ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ

ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ

ಸಾವಯವ ಪತ್ರಿಕೋದ್ಯಮದಿಂದಲೂ ಜನರಿಗೆ ಸುದ್ದಿ ನೀಡಬಹುದಾಗಿದೆ : ರಾಧಾಕೃಷ್ಣ ಭಡ್ತಿ

ಪತ್ರಕರ್ತರಿಂದ ದೇಶೋದ್ಧಾರದ ಕೆಲಸಗಳು ನಡೆಯದಿದ್ದರೆ ಸಮಾಜಕ್ಕೆ ನಷ್ಟ : ಜಿತೇಂದ್ರ ಕುಂದೇಶ್ವರ

ನಾರದ ಜಯಂತಿಯನ್ನು ದೇಶದ ವಿವಿಧ ಕಡೆಗಳಲ್ಲಿ ಆಯಾ ವಿಶ್ವ ಸಂವಾದ ಕೇಂದ್ರ ಆಚರಿಸುತ್ತದೆ. ಸಮಾಜಮುಖಿಯಾದ, ರಾಷ್ಟ್ರೀಯ ಚಿಂತನೆಗಳುಳ್ಳ ಪರಿಣಾಮಕಾರಿ ವರದಿ, ಲೇಖನಗಳನ್ನು ಬರೆದು ಜನರ ಮೆಚ್ಚುಗೆಗೆ ಪಾತ್ರರಾಗಿರುವ ಪತ್ರಕರ್ತರಿಗೆ ಗೌರವ ಸೂಚಿಸುವ ಮೂಲಕ ಆಚರಿಸಲಾಗುತ್ತದೆ. ಇಂದು ಬೆಂಗಳೂರಿನ ಜಯನಗರದ ರಾಷ್ಟೋತ್ಥಾನ ಶಾರೀರಿಕ ಕೇಂದ್ರದಲ್ಲಿ ನಾರದ ಜಯಂತಿಯ ನಿಮಿತ್ತ ನಡೆದ ‘ಮಾಧ್ಯಮ ಮಿತ್ರರ ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ, ’ಹಸಿರುವಾಸಿ’ ಪಾಕ್ಷಿಕದ ಪ್ರಧಾನ ಸಂಪಾದಕರಾದ ಶ್ರೀ ರಾಧಕೃಷ್ಣ ಭಡ್ತಿಯವರಿಗೆ ಬೆ. ಸು. ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವವಾಣಿ ಪತ್ರಿಕೆಯ ಮಂಗಳೂರಿನ ಬ್ಯೂರೊ ಮುಖ್ಯಸ್ಥರಾದ ಶ್ರೀ ಜಿತೇಂದ್ರ ಕುಂದೇಶ್ವರರಿಗೆ ತಿ. ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Chief Editor, Hasiruvasi felicitated with Be. Su. Na. Malya Patrikodyama Award by Chandrashekhar Bhandari
Bureau Chief, Vishwavani Mangaluru felicitated with Ti.Ta. Sharma Patrikodyama Award by Chandrashekhar Bhandari

ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ  ದಕ್ಷಿಣ ಮಧ್ಯ ಕ್ಷೇತ್ರದ ಬೌದ್ಧಿಕ ಪ್ರಮುಖ ಹಾಗೂ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರದ ಅಧ್ಯಾಪಕರಾದ ಬಿ ವಿ ಶ್ರೀಧರ ಸ್ವಾಮಿಯವರು ಆಶಯ ನುಡಿಯಾಡುತ್ತಾ, ಪತ್ರಕರ್ತರ ಲೇಖನ, ಸುದ್ದಿ ಹೆಚ್ಚು ಜನರನ್ನು ಜಾಗೃತಗೊಳಿಸುವುದಾದ್ದರಿಂದ, ನಮ್ಮ ಸುದ್ದಿಯ ವಿಶ್ಲೇಷಣೆ ಸಮಾಜದ ಉನ್ನತಿಯ ಗುರಿಯನ್ನು ಹೊಂದಬೇಕು ಎಂದು ತಿಳಿಸಿದರು.

