ಚಿಕ್ಕಮಗಳೂರು, 10  ಆಗಸ್ಟ್ 2017 : ಚೀನಾ ದೇಶಕ್ಕೆ ರಾಜತಾಂತ್ರಿಕತೆಯ ಬಹಳ ಮುಖ್ಯ ಅಂಶವೇ ಮೋಸವಾಗಿದೆ. ಯಾವುದೇ ಒಂದು ವಿಚಾರಕ್ಕೆ ಅಲ್ಲಿ ಅವಕಾಶವಿಲ್ಲ. ಏನಿದ್ದರೂ ಮೋಸವೇ ಅಲ್ಲಿ ಪ್ರಧಾನ ರಾಜತಾಂತ್ರಿಕ ವಿಷಯ ಎಂದು ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಹೇಳಿದರು‌. 
ಅವರು ಚಿಕ್ಕಮಗಳೂರಿನ ಸಮರ್ಪಣಾದಲ್ಲಿ “ಪ್ರಜ್ಞಾ” ವೇದಿಕೆಯಿಂದ ನಡೆದ ‘ಭಾರತದ ರಾಷ್ಟ್ರೀಯ ಸುರಕ್ಷೆಗೆ ಚೀನಾದ ಸವಾಲುಗಳು’ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.

’ಚೀನಾ ಯಾವುದೇ ಒಂದು ವಿಷಯಕ್ಕೆ ಅಂಟಿಕೊಂಡಿಲ್ಲ. ಚೀನಾ ಕಮ್ಯುನಿಸಂ ತಮ್ಮ ಕೊಡುಗೆ ಎನ್ನುತ್ತದೆ, ಆದರೆ ಬಂಡವಾಳಶಾಹಿತ್ವವನ್ನು ಬಹುವಾಗಿ ಬೆಂಬಲಿಸುತ್ತದೆ‌. ತಾನು ಬುದ್ಧನ ಅನುಯಾಯಿಗಳು ಎಂದು ಬೀಗುತ್ತದೆ. ಆದರೆ ಬೌದ್ಧರ ಗುರು ದಲೈಲಾಮ ಅವರಿಗೆ ಬೆದರಿಕೆ ಹಾಕುತ್ತದೆ. ಹೀಗೆ ಯಾವುದೇ ವಿಷಯಕ್ಕೆ ಅಂಟಿಕೊಳ್ಳದೇ ಹೊತ್ತಿಗೊಂದು ರೀತಿಯಲ್ಲಿ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತದೆ‌. ಸಿದ್ಧಾಂತ ಮಾತ್ರವಲ್ಲ, ತನ್ನ ಭೂಪಟವನ್ನು ಆಗಿಂದಾಗ್ಗೆ ಬದಲಿಸುವ ಮೂಲಕ ತನ್ನ ಸುತ್ತ-ಮುತ್ತಲ ದೇಶಗಳ ಭೂಪ್ರದೇಶ ತಮ್ಮದೇ ಎಂದು ಹೇಳಿಕೊಳ್ಳುತ್ತದೆ’ ಎಂದರು.

ಭಾರತೀಯರಾದ ನಾವು ನಮ್ಮ ಪಕ್ಕದ ರಾಷ್ಟ್ರ ಚೀನಾವನ್ನು ಅರ್ಥ ಮಾಡಿಕೊಳ್ಳದ ಪರಿಣಾಮ, 1962ರ ಯುದ್ಧದಲ್ಲಿ ಸೋಲು ಕಂಡಿದ್ದು. ಸ್ವಾತಂತ್ರ್ಯ ಬಂದ ದಿನದಿಂದಲೂ ನಮಗೆ ಪಾಕಿಸ್ಥಾನ ಅಂದರೆ ಶತೃ ರಾಷ್ಟ್ರ ಎಂಬ ಅರಿವಿದೆ‌. ಪಕ್ಕದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಈ ಎಲ್ಲ ದೇಶದ ರಾಜತಾಂತ್ರಿಕತೆ ಸಂಬಂಧದ ಬಗ್ಗೆ ಭಾರತಕ್ಕೆ ಸುಸ್ಪಷ್ಟವಾಗಿ ತಿಳಿದಿದೆ. ಆದರೆ ಭಾರತ ಹಾಗೂ ಚೀನಾದ ವಿದೇಶಾಂಗ ಸಂಬಂಧ ಮಾತ್ರ ನಮಗೆ ಕಳೆದ ಎಪ್ಪತ್ತು ವರ್ಷಗಳಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಮಾತ್ರ ದುರಂತ ಎಂದರು.

