ದೇಶಭಕ್ತಿಯ ಪಾಠ ಹೇಳಿದರೆ ಸಾಂಪ್ರದಾಯಿಕತೆ, ಕೋಮುವಾದ ಎನ್ನುತ್ತಾರೆಂಬುದೇ ವಿಪರ್ಯಾಸ : ಬಲದೇವ್ ಭಾಯಿ ಶರ್ಮಾ

ಸೆಪ್ಟೆಂಬರ್ ೧, ಬೆಂಗಳೂರು: ‘ಮೆಕಾಲೆ ಪುತ್ರರು’ ಭಾರತದ ವಿಚಾರದಲ್ಲಿ ಹಲವು ಭ್ರಮೆಗಳನ್ನು ತುಂಬಿದ್ದಾರೆ; ವಾಮವಾದಿ ವಿದ್ವಾಂಸರು ಬಹಳಷ್ಟು ಗೊಂದಲಗಳನ್ನು ಉಂಟು ಮಾಡಿದ್ದಾರೆ. ಆದರೆ ಸತ್ಯವು ಸೋಲುವುದಿಲ್ಲ. ಅದನ್ನು ಬಚ್ಚಿಡಲು ಅಸಾಧ್ಯ. ಈ ನಿಟ್ಟಿನಲ್ಲಿ ಸತ್ಯವನ್ನು ಪ್ರಕಟಿಸುವ ಕಾರ್ಯವು ಆಗಬೇಕು ಎಂದು ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ ಬಲದೇವ್ ಭಾಯಿ ಶರ್ಮಾ ಅವರು ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಅವರು ವಾಯ್ಸ್ ಅಫ್ ಇಂಡಿಯಾ ಸಾಹಿತ್ಯ ಸರಣಿಯ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಭಾಷಣ ಮಾಡುತ್ತಿದ್ದರು. ಪ್ರಸ್ತುತ ಪುಸ್ತಕಗಳ ಕನ್ನಡಾನುವಾದವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಸಹ ಸಂಸ್ಥೆ ಸಾಹಿತ್ಯಸಿಂಧು ಪ್ರಕಟಿಸಿದೆ.

 

 

 

ಭಾರತದಲ್ಲಿ ಅನಾದಿಕಾಲದಿಂದ ಸರಸ್ವತಿಯ ಪೂಜೆ ನಡೆದುಕೊಂಡು ಬಂದಿದೆ. ಈ ದೇಶದ ಜ್ಞಾನ ಪರಂಪರೆಯು ಕೇವಲ ಓದು-ಬರಹದ್ದಲ್ಲ; ಕೇವಲ ಮಾಹಿತಿಯೂ ಅಲ್ಲ. ಇಲ್ಲಿ ಜ್ಞಾನವೆಂದರೆ ಮನುಷ್ಯತ್ವ ಮತ್ತು ಅದರ ಬಗ್ಗೆ ಸಂಸ್ಕಾರ ನೀಡುವುದಾಗಿದೆ. ಅದಿಲ್ಲವಾದರೆ ಸಾಕ್ಷರ ರಾಕ್ಷಸನಾಗುತ್ತಾನೆ. ಭಾರತದ ಜ್ಞಾನವನ್ನು ಎಲ್ಲ ಕಡೆಯಿಂದಲೂ ಸ್ವೀಕರಿಸುವ ವ್ಯಾಪಕ ದೃಷ್ಟಿ; ಇದು ಸತ್ಯಾನ್ವೇಷಣೆಯ ಪರಂಪರೆ. ಹೀಗಿರುವಾಗ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಅಗುತ್ತದೆ ಎನ್ನುವುದು ಅಸಂಬದ್ಧ ಮತ್ತು ಹಾಸ್ಯಾಸ್ಪದ. ಇಲ್ಲಿ ಜಾತ್ಯಾತೀತೆಯ ಮಾತು ಕೂಡ ಅವಮಾನಕಾರಿ; ಏಕೆಂದರೆ ಇಲ್ಲಿ ಸರ್ವಪಂಥಗಳ ಸಮಭಾವವಿತ್ತು. ವಿವಿಧ ದೇಶಗಳಲ್ಲಿ ಚದುರಿ ಹೋಗಿದ್ದ ಯಹೂದಿಗಳು ಇಸ್ರೇಲಿನಲ್ಲಿ ಒಟ್ಟು ಸೇರಿದಾಗ ಹಿಂದೆ ತಾವು ಬೇರೆ ಬೇರೆ ದೇಶಗಳಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡರು. ಭಾರತದಿಂದ ಹೋದವರು ತಾವು ಈ ದೇಶದಲ್ಲಿ ಗೌರವದಿಂದ ಬದುಕಿದೆವು ಎಂದು ಹೇಳಿಕೊಂಡರು. ಇಂತಹ ನಮಗೆ ನೀವು ಧರ್ಮದಿಂದ ನಿರಪೇಕ್ಷತೆಯನ್ನು ಕಲಿಸುತ್ತೀರಾ ಎಂದು ಬಲದೇವ್ ಭಾಯಿ ಪ್ರಶ್ನಿಸಿದರು.