ಭಕ್ತಿ ಸೂತ್ರದ ಕರ್ತೃಗಳಾದ ನಾರದರು ಭಕ್ತಿ ಪಂಥದ ಪ್ರತಿಪಾದಕರಷ್ಟೇ ಆಗಿರದೇ, ತರ್ಕಬದ್ಧ ವಿಷಯವನ್ನು ಮುಂದಿಡುತ್ತಿದ್ದರು. ದೈವ, ದಾನವ, ಮಾನವರ ಲೋಕಗಳ ನಡುವೆ ಸಂಚರಿಸಿ ಬರುವವರಾಗಿದ್ದರು ಹಾಗೂ ವಿದ್ವತ್ಪೂರ್ಣ ಸಂವಾದವನ್ನು ನಡೆಸಬಲ್ಲವರಾಗಿದ್ದರು. ಹಾಗಿದ್ದಾಗಿಯೂ ಎಲ್ಲರ ಹಿತೈಷಿಗಳೆಂದೇ ಕರೆಯಲ್ಪಟ್ಟರು. ಹೀಗೆ ನಿರ್ಭೀತದಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ ಎಂದು ಅಭಿಪ್ರಾಯಪಟ್ಟರು.

ವಿಶಾಲವಾದ ದೇಶದ ನಿರ್ವಹಣೆಯಲ್ಲಿ ಸಾಕಷ್ಟು ರೀತಿಯ ಕೆಲಸಗಳು, ಜಾಗ್ರತೆಗಳನ್ನು ಮಾಡಬೇಕಾಗುತ್ತದೆ. ವಿಶೇಷವಾಗಿ ಸೈನ್ಯದವರು ತೆಗೆದುಕೊಳ್ಳುವ ನಿರ್ಧಾರವನ್ನೇ ನೊಡುವುದಾದರೆ, ಅವರು ದೇಶದ್ರೋಹದ ಪ್ರವರ್ತಕರಾದ ಭಯೋತ್ಪಾದಕರ ಮಟ್ಟಹಾಕುವ ಕೆಲಸದಲ್ಲಿ ತೊಡಗಿರುವ ಜಮ್ಮು ಕಾಶ್ಮೀರದ ಯೋಧರನ್ನು ಪತ್ರಕರ್ತರು ಕಟಕಟೆಯಲ್ಲಿ ನಿಲ್ಲಿಸಿ ಮಾನವ ಹಕ್ಕುಗಳ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸೈನಿಕರು ಅನುಭವಿಸುತ್ತಿರುವ ಕಷ್ಟದ ಪರಿಸ್ಥಿತಿಗೆ ಮರುಗದೇ, ಆ ಸುದ್ದಿಯನ್ನು ವೈಭವೀಕರಿಸಿ ಬೇರಯದೇ ಕಥಾನಕ ನೀಡುವುದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹ ಎಂದು ಹೇಳಿದರು.

B V Shreedharaswamy addressing the audience

ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ, ಪತ್ರಿಕೋದ್ಯಮದ ಮೇಲೆಯಾದ ಹಲ್ಲೆಯನ್ನು ವಿವರಿಸಿ, ಸರ್ವಾಧಿಕಾರವನ್ನು ಬಳಸಿ ಮಾಧ್ಯಮದ ಕೈ ಕಟ್ಟಿಹಾಕುವ ಕೆಲಸವನ್ನು ಅಂದಿನ ಪ್ರಧಾನಿ ಇಂದಿರಾ ಗಂಧಿ ಮಾಡಿದರು. ಸಂಘದ ಮೇಲೆ ಪ್ರಹಾರ ನಡೆಯಿತಾದರೂ, ಸಂಘ ನಿರ್ಭೀತವಾಗಿ ನೈಜ ಸುದ್ದಿ, ವರದಿಗಳನ್ನು ಪ್ರಕಟಿಸಿ ಜನರಿಗೆ ನೀಡುತ್ತಿತ್ತು. ದುಂದುಭಿ, ಕಹಳೆ ಸೇರಿದಂತೆ ಹಲವಾರು ಸಣ್ಣ ಪತ್ರಿಕೆಗಳು ಯಾರಿಗೂ ತಿಳಿಯದಂತೆ ಹೊರಬರುತ್ತಿದ್ದವು ಎಂದು ಶ್ರೀಧರ ಸ್ವಾಮಿಯವರು ತಿಳಿಸಿದರು. ಈಗಲೂ ಹಲವಾರು ಪತ್ರಿಕೆ, ಪ್ರಕಾಶನದ ಮುಖೇನ ಸಮಾಜ ಜಾಗೃತಿ, ಸಮಾಜ ಏಳಿಗೆಗೆ ಸಂಘ ಕಟಿಬದ್ಧವಿದೆ ಎಂದು ಹೇಳಿದರು

