R

ಇಂದಲ್ಲದಿದ್ದರೆ ಮತ್ತೆಂದು?

ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಶ್ರೀ ಜಿ ಆರ್ ಸಂತೋಷ ಅವರ ಲೇಖನ

ಇದೇ ವರ್ಷದ 6 ನವೆಂಬರ್ ಅಯೋಧ್ಯೆಯಲ್ಲಿ ಹೊಸ ಉತ್ಸಾಹ ಮನೆ ಮಾಡಿತ್ತು. ಅಂದು ದೀಪಾವಳಿಯ ಸಡಗರ. ಅದು ಎಂದಿನ ದೀಪಾವಳಿಯಂತಿರಲಿಲ್ಲ. ಒಂದು ರೀತಿ ಹೊಸ ಶಕೆಯ ಆರಂಭದಂತಿತ್ತು. ಕಾರಣ ಅಂದು ಶ್ರೀರಾಮ ಜನಿಸಿದ ಪವಿತ್ರ ಸ್ಥಾನ ಇರುವ ಜಿಲ್ಲೆಯು ಫೈಜಾಬಾದ್ ಎಂಬ ತನ್ನ ಗುಲಾಮಗಿರಿ ಸಂಕೇತಿಸುವ ಹೆಸರನ್ನು ಅಳಿಸಿಕೊಂಡು ಅಯೋಧ್ಯಾ ಎಂದು ಮರುನಾಮಕರಣ ಗೊಂಡಿತು. ಅನೇಕರಿಗೆ ಇದೊಂದು ಅನಗತ್ಯ ಕಸರತ್ತು, ಹೆಸರಿನಲ್ಲೇನಿದೆ? ಎನಿಸಬಹುದು. ಆದರೆ ನಿಜವಾದ ಅಸ್ಮಿತೆಯಿರುವುದೇ ನಮ್ಮ ಶ್ರದ್ಧಾಕೇಂದ್ರಗಳಲ್ಲಿ. ಅಂತಹ ಶ್ರದ್ಧಾಕೇಂದ್ರಗಳ ಹೆಸರು, ಪರಿಸರಗಳೇ ವಿದೇಶಿಯತೆಯನ್ನೋ, ನಮ್ಮ ದೌರ್ಬಲ್ಯವನ್ನೋ ಸೂಚಿಸುವಂತಿದ್ದರೆ ಪ್ರೇರಣೆ ಹೇಗೆ ದೊರಕೀತು? ನಮ್ಮತನದ ಮೇಲೆ ಅಭಿಮಾನ ಹೇಗೆ ಉಕ್ಕಿ ಹರಿದೀತು? ಅದಕ್ಕೆಂದೇ ಇಂತಹ ಮರುನಾಮಕರಣಗಳು ಮಹತ್ವದ್ದೆನಿಸುವುದು.
ಬರೀ ಹೆಸರೊಂದೇ ಅಲ್ಲ ಮುಖ್ಯಮಂತ್ರಿ ಯೋಗಿಯವರ ಕಾಳಜಿಯಿಂದಾಗಿ ಅಯೋಧ್ಯೆಯಲ್ಲಿಂದು ಪರಿವರ್ತನೆಗಳ ಮಹಾ ಅಲೆಯೇ ಎದ್ದಿದೆ. ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ಘೋಷಿತವಾಗಿದೆ. ಮಹತ್ವಾಕಾಂಕ್ಷೆಯ ಶ್ರೀರಾಮ ಕಥಾ ಮ್ಯೂಸಿಯಂನ ನವೀಕರಣ, ದರ್ಶಕರಿಗೆ ಹೆಚ್ಚಿನ ಸೌಕರ್ಯಗಳು, ದಿಗಂಬರ ಅಖಾಡದಲ್ಲಿ ಬಹುಪಯೋಗಿ ಸಭಾಂಗಣ, ಸರಯೂ ನದಿ ತೀರದ ವಿವಿಧ ಸ್ನಾನ ಘಟ್ಟಗಳ ಅಭಿವೃದ್ಧಿ, ಅನೇಕ ಘಟ್ಟಗಳಲ್ಲಿ ಸೋಲಾರ್ ಲೈಟುಗಳ ಅಳವಡಿಕೆ ಇವೆಲ್ಲವೂ ಯೋಜನೆಯಲ್ಲಿದೆ. ಇದರೊಟ್ಟಿಗೆ ಘನತಾಜ್ಯಗಳ ಸಂಸ್ಕರಣ ಘಟಕಗಳು, ಕೊಳಚೆ ನೀರು ಸರಯೂ ನದಿಗೆ ಸೇರದಂತೆ ಸಮರ್ಪಕ ಒಳಚರಂಡಿ ವ್ಯವಸ್ಥೆ, ಅಯೋಧ್ಯೆಯ ನಗರ ಕೇಂದ್ರದಿಂದ ಪ್ರಮುಖ ದೇವಾಲಯಗಳಿಗೆ ಹೊಸ ರಸ್ತೆಗಳು ಇವೆಲ್ಲವೂ ನಿರ್ಮಾಣಗೊಳ್ಳಲಿದೆ.
