ಆರೆಸ್ಸೆಸ್‌ನ ಹಿರಿಯ ಪ್ರಚಾರಕರಾದ ಸೂರ್ಯನಾರಾಯಣ ರಾವ್ ನಿಧನ

ಹಿರಿಯ ಪ್ರಚಾರಕರಾದ ಸೂರ್ಯನಾರಾಯಣ ರಾವ್ ನಿಧನ
ಬೆಂಗಳೂರು, ನ. 19, 2016: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣರಾವ್ (93) ನಿನ್ನೆ ಶುಕ್ರವಾರ ರಾತ್ರಿ 11.11ಕ್ಕೆ ನಿಧನರಾಗಿದ್ದಾರೆ. ಅಲ್ಪಕಾಲೀನ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದ ಅವರು ನಗರದ ಖಾಸಗೀ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 70 ವರ್ಷದಿಂದ ಸಂಘದ ಪ್ರಚಾರಕರಾಗಿದ್ದ ಅವರು ಸುದೀರ್ಘ ವರ್ಷಗಳಿಂದ ಲಕ್ಷಾಂತರ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು.

1924
1924 ಏಪ್ರಿಲ್ 20ರಂದು ಬೆಂಗಳೂರಿನಲ್ಲಿ ಕೃಷ್ಣಪ್ಪ ಹಾಗೂ ಸುಂದರಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಕೃ. ಸೂರ್ಯನಾರಾಯಣರಾಯರು ಗಣಿತಶಾಸ್ತ್ರದಲ್ಲಿ ಪದವಿಧರರು. 1942ರಲ್ಲಿ ವಿದ್ಯಾರ್ಥಿದೆಸೆಯಲ್ಲೇ ಅದಾಗಲೇ ಕರ್ನಾಟಕಕ್ಕೆ ಕಾಲಿಟ್ಟಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾದರು. 1946 ರಲ್ಲಿ ಸಂಘದ ಪ್ರಚಾರಕರಾಗಿ ಜೀವನಪೂರ್ತಿ ಸಮಾಜಸೇವೆ ಮಾಡುವ ನಿರ್ಧಾರ ಕೈಗೊಂಡರು. ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದರು. ಅವರು ಕರ್ನಾಟಕದಿಂದ ಹೊರಟ ಆರೆಸ್ಸೆಸ್‌ನ ಮೊದಲ ತಂಡದ ಪ್ರಚಾರಕರಲ್ಲೊಬ್ಬರು.
1948ರ ಗಾಂಧಿ ಹತ್ಯೆ ಆರೋಪದ ನಿಷೇಧವನ್ನು ಪ್ರತಿಭಟಿಸಿ ಬೆಂಗಳೂರಿನಲ್ಲಿ ಜೈಲುವಾಸವನ್ನು ಅನುಭವಿಸಿದ್ದ ಕೃ. ಸೂರ್ಯನಾರಾಯಣ ರಾವ್ ಅವರು, 1975-77ರ ತುರ್ತು ಪರಿಸ್ಥಿತಿಯ ನಿಷೇಧವನ್ನು ಪ್ರತಿಭಟಿಸಿ ತಮಿಳುನಾಡಿನಾದ್ಯಂತ ಯಶಸ್ವೀ ಹೋರಾಟದ ನೇತೃತ್ವ ವಹಿಸಿದ್ದರು. 1948ರಲ್ಲಿ ಬೆಂಗಳೂರಿನ ಯಶವಂತಪುರಂನಲ್ಲಿ ನಡೆದ ಕರ್ನಾಟಕದ ಮೊದಲ ತರುಣ ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