ಚೀನಾದ ವಿರುದ್ಧದ 1962ರ ಯುದ್ಧದಲ್ಲಿ ನಾವು ಸೋತಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ಶತೃ ರಾಷ್ಟ್ರ ಪಾಕಿಸ್ಥಾನಕ್ಕೆ ಚೀನಾ ಎಲ್ಲ ರೀತಿಯಿಂದಲೂ ಸಹಕಾರ ಮಾಡುತ್ತಿದೆ. ಅಷ್ಟೇ ಅಲ್ಲದೇ, ದಿನನಿತ್ಯ ಗಡಿ ಭಾಗದಲ್ಲಿ ತಂಟೆ ಮಾಡುತ್ತಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಹೇಳುತ್ತಿದೆ. ಇಷ್ಟಾದರೂ ನಾವು ಬಳಸುತ್ತಿರುವುದು ಮಾತ್ರ ಚೀನಾದ ವಸ್ತುಗಳನ್ನೆ. ಚೀನಾ ತನ್ನ ವಸ್ತುಗಳ ಡಂಪಿಂಗ್ ಯಾರ್ಡ್ ಆಗಿ ಭಾರತವನ್ನ ಮಾಡಿಕೊಂಡಿದೆ. ಇಷ್ಟೆಲ್ಲಾ ಆದರೂ ಭಾರತೀಯರು ಸ್ವಾಭಿಮಾನ ಶೂನ್ಯರಾಗಿ ಶತೃ ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಇದನ್ನು ನಾವು ಬದಲಾವಣೆ ಮಾಡಬೇಕು ಎಂಬ ಕರೆ ನೀಡಿದರು.

ಭಾರತೀಯರು ಚೀನಾದ ವಸ್ತುಗಳ ಬಳಕೆಯನ್ನೇ ನಿಲ್ಲಿಸಬೇಕಿದೆ. ಹಣ ಹೆಚ್ವು ಕೊಟ್ಟರೂ ಚಿಂತೆಯಿಲ್ಲ, ಚೀನಾದ ಉತ್ಪನ್ನಗಳನ್ನು ಕೊಳ್ಳಬಾರದು. ಆಗ ನಿಧಾನವಾಗಿಯಾದರೂ ಮುಂದಿನ 5-10 ವರ್ಷಗಳಲ್ಲಿ ಚೀನಾದ ವಸ್ತುಗಳು ಭಾರತದ ಮಾರುಕಟ್ಟೆಯಲ್ಲಿ ಇಲ್ಲದಿರುವಂತೆ ಮಾಡಬಹುದು. ಇದಕ್ಕಾಗಿ ಸರಕಾರ ಚೀನಾ ವಸ್ತುಗಳನ್ನು ನಿಷೇಧ ಮಾಡಲಿ ಎಂದು ಕಾಯದೇ, ಜನಸಾಮಾನ್ಯರೇ ಬಳಕೆಯನ್ನು ಕಡಿಮೆ ಮಾಡಿದರೆ ಸಮಸ್ಯೆ ಮುಗಿದುಬಿಡುತ್ತದೆ. ಸರಕಾರಕ್ಕೆ ಅಂತರಾಷ್ಟ್ರೀಯ ಮಟ್ಟದ ಹಲವು ವ್ಯಾವಹಾರಿಕ ಒಪ್ಪಂದಗಳಿಂದ ಚೀನಾದ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಜನರೇ ಚೀನಾ ಉತ್ಪನ್ನ ಕೊಂಡುಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಬೇಕಾಗಿದೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಜಿಲ್ಲಾ ಕಾರ್ಯವಾಹ ನರೇಂದ್ರ ಉಪಸ್ಥಿತರಿದ್ದರು. ಸುಮಂತ್ ನೆಮ್ಮಾರ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು.