ಬೆಂಗಳೂರು, ಆಗಸ್ಟ್ ೧೨, ೨೦೧೭:  ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (FINS)ಇವರ ಆಶ್ರಯದಲ್ಲಿ “ದೋಖ್- ಲಾಂ ನಲ್ಲಿ ಭಾರತ- ಚೀನಾ ನಡುವಿನ ಗತಿರೋಧ ಒಂದು ವ್ಯೂಹಾತ್ಮಕ ದೃಷ್ಟಿಕೋನ” ಈ ವಿಷಯದ ಕುರಿತಾಗಿ ನಗರದ ಮಿಥಿಕ್ ಸೊಸೈಟಿಯಲ್ಲಿ ವಿಚಾರ ಸಂಕೀರ್ಣ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ನಿವೃತ್ತ ರಾಜತಾಂತ್ರಿಕ ಶ್ರೀ ಎನ್. ಪಾರ್ಥಸಾರಥಿ , ‘ಇಂಡಿಯಾ ಟುಡೆ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಸಂದೀಪ್ ಉನ್ನಿಥನ್ ಮತ್ತು ನಿವೃತ್ತ ಸೇನಾಧಿಕಾರಿ, ವಿಯೆಟ್ನಾಂ ದೇಶಕ್ಕೆ ಭಾರತದ ಮೊದಲ ಸುರಕ್ಷಾ ಸಲಹಾಗಾರ ಮತ್ತು ಪ್ರಸಕ್ತ FINS ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಜನರಲ್. ವೆಂಕಟೇಶ್ ಪಾಟೀಲರು ಉಪಸ್ಥಿತರಿದ್ದರು.

FINS Symposium on Indo China Standoff

ದೋಖ್- ಲಾಂ ವಿವಾದದಿಂದಾಗಿ ವಾಣಿಜ್ಯ ಕ್ಷೇತ್ರದ ಮೇಲಾಗುವ ಪರಿಣಾಮಗಳ ಕುರಿತು ಹಿರಿಯ ರಾಜತಾಂತ್ರಿಕ ಶ್ರೀ ಎನ್. ಪಾರ್ಥಸಾರಥಿಯವರು ಮಾತನಾಡುತ್ತ,

ತನ್ನ ಪ್ರಸರಣಾವಾದಿ ನೀತಿಯನ್ನು ಯಥಾಶಕ್ತಿ ಮುಂದುವರೆಸಲು ಹೊರಟಿರುವ ಚೈನಾಗೆ ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿರುವ ದೋಖ್- ಲಾಂ ಪ್ರದೇಶದ ಮಹತ್ವದ ಅರಿವಾಗಿದೆ. ಆದರೆ ಇದು ಭೂತಾನಿನ ಆಳ್ವಿಕೆಯಲ್ಲಿರುವದರಿಂದ ಮತ್ತು ಆ ದೇಶ ಕಳೆದ ೭೦ ವರ್ಷಗಳಿಂದ ಚೀನಾದೊಡನೆ ಯಾವುದೇ ಅಧಿಕೃತ ಸಂಬಂಧಗಳನ್ನು ಹೊಂದದೆ ಇರುವದರಿಂದ ಈ ಭಾಗದಲ್ಲಿ ಹೊಸ ತಂಟೆಗಳನ್ನು ಹುಟ್ಟುಹಾಕುವದು ಅದರ ಅಲ್ಪಕಾಲೀನ ಹಂಚಿಕೆ. ದೀರ್ಘಕಾಲದಲ್ಲಿ ಈ ಭೂಭಾಗವನ್ನು ಕಬಳಿಸುವದರ ಮೂಲಕ ಭಾರತದ ಮೇಲೆ ಸಾಮರಿಕ ದೃಷ್ಟಿಯಿಂದ ಮೇಲುಗೈ ಸಾಧಿಸಲು ಸಹಾಯಕವಾಗುತ್ತದೆ. ಮುಂದೆ ಸಿಲಿಗುರಿಯಲ್ಲಿ ತನ್ನ ನಿಯಂತ್ರಣ ಸಾಧಿಸುವಂತಾದರೆ ಭಾರತದ ಪೂರ್ವೋತ್ತರ ಗಡಿಯವರೆಗೆ ಅದರ ನೇರಪ್ರವೇಶಕ್ಕೆ ಯಾವುದೇ ಅಡ್ಡಿ ಆತಂಕಗಳೇ ಇರದಂತಾಗುತ್ತದೆ.