ಅಕ್ಬರನನ್ನು ಗೌರವಿಸುವ ನಮ್ಮ ಇತಿಹಾಸ ರಾಣಾ ಪ್ರತಾಪನನ್ನು ಕೀಳಾಗಿ ಕಾಣುತ್ತದೆ. ದೇಶಭಕ್ತಿಯ ಪಾಠ ಹೇಳಿದರೆ ಸಾಂಪ್ರದಾಯಿಕತೆ(ಕೋಮುವಾದ) ಎನ್ನುತ್ತಾರೆ). ಆದರೆ ಭಾರತ ಋಷಿ ಸಂದೇಶದ ದೇಶ. ಇದು ಜನರ ಕಲ್ಯಾಣವಷ್ಟೇ ಅಲ್ಲ. ಗಿಡ-ಮರ, ಪಶು-ಪಕ್ಷಿ ಎಲ್ಲದರ ಹಿತ ಬಯಸಿದ ದೇಶ. ಇಂತಹ ವಿಚಾರ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ಅದರ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಕರೆಯುತ್ತಾರೆಂದು ಟೀಕಿಸಿದ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರು, ಸನಾತನ ಭಾರತ ಇಲ್ಲಿನ ಜನರನ್ನು ಹಿಂದು, ಮುಸ್ಲಿಂ, ಕ್ರೈಸ್ತರೆಂದು ಕಾಣಲಿಲ್ಲ. ಮನುಷ್ಯರೆಂದು ನೋಡಿತು. ಆದರೆ ಯುರೋಪಿನ ಬಲಶಾಲಿಗಳೇ ಬದುಕಿ ಉಳಿಯುವ ಸಂಸ್ಕೃತಿ; ಅದು ಸಂಘರ್ಷಕ್ಕೆ ದಾರಿ ಮಾಡುವಂಥದು ಎಂದು ವಿವರಿಸಿದರು; ಜಗತ್ತನ್ನು ಉಳಿಸಬೇಕಿದ್ದರೆ ಭಾರತದ ವಿಚಾರಗಳಿಂದ ಮಾತ್ರ ಸಾಧ್ಯ ಎನ್ನುವ ಅರ್ನಾಲ್ಡ್ ಟಾಯ್ನ್‌ಬೀ ಮಾತನ್ನು ಉಲ್ಲೇಖಿಸಿದರು.

