– ಡಾ. ಮೋಹನ್‌ಭಾಗವತ್, ಸರಸಂಘಚಾಲಕ, ರಾ.ಸ್ವ. ಸಂಘ

ಭಾರತ ದೇಶದ ಆಧುನಿಕ ಇತಿಹಾಸ ಹಾಗೂ ಸ್ವತಂತ್ರ ಭಾರತದ ಉತ್ಥಾನದ ಗಾಥೆಯಲ್ಲಿ ಸದಾಕಾಲಕ್ಕೂ ಅಂಕಿತರಾಗುವ ಮಹಾಪುರುಷರು ಮತ್ತು ಪ್ರಾಚೀನಕಾಲದಿಂದ ನಡೆದು ಬಂದಿರುವ ಇತಿಹಾಸ ಗಾಥೆಯ ಪರ್ವದಲ್ಲಿ ಸೇರಿಕೊಂಡಿರುವವರಲ್ಲಿ ಪೂಜ್ಯ ಮಹಾತ್ಮ ಗಾಂಧೀಜಿಯವರ ಹೆಸರು ಪ್ರಧಾನವಾಗಿದೆ. ಭಾರತವು ಆಧ್ಯಾತ್ಮಿಕ ದೇಶವಾಗಿದ್ದು, ಆಧ್ಯಾತ್ಮಿಕ ಆಧಾರದ ಮೇಲೆಯೇ ಉತ್ಥಾನಗೊಳ್ಳುವುದನ್ನು ಆಧಾರವಾಗಿಟ್ಟುಕೊಂಡು ಭಾರತೀಯ ರಾಜಕಾರಣವನ್ನು ಆಧ್ಯಾತ್ಮಿಕ ತಳಹದಿಯ ಮೇಲೆ ರಚಿಸುವ ಪ್ರಯೋಗವನ್ನು ಮಹಾತ್ಮ ಗಾಂಧಿ ಮಾಡಿದರು. 

 ಗಾಂಧೀಜಿಯ ಪ್ರಯತ್ನವು ಅಧಿಕಾರ ರಾಜಕಾರಣಕ್ಕಷ್ಟೇ ಸೀಮಿತವಾಗಿರಲಿಲ್ಲ. ಸಮಾಜ ಮತ್ತು ಅದರ ನೇತೃತ್ವದಲ್ಲಿ ಸಾತ್ವಿಕ ಆಚರಣೆಯನ್ನು ಮೂಡಿಸುವ ಬಗ್ಗೆ ಅವರು ಅಧಿಕ ಒತ್ತು ನೀಡುತ್ತಿದ್ದರು. ಅಹಂಕಾರ ಮತ್ತು ವಿಕೃತಿಗಳ  ಆಧಾರದ ಮೇಲೆ ನಡೆಯುತ್ತಿದ್ದ ದೇಶಾಂತರ್ಗತ ಜಾಗತಿಕ ಮತ್ತು ರಾಜಕಾರಣವನ್ನು ಅವರು ಪೂರ್ಣವಾಗಿ ತಿರಸ್ಕರಿಸಿದ್ದರು. ಸತ್ಯ, ಅಹಿಂಸೆ, ಸ್ವಾವಲಂಬನೆ ಹಾಗೂ ಮಾನವರೆಲ್ಲರ ನೈಜ ಸ್ವಾತಂತ್ರ್ಯವನ್ನು ಅವಲಂಬಿಸಿದ ಭಾರತದ ಜನಜೀವನವಿರಬೇಕು, ದೇಶ ಮತ್ತು ಮಾನವತೆಯ ಬಗ್ಗೆ ಇದೇ ಅವರ ಸ್ವಪ್ನವಾಗಿತ್ತು. ಗಾಂಧೀಜಿಯವರ ಈ ಚಿಂತನೆಯು ಅವರ ಸ್ವಂತ ಜೀವನದಲ್ಲಿ ಪೂರ್ಣವಾಗಿ ಮೈಗೂಡುತ್ತಿತ್ತು.

