ಹಿಂದೂ ಸಮಾಜವನ್ನು ಸಬಲ, ಸದ್ಗುಣಶೀಲವಾಗಿ ಸಂಘಟಿಸಿ, ದುರ್ಬಲರ ರಕ್ಷಣೆಗೆ ನಿಲ್ಲುವುದೇ ಸಂಘ ಕಾರ್ಯ: ವಿಜಯದಶಮಿ ಉತ್ಸವದಂದು ಡಾ. ಮೋಹನ್ ಭಾಗವತ್

8 ಆಕ್ಟೊಬರ್ 2019, ನಾಗಪುರ: ವಿಜಯದಶಮಿಯ ಉತ್ಸವದ ನಿಮಿತ್ತ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸ್ವಯಂಸೇವಕರು ಹಾಗೂ ದೇಶವನ್ನುದ್ದೇಶಿಸಿ ಮಾತನಾಡಿದರು. 1925ರಂದು ವಿಜಯದಶಮಿಯ ಪವಿತ್ರ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭಗೊಂಡಿತು. ಕಳೆದ ವರ್ಷದಲ್ಲಿ ಗುರುಗೋವಿಂದ ಸಿಂಗ್ ರ 550ನೆ ಪ್ರಕಾಶ ಪರ್ವ, 150ನೆ ಮಹಾತ್ಮ ಗಾಂಧಿ ಜನ್ಮದಿನಾಚಾರಣೆಯಂತೆ ಈವರ್ಷ ಸ್ವದೇಶಿ ಚಿಂತನೆಯ ಹರಿಕಾರ ಭಾರತೀಯ ಮಾಜದುರ್ ಸಂಘ, ಸ್ವದೇಶಿ ಜಾಗರಣ ಮಂಚ್, ಭಾರತೀಯ ಕಿಸಾನ್ ಸಂಘ ಸ್ಥಾಪಿಸಿದ ಶ್ರೀ ಡಾತ್ತೋಪಂತ್ ಥೇ0ಗಡಿ ಯವರ ಜನ್ಮ ಶತಾಬ್ಧಿ ವರ್ಷವಾಗಿದೆ. ಎಚ್ ಸಿ ಎಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವ ನಾಡರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ, ಹಿಂದೂ ಎಂಬ ಹೆಸರುಗಳು ಹಲವಿರಬಹುದು, ಉಪಾಸನಾ ಪದ್ಧತಿ ಬೇರೆಯದ್ದಿರಬಹುದು, ಆಹಾರ ಪದ್ಧತಿ, ಭಾಷೆ, ಪ್ರಾಂತಗಳು ಬೇರೆ ಬೇರೆಯಾದರೂ ಅವನ್ನೆಲ್ಲ ಒಂದೆ- ಹಿಂದೂ ಎಂದು ಸಂಘ ಪರಿಗಣಿಸುತ್ತದೆ. ಭಾರತ ಹಿಂದೂ ರಾಷ್ಟ್ರವಾಗಿದ್ದು ‘ಹಿಂದೂ ರಾಷ್ಟ್ರ’ದ ಸಂಘದ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡರೆ ಎಲ್ಲರನ್ನು ಒಳಗೊಳ್ಳುವಂಥದ್ದು ಎಂದು ಅರ್ಥವಾಗುತ್ತದೆ ಎಂದು ಡಾ. ಮೋಹನ್ ಭಾಗವತ್ ನುಡಿದರು.
ಸಂಘ, ಹಿಂದೂ ಸಮಾಜವನ್ನು ಗಟ್ಟಿ, ಸಬಲ, ಸದ್ಗುಣಶೀಲ, ಪರೋಪಕಾರಿಯನ್ನಾಗಿ ಮಾಡುತ್ತಿರುವುದು ಯಾರನ್ನೂ ಹೆದರಿಸಲು ಅಲ್ಲ ಆದರೆ ದುರ್ಬಲರನ್ನು, ಭಯಭೀತರಾದವರನ್ನು ರಕ್ಷಿಸಲೆಂದು ಎಂದು ತಿಳಿಸಿದರು.

ಕಳೆದ ೯ ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದಲ್ಲಿ ಏಕಾತ್ಮತಾ, ಸದ್ಭಾವನಾ, ಸದ್ ವ್ಯವಹಾರ, ದೇಶದ ಬಗ್ಗೆ ಸಮ ದೃಷ್ಟಿ, ದೇಶಾಭಿಮಾನಗಳನ್ನು ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಿದೆ.

ಸ್ವದೇಶಿ ಮೂಲದ ಚಿಂತನೆಯಿಂದ ನಾವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುದುಕಿಕೊಳ್ಳಬಹುದಾಗಿದೆ.
ಸ್ವ-ಭಾಷಾ, ಸ್ವ-ಭೂಷ, ಸ್ವ-ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಎನಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ. ಇದು ಕೇವಲ ಮೇಲು ನೋಟದ ರಚನಾತ್ಮಕ ಬದಲಾವಣೆಯಿಂದಷ್ಟೆ ಸಾಧ್ಯವಿಲ್ಲ. ಆಮೂಲಾಗ್ರವಾಗಿ ಪರಿಶೀಲಿಸಿ ಪಠ್ಯಕ್ರಮವನ್ನೇ ಬದಲಿಸಬೇಕಿದೆ ಎಂದರು.

ಅಗತ್ಯಕ್ಕಿಂತಲೂ ಹೆಚ್ಚು ಶೇಕರಿಸಿಟ್ಟುಕೊಳ್ಳುವ ವಿಕೃತ ಮನಸ್ಥಿತಿಯೇ ಭ್ರಷ್ಟಾಚಾರಕ್ಕೆ ಬುನಾದಿ. ಸಮಾಜವನ್ನು ಜಾಗೃತರನ್ನಾಗಿಸಿ, ಮನೆಗಳಲ್ಲಿ ಆದರ್ಶಗಳನ್ನು ಬೋಧಿಸುವುದು ಅಂತೆಯೇ ನಡೆದುಕೊಳ್ಳುವುದು ದೇಶದ ಹಿತಕ್ಕಾಗಿ ಅನಿವಾರ್ಯ ಎಂದು ಅವರು ತಮ್ಮ ಭಾಷಣದಲ್ಲಿ ನುಡಿದರು.

Dr. Mohan Bhagwat addressed the gathering. Sri Shiv Nadar of HCL was the chief guest

 

ವಿಜಯದಶಮಿ ೮ ಅಕ್ಟೋಬರ್ ೨೦೧೯, ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್ ಭಾಗವತ್ ಅವರ ಭಾಷಣದ ಪೂರ್ಣ ಪಾಠ

 

ಆದರಣೀಯ ಮುಖ್ಯ ಅತಿಥಿಗಳೇ, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಆಹ್ವಾನಿತ ಅತಿಥಿಗಳೆ, ಪೂಜ್ಯ ಸ್ವಾಮೀಜಿಗಳೆ, ಮಾನನಿಯ ಸಂಘಚಾಲಕರೇ, ಸಂಘದ ಅಧಿಕಾರಿಗಳೆ, ತಾಯಂದಿರೇ, ಸೋದರಿಯರೇ, ನಾಗರಿಕರೇ ಹಾಗೂ ನೆಚ್ಚಿನ ಸ್ವಯಂಸೇವಕ ಬಂಧುಗಳೇ,

 

ಈ ಹಿಂದಿನ ವರ್ಷದ ವಿಜಯದಶಮಿ ವಿಶೇಷವಾಗಿತ್ತು. ಕಾರಣ ಆ ವರ್ಷ ಶ್ರೀ ಗುರು ನಾನಕ ದೇವ್ ಜೀ ಅವರ ೫೫೦ ನೇ ಪ್ರಕಾಶ ಪರ್ವ ಹಾಗೂ ಮಹಾತ್ಮ ಗಾಂಧಿಜೀ ಅವರ ೧೫೦ನೇ ಜನ್ಮ ಶತಾಬ್ಧಿ ವರ್ಷವಾಗಿತ್ತು. ತನ್ನಿಮಿತ್ತದ ಕಾರ್ಯಕ್ರಮಗಳು ಅವಧಿ ಪೂರ್ಣಗೊಳ್ಳುವವರೆಗೂ ಪೂರ್ವ ಯೋಜನೆಯಂತೆ ಮುಂದೆಯೂ ನಡೆಯಲಿವೆ. ಜೊತೆಗೆ ನವೆಂಬರ್ ೧೦ರಿಂದ ದತ್ತೋಪಂತ್ ಜೀ ಥೆಂಗಡಿ ಅವರ ಜನ್ಮ ಶತಾಬ್ಧಿಯ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಅಲ್ಲದೆ ಕಳೆದ ವರ್ಷದಲ್ಲಿ ಕೆಲ ಅವಿಸ್ಮರಣೀಯ ಘಟನೆಗಳು ದೇಶದಲ್ಲಿ ಜರುಗಿವೆ.

