9 ನವೆಂಬರ್ 2019,ದೆಹಲಿ: ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದದ ಬಗೆಗಿನ ಐತಿಹಾಸಿಕ  ತೀರ್ಪಿತ್ತ ನಂತರ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪತ್ರಿಕಾ ಪ್ರಕಟಣೆ

ಜನರ ಭಾವನೆ, ನಂಬಿಕೆಗಳಿಗೆ ನ್ಯಾಯ ಒದಗಿಸುವ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಗತಿಸುತ್ತದೆ.

ದಶಕಗಳಿಂದ ನಡೆಯುತ್ತಿದ್ದ ಸುದೀರ್ಘ ಕಾನೂನಾತ್ಮಕ ಪ್ರಕ್ರಿಯೆಯು ನ್ಯಾಯಯುತವಾಗಿ ಇಂದು ಪೂರ್ಣಗೊಂಡಿದೆ. ಈ ಸುದೀರ್ಘ ಪ್ರಕ್ರಿಯೆಯಲ್ಲಿ ಶ್ರೀ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡ ಚರ್ಚೆ, ವಿಚಾರಣೆಗಳು ನಡೆದಿವೆ. ಎಲ್ಲ ಪಕ್ಷದವರು ತಮ್ಮ ತಮ್ಮ ದೃಷ್ಟಿಕೋನದ ಪ್ರಕಾರ ನ್ಯಾಯಾಲಯದ ಮುಂದಿಟ್ಟ ವಾದಗಳ ಮೌಲ್ಯಮಾಪನ ನಡೆದಿದೆ. ಧೈರ್ಯದಿಂದ, ಸತ್ಯ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಿದ ನ್ಯಾಯಮೂರ್ತಿಗಳಿಗೆ ಹಾಗೂ ಎಲ್ಲಾ ಪಕ್ಷಗಳ ವಕೀಲರುಗಳಿಗೆ ನಾವು ಶತ ಶತ ನಮನಗಳನ್ನು, ಅಭಿನಂದನೆಗಳನ್ನು ಅರ್ಪಿಸುತ್ತೇವೆ. ಈ ಸುದೀರ್ಘ ಅವಧಿಯ ಪ್ರಯತ್ನದಲ್ಲಿ ತಮ್ಮ ಯೋಗದಾನ ನೀಡಿದ ಸಹಯೋಗಿಗಳನ್ನು, ಪ್ರಾಣ ತೆತ್ತ ಬಲಿದಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಭ್ರಾತೃತ್ವವನ್ನು ಬೆಳೆಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಾತ್ರವಹಿಸಿರುವ ಸರ್ಕಾರಗಳು ಹಾಗೂ ನಿರ್ಣಯ ಸ್ವೀಕಾರದ ಮನಃಸ್ಥಿತಿ ಹೊಂದಿರುವ ಈ ದೇಶದ ಜನತೆಯನ್ನು ಅಭಿನಂದಿಸಲೇಬೇಕು. ಅತ್ಯಂತ ಸಂಯಮದಿಂದ ನ್ಯಾಯದ ಪ್ರತೀಕ್ಷೆ ಮಾಡುತ್ತಿದ್ದ ಭಾರತೀಯರೆಲ್ಲರೂ ಅಭಿನಂದನೆಗೆ ಅರ್ಹರು.

 

ಈ ತೀರ್ಪನ್ನು ಗೆಲುವು-ಸೋಲು ಎಂಬುದಾಗಿ ಪರಿಗಣಿಸುವುದು ತಪ್ಪಾಗುತ್ತದೆ. ಸತ್ಯ ಹಾಗೂ ನ್ಯಾಯದ ಮಂಥನದಿಂದ ದೊರೆತ ಈ ತೀರ್ಪನ್ನು ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು ಎಂದು ನೋಡಬೇಕಿದೆ.

ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ನೀಡುತ್ತ ಸಂಯಮದಿಂದ, ಸಾತ್ವಿಕ ರೀತಿಯಿಂದ ತಮ್ಮ ಆನಂದ, ಸಂತೋಷವನ್ನು ವಕ್ತಪಡಿಸಬೇಕೆಂದು ಎಲ್ಲ ದೇಶವಾಸಿಗಳನ್ನು ಕೋರುತ್ತೇವೆ.

ಈ ವಿವಾದವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಈ ತೀರ್ಪನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ  ಶ್ರೀಘ್ರವಾಗಿ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ನಮಗೆ ವಿಸ್ವಾಸವಿದೆ.

– ಡಾ. ಮೋಹನ್ ಭಾಗವತ್

ಸರಸಂಘಚಾಲಕರು, ಆರೆಸ್ಸೆಸ್.

Dr. Mohan Bhagwat, Sarsanghachalak, RSS

ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಉಪಸ್ಥಿತರಿದ್ದರು.