೩೦೦ ವರ್ಷಗಳ ಕೆಳಗೆ ಭಾರತ ಮತ್ತು ಚೀನಾ ಜಗತ್ತಿನ ಜಿಡಿಪಿಯಲ್ಲಿ ಅತಿದೊಡ್ಡ ಮತ್ತು ಸಮಾನ ಪಾಲುದಾರರಾಗಿದ್ದವು. ಬದಲಾದ ಸನ್ನಿವೇಶದಲ್ಲಿ ೨೦೧೪ರ ವೇಳೆಗೆ ಚೀನಾ ಜಗತ್ತಿನ ಅತಿದೊಡ್ಡ ವಾಣಿಜ್ಯ ಶಕ್ತಿಯಾಗಿ ಹೊರಹೊಮ್ಮಿತು. ತನ್ನನ್ನು ತಾನು ಶಾಂತಿಪೂರ್ವಕ ಅಭಿವೃದ್ಧಿಯ ಹರಿಕಾರನಂತೆ ಬಿಂಬಿಸಿಕೊಳ್ಳುವ ಚೀನಾದ ನಿಜಸ್ವರೂಪ ಅದರ ಪ್ರಸರಣಾವಾದಿ ನೀತಿಗಳಿಂದಾಗಿ ಜಾಗತಿಕವಾಗಿ ಇತರೆ ದೇಶಗಳು ಅದನ್ನು ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಚೀನಾದಷ್ಟು ತ್ವರಿತದ್ದಾಗಿರದಿದ್ದರೂ ಭಾರತ ನಿಶ್ಚಿತವಾಗಿಯೂ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವದು ಚೀನಾಗೆ ಸಹಿಸದ ವಿಷಯವಾಗಿದೆ.

೨೦೦೨ರ ಹೊತ್ತಿಗೆ ಚೀನಾದೊಂದಿಗಿನ ವ್ಯವಹಾರದಲ್ಲಿ ಭಾರತದ ವಿತ್ತೀಯ ಕೊರತೆ ೨ ಬಿಲಿಯನ್ ನಷ್ಟಿದ್ದರೆ ಅದು ಇಂದಿಗೆ ೪೯ ಬಿಲಿಯನ್ ಡಾಲರ್ ಗಳಿಗೆ ತಲುಪಿದೆ. ಭಾರತದ ದೊಡ್ಡ ಜನಸಂಖ್ಯೆ ಚೀನಾದ ಪಾಲಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ ಭಾರತದೊಡನೆ ಯುದ್ಧದಂತಹ ಪ್ರಸಂಗಗಳನ್ನು ಎದುರಿಸುವದು ಅದರ ಪಾಲಿಗೂ ವ್ಯಾವಹಾರಿಕವಾಗಿರುವದಿಲ್ಲ. WTO ಒಪ್ಪಂದಗಳಿಂದಾಗಿ ಚೀನಾದ ವಸ್ತುಗಳನ್ನು ನೇರವಾಗಿ ನಿರ್ಬಂಧಿಸುವದು ಭಾರತ ಸರ್ಕಾರಕ್ಕೆ ಸಾಧ್ಯವಲ್ಲದೆ ಇರಬಹುದು ಆದರೆ ನಾಗರಿಕ ಸಮಾಜ ಇಂತಹ ಸಂದರ್ಭದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತಾದರೆ ಅದು ಚೀನಾದ ಹಿತಾಸಕ್ತಿಗಳಿಗೆ ನಾವು ಕೊಡಬಹುದಾದ ಅತಿ ದೊಡ್ಡ ಪೆಟ್ಟಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗಡಿವಿವಾದದಿಂದಾಗಿ ಹುಟ್ಟಿಕೊಂಡಿರುವ ರಕ್ಷಣಾ ಸಂಬಂಧಿ ವಿಚಾರಗಳನ್ನು ಶ್ರೀ ಸಂದೀಪ್ ಉನ್ನಿಥನ್ ವಿಶದವಾಗಿ ವಿವರಿಸಿದರು :

