24 ಜುಲೈ 2019, ಬೆಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ್ ಆಗಿದ್ದ ಶ್ರೀ ರಾಮಚಂದ್ರ ಕಾಸರಗೋಡು ಇನ್ನಿಲ್ಲ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೈಸೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಹೃದಯಾಘಾತದಿಂದ ಇವರು ನಿಧನರಾದರು. ಅವರ ಹುಟ್ಟೂರು ಮುಳ್ಳೇರಿಯಾದಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ.

Sri Ramachandra Kasaragodu passed away today

ಹಲವಾರು ದೇಶಭಕ್ತಿ ಗೀತೆಗಳು ಇವರ ಲೇಖನಿಯಿಂದ ಹೊರಹೊಮ್ಮಿವೆ. 2013ರಲ್ಲಿ ನಡೆದ ಮಂಗಳೂರು ವಿಭಾಗ ಸಾಂಘಿಕ್ ನ ವೈಯಕ್ತಿಕ ಗೀತೆ ‘ಯುವಮನದೊಳಿಂದು’ ಹಾಡಿನ ಸಾಹಿತಿಗಳು ಶ್ರೀ ರಾಮಚಂದ್ರ ಕಾಸರಗೋಡು.

ತಮ್ಮ ಶ್ರೀಮತಿ, ಇಬ್ಬರು ಪುತ್ರಿಯರು, ಹಾಗೂ ಒಬ್ಬ ಪುತ್ರನನ್ನು ಇವರು ಅಗಲಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ವಿಶ್ವ ಸಂವಾದ ಕೇಂದ್ರ ಕರ್ನಾಟಕ ಕೋರುತ್ತದೆ.

“ಸೂಕ್ಷ್ಮ ಚಿಂತನೆ, ನಾಜೂಕು ವ್ಯವಹಾರ ಇವುಗಳ ಪ್ರತಿರೂಪವಾಗಿದ್ದ ಶ್ರೀ ರಾಮಚಂದ್ರ ಕಾಸರಗೋಡು ಅವರು ಇನ್ನಿಲ್ಲ ಎಂಬುದನ್ನು ನಂಬಲು ಮನಸ್ಸು ಸಿದ್ಧವಾಗುತ್ತಿಲ್ಲ.ಭಾಷೆಗೆ, ಸಾಹಿತ್ಯಕ್ಕೆ ಸಂಬಂಧಿಸಿದ ಜಿಜ್ಞಾಸೆಗಳಿಗೆಲ್ಲ ಮೈತ್ರೀಭಾವದಿಂದಲೇ ಪರಿಹಾರ ಒದಗಿಸುತ್ತಿದ್ದ ಅವರ ಸಜ್ಜನಿಕೆ,ಸರಳತೆ , ಅಪರೂಪದ ಪದಗಳನ್ನು ಲೀಲೆಯಿಂದ ಬಳಸಿ, ಹಾಡುಗಳನ್ನು ರಚಿಸುವ ಅವರ ಅನುಪಮ ಸಾಮರ್ಥ್ಯ ದೀರ್ಘಕಾಲ ನೆನಪಿನಲ್ಲುಳಿಯುತ್ತದೆ ಹಾಗೂ ಹೊಸ ತಲೆಮಾರಿಗೆ ಶಕ್ತಿ ತುಂಬುತ್ತದೆ.

ಸಂಸ್ಕೃತ ಭಾರತಿಯ ಉತ್ತರ ಪ್ರಾಂತದ ಸಮ್ಮೇಳನದ ಸಂದರ್ಭದಲ್ಲಿ ಕೇಳದಿದ್ದರೂ ಹತ್ತುಸಹಸ್ರ ರೂಪಾಯಿಗಳನ್ನು ಕೈಗಿತ್ತು ಏನಿದೆಂಬಂತೆ ನಾನು ದಿಟ್ಟಿಸಿದಾಗ ನಸುನಕ್ಕು ಮೆಲ್ಲಗೆ ಬೆನ್ನು ತಟ್ಟಿ ಹೊರಟುಹೋದ ಸಹೃಯಿ ಹಾಗೆಯೇ ಹೊರಟೇಹೋದರೆಂಬುದುದನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ.
ಅವರ ಆತ್ಮಕ್ಕೆ ಭಗವಂತ ತನ್ನೆಡೆಯಲ್ಲಿ ಸ್ಥಾನಕಲ್ಪಿಸಿ ಬರಮಾಡಿಕೊಳ್ಳಲೆಂಬ ಪ್ರಾರ್ಥನೆಯೊಂದಿಗೆ ಆದರಪೂರ್ವಕ ಶ್ರದ್ಧಾಂಜಲಿ!!”  ಎಂದು ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಶ್ರೀ ರಾಮಚಂದ್ರ ಕಾಸರಗೋಡು ಅವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.