ಇದರೊಟ್ಟಿಗೆ ಇಡಿ ನಗರದ ಮೇಲ್ಬಾಗದಲ್ಲಿ ಹರಡಿಕೊಂಡಿರುವ ವಿದ್ಯುತ್ ಕೇಬಲ್ ಗಳನ್ನು ನೆಲದಾಳದಲ್ಲಿ ಸುರಕ್ಷಿತವಾಗಿ ಅಳವಡಿಸುವುದು, ಸುಸಜ್ಜಿತ ಮೆಡಿಕಲ್ ಕಾಲೇಜು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಮಾನ ನಿಲ್ದಾಣ ಇವೆಲ್ಲವೂ ಸೇರಿ 175 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ಚಾಲನೆಗೊಳ್ಳಲಿವೆ. ಪ್ರಭು ಶ್ರೀರಾಮನ ಬೃಹತ್ ಪ್ರತಿಮೆ ತಲೆಯೆತ್ತಿ ನಿಲ್ಲಲಿದೆ.

ನಿಜ ಇವೆಲ್ಲವೂ ಅಯೋಧ್ಯೆಯ ಇಂದಿನ ಚಿತ್ರಣವನ್ನೇ ಬದಲಿಸಿ ಬಿಡಬಹುದು. ಪ್ರವಾಸಿಗಳಿಗೆ ಹೊಸ ಆಕರ್ಷಣೆಯನ್ನೂ ತರಬಹುದು. ಆದರೆ ಇವೆಲ್ಲಕ್ಕಿಂತ ಬಹುಮುಖ್ಯವಾದುದನ್ನು ದೇಶ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಹರಡಿರುವ ಹಿಂದುಗಳು ಬಯಸುತ್ತಿದ್ದಾರೆ. ಡಿಸೆಂಬರ್ 6, 1992ರ ಕರಸೇವೆಯ ದಿನದಂದು ಮಹತ್ತರವಾಗಿ ಪ್ರಕಟಗೊಂಡ ಹಿಂದೂ ನವಚೈತನ್ಯ ಶಕ್ತಿಯು ಶತಶತಮಾನಗಳ ಕಳಂಕವಾಗಿ ನಿಂತಿದ್ದ ಮೂರು ಗುಂಬಸ್ ಗಳನ್ನು ಧರೆಗುರುಳಿಸಿತು. ಅವಮಾನ ಕಳೆಯಿತು. ಆ ನಡುರಾತ್ರಿಯಲ್ಲಿಯೇ ಟೆಂಟ್ ಗಳ ಸಹಾಯದಿಂದ ಪುಟ್ಟ ಗುಡಿಯೊಂದರ ನಿರ್ಮಾಣವೂ ಆಗಿ ಶ್ರೀರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ಗೊಂಡಿತು.
