ಕುವೆಂಪು ಸ್ಮರಣೆ : ವರ್ತಮಾನದ ಅಗತ್ಯ

ಲೇಖಕರು:  ಡಾ.ರೋಹಿಣಾಕ್ಷ ಶಿರ್ಲಾಲು

ಕುವೆಂಪು ಕನ್ನಡ ಸಾಹಿತ್ಯಲೋಕ ಕಂಡ ಶ್ರೇಷ್ಠ ಸಾಹಿತಿ, ದಾರ್ಶನಿಕ. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಸಣ್ಣ ಕಥೆ, ಮಹಾಕಾವ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಅನ್ಯಾನ್ಯ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾದವರು ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕುವೆಂಪು ಅವರು ಬರವಣಿಗೆಯನ್ನು ನಡೆಸಿದ ಕಾಲ ಭಾರತದ ಇತಿಹಾಸದಲ್ಲಿ ಬಹುಮುಖ್ಯ ಸಂಘರ್ಷದ ಕಾಲಘಟ್ಟವದು. ಬ್ರಿಟಿಷ್ ಗುಲಾಮಿತನದಿಂದ ಪಾರಾಗಲು ನಡೆಯುತ್ತಿದ್ದ ಹೋರಾಟದ ನಿರ್ಣಾಯಕ ಕಾಲವದು. ಇನ್ನೊಂದೆಡೆ ಬ್ರಿಟಿಷರ ಒಡೆದು ಆಳುವ ನೀತಿಯನ್ವಯ ಕನ್ನಡ ಭಾಷಿಕ ಪ್ರದೇಶಗಳನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗುವಂತೆ ಮಾಡಿದ ಪರಿಣಾಮ ಕನ್ನಡ ಮಾತನಾಡುವ ಜನ ಸಂಕಷ್ಟಕ್ಕೆ ತುತ್ತಾದುದರ ವಿರುದ್ಧ ಕರ್ನಾಟಕ ಏಕೀಕರಣ ಚಳವಳಿ ನಡೆಯುತ್ತಿದ್ದ ಕಾಲಘಟ್ಟ. ಓರ್ವ ಶ್ರೇಷ್ಠ ಕವಿ ಇಂತಹ ಸಾಮಾಜಿಕವಾಗಿ ಬಹು ಮುಖ್ಯವಾದ ಸಂದರ್ಭದ ನಡುವೆ ನಿಂತಾಗ ಅವರ ಸ್ಪಂಧನೆ ಹೇಗಿರಬಹುದು? ಎನ್ನುವುದಕ್ಕೆ ಕುವೆಂಪು ಅವರ ರಚನೆಗಳೇ ಸಾಕ್ಷಿ.

ಹಾಗೆಂದು ಕುವೆಂಪು ಅವರ ಸೃಷ್ಟಿಶೀಲತೆಯನ್ನು ಈ ಹೋರಾಟಗಳೇ ನಿರ್ದೇಶಿಸಿತು ಎಂದೇನಲ್ಲ. ಕುವೆಂಪು ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದವರು. ಕೇವಲ ಪ್ರಭಾವ ಅಷ್ಟೇ ಅಲ್ಲ. ಅವರ ಚಿಂತನೆಯನ್ನು ರೂಪಿಸಿದವರು. ಇದರ ಹಿನ್ನೆಲೆಯಲ್ಲಿ ಭಾರತೀಯ ಶ್ರೇಷ್ಠ ಜ್ಞಾನ ನಿಧಿಯಂತಿದ್ದ ಉಪನಿಷತ್‌ನ ಪ್ರೇರಣೆಯೂ ಶಕ್ತಿಯಾಯಿತು. ಪೂರ್ವದ ಈ ಜ್ಞಾನ ನಿಧಿಗಳನ್ನು ಒಳಹೊಕ್ಕಿನೋಡುವ ಕಾಲಕ್ಕೆ ಅವರು ಆಧುನಿಕ ಶಿಕ್ಷಣವನ್ನೂ ಪಡೆದಿದ್ದರು. ಹಾಗಾಗಿ ಪೂರ್ವ ಪಶ್ಚಿಮಗಳು ಸೇರಿ ಕುವೆಂಪು ಸೃಷ್ಟಿಶೀಲ ಮನಸ್ಸು ರೂಪುಗೊಂಡಿತು. ಪಶ್ಚಿಮದ ರಸಪೂರ್ಣಗಾಳಿಗೆ ಮೈಯೊಡ್ಡಿದರು. ಇವೆರಡರ ಕೂಡುವಿಕೆ ಕುವೆಂಪು ಅವರನ್ನು ಶ್ರೇಷ್ಠ ದಾರ್ಶನಿಕರನ್ನಾಗಿ ರೂಪಿಸಿತು. 

