20 ಡಿಸೆಂಬರ್ 2019, ಮತ್ತೂರು:   ಇಂದು ಸಂಜೆ ಸಂಸ್ಕೃತ ಗ್ರಾಮ ಮತ್ತೂರಿನ ಶಾರದಾ ವಿಲಾಸ ಶಾಲೆಯ ಆವರಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ ರವರು ಪಾಲ್ಗೊಂಡು ಸಂವಾದ ನಡೆಸಿಕೊಟ್ಟರು.

ವೇದ, ವೇದಾಂತ, ಯಜ್ಞ ಪ್ರಯೋಗ, ಸಂಸ್ಕೃತ, ಸಂಗೀತ, ಗಮಕ, ಕೃಷಿ, ಸಹಕಾರಿ, ಜ್ಯೋತಿಷ್ಯ, ಭಜನೆ, ಶಿಕ್ಷಣ, ಸಂಘಟನೆ ಮೊದಲಾದ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯ ಪೂರ್ಣ ಸಂಗತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಅವಳಿ ಗ್ರಾಮಗಳಾದ ಮತ್ತೂರು – ಹೊಸಹಳ್ಳಿ ಗ್ರಾಮಗಳ, ಗ್ರಾಮಸ್ಥರ ಪಾತ್ರ, ಜಾಗತಿಕ ಸ್ಥಿತಿಗತಿಗಳ ವೈಶ್ವಿಕ ಪರಿಪ್ರೇಕ್ಷ್ಯದಲ್ಲಿ ಈ ಕಾರ್ಯದ ಮಹತ್ವ ಮತ್ತು ಅವಶ್ಯಕತೆ, ಮುಂದಿನ ಪೀಳಿಗೆಗಳಿಗೆ ಹಾಗೂ ಈ ರೀತಿಯ ಪಾರಂಪರಿಕ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯ ಪೂರ್ಣ ಸಂಗತಿ, ಕಲೆ ಹಾಗೂ ವಿದ್ಯೆಗಳಿಂದ ವಂಚಿತ ಸಮಾಜದ ಇತರರಿಗೆ ಇದನ್ನು ತಲುಪಿಸುವ ಹೊಣೆಗಾರಿಕೆ – ಈ ವಿಷಯಗಳ ಕುರಿತಾಗಿ ಸಂವಾದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮತ್ತೂರು – ಹೊಸಹಳ್ಳಿ ಗ್ರಾಮಗಳ 100 ಕ್ಕೂ ಹೆಚ್ಚು ಆಹ್ವಾನಿತ ಗಣ್ಯರು, ಕಲೋಪಾಸಕರು, ಸಾಧಕರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಭಜನೆ, ಗಮಕ, ಗದ್ಯ – ಪದ್ಯ ಹಾಗೂ ಸಂಗೀತ ಇವುಗಳ ಸಂಕ್ಷಿಪ್ತ ಪರಿಚಯ ಕಾರ್ಯಕ್ರಮವನ್ನು ನಡೆಸಿ ಕೊಡಲಾಯಿತು.

ಈ ಸಂವಾದ ಕಾರ್ಯಕ್ರಮದಲ್ಲಿ ರಾ. ಸ್ವ. ಸಂಘದ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹರಾದ ಶ್ರೀ ಮುಕುಂದ, ಸಹ ಕ್ಷೇತ್ರೀಯ ಪ್ರಚಾರಕರಾದ ಶ್ರೀ ಸುಧೀರ್, ಸಂಸ್ಕೃತ ಭಾರತಿಯ ಶ್ರೀ ದಿನೇಶ್ ಕಾಮತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ನಂತರ ತುಂಗಾ ನದಿ ತೀರದಲ್ಲಿ ನಡೆದ ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಗಾ ಆರತಿ ಮಾಡಿದರು. ಅಲ್ಲೇ ನಡೆದ ಶ್ರೀ ರಾಮ ತಾರಕ ಹೋಮದ ಪೂರ್ಣಾಹುತಿ ಹಾಗೂ ಸೀತಾರಾಮರ ತೆಪ್ಪೋತ್ಸವ ದಲ್ಲಿ ಕೂಡ ಭಾಗವಹಿಸಿದರು.

ಇದೇ ಕಾರ್ಯಕ್ರಮದಲ್ಲಿ ಹಿರಿಯ ಗಮಕಿ ಗಳಾದ ಶ್ರೀ ಹೆಚ್, ಆರ್, ಕೇಶವಮೂರ್ತಿ ಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಯಿಂದ ಗೌರವ ಸಮರ್ಪಣೆ ನಡೆಯಿತು.

ವೇದಿಕೆಯಲ್ಲಿ ವೇ. ಬ್ರ. ಶ್ರೀ. ಸೀತಾರಾಮ ಅವಧಾನಿಗಳು, ವೇ. ಬ್ರ. ಶ್ರೀ ಅಶ್ವತ್ಥ ನಾರಾಯಣ ಆವಧಾನಿಗಳು, ತಾಲೂಕು ಸಂಘಚಾಲಕರಾದ ಶ್ರೀ ಸುಬ್ಬರಾವ್, ಹೊಸಹಳ್ಳಿ ಉಪಸ್ಥಿತರಿದ್ದರು.