’ವಿಕ್ರಮ’ ಪತ್ರಿಕೆಯ ಸಂಪಾದಕರಾಗಿ  ಬೆ.ಸು.ನಾ ಮಲ್ಯ, ಹಾಗೂ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ತಿ. ತಾ. ಶರ್ಮರ  ಹೆಸರಿನಲ್ಲಿ ವಿಶ್ವ ಸಂವಾದ ಕೇಂದ್ರ ಪುರಸ್ಕಾರಗಳನ್ನು ಕೊಡುತ್ತದೆ. ಅವರೀರ್ವರ ಜೊತೆಗೂ ಕಾರ್ಯ ನಿರ್ವಹಿಸಿದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ವೈ ಕೆ ರಾಘವೇಂದ್ರ ರಾವ್ ರವರು ತಿ. ತಾ. ಶರ್ಮ ಹಾಗೂ ಬೆ. ಸು. ನಾ. ಮಲ್ಯರ ಜೊತೆಗಿನ ತಮ್ಮ ಒಡನಾಟವನ್ನು ಸಭೆಯ ಮುಂದಿಟ್ಟರು. ಗಾಂಧಿವಾದಿಯಾದ ತಿ. ತಾ. ಶರ್ಮರು ನಿರ್ಭೀತ ಪತ್ರಿಕೋದ್ಯಮದಲ್ಲಿದ್ದವರು ಹಾಗೂ ಅದನ್ನು ಒಂದು ಉದ್ಯಮವೆಂದು ಪರಿಗಣಿಸದೇ ಸೇವೆಯ ರೂಪವನ್ನು ನೀಡಿದರು ಎಂದು ಅಭಿಪ್ರಾಯ ಪಟ್ಟರು.

ಮೊದಲಿನ ದಿನಗಳಲ್ಲಿ ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಕಟು ಟೀಕಾಕಾರರಾದ ಶರ್ಮರು ನಂತರದಲ್ಲಿ ಸಂಘದ ರಾಷ್ಟ್ರೋತ್ಥಾನ ಪರಿಷತ್ತಿನ ಜೊತೆ ಕಾರ್ಯ ನಿರ್ವಹಿಸಿ ಪತ್ರಿಕೋದ್ಯಮದೆಡೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ವಿಷಯವೊಂದನ್ನು ಇಟ್ಟುಕೊಂಡು ಅದರ ಸಾಧಕ ಬಾಧಕಗಳನ್ನು ತುಲನೆ ಮಾಡಿ ನೇರವಾಗಿ, ನಿರ್ಭೀತದಿಂದ ಬರೆದವರು ಶರ್ಮರು ಎಂಬ ಮಾತುಗಳನ್ನಾಡಿದರು.

ಬೆ. ಸು. ನಾ. ಮಲ್ಯರ ಬಗ್ಗೆ ಮಾತನಾಡುತ್ತಾ, ತಮ್ಮ ಕೆನರಾ ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ ಸಂಘದ ಹಿರಿಯರಾದ ಸ್ವರ್ಗೀಯ ಯಾದವ ರಾವ್ ಜೋಶಿಯವರ ಸಲಹೆಯ ಮೇರೆಗೆ ವಿಕ್ರಮ ದ ಜವಾಬ್ದಾರಿಯನ್ನು ಹೊತ್ತು ಪತ್ರಿಕೆಯನ್ನು ಕಟ್ಟಿದರು ಎಂದು ವೈ ಕೆ ರಾಘವೇಂದ್ರ ರಾವ್ ತಿಳಿಸಿದರು. ಪತ್ರಿಕಾ ಕಾರ್ಯಾಲಯದ ಸ್ವಚ್ಛತೆಯಿಂದ ಹಿಡಿದು, ಪತ್ರಿಕೆಯ ಬಂಡಲ್ ಕಟ್ಟುವ ಕೆಲಸವನ್ನೂ ಈ ಸಂಪಾದಕ ಸ್ಥಾನದ ಸರಳ ಸಜ್ಜನ ವ್ಯಕ್ತಿ ನಿರ್ವಹಿಸುತ್ತಿದ್ದರು. ತಮಗೆ ಬರುತ್ತಿದ್ದ ಅಲ್ಪ ಹಣದಲ್ಲೇ ಜೀವನ ನಡೆಸಿ, ಹೆಚ್ಚು ಗಳಿಕೆಯ ಮಾರ್ಗ ಹಿಡಿಯದೇ ರಾಷ್ಟ್ರ‍ೀಯ ವಿಚಾರಗಳನ್ನು ಪ್ರತಿಪಾದಿಸುತ್ತಾ, ಅದರ ಬಗ್ಗೆ ಬರೆಯುತ್ತಾ ಜನರಲ್ಲಿ ಜಾಗೃತಿ ಮೂಡಿಸಿದವರು ಮಲ್ಯರು ಎಂದು ಹೇಳಿದರು.