೨೦೦೪ರಲ್ಲಿ ಲಿಬಿಯಾದ ಅಧ್ಯಕ್ಷ ಮುವಮ್ಮರ್ ಗದಾಫಿ ಸದ್ದಾಂ ಹುಸೈನನ ಪಾಡು ತನಗೆ ಬಾರದಂತಿರಲು ಆತನ ನಿಯಂತ್ರಣದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಅಮೆರಿಕೆಯ ಸ್ವತ್ತಿಗೆ ಒಪ್ಪಿಸಲು ತಯಾರಾದ. ಶಸ್ತ್ರಾಸ್ತ್ರ ಪರೀಕ್ಷಣೆಗೆ ಬಂದ ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ಸಿಕ್ಕದ್ದು ಇಸ್ಲಾಮಾಬಾದ್ ನಲ್ಲಿ “ಗುಡ್ ಲುಕ್ ಫ್ಯಾಬ್ರಿಕ್ ಮತ್ತು ಟೈಲರ್ಸ್ “ನವರಿಂದ ತಯಾರಾದ ಆದರೆ ಚೀನೀ ಒಕ್ಕಣಿಕೆ ಹೊಂದಿದ್ದ ಅಸ್ತ್ರಗಳು. ಇದರರ್ಥ ಚೀನಾನಿರ್ಮಿತ ಸಮೂಹನಾಶಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಲಿಬಿಯಾಕ್ಕೆ ಕಳ್ಳದಾರಿಯಲ್ಲಿ ಮಾರಿತ್ತು.

ವೈರಿರಾಷ್ಟ್ರಗಳು ತಮ್ಮ ಆಂತರಿಕ ತೊಂದರೆಗಳಲ್ಲೇ ಹುದುಗಿರುವಷ್ಟು ಹೊತ್ತು ಚೀನಾದ ಪ್ರಸರಣವಾದಕ್ಕೆ ಕಾಲಾವಕಾಶ ಸಿಕ್ಕಂತಾಗುತ್ತದೆ. ಇದೇ ತಂತ್ರದಡಿಯಲ್ಲಿ ಮೊದಲು ಪಾಕಿಸ್ತಾನ ನಂತರ ಉತ್ತರ ಕೊರಿಯಾಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಅವುಗಳ ಮೂಲಕ ಜಾಗತಿಕ ವಲಯದಲ್ಲಿ ಅಶಾಂತಿ ಹಾಗು ಅಭದ್ರತೆಗಳನ್ನು ಹರಡುವ ಹವಣಿಕೆ ಚೀನಾಕ್ಕಿದೆ. ಉದಾಹರಣೆಗೆ ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನವನ್ನು ಬಳಸಿಕೊಂಡಂತೆ ಜಪಾನ್, ಫಿಲಿಪ್ಪಿನ್ಸ್ ಮತ್ತು ದಕ್ಷಿಣ ಕೊರಿಯಾಗಳನ್ನು ಹಣಿಯಲು ಉತ್ತರಕೊರಿಯಾವನ್ನು ದಾಳವಾಗಿ ಬಳಸಿಕೊಳ್ಳುತ್ತದೆ.

ಚಾಣಕ್ಯನ ಅರಿವನ್ನು ಆತನ ಕಲಿಕೆಯನ್ನು ಭಾರತ ಮರೆತಿರಬಹುದು ಆದರೆ ಪುರಾತನ ಚೀನಾದ ತತ್ವಜ್ಞ ಸುನ್ ಝು ವಿನ ಕಲಿಕೆಯನ್ನು ಚೀನಾ ಮರೆತಿಲ್ಲ. ಆತನ ಹೇಳಿಕೆಯಂತೆ “ಯುದ್ಧದ ಪರಮ ಶ್ರೇಷ್ಠತೆ ಅಡಗಿರುವುದು ಪ್ರತಿಯೊಂದು ಕದನವನ್ನೂ ಗೆಲ್ಲುವದರಲ್ಲಲ್ಲ ಆದರೆ ಯುದ್ಧವನ್ನೇ ಮಾಡದೇ ವೈರಿಯನ್ನು ಸೋಲಿಸುವದರಲ್ಲಿ” ಎಂಬುದನ್ನು ಆ ದೇಶ ಅಕ್ಷರಶಃ ಪಾಲಿಸುತ್ತದೆ ಎಂದು ಸಂದೀಪ್ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ಸೇನಾನಿ ಜನರಲ್ ವೆಂಕಟೇಶ್ ಪಾಟೀಲರು ಭಾರತ ಚೀನಾದ ಸಧ್ಯದ ಗಡಿ ಬಿಕ್ಕಟ್ಟನ್ನು ಮಿಲಿಟರಿ ದೃಷ್ಟಿಕೋನದಿಂದ ವಿವರಿಸಿದರು :