 1922 ರಲ್ಲಿ ಗಾಂಧೀಜಿಯ ಬಂಧನದ ಬಳಿಕ ನಾಗಪುರ ಕಾಂಗ್ರೆಸ್ ಆಶ್ರಯದಲ್ಲಿ ಒಂದು ಸಾರ್ವಜನಿಕ ಸಭೆ ನಡೆದಿತ್ತು. ಆ ಸಭೆಯಲ್ಲಿ ಡಾ. ಹಡಗೇವಾರರು, ಗಾಂಧೀಜಿಯವರು ಪುಣ್ಯಪುರುಷರೆಂಬ ವಿಶೇಷಣದಿಂದ ಸಂಬೋಧಿಸಿ ಅವರ ನುಡಿ ಮತ್ತು ನಡೆಯಲ್ಲೇನೂ ಅಂತರವಿಲ್ಲ ಎಂದು ಹೇಳಿದರು. ಜೀವನದಲ್ಲಿ ತಮ್ಮ ಧೈರ್ಯ ಹಾಗೂ ವಿಚಾರಗಳಿಗಾಗಿ ಸರ್ವಸ್ವವನ್ನೂ ತ್ಯಾಗಮಾಡುವ ಅವರ ಪೂರ್ಣ ಸಿದ್ಧತೆಯಿದೆ. ಕೇವಲ ಗಾಂಧೀಜಿಯ ಗುಣಗಾನ ಮಾಡುವುದರಿಂದಷ್ಟೇ ಅವರ ಕಾರ್ಯದಲ್ಲಿ ಪ್ರಗತಿಯಾಗಲಾರದು ಎಂದು ಅವರು ಹೇಳಿದರು. ಗಾಂಧೀಜಿಯವರ ಈ ಗುಣಗಳನ್ನು ಅನುಸರಿಸಿ ತಮ್ಮ ಜೀವನವನ್ನು ರೂಪಿಸಿಕೊಂಡರೆ, ಅದರಿಂದಲೇ ಕಾರ್ಯದಲ್ಲಿ ಪ್ರಗತಿಯಾದೀತು.

 ಪರಾಧೀನತೆಯಿಂದ ಮೂಡಿಬರುವ ದಾಸ್ಯಮಾನಸಿಕತೆಯು ಅದೆಷ್ಟು ಹಾನಿಕರವೆಂದು ಗಾಂಧೀಜಿ ತಿಳಿದಿದ್ದರು. ಆ ಮಾನಸಿಕತೆಯಿಂದ ಮುಕ್ತವಾದ, ಶುದ್ಧ ಸ್ವದೇಶಿ ದೃಷ್ಟಿಯಿಂದ ಭಾರತದ ವಿಕಾಸ ಮತ್ತು ಆಚರಣೆಯ ಒಂದು ಸ್ವಪ್ನಚಿತ್ರವನ್ನು ಹಿಂದ್ ಸ್ವರಾಜ್ ರೂಪದಲ್ಲಿ ಅವರು ಬರೆದಿದ್ದಾರೆ. ಆ ಕಾಲದ ಜಗತ್ತಿನಲ್ಲಿ ಎಲ್ಲರ ಕಣ್ಣುಕೋರೈಸುವಂತಹ ಭೌತಿಕತೆಯಿಂದ ವಿಜಯಿಯಾದ ಪಾಶ್ಚಾತ್ಯ ಜಗತ್ತು, ಸಮಗ್ರ ಜಗತ್ತಿನಲ್ಲಿ ತನ್ನ ಪದ್ಧತಿ ಹಾಗೂ ಶೈಲಿಯೊಂದಿಗೆ ಅಧಿಕಾರದ ಬಲದಿಂದ ಶಿಕ್ಷಣವನ್ನು ವಿಕೃತಗೊಳಿಸಿ ಆರ್ಥಿಕ ದೃಷ್ಟಿಯಿಂದ ಎಲ್ಲರನ್ನೂ ತನ್ನ ಆಶ್ರಿತರನ್ನಾಗಿ ಮಾಡುವ ಪ್ರಯತ್ನದಲ್ಲಿ ತೊಡಗಿ ಮುಂದುವರೆಯುತ್ತಿತ್ತು. ಇಂತಹ ಸಮಯದಲ್ಲಿ ಗಾಂಧೀಜಿಯವರು ಮಾಡಿದ ಈ ಪ್ರಯತ್ನವು ಸ್ವತ್ವದ ಆಧಾರದ ಮೇಲೆ ಜೀವನದ ಎಲ್ಲಾ ಮುಖಗಳಿಗೂ ಒಂದು ನವೀನ ವಿಚಾರ ನೀಡುವ ಬಹು ಯಶಸ್ವಿ ಪ್ರಯೋಗವಾಗಿತ್ತು. ಆದರೆ ದಾಸ್ಯಮಾನಸಿಕತೆಯ ಜನ ಏನೂ ವಿವೇಚಿಸದೆಯೇ ಪಶ್ಚಿಮದಿಂದ ಬಂದ ವಿಷಯಗಳನ್ನು ಪ್ರಮಾಣವೆಂದು ಭಾವಿಸಿ ತಮ್ಮ ಪೂರ್ವಜರು, ಪೂರ್ವ ಗೌರವ ಹಾಗೂ ಪೂರ್ವ ಸಂಸ್ಕಾರಗಳನ್ನು ಹೀನ ಮತ್ತು ಹೇಯವೆಂದು ಭಾವಿಸಿ ಅಂಧಾನುಕರಣೆ ಮತ್ತು ಭಟ್ಟಂಗಿತನದಲ್ಲಿ ಮೈಮರೆತಿದ್ದರು. ಅದರ ಬಹು ಭಾರೀ ಪ್ರಭಾವವು ಇಂದಿಗೂ ಭಾರತದ ದಿಶೆ ಮತ್ತು ದಶೆಯ ಮೇಲೆ ಕಂಡುಬರುತ್ತಿದೆ. 

