18 Dec 2017, Bengaluru: ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ, ಹಿರಿಯ ಪತ್ರಕರ್ತರಾದ ಡಾ. ಎಸ್. ಆರ್. ರಾಮಸ್ವಾಮಿಯವರು ರಚಿಸಿದ  “ದೀಪ್ತಶೃಂಗಗಳು” ಗ್ರಂಥದ ಲೋಕಾರ್ಪಣ ಕಾರ್ಯಕ್ರಮವು ದಿನಾಂಕ : 17.12.2017 ಪೂರ್ವಾಹ್ನ 10:30ಕ್ಕೆ  ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎನ್. ಕುಮಾರ್ ಅವರು ಈ ಗ್ರಂಥದ ಲೋಕಾರ್ಪಣೆ ಮಾಡಿದರು.

ಸಂಸ್ಕೃತ ವಿದ್ವಾಂಸರೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್-ನ ಕಾರ್ಯದರ್ಶಿಗಳೂ ಆದ ಡಾ. ಆರ್. ಎನ್. ನಾಗರಾಜ ಅವರು ಗ್ರಂಥದ  ಪರಿಚಯವನ್ನು ಮಾಡಿಕೊಟ್ಟರು. ಅವರು ದೀಪ್ತಶೃಂಗಗಳು ಪುಸ್ತಕದ ವಾಕ್ಯಗಳನ್ನು ಉದ್ಧರಿಸುತ್ತ,  ರಂಗನಾಥಶರ್ಮರು, ಸಾ.ಕೃ.ರಾಮಚಂದ್ರರಾಯರು, ಬೆಳಗೆರೆ ಕೃಷ್ಣಶಾಸ್ತ್ರಿಗಳು ಮುಂತಾದವರ ಜೊತೆಗಿನ ತಮ್ಮ ನೆನಪುಗಳನ್ನು ಉದಾಹರಣೆಯಾಗಿ ನೀಡಿದರು. ಶ್ರೀಯುತ ರಾಮಸ್ವಾಮಿಯವರ ಗ್ರಂಥದಲ್ಲಿ ಅವರು ಬಳಸಿರುವ ಪದಗಳು, ಅವುಗಳ ಔಚಿತ್ಯ ಮತ್ತು ವೈದುಷ್ಯಗಳನ್ನು ವಿಸ್ತಾರವಾಗಿ ಉದಾಹರಣೆಗಳ ಸಮೇತ ವಿಮರ್ಶಾತ್ಮಕವಾಗಿ ವಿವರಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರೂ ಗ್ರಂಥದ ಲೇಖಕರೂ ಆದ  ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ತರಾದ ಶ್ರೀ ನಾ. ದಿನೇಶ ಹೆಗಡೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ರಾಷ್ಟ್ರೋತ್ಥಾನ ಸಾಹಿತ್ಯದ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ವಿವಿಧ ಪ್ರಕಲ್ಪಗಳ ಸಂಕ್ಷೇಪ ಪರಿಚಯ ಮಾಡಿಕೊಟ್ಟರು.

ರಾಷ್ಟ್ರೋತ್ಥಾನ ಸಾಹಿತ್ಯದ ಶ್ರೀ ವಿಘ್ನೇಶ್ವರ ಭಟ್ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿಕೊಟ್ಟರು.

ವರದಿ : ಡಾ. ಉದಯನ ಹೆಗಡೆ