೫೦೦೦ ವರ್ಷಗಳ ವರೆಗೆ ಭಾರತ ಮತ್ತು ಚೀನಾ ಸೌಹಾರ್ದದಿಂದ ಬಾಳ್ವಿಕೆ ಮಾಡಿದವು ಆದರೆ ೧೯೫೦ ರಲ್ಲಿ ಚೀನಾ ಟಿಬೆಟನ್ನು ಆಕ್ರಮಿಸುವದರೊಂದಿಗೆ ವಿರೋಧಿರಾಷ್ಟ್ರಗಳಾಗಿ ಬದಲಾದವು ಎಂಬ ಪೀಠಿಕೆಯೊಂದಿಗೆ ಮಾತಿಗೆ ಮೊದಲಾದ ಪಾಟೀಲರು ೧೯೯೦ರ ದಶಕದಲ್ಲಿ ಪಂಜಾಬಿನಲ್ಲಿ ಸ್ವತ: “ಆಪರೇಷನ್ ರಕ್ಷಕ್”ನಲ್ಲಿ ಪಾಲ್ಗೊಳ್ಳುವದರ ಮೂಲಕ ಉಗ್ರವಾದವನ್ನು ಆ ರಾಜ್ಯದಿಂದ ಹೊರಗಟ್ಟಲು ಕಾರಣರಾದವರು.

೧೯೬೨ ರ ಚೀನಾವಿರುದ್ಧದ ಪ್ರಸಂಗವನ್ನು ನೆನೆಯುತ್ತ, ಅಂದಿನ ಪ್ರಧಾನಿ ನೆಹರುರವರ ನಿಷ್ಕಾಳಜಿಯ ಪರಿಣಾಮವಾಗಿ ಭಾರತಕ್ಕೆ ಹಿನ್ನಡೆಯುಂಟಾಯ್ತು. ಚೈನಾವನ್ನು ಎದುರಿಸಲು ಅಮೆರಿಕೆಯ ಅಧ್ಯಕ್ಷ ಕೆನಡಿ ಶಸ್ತ್ರಾಸ್ತ್ರಗಳನ್ನು ಕೊಡಲು ಮುಂದೆಬಂದರೂ ದೂರದರ್ಶಿತ್ವವಿಲ್ಲದ ನೆಹರೂ ಅದನ್ನು ನಿರಾಕರಿಸುವದರ ಮೂಲಕ ಯೋಧರು ಗಡಿಯಲ್ಲಿ ಶತ್ರುವಿನೊಂದಿಗೆ ಬರಿಗೈಯಲ್ಲಿ ಯುದ್ಧಮಾಡುವಂತಾಯಿತು ಎಂದರು.

