ಜುಲೈ 26, 2019, ಬೆಂಗಳೂರು : ಕಾರ್ಗಿಲ್‌ ವಿಜಯದ 20ನೇ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಭೇಟಿ ನೀಡಿ ದೇಶದ ರಕ್ಷಣೆಯಲ್ಲಿ ಪರಮ ತ್ಯಾಗ ಗೈಯುತ್ತಿರುವ ವೀರ ಸೈನಿಕರಿಗೆ ಗೌರವ ಸಲ್ಲಿಸಲು ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕ ಜನರಿಗೆ ಕರೆ ನೀಡಿತ್ತು.

ಈ ಸಂದರ್ಭದಲ್ಲಿ ಜಮ್ಮು ಕಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕದ ತಂಡ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದವರ  ನೆನಪಿನಲ್ಲಿ ಸ್ಮೃತಿ ಪುತ್ಥಳಿಗೆ ಪುಷ್ಟನಮನ ಸಲ್ಲಿಸಿತು.

JKSC, Karnataka Chapter President, Major R D Bhargava

“ಸ್ವಾತಂತ್ರ್ಯಾನಂತರದ ಮೊದಲ ಭಾರತ ಪಾಕ್‌ ಯುದ್ಧದಲ್ಲಿ ನಮ್ಮ ವೀರ ಸೈನಿಕರು ಜಮ್ಮು ಕಾಶ್ಮೀರ ರಾಜ್ಯವನ್ನು ವೈರಿಯ ಅತಿಕ್ರಮಣದಿಂದ ಉಳಿಸಿದರು. 1999ರ ಕಾರ್ಗಿಲ್‌ ಕದನದಲ್ಲಿಯೂ ವೈರಿಯ ಅತಿಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ಆಪರೇಶನ್‌ ವಿಜಯ್‌ ಯಶಸ್ವಿಯಾಯಿತು. ೧೯೭೧ರ ಭಾರತ ಪಾಕಿಸ್ತಾನ ನಡುವಿನ  ಯುದ್ಧದ ನಂತರವೂ ಪಾಕಿಸ್ತಾನದಿಂದ ಸತತ ಉಪಟಳಗಳನ್ನು ಎದುರಿಸುತ್ತಾ,  ಅವರು ಒಡ್ಡಿದ್ದ ದುಷ್ಟ,  ಅನೈತಿಕ ಯುದ್ಧ ರಚನೆಗಳಿಗೆ ತಡೆಯೊಡ್ಡುತ್ತಾ, ೧೯೯೯ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಾರ್ಗಿಲ್ ಡ್ರಾಸ್ ಪ್ರಾಂತಗಳಲ್ಲಿ ಭಾರತವು ಪ್ರಾಬಲ್ಯ ಮೆರೆಯಲು ಸಾಧ್ಯವಾದದ್ದು ನೂರಾರು ವೀರ ಯೋಧರ ಪ್ರಾಣಾರ್ಪಣೆಯ ಕಾರಣದಿಂದಾಗಿಯೇ. ಕಾಶ್ಮೀರದ ಭಯೋತ್ಪಾದಕರೊಂದಿಗಿನ ಹೋರಾಟ ಮತ್ತು ಪಾಕಿಸ್ತಾನದ ಛಾಯಾ ಸಮರದಲ್ಲಿ ನೂರಾರು ಯೋಧರು ಪ್ರತಿವರ್ಷ ಪ್ರಾಣಾರ್ಪಣೆ ಮಾಡುತ್ತಾರೆ. ದೇಶದ ಗಡಿಗಳು ಸುರಕ್ಷಿತವಾಗಲು ಕಾರಣ ಸಿಯಾಚಿನ್‌ನಂತಹ ಕಠಿಣ ವಾತಾವರಣದ ಪ್ರದೇಶದಂತಲ್ಲಿಯೂ ನಮ್ಮ ಸೈನಿಕ ಪಹರೆ ಮಾಡುತ್ತಿರುವುದು. ಆದ್ದರಿಂದ ಅವರ ತ್ಯಾಗ ಬಲಿದಾನವನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕ ಅಧ್ಯಕ್ಷರಾದ ಮೇಜರ್ ಭಾರ್ಗವ ಅವರು ಹೇಳಿದರು.

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕವು ಕಾರ್ಗಿಲ್‌ ವಿಜಯ್‌ ದಿವಸದಂದು ಜನರು ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ತೆರಳಿ ಗೌರವ ಸಮರ್ಪಿಸುಲು ಸಾಮಾಜಿಕ ಜಾಲತಾಣಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಿತ್ತು. ಕಾಲೇಜುಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಕರೆತರುವಂತೆ ಒತ್ತಾಯಿಸಲಾಯಿತು. ನೂರಾರು ನಾಗರಿಕರು ಅಂದು ಸ್ಮಾರಕಕ್ಕೆ ಬಂದು ಗೌರವ ಸಮರ್ಪಿಸಿದರು. ಅನೇಕ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿ ಹುತಾತ್ಮರಿಗೆ ಗೌರವ ಸಲ್ಲಿಸುವುದರ ಜೊತೆಗೆ ದೇಶರಕ್ಷಣೆಯಲ್ಲಿ ಭಾರತೀಯ ಸೈನ್ಯದ ಸೇವೆಯನ್ನು ಅರಿತರು.

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕುರಿತು

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರವು (JKSC) ಒಂದು ಸ್ವಾಯುತ್ತ ವಿಚಾರ ವೇದಿಕೆಯಾಗಿದ್ದು ಜಮ್ಮು ಕಾಶ್ಮೀರ ಕುರಿತ ವಸ್ತುನಿಷ್ಠ ಮತ್ತು ಸಮಗ್ರ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಭಾರತದ ಆಯಕಟ್ಟಿನ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ನೀತಿಗಳ ಅಧ್ಯಯನ ಮತ್ತು ಅಂತಹ ಅಧ್ಯಯನದ ಫಲಿತಾಂಶಗಳನ್ನು ಸಾರ್ವಜನಿಕರ ಮಧ್ಯೆ ಮುಂದಿಡುವ ಉದ್ದೇಶದಿಂದ ೨೦೧೧ರಲ್ಲಿ ಈ ವಿಚಾರ ವೇದಿಕೆಯು ಕಾರ್ಯಾರಂಭ ಮಾಡಿತು. ಇಂದು ಅಧ್ಯಯನ ಕೇಂದ್ರವು ೧೫ ಶಾಖೆಗಳು, ೨೫ ಚಟುವಟಿಕಾ ಕೇಂದ್ರಗಳು ಮತ್ತು ೫೦ ಸಹವರ್ತಿ ಸಂಸ್ಥೆಗಳನ್ನು ಒಳಗೊಂಡಿದ್ದು ೧,೦೦೦ಕ್ಕೂ ಹೆಚ್ಚು ಸ್ವಯಂಸೇವಕರು ದೇಶ ಮತ್ತು ವಿದೇಶಗಳಲ್ಲಿ ಕಾರ್ಯ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕರ್ನಾಟಕ ಶಾಖೆಯು ಆರಂಭವಾದಾಗಿನಿಂದ ಸೆಮಿನಾರ್, ಕಾರ್ಯಾಗಾರ ಹಾಗೂ ಅನೇಕ ಶೈಕ್ಷಣಿಕ ಮತ್ತು ಬೌದ್ಧಿಕ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ.