ಗೋಮಾತೆಯ ಮೇವನ್ನು ಕಸಿಯುವ ಸಿದ್ಧರಾಮಯ್ಯ ಸರಕಾರದ ನಿರ್ಧಾರಕ್ಕೆ ವಿಶ್ವ ಹಿಂದು ಪರಿಷತ್ ಖಂಡನೆ

ಬೆಂಗಳೂರು ಜನವರಿ 20, 2017 : ಗೋಮಾಳದ ಭೂಮಿಯನ್ನು ಕಬಳಿಕೆ ಮಾಡಿದವರಿಗೇ ಅದನ್ನು ಸಕ್ರಮ ಮಾಡುವ ಕ್ಯಾಬಿನೆಟ್ ನಿರ್ಧಾರದ ಮೂಲಕ ಗೋವಿನಿಂದ ಅದರ ಮೇವನ್ನು ಕಸಿದಿರುವ ಕರ್ನಾಟಕ ಸರಕಾರದ ಈ ಗೋವಿರೋಧಿ ಧೋರಣೆಯನ್ನು ವಿಶ್ವ ಹಿಂದು ಪರಿಷತ್ ತೀವ್ರ ಖಂಡಿಸಿ ಈ ನಿರ್ಧಾರ ಹಿಂತೆಗೆಯಲು ಆಗ್ರಹಿಸಿದೆ.

File Photo – Represenative Photo

ಗೋವುಗಳು ಈಗಲೇ ಮೇವಿನ ತೀವ್ರ ಕೊರತೆ ಅನುಭವಿಸುತ್ತಿದೆ. ಇದಕ್ಕೆ ಬರಗಾಲ ಒಂದು ಕಾರಣವಾದರೆ ಗೋವಿನ ಮೇವಿಗಾಗಿ ಮೀಸಲಿಟ್ಟಿರುವ ಗೋಮಾಳ, ಗೋಚರಗಳನ್ನು ಭೂ ಕಬಳಿಕೆದಾರರು ಅಕ್ರಮವಾಗಿ ಆಕ್ರಮಿಸಿರುವುದು ಇನ್ನೊಂದು ಕಾರಣ. ಸುಪ್ರೀಂ ಕೋರ್ಟು ಅಂತಹ ಅಕ್ರಮ ಮಾಡಿದವರ ಕೈಯಿಂದ ಗೋಮಾಳ ಬಿಡಿಸಲು ಆದೇಶ ಕೊಟ್ಟಿದೆಯಾದರೂ ಸರಕಾರ ಅದಕ್ಕೆ ವಿರುದ್ಧವಾಗಿ ಭೂ ಕಬಳಿಕೆದಾರರಿಗೇ ಭೂಮಿಯನ್ನು ಕೊಡುತ್ತಿರುವುದು ಅನ್ಯಾಯದ ಹಾಗೂ ಆಘಾತಕಾರಿ ಕ್ರಮವಾಗಿದೆ.

ನ್ಯಾಯಯುತವಾಗಿ ಗೋಮಾಳದಲ್ಲಿ ಗೋವಿಗಾಗಿಯೇ ಹುಲ್ಲು ಬೆಳೆಸಲು ಅನುಮತಿ ಕೇಳಿದ ಗೋಶಾಲೆಯವರಿಗೆ ಅದನ್ನು ಕೊಡದ ಸರಕಾರ, ಬಡವರ ಹೆಸರಿನಲ್ಲಿ ಭೂಕಬಳಿಕೆದಾರರಿಗೆ ಗೋಮಾಳ ಕೊಡುವುದು ಅನ್ಯಾಯದ ಪರಮಾವಧಿಯಾಗಿದೆ.

ಬಡವರಿಗೆ ಭೂಮಿ ಹಂಚಲು ನಮ್ಮ ವಿರೋಧವಿಲ್ಲ. ಆದರೆ ಗೋಮಾಳ, ಗೋಚರ, ಹುಲ್ಲುಗಾವಲಿನಂತಹ ಭೂಮಿ ಹೊರತು ಪಡಿಸಿ ಉಳಿದ ಕಂದಾಯ ಭೂಮಿ ಹಾಗೂ ಡಿನೋಟಿಫೈ ಮಾಡಿದ ಅರಣ್ಯ ಭೂಮಿಗಳನ್ನು ಅಕ್ರಮ ಮನೋಭಾವ ಇಲ್ಲದ ಸೂಕ್ತ ಬಡವರಿಗೆ ಹಂಚಲು ಆಕ್ಷೇಪವಿಲ್ಲ.