ಹೀಗೆ 26 ವರ್ಷಗಳಹಿಂದೆ ತಾತ್ಕಾಲಿಕ ಡೇರೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪ್ರಭು ಶ್ರೀರಾಮನ ವಿಗ್ರಹ ನಿರಂತರವಾಗಿ ಪೂಜೆಗೊಳ್ಳುತ್ತಿರುವುದು ತಿಳಿದದ್ದೇ, ಭಯೋತ್ಪಾದಕರ ಅನೇಕ ಬಾಂಬ್ ಸ್ಫೋಟದ ಪ್ರಯತ್ನಗಳ ನಡುವೆಯೂ ಕೂದಲೂ ಕೊಂಕದಂತೆ ಸುರಕ್ಷಿತವಾಗಿರುವುದು ಸಮಾಧಾನ ನೀಡುವ ಅಂಶವೇ ಆಗಿದೆ. ಆದರೆ ಮರ್ಯಾದಾ ಪುರುಷೋತ್ತಮನೆಂದು ಸಮಸ್ತ ಮನುಕುಲಕ್ಕೆ ಆದರ್ಶಪ್ರಾಯನಾದ, ಭಾರತೀಯ ಸಂಸ್ಕೃತಿಯ ಮೇರು ಶಿಖರವಾದ ಪ್ರಭು ಶ್ರೀರಾಮನಿಗೆ ನಾವು ನಿರ್ಮಿಸಬೇಕಾಗಿರುವ ದೇವಾಲಯ ಈ ರೀತಿಯದೇ? ಎಂಬುದು ಚಿಂತಿಸಬೇಕಾದ ವಿಷಯ. ದೇಶದ ಮೂಲೆಮೂಲೆಗಳಲ್ಲಿ ಅನೇಕ ಭವ್ಯ ರಾಮಮಂದಿರಗಳಿವೆ, ಆದರೆ ಆತನ ಜನ್ಮಸ್ಥಾನದಲ್ಲಿ ಮಾತ್ರ ಅರೆಬರೆ ಮಿಲಿಟರಿ ಗುಡಾರದಲ್ಲಿ ಶ್ರೀರಾಮಚಂದ್ರನಿಗೆ ನಿವಾಸ, ಇಲ್ಲಿಯೇ ಪೂಜಾಪುನಸ್ಕಾರಗಳು. ಬಹು ದೂರದಿಂದಲೇ ಭಕ್ತರ ನಮಸ್ಕಾರಗಳು. ಇದು ಖಂಡಿತ ದೇಶದ ಜನರ ಭಾವನೆಗಳಿಗೆ ಘಾಸಿ ಮಾಡುವಂತಹದ್ದೇ ಆಗಿದೆ. ಭಾರತದಲ್ಲಿ, ಅದೂ ಆತನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಒಂದು ಭವ್ಯ ಮಂದಿರ ನಿರ್ಮಿಸಲಾಗದಿದ್ದಲ್ಲಿ ಇನ್ನೆಲ್ಲಿ ನಿರ್ಮಿಸಿದರೂ ಅದೊಂದು ಕೊರತೆಯಾಗಿಯೇ ಉಳಿದು ಬಿಡುತ್ತದೆ.
ರಾಮಜನ್ಮಭೂಮಿ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಾಮಜನ್ಮಭೂಮಿ ನ್ಯಾಸದ ಮಹಂತ ನೃತ್ಯಗೋಪಾಲ ದಾಸರು 2019 ಮುಗಿಯುವುದರೊಳಗಾಗಿ ದೇವಾಲಯ ನಿರ್ಮಾಣವಾಗಬೇಕು ಎಂದು ಭಕ್ತರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸರ್ಕಾರ ನಡೆಸುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಆದರೆ ಅಲ್ಲಿ ಮಂದಿರ ಭವ್ಯ ರಾಮ ಮಂದಿರ ತಲೆಯೆತ್ತದಿದ್ದರೆ ಈ ಅಭಿವೃದ್ಧಿಗೆ ಸಾರ್ಥಕತೆಯಿಲ್ಲ ಎಂಬುದು ಪ್ರತಿಯೊಬ್ಬ ಅಯೋಧ್ಯಾವಾಸಿಯ ಮತ್ತು ರಾಮಭಕ್ತರ ಅಭಿಪ್ರಾಯ.
ಜನರ ನಿರೀಕ್ಷೆಯೂ ಯೋಗಿ ಮತ್ತು ಮೋದಿಯವರ ಜೋಡಿ ನಿಜಕ್ಕೂ ಈ ವಿಷಯದಲ್ಲಿ ದೃಢನಿರ್ಧಾರ ಕೈಗೊಳ್ಳ ಬಹುದು ಎಂದಿದೆ. ಅದಕ್ಕೆ ತಕ್ಕಂತೆ ಅನೇಕ ಬಾರಿ ಯೋಗಿ ಆದಿತ್ಯನಾಥರು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂದಲ್ಲದಿದ್ದಲ್ಲಿ ಮತ್ತಿನ್ಯಾವಾಗ? ಎಂಬುದು ಸಾಮಾನ್ಯರ ಪ್ರಶ್ನೆ. ಮಂದಿರ ನಿರ್ಮಾಣದ ಕುರಿತು ಯಾವುದೇ ಹೇಳಿಕೆಗಳು ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಿಂದ ಬರದಿದ್ದರೂ ನಮಗರಿವಿಲ್ಲದೇ ಮಹತ್ತರ ಸಿದ್ಧತೆಗಳು ಸಾಗುತ್ತಿವೆ ಎಂದೇ ಜನಸಾಮಾನ್ಯರು ಭಾವಿಸಿದ್ದಾರೆ.
ನೂರಾರು ಕರಸೇವಕರ ಬಲಿದಾನ, ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ 500 ವರ್ಷಗಳ ಧೀರ್ಘ ಸಂಘರ್ಷದಲ್ಲಿ ಸರಿಸುಮಾರು 75ಕ್ಕೂ ಹೆಚ್ಚು ಯುದ್ಧಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರಾಮಭಕ್ತರು ಈ ಮಂದಿರಕ್ಕಾಗಿ ಬಲಿದಾನ ಮಾಡಿದ್ದಾರೆ. ಈ ತ್ಯಾಗಕ್ಕೆ ಅರ್ಥ ಸಿಗುವುದು ಭವ್ಯ ಮಂದಿರ ತಲೆಯೆತ್ತಿದಾಗಲೇ. ಅದೇ ಅವರಿಗೆ ನೀಡಬಹುದಾದ ಅತ್ಯುನ್ನತ ಸ್ಮಾರಕ. ಸರಯೂ ನದಿಯ ಸಹಸ್ರದಾರಾ ಘಾಟ್ನಲ್ಲಿ ಪ್ರತಿನಿತ್ಯ 1054 ದೀಪಗಳನ್ನು ಹಚ್ಚುವುದರ ಮೂಲಕ ಮಹಾ ಆರತಿ ಮಾಡುವ ಮಹಂತ್ ಶಶಿಕಾಂತ ದಾಸರು ಈ ಬಾರಿ ನಡೆದ ಭವ್ಯ ದೀಪೋತ್ಸವವು ಭವ್ಯ ಮಂದಿರ ನಿರ್ಮಾಣದ ಮೊದಲ ಹೆಜ್ಜೆ ಎಂದೇ ವ್ಯಾಖ್ಯಾನಿಸಿದ್ದಾರೆ. ಏಕೆಂದರೆ ಆದಿತ್ಯನಾಥರು ಮುಖ್ಯಮಂತ್ರಿಯಾಗಿದ್ದರೂ ಅವರು ಧರ್ಮಶ್ರದ್ಧೆಯುಳ್ಳ ಯೋಗಿ, ಹೀಗಾಗಿ ಅವರ ಮೇಲೆ ಭರವಸೆ.