ಸ್ವಾಮೀ ವಿವೇಕಾನಂದರ ಆಳವಾದ ಅಧ್ಯಯನವಿದ್ದ ಸೂರ್ಯನಾರಾಯಣ ರಾವ್ ತಮ್ಮ ಪ್ರಖರ ವಿಚಾರಮಂಡನೆಯಿಂದ ಸಾವಿರಾರು ಯುವಕರನ್ನು ಸಮಾಜಕಾರ್ಯಕ್ಕೆ ಪ್ರೇರೇಪಿಸಿದ್ದರು. ವಿವೇಕಾನಂದರ ಜೀವನ-ಸಂದೇಶದ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೃ ಸೂರ್ಯನಾರಾಯಣರಾಯರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಆರೆಸ್ಸೆಸ್ಸಿನ 2ನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೋಳ್ವಾಳ್ಕರ್‌ರವರ ಜೊತೆ ಸುದೀರ್ಘವಾಗಿ ಕಾರ್ಯನಿರ್ವಹಿಸಿದ್ದರು. 1969ರಲ್ಲಿ ಉಡುಪಿಯಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ನಡೆದ ರಾಷ್ಟ್ರಮಟ್ಟದ ಧಾರ್ಮಿಕ ನಾಯಕರ ಸಭೆಯ ಯಶಸ್ಸಿಗಾಗಿ ಸೂರ್ಯನಾರಾಯಣ ರಾಯರು ಶ್ರಮಿಸಿದ್ದರು. ಕರ್ನಾಟಕದ ಮೊದಲ ದಲಿತ ಐಎಎಸ್ ಅಧಿಕಾರಿ ಭರಣಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಈ ಐತಿಹಾಸಿಕ ಸಭೆಯಲ್ಲಿ ಹಿಂದುಗಳೆಲ್ಲ ಸಹೋದರರು (ಹಿಂದವಾಃ ಸೋದರಾ ಸರ್ವೇ’) ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಗೆ ಆಸ್ಪದವಿಲ್ಲ ಎಂಬ ನಿರ್ಣಯವನ್ನು ಸ್ವೀಕರಿಸಲಾಯಿತು.
ಸಿದ್ದಗಂಗಾ ಸ್ವಾಮೀಜಿಗಳು, ಪೇಜಾವರ ಮಠಾಧೀಶರು, ರಾಮಕೃಷ್ಣಾಶ್ರಮದ ಹರ್ಷಾನಂದಜೀ ಸೇರಿದಂತೆ ಅನೇಕ ಹಿರಿಯ ಧಾರ್ಮಿಕ ನಾಯಕರ ನಿಕಟವರ್ತಿಗಳಾಗಿದ್ದ ಅವರು ಅಸ್ಪೃಶ್ಯತೆಯ ನಿವಾರಣೆಗೆ ಶ್ರಮಿಸಿದ್ದರು.

1970ರ ದಶಕದಲ್ಲಿ ತಮಿಳುನಾಡಿಗೆ ನಿಯೋಜಿಸಲ್ಪಟ್ಟ ಸೂರ್ಯನಾರಾಯಣ ರಾಯರು ಅಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದರು. 1972ರಿಂದ 1984ರ ವರೆಗೆ ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ ಅಲ್ಲಿ ಸಂಘ ಕಾರ್ಯದ ನೇತೃತ್ವ ವಹಿಸಿದರು. 1984ರಲ್ಲಿ ತಮಿಳುನಾಡು ಕೇರಳಗಳನ್ನೊಳಗೊಂಡ ದಕ್ಷಿಣ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸಿದರು. 1990ರಲ್ಲಿ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ದೇಶಾದ್ಯಂತ ಪ್ರವಾಸ ಕೈಗೊಂಡರು.

ಇದೇ ಸಂದರ್ಭದಲ್ಲಿ ಅಮೆರಿಕ, ಟ್ರೆನಿಡಾಡ್, ಕೆನಡಾ, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ನಾರ್ವೆ, ಕಿನ್ಯಾ, ಮಲೇಷಿಯಾ, ಸಿಂಗಾಪುರ ಮತ್ತು ನೇಪಾಳ ದೇಶಗಳಲ್ಲಿ ಸಂಘಕಾರ್ಯ ನಿಮಿತ್ತ ಪ್ರವಾಸ ಮಾಡಿದರು. ನಂತರದ ವರ್ಷಗಳಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣಾಶ್ರಮ, ಆರೋಗ್ಯ ಭಾರತಿ, ಸೇವಾ ಭಾರತಿ ಮುಂತಾದ ಸಂಘಪರಿವಾರ ಸಂಘಟನೆಗಳಿಗೆ ಮಾರ್ಗದರ್ಶನವನ್ನೂ ಮಾಡಿದ್ದಾರೆ.

ಬಿಡುವಿಲ್ಲದ ಓದು, ಗಹನ ಅಧ್ಯಯನ, ಹಿರಿಕಿರಿಯ ಕಾರ್ಯಕರ್ತರೊಂದಿಗೆ ಆತ್ಮೀಯ ಸ್ನೇಹಭಾವದಿಂದ ಸಾವಿರಾರು ಕಾರ್ಯಕರ್ತರ ಸ್ಫೂರ್ತಿಯ ಕೇಂದ್ರವಾಗಿದ್ದರು. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಸಂಘಟನೆಯ ಹಂದರವನ್ನು ಬಲ್ಲ ಹಿರಿಯ ಪ್ರಚಾರಕರಾಗಿದ್ದ ಸೂರ್ಯನಾರಾಯಣರ ನಿಧನಕ್ಕೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್. ಸರಕಾರ್ಯವಾಹ ಸುರೇಶ್ ಭಯ್ಯಾಜೀ ಜೋಶಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಸುರೇಶ್ ಸೋನಿ, ಡಾ. ಕೃಷ್ಣ ಗೋಪಾಲ್, ವಿ. ಭಾಗಯ್ಯ, ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ಕೇಂದ್ರ ಸಚಿವ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸ್ವಾಮೀಜಿಗಳು, ಹಿರಿಯ ಸ್ವಯಂಸೇವಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸೂರುಜಿಯವರ ಪುಸ್ತಕವೊಂದಕ್ಕೆ ಮುನ್ನುಡಿ ಬರೆದಿರುವ ಖ್ಯಾತ ಅರ್ಥಶಾಸ್ತ್ರಜ್ಞ ಎಸ್ ಗುರುಮೂರ್ತಿಯವರು, “ಸೂರುಜಿ ನನ್ನ ಸಂಘದ ಜೊತೆಗಿನ ಸಂಪರ್ಕದ ಮೊದಲ ದಿನಗಳಿಂದಲೂ ನನ್ನನ್ನು ಪಾಲಿಸುತ್ತಾ ಬಂದವರು. ನಾನು ಮಾಡಿದ ತಪ್ಪುಗಳನ್ನು ಕ್ಷಮಿಸುತ್ತಾ ಕೇವಲ ನನ್ನ ಧನಾತ್ಮಕ ಕೊಡುಗೆಯನ್ನು ಶ್ಲಾಘಿಸುತ್ತಿದ್ದರು. ಈ ಗುಣಗಳೇ ನನ್ನನ್ನು ಇನ್ನಷ್ಟು ಉತ್ತಮನಾಗಲಿಕ್ಕೆ ಸಹಾಯ ಮಾಡಿದ್ದುದು.ನನ್ನನ್ನು ಸದಾಕಾಲ ಮಾರ್ಗದರ್ಶನ ಮಾಡುತ್ತಿದ್ದವರಲ್ಲಿ ಸೂರುಜಿ ಪ್ರಮುಖರು. ” ಎಂದು ಉಲ್ಲೇಖಿಸಿದ್ದಾರೆ.

ಸಂಘದ ಹಿರಿಯ ಸಂಘದ ಹಿರಿಯರಾದ ಕೃ ನರಹರಿಯವರು ಕೃ ಸೂರ್ಯನಾರಾಯಣರಾಯರ ತಮ್ಮ.  ಹಾಗೂ ರಾಷ್ಟ್ರ‍ೀಯ ಸೇವಿಕಾ ಸಮಿತಿಯ  ಹಿರಿಯ ಪದಾಧಿಕಾರಿಯಾದ ಕೃ ರುಕ್ಮಿಣಿಯವರು ಇವರ ತಂಗಿ. (ಕೃ ಅನಂತ, ಕೃ ಗೋಪಿನಾಥ್, ಕೃ ಶಿವು ಇವರ ಸಹೋದರರು ಈಗಾಗಲೇ ಅಗಲಿದ್ದಾರೆ.)

