ಭಾರತ ಹಳ್ಳಿಗಳ ದೇಶ, ದೇಶದ ಹೃದಯ ಇರುವುದು ಗ್ರಾಮಗಳಲ್ಲಿ, ಹಳ್ಳಿಗಳು ಉಳಿದರೆ ನಾಡು ಉಳೀದೀತು – ಇತ್ಯಾದಿ ಪದಪುಂಜಗಳನ್ನು ನಾಯಕರೆನಿಸಿಕೊಂಡವರ ಚಿಂತಕರೆನಿಸಿಕೊಂಡವರ ಬಾಯಿಂದ ನಾವು ಕೇಳುತ್ತಿರುತ್ತೇವೆ. ದೇಶ ಪ್ರಗತಿಯಾಗಬೇಕಾದರೆ ತಳಮಟ್ಟದಿಂದ “ವಿಕಾಸವಾಗಿಬೇಕು, ಗ್ರಾಮಗಳು ಮೊದಲು ಮುಂದುವರಿಯಬೇಕು ಎನ್ನುವಂತಹ ಹೇಳಿಕೆಗಳನ್ನು ನಾವು ಗಮನಿಸಿರುತ್ತೇವೆ. ಆದರೆ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಗ್ರಾಮಗಳ ಅಭಿವೃದ್ಧಿಯ ದಿಕ್ಕು ಏನಿರಬೇಕು, ಪಾಶ್ಚಾತ್ಯ ಜಗತ್ತಿನಿಂದ ಆಮದಾದ ಆರ್ಥಿಕ ಪ್ರಗತಿಯ ಮಾದರಿಯಲ್ಲಿ ಹಳ್ಳಿಗಳ ಸ್ವಾವಲಂಬಿ ಆರ್ಥಿಕ ಸಂಸ್ಕೃತಿಯ ಉಳಿವು ಸಾಧ್ಯವೇ, ಎನ್ನುವ ಪ್ರಶ್ನೆಗಳು ಕೆಲವೇ ಕೆಲವು ಚಿಂತಕರ ಮನಸ್ಸಿನಲ್ಲಿ ಹುಟ್ಟಿರಬಹುದು. ಹಾಗೆಯೇ ಸ್ವಯಂ ಮಹಾತ್ಮ ಗಾಂಧಿಯವರು ಕಲ್ಪನೆಯ ಗ್ರಾಮ ಕೇಂದ್ರಿತ ಆರ್ಥಿಕ ವ್ಯವಸ್ಥೆ ಸ್ವಾತಂತ್ರ್ಯಾನಂತರದ ಭಾರತದ ಬೃಹತ್ ಯೋಜನೆಗಳ ಗದ್ದಲದಲ್ಲಿ ಮರೆತುಹೋಗಿರುವುದು ಅಷ್ಟೇ ಸತ್ಯ. ಇನ್ನೊಂದೆಡೆ ದೇಶದ ಎಲ್ಲ ಗ್ರಾಮಗಳಿಗೆ ರಸ್ತೆ ಸೌಕರ್ಯ, “ವಿದ್ಯುತ್ ಸಂಪರ್ಕ ಒದಿಗಿಸುವುದು ಮೊದಲಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಆದ್ಯತೆಯಾಗಿರಲಿಲ್ಲ. ನಗರಗಳ ಮೇಲೆ ಜನಸಂಖ್ಯೆಯ ಒತ್ತಡ ಏರುತ್ತಿರುವುದರ ಜೊತೆಗೆ ಪಟ್ಟಣಗಳ ಕಡೆಗೆ ಗ್ರಾಮೀಣ ಯುವಜನರ ಆಕರ್ಷಣೆ ಹೆಚ್ಚುತ್ತಿದ್ದು ಹಳ್ಳಿಗಳು ಖಾಲಿಯಾಗುತ್ತಿರುವ ಮತ್ತು ನಗರಗಳಿಗೆ ಹಳ್ಳಿಯಿಂದ ಪ್ರತಿಭಾ ಪಲಾಯನದ ಅನುಭವಗಳೂ ಕಂಡುಬರುತ್ತಿವೆ. ಕೃಷಿಕ್ಷೇತ್ರ ಮತ್ತು ಗ್ರಾಮೀಣ ಬದುಕು ಇಂದಿನ ಯುವಜನರ ಆಸಕ್ತಿಯಾಗಿ ಉಳಿದಿಲ್ಲ. ಹೀಗೆ ಮುಂದುವರಿದರೆ ಇನ್ನೊಂದೆರಡು ತಲೆಮಾರುಗಳ ನಂತರ ಭಾರತದ ಹಳ್ಳಿಗಳು ಹೇಗಿರಬಹುದು, ಗ್ರಾಮೀಣ ಜೀವನ ಹೇಗಿರಬಹುದು? ಎಂದು “ವಿಚಾರ ಮಾಡಿದರೆ ಚಿಂತೆಗೀಡುಮಾಡುವ ಅನೇಕ ಅಂಶಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಈ “ಹಿನ್ನೆಲೆಯಲ್ಲಿ ಏಕಾತ್ಮ ಮಾನವತೆಯೆನ್ನುವ ಸಮಗ್ರ “ವಿಕಾಸದ ಕಲ್ಪನೆಯನ್ನು ಮುಂದಿಟ್ಟ ಪಂಡಿತ ದೀನದಯಾಳ ಉಪಾಧ್ಯಾಯರ ಚಿಂತನೆಗಳ ಬೆಳಕಿನಲ್ಲಿ ಗ್ರಾಮೀಣ ಭಾರತವನ್ನು ಕಾಣುವುದು ಸೂಕ್ತವಾದೀತು. ಓರ್ವ ಪ್ರಖರ ಟ್ರೋಯರ್ವಾದಿಯಾಗಿದ್ದ ಅವರ ಚಿಂತನೆಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಆರ್ಥ ವ್ಯವಸ್ಥೆಯ ಭಾರತೀಕರಣದ ಅಂಶಗಳು ಎದ್ದು ಕಾಣುತ್ತವೆ. “ಭಾರತ್ ಕೀ ಅರ್ಥನೀತಿ – “ವಿಕಾಸ್ ಕಿ ಏಕ್ ದಿಶಾ” ಎನ್ನುವ ಅವರು ಬರೆದ ಒಂದು ಪುಸ್ತಕದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಕುರಿತು ತಳಸ್ಪರ್ಶಿಯಾಗಿ ನಡೆಸಿದ ಚಿಂತನೆ ವ್ಯಕ್ತವಾಗಿದೆ. ಕೃಷಿ, ಗ್ರಾಮೀಣ ಭಾರತದ ಜನಜೀವನ, ನಮ್ಮ ಸಾಮಾಜಿಕ ವ್ಯವಸ್ಥೆಗಳ ಕುರಿತು ಈ ಪುಸ್ತಕವೂ ಸೇರಿದಂತೆ, ಭಾಷಣ, ಉಪನ್ಯಾಸಗಳು, ಪತ್ರಿಕಾ ಹೇಳಿಕೆಗಳು ಮೊದಲಾದವುಗಳಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ನಮ್ಮ ದೇಶದ ಮಟ್ಟಿಗೆ ಇಂದಿಗೂ ಪ್ರಸ್ತುತ.

