Dr. Janardana Hegde has been selected for the 2017 Maharshi Narada Award for his service to Samskrit Journalism given by Uttar Pradesh Samskrit Samsthan. He is the Founder Editor of the magazine in Samskrit – Sambhashana Sandeshaha. Dr. H R Vishwas wins the 2017 Banabhatta award given away by Uttar Pradesh Samskrit Samsthan for his Samskrita translation ‘Ullanghanam’ of Dr. S L Bhyrappa’s Daatu in Kannada.

ಡಾ. ಜನಾರ್ದನ ಹೆಗಡೆ ಅವರಿಗೆ “ಮಹರ್ಷಿ ನಾರದ ಪುರಸ್ಕಾರ” ಪ್ರಕಟ

ಉತ್ತರ ಪ್ರದೇಶ ಸಂಸ್ಕೃತ ಸಂಸ್ಥಾನವು ನೀಡುವ ಪ್ರತಿಷ್ಠಿತ 2017ನೇ ಸಾಲಿನಮಹರ್ಷಿ ನಾರದ ಪ್ರಶಸ್ತಿಯು ಡಾ. ಜನಾರ್ದನ ಹೆಗಡೆ ಅವರಿಗೆ ಸಂದಿದೆ. ಸಂಸ್ಕೃತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಸಂಭಾಷಣ ಸಂದೇಶಃಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು. ಪ್ರಶಸ್ತಿಯು ರೂ. 1,01,000/- ನಗದನ್ನು ಒಳಗೊಂಡಿದೆ. ಸಂಸ್ಕೃತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಂಸ್ಕೃತ ವಿದ್ವಾಂಸರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಕೃತ ಜಗತ್ತಿನ  ಅನೇಕ ಗಣ್ಯರು ಡಾ. ಜನಾರ್ದನ ಹೆಗಡೆ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Dr. Janardana Hegde, recipient of the 2017 Maharshi Narada Award for his service to Samskrita Magazine given by Uttar Pradesh Samskrita Samsthana

ವಿದ್ವಾನ್ ಜನಾರ್ದನ ಹೆಗಡೆಯವರು ಸಂಸ್ಕೃತ ಭಾಷೆಯನ್ನು ಜನಭಾಷೆಯಾಗುವಲ್ಲಿ ಅನವರತವೂ ಶ್ರಮಿಸುತ್ತಿರುವ “ಸಂಸ್ಕೃತ ಭಾರತಿ” ಸಂಸ್ಥೆಯ ಹಿರಿಯ ಸಂಸ್ಥಾಪಕರಲ್ಲೊಬ್ಬರು. ಇವರು ಸಂಭಾಷಣ ಸಂದೇಶಃ ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು.

ಇವರು ಸಂಸ್ಕೃತ ಭಾಷಾಭ್ಯಾಸ ಹಾಗೂ ವ್ಯಾಕರಣ ಕಲಿಕೆಗೆ ಸಂಬಂಧಿಸಿದಂತೆ ಸುಮಾರು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಮಾನ್ಯ ವ್ಯಾಕರಣಾಭ್ಯಾಸಕ್ಕೆ ಬೇಕಾದ ‘ಅಭ್ಯಾಸದರ್ಶಿನಿ’, ‘ಶುದ್ಧಿಕೌಮುದಿ’ಯಿಂದ ಆರಂಭಿಸಿ ಪ್ರೌಢ ಗ್ರಂಥಗಳಾದ ‘ಭಾಷಾಪಾಕಃ’, ‘ಧಾತುರೂಪನಂದಿನೀ’, ‘ಕೃದಂತರೂಪನಂದಿನೀ’ ಮುಂತಾದವು ಇವರ ಇತ್ತೀಚಿನ ಕೃತಿಗಳು.