 

ಚುನಾವಣೆಯ ಫಲಿತಾಂಶ

ಲೋಕಸಭಾ ಚುನಾವಣೆಯ ಫಲಿತಾಂಶ ಈ ವರ್ಷದ ಮೇ ತಿಂಗಳಿನಲ್ಲಿ ಹೊರಬಿತ್ತು. ಈ ಚುನಾವಣೆಯನ್ನು ಇಡಿಯ ಜಗತ್ತು ಕುತೂಹಲದಿಂದ ಎದುರು ನೋಡುತ್ತಿತ್ತು. ಖಂಡವೊಂದರಲ್ಲಿ ಇರಬಹುದಾದ ಅನೇಕತೆಯ ಹೊರತಾಗಿಯೂ, ಸಕಾಲಿಕ ಹಾಗೂ ವ್ಯವಸ್ಥಿತ ರೀತಿಯಲ್ಲಿ ಭಾರತದಲ್ಲಿ ಜರುಗುವ ಚುನಾವಣೆ ವಿಶ್ವಕ್ಕೆ ಕುತೂಹಲ ಎನಿಸುವುದಕ್ಕೆ ಕಾರಣ. ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷದ ವಿರುದ್ಧವಿದ್ದ ಅಲೆ, ಭ್ರಮನಿರಸನಗೊಂಡ ಜನತೆಯ ಸ್ಪಷ್ಟ ನಿರ್ಧಾರ ೨೦೧೯ರಲ್ಲೂ ಕಾಣುವುದೇ ಎಂಬ ಪ್ರಶ್ನೆ ಇದ್ದಿತ್ತು. ಜನತೆ ತಮ್ಮ ಸ್ಪಷ್ಟ ನಿರ್ಧಾರವನ್ನು ವ್ಯಕ್ತಪಡಿಸಿತು. ಆ ನಿರ್ಧಾರದಂತೆ ಪ್ರಜಾಪ್ರಭುತ್ವವೆನ್ನುವುದು ಹೊಸತಾದ, ಹೊರಗಿನಿಂದ ನಮ್ಮಲ್ಲಿಗೆ ಎರವಲು ಪಡೆದ, ಅಸ್ಪಷ್ಟ ಚಿಂತನೆಯಲ್ಲವೆಂದೂ, ನಮ್ಮಲ್ಲಿ ಶತಮಾನಗಳಿಂದ ನಡೆದುಕೊಂಡುಬಂದ ಸಂಪ್ರದಾಯ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೊರೆತ ಅನುಭವ, ಜ್ಞಾನದ ಸಾಕ್ಷಾತ್ಕಾರವೆಂದು ತಿಳಿದುಬಂದಿದೆ. ಆ ಸ್ಪಷ್ಟತೆಯಂತೆ, ಪ್ರಜಾಪ್ರಭುತ್ವವನ್ನು ಸಫಲವಾಗಿ ಮುಂದಕ್ಕೊಯ್ಯುವ ಸಂಕಲ್ಪವನ್ನು ಸಮಾಜ ಮಾಡಿದೆ. ಹೊಸ ಸರ್ಕಾರವನ್ನು ಆರಿಸಿದ ಸಮಾಜ ಹಿಂದೆ ದೊರೆತಿದ್ದ ಸೀಟುಗಳಿಗಿಂತ ಹೆಚ್ಚು ನೀಡಿ, ಹಿಂದಿನ ಸರ್ಕಾರದ ಕಾರ್ಯಕ್ಷಮತೆಗೆ ಅನುಮೋದನೆ ನೀಡಿ, ಭವಿಷ್ಯದಲ್ಲಿ ಇನ್ನಷ್ಟು ಒಳ್ಳೆಯ ಕೆಲಸದ ಬಗ್ಗೆ ನಿರೀಕ್ಷೇಯನ್ನೂ ಇರಿಸಿಕೊಂಡಿದೆ.

ಪುನರಾಯ್ಕೆಗೊಂಡ ಹೊಸ ಸರ್ಕಾರ ವಿಧಿ ೩೭೦ನ್ನು ಅಸಿಂಧುಗೊಳಿಸಿ, ಜನರ ಭಾವನೆ, ಆಶೊತ್ತರಗಳನ್ನು ಪೂರ್ಣಗೊಳಿಸಲು, ದೃಢ ನಿರ್ಧಾರಗಳನ್ನು ತೆಗೆದುಕೊಂಡು ದೇಶದ ಹಿತಕ್ಕಾಗಿ ದುಡಿಯುವ ಧೈರ್ಯದ ಪ್ರದರ್ಶನ ಮಾಡಿದೆ. ಚಾಕಚಕ್ಯತೆಯಿಂದ ಸದನದ ಎರಡೂ ಸಭೆಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ಪಡೆದುಕೊಂಡು, ಗಟ್ಟಿತನದ ತರ್ಕ, ಪ್ರತಿವಾದದ ಜೊತೆಗೆ ಜನತೆಯ ಭಾವನೆಯನ್ನು ಗೌರವಿಸುವ ಈ ಕೆಲಸವನ್ನು ಮಾಡಿ ಸಾಧಿಸಿದ ಪ್ರಧಾನ ಮಂತ್ರಿಗಳು, ಗೃಹಮಂತ್ರಿಗಳು, ಅಧಿಕಾರದಲ್ಲಿರುವ ಆಳುವ ಪಕ್ಷದ ಸಂಸದರು, ಜನರ ಭಾವನೆಯನ್ನು ಗೌರವಿಸುವ ಸಂಸತ್ತಿನ ಎಲ್ಲಾ ಪಕ್ಷದ ಸಂಸದರು ಹೃತ್ಪೂರ್ವಕ ಅಭಿನಂದನೆಗೆ ಅರ್ಹರು. ಈ ಕಾರ್ಯ ಫಲಪ್ರದವಾಗುವುದು ಹಿಂದೆ ವಿಧಿ ೩೭೦ರ ಹೇರಿಕೆಯಿಂದಾಗಿ ಅನ್ಯಾಯ ಅನುಭವಿಸಿದವರಿಗೆ ನ್ಯಾಯದೊರಕಿಸಿದಾಗ, ಹಾಗೂ ಈವರೆಗೆ ನಡೆದ ಅನ್ಯಾಯಗಳಿಗೆಲ್ಲ ಇತಿಶ್ರೀ ಹಾಡಿದಾಗ. ಅಂದರೆ – ದುರ್ಮಾರ್ಗದಿಂದ ರಾಜ್ಯದಿಂದ ಓಡಿಸಿದ ಕಾಶ್ಮೀರಿ ಪಂಡಿತರನ್ನು ತಮ್ಮ ತಮ್ಮ ಜಾಗಗಳಿಗೆ ಕರೆತಂದು ಅವರು ನಿರ್ಭೀತರಾಗಿ, ದೇಶಪ್ರೇಮಿ ಹಿಂದೂವಾಗಿ ಜೀವನ ನಡೆಸಲಾರಂಭಿಸಿದಾಗಲೇ. ಕಾಶ್ಮೀರೀ ನಾಗರಿಕರಿಗೆ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ಹಕ್ಕುಗಳ ಮರುಸ್ಥಾಪನೆ, ವಿಧಿ ೩೭೦ರ ಅಸಿಂಧುಗೊಳಿಸಿದ್ದರ ಪರಿಣಾಮ ತಮ್ಮ ನಿವೇಷನ, ಕೆಲಸ ಕಳೆದುಕೊಳ್ಳುವ ಅಪೃಥೆಯನ್ನು ದೂರವಾಗಿಸಿದಾಗ ಅಲ್ಲಿಯ ಬಂಧುಗಳು ದೇಶದ ಅಭಿವೃದ್ಧಿಗೆ, ತಮ್ಮ ಬಾಧ್ಯತೆಗಳನ್ನು ನಿರ್ವಹಿಸಿ ಸೋದರಭಾವದಿಂದ ಇಡಿಯ ಭಾರತದೊಂದಿಗೆ ಬದುಕಲಾರಂಭಿಸುತ್ತಾರೆ.

ವಿಜ್ಞಾನಿಗಳ ಸಾಧನೆ 

ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಪ್ರತಿಭೆಯ ಕಾರಣ ನಮ್ಮ ವಿಜ್ಞಾನಿಗಳು ಪ್ರಶಂಸೆ ಹಾಗೂ ಕರುಣೆಗೆ ಪಾತ್ರರಾದರು.

ಇಲ್ಲಿಯವರೆಗೆ ಸಂಶೋಧಿಸಲ್ಪಡದ ಚಂದ್ರನ ಸೌತ್ ಪೋಲ್ ನಲ್ಲಿ ಚಂದ್ರಯಾನದ ವಿಕ್ರಮ ಲ್ಯಾಂಡರ್ ಇಳಿಸುವ ಮೂಲಕ ಇಡಿಯ ವಿಶ್ವವು ನಮ್ಮ ವಿಜ್ಞಾನಿಗಳನ್ನು ಪ್ರಶಂಸಿಸುವಂತಾಯಿತು. ಸಂಪೂರ್ಣ ಫಲ ಈ ಮಿಷನನಿಂದ ಸಾಧ್ಯವಾಗದಿದ್ದರೂ ಮೊದಲನೇ ಪ್ರಯತ್ನದಲ್ಲಿಯೇ ಈ ಸಾಧನೆ ಹಾಗೂ ಈವರೆಗೆ ಮೊದಲ ಪ್ರಯತ್ನದಲ್ಲಿ ಇಷ್ಟು ಸಾಧಿಸದ ವಿಶ್ವದ ಎದುರು ಇದು ದಿಟ್ಟ ಸಾಧನೆಯೇ. ನಮ್ಮ ಹೆಮ್ಮೆಯ ವಿಜ್ಞಾನಿಗಳ ಈ ಸಾಹಸದ ಸಾಧನೆಯಿಂದಾಗಿ ದೇಶದ ಬೌದ್ಧಿಕ ಸಾಮರ್ಥ್ಯ, ವೈಜ್ಞಾನಿಕ ಕೆಚ್ಚು, ಕಠಿಣ ಪರಿಶ್ರಮದಿಂದ ಗುರಿಯನ್ನು ಮುಟ್ಟುವ ಬದ್ಧತೆಗೆ ವಿಶ್ವದ ಪ್ರಶಂಸೆ ಹೆಚ್ಚಿದೆ. ಪ್ರಬುದ್ಧ ಬುದ್ಧಿಶಕ್ತಿ, ಜನರ ಕಾರ್ಯ, ದೇಶದ ಬಗೆಗಿನ ಹೆಮ್ಮೆಯ ಜಾಗೃತ ಭಾವ, ಸರ್ಕಾರದ ದೃಢ ಬದ್ಧತೆ, ವೈಜ್ಞಾನಿಕ ಪರಿಣತಿ ಸೇರಿದಂತೆ ಹಲವು ಆಹ್ಲಾದಕರ ವಿಷಯಾಗಳಿಂದಾಗಿ ಕಳೆದ ವರ್ಷ ಅವಿಸ್ಮರಣಿಯವೆನಿಸುತ್ತದೆ.

ರಾಷ್ಟ್ರೀಯ ಭದ್ರತೆ

ಆದರೆ ಪ್ರಸ್ತುತ ಸನ್ನಿವೇಶವನ್ನು ಅನುಭವಿಸಿ ಆನಂದಿಸುತ್ತಾ ಮೈಮರೆವೆಯಿಂದ ನಮ್ಮ ದೇಶದ ಸುರಕ್ಷತೆಯನ್ನು ಕಡೆಗಾಣಿಸುವುದು, ಜಡತೆಯನ್ನು ರೂಢಿಸಿಕೊಳ್ಳುವುದು, ಸದಾ ಸುಖ ಹಾಗೂ ಸ್ವಾರ್ಥದಿಂದ ಜೀವನ ನಡೆಸುತ್ತಾ ಎಲ್ಲವನ್ನೂ ಆಳುವ ಸರ್ಕಾರಗಳು ನಡೆಸುತ್ತವೆ ಎಂದು ನಿಷ್ಕ್ರಿಯರಾಗುವುದು ಸಮಂಜಸವಲ್ಲ. ನಮ್ಮ ಅಂತಿಮ ಗುರಿ ಭಾರತವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವ ಪಥದಲ್ಲಿ ಸ್ವಲ್ಪವೇ ಕ್ರಮಿಸಿದ್ದೇವೆ. ನಮ್ಮ ಗುರಿಯನ್ನು ಸೇರುವುದಕ್ಕೆ ಸಮಸ್ಯೆ(ಅಡೆತಡೆ)ಗಳಾಗಿರುವ ಕುತಂತ್ರಗಳು ತಮ್ಮ ಕೆಲಸಗಳನ್ನು ಮಾಡುತ್ತಲಿವೆ ಹಾಗೂ ಎಂದೂ ನಿಂತಿಲ್ಲ. ನಮ್ಮನ್ನೇ ನಾವು ಪ್ರಶ್ನಿಸಿಕೊಂಡು ಉತ್ತರಗಳನ್ನು ಹುಡುಕಿಕೊಳ್ಳಬೇಕಿದೆ ಮತ್ತು ಆ ಅಡೆತಡೆಗಳಿಂದ ಪಾರಾಗುವ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ.

ವ್ಯಕ್ತಿಯ ಜೀವನವಾಗಿರಲಿ, ವೈಶ್ವಿಕ ಸನ್ನಿವೇಶವಿರಲಿ ಸಮಸ್ಯೆಗಳು ಸದಾ ಕಾಲ ಆವರಿಸಿರುತ್ತವೆ. ಕೆಲವು ಕಣ್ಣಿಗೆ ಕಾಣುವಂಥದ್ದಾಗಿರುತ್ತವೆ, ಮತ್ತು ಕೆಲವು ಸಮಯ ಕಳೆದ ಮೇಲೆ ಮುನ್ನೆಲೆಗೆ ಬರುತ್ತವೆ. ನಮ್ಮ ಶರೀರ, ಮನಸ್ಸು, ಬುದ್ಧಿ ಎಲ್ಲಿಯವರೆಗೆ ಆ ಸಮಸ್ಯೆಗಳಿಂದ ಎಚ್ಚರ, ಸ್ವಸ್ಥ, ಸ್ಪಂದಿಸುವಂಥದ್ದಾಗಿರುತ್ತದೋ ಅಲ್ಲಿಯವರೆಗೆ ಆ ಅಡೆತಡೆಗಳಿಂದ ಪಾರಾಗುವ ಸಾಧ್ಯತೆಗಳು ಹೆಚ್ಚು. ಅದೃಷ್ಟವಶಾತ್ ದೇಶದ ರಕ್ಷಣಾ ಸಾಮರ್ಥ್ಯ, ನಮ್ಮ ಸೇನೆಯ ಸನ್ನದ್ಧತೆ, ಕೇಂದ್ರ ಸರ್ಕಾರದ ರಕ್ಷಣಾ ನೀತಿ, ಹಾಗೂ ಅಂತಾರಾಷ್ಟ್ರ್ರೀಯ ರಾಜಕೀಯದಲ್ಲಿ ಸನ್ನಿವೇಶಗಳನ್ನು ಎದುರಿಸುವ ನಮ್ಮ ಪ್ರಬುದ್ಧತೆ ಉತ್ತಮವಾಗಿವೆ. ನಮ್ಮ ದೇಶದ ಭೂ ಹಾಗೂ ಜಲಗಡಿಗಳಲ್ಲಿ ನಮ್ಮ ಸೇನೆಯು ಜಾಗೃತವಾಗಿದೆ. ಈಗಿರುವ ಸೈನ್ಯದ ಸಂಖ್ಯೆಯನ್ನು ಭೂ ಗಡಿ, ಜಲಗಡಿ, ಚೆಕ್‌ಪೋಸ್ಟ್, ದ್ವೀಪಗಳಲ್ಲಿ ಹೆಚ್ಚಿಸುವ ಅಗತ್ಯವಿದೆ. ಆತಂಕವಾದಿಗಳ ಅಟ್ಟಹಾಸ ಪ್ರಸ್ತುತ ಕಡಿಮೆಯಾಗಿದೆ. ಆತಂಕವಾದಿಗಳು ಶರಣಾಗತರಾಗುವುದು ಹೆಚ್ಚುತ್ತಲಿದೆ. ಆದರೂ ಮನುಷ್ಯನಾದವನಿಗೆ ಸಮಸ್ಯೆಗಳು ತನ್ನೊಳಗಿಂದಲೇ ಸೃಷ್ಟಿಯಾಗಬಹುದು. ನಮಗೆ ತೊಂದಯನ್ನುಂಟುಮಾಡುವ ಶಕ್ತಿಗಳು ಶರೀರದಲ್ಲೇ ನೆಲೆಸಿರುತ್ತವೆ. ದೇಹದ ಶಕ್ತಿ ಕುಗ್ಗುವುದು, ಆ ಕುಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕುಂಠಿತವಾದಾಗ ಮಾತ್ರ. ಇಲ್ಲವಾದರೆ ಯಾವ ಸಮಸ್ಯೆಯೂ ಬರಲಾರದು.

ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಕೆಲ ವರ್ಷಗಳಿಂದ ಭಾರತದ ಚಿಂತನಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಗುತ್ತಿದೆ. ಆದರೆ ಇದನ್ನು ವಿರೋಧಿಸುವ ಮನಸ್ಸುಗಳು ಭಾರತದಲ್ಲೂ, ವಿಶ್ವದೆಲ್ಲೆಡೆ ಇವೆ. ಅಭಿವೃದ್ಧಿ ಹೊಂದಿದ ಭಾರತ ಕೆಲ ಪಟ್ಟಭದ್ರ ಹಿತಾಸಕ್ತಿಯ ಮನಸ್ಸುಗಳಲ್ಲಿ ಭಯ ಹುಟ್ಟಿಸುತ್ತಿರುವುದು ಖೇದಕರ. ಈ ಶಕ್ತಿಗಳು ಬದಲಾವಣೆಯ ವಿರುದ್ಧ ಪ್ರಸ್ತುತ ಸನ್ನಿವೇಶದ ಪ್ರಯೋಜನ ತೆಗೆದುಕೊಳ್ಳುತ್ತಿವೆ. ಒಬ್ಬರಿಂದ ಒಬ್ಬರನ್ನು ಬೇರ್ಪಡಿಸಲು ಜಾತಿ, ಪಂಗಡ, ಭಾಷೆ, ಪ್ರಾಂತಗಳ ವಿವಿಧತೆಯನ್ನು ಬಳಸಲಾಗುತ್ತಿದೆ. ಈಗಾಗಲೇ ಇರುವ ವೈಷಮ್ಯವನ್ನು ಇನ್ನಷ್ಟು ಬೆಳೆಸಲಾಗುತ್ತಿದೆ.

ಬೌದ್ಧಿಕ ಹಾಗೂ ಸಾಮಾಜಿಕ ವೇದಿಕೆಗಳ ಮೂಲಕ ಇಂತಹ ಪಿತೂರಿಗಳನ್ನು ಗುರುತಿಸಿ ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕಿದೆ. ಇವೇ ಶಕ್ತಿಗಳು ಸಮಾಜಮುಖಿಯಾದ ನೀತಿಗಳು, ಸರ್ಕಾರಿ, ಅಧಿಕಾರಿ ವರ್ಗದವರು ಹೊರ ತಂದ ನಿರ್ಧಾರಗಳು, ನೀತಿಗಳನ್ನು ಅಪಾರ್ಥವಾಗಿಸಿ ತಮ್ಮ ಹಿತಾಸಕ್ತಿಗೆ ಹೊಂದಿಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿವೆ. ಸದಾ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಈ ಎಲ್ಲಾ ಚಟುವಟಿಕೆಗಳು ಕಾರ್ಯ ನಡೆಸುತ್ತಿರುವಂತೆ, ನಾಗರಿಕ ಸಂಹಿತೆ ಹಾಗೂ ನೆಲದ ಕಾನೂನಿನ ಬಗ್ಗೆ ವಿಷಬಿತ್ತುವ ಕೆಲಸ ಕೆಲವೊಮ್ಮೆ ಬಹಿರಂಗವಾಗಿ ಕೆಲವೊಮ್ಮೆ ರಹಸ್ಯವಾಗಿ ನಡೆಯುತ್ತಲಿದೆ. ಇಂತಹ ಕಾರ್ಯಗಳನ್ನು ಎಲ್ಲಾ ಸ್ತರದಲ್ಲಿಯೂ ವಿರೋಧಿಸಬೇಕಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮದೇ ಸಮಾಜದ ಒಂದು ಸಮುದಾಯದವರ ಮೇಲೆ ಮತ್ತೊಂದು ಸಮುದಾಯದವರು ದಾಳಿ ಮಾಡುತ್ತಿರುವ ಸುದ್ದಿ ಪ್ರಕಟವಾಗುತ್ತಿವೆ. ಪ್ರತ್ಯೇಕ ಸಮುದಾಯದವರು ಈ ಕೆಲಸಗಳಲ್ಲಿ ತೊಡಗುತ್ತಿದ್ದಾರೆಂದೇನಲ್ಲ. ಎರಡೂ ಸಮುದಾಯದವರೂ ಭಾಗಿಯಾಗುತ್ತಿದ್ದಾರೆಂದು ಪ್ರಕಟಣೆಗಳಿಂದ ತಿಳಿದುಬರುತ್ತಿದೆ. ಆ ಸಮುದಾಯಗಳು ಆರೋಪ ಪ್ರತ್ಯಾರೋಪಗಳನ್ನೂ ಮಾಡುತ್ತಿವೆ. ಕೆಲವು ಘಟನೆಗಳ ವರದಿಯನ್ನು ದುರುದ್ದೇಶದಿಂದ ಸೃಷ್ಟಿಸಲಾಗಿದೆ ಎಂದು, ಕೆಲವೊಂದು ತಪ್ಪಾಗಿ ವರದಿ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಏನೇ ಆಗಲಿ, ಇಂತಹ ಹಿಂಸಾ ಘಟನೆಗಳು ಕಾನೂನು ಸುವ್ಯವಸ್ಥೆಯ ಮಿತಿಯನ್ನು ಮೀರುತ್ತಿವೆ. ಸಮಾಜದಲ್ಲಿ ಪರಸ್ಪರ ಸಂಬಂಧಗಳನ್ನು ಕದಡುತ್ತಿವೆ. ಈ ಹಿಂಸಾ ಪ್ರವೃತ್ತಿ ನಮ್ಮ ದೇಶದ ಸಂಪ್ರದಾಯವಲ್ಲ, ಸಂವಿಧಾನದ ಆಶಯದ ವಿರುದ್ಧವೂ ಆಗಿವೆ. ಅದೆಂತಹ ಅಭಿಪ್ರಾಯ ಭೇದಗಳಿದ್ದರೂ, ಅದೆಷ್ಟೇ ಪ್ರಚೋದನಾಕಾರಿ ಕಾರ್ಯತಂತ್ರ ನಡೆಯುತ್ತಿದ್ದರೂ, ಸಂವಿಧಾನದ ಎಲ್ಲೆ ಮೀರದೆ, ಪೊಲೀಸರ ಕೈಗೆ ಆ ಘಟನೆಯನ್ನು ಒಪ್ಪಿಸಿ, ನ್ಯಾಯಾಲಯ ವ್ಯವಸ್ಥೆಯಲ್ಲಿ ವಿಶ್ವಾಸವಹಿಸಬೇಕಿದೆ. ಈ ದೇಶದ ಎಲ್ಲಾ ನಾಗರಿಕರ ಆದ್ಯ ಕರ್ತವ್ಯ ಇದಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಇಂತಹ ಹಿಂಸಾತ್ಮಕ ಘಟನೆಯಲ್ಲಿ ಭಾಗಿಯಾದವರ ಬೆಂಬಲಕ್ಕೆ ನಿಂತಿಲ್ಲ. ಸಂಘ ಇಂತಹ ಘಟನೆಗಳ ವಿರುದ್ಧವೇ ಸದಾ ನಿಲ್ಲುತ್ತದೆ. ನಮ್ಮ ಸ್ವಯಂಸೇವಕರು ಈ ಘಟನೆಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಲಿಂಚಿಂಗ್’ ಎಂಬ ಹೆಸರುಗಳನ್ನು ಸೂಚಿಸುತ್ತ, ಭಾರತದ್ದಲ್ಲದ ಇಂತಹ ಸಂಪ್ರದಾಯಗಳಿಗೆ ಭಾರತವನ್ನು, ಹಿಂದೂ ಸಮಾಜವನ್ನು ಹೊಣೆಮಾಡಿ, ಮಾನಹಾನಿ ಮಾಡುತ್ತಾ ತನ್ಮೂಲಕ ತಥಾಕಥಿತ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿರುವುದು ನಡೆಯುತ್ತಲಿದೆ. ನಾವೆಲ್ಲರೂ ಪ್ರಚೋದನಾಕಾರಿ ಭಾಷೆಯ ಉಪಯೋಗ, ಪ್ರಚೋದನಾಕಾರಿ ಕಾರ್ಯತಂತ್ರಗಳಿಂದ ದೂರ ಉಳಿಯಬೇಕಿದೆ. ಅಲ್ಲದೆ ಇವನ್ನೇ ಬಂಡವಾಳವಾಗಿಸಿಕೊಳ್ಳುವ, ಎರಡು ಸಮುದಾಯದವರ ನಡುವೆ ವೈಷಮ್ಯವನ್ನು ಹೆಚ್ಚಿಸುವ, ಅದರಿಂದ ತಮ್ಮದೇ ಬೇಳೆ ಬೇಯಿಸಿಕೊಳ್ಳುವ ತಥಾಕಥಿತ ನಾಯಕರುಗಳನ್ನೂ ಪೋಷಿಸಬಾರದಾಗಿದೆ. ಈ ಘಟನಾವಳಿಗಳನ್ನು ತಹಬಂದಿಗೆ ತರಲು ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ. ಅವುಗಳನ್ನು ಪ್ರಾಮಾಣಿಕತೆಯಿಂದ ಕಟ್ಟುನಿಟ್ಟಾಗಿ ಅಳವಡಿಸಬೇಕಿದೆ.

ಸದ್ಭಾವನೆ, ಸಂವಾದ, ಸಹಕಾರ

ಸಮಾಜದ ಎಲ್ಲಾ ವಿಭಿನ್ನ ವಿಭಾಗಗಳು ತಮ್ಮ ತಮ್ಮ ಮಧ್ಯೆ ಸದ್ಭಾವನೆ, ಸಂವಾದ, ಸಹಕಾರ ನಡೆಸುವಂತೆ ದುಡಿಯಬೇಕಿದೆ. ಸಮಾಜದ ಎಲ್ಲಾ ಸ್ತರಗಳ ಜೊತೆಗೂ ಸದ್ಭಾವನೆ, ಸಾಮರಸ್ಯ, ಸಹಕಾರ ಹೆಚ್ಚಿಸುವ, ಅಂತೆಯೇ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಡೆಸುವಂತೆ ನಮ್ಮ ಯೋಜನೆಗಳನ್ನು, ನಮ್ಮ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು. ಸಮಾಜದಲ್ಲಿ ಈ ತರಹದ ಸಂವಾದ,ಸಹಕಾರವನ್ನು ವೃದ್ಧಿಸಲು ಸಂಘದ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟಾಗಿಯೂ ಕೆಲವಕ್ಕೆ ನ್ಯಾಯಾಲಯದ ಮೊರೆ ಹೋಗಲೇಬೇಕಿದೆ. ನ್ಯಾಯಾಲಯದ ನಿರ್ಧಾರ ಏನೇ ಇರಲಿ, ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಪರಸ್ಪರ ಸದ್ಭಾವನೆಯನ್ನು ಘಾಸಿ ಮಾಡುವಂತಿರಬಾರದು. ಇದು ಕೇವಲ ಒಂದು ಸಮುದಾಯದ ಜವಾಬ್ದಾರಿಯಲ್ಲ. ಪ್ರತಿಯೊಬ್ಬನೂ ತನ್ನಿಂದ ಆರಂಭಿಸಿಕೊಂಡು ಸಮಾಜದ ಎಲ್ಲರೂ ರೂಢಿಸಿಕೊಳ್ಳಬೇಕಾದ್ದಾಗಿದೆ.

ಆರ್ಥಿಕ ವ್ಯವಸ್ಥೆ

ವೈಶ್ವಿಕವಾಗಿ ನಡೆಯುತ್ತಿರುವ ಆರ್ಥಿಕ ಕುಸಿತವನ್ನು ನಾವೂ ಎದುರಿಸುತ್ತಿದ್ದೇವೆ. ಅಮೆರಿಕಾ, ಚೀನಾ ನಡುವಣ ನಡೆಯುತ್ತಿರುವ ಜಾಗತಿಕ ವ್ಯಾಪಾರ ಸಮರವನ್ನು ಭಾರತವು ಅನುಭವಿಸುತ್ತಿದೆ. ಕೇಂದ್ರ ಸರ್ಕಾರವು ಈ ಕುಸಿತದಿಂದ ಹೊರಬರಲು ಹಲವಾರು ಯೋಜನೆಗಳನ್ನು ಕಳೆದ ಕೆಲ ತಿಂಗಳುಗಳಿಂದ ಹಾಕಿಕೊಂಡಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರದ ಪ್ರಾಮಾಣಿಕತೆ, ಪೂರ್ವಭಾವಿ ಮನಸ್ಥಿತಿಯನ್ನು ಗಮನಿಸಬೇಕಿದೆ. ಈ ಆರ್ಥಿಕ ಕುಸಿತದಿಂದ ಹೊರಬರುವುದು ಖಚಿತ. ನಮ್ಮ ಆರ್ಥಿಕ ವಲಯದಲ್ಲಿರುವ ದಿಗ್ಗಜರು ನಮ್ಮನ್ನು ಅಲ್ಲಿಂದ ಹೊರತರಲು ಸಮರ್ಥರಾಗಿದ್ದಾರೆ.

ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಎಫ್ ಡಿ ಐ, ಕೈಗಾರಿಕಾ ಹೂಡಿಕೆಯಂತಹ ಬಲವಂತಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇವನ್ನು ಅನುಷ್ಠಾನಕ್ಕೆ ತರಲು ಸರ್ಕಾರಿ ನೀತಿಗಳು, ಕಲ್ಯಾಣ ಯೋಜನೆಗಳು ಇನ್ನಷ್ಟು ಉತ್ಸಾಹದಿಂದ, ಬೇಡದ ಕಠಿಣತೆಗಳನ್ನು ಸಡಿಲಗೊಳಿಸಬೇಕಾಗಿದೆ.

ಶಿಕ್ಷಣ ವ್ಯವಸ್ಥೆ

ನಾವು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಹುಡುಕಲು ಸ್ವದೇಶಿ ಪ್ರಜ್ಞೆಯನ್ನು ಮರೆಯುವುದು ನಷ್ಟಕರ. ದತ್ತೋಪಂತ್ ಥೆಂಗಡಿಯವರು ದೇಶಪ್ರೇಮವನ್ನು ದಿನನಿತ್ಯದಲ್ಲಿ ಮೆರೆಯಲು ‘ಸ್ವದೇಶಿ’ ಬಳಸುತ್ತಿದ್ದರು. ಆಚಾರ್ಯ ವಿನೋಬಾ ಭಾವೆಯವರು ‘ಸ್ವದೇಶಿ’ಯನ್ನು ಸ್ವಾವಲಂಬನೆಗೆ, ಅಹಿಂಸೆಗೆ ಹೋಲಿಸಿದ್ದರು. ಯಾವುದೇ ಮಾನದಂಡದಿಂದ ಅಳೆದರೂ ನಮಗೆ ತಿಳಿಯುವುದೇನೆಂದರೆ, ಸ್ವಾವಲಂಬಿಯಾಗಿ ಇತರರಿಗೆ ಉದ್ಯೋಗ ಸೃಷ್ಟಿಸಬಲ್ಲವನೇ ಅಂತಾರಾಷ್ಟ್ರೀಯ ವ್ಯಾಪಾರದಲ್ಲೂ ಸೈ ಎನಿಸಬಲ್ಲ ಹಾಗೂ ಇಡಿಯ ಮನುಕುಲಕ್ಕೆ ಸದೃಢ,ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಬಲ್ಲ. ಪ್ರಸ್ತುತ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಬಲವಂತಿಕೆಗಳಿಂದ ಸಂಪೂರ್ಣವಾಗಿ ಹೊರಬಂದು, ನಮ್ಮ ಶಕ್ತಿ, ಸಾಮರ್ಥ್ಯದ ಆಧಾರದ ಮೆಲೆಯೇ ನಮ್ಮ ಗುರಿಯನ್ನು, ಸಾಧಿಸಲು ಮಾರ್ಗವನ್ನು ಕಂಡು ಹಿಡಿದುಕೊಳ್ಳಬೇಕಿದೆ.