ಮಲ್ಯರ ಬಗೆಗಿನ ಒಂದು ವಿಶೇಷ ಘಟನೆಯನ್ನು ವಿವರಿಸುತ್ತಾ, ಪಂಚತಾರಾ ಹೊಟೆಲ್ ಒಂದಕ್ಕೆ ಪತ್ರಿಕಾ ಘೋಷ್ಠಿಗೆ ತಮ್ಮ ಎಂದಿನ ನಿರಾಡಂಬರದ ಉಡುಪಿನಲ್ಲಿ ಹೋದವರನ್ನು ಹೊಟೆಲಿನ ಅಧಿಕಾರಿಗಳು ಸೇರಿಸದಿದ್ದನ್ನು ಅಲ್ಲಿ ನೆರೆದಿದ್ದ ಉಳಿದ ಪತ್ರಕರ್ತರು ಪ್ರತಿಭಟಿಸಿದ್ದನ್ನು ಮೆಲಕು ಹಾಕಿದರು.

ಇಂತಹ ನಿಸ್ಪೃಹ ಪತ್ರಕರ್ತರ ಹೆಸರಿನಲ್ಲಿ ಸನ್ಮಾನ ಮಾಡುತ್ತಿರುವ ವಿಶ್ವ ಸಂವಾದ ಕೇಂದ್ರದ ಪ್ರಯತ್ನವನ್ನು ರಾಘವೇಂದ್ರ ರಾವ್ ಶ್ಲಾಘಿಸಿದರು.

Y K Raghavendra Rao addressing the audience

ಸನ್ಮಾನವನ್ನು ಸಹರ್ಷದಿಂದ ಸ್ವೀಕರಿಸಿದ ಹಸಿರುವಾಸಿ ಪಾಕ್ಷಿಕದ ಕಾರ್ಯನಿರ್ವಾಹಕ ಸಂಪಾದಕರಾದ ರಾಧಾಕೃಷ್ಣ ಭಡ್ತಿಯವರು ಮಾತನಾಡಿ ರಾಜಕೀಯವೊಂದನ್ನೇ ವೈಭವೀಕರಿಸಿ ಸುದ್ದಿ ಮಾಡುವುದರಿಂದ, ಗಲಭೆ, ಕ್ಷುಲ್ಲಕ ವರದಿಗಳಿಂದ ದೂರ ಹೋಗಬೇಕಾದ ಕಾಲ ಎಲ್ಲ ಪತ್ರಕರ್ತರಿಗೂ ಬರಬೇಕು.