ದೇಶದಲ್ಲಿ ೬೮% ಕಲಬೆರಕೆ ಮತ್ತು ನಕಲಿ ಹಾಲು ದಿನನಿತ್ಯ ಮಾರಾಟವಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದೆ. ಇದಕ್ಕೆ ಒಂದು ಕಾರಣ ಗೋವಿಗೆ ಪೌಷ್ಠಿಕಯುಕ್ತ ಹಸಿರು ಹುಲ್ಲಿನ ಕೊರತೆ. ಗೋಮಾಳದಲ್ಲಿ ಹಸಿರು ಹುಲ್ಲು ಬೆಳೆಸಲು ವ್ಯವಸ್ಥೆಗೊಳಿಸಿ ಆ ಹುಲ್ಲನ್ನು ಕಡಿಮೆ ದರದಲ್ಲಿ ಗೋಸಾಗಾಣಿಕೆದಾರರಿಗೆ ಸ್ಥಳೀಯವಾಗಿ ನೀಡಿದಲ್ಲಿ ಗೋಪಾಲನೆ ಲಾಭದಾಯಕವಾಗಿ ಉತ್ತಮ ಗುಣಮಟ್ಟದ ಹಾಲು ಸಿಗುತ್ತದೆ. ತನ್ಮೂಲಕ ಜನರ ಸ್ವಾಸ್ತ್ಯ ಉತ್ತಮಗೊಳ್ಳುತ್ತದೆ.

ಗೋವಧೆ ನಿಷೇಧದ ಪ್ರಬಲ ಕಾಯಿದೆ ಹಿಂದೆ ತೆಗೆದು ದುರ್ಬಲ ಕಾಯಿದೆ ಉಳಿಸಿದ ಶ್ರೀ ಸಿದ್ಧರಾಮಯ್ಯ ಸರಕಾರ ಗೋಮಾಳ ಭೂಮಿಯನ್ನು ಗೋವಿನಿಂದ ಕಿತ್ತು ಗೋಮಾತೆಗೂ ಅದನ್ನು ಪೂಜನೀಯವೆಂದು ನಂಬಿರುವ ಹಿಂದುಗಳಿಗೂ ಅಪಮಾನ ಮಾಡುತ್ತಾ ಗೋಸಾಕಾಣಿಕೆದಾರರಿಗೆ ಸಾಕಲು ಕಷ್ಟವಾಗುವಂತೆ ಆಘಾತ ಮಾಡಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದು ಪರಿಷತ್, ಗೋವಿರೋಧಿ ಧೋರಣೆ ಬಿಡುವಂತೆ ರಾಜ್ಯ ಸರಕಾರಕ್ಕೆ ಸಂತರ ನೇತೃತ್ವದಲ್ಲಿ ಫೆಬ್ರವರಿ ೨೬ ರ ಗೋಸತ್ಯಾಗ್ರಹ ಸಹಿತ ವಿವಿಧ ರೀತಿಯ ಜನಾಂದೋಲನದ ಮೂಲಕ ಒತ್ತಾಯಿಸಲಿದೆ. ಇದಕ್ಕೆ ಗೋಪರ ಪ್ರಜೆಗಳೆಲ್ಲರೂ ಸಹಕರಿಸಬೇಕೆಂದು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷ ಹಾಗೂ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್ ಹಾಗೂ ಗೋರಕ್ಷಾ ಪ್ರಮುಖರಾದ ಕಟೀಲು ದಿನೇಶ್ ಪೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರೊ ಎಂ.ಬಿ. ಪುರಾಣಿಕ್
ಪ್ರಾಂತ ಅಧ್ಯಕ್ಷರು, ವಿ.ಹಿಂ.ಪ

ಕಟೀಲು ದಿನೇಶ್ ಪೈ

ಪ್ರಾಂತ ಗೋರಕ್ಷಾ ಪ್ರಮುಖ್, ವಿ.ಹಿಂ.ಪ