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಜಾಗತಿಕ ಉಪಟಲಗಳ ಪ್ರಭಾವವನ್ನು ತಗ್ಗಿಸಲು ಭಾರತದ ಮೂಲಗಳಿಗೆ ಹೋಗಿ ಚಿಂತಿಸಬೇಕಿದೆ. ನಮ್ಮ ಜನ, ಅವರ ಸ್ಥಿತಿಗತಿ, ಇಲ್ಲಿನ ಸಂಪನ್ಮೂಲಗಳು, ನಮ್ಮ ದೇಶದಲ್ಲಿರುವ ಬೇಕು ಬೇಡಗಳನ್ನು ಮನದಲ್ಲಿರಿಸಿಕೊಂಡು ನಮ್ಮದೇ ಆರ್ಥಿಕ ದೃಷ್ಟಿಯನ್ನು ರಚಿಸಿಕೊಳ್ಳಬೇಕಿದೆ. ಪ್ರಸ್ತುತದ ಜಾಗತಿಕ ಆರ್ಥಿಕ ಚಿಂತನೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿಲ್ಲ. ನಮ್ಮ ಸಾಮರ್ಥ್ಯ, ಶಕ್ತಿಗಳನ್ನು ಬಳಸಿಕೊಂಡು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತ, ಪರ್ಯಾವರಣಕ್ಕೂ ಹೆಚ್ಚು ಹಾನಿ ಮಾಡದೆ ಸ್ವಾವಲಂಬಿತರಾಗುವ ಜೊತೆಗೆ ಈ ಮಾರ್ಗದಿಂದಲೇ ವಿಶ್ವದ ಜೊತೆ ಆರ್ಥಿಕ ವ್ಯಾಪಾರ ವಹಿವಾಟು ನಡೆಸಬೆಕಾದ ಅಗತ್ಯವಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿ ದಶಕಗಳೇ ಕಳೆದರೂ “ಸ್ವ” ಎಂಬುದನ್ನು ಅರ್ಥಮಾದಿಕೊಳ್ಳಲು ಸಮಯ ವ್ಯಯ ಮಾಡಿದ್ದೇವೆ. ಇದಕ್ಕೆ ಮೂಲ ಕಾರಣ ನಮ್ಮನ್ನು ಗುಲಾಮರನ್ನಾಗಿ ಕಾಣುತ್ತಿದ್ದ ಸ್ವಾತಂತ್ರ್ಯಪೂರ್ವದ ಶಿಕ್ಷಣ ಪದ್ಧತಿ ಇನ್ನೂ ಚಾಲ್ತಿಯಲ್ಲಿರುವುದು. ಭಾರತೀಯ ದೃಷ್ಟಿಕೋನದಿಂದ ಶಿಕ್ಷಣ ಪದ್ಧತಿಯನ್ನು ಪುನಾರಚಿಸಬೇಕು. ಸ್ವ ಕೇಂದ್ರಿತ ಶಿಕ್ಷಣವನ್ನು ಅಭ್ಯಸಿಸಿದ ಇತರ ದೇಶಗಳು ಇಂದು ಶಿಕ್ಷಣದ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿವೆ ಎಂದು ತಿಳಿದುಬರುತ್ತದೆ. ಇಡಿಯ ವಿಶ್ವವನ್ನು ಪ್ರೀತಿಸುವ, ಎಲ್ಲಾ ಜೀವಿಗಳ ಬಗ್ಗೆಯೂ ದಯೆ ಇರಿಸುವ ಪ್ರಸ್ತುತದಲ್ಲಿ ಸಲ್ಲುವ, ತಾರ್ಕಿಕ, ಸತ್ಯಶೀಲ, ಕರ್ತವ್ಯಶೀಲ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಬೇಕಿದೆ. ಸ್ವ-ಭಾಷಾ, ಸ್ವ-ಭೂಷ, ಸ್ವ-ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಎನಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ. ಇದು ಕೇವಲ ಮೇಲುನೋಟದ ರಚನಾತ್ಮಕ ಬದಲಾವಣೆಯಿಂದಷ್ಟೆ ಸಾಧ್ಯವಿಲ್ಲ. ಆಮೂಲಾಗ್ರವಾಗಿ ಪರಿಶೀಲಿಸಿ ಪಠ್ಯಕ್ರಮವನ್ನೇ ಬದಲಿಸಬೇಕಿದೆ.

ಶಿಕ್ಷಣದಲ್ಲಿ ಇಂತಹ ಅಮೂಲ್ಯ ಅಂಶಗಳು ಇಲ್ಲದಿರುವುದು ಒಂದೆಡೆಯಾದರೆ, ಸಂಸ್ಕೃತಿಯ ಅವನತಿ, ಸಮಾಜದಲ್ಲಿನ ಅನೈತಿಕ ವರ್ತನೆಯೂ ಹೆಚ್ಚುತ್ತಿದೆ. ಹೆಣ್ಣನ್ನು ತಾಯಿಯರಂತೆ ಗೌರವಿಸುತ್ತಿದ್ದ ಈ ದೇಶದಲ್ಲಿ ಹೆಣ್ಣಿನ ಸ್ವಾಭಿಮಾನವನ್ನು ರಕ್ಷಿಸುವ ಸಲುವಾಗಿ ಯುದ್ಧಗಳು ನಡೆದ, ಎರಡು ಮಹಾನ್ ಗ್ರಂಥಗಳಾದ ರಾಮಾಯಣ, ಮಹಾಭಾರತ ರಚಿತವಾಗಿವೆ. ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಜೌಹಾರ್ ನಡೆಯುತ್ತಿದ್ದ ದೇಶದಲ್ಲಿ ಕುಟುಂಬದಲ್ಲಾಗಲಿ ಸಮಾಜದಲ್ಲಾಗಲಿ ಮಾತೆ, ಸೋದರಿಯರಿಗೆ ಮನ್ನಣೆ, ರಕ್ಷಣೆಯಿಲ್ಲದೆ ನಡೆಸಿಕೊಳ್ಳುತ್ತಿದ್ದೆವೆ. ಇದು ನಮ್ಮೆಲ್ಲರಿಗೂ ನಾಚಿಗೆಯ ಸಂಗತಿಯಾಗಿದೆ. ನಮ್ಮ ತಾಯಂದಿರನ್ನು ಸ್ವಾವಲಂಬಿತರನ್ನಾಗಿ, ಆತ್ಮರಕ್ಷಣೆಯನ್ನು ಕಲಿಸಿಕೊಡಬೆಕಿದೆ. ಪಾವಿತ್ರ್ಯಾಭಾವದಿಂದ, ಸಭ್ಯತೆಯಿಂದ ಪುರುಷರು ಮಹಿಳೆಯರನ್ನು ಕಾಣುವ ಹಾಗೆ ನಾವು ಮಾಡಬೇಕಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಮನೆಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಶಿಕ್ಷಣ ದೊರೆಯುತ್ತಿತ್ತು. ಇಂದಿನ ಒಡೆದ ಕಿರು ಕುಟುಂಬಗಳಲ್ಲಿ ಈ ಶಿಕ್ಷಣ ಲಭಿಸುತ್ತಿಲ್ಲ. ಜೊತೆಗೆ ಮಾದಕ ವ್ಯಸನದ ಬಗ್ಗೆಯೂ ಭಯ ಹುಟ್ಟಿಸುವ ವಾತಾವರಣವಿದೆ. ಸಾಂಸ್ಕೃತಿಕವಾಗಿ ಗಟ್ಟಿಯಿರುವ ಚೀನಾ ದೇಶದಲ್ಲಿಯೂ ಕೆಲ ಸಮಾಯದ ಹಿಂದೆ ಬಾಹ್ಯ ಶಕ್ತಿಗಳಿಂದಾಗಿ ಅಲ್ಲಿನ ಯುವಕರಲ್ಲಿ ಎಷ್ಟೋ ಮಂದಿ ಮಾದಕ ವ್ಯಸನಿಗಳಾಗಿದ್ದರು. ನಮ್ಮ ಕುಟುಂಬಗಳು ಈ ನಿಟ್ಟಿನಲ್ಲಿ ಬಲವಾದ ಮನಸ್ಥಿತಿ ಹೊಂದಿ ಮಕ್ಕಳಲ್ಲಿ ನೈತಿಕ ಜೀವನದ ಬಗ್ಗೆ ಬೋಧಿಸದಿದ್ದಲ್ಲಿ ಪರಿಣಾಮ ಉಹಿಸಲಸಾಧ್ಯ. ಈ ನಿಟ್ಟಿನಲ್ಲಿ ಸ್ವಯಂಸೇವಕರು ಸೇರಿದಂತೆ ಎಲ್ಲರೂ ಜಾಗೃತರಾಗಲಿ ಹಾಗೂ ಸಕ್ರಿಯರಾಗಿರಲಿ ಎಂಬ ಕರೆ ಸಂಘದ್ದು.