ಗ್ರಾಮ ಕೇಂದ್ರಿತ ಅರ್ಥವ್ಯವಸ್ಥೆ

ಪಂಡಿತ್ ದೀನದಯಾಳರ ಏಕಾತ್ಮ ಮಾನವತೆಯ ಸಿದ್ದಾಂತ ಮಾನವನನ್ನು ಕೇಂದ್ರದಲ್ಲಿರಿಸಿ, ಗ್ರಾಮಗಳನ್ನು ಆಧಾರವಾಗುಳ್ಳ ಸ್ವಾವಲಂಬಿ ಸ್ವದೇಶಿ ಆರ್ಥಿಕ ವ್ಯವಸ್ಥೆಯನ್ನು ಭಾರತದಲ್ಲಿ ನಿರ್ಮಾಣ ಮಾಡಬೇಕೆನ್ನುವ ತತ್ವವನ್ನು ಮುಂದಿರಿಸಿದೆ. ಗಾಂಧಿಜಿಯವರ ವಿಚಾರದಂತೆ ಗ್ರಾಮ ಕೇಂದ್ರಿತ ಅರ್ಥವ್ಯವಸ್ಥೆ ಪ್ರತಿಪಾದಕರಾಗಿದ್ದ ಅವರಲ್ಲಿ ಬಡವರು ಮತ್ತು ದೀನದಲಿತರ ಬಗ್ಗೆ ವಿಶೇಷ ಕಾಳಜಿುತ್ತು. ಸರಳ ಜೀವನ ಮತ್ತು ಪ್ರಾಕೃತಿಕ ಸಂಪನ್ಮೂಲಗಳ “ಮಿತಬಳಕೆಯನ್ನು ಅವರು ಪ್ರತಿಪಾದಿಸುತ್ತಿದ್ದರು. ಆರ್ಥಿಕ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಯಾಗಬೇಕಾದ ಅವಶ್ಯಕತೆ ಇದೆ. ನಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ವಿದೇಶಿ ನೆರವನ್ನೇ ಅವಲಂಬಿಸಿದರೆ ಅದು ನಿಶ್ಚಯವಾಗಿಯೂ ನಮಗೆ ಪ್ರತ್ಯಕ್ಷ – ಅಪ್ರತ್ಯಕ್ಷವಾಗಿ ಬಂಧನಕಾರಿಯಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಹಾಗಾಗಿ ಅವರು ಸ್ವಾವಲಂಬಿಯಾದ ಗ್ರಾಮಗಳು ದೇಶದ ಆರ್ಥಿಕತೆಯ ಪ್ರಗತಿಯ ಕೇಂದ್ರಗಳಾಗಬೇಕು ಎಂದು ಪ್ರತಿಪಾದಿಸಿದ್ದರು.