ಪತ್ರಿಕೆಯ ಮಾಲೀಕನು ಆದೇಶಿಸುವುದನ್ನು ಕೇಳುವುದರಿಂದ ಪತ್ರಕರ್ತನು ಸುದ್ದಿಗೆ ಪ್ರಾಮುಖ್ಯತೆ ಕೊಡದೇ, ವೈಭವೀಕರಣಕ್ಕೆ ಪ್ರಾಧಾನ್ಯತೆ ನೀಡುವುದರಿಂದ ಪತ್ರಿಕೆಯ ಮಾಲೀಕ ಹಾಗೂ ಪತ್ರಕರ್ತನ ನಡುವಿನ ಸಂಬಂಧವೂ ಹಾಳಾಗುತ್ತಿದೆ, ಪತ್ರಿಕೆಗಳನ್ನು ಓದುವ ಜನಸಾಮಾನ್ಯರು ಆ ವೈಭವಯುಕ್ತ ನಗಣ್ಯ ಸುದ್ದಿಯನ್ನೇ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಕೀಯ, ಗಲಭೆ, ಸಿನಿಮಾ, ಗಲಾಟೆಯ ಸುದ್ದಿಯನ್ನಷ್ಟೇ ಜನರು ಸ್ವೀಕರಿಸುತ್ತಾರೆ ಎಂಬ ಭ್ರಮೆಯಿಂದ ಪತ್ರಕರ್ತರು ಕೇವಲ ಅದನ್ನೇ ಉಣಬಡಿಸುತ್ತಾರೆ ಎಂಬ ಖೇದ ವ್ಯಕ್ತಪಡಿಸಿದರು. ಅದಲ್ಲದ ಸಾವಯವ ಪ್ರತಿಕೋದ್ಯಮವನ್ನು ತಾವು ಅಭ್ಯಸಿಸುತ್ತಿದ್ದಾರೆಂದು ತಮ್ಮ ಹಸಿರುವಾಸಿ ಪಾಕ್ಷಿಕವನ್ನು ಪರಿಸರ, ಜಲ, ಅಭಿವೃದ್ಧಿ ಮುಂತಾದ ವಿಷಯಗಳನ್ನು ಜನರಿಗೆ ನೀಡುವ ಕೆಲಸದಲ್ಲಿ ತೊಡಗಿದ್ದಾರೆಂದು ತಿಳಿಸಿದರು.

Radhakrishna Bhadti addressing the audience

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಿಶ್ವವಾಣಿಯ ಮಂಗಳೂರಿನ ಬ್ಯೂರೊ ಮುಖ್ಯಸ್ಥರಾದ ಜಿತೇಂದ್ರ ಕುಂದೇಶ್ವರ ಸಾಮಾಜಿಕ ಜಾಲತಾಣಗಳಲ್ಲಿ ಬರೆದದ್ದನ್ನು ಎಡ ಬಲ ಪಂಥಗಳಲ್ಲಿ ಹಾಕುತ್ತಾ, ಪತ್ರಕರ್ತರನ್ನು ಗೌರವಿಸದೇ ಇರುವುದು ಶೋಚನೀಯ ಎಂದರು.

ಪತ್ರಕರ್ತರಿಗೆ ಇರುವ ಶಕ್ತಿಯಿಂದ ದೇಶೋದ್ಧಾರದ ಕೆಲಸಗಳು ಸಾಕಷ್ಟು ನಡೆಯಬಹುದಾದರೂ ಅದನ್ನು ಆಚರಿಸದೇ ಇರುವುದರಿಂದ, ಸಮಾಜಕ್ಕೆ ನಷ್ಟವಾಗುತ್ತದೆ ಎಂದರು. ಪತ್ರಕರ್ತರು ಬರೆಯುವ ಲೇಖನದಿಂದ ಸಮಾಜದ ಉನ್ನತಿ ನಡೆಯುವಂತಾಗಲಿ ಎಂದು ಆಶಿಸಿದರು.

 

Jitendra Kundeshwara addressing the audience

ವಿಸಂಕೇದ ಸಂಯೋಜಕ ಪ್ರವೀಣ್ ಪಟವರ್ಧನ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವಿಶ್ವ ಸಂವಾದ ಕೇಂದ್ರದ ಸ್ಥಾಪನೆ, ಅದರ ಧ್ಯೇಯೋದ್ದೇಶಗಳು, ಚಟುವಟಿಕೆಗಳ ಬಗ್ಗೆ, ನಾರದ ಜಯಂತಿಯ ಆಚರಣೆಯ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿಸಂಕೇ ವಿಶ್ವಸ್ಥರಲ್ಲೊಬ್ಬರಾದ ಶ್ರ‍ೀಮತಿ ಕ್ಷಮಾ ನರಗುಂದ ಮಾಡಿದರು.