ಬೆಳಗ್ಗೆ 9.30ರಿಂದ ಪಾರ್ಥೀವ ಶರೀರವನ್ನು ಆರೆಸ್ಸೆಸ್ ಕಚೇರಿ ಕೇಶವಕೃಪಾದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

‘ಪೋಷಕರೊಬ್ಬರನ್ನು ಕಳೆದುಕೊಂಡಂತಾಗಿದೆ’: ಸರಸಂಘಚಾಲಕರ ಶೋಕಸಂದೇಶ
ಶ್ರೀ ಕೃ. ಸೂರ್ಯನಾರಾಯಣಜೀಯವರ ದೇಹಾವಸಾನದ ಆಘಾತವು ನಮ್ಮೆಲ್ಲ ಸಂಘ ಕಾರ್ಯಕರ್ತರಿಗೆ ಹಿರಿಯ, ಅನುಭವೀ, ಪಿತೃತುಲ್ಯ ಹಿರಿಯರೊಬ್ಬರ ವಾತ್ಸಲ್ಯದ ನೆರಳೊಂದು ಪಕ್ಕಕ್ಕೆ ಸರಿದ ಅನುಭವ ತಂದಿದೆ. ಕೆಲವು ದಿನಗಳ ಮುಂಚೆ ಸ್ವರ್ಗೀಯ ಕೃ. ಸೂರ್ಯನಾರಾಯಣ ರಾಯರ ಕುಟುಂಬದಲ್ಲಿ ಅವರ ಕಿರಿಯ ಸಹೋದರ ಶ್ರೀ ಗೋಪಿನಾಥ್ ಅವರ ನಿಧನವಾಯಿತು. ಇದಾದ ತಕ್ಷಣ ಈ ಎರಡನೇ ಆಘಾತವು ಅವರ ಪರಿವಾರವನ್ನು ಮತ್ತು ನಮ್ಮೆಲ್ಲರನ್ನೂ ವ್ಯಾಕುಲಗೊಳಿಸಿದೆ; ಆದರೂ ಪ್ರಕೃತಿಯ ನಿಯಮಗಳಿಗೆ ತಲೆಬಾಗಿ ಇಂತಹ ಪರಿಸ್ಥಿತಿಯನ್ನು ಜೀರ್ಣಿಸಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಸಂಘಕಾರ್ಯದ ಪ್ರಾರಂಭದಿಂದಲೂ ಶ್ರೀ ಕೃ. ಸೂರ್ಯನಾರಾಯಣ ರಾಯರು ಜತೆಗೂಡಿದ್ದರು. ಮೊದಲ ಪ್ರತಿಬಂಧದ ವಿರುದ್ಧ ಹೋರಾಟದಲ್ಲಿ ಸಹಭಾಗಿಯಾಗಿದ್ದವರು. ನಂತರದ ದಿನಗಳಲ್ಲಿ ತಮಿಳುನಾಡು ಅವರ ಕಾರ್ಯಕ್ಷೇತ್ರವಾಯಿತು. ತಮಿಳುನಾಡಿನ ಸಂಘಕಾರ್ಯದ ಇಂದಿನ ಸ್ವರೂಪವನ್ನು ಕಟ್ಟಿಬೆಳೆಸುವಲ್ಲಿ ಅವರದು ಮಹತ್ತ್ವಪೂರ್ಣ ಪಾತ್ರವಿದೆ.