ಸಮಕಾಲೀನ ಸಂಸ್ಕೃತ ಸಾಹಿತ್ಯಸೃಷ್ಟಿಯಲ್ಲಿಯೂ ಇವರದು ಗಣನೀಯ ಸೇವೆ. ಸಂಸ್ಕೃತ ಚಂದಮಾಮಾವನ್ನು ಸುಮಾರು 25 ವರ್ಷ ನಡೆಸಿದ ಹೆಗ್ಗಳಿಕೆ ಇವರದು. ಕತೆ ಕಾದಂಬರಿ ಮುಂತಾದ ಸಾಹಿತ್ಯಪ್ರಕಾರಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಬಾಲಕಥಾಸಾಹಿತ್ಯಪ್ರಕಾರದಲ್ಲಿ ಇವರು ರಚಿಸಿದ “ಬಾಲಕಥಾಸಪ್ತತಿಃ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ “ಬಾಲ ಸಾಹಿತ್ಯ ಪುರಸ್ಕಾರ” (2015) ಸಂದಿದೆ. ಕನ್ನಡದ ಪ್ರಖ್ಯಾತ ಕಾದಂಬರಿಕಾರರಾದ ಶ್ರೀ ಎಸ್.ಎಲ್.ಭೈರಪ್ಪನವರ ‘ಧರ್ಮಶ್ರೀ’ ಕಾದಂಬರಿಯ ಸಂಸ್ಕೃತಾನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ “ಅನುವಾದ ಪುರಸ್ಕಾರ” (2005) ಲಭಿಸಿದೆ. ಇದಿಷ್ಟೇ ಅಲ್ಲದೇ, ದೃಷ್ಟಿದಾನ, ವಂಶವೃಕ್ಷ, ಕನಕ ಮುಸುಕು, ಸಿಂಹಾವಲೋಕನ, ಇವರು ಅನುವಾದಿಸಿರುವ ಕಾದಂಬರಿಗಳಲ್ಲಿ ಪ್ರಮುಖವಾದವು. ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಧಿಕಾರದ “ಗೌರವ ಪುರಸ್ಕಾರ” (2011-12), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ “ಪ್ರೊ. ಎಂ. ಹಿರಿಯಣ್ಣ ಸಂಸ್ಕೃತ ಗ್ರಂಥ ಪುರಸ್ಕಾರ” (2011), ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠ (ಮಾನಿತ ವಿಶ್ವವಿದ್ಯಾಲಯ)ದಿಂದ “ಸಂಸ್ಕೃತ ಸೇವಾವತಂಸ” ಬಿರುದು (2000), ಗುಜರಾತಿನ ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದಿಂದ “ಗೌರವ ಡಿ.ಲಿಟ್” ಉಪಾಧಿ (2014) ಮುಂತಾದವು ಅವರ ಪ್ರತಿಭೆ ಹಾಗೂ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಂತಿವೆ.

ಸಂಸ್ಕೃತಶಿಕ್ಷಕರ ಪ್ರಶಿಕ್ಷಣ ಕ್ಷೇತ್ರದಲ್ಲಿಯೂ ಇವರ ಸೇವೆ ಅಪಾರ. ಸುಮಾರು 30 ವರ್ಷಗಳಿಂದಲೂ ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಮೆರಿಕಾ ಮುಂತಾದ ಹೊರದೇಶದಲ್ಲಿ ನಡೆದ ಶಿಕ್ಷಕ ಪ್ರಶಿಕ್ಷಣ ವರ್ಗಗಳಲ್ಲಿ ಸತತವಾಗಿ ಸಂಸ್ಕೃತ ಪ್ರಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್ ಮುಂತಾದ ಅನೇಕ ಸಮಿತಿಗಳ ಸದಸ್ಯರೂ ಆಗಿರುವ ಇವರು ಪ್ರಸ್ತುತ, “ಸಂಭಾಷಣ ಸಂದೇಶ:” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ.

ಡಾ. ಎಚ್. ಆರ್. ವಿಶ್ವಾಸ ಅವರಿಗೆ “ಬಾಣಭಟ್ಟ ಪುರಸ್ಕಾರ” ಪ್ರಕಟ

ಉತ್ತರ ಪ್ರದೇಶ ಸಂಸ್ಕೃತ ಸಂಸ್ಥಾನವು ನೀಡುವ ಪ್ರತಿಷ್ಠಿತ 2017ನೇ ಸಾಲಿನ “ಬಾಣಭಟ್ಟ ಪುರಸ್ಕಾರ”ವು ಡಾ. ಎಚ್.ಆರ್. ವಿಶ್ವಾಸ ಅವರಿಗೆ ಸಂದಿದೆ. ಡಾ. ಎಸ್. ಎಲ್. ಭೈರಪ್ಪನವರ ‘ದಾಟು’ ಕಾದಂಬರಿಯ ಸಂಸ್ಕೃತಾನುವಾದ “ಉಲ್ಲಂಘನಮ್” ಕಾದಂಬರಿಗೆ ಈ ಪ್ರಶಸ್ತಿಯು ಅವರಿಗೆ ಸಂದಿದೆ. ಡಾ. ಎಚ್.ಆರ್. ವಿಶ್ವಾಸ ಅವರು ಸಂಸ್ಕೃತ ಭಾರತಿ ಸಂಸ್ಥೆಯ ಹಿರಿಯ ಪೂರ್ಣಾವಧಿ ಕಾರ್ಯಕರ್ತರಾಗಿದ್ದಾರೆ. ಈ ಪ್ರಶಸ್ತಿಯು ರೂ. 51,000/- ನಗದನ್ನು ಒಳಗೊಂಡಿದೆ.  ಸಂಸ್ಕೃತ ಜಗತ್ತಿನ  ಅನೇಕ ಗಣ್ಯರು ಡಾ. ಎಚ್.ಆರ್. ವಿಶ್ವಾಸ ಅವರಿಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Dr. H R Vishwas recipient of the 2017 Banabhatta Puraskara given by the Uttar Pradesh Samskrita Samsthana