ಸಂಸ್ಥಾಪಕ ವಿಶ್ವಸ್ಥರು, ಚಿಂತಕರು ಲೇಖಕರಾದ ಚಂದ್ರಶೇಖರ ಭಂಡಾರಿ, ದಕ್ಷಿಣ ಮಧ್ಯ ಕ್ಷೇತ್ರದ ಸಹಕಾರ್ಯವಾಹರಾದ ನಾ ತಿಪ್ಪೇಸ್ವಾಮಿಯವರು, ರಾಸ್ವಸಂ ನ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ, ವಿಸಂಕೇ ದ ವಿಶ್ವಸ್ಥರಾದ ರಾಧಾಕೃಷ್ಣ ಹೊಳ್ಳ, ಕಾರ್ಯನಿರ್ವಾಹಕ ವಿಶ್ವಸ್ಥರಾದ ಡಾ. ಎಂ.ಕೆ. ಶ್ರೀಧರನ್, ಉಪಸ್ಥಿತರಿದ್ದರು.

Sitting (l-R) Dr. V Sridhar, Trustee VSK, Jitendra Kundeshwara, Radhakrishna Bhadti, B V Shreedharaswamy
Co-ordinator of VSK, Praveen Patavardhan introducing VSK to audience
Ku Sindhu Prakash invocation
Sri Radhakrishna Holla, Trustee VSK delivers vote of thanks

____________________________________________________________________________________________

ರಾಧಾಕೃಷ್ಣ ಭಡ್ತಿಯವರ ಪರಿಚಯ:

 

ಸಾಗರದ ಗೀಜಗಾರು ಗ್ರಾಮದವರಾದ ಶ್ರೀ ರಾಧಾಕೃಷ್ಣ ಭಡ್ತಿ ಸಾಗರದ ಲಾಲ್‍ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು, ಕರ್ನಾಟಕ ಮುಕ್ತ ವಿವಿ ಮೈಸೂರಿನಿಂದ ಪತ್ರಿಕೋದ್ಯಮದ ಡಿಪ್ಲೊಮೊ ಪಡೆದಿದ್ದಾರೆ. ಸಾಗರ ವಾರಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ ಹತ್ತಕ್ಕೂ ಹೆಚ್ಚು ಸ್ಥಳೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಗರದಿಂದ ಪ್ರಕಾಶಿತಗೊಳ್ಳುತ್ತಿದ್ದ ’ಅಭ್ಯಾಗತ’ ಪತ್ರಿಕೆಯ ಸ್ವಂತ ಸಂಪಾದಕತ್ವ ನಿರ್ವಹಿಸಿದವರು ಭಡ್ತಿಯವರು. ಹೊಸದಿಗಂತ, ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕ, ಕನ್ನಡ ಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕ, ಸಹಾಯಕ ಸಂಪಾದಕ, ಪುರವಣಿ ಸಂಪಾದಕ, ಸಂಸ್ಥಾಪಕ ಕಾರ್ಯನಿರ್ವಾಹಕ ಸಂಪಾದಕರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಪರಿಸರದ ಕುರಿತಾದ ಪಾಕ್ಷಿಕವಾದ ಹಸಿರುವಾಸಿ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಭೂಮಿಗೀತ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹತ್ತಾರು ವರ್ಷಗಳ ಕಾಲ ವಿಜಯ ಕರ್ನಾಟಕ, ಕನ್ನಡಪ್ರಭ, ವಿಶ್ವವಾಣಿಯಲ್ಲಿ ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು, ಅಭಿವೃದ್ಧಿಪರ ವಿಷಯಗಳ ಕುರಿತಾಗಿ ಸಾಪ್ತಾಹಿಕ ಅಂಕಣಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದವರು ರಾಧಾಕೃಷ್ಣ ಭಡ್ತಿ.

