ನಮ್ಮ ದೇಶದ ಮೇಲೆ ಯುದ್ಧ ಮಾಡಿದಾಗ ನಮ್ಮ ದೇಶದ ಸೈನ್ಯವು ತಕ್ಕ ಪ್ರತ್ತ್ಯುತ್ತರ ನೀಡಿದೆ ಎಂದರು.
ನಮ್ಮ ದೇಶದ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಬಲಿದಾನಿಗಳಾಗಿ ಅಮರವೀರರಾಗಿದ್ದಾರೆ. ಇಂದು ಲಕ್ಷಾಂತರ ಸೈನಿಕರು ಹಗಲಿರುಳು ಶ್ರಮವಹಿಸಿ ಒಂದೊತ್ತು ಊಟವಿಲ್ಲದೇ, ನಿದ್ರೆಯಿಲ್ಲದೇ ಮದ್ದುಗುಂಡುಗಳೆ ಅವರ ಬದುಕಾಗಿ ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿರುವುದು ದೇಶದ ಹೆಮ್ಮೆಯ ಮತ್ತು ಗೌರವದ ಸಂಕೇತವೆಂದು ಹರ್ಷವ್ಯಕ್ತಪಡಿಸಿದರು.
ಸೈನಿಕರು ಯುದ್ಧದ ಸಂದರ್ಭದಲ್ಲಿ ಅಮರರಾದಾಗ ಅವರ ಅನೇಕ ಕುಟುಂಬಗಳು ಸೈನಿಕರ ಬಗ್ಗೆ ಹೆಮ್ಮೆ ಮತ್ತು ಸೈನಿಕರು ಸಾಹಸವನ್ನು ಮೆರೆಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು, ನಮ್ಮ ದೇಶವು ಹಲವಾರು ಭಾರಿ ಯುದ್ಧದಲ್ಲಿ ಸೋತಿದ್ದು ಈ ದೇಶದ ಹೇಡಿ ರಾಜಕಾರಣಿಗಳಿಂದ, ಸೈನಿಕರಿಂದಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ್ದ ಸ್ವಾತಂತ್ರ್ಯ ಸೇನಾನಿ ತ್ಯಾತ್ಯಾಟೋಪಿಗೆ 200ನೇ ವರ್ಷದ ಸಂಭ್ರಮ, ಈ ಹೊತ್ತಿನಲ್ಲಿ ಮುಂಬರುವ ದಿನಗಳಲ್ಲಿ ಅವರನ್ನು ನೆನೆಪಿಸಿಕೊಳ್ಳುವ ಕಾರ್ಯಕ್ರಮ ಮಾಡಬೇಕಾಗಿದೆ ಎಂದರು.
ಭಾರತವು ಇಡೀ ವಿಶ್ವದ ಗುರುವಾಗಬೇಕಾಗಿದೆ ಎನ್ನುವುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು, ಆ ಕನಸಿನತ್ತ ನಮ್ಮ ದೇಶವು ದಾಪುಗಾಲಿಡುತ್ತಿದೆ, ಆ ಶ್ರೇಷ್ಠ ಅವಕಾಶ ನಮ್ಮ ಮುಂದಿದೆ ಎಂದು ಹರ್ಷವ್ಯಕ್ತಪಡಿಸಿದರು.

‘ಸನ್ಮಾನ್ ಮಾಡಿರೋದು ಬಾಳ್ ಖುಷಿ ಆಗೆತಿ’

1965 ರ ಯುದ್ಧಕ್ಕೆ 50 ವರ್ಷವಾದ ಪ್ರಯುಕ್ತ  1965ರ ಯುದ್ಧದಲ್ಲಿ ಹೋರಾಡಿದ ಆಯ್ದ ಸೈನಿಕರು ಗುರುತಿಸಿ ಗೌರವಿಸಲಾಯಿತು. ಬೆಳಗಾವಿಯ ಶ್ರೀ ಲಕ್ಷ್ಮಣ ಲಕ್ಕಪ್ಪ ಬೀರಣ್ಣವರ, ಶ್ರೀ ಗೋವಿಚಂದ ವೆಂಕಟೇಶ್ವರ ಸವ್ವಾಸೇರ್, ವಿಜಯಪುರದ ಶ್ರೀ ಅಬ್ದುಲ್ ಹಮೀದ್ ಅಮೀನ್‌ಸಾಬ್, ಶ್ರೀ ಬಸವಣ್ಣೆಪ್ಪ ಕಾರ್ಗೆ, ಮಂಡ್ಯದ ಶ್ರೀ ಈಶ್ವರ ಜೋಯಿಸ್ ಅವರನ್ನು ಫಲಪುಷ್ಪನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಸಂಕೇಶ್ವರ, ಉಪಾಧ್ಯಕ್ಷರಾದ ಶ್ರೀ ಮೋಹನ್ ಮಂಗನಾನಿ ಉಪಸ್ಥಿತರಿದ್ದರು.