ಕೃಷಿ ಆಧಾರಿತ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಭೂ ಒಡೆತನ ಒಂದು ಪ್ರಮುಖ ವಿಷಯ. ರೈತನ ಬಳಿ ಭೂಮಿಯ ಒಡೆತನ ಇದ್ದಾಗ ಕೃಷಿಯ ಉತ್ಪಾದನೆಯಲ್ಲಿ ಹೆಚ್ಚಳ ಸಾಧ್ಯ ಎನ್ನುವುದು ಅವರ ಅಭಿಮತವಾಗಿತ್ತು. ಪರಿಣಾಮಕಾರಿ ಗೇಣಿ ವ್ಯವಸ್ಥೆಯನ್ನು ಅವರು ಪ್ರತಿಪಾದಿಸಿದರು. ’ಭೂಮಿಯ ಮೇಲೆ ಹಕ್ಕು ಮತ್ತು ಕೃಷಿ ಉತ್ಪಾದನೆಯ ಮೇಲೆ ಹಕ್ಕು ಇದ್ದರೆ ಮಾತ್ರ ಕೃಕರಿಗೆ ಆಸಕ್ತಿ ಬರುತ್ತದೆ. ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಭೂಮಿಯ “ಹಿಡುವಳಿಯಲ್ಲಿ “ಮಿತಿ ಇರಬೇಕು’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಆಹಾರ ಸ್ವಾವಲಂಬನೆ ಮತ್ತು ಅಂದಿನ ದೇಶದ ಒಟ್ಟೂ ಉತ್ಪನ್ನದಲ್ಲಿ ಹೆಚ್ಚಿನ ಪಾಲು ಹೊಂದಿದ್ದ ಕೃಷಿಕ್ಷೇತ್ರ ಗ್ರಾಮೀಣ ಪ್ರದೇಶದ ಪ್ರಮುಖ ಚಟುವಟಿಕೆಯಾಗಿತ್ತು. ಇಂದು ಕೃಷಿಯ ಪಾಲು ಒಟ್ಟೂ ದೇಶೀಯ ಉತ್ಪನ್ನದಲ್ಲಿ ಕಡಿಮೆಯಾಗಿ ಕಂಡರೂ ದೇಶದ ಅರ್ಥವ್ಯವಸ್ಥೆಯ ಪ್ರಗತಿಗೆ ಅಗತ್ಯವಾದ ಸಂಪನ್ಮೂಲಗಳ ಪೂರೈಕೆಯಲ್ಲಿ ಗ್ರಾಮೀಣ ಪ್ರದೇಶದ ಅವಲಂಬನೆ ಕಡಿಮೆಯೇನೂ ಆಗಿಲ್ಲ.