ಸಮಾಜದಲ್ಲಿ ಅತಿಯಾದ ಆರ್ಥಿಕ, ಚಾರಿತ್ರ್ಯ ಭ್ರಷ್ಟಾಚಾರ ಉದ್ಭವಿಸುವುದು ಸಂಸ್ಕೃತಿಯ ಅವನತಿಯಿಂದ. ಕಟುವಾದ ಕಾನುನುಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಭ್ರಷ್ಟರನ್ನು ಶಿಕ್ಷಿಸುವ ಕೆಲಸ ನಡೆಯುತ್ತಲಿದೆ. ಮೇಲಿನ ಸ್ತರದಲ್ಲಿ ಭ್ರಷ್ಟಾಚಾರ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಕೆಳ ಸ್ತರದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ಕಿತ್ತೊಗೆಯಲಾಗಿಲ್ಲ. ಕೆಲವೊಮ್ಮೆ ಭ್ರಷ್ಟಾಚಾರ ಬೆಳೆಯುತ್ತಿದೆ ಕೂಡ. ಕಠಿಣ ಕಾನೂನುಗಳನ್ನು ನಿಷ್ಠಾವಂತ ಜನರು ಪಾಲಿಸುತ್ತಿದ್ದಾರೆ. ಆದರೆ ಕಾನೂನು, ನೈತಿಕತೆಯನ್ನು ಪಾಲಿಸದವರು ವ್ಯವಸ್ಥೆಯನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತದೆಗಟ್ಟುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ.

ಅಗತ್ಯಕ್ಕಿಂತಲೂ ಹೆಚ್ಚು ಶೇಕರಿಸಿಟ್ಟುಕೊಳ್ಳುವ ವಿಕೃತ ಮನಸ್ಥಿತಿಯೇ ಭ್ರಷ್ಟಾಚಾರಕ್ಕೆ ಬುನಾದಿ. ಸಮಾಜವನ್ನು ಜಾಗೃತರನ್ನಾಗಿಸಿ, ಮನೆಗಳಲ್ಲಿ ಆದರ್ಶಗಳನ್ನು ಬೋಧಿಸುವುದು ಅಂತೆಯೇ ನಡೆದುಕೊಳ್ಳುವುದು ದೇಶದ ಹಿತಕ್ಕಾಗಿ ಅನಿವಾರ್ಯ. ಮಾಧ್ಯಮಗಳಿಗೆ ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಗೊಳಿಸುವುದು, ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು.

 ಹಿಂದೂ ರಾಷ್ಟ್ರ ವಿವರಣೆ

ಕಳೆದ ೯ ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದಲ್ಲಿ ಏಕಾತ್ಮತಾ, ಸದ್ಭಾವನಾ, ಸದ್ ವ್ಯವಹಾರ, ದೇಶದ ಬಗ್ಗೆ ಸಮ ದೃಷ್ಟಿ, ದೇಶಾಭಿಮಾನಗಳನ್ನು ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಿದೆ. ಸ್ವಯಂಸೇವಕರ ತ್ಯಾಗ ಮನೋಭಾವದಿಂದ ದೇಶದೆಲ್ಲೆಡೆ ವಿಶ್ವಾಸಮೂಡಿದೆ. ಸಂಘದ ಸಂಪರ್ಕಕ್ಕೆ ಬರದ ಕೆಲ ವರ್ಗದವರಿಗೆ ಸಂಘದ ಬಗ್ಗೆ ಸಲ್ಲದ ಆರೋಪ ಮಾಡುತ್ತಾ, ಭಯ, ಪ್ರತಿಕೂಲವೆನಿಸುವಂತೆ ಕೆಲ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಸಂಘ ಹಿಂದೂ ಸಮಾಜವನ್ನು ಸಂಘಟಿಸುತ್ತಿದೆ. ಇದನ್ನೇ ಆಸ್ತ್ರವನ್ನಾಗಿಸಿಕೊಂಡು ತಮ್ಮನ್ನು ತಾವು ಹಿಂದೂ ಎಂದುಕೊಳ್ಳದ ಮುಸಲ್ಮಾನ, ಕ್ರಿಶ್ಚಿಯನ್ನರಿಗೆ ಸಂಘ ಪ್ರತಿಕೂಲವೆಂಬಂತೆ ಆರೋಪಗಳನ್ನು ಮಾಡಲಾಗುತ್ತಿದೆ. ಹಿಂದೂ ಸಮಾಜವನ್ನು, ಹಿಂದುತ್ವವನ್ನು, ಹೀಯಾಳಿಸಿ ಹಲವಾರು ಕೆಟ್ಟ ರಚನೆಗಳಲ್ಲಿ ದೇಶವನ್ನು ಒಡೆಯುವ ಸ್ವ ಹಿತಾಸಕ್ತಿ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಕಣ್ಣು ಮುಚ್ಚಿಕೊಂಡೇ ಇರುವವರು ಸತ್ಯವನ್ನು ಕಾಣಲು ಬಯಸುತ್ತಿಲ್ಲವೆಂಬುದೇ ಇದರ ಅರ್ಥ.

ದೇಶದ ಅಸ್ಮಿತೆ, ಸಮಾಜದಲ್ಲಿ ನಮ್ಮ ಗುರುತಿನ ಬಗ್ಗೆ ಸಂಘದ ದೃಷ್ಟಿ, ಘೊಷಣೆ ಸ್ಪಷ್ಟವಾಗಿದೆ. ಭಾರತ ಅಂದರೆ ಹಿಂದೂಸ್ತಾನ ‘ಹಿಂದೂ ರಾಷ್ಟ್ರ’ ವಾಗಿದೆ. ಸಂಘದ ದೃಷ್ಟಿಯಲ್ಲಿ ಹಿಂದೂಗಳೆಂದರೆ ಕೇವಲ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರಲ್ಲ. ಯಾರು ಭಾರತದಲ್ಲಿ ನೆಲೆಸಿದ್ದಾರೋ, ಯಾರೆಲ್ಲ ಭಾರತದ ಪೂರ್ವಜರ ವಂಶಸ್ಥಾರೋ, ದೇಶದ ಪರಮ ವೈಭವಕ್ಕಾಗಿ ಶ್ರಮಿಸುವರೋ, ಎಲ್ಲಾ ವೈವಿಧ್ಯತೆಯ ನಡುವೆ ಎಲ್ಲರನ್ನೂ ಶಾಂತಿ, ಪ್ರೀತಿಗಳಿಂದ ಆದರಿಸಿ ಒಟ್ಟಿಗೆ ನಡೆಯುವ ಸಂಕಲ್ಪ ಮಾಡುತ್ತಾರೋ ಆ ಎಲ್ಲಾ ಭಾರತೀಯರೂ ಹಿಂದೂಗಳೇ. ಅವರ ಉಪಾಸನಾ ಪದ್ಧತಿ ಏನೇ ಇರಲಿ, ಭಾಷೆ ಯಾವುದೇ ಆಡುತ್ತಿರಲಿ, ಆಹಾರ ಪದ್ಧತಿಗಳೇನೆ ಇರಲಿ, ಯಾವುದೇ ಪ್ರಾಂತವಿರಲಿ ಅವು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಶಕ್ತಿಶಾಲಿ ವ್ಯಕ್ತಿ, ಸಮಾಜ ನಿರ್ಭೀತವಾಗಿರುತ್ತದೆ. ಇಂತಹ ಶಕ್ತಿಶಾಲಿ ವ್ಯಕ್ತಿಗಳು ಹಾಗೂ ಕಳಂಕರಹಿತ ವ್ಯಕ್ತಿತ್ವ ಯಾರನ್ನೂ ಹೆದರಿಸಲು ಹೋಗುವುದಿಲ್ಲ. ಜನ್ಮದಿಂದಲೂ ದುರ್ಬಲರಾದವರು, ಅಭದ್ರ ಮನಸ್ಥಿತಿಯವರು, ಇತರರನ್ನು ಹೆದರಿಸಲು ಪ್ರಯತ್ನಿಸುವರು. ಸಂಘ ಹಿಂದೂ ಸಮಾಜವನ್ನು ಗಟ್ಟಿ, ಸಬಲ, ಸದ್ಗುಣಶೀಲ, ಪರೋಪಕಾರಿಯನ್ನಾಗಿ ಮಾಡುತ್ತಿರುವುದು ಯಾರನ್ನೂ ಹೆದರಿಸಲು ಅಲ್ಲ ಆದರೆ ದುರ್ಬಲರನ್ನು, ಭಯಭೀತರಾದವರನ್ನು ರಕ್ಷಿಸಲೆಂದು.

