ಕೆಂಬತ್ತಹಳ್ಳಿ ಕೆರೆ ಪುನರುಜ್ಜೀವನ : ಜನ ಜಾಗೃತಿ ಅಭಿಯಾನ

ಇತ್ತೀಚಿನ ದಿನಗಳಲ್ಲಿ ಬೇಸಿಗೆ ಬಂತಂದರೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ನೀರಿನ ಹಾಹಾಕಾರ ಸರ್ವೇಸಾಮಾನ್ಯವಾಗಿಬಿಟ್ಟಿದೆ. ನಮ್ಮ ಪೂರ್ವಜರು ವಿಕೇಂದ್ರೀಕರಣದಲ್ಲಿ ನಂಬಿಕೆ ಉಳ್ಳವರಾಗಿದ್ದು ನೀರಿನ ಅವಶ್ಯಕತೆಗಳಿಗಾಗಿ ಹಲವಾರು ಕೆರೆ ಕಟ್ಟೆಗಳ ನಿರ್ಮಾಣ ನಿರ್ಮಾಣ ಮಾಡಿದ್ದಾರೆ. ಇಂತಹ ವ್ಯವಸ್ಥೆಗಳಿಂದಾಗಿ ಹಳ್ಳಿಗಳು ಮತ್ತು ಪಟ್ಟಣಗಳು ತಮ್ಮ ನೀರಿನ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ನೀಗಿಸಿಕೊಳ್ಳುತ್ತಿದ್ದವು ಹಾಗೂ ಈ ತರಹದ ವ್ಯವಸ್ಥೆಗಳು ಸ್ಥಳೀಯ ಸಮುದಾಯಗಳು ತಮ್ಮ ನೀರಿನ ಮೂಲಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತಿದ್ದವು. ಸರಕಾರದ ವ್ಯಾಪ್ತಿಗೆ ಬಂದ ನಂತರ ಕಾಲಾಂತರದಲ್ಲಿ ವಿಕೇಂದ್ರೀಕರಣವೆಲ್ಲ ಹೊರಟು ಹೋಗಿ ಸ್ಥಳೀಯ ಜಲ ಮೂಲಗಳ ಸಂರಕ್ಷಣೆಯಲ್ಲಿ ಉದಾಸೀನವಾಗಿ ಕ್ರಮೇಣ ಈ ಜಲ ಮೂಲಗಳೆಲ್ಲ ಅವನತಿಯತ್ತ ಸಾಗಿವೆ. ಒಂದಾನೊಂದು ಕಾಲದಲ್ಲಿ ನೂರಾರು ಕೆರೆಗಳ ಊರಾಗಿದ್ದ ಬೆಂಗಳೂರಿನಲ್ಲಂತೂ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ವ್ಯವಸ್ಥಿತ ಹುನ್ನಾರದಿಂದ ಕೆರೆಗಳು ವಸತಿ ಬಡಾವಣೆಗಳಾಗಿಯೋ, ಸರಕಾರಿ ರಸ್ತೆಗಳಾಗಿಯೋ , ರುದ್ರ ಭೂಮಿಗಳಾಗಿಯೋ ಇಲ್ಲ ಕಸದ ಕೊಂಪೆಗಳಾಗಿಯೋ ಪರಿವರ್ತನೆಯಾಗಿವೆ. ಪರಿಸ್ಥಿತಿಯ ಗಂಭೀರತೆಯಿಂದಾಗಿ ಮತ್ತು ಜೀವನಕ್ಕೆ ನೇರವಾಗಿ ಸಮಸ್ಯೆ ವ್ಯಾಪಿಸುತ್ತಿರುವುದರಿಂದ ಸಾರ್ವಜನಿಕರು ಕೆರೆ ಕಟ್ಟೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬದಲಾವಣೆಯಾಗಿದೆ. ಜೆ ಪಿ ನಗರದ “ಕೆಂಬತಹಳ್ಳಿ ಕೆರೆ “ ಕೂಡ ಈಗ ದುರವಸ್ಥೆಯಲ್ಲಿದೆ. ದಾಖಲೆಗಳ ಪ್ರಕಾರ ೮ ಎಕರೆ ೭ ಗುಂಟೆ ಇರುವ ಕೆರೆಯು ಈಗ ಒತ್ತುವರಿಗಳಿಂದಾಗಿ ಕ್ರಮೇಣ ತನ್ನ ಜಾಗವನ್ನು ಕಳೆದುಕೊಳ್ಳುತ್ತಿದೆ. ಕೆರೆಯ ಒಂದು ಭಾಗದಲ್ಲಿ ಒಂದು ರುದ್ರ ಭೂಮಿ ತಲೆ ಎತ್ತಿದೆ. ಕೆರೆಯು ಘನ ತ್ಯಾಜ್ಯ ಮತ್ತು ಕೊಳಚೆ ನೀರಿನ ಆಗರವಾಗಿದೆ ಮತ್ತು ಈ ಎಲ್ಲ ಕಾರಣಗಳಿಂದ ಅಕ್ರಮ ಚಟುವಟಿಕೆಗಳ ಬೀಡಾಗಿದೆ. ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು ಕೆರೆಯ ಸುತ್ತಲೂ ಬೇಲಿ ಹಾಕಲಾಗಿದೆ. ಕಾಲಾಂತರದಲ್ಲಿ ಬೇಲಿಯು ತುಂಡಾಗಿದ್ದು ಒತ್ತುವರಿಗೆ ಹಾದಿ ಆಗಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಬಿ ಡಿ ಎ ಮಾತ್ರ ಕಣ್ಣೆತ್ತಿ ನೋಡಿಲ್ಲ.

ಪರಿಸ್ಥಿತಿ ಹೀಗಿರುವದನ್ನು ನೋಡಿ ಸಾರ್ವಜನಿಕರು ಸ್ವತಃ ಕೆಂಬತ್ತ ಹಳ್ಳಿ ಕೆರೆಯ ಸಂರಕ್ಷಣೆಯಲ್ಲಿ ಕಾರ್ಯರತರಾಗಿದ್ದಾರೆ. ಬಿ ಬಿ ಎಂ ಪಿ ಯ ಅಂಜನಾಪುರ ವಾರ್ಡಿನ ಸದಸ್ಯರಾದ ಶ್ರೀಯುತ ಸೋಮಶೇಖರ ಮತ್ತು ಗೊಟ್ಟಿಗೆರೆ ವಾರ್ಡಿನ ಶ್ರೀಮತಿ ಲಲಿತ ನಾರಾಯಣ ಅವರ ಸಹಾಯದಿಂದ ಕೆರೆಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಕಳೆದ 2-3 ವಾರಗಳಲ್ಲಿ ಜನಜಾಗೃತಿಗಾಗಿ ಪರಿಸರದ ವಿಷಯವಾಗಿ ಚಿತ್ರಕಲೆ ಸ್ಪರ್ಧೆ ಮತ್ತು ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು. ಭಾನುವಾರ 25.8.2019 ರಂದು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳು ಕೆರೆ ಮತ್ತು ಪರಿಸರ ಸಂರಕ್ಷಣೆ ಕುರಿತು ವಿವಿಧ ಪ್ರದರ್ಶನಗಳನ್ನು ಮಾಡಿದರು. ಆಲಹಳ್ಳಿ ಕೆರೆಯ ವತಿಯಿಂದ ಶ್ರೀಯುತ ಆನಂದ ಯಾದವಾಡ ಹಾಗೂ ಶ್ರೀಯುತ ಸುರೇಶ ಕೃಷ್ಣ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಶ್ರೀಯುತ ವೆಂಕಟೇಶ ಸಂಗನಾಳ ಕೆರೆಗಳ ಸಂರಕ್ಷಣೆ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಬಿ ಬಿ ಎಂ ಪಿ ಯ ಅಂಜನಾಪುರ ವಾರ್ಡಿನ ಸದಸ್ಯರಾದ ಶ್ರೀಯುತ ಸೋಮಶೇಖರ ಮತ್ತು ಗೊಟ್ಟಿಗೆರೆ ವಾರ್ಡಿನ ವತಿಯಿಂದ ಶ್ರೀಯುತ ನಾರಾಯಣ ಅವರು ಉಪಸ್ಥಿತರಿದ್ದು ನೆರೆದವರಿಗೆ ಸರಕಾರದ ಇಲಾಖೆಗಳ ಸಹಯೋಗದಿಂದ ಕೆರೆಯ ಪುನರುಜ್ಜೀವನಕ್ಕಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.