ಕೃಷಿ – ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ

ದೇಶದ ಶೇ. 60 ಕ್ಕೂ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿರುವುದು ಮತ್ತು ದೇಶದ ಅರ್ಥ ವ್ಯವಸ್ಥೆಯಲ್ಲಿ ಕೃಷಿಯ ಪಾಲು ಪ್ರಮುಖವಾಗಿರುವುದನ್ನು ದೀನದಯಾಳರು ಗುರುತಿಸಿದ್ದರು. ಜೊತೆಗೆ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೃಷಿಯ ಪ್ರಗತಿ ಮತ್ತು ರೈತರ ಆರ್ಥಿಕ ಪ್ರಗತಿಯಾಗದೆ ಆಹಾರ ಸ್ವಾವಲಂಬನೆ ಸಾಧ್ಯವಿಲ್ಲ ಎನ್ನುವುದನ್ನೂ ಅವರು ಗುರುತಿಸಿದ್ದರು. ಅಂದಿಗಿಂತ ಇಂದಿಗೆ ದೇಶದ ಆರ್ಥಿಕತೆಗೆ ಕೃಷಿಯ ಪಾಲು ಕಡಿಮೆಯಾಗಿರಬಹುದು ಆದರೆ ಅದರ ಪ್ರಾಮುಖ್ಯತೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳು ಬದಲಾಗಿಲ್ಲ.

ಕೃಷಿ ಪದ್ಧತಿಯ ಸುಧಾರಣೆ, ಕಿರು ನೀರಾವರಿ ಯೋಜನೆಗಳಿಗೆ ಒತ್ತು, ಮಳೆಹಿತ ಬೇಸಾಯಪದ್ಧತಿ ರೂಢಿಸಕೊಳ್ಳುವುದು, ಕೃಷಿಗೆ ಅಗತ್ಯ ಯಂತ್ರೋಪಕರಣ ಬಳಸುವುದು, ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಅನುಸರಿಸಬೇಕಾದ ಮಾನದಂಡ ಹೀಗೆ ಹಲವು ಹತ್ತು ವಿಷಯಗಳ ಕುರಿತು ದೀನದಯಾಳರು ಚಿಂತನೆ ನಡಸಿದ್ದರು.

ಉದಾಹರಣೆಗೆ ರಾಸಾಯನಿಕ ಗೊಬ್ಬರದ ಬಳಕೆಯ ಕುರಿತಂತೆ ವಿಧಾನ್ಯದ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ಭೂಮಿಯನ್ನು ಉತ್ಪಾದಕ ಶಕ್ತಿಯಾಗಿ ಕಾಯಂ ಆಗಿ ಉಳಿಸಿಕೊಳ್ಳಲು ಗೊಬ್ಬರದ ಅವಶ್ಯಕತೆಯಿದೆ. ಆದರೆ ಜಮೀನಿನ ಸರಿಯಾದ ಮಾಪನ, ಉತ್ಪಾದನೆಯ ಪದ್ಧತಿ, ಬೆಳೆ, ನೀರುಣಿಸುವ ಸಾಧನಗಳ ವಿಚಾರ ಮಾಡಿದ ನಂತರವೇ ಅದಕ್ಕೆ ಉಪಯುಕ್ತವಾದ ಯೋಗ್ಯ ಪ್ರಮಾಣದ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬೇಕು’ ಎಂದು ಹೇಳುವ ಅವರು ’ನಿರಂತರವಾಗಿ ರಸಗೊಬ್ಬರಗಳ ಬಳಕಯನ್ನು ಮಾಡಿದರೆ, ಹೊಲದ ಫಲವತ್ತತೆ ಹೆಚ್ಚಾಗಿವುದರ ಬದಲು ಕಡಿಮೆಯಾಗುತ್ತದೆ. ಆದ್ದರಿಂದ ಅದರ ಉಪಯೋಗವನ್ನು ಸೀಮಿತ ಪ್ರಮಾಣದಲ್ಲಿ ಮಾಡಬೇಕು.’ ಎಂದು ಎಚ್ಚರಿಸಲು ಮರೆಯುವುದಿಲ್ಲ.