 ಇತರ ದೇಶಗಳ ಸಮಕಾಲೀನ ಮಹಾಪುರುಷರೂ ಗಾಂಧೀಜಿಯವರ ಭಾರತ-ಕೇಂದ್ರಿತ ಚಿಂತನೆಯಿಂದ ಕೆಲ ಅಂಶಗಳನ್ನು ಗ್ರಹಿಸಿಕೊಂಡು ತಮ್ಮ ತಮ್ಮ ದೇಶದ ವೈಚಾರಿಕತೆಗೆ ಯೋಗದಾನ ನೀಡಿದರು. ಐನ್‌ಸ್ಟೀನ್ ಅಂತೂ ಗಾಂಧೀಜಿ ನಿಧನದ ಬಗ್ಗೆ ಹೇಳಿದ್ದರು – ಇಂತಹ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಬದುಕಿ ಮರೆಯಾದ ಎಂಬ ಸಂಗತಿಯನ್ನು ನಂಬಲೂ ಸಹ ಮುಂದಿನ ಪೀಳಿಗೆಗಳಿಗೆ ಕಠಿಣವಾದೀತು. ಇಷ್ಟೊಂದು ಆಚರಣೆ ಮತ್ತು ವಿಚಾರಗಳನ್ನು ಗಾಂಧೀಜಿಯವರು ತಮ್ಮ ಜೀವನದ ಮೇಲ್ಪಂಕ್ತಿಯಿಂದ ನಮ್ಮೆದುರು ಮಂಡಿಸಿದ್ದಾರೆ. 

 ಗಾಂಧೀಜಿಯವರು 1936 ರಲ್ಲಿ ವರ್ಧಾ ಬಳಿ ನಡೆದಿದ್ದ ಸಂಘ ಶಿಬಿರಕ್ಕೆ ಬಂದಿದ್ದರು. ಮರುದಿನ ಗಾಂಧೀಜಿ ನಿವಾಸದಲ್ಲಿ ಡಾ. ಹೆಡಗೇವಾರರೊಂದಿಗೆ ಅವರ ಭೇಟಿ ನಡೆಯಿತು. ಗಾಂಧೀಜಿಯವರೊಂದಿಗೆ ಅವರ ದೀರ್ಘ ಮಾತುಕತೆ ಮತ್ತು ಪ್ರಶ್ನೋತ್ತರ ನಡೆದಿದ್ದು ಈಗ ಪ್ರಕಟವಾಗಿದೆ. ವಿಭಜನೆಗೆ ಮುಂಚಿನ ರಕ್ತದೋಕುಳಿಯ ದಿನಗಳಲ್ಲಿ ಅವರ ನಿವಾಸಸ್ಥಾನದ ಬಳಿ ನಡೆಯುತ್ತಿದ್ದ ಶಾಖೆಗೆ ಗಾಂಧೀಜಿ ಭೇಟಿ ನೀಡಿದ್ದರು. ಶಾಖೆಯಲ್ಲಿ ಅವರ ಬೌದ್ಧಿಕವರ್ಗವೂ ನಡೆದಿತ್ತು. ಅದರ ವರದಿಯು 27 ಸೆಪ್ಟೆಂಬರ್ 1947 ರ ಹರಿಜನದಲ್ಲಿ ಪ್ರಕಟವಾಗಿದೆ. ಸಂಘದ ಸ್ವಯಂಸೇವಕರ ಅನುಶಾಸನ ಹಾಗೂ ಜಾತಿ-ಪಂಥ ಭೇದ ಎಳ್ಳಷ್ಟೂ ಇಲ್ಲದಿದ್ದನ್ನು ಕಂಡು ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. 

