ಎಬಿಪಿಎಸ್ ನಲ್ಲಿ ಇಂದು ತೆಗೆದುಕೊಂಡಿರುವ ನಿರ್ಣಯ: 

ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯವಿದೆ.

’ಭಾಷೆ ಎಂಬುದು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು, ಸಂಸ್ಕೃತಿಯನ್ನು ಗುರುತಿಸುವ ಬಹು ಮುಖ್ಯ ಅಂಶವಾಗಿದೆ’ ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭೆಯ  ಸ್ಪಷ್ಟ ನಿಲುವಾಗಿದೆ. ನಮ್ಮ ಸಂಸ್ಕೃತಿ, ಉದಾತ್ತ ಸಂಪ್ರದಾಯಗಳು, ಅತ್ಯುತ್ತಮ ಜ್ಞಾನ, ವ್ಯಾಪಕವಾದ ಸಾಹಿತ್ಯ ಇವುಗಳನ್ನು ಪಸರಿಸಲು, ಉಳಿಸಲು, ಸೃಜನಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಲು ನಮ್ಮ ದೇಶದ ವಿವಿಧ ಭಾಷೆಗಳು ಮತ್ತು ಉಪಭಾಷೆಗಳು ಅತ್ಯಗತ್ಯವಾಗುತ್ತವೆ. ನಮ್ಮ ಭಾರತೀಯ ಭಾಷೆಗಳಲ್ಲಿ ಮೌಖಿಕವಾಗಿ ಹರಿದು ಬಂದ ಜನಪದ ಸಾಹಿತ್ಯ, ಹಾಡು, ನುಡಿಗಟ್ಟು, ಗಾದೆಗಳ ಸಂಖ್ಯೆಯು ಬರಹದ ಮೂಲಕ ಹರಡಿರುವ ಸಾಹಿತ್ಯಕ್ಕಿಂತಲೂ ಹೆಚ್ಚು. ಇಂದು ಭಾರತೀಯ ಭಾಷೆಗಳನ್ನು ಬಳಸದೇ ವಿದೇಶೀ ಶಬ್ದಗಳನ್ನು ಬಳಸುತ್ತಾ ಹೋದಂತೆ ಭಾರತೀಯ ಭಾಷೆಗಳಿಗೆ ಅಪಾಯ‌ ಎದುರಾಗಿದೆ. ದೇಶದ ಎಷ್ಟೋ ಭಾಷೆಗಳು, ಉಪಭಾಷೆಗಳು ಅಳಿವಿನ ಅಂಚಿಗೆ ಇಂದು ಬಂದಿವೆ. ಸರಕಾರಗಳು, ನೀತಿ ನಿರೂಪಕರು, ಸ್ವಯಂಸೇವಾ ಸಂಸ್ಥೆಗಳು, ಹಾಗೂ ಬಹು ಮುಖ್ಯವಾಗಿ ಸಮಾಜವೂ ಈ ವಿಷಯದಲ್ಲಿ ಜಾಗರೂಕರಾಗುವುದಲ್ಲದೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಭಾರತೀಯ ಭಾಷೆಗಳನ್ನು ಉಳಿಸುವ ಹಾಗೂ ಬೆಳೆಸುವ ಕೆಲಸವನ್ನು ಮಾಡಬೇಕಿರುವ ಅಗತ್ಯವಿದೆ.

ಈ ಕೆಳಕಂಡ ಪ್ರಯತ್ನಗಳನ್ನು ಮಾಡಬೇಕೆಂಬುದು ಪ್ರತಿನಿಧಿ ಸಭೆಯ ಅಭಿಮತ :