ಕಮ್ಯುನಿಸ್ಟರು ಪ್ರತಿಪಾದಿಸುತ್ತಿದ್ದ ಸಹಕಾರಿ ಬೇಸಾಯ ಪದ್ಧತಿ ದೀನದಯಾಳ್‌ರಿಗೆ ಒಪ್ಪಿತವಾಗಿರಲಿಲ್ಲ. ಭಾರತೀಯ ಪರಿಸ್ಥಿತಿಯಲ್ಲಿ ಇಂಥಹ ಪದ್ಧತಿ ಸಾಧ್ಯವಿಲ್ಲ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಕೃಷಿಯ ಪ್ರಗತಿಯ ಜೊತೆಗೆ ಕೃಷಿಕನ ಆದಾಯವನ್ನು ಹೆಚ್ಚಿಸಬೇಕೆಂದು ಹೇಳುವ ಅವರು ’ಕೃಷಿ ಆದಾಯವನ್ನು ಹೆಚ್ಚಿಸದ ಹೊರತು ಉದ್ಯೋಗಗಳನ್ನೂ ದೃಢವಾಗಿ ನಿಲ್ಲಿಸಲಾರೆವು. ರೈತನು ತನ್ನ ಉಳಿತಾಯದಲ್ಲಿ ಎಷ್ಟು ಪ್ರಮಾಣದಲ್ಲಿ ಹೆಚ್ಚು ಹೆಚ್ಚು ಔದ್ಯೋಗಿಕ ವಸ್ತುಗಳನ್ನು ಖರೀದಿಸಬಲ್ಲನೋ ಅಷ್ಟು ಹೆಚ್ಚು ಜನರಿಗೆ ಕೃಷಿಯೇತರ ವೃತ್ತಿಗಳಲ್ಲಿ ಕೆಲಸ ದೊರೆಯಬಲ್ಲದು’ ಎನ್ನುವ ಮೂಲಕ ಕೃಷಿಯನ್ನೇ ನಂಬಿರುವ ದೇಶದ ಬಹುದೊಡ್ಡ ಜನಸಂಖ್ಯೆಯ ಆದಾಯ ಹೆಚ್ಚದ ಹೊರತು ಕೃಯೂ ಸುಸ್ಥಿಿರವಾಗಲಾರದು ಮತ್ತು ಇತರ ಉದ್ಯಮಗಳೂ ಪ್ರಗತಿ ಹೊಂದಲಾರವು ಎಂದು ಹೇಳುತ್ತಾರೆ. ಈಗಿನ ಕೇಂದ್ರಸರ್ಕಾರ 2022ರ ಹೊತ್ತಿಿಗೆ ಕೃಕರ ಆದಾಯವನ್ನು ದ್ವಿಗುಣಗೊಳಿಸಬೇಕೆನ್ನುವ ಗುರಿ ಇಟ್ಟುಕೊಂಡಿರುವುದನ್ನು ಈ ದೃಷ್ಟಿಯಿಂದ ಗಮನಿಸಬಹುದು.

 

ಗ್ರಾಮೀಣ ಔದ್ಯೋಗಿಕರಣ

ದುಡಿಯವ ಕೈಗಳಿಗೆ ಉದ್ಯೋಗ ಒದಗಿಸುವಲ್ಲಿ ಕೃಷಿ ಕ್ಷೇತ್ರದ ಸಾಮರ್ಥ್ಯ ಅಸಾಧಾರಣವಾದದ್ದಾದರೂ ವರ್ಷದುದ್ದಕ್ಕೂ ಕೃಷಿ ಕಾರ್ಯ ಚಟುವಟಿಕೆಗಳು ಇರುವುದಿಲ್ಲ. ಕೆಲವೊಂದಿಷ್ಟು ತಿಂಗಳು ಕೆಲಸ ಹೆಚ್ಚಿದ್ದು ಕಾರ್ಮಿಕರ ಬೇಡಿಕೆಯೂ ಹೆಚ್ಚಿರುತ್ತದೆ. ನಾಟಿ, ಕುಯಿಲು ಮೊದಲಾದ ಸಂದರ್ಭಗಳಲ್ಲಿ ಕಾರ್ಮಿಕರ ಕೊರತೆಯೂ ಕಂಡುಬರುತ್ತದೆ. ಹಾಗೆಯೆ ಈ ಕೆಲಸ ಮುಗಿದ ನಂತರ ದುಡಿಯುವ ಕೈಗಳಿಗೆ ಕೆಲಸ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿಕರು ಮತ್ತು ಕೃಷಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಅಂತವರನ್ನು ನಗರಗಳಿಗೆ ಸ್ಥಳಾಂತರಿಸಿ ಕೈಗಾರಿಕೆಗಳಿಗೆ ನೇಮಿಸಿಕೊಂಡರೆ ಮತ್ತೆ ಕೃಷಿ ಕೆಲಸಗಳ ಶುರುವಾದ ಸಮಯದಲ್ಲಿ ಕಾರ್ಮಿಕರ ಕೊರತೆ ಉಂಟಾಗುತ್ತದೆ. ಆದ್ದರಿಂದ ಬೇಸಾಯದ ಕೆಲಸಗಳಿಂದ ಬಿಡುವಾದ ಸಮಯದಲ್ಲಿ ದುಡಿಯಲು ಗ್ರಾಮೀಣ ಪ್ರದೇಶಗಳಲ್ಲಿ ಪೂರಕ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂದು ದೀನದಯಾಳರು ಅಭಿಪ್ರಾಯ ಹೊಂದಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕಗಳ ಸ್ಥಾಪನೆ ಆಗಬೇಕು, ಕೈಗಾರಿಕೆಗಳ “ಕೇಂದ್ರೀಕರಣ ನಡೆಯಬೇಕು ಎಂದು ಅವರು ಒತ್ತಿ ಹೇಳುತ್ತಿದ್ದರು. ಇದರಿಂದ ಗ್ರಾಮೀಣ ಪ್ರದೇಶಗಳ ವರಮಾನವೂ ಹೆಚ್ಚುತ್ತದೆ.