ಕುವೆಂಪು ಅವರ ಕುರಿತು ಕನ್ನಡದಲ್ಲಿ ಸಾಕಷ್ಟು ಅಧ್ಯಯನಗಳಾಗಿವೆ. ಈ ಅಧ್ಯಯನಗಳು ಈ ಮೇಲಿನ ಸಂಗತಿಗಳನ್ನು ಗುರುತಿಸಿದೆ ಕೂಡ. ಹೀಗಿದ್ದರೂ ಕುವೆಂಪು ಅವರ ಅಧ್ಯಯನ ಕನ್ನಡ ಸಾಹಿತ್ಯದ ಮುಂದಿನ ದಿನಗಳನ್ನು ನಿರ್ದೇಶಿಸಿತೇ? ಎಂದು ನೋಡಿದರೆ ಕನ್ನಡದಲ್ಲಿ ಕುವೆಂಪು ನಂತರದ ಸಾಹಿತ್ಯ ಹೊರಳಿದ ದಿಕ್ಕು ದೆಸೆಗಳೆಲ್ಲವೂ ಭಿನ್ನವೇ ಆಗಿದೆ. ಕಾರಣವೇನೆಂದರೆ ಕುವೆಂಪು ಅವರನ್ನು ಸರಿಯಾಗಿ ಅರ್ಥೈಸದೇ ಹೋದುದು. ಕುವೆಂಪು ಅವರ ಹೆಸರಿನಲ್ಲಿ ಅಧ್ಯಯನ ಸಂಸ್ಥೆಗಳನ್ನು, ವಿಶ್ವವಿದ್ಯಾಲಯಗಳನ್ನು ಕಟ್ಟಿದೆವು. ನೂರಾರು ವಿಮರ್ಶೆಯ ಗ್ರಂಥಗಳನ್ನು ಪ್ರಕಟಿಸಿದೆವು. ಅದೆಷ್ಟೋ ಡಾಕ್ಟರೇಟ್ಗಳು ಸೃಷ್ಟಿಯಾಯಿತು. ಆದರೆ ಕುವೆಂಪು ಮನಸ್ಸು, ಕಾಳಜಿಗಳು ಕನ್ನಡ ಸಾಹಿತ್ಯದ ಭವಿಷ್ಯಕ್ಕೆ ದಾರಿದೀಪವಾಗದಂತೆ ತಡೆದೆವು. ಕುವೆಂಪು ಅಂದರೆ ಸಮನ್ವಯ . ಆ ಸಮನ್ವಯ ಮೇಲ್ ಸ್ತರದ ಹೊಂದಾಣಿಕೆಯಲ್ಲ. ಅದು ದರ್ಶನದ ಆಳವಾದ ಪ್ರತಿಫಲನ. ಆದರೆ ಅಂತಹ ಅವರ ದರ್ಶನವನ್ನು ಆ ನಂತರದ ಕನ್ನಡ ಸಾಹಿತ್ಯ ಪ್ರತಿಫಲಿಸದಂತೆ ತಡೆದ ಸಂಗತಿಗಳ್ಯಾವುದು? ಯಾಕೆ ಎಂದು ನೋಡಿದರೆ ಕುವೆಂಪು ಅವರ ಸಾಹಿತ್ಯವನ್ನು ಬಹಳ ಸುಲಭವಾಗಿ ನಾವು ನವೋದಯ ಎಂದು ವಿಂಗಡಿಸಿ ಆ ಕಾಲಘಟ್ಟದ ಒಳಗೆ ಸೇರಿಸಿಬಿಟ್ಟೆವು. ಜತೆಗೆ ನಾಡು, ನುಡಿ, ಪ್ರಕೃತಿ, ದಾರ್ಶನಿಕತೆ, ಆದ್ಯಾತ್ಮಿಕತೆಯೇ ಈ ಸಾಹಿತ್ಯದ ಲಕ್ಷಣವೆಂದು ಹೇಳಿ ಇದು ಸಾಹಿತ್ಯದ ಸತ್ವ ಅಥವಾ ಗುಣ ಎಂದು ನೋಡುವ ಬದಲು ಅದನ್ನು ಸಾಹಿತ್ಯದ ಮಿತಿ ಎಂದು ವಿಮರ್ಶೆ ಬರೆದೆವು. ಹಾಗಾಗಿ ಅದು ನಾವೇ ವಿಂಗಡಿಸಿದ ನವೋದಯದ ನಂತರದ ಕಾಲಘಟ್ಟಕ್ಕೆ ಬೇಡವಾದುದು ಎಂದಾಯಿತು. ಆ ಮಿತಿಯನ್ನು ಮೀರುವುದು ಎಂದರೆ ಅವುಗಳ ವಿರುದ್ಧ ಚಿಂತಿಸುವುದು ಎಂದಾಯಿತು. ನಾಡು ರಾಷ್ಟ್ರಗಳ ಕುರಿತ ಅವರ ಅರಿವು, ಅವುಗಳ ನಡುವಿನ ಸಮನ್ವಯ ಕಳೆದು , ಅವರು ಹಾಡಿದ ’ಜೈ ಭಾರತ ಜನನಿಯ ತನುಜಾತೆ’ ಗೀತೆ ಅತ್ಯುತ್ತಮ ಸಮನ್ವಯ ಸ್ವರೂಪ ಎಂದು ಕಾಣುವ ಬದಲು ಕಾಲದ ಭಿನ್ನಾಭಿಪ್ರಾಯಗಳ ಟೆನ್ಷನ್ ಕಡಿಮೆ ಮಾಡುವ ಒಂದು ಕ್ರಿಯೆಯಾಗಿ ಕಂಡಿತು. ಯಾವ ಕವಿಯ ರಚನೆಯೊಂದು ರಾಷ್ಟ್ರದ ಸಮಸ್ತವನ್ನೂ ತಾಯಿಯ ಸ್ವರೂಪದಲ್ಲಿ ಕಾಣುತ್ತಾ , ಈ ಕನ್ನಡ ನಾಡು ಆ ತಾಯಿಯ ಮಗಳು ಎನ್ನುವ ಗೌರವದಲ್ಲಿ ನೋಡುತ್ತಲೇ, ಈ ಭಾವನೆ ದೇಶದ ಎಲ್ಲಾ ಭಾಷಾ ಪ್ರಾಂತ್ಯಗಳಲ್ಲೂ ಹೇಗೆ ಸಹಜವಾಗಿ ಬೆಳೆದಿದೆ ಎನ್ನುವುದನ್ನು ಹೇಳಿದ್ದರೋ, ಅಂತಹ ಗೀತೆಯ ರಚನೆಯ ಸ್ವರೂಪದ ಬಗ್ಗೆ ಕೊಂಕು  ನುಡಿಯುವ , ನುಡಿದು ಅದರ ಅಂದಗೆಡಿಸುವ, ಆ ಮೂಲಕ ಬೆಸೆಯುವ ದಾರ್ಶನಿಕತೆಗಿಂತ ಒಡೆಯುವ ಕ್ಷುದ್ರತನಕ್ಕೆ ಬೆಲೆ ನೀಡುವ ಪ್ರವೃತ್ತಿಯನ್ನು ವಿಜೃಂಭಿಸಿದೆವು. ಪರಿಣಾಮವಾಗಿ ಇಂದು ದೇಶದೊಳಗೆ ತುಂಬಾ ಪ್ರತ್ಯೇಕತಾವಾದದ ಬೀಜ ಮೊಳೆತು ಅಲ್ಲಲ್ಲಿ ಫಲಕೊಡಲಾರಂಭಿಸಿದೆ. ಅವರಲ್ಲಿದ್ದ ಸಮನ್ವಯ ಪ್ರಜ್ಞೆಯ ಗುಣವನ್ನು ಒಂದು ಮೌಲ್ಯವಾಗಿ ಉಳಿಸಿಕೊಳ್ಳದುದರ ಪರಿಣಾಮವಾಗಿ ದೇಶದೊಳಗೆ ಹಲವು ರಾಷ್ಟ್ರಗಳ, ರಾಷ್ಯದೊಳಗೆ ಹಲವು ರಾಜ್ಯಗಳ , ರಾಜ್ಯದೊಳಗೆ ಮತ್ತೆ ಜಾತಿಗಳ ಗುಂಪುಗಳೇ ಒಂದೊಂದು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುವ ಕೆಟ್ಟದಿನಗಳಿಗೆ ಸಾಕ್ಷಿಯಾಗುತ್ತಿದ್ದೇವೆ.

ಆದರೆ ಕುವೆಂಪು ಕಂಡ ಕರ್ನಾಟಕ, ಭಾರತದ ಸ್ವರೂಪ ಆನಂತರದ ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ಕಾಣಿಸಲೇ ಇಲ್ಲ. ಕುವೆಂಪು ಅವರು ಪರಿಭಾವಿಸಿದ ಸಮನ್ವಯ ಸ್ವರೂಪದ ನಿದರ್ಶನವನ್ನು ಅವರ ಮಾತುಗಳಿಂದಲೇ ಸಾಕ್ಷೀಕರಿಸುವುದಾದರೆ , ಈ ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ  ಪ್ರದೇಶಗಳಿಂದ  ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ  ಅಷ್ಟೇನೂ ಭಿನ್ನವಲ್ಲ.  ಅಧ್ಯಾತ್ಮಿಕವಾಗಿ  ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಉಡುಗೆ-ತೊಡುಗೆ,  ಉಣಿಸು,  ನಡೆ-ನುಡಿಗಳಲ್ಲಿ ಪ್ರಾಂತದಿಂದ ಪ್ರಾಂತಕ್ಕೆ ಸ್ವಲ್ಪ ವ್ಯತ್ಯಾಸ ತೋರಿದರೂ ನಮ್ಮೆಲ್ಲರ ಕನಸು ಒಂದೇ,  ನಮ್ಮೆಲ್ಲರ ಮನಸ್ಸು ಒಂದೇ, ನಮ್ಮೆಲ್ಲರ ಗುರಿಯೂ ಒಂದೇ. ನಾವೆಲ್ಲ ಭಾರತೀಯರು. ನಮ್ಮ ಭಾಷೆ ಸಾಹಿತ್ಯಗಳು ಆ ಏಕೈಕವಾದ ಭಾರತೀಯ ಸಂಸ್ಕೃತಿ ಸಮುದ್ರದ ಬೃಹತ್ ತರಂಗಮಾತ್ರಗಳಾಗಿವೆ. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಗಳೂ ಹಿಮವತ್ ಪರ್ವತವೂ ನಮ್ಮನ್ನು ಭೌಗೋಳಿಕವಾಗಿ ಒಂದುಗೂಡಿಸಿರಬಹುದು.