೧೯೫೦-೬೦ ರ ದಶಕದಲ್ಲಿ ಚೀನಾದ ಅಧ್ಯಕ್ಷನಾದ ಮಾವೋ ತನಗೆ ಎದುರಾಳಿಗಳೇ ಇರದಂತಾಗಲು ಆತ ತನ್ನ ಆಂತರಿಕ ವಿರೋಧಿಗಳನ್ನು ನಿರ್ನಾಮ ಮಾಡುತ್ತಿದ. ಚೀನಾದ ಇಂದಿನ ಅಧ್ಯಕ್ಷ ಷಿ-ಜಿನ್ಪಿಂಗ್ ಕೂಡ ಅದೇ ತತ್ತ್ವದಲ್ಲಿ ನಂಬಿಕೆ ಇರುವವ. ಬರಲಿರುವ ನವಂಬರ್ ತಿಂಗಳಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ ತನ್ನ ನೇತಾರನನ್ನು ಆಯ್ಕೆಮಾಡುತ್ತದೆ. ಚುನಾವಣೆಯ ಹೊತ್ತಿಗೆ ತನ್ನ ಪ್ರಭಾವವನ್ನು ತನ್ನ ಪಕ್ಷದ ಕಾರ್ಯಕರ್ತರಿಗೆ ಮತ್ತು ದೇಶದ ಜನತೆಗೆ ಮನವರಿಕೆ ಮಾಡಿಕೊಡಲು ಜಿನ್ಪಿಂಗ್ ದೊಖಲಾಂ ನಂತಹ ಪ್ರಕರಣಗಳನ್ನು ಸೃಷ್ಟಿಸಿ ಅದರ ಮೂಲಕ ಅಧ್ಯಕ್ಷೀಯ ಗಾದಿಯಲ್ಲಿ ತಾನು ಮುಂದುವರೆಯುವಂತೆ ನೋಡಿಕೊಳ್ಳುವದು ಸಧ್ಯದ ಚಿತಾವಣಿಯಾಗಿದೆ.

ಭಾರತ ಮಿಲಿಟರಿ ಮತ್ತು ಭದ್ರತಾ ವಿಚಾರಗಳಿಗೆ ತನ್ನ ಒಟ್ಟು ಆಂತರಿಕ ಉತ್ಪನ್ನದ ೧.೭ % ದಷ್ಟು ಹಣವನ್ನು ಮಾತ್ರ ವ್ಯಯಿಸುತ್ತದೆ ಅದೇ ಹೊತ್ತಿಗೆ ಚೀನಾ ತನ್ನ ಒಟ್ಟು ಆಂತರಿಕ ಉತ್ಪನ್ನದಲ್ಲಿ ೪% ದಷ್ಟು ಹಣವನ್ನು ಮಾತ್ರ ತನ್ನ ಸೈನ್ಯದ ವಿಚಾರಕ್ಕಾಗಿಯೇ ಬಳಸುತ್ತದೆ. ಚೈನಾದ ಅಭಿವೃದ್ಧಿಯ ನಾಗಾಲೋಟಕ್ಕೆ ಮತ್ತು ಅದರ ಸೈನಿಕ ಕ್ಷಮತೆಗಳಿಗೆ ಆ ದೇಶದ ಸರ್ವಾಧಿಕಾರಿ ಧೋರಣೆಗಳೇ ಕಾರಣ . ಹಾಗಿದ್ದಾಗ್ಯೂ ಅದಕ್ಕೆ ೧೯೫೦-೬೦ ರ ನಂತರ ಯುದ್ದವನ್ನು ಎದುರಿಸಿದ ಅನುಭವವೇ ಇಲ್ಲ. ಆದರೆ ಭಾರತಕ್ಕಾದರೋ ಕಾಲದಿಂದ ಕಾಲಕ್ಕೆ ಶತ್ರುದೇಶಗಳೊಂದಿಗೆ ಮುಖಾಮುಖಿಯಾದ ಅನುಭವವಿದೆ. ಅಷ್ಟೇ ಅಲ್ಲ ವಿಪರೀತ ಪರಿಸ್ಥಿತಿಗಳಲ್ಲಿ ವಿರೋಧಿಯನ್ನು ಸೋಲಿಸಿದ ಹುಮ್ಮಸ್ಸೂ ಇದೇ. ಇಂತಹ ಅನುಭವಿ ಮತ್ತು ಸಶಕ್ತ ಸೇನೆಯ ರಕ್ಷಣೆಯಲ್ಲಿ ಭಾರತದ ಜನತೆ ಸಂಪೂರ್ಣ ಸುರಕ್ಷಿತವಾಗಿದೆ ಎಂದೂ ನೆರೆದ ಸಭಿಕರ ಆತ್ಮಸ್ಥೈರ್ಯ ಹೆಚ್ಚಿಸಿದರು.

ವರದಿ : ಶ್ರೀ ಶೈಲೇಶ ಕುಲಕರ್ಣಿ