  1. ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾರತೀಯ ಭಾಷೆಗಳಲ್ಲೇ ಆಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಸೂಕ್ತ ನೀತಿಗಳನ್ನು ರೂಪಿಸಬೇಕು, ಪೋಷಕರೂ ತಮ್ಮ ಮಕ್ಕಳನ್ನು ಭಾರತೀಯ ಭಾಷೆಯ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಹಕರಿಸಬೇಕು.
  2. ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೂ ಭಾರತೀಯ ಭಾಷೆಗಳಲ್ಲಿ ಪುಸ್ತಕಗಳು ಹೊರಬರಬೇಕು. ಪರೀಕ್ಷೆಗಳೂ ನಮ್ಮ ಭಾಷೆಗಳಲ್ಲಿಯೇ ನಡೆಯಬೇಕು.
  3. ನೀಟ್, ಯುಪಿಎಸ್ಸಿ ಪರೀಕ್ಷೆಗಳು ಭಾರತೀಯ ಭಾಷೆಗಳಲ್ಲಿ ನಡೆಯುವುದು ಸ್ವಾಗತಾರ್ಹ. ಅಂತೆಯೇ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಭಾರತೀಯ ಭಾಷೆಗಳಲ್ಲಿಯೇ ನಡೆಸಬೇಕು.
  4. ಸರಕಾರಿ ಸಂಸ್ಥೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡಬೇಕು. ಆಂಗ್ಲ ಭಾಷೆಗೆ ಆಧ್ಯತೆ ಕೊಡದೇ ಭಾರತೀಯ ಭಾಷೆಗಳನ್ನು ಉತ್ತೇಜೆಸುವ ಕೆಲಸ, ಸರಕಾರಿ, ಸರಕಾರೇತರ ಸಂಸ್ಥೆಗಳಲ್ಲಿ ಬಡ್ತಿಗಳಿಗೆ, ಅಲ್ಲಿಯ ಕಾರ್ಯಕ್ರಮಗಳಲ್ಲಿ, ಸಮರ್ಪಕವಾಗಿ ನೀಡಬೇಕು.
  5. ಸ್ವಯಂಸೇವಕರು ಸೇರಿದಂತೆ ಇಡೀ ಸಮಾಜ ತಮ್ಮ ದೈನಂದಿನ ಸಂವಹನಕ್ಕೆ ಮಾತೃ ಭಾಷೆಯನ್ನು ಬಳಸಲು ಮುಂದಾಗಬೇಕು. ಮಾತೃಭಾಷೆಯಲ್ಲಿನ ಸಾಹಿತ್ಯಗಳನ್ನು ಓದುವ ಸಂಸ್ಕಾರ ರೂಢಿಸಿಕೊಳ್ಳಬೇಕು. ಅಲ್ಲದೇ ಭಾರತೀಯ ಭಾಷೆಯ ನಾಟಕಗಳು, ಸಂಗೀತ, ಜಾನಪದ ಸಾಹಿತ್ಯವನ್ನು ಹೆಚ್ಚು ಉತ್ತೇಜಿಸಬೇಕು, ಪ್ರೋತ್ಸಾಹಿಸಬೇಕು.
  6. ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ, ಗೌರವವಿರಿಸಿಕೊಳ್ಳುವುದರ ಜೊತೆಗೆ, ಇತರೆ ಭಾರತೀಯ ಭಾಷೆಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಭಾಷೆಗಳು ಭಾರತೀಯ ಸಮಾಜವನ್ನು ಒಗ್ಗೂಡಿಸುವಲ್ಲಿ ಪಾತ್ರ ನಿರ್ವಹಿಸಿವೆ.
  7. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರತೀಯ ಭಾಷೆ, ಉಪಭಾಷೆ, ಲಿಪಿಗಳನ್ನು ಉಳಿಸಿ, ಬೆಳೆಸುವಲ್ಲಿ ಮಹತ್ವದ ಯೊಜನೆಗಳನ್ನು ರೂಪಿಸಬೇಕು.

ವಿವಿಧ ದೇಶಗಳ ಭಾಷೆಗಳನ್ನು ಜ್ಞಾನದ ವೃದ್ಧಿಗಾಗಿ ಕಲಿಯುವುದನ್ನು ಪ್ರತಿನಿಧಿ ಸಭೆಯು ಒಪ್ಪುತ್ತದೆ. ಭಾರತದಂತಹ ಬಹುಭಾಷಾ ದೇಶದಲ್ಲಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯವಿದೆ.  ಪ್ರತಿನಿಧಿ ಸಭೆಯು ಸರಕಾರಗಳಿಗೆ, ಸರಕಾರೇತರ ಸಂಸ್ಥೆಗಳಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ, ಮಾಧ್ಯಮಗಳಿಗೆ, ವಿವಿಧ ಸಮುದಾಯದ ಮುಖಂಡರಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ ಭಾರತೀಯ ಭಾಷೆಗಳನ್ನು ಅಸ್ಖಲಿತವಾಗಿ, ವ್ಯಾಕರಣ ಶುದ್ಧವಾಗಿ ಬಳಸಿ ಅದರಲ್ಲಿನ ವಿಶೇಷ ಪದಪುಂಜಗಳನ್ನು, ಸಾಹಿತ್ಯವನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುತ್ತದೆ.