ಬಿಜೆಪಿ ಟ್ರಬಲ್ ಶೂಟರ್, ಕೇಂದ್ರ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿಗೆ ಆಗಸ್ಟ್ 9 ರಿಂದ ನವದೆಹಲಿ AIMSನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ಮಧ್ಯಾಹ್ನ 12.09 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಜೇಟ್ಲಿ ನಿಧನರಾಗಿದ್ದಾರೆ.

ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯ ಕಾರಣದಿಂದಲೇ ಮೋದಿ 2.0 ಅವಧಿಯಲ್ಲಿ ಯಾವುದೇ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿರಲಿಲ್ಲ. 1952 ಡಿಸೆಂಬರ್ 28ರಂದು ಜನಿಸಿದ್ದ ಜೇಟ್ಲಿ, ದೆಹಲಿ ವಿವಿಯಿಂದ 1977ರಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ 1974ರಲ್ಲಿದೆಹಲಿ ವಿವಿ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದರು ಸುಪ್ರೀಂಕೋರ್ಟ್, ಹೈಕೋರ್ಟ್‍ಗಳಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೇಟ್ಲಿ 1982ರಲ್ಲಿ ಸಂಗೀತಾರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ರೋಹನ್ ಜೇಟ್ಲಿ ಮತ್ತು ಮಗಳು ಸೊನಾಲಿ ಜೇಟ್ಲಿ ಇಬ್ಬರೂ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.

ಮುಂದಿನ ತಿಂಗಳು ಭಾರತದಲ್ಲಿ ರಫೆಲ್ ಹಾರುತ್ತೆ ಅಂದರೆ ಮುಖ್ಯ ಕಾರಣ ಅರುಣ್ ಜೇಟ್ಲಿ. ಫ್ರಾನ್ಸ್ ಜತೆ ಜೇಟ್ಲಿ, ಕಡಿಮೆ ಅವಧಿಯಲ್ಲಿ ರಫೆಲ್‍ಗಾಗಿ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾಗಿದ್ದರು. ಜತೆಗೆ ಜಿಎಸ್‍ಟಿ ಜಾರಿಗೊಳಿಸುವುದು ಜೇಟ್ಲಿ ಕನಸು ಅಂದರೆ ತಪ್ಪಾಗಲಾರದು. ಏಕೆಂದರೆ 20 ವರ್ಷಗಳಿಂದ ಈಬಗ್ಗೆ ಅಧ್ಯಯನ ಮಾಡಿದ್ದ ಜೇಟ್ಲಿ ಮೋದಿ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಜಿಎಸ್‍ಟಿ ಜಾರಿಗೊಳಿಸಲು ಯಶಸ್ವಿಯಾಗಿದ್ದರು.

ಅರುಣ್ ಜೇಟ್ಲಿಯವರ ನಿಧನದ ಬಗ್ಗೆ ವಿಶ್ವ ಸಂವಾದ ಕೇಂದ್ರವು ವಿಷಾದ ವ್ಯಕ್ತಪಡಿಸುತ್ತದೆ.