ರಾಷ್ಟೀಯ ಸ್ವಯಂಸೇವಕ ಸಂಘ, ಕರ್ನಾಟಕ
#74, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು 560004

ಮೇ 7 : ಆರೆಸ್ಸೆಸ್ ಸಂಘ ಶಿಕ್ಷಾವರ್ಗಗಳ ಸಮಾರೋಪ

ಬೆಂಗಳೂರು ಮೇ 4, 2016 : ರಾಷ್ಟೀಯ ಸ್ವಯಂಸೇವಕ ಸಂಘದ ವಾರ್ಷಿಕ ಕಾರ್ಯಕರ್ತ ಪ್ರಶಿಕ್ಷಣ ಶಿಬಿರ ಸಂಘ ಶಿಕ್ಷಾವರ್ಗ’ಗಳ ಸಮಾರೋಪ ಸಮಾರಂಭವು ಮೇ 7ರ ಶನಿವಾರದಂದು ನಡೆಯಲಿದೆ. ಏಪ್ರಿಲ್ 17ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣ ವರ್ಗದಲ್ಲಿ ರಾಜ್ಯದ ಒಟ್ಟು ಆಯ್ದ 1188 ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.

RSS-Sangh-Shiksha-Varg-Samarop-May-9-2015-3

ಕರ್ನಾಟಕ ದಕ್ಷಿಣ ಪ್ರಾಂತದ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗವು ಮಂಗಳೂರಿನ ತಲಪ್ಪಾಡಿಯ ಕಿನ್ಯಾದ ಶಾರದಾ ವಿದ್ಯಾನಿಕೇತನದಲ್ಲಿ ನಡೆಯುತ್ತಿದ್ದು 769 ಆಯ್ದ ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮೇ 7ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಭಾಗ ಕಾರ್ಯವಾಹ ಶ್ರೀ ಪಿ.ಎಸ್. ಪ್ರಕಾಶ್ ಮುಖ್ಯ ಭಾಷಣ ಮಾಡಲಿದ್ದಾರೆ. ಖ್ಯಾತ ವೈದ್ಯ ಡಾ. ಆನಂದ್ ವೇಣುಗೋಪಾಲ್ ಅಧಕ್ಷತೆ ವಹಿಸುವರು.

ಕರ್ನಾಟಕ ಉತ್ತರ ಪ್ರಾಂತದ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ ಹಾಗೂ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ದ್ವಿತೀಯ ವರ್ಷದ ಸಂಘ ಶಿಕ್ಷಾವರ್ಗವು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯುತಿದ್ದು ಒಟ್ಟು 419 ಕಾರ್ಯಕರ್ತರು ಸಂಘದ ಪ್ರಶಿಕ್ಷಣ ಪಡೆಯುತ್ತಿದ್ದಾರೆ. ಮೇ 7ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಶ್ರೀ ದತ್ತಾತ್ರೇಯ ವಜ್ರಳ್ಳಿ ಮುಖ್ಯ ಭಾಷಣ ಮಾಡಲಿದ್ದಾರೆ.. ಕೃಷಿ ವಿಜ್ಞಾನಿ ಡಾII ವಿ.ಎಸ್ ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಆರೆಸ್ಸೆಸ್‌ನ ಈ ‘ಸಂಘ ಶಿಕ್ಷಾವರ್ಗ’ ಪ್ರಶಿಕ್ಷಣ ಶಿಬಿರಗಳು ನಡೆಯುತ್ತವೆ. ಶಾರೀರಿಕ- ಬೌದ್ಧಿಕ ಪ್ರಶಿಕ್ಷಣಗಳ ಜೊತೆಗೆ ರಾಷ್ಟೀಯ ವಿಚಾರಗಳ ಕುರಿತ ಚರ್ಚೆ – ಪ್ರಶ್ನೋತ್ತರಗಳು, ಪರಿಸರ ಸಂರಕ್ಷಣೆ, ಸೇವೆ, ಸಾಮರಸ್ಯ, ಅನುಶಾಸನ ಇತ್ಯಾದಿ ವಿಷಯಗಳ ಕುರಿತು ತಜ್ಞರಿಂದ ಪ್ರಶಿಕ್ಷಣ ನೀಡಲಾಗುತ್ತಿದೆ. ಆರೆಸ್ಸೆಸ್ ಶಾಖೆಗಳ ಮೂಲಕ ಆರಿಸಲ್ಪಟ್ಟ ಆಯ್ದ ಕಾರ್ಯಕರ್ತರಿಗೆ ಮಾತ್ರ ಈ ಪ್ರಶಿಕ್ಷಣ ನೀಡಲಾಗುತ್ತಿದೆ.

ಆರೆಸ್ಸೆಸ್ ಸರಕಾರ್ಯವಾಹ ಸುರೇಶ ಭೈಯ್ಯಾಜಿ ಜೋಷಿ, ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್‌ನ ಅಖಿಲ ಭಾರತೀಯ ಪದಾಧಿಕಾರಿಗಳಾದ ಮಂಗೇಶ್ ಭೇಂಡೆ, ಮುಕುಂದ ಸಿ.ಆರ್, ಸುರೇಶ್ ಚಂದ್ರ ಮುಂತಾದವರು ಈ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.

ದಕ್ಷಿಣ ಭಾರತದ ಐದು ರಾಜ್ಯಗಳ ವಿಶೇಷ ದ್ವಿತೀಯ ವರ್ಷ ಸಂಘ ಶಿಕ್ಷಾವರ್ಗವು ಆಂಧ್ರದ ಅನಂತಪುರ ಜಿಲ್ಲೆಯ ರಾಚನಪಲ್ಲಿಯ ಸೈಂಟ್ ಜೋಸೆಫ್ ವಿದ್ಯಾಲಯದಲ್ಲಿ ನಡೆಯುತ್ತಿದ್ದು ಕರ್ನಾಟಕದ 35 ಮಂದಿ ಸೇರಿದಂತೆ ಒಟ್ಟು 158 ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಏಪ್ರಿಲ್ 24ರಂದು ಆರಂಭಗೊಂಡ ಈ ವಿಶೇಷ ಶಿಬಿರವು ಮೇ 14ಕ್ಕೆ ಸಮಾರೋಪಗೊಳ್ಳಲಿದೆ. ಮೇ 7, 8, 9 ರಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಈ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.

ಅಖಿಲ ಭಾರತ ಮಟ್ಟದ ತೃತೀಯ ವರ್ಷದ ಸಂಘ ಶಿಕ್ಷಾವರ್ಗವು ಮಹಾರಾಷ್ಟ್ರದ ನಾಗಪುರದ ರೇಶಿಂಭಾಗ್ ನಲ್ಲಿ ಮೇ 15 ರಿಂದ ಜೂನ್ 10ರ ವರೆಗೆ ನಡೆಯಲಿದೆ.