ಆದರೆ ರಾಜಕೀಯವಾಗಿ ಭಾರತೀಯ ಜನತೆ ಪರಸ್ಪರ ವ್ಶೆರಿಗಳೆಂದು ಪರಿಗಣಿತವಾಗಿದ್ದ ಭಿನ್ನ ಭಿನ್ನ ರಾಜ್ಯಗಳಲ್ಲಿ ಖಂಡ ಖಂಡವಾಗಿ ಹರಿದು ಹಂಚಿ ಹೋಗಿದ್ದಾಗಲೂ ಅವರನ್ನೆಲ್ಲ ಶತ ಶತಮಾನಗಳಿಂದ ಅಖಂಡವಾಗಿಯೆ ಇಟ್ಟಿದ್ದ ಶಕ್ತಿ ಯಾವುದು? ಆ ಶಕ್ತಿ ವೇದೋಪನಿಷತ್ತು ಷಡ್ದರ್ಶನಾದಿಗಳಲ್ಲಿ  ಹರಿಯುತ್ತಿರುವ  ಅಧ್ಯಾತ್ಮ ಶಕ್ತಿ; ರಾಮಾಯಣ ಮಹಾಭಾರತ ಭಾಗವತಾದಿಗಳಲ್ಲಿಯೂ  ದೇಶ ದೇಶದ ಕಾಲ ಕಾಲದ ಮಹಾ ಕವೀಂದ್ರರ ಮಹಾಕೃತಿಗಳಲ್ಲಿಯೂ ಹರಿಯುತ್ತಿರುವ ಸಾಹಿತ್ಯಶಕ್ತಿ; ಋಷಿ ಯೋಗಿ ಸಾಧಕ ಸಿದ್ಧ ಸಂತರ ದಿವ್ಯ ಜೀವನದಿಂದ ಆಕರ್ಷಿತವಾಗಿ, ಅವತರಿಸಿ ಅಭಿವ್ಯಕ್ತಗೊಂಡಿರುವ, ಹಾಗೂ ಒಂದಲ್ಲ ಇನ್ನೊಂದು ರೀತಿಯಿಂದ, ಒಬ್ಬರಲ್ಲ ಮತ್ತೊಬ್ಬರಿಂದ ಇಂದಿಗೂ ಆವಿರ್ಭಾವಗೊಳ್ಳುತ್ತಿರುವ ಧಾರ್ಮಿಕ ಶಕ್ತಿ. ಆ ಶಕ್ತಿಯೇ ಭಾರತಿ! ನೆಲದಲ್ಲಿ ಅದು ನೆಲೆಗೊಂಡಿರುವ ವಿಭಾಗವೇ ಭಾರತ!  ಅಲ್ಲಿ ಹುಟ್ಟಿ ಬೆಳೆದು, ಅದರ ದ್ಯೇಯೋದ್ದೇಶಗಳನ್ನು ಸಾಧಿಸುತ್ತಾ  ಪೂರ್ಣತ್ವದ ಕಡೆಗೆ ಸಾಗುತ್ತಿರುವ ಜನವೇ ಭಾರತೀಯರು. ನಾವೆಲ್ಲ ಭಾರತೀಯರೇ. ಕೇರಳ ಕರ್ನಾಟಕ ಆಂಧ್ರಾದಿ ಪ್ರದೇಶಗಳೆಲ್ಲ ಆ ಭಾರತಿಯ ಅಂಗರೂಪಗಳು, ಅಂಶರೂಪಗಳು. ಭಾರತಿ ತಾಯಿ. ಇವರೆಲ್ಲ ಆ ತಾಯಿಯ ತನುಜಾತೆಯರು; ತನುವಿನಿಂದ ಜಾತರಾದವರು; ಮಕ್ಕಳು. ಯಾವ ಅಂಗವಾಗಲಿ ಮತ್ತೊಂದು ಅಂಗದೊಡನೆ ಕದನವಾಡಿದರೆ ಅಥವಾ ಸಹಕರಿಸದಿದ್ದರೆ ಇತರ ಅಂಗಗಳಿಗೆ ಹಾನಿಂiiನ್ನುಂಟು ಮಾಡುವುದರ ಜೊತೆಗೆ ಅಂಗಿಗೂ ಹಾನಿಯನ್ನುಂಟು ಮಾಡಿ ತನ್ನ ಸರ್ವ ನಾಶಕ್ಕೂ ಕಾರಣವಾಗುತ್ತದೆ. ಕೇರಳಾಭಿಮಾನ ಕರ್ನಾಟಕಾಭಿಮಾನ ಆಂದ್ರಾಭಿಮಾನ ಇತ್ಯಾದಿ ದೇಶಭಾಷಾ ಪ್ರೇಮಾಭಿಮಾನಗಳು ದ್ವೇಷಕ್ಕಾಗಲೀ, ಅಸಹನೆ ಅನ್ಯಾಯಕ್ಕಾಗಲೀ ಆಕ್ರಮಣ ಬುದ್ಧಿಗಾಗಲಿ ಎಡೆಗೊಡದೆ ಭಾರತಾಭಿಮಾನದ ಆಶ್ರಯದಲ್ಲಿ ತಮ್ಮ ತಮ್ಮ  ಏಳಿಗೆಯನ್ನು ಸಾಧಿಸಬೇಕು ಎನ್ನುತ್ತಾರೆ. ಈ ಮಾತುಗಳ ಹಿನ್ನೆಲೆಯಲ್ಲಿ ಕುವೆಂಪು ನಂತರದ ಸಾಹಿತ್ಯವನ್ನು ನೋಡಿದರೆ, ಅದರಲ್ಲೂ ಬಂಡಾಯದ ಹೆಸರಲ್ಲಿ ಸೃಷ್ಟಿಸಿದ , ಸರಷ್ಟಿಸುತ್ತಿರುವ ಸಾಹಿತ್ಯವನ್ನು ನೋಡಿದರೆ ಅವುಗಳ ದ್ವನಿ ಕುವೆಂಪುರಂತಹ ಮಹಾನ್ ಕವಿಗೆ ಎಸಗುವ ಅವಮಾನದಂತೆಯೇ ಬಾಸವಾಗುತ್ತದೆ.