ಹಾಗೆಯೇ ಇಂದಿಗೂ ಸಹ ಕೃಷಿ ಕ್ಷೇತ್ರವನ್ನೇ ಅವಲಂಬಿಸಿರುವ ಜನಸಂಖ್ಯೆಯ ಪ್ರಮಾಣವೂ ಹೆಚ್ಚಿದೆ. ಅವರನ್ನು ಉತ್ಪಾದನೆ ಮೊದಲಾದ ಇನ್ನಿತರ ಕ್ಷೇತ್ರಗಳಿಗೆ ತೊಡಗಿಸಬೇಕಾದ ಅಗತ್ಯವಿದೆ. ದಿನದಯಾಳರು ಪ್ರತಿಪಾದಿಸಿದ ಗ್ರಾಮೀಣ ಸಣ್ಣ ಕೈಗಾರಿಕೆ ಮತ್ತು ಕೈಗಾರಿಕೆಗಳ ವಿಕೇಂದ್ರೀಕರಣದಿಂದ ಮಾತ್ರ ಇದು ಸಾಧ್ಯ.

ಹಳ್ಳಿಗಳ ಪ್ರಗತಿಯಾಗಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿಯೂ ನಗರದಲ್ಲಿ ಸಿಗಬಹುದಾದ ಸೌಲಭ್ಯಗಳು ದೊರಕಬೇಕು ಎನ್ನುವ ದೃಷ್ಟಿಯಿಂದ Provision of Urban Amenities to Rural Areas (PURA)  ಎನ್ನುವ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು ಭಾರತದ ಹಿಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಡಾ ಅಬ್ದುಲ್ ಕಲಾಂ. ಗ್ರಾಣ ಪ್ರದೇಶದ ಸಮಸ್ಯೆೆಗಳು ಮತ್ತು ಅದರ ಪರಿಹಾರದ ಕುರಿತ “ಷಯಗಳನ್ನು ಚರ್ಚಿಸಿರುವ ’ಟಾರ್ಗೆಟ್ 3 ಬಿಲಿಯನ್’ ಎನ್ನುವ ತಮ್ಮ ಪುಸ್ತಕದಲ್ಲಿ ಈ ಕುರಿತಯ “ಸ್ತತವಾಗಿ ಉಲ್ಲೇಖಿಸಿದ್ದಾರೆ. ಗ್ರಾಮೀಣ ಕೇಂದ್ರಗಳಲ್ಲಿ ನಗರಗಳಿಗೆ ಸಮನಾದ ಮೂಲಸೌಕರ್ಯ ನಿರ್ಮಾಣ ಮತ್ತು ಸೇವಾ ಸೌಲಭ್ಯಗಳನ್ನು ಒದಗಿಸಿ ನಗರಗಳ ಹೊರಗೆ ಆರ್ಥಿಕ ಚಟುವಟಿಕೆಗಳ ಅವಕಾಶವನ್ನು ಹುಟ್ಟುಹಾಕಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ರಸ್ತೆಗಳ ಮೂಲಕ ಭೌತಿಕ ಸಂಪರ್ಕ, ಎಲೆಕ್ಟ್ರಾನಿಕ್ ನೆಟ್‌ವರ್ಕ್‌ಗಳ ಮೂಲಕ ಸಂವಹನ ಸಂಪರ್ಕ, ವೃತ್ತಿಪರ ಮತ್ತು ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಮಾಹಿತಿ ಮತ್ತು ಜ್ಞಾನದ ಸಂಪರ್ಕಗಳನ್ನು ಸಂಯೋಜಿತ ರೀತಿಯಲ್ಲಿ ಒದಗಿಸಿಬೇಕು. ಆಗ ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಹಳ್ಳಿಗಳಲ್ಲಿ ಗರಿಗೆದರುತ್ತವೆ ಎನ್ನುವುದು ಅವರ ಕಲ್ಪನೆಯಾಗಿತ್ತು. ಕೇಂದ್ರ ಸರ್ಕಾರವು ಅನೇಕ ರಾಜ್ಯಗಳಲ್ಲಿ ಮಾದರಿ PURA ಪ್ರಾಜೆಕ್‌ಟ್‌‌ಗಳನ್ನು 2004 ರಿಂದ ನಡೆಸುತ್ತಿದೆ. ಅಧಿಕಾರಿ ವಲಯದ ಎಂದಿನ ನಿಷ್ಕಾಳಜಿ ಹಾಗೂ ಸರ್ಕಾರದ ರಾಜಕೀಯ ನಾಯಕತ್ವ ವಹಿಸಿದವರ ನಿರಾಸಕ್ತಿಯ ಪರಿಣಾಮ ಈ ಯೋಜನೆ ಯಶಸ್ವಿಯಾಯಿತೆನ್ನುವುದು ಕಷ್ಟ. ಆದರೆ ಡಾ ಅಬ್ದುಲ್ ಕಲಾಂ ಅವರ PURA ಪರಿಕಲ್ಪನೆ ಗ್ರಾಮೀಣ ಇಂದಿನ ಔದ್ಯಮಿಕ ಕಾಲಮಾನಕ್ಕೆ ಹೊಂದುವ ಆರ್ಥಿಕ ಚಟುವಟಿಕೆಗಳನ್ನು ನಗರಗಳ ಹೊರಗೆ ಗ್ರಾಮಗಳಲ್ಲೂ ನಡೆಸಲು ಅವಕಾಶವಾಗುವುದಕ್ಕೆ ಪೂರಕವಾಗಿದೆ. ಇಂಟರ್ನೆಟ್, ಮೊಬೈಲ್ ಮೊದಲಾದ ಸಂವಹನ ಮತ್ತು ಸಂಪರ್ಕ ಸಾಧನ ತಂತ್ರಜ್ಞಾನದಲ್ಲಾದ ಪ್ರಗತಿಯಿಂದ ಇದು ಸಾಧ್ಯವೂ ಹೌದು. ಗ್ರಾಮಗಳ ಯುವಜನರು ಉದ್ಯೋಗ ಅವಕಾಶಗಳಿಗಾಗಿ ನಗರಗಳತ್ತ ಮುಖಮಾಡದೇ ತಮ್ಮದೇ ಊರಿನಲ್ಲಿ, ತಮ್ಮ ಪರಿವಾರಗಳ ಜೊತೆಯಿದ್ದು ನಗರದ ನೌಕರಿಗೆ ಸಮನಾದ ಕೆಲಸವನ್ನು ತಮ್ಮ ಊರಿನಲ್ಲಿಯೇ ಮಾಡುವ ಸಾಧ್ಯತೆಯನ್ನು ಅಬ್ದುಲ್ ಕಲಾಂರ ಪುರಾದಂತಹ ಯೋಜನೆಗಳು ಒದಗಿಸಬಲ್ಲವು.