ಸಂಘದ ಸೇವಾವಿಭಾಗದ ಪ್ರಾರಂಭ ಹಾಗೂ ಅದರ ಮೂಲರಚನೆಯು ಅಖಿಲ ಭಾರತೀಯ ಸೇವಾ ಪ್ರಮುಖರಾಗುವ ಮೂಲಕ ಅವರ ಕೈಯಿಂದಲೇ ಆಯಿತು. ಸ್ವಾಮಿ ವಿವೇಕಾನಂದರ ಸಾಹಿತ್ಯದ ಗಹನವಾದ ಹಾಗೂ ವಿಸ್ತೃತ ಅಧ್ಯಯನ ಅವರದಾಗಿತ್ತು. ಆತ್ಮೀಯ ಸ್ವಭಾವ, ಕಠೋರ ಪರಿಶ್ರಮ ಹಾಗೂ ಸಂಘ ಶರಣ ಜೀವನ ಅವರ ಆಚರಣೆಗಳಲ್ಲಿ ಎದ್ದುಕಾಣುತ್ತಿತ್ತು. ಅವರ ಅಗಲಿಕೆಯಿಂದಾಗಿ ನಾವು ಸಂಘಕಾರ್ಯಕರ್ತರು ಪೋಷಕರೊಬ್ಬರನ್ನು ಕಳೆದುಕೊಂಡಂತಾಗಿದೆ.

ಮಾನ್ಯ ಶ್ರೀ ಕೃ. ನರಹರಿ, ಶ್ರೀಮತಿ ರುಕ್ಮಿಣಕ್ಕನವರಂತಹವರಿಗೆ ನಾವು ಹೇಗೆ ಸಾಂತ್ವನ ಹೇಳಲು ಸಾಧ್ಯ? ನಮ್ಮೆಲ್ಲರ ಸ್ಥಿತಿಯೂ ಅವರಂತೆಯೇ ಆಗಿದೆ.
ಸಂಘದ ಕಾರ್ಯಕರ್ತ-ಪ್ರಚಾರಕ ಜೀವನದ ಪರಂಪರೆಯನ್ನು ಸೂರ್ಯನಾರಾಯಣರಾಯರು ತಮ್ಮ ಜೀವನ ಸಮಿಧೆಯಿಂದ ಹೇಗೆ ಸಮೃದ್ಧಗೊಳಿಸಿದರೋ, ಅದರ ಅಗ್ರೇಸರರಾಗಿದ್ದರೋ ಹಾಗೆಯೇ ನಮ್ಮ ಸಮರ್ಪಣೆಯಿಂದ ಇನ್ನೂ ಸಮೃದ್ಧಗೊಳಿಸುವ ಕರ್ತವ್ಯ ನಮ್ಮೆಲ್ಲರ ಮುಂದೆ ಇದೆ. ಇದನ್ನು ಪೂರ್ಣಗೊಳಿಸುವ ಶಕ್ತಿ ಮತ್ತು ಧೈರ್ಯವನ್ನು ಪರಮಾತ್ಮ ನಮಗೆಲ್ಲರಿಗೂ ನೀಡಲಿ. ತಮ್ಮ ಸ್ವಂತ ಪರಿಶ್ರಮ, ಅಖಂಡ ತಪಸ್ಸಿನಿಂದ ಸದ್ಗತಿ ಪಡೆದುಕೊಂಡಿರುವ ಸೂರ್ಯನಾರಾಯಣ ರಾಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಅವರ ಆತ್ಮೀಯ, ಪವಿತ್ರ ಪ್ರೇರಕ ಸ್ಮೃತಿಗಳಿಗೆ ನನ್ನ ವ್ಯಕ್ತಿಗತ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿನಮ್ರ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇನೆ.

ಮೋಹನ ಭಾಗವತ್
ಸರಸಂಘಚಾಲಕ
ರಾಷ್ಟ್ರೀಯ ಸ್ವಯಂಸೇವಕ ಸಂಘ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Photo Gallery: RSS Pracharak K Suryanarayan Rao

Sat Nov 19 , 2016
Senior RSS Pracharak K Suryanarayan Rao (93years), popularly known as ‘Suruji’, passed away in Bengaluru on Friday night at 11.11pm at Sagar Apollo Hospitals. He was suffering from old-age illness since last few weeks. He was serving as RSS Pracharak since last 70 years. email facebook twitter google+ WhatsApp