೨೦೦೯ರ ರಾಜ್ಯ ಸರಕಾರದ ಪರಿಸರ ಪ್ರಶಸ್ತಿ, 2009ನೇ  ಸಾಲಿನ ರಾಜ್ಯ  ಸರಕಾರದ ಪರಿಸರ ಪ್ರಶಸ್ತಿ, 1ಡಿಎ ̄ïನಿಂದ ಪ್ರತಿಷ್ಠಿತ  ಸಂಜಯಗುಪ್ತ  ಸ್ಮರಣಾರ್ಥ ವಿಶೇಷ ರಾಷ್ಟ್ರೀಯ ಗೌರವ, ಬೆಂಗಳೂರು ರತ್ನ ಪ್ರಶಸ್ತಿ, ಪವಾಡ ಬಸವಣ್ಣ ಸಂಸ್ಥೆಯಿಂದ ಗೌರವ, ಅಖಿಲ ಹವ್ಯಕ ಮಹಾಸಭಾದಿಂದ ವಿದ್ವತ್ ಸಮ್ಮಾನ, ಫನಾಟಿಕ್ಸ್ ಸಂಸ್ಥೆಯಿಂದ ಸನ್ಮಾನ, ಜೈನ್ ಇರಿಗೇಶನ್‍ನ ಪುರಸ್ಕಾರ, ಇಂದೋರ್ ವಿವಿಯ ಗೌರವ, ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಕೃಷಿಗಾಗಿ ಬಿಎಲ್ಇ ಸಂಸ್ಥೆಯಿಂದ ವಿಶೇಷ ಗೌರವ. ಬಹ್ರೇನ್‍ನ ಇಂಡಿಯನ್ ಕಮ್ಯುನಿಟಿ ಅಸೋಸಿಯೇಷನ್‍ನ ವಿಶೇಷ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ, ೨೦೧೪ನೇ ಸಾಲಿನ ವಾಗ್ದೇವಿ ವಿಲಾಸ ಸಂಸ್ಥೆಯಿಂದ ಜಲಜಾಗೃತಿ ರತ್ನ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

ಜಿತೇಂದ್ರ ಕುಂದೇಶ್ವರ ಅವರ ಪರಿಚಯ:

ಜಿತೇಂದ್ರ ಕುಂದೇಶ್ವರ ಮೂಲತಃ ದಕ್ಷಿಣ ಕನ್ನಡದ, ಕಾರ್ಕಳದವರು. ಉಡುಪಿಯ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಕಾನೂನು ಪದವಿ, ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನಲ್ಲಿ ಸಾಹಿತ್ಯ ಪದವಿಯ ನಂತರ ’ವಿಜಯ ಕರ್ನಾಟಕ ಪತ್ರಿಕೆಯ ಉಡುಪಿ, ಕಾರ್ಕಳ, ಕುಂದಾಪುರ, ಮಂಗಳೂರು, ಗಂಗಾವತಿ ಸೇರಿದಂತೆ 11 ವರ್ಷಗಳ ಕಾಲ ಮತ್ತು ’ಕನ್ನಡ ಪ್ರಭ’ ದಲ್ಲಿ 4 ವರ್ಷಗಳ ಕಾಲ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಶ್ವವಾಣಿಯಲ್ಲಿ ವಿಶೇಷ ವರದಿಗಾರ/ ಬ್ಯೂರೋ ಮುಖ್ಯಸ್ಥರಾಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯಕರ್ನಾಟಕದಲ್ಲಿ ಕೊರಗರ ಬದುಕಿಗೆ ಮರುಗುವವರೇ ಇಲ್ಲ ಎಂಬ ಸಾಮಾಜಿಕ ಕಳಕಳಿಯ ವರದಿಗೆ 2003ರಲ್ಲಿ ವಡ್ಡರ್ಸೆ ಪ್ರಶಸ್ತಿ. 2004ರಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಕುರಿತು ಬರೆದ ಮಾನವೀಯ ಕಳಕಳಿಯ ವರದಿಗೆ ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಪ್ರಶಸ್ತಿ. 2010ರಲ್ಲಿ ಮಂಗಳೂರಿನ ಬೀದಿ ಬದಿಯ ಮಕ್ಕಳ ಬದುಕಿನ ಬವಣೆ ಕುರಿತ ಮಾನವೀಯ ಕಳಕಳಿ ವರದಿಗೆ ರಾಜ್ಯಪಾಲರಿಂದ ಚರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳ ಇರುವಿಕೆ ಕುರಿತು  ಮೊಟ್ಟ ಮೊದಲ ಬಾರಿಗೆ ವರದಿ,  ಮಂಗಳೂರಿನಲ್ಲಿ ಇಂಡಿಯನ್  ಮುಜಾಹಿದ್ದೀನ್ ಕುರಿತ ಸರಣಿ ಲೇಖನಗಳ ಮೂಲಕ ಕರಾವಳಿಯಲ್ಲಿ ಬೇರೂರುತ್ತಿರುವ ಉಗ್ರವಾದ, ಭೂಗತ ಲೋಕದ, ಅಪರಾಧ ಲೋಕದ ವಿಶೇಷ ವರದಿಗಳು, ಅಂಕಣಗಳು ಇವರ ಲೇಖನಿಯಿಂದ ಮೂಡಿಬಂದಿವೆ. ಕನ್ನಡ ಪ್ರಭದಲ್ಲಿದ್ದಾಗ  ಇವರು ಬರೆದ ಶಿರಾಡಿ ಘಾಟಿ ಕುರಿತ ಸರಣಿ ಲೇಖನಗಳಿಂದ ಅಂದಿನ ರಾಜ್ಯ ಸರಕಾರ ಎಚ್ಚೆತ್ತು ರಸ್ತೆ ಕಾಂಕ್ರಿಟೀಕರಣಗೊಳಿಸಿತು. ವಿಶ್ವವಾಣಿಯಲ್ಲಿ ವಿಶೇಷ ವರದಿಗಳ ಮೂಲಕ ಸರಕಾರದ, ಸಮಾಜದ ಗಮನ ಸೆಳೆದವರು. ಚೆಕ್‌ಪೋಸ್‌ಟ್‌‌ಗಳಲ್ಲಿ ಪೊಲೀಸರು ಬಕೆಟ್‌ಗಳಲ್ಲಿ ಲಂಚ ಪಡೆಯುವ ಕುಟುಕು ಕಾರ್ಯಾಚರಣೆ ಬಗ್ಗೆ ವಿಶ್ವವಾಣಿಯಲ್ಲಿ ಪ್ರಕಟವಾಗಿದೆ.  ಇತ್ತೀಚಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಲೇಡೀಸ್ ಟಾಯ್ಲೆಟ್ ಒಳಗೆ ಮೊಬೈಲ್ ಕ್ಯಾಮೆರಾ ಇಟ್ಟ ಕುರಿತು ತನಿಖಾ ವರದಿಯನ್ನೂ ಪ್ರಕಟಿಸಿದರು. ಇದರ ಪರಿಣಾಮ ಆರೋಪಿ ಸೆರೆಯಾಗುವುದರೊಂದಿಗೆ ವಿವಿಯಲ್ಲಿ ಮಹಿಳೆಯರಿಗೆ ವಿಶೇಷ ಭದ್ರತೆ ನೀಡಲಾಗಿದೆ.

