ಹಿರಿಯ ಆರೆಸ್ಸೆಸ್ ಪ್ರಚಾರಕ ಶ್ರೀ ಮೈ.ಚ. ಜಯದೇವ್ ವಿಧಿವಶ

ಬೆಂಗಳೂರು ಫೆಬ್ರವರಿ 20 , 2017: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಹಿರಿಯ ಪ್ರಚಾರಕ ಶ್ರೀ ಮೈ.ಚ. ಜಯದೇವ್ (85) ಅವರು ಇಂದು  ಸೋಮವಾರ ಬೆಳಗ್ಗೆ  9.00ಗಂಟೆಗೆ ಬೆಂಗಳೂರಿನಲ್ಲಿ ವಿಧಿವಶರಾದರು. ವಯೋಸಹಜ ಅಲ್ಪಕಾಲೀನ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಪಾರ್ಥಿವ ಶರೀರವನ್ನು 12.00ಗಂಟೆಗೆ ಆರೆಸ್ಸೆಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಅಂತಿಮದರ್ಶನಕ್ಕೆ ಇರಿಸಲಾಗುವುದು.

ಅಂತಿಮ ದರ್ಶನ 12.00 ರಿಂದ – ಕೇಶವಕೃಪಾ
ಶ್ರದ್ಧಾಂಜಲಿ ಸಭೆ – ಸಂಜೆ 5.00 ರಿಂದ ಕೇಶವಕೃಪಾ
ಫೆಬ್ರವರಿ 21  1.30 ಮೈಸೂರಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ

ಶ್ರೀ ಮೈ.ಚ. ಜಯದೇವ್:

 • ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ. ಜಯದೇವ್) ಅವರು ಫೆಬ್ರುವರಿ 18, 1932ರಲ್ಲಿ ಮೈಸೂರಿನಲ್ಲಿ ಜನಿಸಿದರು.
 • ಮೈಸೂರಿನಲ್ಲಿ ಬಿ.ಎಸ್ಸಿ. ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಮಾಡಿದರು.
 • 1950ರ ದಶಕದಲ್ಲಿ ಆರೆಸ್ಸೆಸ್ ವಿಚಾರಧಾರೆಯತ್ತ ಆಕರ್ಷಿತರಾದ ಜಯದೇವ್‌ರು ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು.
 • ಬೆಂಗಳೂರಿನ ಪ್ರತಿಷ್ಠಿತ HMT- Hindustan Garage Motors ನಲ್ಲಿಯೂ ಮ್ಯಾನೇಜರ್ ಆಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.
 • 1960ರಲ್ಲಿ ಆರೆಸ್ಸೆಸ್ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ಸ್ವೀಕರಿಸಿ, ಬೆಂಗಳೂರು ನಗರದಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದರು. 1974 ರ ತನಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹರಾಗಿ ಅತೀ ದೀರ್ಘಕಾಲ ಮಾರ್ಗದರ್ಶನ ಮಾಡಿದವರು ಮೈ.ಚ. ಜಯದೇವ್‌.
 • 1965 ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಸ್ಥಾಪನೆಯಲ್ಲಿ ಮೈ ಚ ಜಯದೇವರದ್ದು ಮಹತ್ತರ ಪಾತ್ರ. ಇದೀಗ 50 ವರ್ಷ ಪೂರೈಸಿರುವ ರಾಷ್ಟ್ರೋತ್ಥಾನ ಪರಿಷತ್ ನ ಸಮಗ್ರ ವಿಕಾಸದ ಎಲ್ಲ ಹಂತಗಳಲ್ಲಿಯೂ ಪೋಷಿಸಿ- ಮಾರ್ಗದಶಿಸಿದವರು ಮೈ.ಚ. ಜಯದೇವ್. 1965ರಿಂದ 1995ರ ತನಕ ಮೂರು ದಶಕಗಳ ಕಾಲ ರಾಷ್ಟ್ರೋತ್ಥಾನ ಪರಿಷತ್‌ನ ಜನರಲ್ ಮ್ಯಾನೇಜರ್ ಆಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ರಾಜ್ಯಾದ್ಯಂತ ವ್ಯಾಪಿಸಿರುವುದರ ಹಿಂದೆ ಜಯದೇವ್ ಅವರ ಕೊಡುಗೆ ಅಪಾರ.
 • ’ರಾಷ್ಟ್ರೋತ್ಥಾನ ಸಾಹಿತ್ಯ’ದ ಮೂಲಕ ಸ್ವಾತಂತ್ರ್ಯಾನಂತರದಲ್ಲಿ ನೇಪಥ್ಯಕ್ಕೆ ಸರಿಯುತ್ತಿದ್ದ ರಾಷ್ಟ್ರೀಯ ವಿಚಾರಧಾರೆಗಳನ್ನು ಕನ್ನಡ ನಾಡಿನಲ್ಲಿ ಮೂಡಿಸುವ ರಾಷ್ಟ್ರೀಯ ದೃಷ್ಟಿಕೋನದ ಸಾಹಿತ್ಯರಚನೆಯ ಕಾರ್ಯವನ್ನು ಪ್ರಾರಂಭಿಸಿ, ಅದಕ್ಕಾಗಿ ನೂರಾರು ಯುವ ಲೇಖಕರನ್ನು ರೂಪಿಸಿದ ಕೀರ್ತಿ ಜಯದೇವ್ ಅವರದ್ದು.
 • ಮುದ್ರಣ ಸೌಲಭ್ಯಗಳೇ ದುಸ್ತರವಾಗಿದ್ದ ಕಾಲದಲ್ಲಿ ‘ಭಾರತ-ಭಾರತಿ ಪುಸ್ತಕ ಮಾಲಿಕೆ’ ಎಂಬ ನೂತನ ಯೋಜನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸಪ್ರಯೋಗ ನಡೆಸಿದರು. ಇದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದಾಖಲೆಯನ್ನೇ ಬರೆಯಿತು.
 • ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ತಂಡದಲ್ಲಿ ಸತ್ಯಾಗ್ರಹ ಮಾಡಿ1975ರ ನವೆಂಬರ್‌ನಲ್ಲಿ ಬಂಧಿತರಾಗಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸಿದರು. ನಂತರ 1977 ಮಾರ್ಚ್ 22ಕ್ಕೆ ಯಾದವರಾವ್ ಜೋಶಿ ಅವರೊಂದಿಗೆ ಬಿಡುಗಡೆಯಾದರು.
 • ಬೆಂಗಳೂರಿನಲ್ಲಿ ಅತೀ ಹೆಚ್ಚು ಕಾರ್ಯಕರ್ತರು, ಹಿತೈಷಿಗಳ ಮನೆಗಳೋಂದಿಗೆ ಸಂಪರ್ಕ ಹೊಂದಿದ್ದ ಮೈ.ಚ. ಜಯದೇವ್‌ರು ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಎಲ್ಲಾ ಪಕ್ಷದ ಮುಖಂಡರು, ಸಂತ-ಸ್ವಾಮೀಜಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಓರ್ವ ಕುಶಲ ಸಂಘಟಕರಾಗಿ ಜನಪ್ರಿಯರಾಗಿದ್ದರು. ಬಾಳಾಸಾಹೇಬ್ ದೇವರಸ್, ಕು ಸೀ ಸುದರ್ಶನ್, ದತ್ತೋಪಂತ್ ಟೆಂಗಡಿ, ಅಟಲ್ ಬಿಹಾರಿ ವಾಜಪೇಯೀ ಸಹಿತ ಅನೇಕ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
 • ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಮೂಲೋದ್ದೇಶದಂತೆ ಕೆಲಸ ಮಾಡುವಂತೆ ಪ್ರೇರಣೆ ನೀಡಿದವರು. ಇವುಗಳ ಆರ್ಥಿಕ ಸ್ವಾವಲಂಬನೆ, ವ್ಯಕ್ತಿ ಜೋಡಣೆ ಮುಂತಾದ ಕೆಲಸಗಳನ್ನು ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್‌ರು.
 • ವನವಾಸಿಗಳ ಶಿಕ್ಷಣ, ಅರೋಗ್ಯ ಸೇರಿದಂತೆ ಅವರ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಆರೆಸ್ಸೆಸ್ ಪ್ರೇರಿತ ಸಂಸ್ಥೆ “ವನವಾಸಿ ಕಲ್ಯಾಣ ಆಶ್ರಮ”ವು ಕರ್ನಾಟಕದಲ್ಲಿ ರೂಪುಗೊಂಡ ಪ್ರಾರಂಭದ ದಿನದಿಂದಲೂ ಅದರ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಜಯದೇವರ ಕೊಡುಗೆ ಗಣನೀಯವಾದದ್ದು.
 • ಅವಿವಾಹಿತರಾಗಿಯೇ ಉಳಿದು 4 ದಶಕಗಳ ಕಾಲ ಸುದೀರ್ಘ ಸಾಮಾಜಿಕ ಜೀವನ ನಡೆಸಿದ ನಂತರ 1995ರಲ್ಲಿ ಸಂಘದ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ‘ಕೇಶವಕೃಪಾ’ವನ್ನು ಕೇಂದ್ರವಾಗಿಸಿಕೊಂಡು ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು.
 • 2002ರಿಂದ ಸಹ ಕ್ಷೇತ್ರೀಯ ಪ್ರಚಾರಕರಾಗಿ ನಿಯುಕ್ತಿ. 2004ರಲ್ಲಿ ಕ್ಷೇತ್ರೀಯ ಪ್ರಚಾರಕರಾಗಿ ಜವಾಬ್ದಾರಿ.
 • 2009ರಿಂದ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾಗಿ ಜವಾಬ್ದಾರಿ.
 • 2012ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರಾಗಿ ನಿಯುಕ್ತಿ.
 • 2015ರ ಮಾರ್ಚ್ ನಂತರ ಹಿರಿಯ ಪ್ರಚಾರಕರಾಗಿ ಸಂಘಟನೆಗೆ ಮಾರ್ಗದರ್ಶನ ಮಾಡಿದರು.

ಸಂತಾಪ :
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ, ಸಹಸರಕಾರ್ಯವಾಹ ಸುರೇಶ್ ಸೋನಿ, ದತ್ತಾತ್ರೇಯ ಹೊಸಬಾಳೆ, ಡಾ|| ಕೃಷ್ಣಗೋಪಾಲ್, ವಿ. ಭಾಗಯ್ಯ ಹಾಗೂ ಆರೆಸ್ಸೆಸ್ ಪ್ರಮುಖರಾದ ಕಜಂಫಾಡಿ ಸುಬ್ರಹ್ಮಣ್ಯ ಭಟ್, ಮಂಗೇಶ್ ಭೇಂಡೆ, ಮುಕುಂದ್ ಸಿ.ಆರ್, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

 

For total Photo collection please click the following link:

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Senior RSS Pracharak Sri MC Jayadev passed away in Bengaluru

Mon Feb 20 , 2017
Bengaluru February 20, 2017: Senior RSS Pracharak Sri MC Jayadev, 85 years, passed away in Sagar Hospitals Bengaluru on Monday morning 9am. MC Jayadev was suffering from old age illness since last few months. The Antim Darshan to be held at 12.00 noon onwards Keshavakrupa, RSS State Headquarters in Bengaluru. Shraddhanjali […]