ನ ಕೃಷ್ಣಪ್ಪನವರ ಬದುಕು ಭಗವಂತನ ಪೂಜೆಗೆ ಸಮರ್ಪಿತವಾದ ಪುಷ್ಪ

ಹಿರಿಯ ಪ್ರಚಾರಕ ನ ಕೃಷ್ಣಪ್ಪನವರರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ಬಿಡುಗಡೆ ಕಾರ್ಯಕ್ರಮದ ವರದಿ.

ಬೆಂಗಳೂರು, ೧೨ ಆಗಸ್ಟ್ ೨೦೧೮: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನ ಕೃಷ್ಣಪ್ಪವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ದ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಪುರಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ ಮೋಹನ್‌ರಾವ್‌ ಭಾಗವತ್‌, ಹಿರಿಯ ಸಾಹಿತಿ ಚಿಂತಕ ಡಾ ಎಸ್‌ ಎಲ್‌ ಭೈರಪ್ಪ, ರಾ ಸ್ವ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಲೇಖಕ  ಹಾಗೂ ಹಿರಿಯ ಪ್ರಚಾರಕ ಚಂದ್ರಶೇಖರ ಭಂಡಾರಿ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ ನಾಗರಾಜ, ದಕ್ಷಿಣ ಪ್ರಾಂತ ಸಂಘಚಾಲಕ ವೆಂಕಟರಾಮು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Author Sri Chandrasekhar Bhandari, Sri Dattatreya Hosabale, Sri Mohan Bhagwat, Dr. S L Bhyrappa, Sri V Nagaraj, Sri Ma Venkataramu

ಪುಸ್ತಕದ ಹೂರಣವನ್ನು ಪರಿಚಯಿಸಿದ ರಾಸ್ವಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ – “ಪ್ರಚಾರಕನಾದವನು ಪ್ರಸಿದ್ಧಿ ಪರಾನ್ಮುಖನಾಗಿ ಕೆಲಸ ಮಾಡಬೇಕು. ಹಾಗಾಗಿ ಓರ್ವ ಪ್ರಚಾರಕ ಇನ್ನೋರ್ವ ಪ್ರಚಾರಕನ ಜೀವದ ಕುರಿತು ಬರೆಯುವುದು ಕಷ್ಟದ ಕೆಲಸ. ಈ ಪುಸ್ತಕ ಕೃಷ್ಣಪ್ಪನವರ ಜೀವನ ಬಗ್ಗೆ ಇದೆ. ಅದು ನಿಮಿತ್ತ ಮಾತ್ರ. ಆದರೆ ಅದು ಓರ್ವ ಸಮಾಜಹಿತ ಸಾಧಕ  ಹೇಗೆ ಕೆಲಸ ಮಾಡಿದರು, ಸಮಾಜ ಕಾರ್ಯವನ್ನು ಮಾಡುವಲ್ಲಿ ಆತನ ಜೀವನ ಹೇಗಿರಬಹುದು ಎನ್ನುವ ಕುರಿತು ಸಂಘದ ಕಾರ್ಯಕರ್ತರಿಗೆ, ಅವರ ಮನೆಯವರಿಗೆ ಸಮಾಜದ ಕೆಲಸ ಮಾಡುವವರಿಗೆ ಪ್ರೇರಕ. ಕಾರ್ಯಕರ್ತರಿಗೆ ಕೈದೀವಿಗೆಯಾಗಿ ಮಾರ್ಗದರ್ಶನ ನೀಡುವ ಪುಸ್ತಕವಾಗಿ ಈ ಕೃತಿ ಇದೆ ಎಂದು ನುಡಿದರು.

Sahsarkayavah Sri Dattatreya Hosabale

ಸಂಘದ ಕಾರ್ಯಕ್ಕಾಗಿ ದೇಶಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡ ವ್ಯಕ್ತಿ ಯಾವ ಪ್ರಶಂಸೆ ಪ್ರತಿಫಲವನ್ನು ಬಯಸದೇ ಹೇಗೆ ಸಮಾಜಹಿತ ಕಾರ್ಯದಲ್ಲಿ ನಿರತನಾಗಬಲ್ಲ ಎನ್ನುವುದು ಸಂಘದ ಅಥವಾ ಕೃಷ್ಣಪ್ಪನವರ ಪರಿಚಯ ಇಲ್ಲದೇ ಇರುವವರರಿಗೆ ತಿಳಿಯುತ್ತದೆ : ದತ್ತಾತ್ರೇಯ ಹೊಸಬಾಳೆ.