ಕುವೆಂಪು ಅವರಿಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಕುರಿತು ಚಿಂತಿಸುವುದೆಂದರೆ ಅದು ವಿಶಾಲ ನೆಲೆಯಲ್ಲಿ ಭಾರತೀಯವಾದುದರ ಚಿಂತನೆಯೇ ಆಗಿತ್ತು. ಹಾಗಾಗಿ  ಅವರು ಪ್ರಕಟಿಸುವ ಕನ್ನಡ  ಪ್ರಜ್ಞೆ ಭಾರತ ಪ್ರಜ್ಞೆಯ ಪ್ರತೀಕವೇ. ಪರಸ್ಪರ ವಿರುದ್ಧ ಅಲ್ಲ.ಕರ್ನಾಟಕತ್ವ, ಮಹಾರಾಷ್ಟ್ರತ್ವ, ಆಂಧ್ರತ್ವಗಳನ್ನು ಭಾರತೀಯತ್ವ ಬೆಸೆದಿರುವುದರಿಂದ ಬೇರೆ ಬೇರೆಯಾಗಿ ಒಡೆಯಲು ಬಿಡುವುದಿಲ್ಲ . ಈ ಮಾತನ್ನು ಅವರು ದೃಢವಾಗಿಯೇ ವ್ಯಕ್ತಪಡಿಸುತ್ತಾರೆ. ನಾನು ಪರಿಭಾವಿಸುವ ಆರಾಧಿಸುವ ಕರ್ನಾಟಕ ಯಾವಾಗಲೂ ಸಂಸ್ಕೃತಿ ಕರ್ನಾಟಕವೇ ಆಗಿದೆ . ಈ ಕಾರಣದಿಂದ ಅವರಿಗೆ ಭಾರತ-ಕರ್ನಾಟಕ ದ್ವಂದ್ವ ಸಂಬಂಧವಾಗಿ ಕಾಣಲಿಲ್ಲ. ಅವರು ಭಾರತದ ಮೂಲಕವೇ ಕನ್ನಡ ನಾಡಿನ ಅಭಿಮಾನವನ್ನು ಮೂಡಿಸುತ್ತಾರೆ. ನಾನು ರಾಜ್ಯ ದೃಷ್ಟಿಯಿಂದ ಕರ್ನಾಟಕದವನು, ಭಾಷಾ ದೃಷ್ಟಿಯಿಂದ ಕನ್ನಡಿಗನು, ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ  ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ  ಎನ್ನುತ್ತಾ  ಕೊಳಲಿಗೆ ಅನೆಕ ಕಣ್ಣುಗಳಿರುವಂತೆ ಭಾರತಿಗೆ ಬಹು ಜಿಹ್ವೆಗಳಿವೆ.  ಪೀಪಿ ಊದುವ ಹುಡುಗನಿಗೆ  ಕೊಳಲಿಗೆ ಅನೇಕ ರಂದ್ರಗಳಿರುವುದು ತೊಂದರೆಯ ವಿಷಯವಾಗುತ್ತದೆ; ಆದರೆ ವೇಣುವಾದನ ನಿಪುಣನಿಗೆ ಆ ರಂದ್ರಗಳ ಅನೇಕತೆಯೇ ಸಂಗೀತದ ಸ್ವರಮೇಲ ಮಾದುರ್ಯಕ್ಕೆ ಅವಶ್ಯ ಸಾಧನವಾಗುತ್ತದೆ ಎನ್ನುತ್ತಾ ಭಾರತೀಯ ಭಾಷೆಗಳೆಲ್ಲ ಸೇರಿ ಐಕ್ಯತೆಯ ಆರತಿಯನ್ನೆತ್ತಿ  ಭರತಮಾತೆಗೆ ಪೂಜೆ ಸಲ್ಲಿಸುತ್ತಿವೆ ಎಂದು ಸಂಭ್ರಮಿಸುತ್ತಾರೆ. ಈ ಸಂಭ್ರಮವನ್ನು ಕಾಪಾಡುವುದೇ ಸಾಹಿತ್ಯದ ಜವಾಬ್ಧಾರಿ. ಒಂದುವೇಳೆ ಸಾಹಿತ್ಯ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ? ಅವರೇ ಹೇಳುತ್ತಾರೆ ”ಸಾಹಿತ್ಯ ಸೌಹಾರ್ಧಕ್ಕೆ ಭಂಗ ತಂದರೆ ಅದು ಆಸುರೀ ಸಾಹಿತ್ಯವಾಗುತ್ತದೆ. ನಿಜವಾದ ’ಸಾಹಿತ್ಯ’ ಐಕ್ಯಕಾರಿ. ಸಾಮರಸ್ಯ,ಸಮನ್ವಯ, ಸಹಾನುಭೂತಿ, ಸರ್ವೋದಯ ಭಾವನೆ  ಇವುಗಳನ್ನು ಪ್ರಚೋದಿಸುವುದು ದೈವೀ ಸಾಹಿತ್ಯದ ಲಕ್ಷಣ ಎಂದು ಸ್ಪಷ್ಟವಾಗಿ ಸಾರಿಹೇಳುತ್ತಾರೆ. ಯಾವ ಸಾಹಿತ್ಯವನ್ನು ಐಕ್ಯಕಾರಿಯಾಗಿ, ಸಾಮರಸ್ಯ – ಸಮನ್ವಯದ ಭಾವ ಪ್ರಚೋದಕವಾಗಿ ಕಂಡಿದ್ದರೋ ಅದೇ ಸಾಹಿತ್ಯ ಇಂದು ವ್ಯವಸ್ಥಿತವಾಗಿ ಒಡಕಿನ ಸ್ವರವನ್ನು ವ್ಯಕ್ತಡಿಸುವ ಸಂದರ್ಭದಲ್ಲಿ ನಮ್ಮ ಸಾಹಿತ್ಯ ವಲಯಕ್ಕೆ ಕನಿಷ್ಟ ಕುವೆಂಪು ಅವರ ಹೆಸರನ್ನು ಹೇಳುವ ಅರ್ಹತೆಯಾದರೂ ಇದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

ಭಾರತ ಒಂದು ಒಕ್ಕೂಟ ವ್ಯವಸ್ಥೆಯನ್ನು ಸಾಂವಿಧಾನಿಕವಾಗಿ ಒಪ್ಪಿಕೊಂಡಿದೆಯಾದರೂ ಈ ಬೆಸುಗೆ, ಒಕ್ಕೂಟ  ಸ್ಥಾಪನೆಯಾಗಿರುವುದೇ ಸಂವಿದಾನ ಜಾರಿಗೊಂಡ ಬಳಿಕವಲ್ಲ. ನಮ್ಮಲ್ಲಿ ಅತ್ಯಂತ ಸಹಜವಾಗಿದ್ದ ಕೂಡಿಕೊಂಡಿದ್ದ ಭಾವನೆಗೆ ಸಂವಿಧಾನ ಒಕ್ಕೂಟದ ಸ್ವರೂಪವನ್ನು ಕಲ್ಪಿಸಿತು. ಇದು ಎಂದಿಗೂ ಬೇರ್ಪಡದ ಭಾವ. ದುರಂತವೆಂದರೆ ತಲೆಯೊಳಗೆ ಇನ್ನೂ ಪತನಗೊಂಡ ರಷ್ಯಾದ ಚಿಂತನೆಯನ್ನೇ ತುಂಬಿಕೊಂಡ ರಾಜಕಾರಣಕ್ಕೆ ಭಾರತೀಯ ಒಕ್ಕೂಟವೂ ರಷ್ಯಾದಂತೆ ಪತನವಾಗುವ ಕನಸಿದೆ. ಅಂತಹ ಖಾಲಿ ತಲೆಗಳಿಗೆ ಭಾರತ ಬೆಸೆದಿರುವುದು ರಷ್ಯಾದಂತೆ ಕೃತಕ ಕಾನೂನಿಮದ ಅಲ್ಲ ಎನ್ನುವುದೂ ತಿಳಿದಿಲ್ಲ. ರಾಷ್ಟ್ರಕವಿ ಕುವೆಂಪು ಮಾತನ್ನು ಸ್ಮರಿಸಿಕೊಳ್ಳುವುದಾದರೆ,  ಕರ್ನಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಭಾರತಮಾತೆಯ ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯ ಅಸ್ತಿತ್ವವೆಲ್ಲಿ? ಈಕೆ ಶ್ರೀರಾಮ ಶ್ರೀ ಕೃಷ್ಣರು ಅವತಾರ ಮಾಡಿದ ಭಾರತಾಂಬೆಯ ಮಗಳು; ಕಪಿಲ, ಪತಂಜಲ, ಗೌತಮ, ಜಿನ ಇವರೆಲ್ಲರಿಂದ ರೂಪಿತೆಯಾದ  ಭಾರತಾಂಬೆಯ ಕನ್ಯೆ; ನಾನಕ, ರಾಮಾನಂದ, ಕಬೀರ, ಶ್ರೀ ಕೃಷ್ಣ ಚೈತನ್ಯ, ರಾಮಕೃಷ್ಣ ಪರಮಹಂಸರೆ ಮೊದಲಾದ  ಮಹಾಪುರುಷರನ್ನು ಹಡೆದೂ  ಅವರೆಲ್ಲರ ದಿವ್ಯ ತಪಸ್ಸಿನಿಂದಲೆ  ಸಂಭೂತೆಯಾಗಿರುವ  ಭಾರತಮಾತೆಯ ತನುಜಾತೆ. ಮಗಳ ಮೈಯಲ್ಲಿ ಹರಿವ ನೆತ್ತರು ತಾಯಿಯದು. ಇವಳ ಉಸಿರು ಅವಳು.ಇಬ್ಬರಿಗೂ ಇರುವ ಸಂಬಂದ ಹೊಕ್ಕುಳ ಬಳ್ಳಿಯ ಸಂಬಂಧ. ಆದ್ದರಿಂದಲೇ  ಅವಳು ತಿಂದರೆ ಇವಳಿಗೆ  ಪುಷ್ಟಿ. ಮಗಳ ಪುಷ್ಟಿ ತಾಯಿಗೆ ತುಷ್ಟಿ ಎನ್ನುವಲ್ಲಿ ಕಾಣುವುದು ಐಕ್ಯತೆಯ ಲೋಕದೃಷ್ಟಿ. ಇಂತಹ ಐಕ್ಯತೆಯ ದೃಷ್ಟಿ ಜೀವಂತವಾಗಿರುವವರೆಗೆ ಒಡೆಯುವ ದುರ್ಬುದ್ಧಿಗಳಿಗೆ ಬೆಲೆ ಸಿಗಲಾರದು. ಅಂತಹ ಕ್ಷುಲ್ಲಕ ರಾಜಕಾರಣವನ್ನಂತೂ ಭಾರತ ಧಿಕ್ಕರಿಸಿಬಿಡುವುದರಲ್ಲಿ ಸಂಶಯವಿಲ್ಲ.