ಕಾಶ್ಮೀರವು ಅನಾದಿಕಾಲದಿಂದ ಭಾರತದ ಭಾಗವಾಗಿದ್ದ ನಾಡು. ಅದು ಈಚೆಗಷ್ಟೇ ಸ್ಥಾಪನೆಗೊಂಡ ಪಾಕಿಸ್ತಾನದ್ದಾಗುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಬಲದೇವ್ ಭಾಯಿ ಶರ್ಮಾ, ಸೆಕ್ಯುಲರ್ ಭಾರತದ ಹೆಸರಿನಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಅಸ್ಮಿತೆ (ಐಡೆಂಟಿಟಿ) ಕೊಡುವುದನ್ನು ಆಕ್ಷೇಪಿಸಿದರು. ಭಾರತದ ಮುಸ್ಲಿಮರು ನಮ್ಮವರೇ. ತಮ್ಮ ಊರಾದ ಗಾಜಿಯಾಬಾದ್ ಪರಿಸರದ ಮುಸ್ಲಿಮರಲ್ಲಿ ಜಾಟರ ಗೋತ್ರಗಳಿವೆ; ಅವರೇನೂ ಹೊರಗಿನಿಂದ ಬಂದವರಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ ಅವರು ಭಾರತದ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸುವ ಮೂಲಕ ಸೌಹಾರ್ದದಿಂದ ಬದುಕಬೇಕೆಂದರು ಇದು ನಮಗೆ ಎಲ್ಲವನ್ನೂ ಕೊಟ್ಟ ದೇಶವೆನ್ನುವ ಗೌರವ-ಭಕ್ತಿಗಳಿಂದ ನಡೆದುಕೊಳ್ಳುಬೇಕು. ಭಾರತದಲ್ಲಿ ಮುಸ್ಲಿಮರಿಗೆ ಇರುವಂತಹ ರಕ್ಷಣೆ ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇರಲು ಸಾಧ್ಯವಿಲ್ಲ; ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆಯೇ ಬಾಂಬ್ ಹಾಕುತ್ತಿದ್ದಾರೆ. ನಾವು ಹೊರಗಿನವರಲ್ಲ. ಡಿಎನ್ಎ ಪರೀಕ್ಷಿಸಿದರೆ ಅದು ತಿಳಿಯಬಹುದು; ನಾವು ಬಿಲ್ಲವ, ಬಂಟ, ಬ್ರಾಹ್ಮಣ ಸಮುದಾಯದವರು ಇರಬಹುದು ಎಂದ ರಹೀಂ ಸಂಘದ ವಿಚಾರಗಳ ಬಗೆಗೆ ವಿಶ್ವಾಸ, ಅಭಿಮಾನ ಪ್ರಕಟಿಸಿದರು.

Sri Rahim Uchil

ಎಲ್ಲ ಅಲ್ಪಸಂಖ್ಯಾತರನ್ನು ಒಂದೇ ಎಂದು ತಿಳಿಯುವುದು ಸರಿಯಲ್ಲ; ಅವರನ್ನು ಸರಿಯಾಗಿ ಗುರುತಿಸಬೇಕು. ರಾಜಕಾರಣಿಗಳು ನಡೆಸುವ ಮುಸ್ಲಿಮರ ಓಲೈಕೆಯಂತೂ ಅಸಹ್ಯಕರ ಮಟ್ಟಕ್ಕೆ ಹೋಗಿದೆ ಎಂದ ಅವರು ಮುಸ್ಲಿಮರಿಗೆ ಧಾರ್ಮಿಕವಾಗಿ ಏನೂ ಅಲ್ಲದ ಕೇವಲ ಒಬ್ಬ ರಾಜನಾದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರ ಆಚರಿಸಿದ್ದನ್ನು ತೀವ್ರವಾಗಿ ವಿರೋಧಿಸಿದರು. ಇನ್ನು ಪೈಗಂಬರ್ ಅವರು ಗೋಮಾಂಸ ಭಕ್ಷಿಸಿದ ದಾಖಲೆ ಇಲ್ಲ. ಇರುವ ಸಾವಿರಾರು ಆಚಾರಗಳಲ್ಲಿ ಬರುತ್ತದೆಂದು ಪ್ರವಾದಿ ಹೇಳಿದ್ದಾರೆ. ಹಾಗಿರುವಾಗ ಗೋಮಾಂಸ ಭಕ್ಷಣೆಯ ಹಠ ಏಕೆ ಎಂದು ರಹೀಂ ಉಚ್ಚಿಲ ಪ್ರಶ್ನಿಸಿದರು.
ಬೇರೆ ಧರ್ಮದವರು ಆರಾಧಿಸುವ ವಸ್ತುವನ್ನು ಗೌರವಿಸಿ ಎಂದ ಕುರಾನ್ ಹೇಳುತ್ತದೆ ಎನ್ನುವ ಮೂಲಕ ಗೋಹತ್ಯೆಯನ್ನು ಆಕ್ಷೇಪಿಸಿದ ಅವರು, ಹುಟ್ಟಿದ ದೇಶವನ್ನು ತಾಯಿ ಎಂದು ಒಪ್ಪಿಕೊಳ್ಳದಿರುವುದು ಇಸ್ಲಾಂ ವಿರೋಧಿ ನಿಲವು ಎಂದರು; ಮುಸ್ಲಿಂ ಸಮುದಾಯದ ಮುಂದೆ ಒಂದು ಕಡೆ ವಿಷಯವನ್ನು ಮನಗಾಣಿಸಿ ‘ಭಾರತ್ ಮಾತಾ ಕೀ ಜೈ’ ಹೇಳಿಸಿದ್ದನ್ನು ಉಲ್ಲೇಖಿಸಿ, ಅದಕ್ಕೆ ವಿರುದ್ಧವಾಗಿ ಒವೈಸಿ ನೀಡಿದ ಹೇಳಿಕೆಯನ್ನು ಟೀಕಿಸಿದರು.
‘ನೀವು ಮೊದಲಿಗೆ ಮುಸ್ಲಿಮರಾ ಅಥವಾ ಭಾರತೀಯರಾ’ ಎಂದು ಹಲವರು ಕೇಳುತ್ತಾರೆ. ಆದರೆ ಕುರಾನ್ ನೀನು ಹುಟ್ಟಿರುವ ಭೂಮಿಯನ್ನು ಪ್ರೀತಿಸದಿದ್ದರೆ ಮುಸಲ್ಮಾನನೆನಿಸುವುದಿಲ್ಲ. ಮುಸಲ್ಮಾನ್ ಆಗಬೇಕಿದ್ದರೆ ಮೊದಲು ದೇಶವನ್ನು ಪ್ರೀತಿಸಬೇಕು ಎಂದು ಹೇಳುತ್ತದೆ ಎಂದ ರಹೀಂ ಉಚ್ಚಿಲ್ ಮುಸ್ಲಿಂ ಭಯೋತ್ಪಾದಕರನ್ನು ಕಟುವಾಗಿ ಟೀಕಿಸಿದರು. ಇನ್ನೊಬ್ಬನಿಗೆ ಉಪಕಾರ ಮಾಡಿದರೆ ಮಾನವ ಜನಾಂಗಕ್ಕೇ ಉಪಕಾರ ಮಾಡಿದಂತೆ ಎಂದು ಇಸ್ಲಾಂ ಹೇಳುತ್ತದೆ. ಆದರೆ ಭಯೋತ್ಪಾದಕರು ಮಕ್ಕಳು, ಹೆಂಗಸರು ಸೇರಿದಂತೆ ನಿರಪರಾಧಿಗಳನ್ನು ಕೊಲ್ಲುತ್ತಾರೆ. ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಮೆಕ್ಕದಲ್ಲೂ ಆತ್ಮಾಹುತಿ ಬಾಂಬ್ ಸ್ಫೋಟಿಸುವ ಮಟ್ಟಕ್ಕೆ ಹೋಗಿದ್ದಾರೆ ಧರ್ಮದ ವಿಷಯದಲ್ಲಿ ಬಲತ್ಕಾರ ಸಲ್ಲದೆಂದು ಇಸ್ಲಾಂ ಹೇಳುತ್ತದೆ. ಆದ್ದರಿಂದ ಲವ್ ಜಿಹಾದ್ ಕೂಡ ಸರಿಯಿಲ್ಲ ಇವೆಲ್ಲ ತಪ್ಪು ಎಂಬದನ್ನು ಮುಸ್ಲಿಂ ಧರ್ಮಗುರುಗಳು ಹೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಡಿ ಬೆಂಗಳೂರು ಅದರ ನಿರ್ದೇಶಕ ಎಂ.ಎಸ್. ಚೈತ್ರ ಅವರು ಕೃತಿಗಳನ್ನು ಪರಿಚಯಿಸಿದರು. ಮೂಲ ಕೃತಿಗಳ ಲೇಖಕರಾದ ಸೀತಾರಾಮ ಗೋಯಲ್ ಮತ್ತು ಹಮೀದ್ ದಳವಾಯಿ ಅವರ ಕಾಲದಲ್ಲಿ ಯಾವ ಪರಿಸ್ಥಿತಿಯಿತ್ತೋ 2017ರ ಹೊತ್ತಿಗೆ ಅದು ಇನ್ನಷ್ಟು ಭೀಕರವಾಗಿದೆ. ಭಾರತೀಯ ಸಂಸ್ಕೃತಿ ತನ್ನನ್ನು ರಕ್ಷಿಸಿಕೊಂಡಿತು. ಆದರೆ ನಾವು ಭೂಭಾಗಗಳನ್ನು ಕಳೆದುಕೊಂಡೆವೆಂದು ಗೋಯಲ್ ಹೇಳುತ್ತಾರೆ. ಧರ್ಮ ನಿರಪೇಕ್ಷತೆಯಿಂದ ಹಿಂದೆ ಆದ ಆಘಾತಗಳನ್ನು ಭಾರತೀಯ ಸಂಸ್ಕೃತಿಯ ಅಂತಃ ಸತ್ವ ದೂರಮಾಡಿತು. ಆದರೆ ಈಗ ಆ ಧೈರ್ಯ ಕಾಣಿಸುತ್ತಿಲ್ಲ. ಭಾರತೀಯ ಸಂಸ್ಕೃತಿಯ ವಿವಿಧ ಮತಧರ್ಮಗಳ ನಿರ್ವಹಣೆಯಲ್ಲಿ ಅದ್ಭುತ ಸಾಮರ್ಥ್ಯವನ್ನು ತೋರಿಸಿದೆ ಎಂದ ಚೈತ್ರ್ರ ಅವರು, ಶಿಶುನಾಳ ಶರೀಫರನ್ನು ಸೂಫಿ ಎನ್ನುವುದು ಸರಿಯಲ್ಲ; ಅವರು ಈ ದೇಶದ ಆಧ್ಯಾತ್ಮ ಪರಂಪರೆಯ ಭಾಗ ಎಂದು ವಿವರಿಸಿದರು. ಭಾರತದ ಇತಿಹಾಸವನ್ನು ಇಂಗ್ಲಿಷರು ತಪ್ಪಾಗಿ ಬರೆದರೆ ಇತಿಹಾಸ(ಹಿಸ್ಟರಿ) ಮತ್ತು ಗತಗಳ ನಡುವೆ ವ್ಯತ್ಯಾಸವಿದೆ; ನಮಗೆ ಗತ(ನಡೆದ ವಾಸ್ತವ) ಬೇಕಾಗಿದೆ.
ರಾಮಾಯಣ, ಮಹಾಭಾರತಗಳು ಇತಿಹಾಸದ ಉತ್ತಮ ಮಾದರಿಗಳು ಎಂದ ಅವರು ಇತಿಹಾಸ ದಾರಿ ತಪ್ಪಿದನ್ನು ಗೋಯಲ್ ಮತ್ತು ಹಮೀದ್ ದಳವಾಯಿ ಗುರುತಿಸಿದ್ದಾರೆ ಎಂದು ಹೇಳಿದ್ದಾರೆ. ಪುಸ್ತಕಗಳ ಅನುವಾದವನ್ನು ಶ್ಲಾಘಿಸಿದರು.