“ಗ್ರಂಥದ ಲೇಖಕ ನಾನು ಎನ್ನವುದು ಆಂಶಿಕ ಸತ್ಯ. ಕೃಷ್ಣಪ್ಪನವರ ಒಡನಾಡಿಗಳು, ಪರಿಚಯದವರು ಹೇಳಿದ್ದನ್ನು ಸಂಗ್ರಹಿಸಿ ಬರೆದಿದ್ದೇನೆ. ಸಂಘದ ಕಾರ್ಯಕರ್ತರಿಗೆ ಸಂಘವನ್ನು ಅರಿತುಕೊಳ್ಳುವವರಿಗೆ ಇದು ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಪುಸ್ತಕ ರಚನೆಯಾಗಿದೆ.” ಎಂದು ಲೇಖಕ ಚಂದ್ರಶೇಖರ ಭಂಡಾರಿ ನುಡಿದರು.

Sri Chandrashekhar Bhandari

ಅಧ್ಯಕ್ಷೀಯ ನುಡಿಗಳನ್ನಾಡಿದ ಖ್ಯಾತ ಕಾದಂಬರಿಕಾರ ಡಾ. ಎಸ್ ಎಲ್ ಭೈರಪ್ಪನವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇಂಟರ್ ಮೀಡಿಯೇಟ್‌ ಓದುವ ಸಂದರ್ಭದಲ್ಲಿ ಕೃಷ್ಣಪ್ಪನವರ ಜತೆಗಿನ ಒಡನಾಟ ಹಾಗೂ ಇಬ್ಬರ ನಡುವಿನ ಸಂಬಂಧಗಳ ಕುರಿತು ಮೆಲುಕು ಹಾಕಿದರು.

ನನಗೆ ಗಂಭೀರವಾದ ದೊಡ್ಡ ದೊಡ್ಡ ಪುಸ್ತಕಗಳನ್ನು ಚಿಕ್ಕ ವಯಸ್ಸಿನಲ್ಲೆ ಓದುವ  ಅಭ್ಯಾಸ ಬೆಳೆಸಿದ್ದು ಕೃಷ್ಣ, ಆತನನ್ನು ನಾನು ಗುರು ಎಂದೇ ಕರೆಯುತ್ತೇನೆ. ಜನರು ನೀವು ಹೇಗೆ ದೊಡ್ಡ ದೊಡ್ಡ ಪುಸ್ತಕಗಳನ್ನು ಬರೆತೀರಿ ಎಂದು ಜನ ನನ್ನನ್ನು ಕೇಳುತ್ತಾರೆ. ಅದಕ್ಕೆ ಕಾರಣ ಈ ಓದಿನಲ್ಲಿದೆ : ಡಾ. ಎಸ್ ಎಲ್ ಭೈರಪ್ಪ.

Dr. S L Bhyrappa addressing the gathering

ತುರ್ತುಪರಿಸ್ಥಿತಿಯ ಸಮಯದಲ್ಲಿ ಭೂಗತವಾಗಿ ಕಾರ್ಯನಿರತರಾಗಿದ್ದ ಕೃಷ್ಣಪ್ಪನವರು ಕೆಲಸ ಮಾಡಿದ ಘಟನೆಯನ್ನು ನೆನೆಸಿಕೊಂಡ ‍ಭೈರಪ್ಪನವರು ತುರ್ತುಪರಿಸ್ಥಿತಿಯ ಸಮಯದಲ್ಲಿ ಸುದ್ದಿ ಮುಟ್ಟಿಸುವಲ್ಲಿ, ರಾಜಕೀಯ ನಾಯಕರ ನಡುವೆ ಸಂವಹನ ನಡೆಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು.  ಕೃಷ್ಣಪ್ಪನವರ ಕಲ್ಪನೆಯಲ್ಲಿ ಮಲೆನಾಡಿನಲ್ಲಿ ಕೊಪ್ಪದ ಹತ್ತಿರ ಆರಂಭವಾದ ಪ್ರಭೋದಿನಿ ಗುರುಕುಲ ಉನ್ನತ ಮಟ್ಟದ ಶಿಕ್ಷಣ ಪದ್ಧತಿಯ ಕುರಿತು ತಮ್ಮ ಅನುಭವವನ್ನು ಭೈರಪ್ಪ ಹಂಚಿಕೊಂಡರು.
“ಹೀಗೆ ಶಿಕ್ಷಣ, ಸಾಹಿತ್ಯ ಬಗ್ಗೆ, ಕುಟುಂಬದ ಬಗ್ಗೆ, ದೇಶವನ್ನು ಹೇಗೆ ಕಟ್ಟಬೇಕು ಮೊದಲಾದ ವಿಚಾರಗಳ ಬಗ್ಗೆ ಚಿಂತನೆಗಳು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಒಂದು ರೀತಿಯಲ್ಲಿ ಅಂತರ್ಮುಖಿಯಾದ ಕೃಷ್ಣಪ್ಪನವರ ಮನದಲ್ಲಿ ನಡೆದವು. ಕೃಷ್ಣಪ್ಪನವರ ಜೀವನ ವಿಚಾರಗಳ ಕುರಿತು ಪುಸ್ತಕ ರಚನೆಯನ್ನು ಚಂದ್ರಶೇಖರ ಭಂಡಾರಿಯವರು ಮಾಡಿದ್ದಾರೆ. ಕೃಷ್ಣಪ್ಪನವರ ಆಲೋಚನೆ ಅವರ ಕಾರ್ಯಗಳನ್ನು ಕುರಿತು ತಿಳಿದುಕೊಂಡು ಅದನ್ನು ಬೆಳಸಿ ಮುಂದುವರೆಸುವ ಕೆಲಸವನ್ನು ನಾವು ಮಾಡಬೇಕು” ಎಂದು ಭೈರಪ್ಪನವರು ನುಡಿದರು.

ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು “ಕೃಷ್ಣಪ್ಪನವರ ಜೀವನದ ಬಗ್ಗೆ ಪುಸ್ತಕ ಬರೆಯುತ್ತೀರಾ? ಎಂದು ನಾನು ವಿಚಾರ ಮಾಡಿ ಚಂದ್ರಶೇಖರ ಭಂಡಾರಿಯವರಲ್ಲಿ ಕೇಳಿದ್ದಲ್ಲ. ಮೂರು ವರ್ಷಗಳ ಹಿಂದೆ ಶ್ರದ್ಧಾಂಜಲಿ ಸಭೆಯಲ್ಲಿ ಸಹಜವಾಗಿ ಈ ವಿಚಾರ ಬಂತು. ಸಂಘದ ಪ್ರಚಾರಕರ ಜೀವನದ ಬಗ್ಗೆ ಪುಸ್ತಕ ಬರೆಯುವುದು ಕಷ್ಟದ ಕೆಲಸ, ಪ್ರಸಿದ್ಧಿ ಪರಾನ್ಮುಖನಾಗಿರುವ ಪ್ರಚಾರಕರ ಬಗ್ಗೆ  ವಿಷಯಗಳು ಸಿಗುವುದಿಲ್ಲ. ಅಂತಹ ಸಮರ್ಪಿತ ಪ್ರಚಾರಕ ಜೀವನವನ್ನು ಕೃಷ್ಣಪ್ಪನವರ ಬದುಕಿನಲ್ಲಿ ಕಾಣಬಹುದು.

Sarsanghachalak Dr Mohan Bhagwat

ತನ್ನ ಸಂಪೂರ್ಣ ಜೀವನವನ್ನು ಸಮರ್ಪಣೆ ಮಾಡುವ ಒಂದು ಪರಂಪರೆ ನಡೆದಿದೆ. ಕೃಷ್ಣಪ್ಪನವರ ಜೀವನ ಆ ಪರಂಪರೆಯ ಪ್ರಾತಿನಿಧಿಕವಾಗಿದೆ.
ಚಂದ್ರ ಆದರೂ ಕಳಂಕಿತನಲ್ಲ, ಸೂರ್ಯನಾದರೂ ತಾಪವಿಲ್ಲ, ಎಲ್ಲರ ಜೊತೆಗೆ ಎಲ್ಲರನ್ನು ಸೇರಿಸಿಕೊಂಡು ಸ್ನೇಹದಿಂದ ಸಮಾಜಹಿತಕ್ಕಾಗಿ ಮುಂದೆ ನಡೆದವರು ಕೃಷ್ಣಪ್ಪನವರು. ಶಾಂತ ಸೌಮ್ಯ ವ್ಯಕ್ತಿತ್ವದ ಕೃಷ್ಣಪ್ಪನವರ ಸಾನ್ನಿಧ್ಯ ನನಗೆ ದೊರಕಿದೆ.

ಪ್ರತಿಯೊಬ್ಬರು ಒಂದಿಷ್ಟು ಸಮಯವನ್ನು ನೀಡಬೇಕು. ಪ್ರತಿಯೊಬ್ಬರೂ ಸ್ವಲ್ಪ ಸಮಯ ನೀಡುವಂತಾಗಲು ಹಲವರು ಹೆಚ್ಚು ಸಮಯ ನೀಡಬೇಕು. ಕೆಲವರು ಹೆಚ್ಚು ಸಮಯ ನೀಡುವಂತಾಗಲು ಕೆಲವರು ಸಂಪೂರ್ಣ ಸಮಯವನ್ನು ನೀಡಬೇಕು ಎನ್ನುವ ಸೂತ್ರವನ್ನು ಕೃಷ್ಣಪ್ಪನವರು ನೀಡಿದ್ದರು. : ಡಾ. ಮೋಹನ್ ಭಾಗವತ

ದೂರದಿಂದ ನೋಡಿದರೆ ಓರ್ವ ಮಹಾನ್‌ ವ್ಯಕ್ತಿತ್ವವನ್ನು ನೋಡುತ್ತಿದ್ದೇವೆ ಎಂದು ಅನ್ನಿಸುತ್ತಿರಲಿಲ್ಲ. ಹತ್ತಿರ ಹೋದಾಗ ಅವರ ವ್ಯಕ್ತಿತ್ವದ ಶ್ರೇಷ್ಠತೆ ಅನುಭವಕ್ಕೆ ಬರುತ್ತಿತ್ತು. ಅವರದು ಪೂರ್ಣ ಸಮರ್ಪಣೆಯ ಸಾಧನೆ.
ತನ್ನ ಜೀವನವನ್ನು ಪರಿಶ್ರಮದಿಂದ, ಸಮಾಜದೇವನ ಸೇವೆಯಲ್ಲಿ ಸಮರ್ಪಿತವಾಗುವ ಜೀವನ ಪರಿಶುದ್ಧವಾಗಿರಬೇಕು ಎಂದು ಪ್ರಯತ್ನಿಸುವುದು, ಸಮಾಜಸೇವೆಯಲ್ಲಿ ಸಂಪೂರ್ಣ ಶ್ರದ್ಧೆಯಿಂದ ಸಮರ್ಪಿಸುವುದು ಕೃಷ್ಣಪ್ಪನವರಂತಹ ಪ್ರಚಾರಕರ ಜೀವನವಾಗಿದೆ. ಅಂತವರು ಇತರರಿಗೆ ಆದರ್ಶ ಜೀವನ ನಡೆಸಲು ಪ್ರೇರಣೆ ನೀಡಬಲ್ಲವರಾಗಿದ್ದಾರೆ. ಪ್ರಾಮಾಣಿಕತೆಯಿಂದ ಶುದ್ಧ ಮನಸ್ಸಿನಿಂದ ತನುಮನಬುದ್ಧಿಯಿಂದ ಸಮರ್ಪಿಸುವ ಜೀವನ ನಡೆಯಬೇಕು. ಇಂತಹ ಆದರ್ಶ ಬಾಳಿನಿಂದ ಪ್ರೇರಣೆ ನೀಡಬಲ್ಲ ಜೀವನ ನಮ್ಮ ಮುಂದಿದೆ. ಈ ವಿಷಯ ಮುಂದಿನ ಪೀಳಿಗೆಗೆ ದಾಟಬೇಕು. ಇಂತಹ ಜೀವನವನ್ನು ಬಾಳಲು ಪ್ರೇರಣೆ ನೀಡಬೇಕು.
ಪೂಜೆಗಾಗಿ ಮುಡಿಪಾದ ಹೂವುಗಳಿಗೆ ಮೃತ್ಯುವು ಸಹ ಧನ್ಯತೆಯನ್ನು ನೀಡುತ್ತದೆ. ನಿರ್ಮಾಲ್ಯವಾದ ಅಂತಹ ತೇಜಸ್ಸು ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡುತ್ತದೆ. ಅಂತಹ ನಿರ್ಮಾಲ್ಯವಾದ ಬದುಕನ್ನು ಬಾಳಿದ ಕೃಷ್ಣಪ್ಪನವರ ಬದುಕು ಎಲ್ಲರಿಗೆ ಪ್ರೇರಣೆಯಾಗಿದೆ.” ಎಂದು ನುಡಿದರು.

ವೇದಿಕೆಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರೀಯ  ಸಂಘಚಾಲಕ ವಿ. ನಾಗರಾಜ, ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕ ಮ. ವೆಂಕಟರಾಮು ಅವರು ಉಪಸ್ಥಿತರಿದ್ದರು. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ ಜಯಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಟ್ಟಾಭಿರಾಮ ಅವರು ವಂದಿಸಿದರು.

ವರದಿ: ಸತ್ಯನಾರಾಯಣ ಶಾನಭಾಗ್ ಹಾಗೂ ರಾಧಾಕೃಷ್ಣ ಹೊಳ್ಳ
ಚಿತ್ರಗಳು : ಸುಧೀರ್ ಪದ್ಮಾರ್

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Life of Na Krishnappaji an inspiration to new generation swayamsevaks

Sun Aug 12 , 2018
Bengaluru, 12 Aug 2018: ‘Nirmalya’, a book based on the life of senior Pracharak, Na. Krishnappa was released today in TownHall, Bengaluru. RSS Sarsanghachalak, Dr.Mohan Bhagwat, renowned novelist Dr. S.L. Byrappa, RSS Sah Sarkaryavah Dattatreya Hosbale, author of the book, ChandraShekar Bhandari, Dakshina Madhya Kshetreeya Sanghachalak, V. Nagraj and Karnataka […]