ಬಡತನ ನಿರ್ಮೂಲನೆ

ಸರ್ವರ್ವವಿಧ ಸಂಪನ್ಮೂಲಗಳಿಂದಲೂ ಶ್ರೀಮಂತವಾಗಿರುವ ಭಾರತದಲ್ಲಿ ಬಹುದೊಡ್ಡ ಪ್ರಮಾಣದ ಜನಸಂಖ್ಯೆ ಬಡತನ ರೇಖೆಯ ಕೆಳಗಿರುವುದು ದೌರ್ಭಾಗ್ಯವಾದರೂ ಸತ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವಯುತವಾಗಿ ಬದುಕಬಲ್ಲ ಸ್ಥಿತಿ ನಿರ್ಮಾಣವಾಗಬೇಕೆನ್ನುವ ದೃಷ್ಟಿಯಿಂದ ’ಅಂತ್ಯೋದಯ’ ತತ್ವವನ್ನು ಅವರು ಮುಂದಿಟ್ಟರು. ಬಡತನ ಮತ್ತು ಗ್ರಾಮೀಣ ಜೀವನ ಒಂದಕ್ಕೊಂದು ಸೇರಿವೆ. ಹಾಗಾಗಿ ಅಂತ್ಯೋದಯ ಪರಿಕಲ್ಪನೆಯ ಅಡಿಯಲ್ಲಿ ಬಡತನ ನಿರ್ಮೂಲನೆ ಗ್ರಾಮೀಣ ಪ್ರದೇಶಗಳ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರವಾದರೂ ದೇಶದ ಸಾಂಸ್ಕೃತಿಕ ಪರಂಪರೆಯ ಬೇರುಗಳಿರುವುದು ಹಳ್ಳಿಗಳಲ್ಲಿ ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಆದರೆ ಹೆಚ್ಚುತ್ತಿರುವ ನಗರೀಕರಣದ ಪರಿಣಾಮ ಪಟ್ಟಣಗಳಿಗೆ ಸಂಪನ್ಮೂಲಗಳನ್ನು ಪೋರೈಸುವ ಕೇಂದ್ರಗಳಾಗಿ ಹಳ್ಳಿಗಳು ಬದಲಾಗುತ್ತಿರುವುದು ಇಂದಿನ ವಾಸ್ತವ. ಜೊತೆಗೆ ನಗರಜೀವನದೆಡೆಗೆ ಆಕರ್ಷಕರಾಗಿ ಮತ್ತು ಉದ್ಯೋಗಾವಕಾಶಗಳ ಕಾರಣದಿಂದಾಗಿ ಶಹರುಗಳಿಗೆ ಬಹುದೊಡ್ಡ ಪ್ರಮಾಣದಲ್ಲಿ ಯುವಜನರು ವಲಸೆ ಬರುತ್ತಿದ್ದಾರೆ. ಕೃಷಿ ಉದ್ಯೋಗದಿಂದ ಸೂಕ್ತ ಪ್ರತಿಫಲ ದೊರಕದ ಕಾರಣ ಮತ್ತು ಬರ, ನೀರಿನ ಕೊರತೆ ಮೊದಲಾದ ಕಾರಣಗಳಿಂದ ನಗರಗಳತ್ತ ಪ್ರತಿವರ್ಷ ಬಯಲುಸೀಮೆಯ ಪ್ರದೇಶಗಳಿಂದ ಇಂದಿಗೂ ರೈತರು ಗುಳೆ ಹೋಗುತ್ತಿರುವ ಪರಿಸ್ಥಿತಿ ಇದೆ. ಪರಿಣಾಮ ಗ್ರಾಮೀಣ ಸಾಂಸ್ಕೃತಿಕ ಬದುಕಿನ ಬೇರುಗಳು ಸಡಿಲಗೊಳ್ಳುತ್ತಿವೆ. ಊರು ಖಾಲಿಯಾಗುತ್ತಿವೆ, ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ ಎನ್ನುವ ಮಾತುಗಳನ್ನು ನಾವು ಕೇಳಿರಬಹುದು. ಆದ್ದರಿಂದ ಗ್ರಾಮೀಣ ಪ್ರಗತಿಗೆ ಸಂಬಂಧಿಸಿದ ವಿಷಯಗಳು ಈ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸಮಾಡಬೇಕಿದೆ. ದೇಶೀಯ ಅರ್ಥವ್ಯವಸ್ಥೆಯ ಕುರಿತು ಗ್ರಾಮೀಣ ಸ್ವಾವಲಂಬಿ ಮತ್ತು ಸಾಂಸ್ಕೃತಿಕ ಬದುಕಿನ ವಿಷಯದಲ್ಲಿ ಆಳವಾದ ಚಿಂತನೆ ನಡೆಸಿದ ಪಂಡಿತ್ ದೀನದಯಾಳ್ ಉಪಾಧ್ಯಾಯರ ವಿಚಾರಗಳತ್ತ ಗಮನಹರಿಸುವುದು, ಆ ಚಿಂತನೆಗಳ ಬೆಳಕಿನಲ್ಲಿ ಗ್ರಾಮ ವಿಕಾಸದ ಯೋಜನೆಗಳನ್ನು ರೂಪಿಸಿದರೆ ಒಂದಿಷ್ಟು ಪರಿಹಾರಗಳು ದೊರಕಬಲ್ಲವು. ಭಾರತದ ಹೃದಯ ನಿಜವಾಗಿ ಗ್ರಾಮಗಳಲ್ಲಿ ನೆಲೆಸಬಲ್ಲದು.