Sri M S Chaitra speaking about the released books

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಅವರು, ಈ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಬೇಕೆಂದು ಪರಿಷತ್ ಬಹಳ ಹಿಂದೆಯೇ ಯೋಚಿಸಿತ್ತು. ಹಮೀದ್ ದಳವಾಯಿ ಅವರ ಪುಸ್ತಕ 50 ವರ್ಷಗಳ ಬಳಿಕ ಪ್ರಕಟವಾಗುತ್ತಿದೆ. ಆಗ ಅದು ಸಂಚಲನೆಯನ್ನು ಉಂಟುಮಾಡಿತ್ತು ಎಂದರು.
ವಾಯ್ಸ್ ಆಫ್ ಇಂಡಿಯಾ ಪುಸ್ತಕಗಳ ಮೂರು ಸರಣಿಗಳನ್ನು ಪ್ರಕಟಿಸಲಾಗಿದೆ. ರಾಂ ಸ್ವರೂಪ್ ಮತ್ತು ಸೀತಾರಾಮ ಗೋಯಲ್ ಅವರು ಸಂಶೋಧನೆ ಮಾಡಿ ಬರೆದರು. ಕಷ್ಟದಲ್ಲಿ ಪ್ರಕಟಿಸಿದರು; ಮುಂದಿನ ಅರುಣ್ ಶೌರಿ ಮುಂತಾದವರಿಗೆ ಅವರೇ ಸ್ಪೂರ್ತಿ ಎಂದ ರಾಮಸ್ವಾಮಿ ಅವರು, ಅಕಾಡೆಮಿಗಳ ಪೀಠಸ್ಥರು ಈ ಪುಸ್ತಕಗಳ ಬಗ್ಗೆ ಜಾಣಕುರುಡನ್ನು ತೋರಿಸುತ್ತಾರೆ; ಅವರ ಕೂಪಮಂಡೂಕ ಸ್ಥಿತಿ ಹಾಸ್ಯಾಸ್ಪದ ಎಂದು ಟೀಕಿಸಿದರು.

Rashtrotthana Parishat President Sri S R Ramaswamy
ಪ್ರಸ್ತಾವನೆಗೈದ ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಗೌರವ ಸಂಪಾದಕ ಮಂಜುನಾಥ ಅಜ್ಜಂಪುರ ಅವರು, ಎಂಟು ವರ್ಷಗಳ ಹಿಂದೆ ಸರಣಿ ಆರಂಭವಾಗಿದ್ದು ಇದರಲ್ಲಿ 14 ಪುಸ್ತಕಗಳು ಪ್ರಕಟವಾಗಿವೆ ಎಂದರು.
ಸೈನಿಕರನ್ನು ಟೀಕಿಸುವುದು, ಅವರ ಮೇಲೆ ಕಲ್ಲೆಸೆಯುವುದು, ಸಂಸತ್ ಮೇಲೆ ದಾಳಿ ಮಾಡಿದ ದೇಶದ್ರೋಹಿಗಳನ್ನು ಬೆಂಬಲಿಸುವುದು ಮುಂತಾದ ಈಚಿನ ಪ್ರವೃತ್ತಿಗಳನ್ನು ಆಕ್ಷೇಪಿಸಿದ ಅವರು, ಕಳೆದ 70 ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಆಗಲಿಲ್ಲ; ಎಲ್ಲರನ್ನು ಪ್ರೀತಿಯಿಂದ ನೋಡುವ ಧರ್ಮ ನಮ್ಮ ಸನಾತನ ಧರ್ಮ ಎಂದರು ರಾಷ್ಟ್ರೋತ್ಥಾನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಸ್ವಾಗತಿಸಿದರು. ಜಿ.ಆರ್. ಸಂತೋಷ್ ವಂದಿಸಿದರು.

 

Rashtrotthana Parishat Secretary Sri Na Dinesh Hegde

Senior writer, RSS thinker Sri Chandrashekhar Bhandari felicitated

 

Previously releases books in Kannada on Voice of India Series
Introduction of books released today

ವರದಿ: ಅನಿಲ್ ಕುಮಾರ್ ಕುಂದಾಪುರ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS expresses deep condolences on the murder of Journalist Gauri Lankesh

Tue Sep 5 , 2017
Bengaluru, Sep 5, 2017: Press release by RSS Kshetriya Sanghachalak, Sri V Nagaraj on the murder of Ms Gauri Lankesh in Bengaluru today. RSS expresses deep condolences and strongly condemns  the brutal murder of  Journalist, Ms Gauri Lankesh. RSS appeals the State Government to act soon on the criminals responsible […]