ಬ್ರಿಟಿಷರ ಕಾಲದಿಂದಲೂ ಹಿಂದೂ ಎಂಬುದನ್ನು ರಿಲಿಜಿಯನ್ ಎಂದು ಗೊಂದಲ ಹುಟ್ಟಿಸಲಾಗಿದೆ. ಸಮಾಜದಲ್ಲಿ ಒಂದು ವರ್ಗವು ಹಿಂದೂ ಪದವನ್ನು ಸ್ವೀಕರಿಸುವುದಿಲ್ಲ. ಅವರು ಭಾರತೀಯ ಎಂದು ಕರೆದುಕೊಳ್ಳುತ್ತಾರೆ. ಕೆಲವರು ಸನಾತನ ಭಾರತೀಯ ಸಂಸ್ಕೃತಿ ಎಂದು ಬಳಸುತ್ತಾರೆ. ಹಿಂದೂ ಪದವನ್ನು ಬಳಸದೆ ಇತರೆ ಪದಗಳನ್ನು ಭಯ ಗೊಂದಲದಿಂದ ಬಳಸುವವರನ್ನು ಸಂಘ ಅಪ್ಪಿಕೊಳ್ಳುತ್ತದೆ. ಶಬ್ದಗಳು ಹಲವಿರಬಹುದು, ಉಪಾಸನಾ ಪದ್ಧತಿ ಬೇರೆಯದ್ದಿರಬಹುದು, ಆಹಾರ ಪದ್ಧತಿ, ಭಾಷೆ, ಪ್ರಾಂತಗಳು ಬೇರೆ ಬೇರೆಯಾದರೂ ಅವನ್ನೆಲ್ಲ ಒಂದೇ ಎಂದು ಸಂಘ ಪರಿಗಣಿಸುತ್ತದೆ. ಸಂಘದ ಕೆಲಸ ಅದೇ ಆಧಾರದ ಮೇಲೆ ಮುಂದೆ ಸಾಗುತ್ತದೆ.

ಈ ಸಂಬಂಧ, ಒಳಗೊಳ್ಳುವಿಕೆಯ ಭಾವ ರಾಷ್ಟ್ರದ ಪ್ರಜ್ಞೆ ಎನಿಸುತ್ತದೆ.

ವಿಶ್ವಕ್ಕೆ ಇಂದು ಭಾರತದ ಅವಶ್ಯಕತೆ ಬಹಳಷ್ಟಿದೆ. ಭಾರತ ತನ್ನ ಸ್ವಭಾವ, ಸಂಸ್ಕೃತಿಯ ಬಲವಾದ ಅಡಿಪಾಯದ ಮೇಲೆ ನಿಲ್ಲಬೇಕು. ರಾಷ್ಟ್ರದ ಈ ಭಾವ, ಹಾಗೂ ದೇಶದ ಬಗೆಗಿನ ಹೆಮ್ಮೆಯ ಜೊತೆಗೆ ಸಮಾಜದಲ್ಲಿ ಸದ್ಭಾವನೆ, ಸದಾಚಾರ, ಸಾಮರಸ್ಯ ಮತ್ತಷ್ಟು ಬೆಳೆಯಬೇಕು. ಈ ಕಾರ್ಯಗಳು ಸಾಕಾರಗೊಳ್ಳಲು ಸಂಘದ ಸ್ವಯಂಸೇವಕರು ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ ಹಾಗೂ ಮುಂದೆಯೂ ನಿರ್ವಹಿಸುತ್ತಾರೆ. ಸಂಘ ಸ್ವಯಂಸೇವಕರು ಈ ಗುರಿಯನ್ನು ಸಾಧಿಸುವಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬ ಸ್ವಯಂಸೇವಕನೂ ದುಡಿಯಬೇಕಿದೆ.

ಜೊತೆಗೆ, ಇಂದಿನ ಅಗತ್ಯವೆಂದರೆ ಈ ಕಾರ್ಯ ಸಫಲತೆಗೆ ಯಾರೋ ಒಬ್ಬ ವ್ಯಕ್ತಿಯನ್ನು ಸಂಘಟನೆಯನ್ನು ಅವಲಂಬಿಸಿ, ನಾವು ಮೂಕ ಪ್ರೇಕ್ಷಕರಾದರೆ ಪ್ರಯೋಜನವಾಗುವುದಿಲ್ಲ. ದೇಶದ ಸಮಗ್ರ ಅಭಿವೃದ್ಧಿ, ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು,ಉಪಟಲಗಳಿಂದ ವಿಮೋಚನೆ ಪಡೆಯುವುದು ಇವೆಲ್ಲವನ್ನೂ ಬೇರೆಯವರ ಹೆಗಲ ಮೇಲೆ ಹೊರಿಸಲು ಬರುವುದಿಲ್ಲ. ಕಾಲಕ್ರಮದಲ್ಲಿ ನಮ್ಮನ್ನು ಮುನ್ನಡೆಸುವ ನೇತಾರ, ನಾಯಕರು ಬರುತ್ತಿರುತ್ತಾರೆ. ಆದರೆ ಸಂಪೂರ್ಣ, ಶಾಶ್ವತ ಯಶಸ್ಸು ಸಾಧ್ಯವಾಗುವುದು ಸಮಾಜದ ಜೊತೆ ಸ್ವಯಂಸೇವಕನಾಗಿ ತೊಡಗಿಸಿಕೊಂಡಾಗ ಮಾತ್ರ.

ಸಂಘವು ಈ ಕಾರ್ಯದ ಸಫಲತೆಗೆ ಕಾರ್ಯಕರ್ತರನ್ನು ನಿರ್ಮಿಸುತ್ತಿದೆ. ಈವರೆಗೆ ಸಮಾಜದಲ್ಲಿ ಕಾರ್ಯಕರ್ತರು ನಿರ್ವಹಿಸಿದ ಚಟುವಟಿಕೆಗಳಿಗೆ ಸರಿಯಾದ ಸ್ಪಂದನೆ ದೊರೆತಿದೆ, ಹಾಗೂ ನಮ್ಮೆಲ್ಲರ, ಕುಟುಂಬದ, ದೇಶದ, ವಿಶ್ವದ ಸೌಖ್ಯಕ್ಕೂ ಕಾರಣವಾಗಿದೆ.

ಎಲ್ಲರಲ್ಲೂ ಕಡೆಯಲ್ಲಿ ಕೇಳಿಕೊಳ್ಳುವುದಿಷ್ಟೆ : ಇಂದಿನ ಅಗತ್ಯತೆಗಳಿಗನುಗುಣವಾಗಿ ರಾಷ್ಟ್ರ ಸೇವೆಯ ಉದಾತ್ತ, ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳೋಣ.

||ಭಾರತ ಮಾತಾ ಕಿ ಜೈ||

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Strengthening Hindu society to not frighten but to save the weak and frightened : RSS Sarsanghachalak Dr Mohan Bhagwat's Vijayadashami address.

Tue Oct 8 , 2019
8 Oct 2019, Nagpur: Sarsanghachalak of RSS Dr Mohan Bhagwat addressed the gathering of Swayamsevaks at Nagpur as well as online viewers all around the world on the occasion of Vijayadashami Utsav. Vijayadashami marks the victory of virtuous over evil and it was on this auspicious day of 1925 the organisation […]