ಬೆಳಗಾವಿಯ ನಿವೃತ್ತ ಯೋಧ ಶ್ರೀ ಲಕ್ಷ್ಮಣ್ ಬೀರಣ್ಣವರನ್ನು ಮಾತನಾಡಿಸಿದಾಗ ಅವರದೇ ಆದ ಶೈಲಿಯಲ್ಲಿ ಮಾತನಾಡಿದರು. 1967 ರ ಯುದ್ಧದಲ್ಲಿ ಭಾಗವಹಿಸಿದ್ದು ನನಗೆ ಬಾಳ ಸಂತೋಷ್ ಐತಿ, ಹೆಮ್ಮೆನೂ ಐತಿ. ಅದೊಂದು ಅದ್ಭುತ ಗಳಿಗೆ , ಆ ಯುದ್ಧದ ಸಂದರ್ಭದಾಗ ನಾವು ಮತ್ತ ವಾಪಸ್ ನಮ್ಮ ಊರಿಗೆ ಬರ್ರ್ತಿವಿಲ್ಲ ಅಂತ್ ಅನಿಸಿತ್ತು. ಅಂತೂ ಹೋರಾಟ ಮಾಡಿದೇವು ಅಂತ್ ಹೆಮ್ಮೆ ವ್ಯಕ್ತಪಡಿಸಿದರು. ನಮ್ಮ ಮೊಮ್ಮಕ್ಕಳನ್ನು ನಾವು ಮುಂದ್ ಮಿಲಿಟ್ರಿಗೆ ಸೇರಸಬೇಕಂತ ಬಾಳ್ ಆಸೇ ಐತಿ ಅಂದರು. ನಮ್ಮೂರಾಗ್, ಬ್ಯಾರೆಕಡೆ ನಮ್ಮಗೆ ಭಾರಿ ಸೈನಿಕ್ರ್ ಅಂದ್ರ್ ಭಾರಿ ಗೌರವ್ ಕೋಡ್ತಾರ್.
ಈ ಕಾರ್ಯಕ್ರಮದಾಗ ಭಾಗವಹಿಸಿದ್ದು ಭಾರಿ ಖುಷಿ ತಂದದ್ ನಮ್ಗ್, ಸರ್ಕಾರದವ್ರು ನಮ್ಗ್ ಗುರುತಿಸಲಿಲ್ಲ, ಆದ್ರ್ ಈ ಹಿಂದೂ ಆಧ್ಯಾತ್ಮಿಕ ಸವಾ ಮೇಳ್‌ದವ್ರು ನಮಗೆ ಕರೆಸಿ ಸನ್ಮಾನ್ ಮಾಡಿರೋದು ಬಾಳ್ ಖುಷಿ ಆಗೆತಿ.

ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವುದೇ ನಮ್ಮ ಗುರಿ :  ದಿನೇಶ್ ಕಾಮತ್ 
” ಸೇವಾ ಮೇಳವು ಅತ್ಯಂತ ಯಶಸ್ವಿಯಾಗಿದೆ. ನಮ್ಮ ಸನಾತನ ಧರ್ಮವು ಅನೇಕ ವರ್ಷಗಳಿಂದ ಜ್ಞಾನ, ಯೋಗ, ವಿಜ್ಞಾನ, ಇತಿಹಾಸ, ಆಧ್ಯಾತ್ಮ, ಪ್ರಕೃತಿ ಪೂಜೆ ಹೀಗೆ ಎಲ್ಲ ರೀತಿಯ ಜ್ಞಾನವನ್ನು ಇಡೀ ವಿಶ್ವಕ್ಕೆ ಪರಿಚಯಿಸಿಕೊಟ್ಟಿರುವ ದೇಶ ನಮ್ಮ ಭಾರತ. ಭಾರತದ ಪ್ರಧಾನಿ ಇಂದು ಇಡೀ ವಿಶ್ವಕ್ಕೆ ವಿಶ್ವಯೋಗ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಅಲ್ಲದೇ ಇಂದು ಪ್ರತಿಯೊಂದು ದೇಶವು ಭಾರತದತ್ತ ಮುಖಮಾಡುತ್ತಿವೆ. ಹಿಂದೂ ಧರ್ಮದ ಸಾವಿರಾರು ಸಂಘ ಸಂಸ್ಥೆಗಳ, ಸಂಘಟನೆಗಳ ಸೇವೆಯನ್ನು ನಾವು ಇಂತಹ ಮೇಳಗಳ ಆಯೋಜನೆಗಳ ಮೂಲಕ ನಾವು ತೋರಿಸಬೇಕಾಗಿದೆ” ಎಂದು ಸಂಸ್ಕೃತ ಭಾರತೀ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ದಿನೇಶ್ ಕಾಮತ್ ಕರೆ ನೀಡಿದರು.