ಯಾಕೆಂದರೆ ಈ ಬೆಸುಗೆಯ ಬೇರು ಎಷ್ಟು ಆಳದಲ್ಲಿದೆ ಎಂದರೆ, ರಾಜಕೀಯವಾಗಿ ಭಾರತೀಯ ಜನತೆ ಪರಸ್ಪರ ವೈರಿಗಳೆಂದು ಪರಿಗಣಿತವಾಗಿದ್ದ ಭಿನ್ನ ಭಿನ್ನ ರಾಜ್ಯಗಳಲ್ಲಿ ಖಂಡ ಖಂಡವಾಗಿ ಹರಿದು ಹಂಚಿ ಹೋಗಿದ್ದಾಗಲೂ  ಅವರನ್ನೆಲ್ಲಾ ಶತ ಶತಮಾನಗಳಿಂದ ಅಖಂಡವಾಗಿಯೇ ಇಟ್ಟಿದ್ದ ಶಕ್ತಿಯನ್ನು ಕುವೆಂಪು ಸರಿಯಾಗಿಯೇ ಗ್ರಹಿಸಿದ್ದರು. ಈ ಪೂರ್ಣದೃಷ್ಟಿಯ ಭಾರತೀಯತೆಯೇ  ಅವರನ್ನು ವಿಶ್ವ ಮಾನವ ಪ್ರಜ್ಞೆಯ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ವಿಶ್ವಮಾನವತೆ sರತೀಯತೆಗೆ ವಿರುದ್ಧವಾಗುವುದಿಲ್ಲ, ವಿಶ್ವಮಾನವತೆ ರಾಷ್ಟ್ರೀಯತೆಯಿಂದ ಬೇಸತ್ತು ಅಪ್ಪಿಕೊಂಡ ಸಿದ್ಧಾಂತವಲ್ಲ. ಅದು ಬಾರತೀಯ ರಾಷ್ಟ್ರೀಯತೆಯ ವ್ಯಕ್ತರೂಪ. ಅಂದರೆ ಭಾರತೀಯ ರಾಷ್ಟ್ರೀಯತೆಯೇ ವಿಶ್ವಪ್ರೇಮದ ಧ್ವನಿ.  ಹೀಗಾಗಿ ಕವಿಗೆ ಭಾರತೀಯತೆ ಮತ್ತು ವಿಶ್ವಮಾನವ ಪ್ರಜ್ಞೆ ಪರಸ್ಪರ ವಿರುದ್ಧವಾಗಿ ಕಾಣಿಸುವುದಿಲ್ಲ. ಒಳಿತನ್ನು ವಿಶ್ವದೆಲ್ಲೆಡೆಯಿಂದ ಆವಾಹಿಸಿದ ನೆಲದ ದ್ವನಿಯದು. ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಧರ್ಮಗ್ರಂಥವನ್ನು ಹಿಡಿದು ಮತವಿಸ್ತರಣೆಗೆ ಹೊರಡುವ ನೆಲದಲ್ಲಿ ಅಂತಹ ಧ್ವನಿ ಹುಟ್ಟಲಾರದು. ಅಂತಹ ಮಣ್ಣಿನಲ್ಲಿ ಒಬ್ಬ ಕುವೆಂಪು ಹುಟ್ಟುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರೆ ಅವರು ಪ್ರತಿಪಾದಿಸಿದ ವಿಶ್ವಮಾನವತೆಯ ಬೆಲೆ ಅರಿವಾಗುತ್ತದೆ. ಆ ವಿಶ್ವಪ್ರೇಮದ ಬೇರು ಭಾರತದ್ದು. ಅದು ಸನಾತನ ದರ್ಶನದ್ದು. ಅದು ಉಪನಿಷತ್‌ನದ್ದು. ಈ ಭಾವ ಉಳಿಯಬೇಕಾದರೆ ಇಲ್ಲಿ ಸನಾತನತೆ ಉಳಿಯಬೇಕು, ಉಪನಿಷತ್ ಉಳಿಯಬೇಕು, ಭಾರತ ಉಳಿಯಬೇಕು ಎನ್ನುವುದೇ ಅದರ ವಿಶಾಲ ಧ್ವನಿ. ಅದು ಏಕ ಕಂಠದಿಂದ ಹೊಮ್ಮಿದ ಬಹುಧ್ವನಿ. ಹಾಗಾಗಿಯೇ ಕುವೆಂಪು ಭಾರತವನ್ನು ಕಂಡದ್ದು ಬಹುಜಿಹ್ವಾ ಭಾರತಿಯಾಗಿ.ಕನ್ನಡವೂ ಸೇರಿದಂತೆ ಎಲ್ಲಾ ದೇಶ ಭಾಷೆಗಳು ಆ ತಾಯಿಗೆ ಬೆಳಗಿದ್ದು ಐಕ್ಯತೆಯ ಆರತಿಯನ್ನು ಎನ್ನುವುದನ್ನು ತಮ್ಮ ಮಾತು ಬರವಣಿಗೆಗಳಲ್ಲಿ ಸ್ಪಷ್ಟಪಡಿಸುತ್ತಾರೆ.