ಜಿತೇಂದ್ರರು ಪ್ರವೃತ್ತಿಯಿಂದ ಯಕ್ಷಗಾನ, ನಾಟಕ, ನೃತ್ಯಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಯಕ್ಷಗಾನದಲ್ಲಿ ಪಾತ್ರಗಳನ್ನೂ ನಿರ್ವಹಿಸಿದ್ದಾರೆ.

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

SAKSHAMA celebrates Foundation Day, World Environment Day and Hellen Keller Jayanti

Mon Jun 25 , 2018
ದಿನಾಂಕ 24 ಜೂನ್ 2018: ಸಕ್ಷಮ ಸಂಸ್ಥಾಪನದಿನ, ವಿಶ್ವ ಪರಿಸರ ದಿನ ಹಾಗೂ ಹೆಲನ್ ಕೆಲ್ಲರ್ ಜಯಂತಿಯನ್ನು ಶಿಶು ನಿವಾಸ ಮಕ್ಕಳ ದೇಗುಲ, ಬಸವನಗುಡಿ ಸಭಾಂಗಣದಲ್ಲಿ, ಶಿಶು ನಿವಾಸದ ಅಧ್ಯಕ್ಷರಾದ ಶ್ರೀ ಸಿ ವಿ ವೆಂಕಟ ಕೃಷ್ಣ ರವರ ಅಧ್ಯಕ್ಷತೆಯಲ್ಲಿ ಹಾಗೂ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಯೋಜಕರಾದ ಶ್ರೀ ಜಯರಾಂ ಬೊಲ್ಲಾಜೆ ಮತ್ತು ವರದ ಹೆಗಡೆ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಜಯಪುರದ ಸ್ವರಸಕ್ಷಮ […]