ಅವರು ಇಂದು ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿರುವ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದ ಕೊನೆಯ ದಿನವಾದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
‘ಇಂದು ಮಕ್ಕಳಿಗೆ ನಾವು ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಬೇಕಾಗಿದೆ, ತಂದೆ-ತಾಯಿಗಳಿಗೆ ಗೌರವ ಕೊಡುವುದನ್ನು ನಾವು ಕಲಿಸಬೇಕಾಗಿದೆ. ವಿದ್ಯಾದ್ಯಾನ, ಅನ್ನದಾನ ಇದು ನಮ್ಮ ಧರ್ಮದ ಪ್ರತಿಯೊಬ್ಬರಲ್ಲೂ ಮನೋಭಾವನೆ ಇದೆ. ಪ್ರತಿಯೊಬ್ಬರು ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು, ಕಷ್ಟದಲ್ಲಿದ್ದವರಿಗೆ ನೆರವಾಗಬೇಕೆಂದು ಹೇಳಿದರು. ಇಂದಿನ ಶಾಲೆಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಪರಿವರ್ತನೆಯಾಗಬೇಕು. ಇಂದು ಪಾಶ್ಚಾತ್ಯಕರಣದಿಂದ ನಾವು ನಮ್ಮತನವನ್ನು ನಾವು ಕಡೆಗಣಿಸುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ನಾವು ನಮ್ಮತನವನ್ನು ಕಾಣಬೇಕಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವುದೇ ನಮ್ಮ ಗುರಿಯಾಗಬೇಕೆಂದು ಹೇಳಿದರು. ಈ ಸೇವಾ ಮೇಳವು ಇನ್ನು ಹೆಚ್ಚು ಜನಕ್ಕೆ ಪ್ರೇರಣೆಯನ್ನು ನೀಡುತ್ತದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ತುಮಕೂರಿನ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿಯವರು ಮಾತನಾಡಿ ಈ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳವು ಅತ್ಯಂತ ಯಶಸ್ವಿಯಾಗಿದೆ. ಮೇಳದ ಪ್ರಮುಖ ವಿಶೇಷ ವಟವೃಕ್ಷವು ಅತ್ಯಂತ ಅರ್ಥಪೂರ್ಣವಾದದ್ದು, ಆ ವಟವು ನಮ್ಮ ಹಿಂದೂ ಧರ್ಮದ ಸಂಕೇತವಾಗಿದೆ, ನಮ್ಮ ಧರ್ಮದ ಬೇರುರಿವೆ, ಅದರ ಕಾಂಡಗಳು, ಎಲೆಗಳು ಇಡೀ ವಿಶ್ವಕ್ಕೆ ಪಸರಿಸಿವೆ ಎಂದು ಬಣ್ಣಿಸಿದರು.
ಇಂದು ಒಂದೊಂದು ದೇಶವು ಒಂದೊಂದು ಕಾರ್ಯಕ್ಕೆ ಹೆಸರುವಾಸಿಯಾಗಿದೆ. ಅಮೇರಿಕಾ ದೇಶವು ವಾಣಿಜ್ಯಕ್ಕೆ, ಇಂಗ್ಲೇಂಡ್ ರಾಜಕೀಯಕ್ಕೆ, ಜಪಾನ್ ತಾಂತ್ರಿಕತೆಗೆ, ಜರ್ಮನ್ ನೈಪುಣ್ಯಕ್ಕೆ ಆದರೆ ಭಾರತ ದೇಶವು ಆಧ್ಯಾತ್ಮಕ್ಕೆ ಹೆಸರುವಾಸಿಯಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು. ಇಂದು ಇಡೀ ವಿಶ್ವವೇ ಭಾರತದತ್ತ ಎದುರು ನೋಡುತ್ತಿದ್ದಾರೆ. ಭಾರತದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ ಎಂದರು. ಭಾರತೀಯರು ಎಲ್ಲರಿಗೂ ಸಮಾನವಾದ ಅವಕಾಶ, ಎಲ್ಲರಿಗೂ ಸೇವೆಯನ್ನು ಮಾಡುತ್ತಿದ್ದಾರೆ ಅಲ್ಲದೇ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಸಂಸ್ಕೃತಿ ಅದುವೇ ನಮ್ಮ ಭಾರತೀಯ ಸಂಸ್ಕ್ರತಿಯೆಂದು ಹೇಳಿದರು. ಈ ಹಿಂದು ಮೇಳದಿಂದ ನಮ್ಮ ಸಂಘಟನೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಜಾಗೃತಿ ಮೂಡಿಸಲು ಈ ಮೇಳ ಅತ್ಯಂತ ಅವಶ್ಯಕ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ರಾಮಕೃಷ್ಣಮಠದ ಶ್ರೀ ಮಂಗಳನಾಥಾನಂದ ಸ್ವಾಮೀಜಿ ಮಾತನಾಡಿ ಇಂದು ಸಂಘ-ಸಂಸ್ಥೆಗಳು ಅವಶ್ಯಕವಾಗಿದೆ, ನಮ್ಮತನವನ್ನು ಸಾರಲು ಹಿಂದೂ ಧರ್ಮದ ಸಂಘ-ಸಂಸ್ಥೆಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸೇವೆಯೆಂಬುದು ನಾವೆಲ್ಲರೂ ಶ್ರಮವಹಿಸಿ, ಶ್ರೇಷ್ಠ ಸಾಧನೆಯನ್ನು ಮಾಡಬೇಕಾಗಿದೆ. ಅಲ್ಲದೇ ಸಮಾಜದ ತುಡಿತವನ್ನು ಅರಿತು ನಾವು ಸೇವೆ ಮಾಡಬೇಕಾಗಿದೆ ಎಂದರು. ಹಿಂದೆ ಹಲವಾರು ಸಾಧು-ಸಂತರು ಅನೇಕ ಸೇವೆಗಳನ್ನು ಮಾಡಿದ್ದಾರೆ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಳಗಾವಿಯ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ನಮ್ಮ ದೇಶವು ಅನಾದಿ ಕಾಲದಿಂದಲೂ ನಮ್ಮ ಇತಿಹಾಸಕಾರರು, ಸಾಧುಸಂತರು ಅನೇಕ ಜ್ಞಾನ, ವಿಜ್ಞಾನ, ಆರೋಗ್ಯ, ಆಯುರ್ವೇದ, ವನಸ್ಪತಿ, ಯೋಗ, ಶಿಕ್ಷಣ, ರಾಜನೀತಿ, ಸಾಮಾಜಿಕ ನ್ಯಾಯ, ಸಾಮಾಜಿಕ ಕ್ಷೇತ್ರಕ್ಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಧರ್ಮದ ಸೇವಾ ಚಟುವಟಿಕೆಗಳನ್ನು ಇನ್ನು ಹೆಚ್ಚು ಮಾಡಬೇಕಾಗಿದೆ ಎಂದರು.
ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇಸ್ರೋ ವಿಜ್ಞಾನಿಯಾದ ಮಲೈಸ್ವಾಮಿ ಅಣ್ಣಾದೊರೈ ಮಾತನಾಡಿ ಆಧ್ಯಾತ್ಮವು ಮತ್ತು ವಿಜ್ಞಾನ ಕ್ಷೇತ್ರವು ಒಂದೇ ಆಗಿದೆ. ಈ ಎರಡು ಕ್ಷೇತ್ರಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ ಎಂದರು.
ಕಾರ್ಯಕ್ರಮವು ಒಟ್ಟು ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದವು. ರಾಜ್ಯದಿಂದ ಸುಮಾರು 200ಕ್ಕಿಂತ ಹೆಚ್ಚು ವಿವಿಧ ಸಂಘ-ಸಂಸ್ಥೆಗಳ ಮಳಿಗೆಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾತೃವಂದನಾ, ಗೋವಂದನಾ, ಪ್ರಕೃತಿ ವಂದನಾ, ಗುರುವಂದನಾ, ಪರಮವೀರ ವಂದನಾ ಕಾರ್ಯಕ್ರಮ ನಡೆಯಿತು. ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಆಟೋಟ, ಚಿತ್ರಕಲೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೇಳದಲ್ಲಿ ಗೋಉತ್ಪನ್ನ, ಸ್ವದೇಶಿ ವಸ್ತುಗಳು, ಪುಸ್ತಕ ಮಳಿಗೆಗಳು, ಮಠಮಾನ್ಯಗಳು, ಶಿಕ್ಷಣ, ಆರೋಗ್ಯ, ವಿಜ್ಞಾನ ಹೀಗೆ ಎಲ್ಲ ಕ್ಷೇತ್ರದ ಮಳಿಗೆಳು ಆಕರ್ಷಕವಾಗಿತ್ತು. ಅಲ್ಲದೇ ಅನಾಥಾಲಯ, ವೃದ್ದಾಶ್ರಮ ಹೀಗೆ ಸೇವಾ ಚಟುವಟಿಕೆ ನಡೆಸುವ ನೂರಾರು ಮಳಿಗೆಗಳು ಆಕರ್ಷಕವಾಗಿತ್ತು. ಒಟ್ಟಿನಲ್ಲಿ ೫ ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ಇಂದು ಕೊನೆಗೊಂಡಿತು.