ಪರಸ್ಪರ ವಿರುದ್ಧ ನಿಲ್ಲದ ರಾಜ್ಯ ರಾಷ್ಟ್ರ ಸಂಬಂಧ. ಪಶ್ಚಿಮ ಕಟ್ಟಿದ ಸಿದ್ಧಾಂತಕ್ಕೆ ಈ ಸಮನ್ವಯ ಸಂಬಂಧ ಅರ್ಥವಾಗುವುದಕ್ಕೂ ಸಾಧ್ಯವಿಲ್ಲ. ಪಶ್ಚಿಮ ಸಿದ್ಧಾಂತಕ್ಕೆ ಜೋತುಬಿದ್ದವರಿಗೆ ಇಂತಹ ಐಕ್ಯತೆ ಕಲ್ಪನೆಗೂ ಮೀರಿದ್ದು. ಆದರೆ ಕುವೆಂಪು ಅವರಲ್ಲಿ ಎಷ್ಟು ಸ್ಪಷ್ಟತೆ ಇತ್ತೋ ಅದರ ಒಂದಂಶವಾದರೂ ಇಂದು ಕನ್ನಡದ ಹೆಸರಲ್ಲಿ, ಬಾಷೆಯ ಹೆಸರಲ್ಲಿ ಹೋರಾಡುವವರಿಗಿದ್ದಿದ್ದರೆ, ಡೊಳಗಿನಿಂದ ಪ್ರತ್ಯೇಕತೆಯ ದ್ವನಿ ಮೊಳಗುತ್ತಿರಲಿಲ್ಲ. ನಾನು ರಾಜ್ಯ ದೃಷ್ಟಿಯಿಂದ ಕರ್ನಾಟಕದವನು, ಭಾಷಾ ದೃಷ್ಟಿಯಿಂದ ಕನ್ನಡಿಗನು, ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ. ಭಾರತಿ ತಾಯಿ, ಕರ್ನಾಟಕ ಮಗಳು. ಭಾರತಕ್ಕೆ ಧಕ್ಕೆ ಒದಗಿದರೆ ಕರ್ನಾಟಕ ಉಳಿಯುವುದಿಲ್ಲ. ಮಗಳು ಕರ್ನಾಟಕಕ್ಕೆ ಕೇಡಾದರೆ ತಾಯಿ ಭರತಮಾತೆ ಸಹಿಸುವುದಿಲ್ಲ. ಎಂದು ಹೇಳಲು ಸಾಧ್ಯವಾದ  ಕುವೆಂಪು ಅವರ ವಿಚಾರ ಪ್ರಣಾಳಿಯ ಬಗ್ಗೆ ನಮ್ಮ ಬಹುತೇಕ ಅಧ್ಯಯನಗಳು ಮೌನವಾಗಿ ಬಿಡುತ್ತವೆ. ಅವರ ಸಾಹಿತ್ಯದ ಸೆಲೆಕ್ಟಿವ್ ಆದ ಓದು ಕನ್ನಡ ಓದುಗರಿಗೆ ಮಾಡಿದ ಅವಮಾನ. ಈ ಓದಿನ ಪರಿಣಾಮವೇ ಜಾತಿ ಸಂಘದ ಚುನಾವಣೆಯ ಪೋಸ್ಟರ್‌ನಲ್ಲೂ ಕುವೆಂಪು ಜಾತಿ ಬಾಂಧವನಾಗಿ ಕಾಣಿಸಿಕೊಳ್ಳುತ್ತಾರೆ. ದೇಶ ಒಡೆಯುವ ಘೋಷಣೆ ಹಾಕಿದ ದೇಶದ್ರೋಹಿಗಳ ಬಿಡುಗಡೆಗೆ ಒತ್ತಾಯಿಸಿ ಟೌನ್‌ಹಾಲ್ ಮುಂದೆ ಪ್ರತಿಭಟಿಸುವ ವೃತ್ತಿನಿರತ ಪ್ರತಿಭಟನಾಕಾರರ ಬ್ಯಾನರ್‌ನಲ್ಲೂ  ಅವರ ಭಾವಚಿತ್ರ ಹಾಕಿಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ. ಆದರೆ ನಿಜದ ಕುವೆಂಪು ಅವರನ್ನು ಇಂದು ಪರಿಚಯಿಸಿಕೊಡುವ ಅಗತ್ಯ ಯಾವತ್ತಿಗಿಂತಲೂ ಹೆಚ್ಚಿದೆ.

ಡಾ.ರೋಹಿಣಾಕ್ಷ ಶಿರ್ಲಾಲು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಮಹಾಯಜ್ಞ

Tue Dec 29 , 2020
ವಿಶ್ವ ಹಿಂದೂ ಪರಿಷದ್ (ವಿಹಿಂಪ) ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ ಬೆಂಗಳೂರು ಮಹಾನಗರದ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಯಜ್ಞ ಕಾರ್ಯಕ್ರಮ ನಡೆಯಿತು. 5,000ಕ್ಕೂ ಅಧಿಕ ಮಂದಿ ಭಾಗವಹಿಸಿ ಪಾರಾಯಣ ಮಾಡಿದರು. ವಿಹಿಂಪ ಕಳೆದ 28 ವರ್ಷಗಳಿಂದ ಗೀತಾ ಪಾರಾಯಣವನ್ನು ಏರ್ಪಡಿಸುತ್ತಿದೆ. ಪ್ರತೀ ಕಾರ್ಯಕ್ರಮದಲ್ಲಿ ಪ್ರಖಂಡ್, ಸತ್ಸಂಗ ಸೇರಿದಂತೆ 4 ಗಂಟೆಗಳ ಕಾರ್ಯಕ್ರಮವಿರುತ್ತದೆ. ಬೆಂಗಳೂರು ಮಾತ್ರವಲ್ಲದೇ ಮಾಲೂರು ಬಾಗೇಪಲ್ಲಿ, ಹೊಸಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದಿದೆ. email facebook twitter […]