 ಸ್ವ ದ ಆಧಾರದ ಮೇಲೆ ಭಾರತದ ಪುನಾರಚನೆಯ ಕನಸು ಕಾಣುತ್ತಿದ್ದ ಹಾಗೂ ಸಾಮಾಜಿಕ ಸಮತೆ ಮತ್ತು ಸಾಮರಸ್ಯಗಳ ಪೂರ್ಣ ಸಮರ್ಥಕರು, ತಮ್ಮ ನುಡಿಯಂತೆ ಸ್ವಂತದ ಆಚರಣೆಯಿಂದ ಮೇಲ್ಪಂಕ್ತಿ ನೀಡಿದ, ಸರ್ವರಿಗೂ ಆದರ್ಶರಾದ, ಪೂಜ್ಯರಾದ ಗಾಂಧೀಜಿಯವರನ್ನು ನಾವೆಲ್ಲಾ ಕಾಣಬೇಕು, ಅರಿತುಕೊಳ್ಳಬೇಕು ಹಾಗೂ ತಮ್ಮ ಆಚರಣೆಗೆ ತಂದುಕೊಳ್ಳಬೇಕು. ಗಾಂಧೀಜಿಯವರ ವಿಚಾರಗಳಿಂದ ಕೊಂಚ ಭಿನ್ನಾಭಿಪ್ರಾಯವಿರುವವರೂ ಅವರನ್ನು ಶ್ರದ್ಧೆಯಿಂದ ಕಾಣುತ್ತಿದ್ದುದು, ಈ ಸದ್ಗುಣಗಳ ಕಾರಣದಿಂದಲೇ.

 ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಿತ್ಯವೂ ಬೆಳಿಗ್ಗೆ ಒಂದು ಸ್ತೋತ್ರದ ಮೂಲಕ ನಮ್ಮ ದೇಶದ ಮಹಾಪುರುಷರನ್ನು ಸ್ಮರಿಸುವ ಪದ್ಧತಿಯು ಸಂಘಸ್ಥಾಪನೆಯ ಕಾಲದಿಂದಲೂ ನಡೆದುಬಂದಿದೆ. 1963 ರಲ್ಲಿ ಇದನ್ನು ಪುನಾರಚಿಸಿ ಇದರಲ್ಲಿ ಕೆಲವು ನೂತನ ಹೆಸರುಗಳನ್ನು ಸೇರಿಸಲಾಯಿತು. ಆ ಕಾಲಕ್ಕೆ ಪೂ. ಗಾಂಧೀಜಿ ದಿವಂಗತರಾಗಿದ್ದರು. ಅವರ ಹೆಸರನ್ನೂ ಇದಕ್ಕೆ ಸೇರಿಸಲಾಯಿತು. ಇಂದು ಇದನ್ನು ಏಕಾತ್ಮತಾ ಸ್ತೋತ್ರ ಎನ್ನುತ್ತಾರೆ. ಸಂಘದ ಸ್ವಯಂಸೇವಕರು ನಿತ್ಯವೂ ಬೆಳಿಗ್ಗೆ ಏಕಾತ್ಮತಾ ಸ್ತೋತ್ರದಲ್ಲಿ ಗಾಂಧೀಜಿಯವರ ಹೆಸರನ್ನು ಉಚ್ಚರಿಸುತ್ತ ಮೇಲ್ಕಂಡ ಗುಣಗಳಿಂದ ಕೂಡಿದ ಅವರ ಜೀವನವನ್ನು ಸ್ಮರಿಸುತ್ತಾರೆ. 

 ಗಾಂಧೀಜಿಯ ಜನನದ 150 ನೇ ವರ್ಷದಲ್ಲಿ ಅವರನ್ನು ಸ್ಮರಿಸುತ್ತ, ಅವರ ಪವಿತ್ರ, ತ್ಯಾಗಮಯ ಹಾಗೂ ಪಾರದರ್ಶಿ ಜೀವನ ಹಾಗೂ ಸ್ವ-ಆಧಾರಿತ ಜೀವನದೃಷ್ಟಿಯನ್ನು ಅನುಸರಿಸುತ್ತ  ನಾವೂ ಸಹ ವಿಶ್ವಗುರು ಭಾರತವನ್ನು ನಿರ್ಮಿಸಲು ನಮ್ಮ ಜೀವನದ ಸಮರ್ಪಣೆ ಮತ್ತು ತ್ಯಾಗದ ಗುಣವಂತಿಕೆಯನ್ನು ಮೈಗೂಡಿಸಿಕೊಳ್ಳೋಣ, ಎಂದು ಸರ್ವರೂ ಸಂಕಲ್ಪ ಮಾಡಬೇಕಾಗಿದೆ.