ಒಟ್ಟಿನಲ್ಲಿ ದೇಶದ ಜನತೆ ಆದಷ್ಟು ಶೀಘ್ರವಾಗಿ ತಮ್ಮ ಕಾಯುವಿಕೆ ಕೊನೆಯಾಗಿ ಪ್ರಭು ಶ್ರೀರಾಮ ಚಂದ್ರನನ್ನು ಆತನ ಜನ್ಮಸ್ಥಾನದಲ್ಲಿಯೇ ನಿರ್ಮಿತಗೊಂಡ ಭವ್ಯ ದೇವಸ್ಥಾನದಲ್ಲಿ ಪ್ರತಿಷ್ಠಿತನಾಗಿರುವುದನ್ನು ದರ್ಶಿಸಬೇಕೆಂದಿದ್ದಾರೆ. ತಮ್ಮ ವಿಜಯದಶಮಿಯ ಭಾಷಣದಲ್ಲಿ ಸಂಘದ ಸರಸಂಘಚಾಲಕರಾದ ಮೋಹನ್ ಜೀ ಭಾಗವತರು ಸಹ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ಆದರೆ ಈ ವಿವಾದವಿಂದು ಕೋರ್ಟ್ ನಲ್ಲಿದೆ. ಮಹಾಂತ್ ರಘುವೀರ್ ದಾಸರು ರಾಮಜನ್ಮಭೂಮಿಯ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲೆಂದು 1885ರಲ್ಲಿ ಆಗಿನ ಬ್ರಿಟಿಷ್ ನ್ಯಾಯಾಲಯದಲ್ಲಿ ಸಿವಿಲ್ ಕೇಸನ್ನು ದಾಖಲಿಸಿದ್ದರು. ಸ್ವಾತಂತ್ರ್ಯಾನಂತರದ ನ್ಯಾಯಾಲಯಗಳಲ್ಲಿಯೇ ಅನೇಕ ಮೊಕದ್ದಮೆಗಳು ದಾಖಲಾಗಿ ಏಳುದಶಕಗಳಾದರೂ ಇಂದಿಗೂ ಅಂತಿಮ ಎಂಬ ತೀರ್ಪು ಬಂದಿಲ್ಲ. ಬಂದಿರುವ ಮಧ್ಯಂತರ ತೀರ್ಪುಗಳು ಸ್ಪಷ್ಟತೆಯಿಲ್ಲದೇ ಅಡ್ಡಗೊಡೆಯ ಮೇಲೆ ದೀಪಗಳಿಟ್ಟಂತಿವೆ. ಇದು ಹಿಂದೂಗಳದ್ದು, ಪುರಾತನ ದೇವಾಲಯ ಇಲ್ಲಿತ್ತು ಎಂದು ನ್ಯಾಯಾಧೀಶರೇ ಉಲ್ಲೇಖಿಸಿದ್ದರೂ, ವಿವಾದಿತ ಪ್ರದೇಶದ ಮೂರನೇ ಒಂದು ಭಾಗವನ್ನು ಮುಸಲ್ಮಾನರಿಗೆ ನೀಡಬೇಕು ಎಂಬ ವಿಚಿತ್ರ ತೀರ್ಪನ್ನೂ ಈ ನ್ಯಾಯಾಲಯಗಳು ನೀಡಿವೆ.
ತೀರಾ ಇತ್ತೀಚೆಗೆ ಹಿಂದೂ ಧರ್ಮಕ್ಕೆ ಅಪಚಾರವೆಸಗುವಂತಹ, ಹಿಂದುಗಳ ನಂಬಿಕೆಗಳನ್ನು ಅಲುಗಾಡಿಸುವಂತಹ ಕೇಸುಗಳನ್ನು ಆದ್ಯತೆಯ ಮೇಲೆ ಎಂಬಂತೆ ಕೈಗೆತ್ತಿಕೊಂಡು ಆತುರದ ತೀರ್ಪುಗಳನ್ನು ನೀಡುತ್ತಿರುವ ನ್ಯಾಯಾಲಯವು ಅಯೋಧ್ಯೆಯ ರಾಮಮಂದಿರದ ವಿಷಯವನ್ನು ಮಾತ್ರ ವಿಚಾರಣೆಗೆ ಕೈಗೆತ್ತಿಕೊಳ್ಳದೇ ಇದು ಆದ್ಯತೆಯ ವಿಷಯವಲ್ಲ ಎಂದು ಹೇಳಿರುವುದು ಖೇದನೀಯ. ದೇವಾಲಯ ಸಂಪ್ರದಾಯಕ್ಕೆ ವಿರುದ್ಧವಾಗಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಕಲ್ಪಿಸಲು ಅತ್ಯುತ್ಸಾಹ ತೋರಿಸುವ ನ್ಯಾಯಾಲಯಗಳು, ಹಿಂದೂ ಶ್ರದ್ಧಾ ಕೇಂದ್ರವಾದ ರಾಮಜನ್ಮಭೂಮಿಯ ಕುರಿತು ವಿಚಾರಣೆ ನಡೆಸಲು ವಿಳಂಬ ತೋರುತ್ತಿರುವುದು ಇಬ್ಬಗೆಯ ನೀತಿಯಾಗಿದೆ. ಹುಸಿ ಜಾತ್ಯಾತೀತ, ಎಡಪಂಥೀಯ ವಿಚಾರಧಾರೆಯ ಪ್ರಭಾವ ನ್ಯಾಯಾಲಯಗಳ ಮೇಲೂ ಆಗಿದೆಯೇ? ಎಂಬ ಭಾವನೆಯಿಂದ ಸಾಮಾನ್ಯ ಹಿಂದುಗಳು ವಿಶ್ವಾಸವನ್ನೇ ಕಳೆದುಕೊಳ್ಳುವ ಸ್ಥಿತಿ ಬಂದಿದೆ.
ಸಕಲ ಸಾಕ್ಷ್ಯಗಳು ಮಂದಿರದ ಪರವಾಗಿಯೇ ಇದ್ದರೂ ಮೀನಮೇಷ ಎಣಿಸುವ ಈ ವ್ಯವಸ್ಥೆಯ ಮೂಲಕ ದೇವಾಲಯದ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಗುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಅಲ್ಲದೆ ಹಿಂದೂಜನತೆಯ ಸಹನೆಯೂ ಕುದಿಬಿಂದುವಿಗೆ ಬಂದಿದೆ. ಅದು ಮತ್ತೊಮ್ಮೆ ಆಸ್ಫೋಟವಾಗುವ ಮುನ್ನ ಮಂದಿರ ನಿರ್ಮಾಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸಕಾರಾತ್ಮಕ ಬೆಳವಣಿಗೆಯಾಗುತ್ತದೆ. ಈ ಮಂದಿರದ ವಿವಾದವನ್ನು ಒಂದು ಆಯೋಗದಿಂದ ಇನ್ನೊಂದು ಆಯೋಗಕ್ಕೆ, ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ, ಒಂದು ಮೇಲ್ಮನವಿಯಿಂದ ಮತ್ತೊಂದು ಮೇಲ್ಮನವಿಗೆ, ಒಂದು ತೀರ್ಪಿನಿಂದ ಮತ್ತೊಂದು ತೀರ್ಪಿಗೆ ದಾಟಿಸುತ್ತಾ ಸಮಯ ವ್ಯರ್ಥಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಯ ಪರಿಹಾರದ ಮಾರ್ಗಗಳ ಕುರಿತು ಕೇಂದ್ರ ಸರ್ಕಾರ ಚಿಂತಿಸಬೇಕಾಗಿದೆ. ಹೊಸ ಕಾನೂನು, ಸುಗ್ರೀವಾಜ್ಞೆಗಳ ಮುಖಾಂತರ ದೇವಾಲಯ ನಿರ್ಮಾಣಕ್ಕೆ ಆದಷ್ಟು ಶೀಘ್ರವಾಗಿ ತೊಡಬೇಕಾಗಿದೆ. ಇದು ಇಂದಿನ ಅನಿವಾರ್ಯವೂ ಹೌದು, ರಾಮಭಕ್ತರು ಇನ್ನೆಷ್ಟು ದಿನ ಕಾಯಲು ಸಾಧ್ಯ?

– ಸಂತೋಷ್ ಜಿ ಆರ್