ಬೆಂಗಳೂರು ಸೆ. 16: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಕೆ.ಎಸ್. ನಾಗಭೂಷಣ ಭಾಗವತ್ (8೦) ಅವರು ಇಂದು ಬುಧವಾರ ಸೆ. 16ರಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಸೆ. 15ರಂದು ಮಂಗಳವಾರ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಗರದ ಸೌತ್ ಎಂಡ್ ವೃತ್ತದ ಬಳಿ ಅಪಘಾತ ಸಂಭವಿಸಿ, ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

KS Nagabhushan Bhagwat

KS Nagabhushan Bhagwat

ಕೇಶವಕೃಪಾದಲ್ಲಿ ಸೆ. 16ರ ಬೆಳಗ್ಗೆ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಅನಂತರ ಪಾರ್ಥಿವ ಶರೀರವನ್ನು ನಾಗಭೂಷಣ ಅವರ ಸ್ವಂತ ಊರಾಗಿರುವ ಶಿವಮೊಗ್ಗಕ್ಕೆ ಕೊಂಡೊಯ್ಯಲಾಗಿದೆ. ಇಂದು ಸಂಜೆ ಅಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಕೆ.ಎಸ್. ನಾಗಭೂಷಣ ಕಳೆದ 60 ವರ್ಷಗಳಿಂದ ಸಂಘದ ಪ್ರಚಾರಕರಾಗಿ ಸುದೀರ್ಘ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

1936ರ ಮಾ. ೨೫ರಂದು ಶಿವಮೊಗ್ಗೆಯಲ್ಲಿ ಜನಿಸಿದ ನಾಗಭೂಷಣ ತಮ್ಮ ಬಿ.ಎಸ್ಸಿ ಪದವಿಯ ಬಳಿಕ 1955ರಿಂದ ಸಂಘದ ಪ್ರಚಾರಕರಾಗಿ ಸಂಪೂರ್ಣ ಬದುಕನ್ನು ಸಮಾಜಸೇವೆಗೆ ಮೀಸಲಾಗಿಟ್ಟಿದ್ದರು. ಆರಂಭದಲ್ಲಿ ಶ್ರೀರಂಗಪಟ್ಟಣ ನಗರ ವಿಸ್ತಾರಕರಾಗಿ ಕೆಲಸ ಮಾಡಿದ ಅವರು, ಅನಂತರ ಮಂಡ್ಯ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲಾ ಪ್ರಚಾರಕರಾಗಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಆಮೇಲೆ 6 ವರ್ಷಗಳ ಕಾಲ ಕೇಶವಕೃಪಾ ಪ್ರಾಂತ ಕಾರ್ಯಾಲಯ ಪ್ರಮುಖ್ ಆಗಿದ್ದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅವರು ಮೀಸಾ ಬಂಧಿತರಾಗಿ ಬೆಂಗಳೂರು ಸೆರೆಮನೆಯಲ್ಲಿದ್ದರು.

ನಾಗಭೂಷಣ ಹಿಂದು ಸೇವಾ ಪ್ರತಿಷ್ಠಾನದ ಸಹ ನಿರ್ದೇಶಕರಾಗಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ವನವಾಸಿ ಕಲ್ಯಾಣ ಆಶ್ರಮ, ವಿಶ್ವ ವಿಭಾಗ, ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ ಮುಂತಾದ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಸರಳ ಸಜ್ಜನಿಕೆಗೆ ಹೆಸರಾಗಿದ್ದ ನಾಗಭೂಷಣ ಅವರು ಕರ್ನಾಟಕ ಹಾಗೂ ಹೊರದೇಶಗಳಲ್ಲಿನ ಸಾವಿರಾರು ಸ್ವಯಂಸೇವಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ, ಸಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ವಿ. ಭಾಗಯ್ಯ, ಸಂಘದ ಪ್ರಮುಖರಾದ ಡಾ. ಮನಮೋಹನ ವೈದ್ಯ, ಮಂಗೇಶ್ ಭೆಂಡೆ, ಜೆ. ನಂದಕುಮಾರ್, ಮುಕುಂದ, ದಿನೇಶ್ ಕಾಮತ್, ಕೃ ಸೂರ್ಯನಾರಾಯಣ ರಾವ್  ಮೊದಲಾದವರು ನಾಗಭೂಷಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.