ದೇಶಕ್ಕೆ ಒಂದೇ ಧ್ವಜ: 1952ರ ಜಮ್ಮು ಕಾಶ್ಮೀರದ ಪ್ರತ್ಯೇಕತೆಯ ಧ್ವಜವನ್ನು ಇಲ್ಲವಾಗಿಸಿದ ಕಥೆ

ದೇಶಕ್ಕೆ ಒಂದೇ ಧ್ವಜ: 1952ರ  ಜಮ್ಮು ಕಾಶ್ಮೀರದ ಪ್ರತ್ಯೇಕತೆಯ ಧ್ವಜವನ್ನು ಇಲ್ಲವಾಗಿಸಿದ ಕಥೆ

ಕೃಪೆ: news13.in

ನವದೆಹಲಿ: 1952 ಜೂನ್ 7, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರೆಯಾಗಿಸಿ ದೇಶದೊಳಗೆಯೇ ಮತ್ತೊಂದು ದೇಶ (ಕಾಶ್ಮೀರ) ವನ್ನು ನಿರ್ಮಿಸುವ ಕೆಲಸವನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಶೇಕ್ ಮಹಮ್ಮದ್ ಅಬ್ದುಲ್ಲಾ ಭರ್ಜರಿಯಾಗಿಯೇ ಮಾಡುವ ಉತ್ಸಾಹದಲ್ಲಿದ್ದರು. ಪ್ರತ್ಯೇಕ ರಾಷ್ಟ್ರ, ಪ್ರತ್ಯೇಕ ಧ್ವಜದ ಕಲ್ಪನೆಗಳಿಗೆ ಸಾಕಾರ ರೂಪ ಕೊಡುವ ನಿಟ್ಟಿನಲ್ಲಿ ತಮ್ಮ ಬೆಂಬಲಿಗರ ಸಹಕಾರದೊಂದಿಗೆ ಪೂರಕವಾದ ಎಲ್ಲಾ ಕೆಲಸವನ್ನೂ ಸಂವಿಧಾನ ಸಭೆಯಲ್ಲಿ ಶೇಕ್ ಮಾಡಿದ್ದರು. ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ಆಗಿದ್ದವರು ನೆಹರೂ.

7 ಜೂನ್ 1957 ರಲ್ಲಿ ಜಮ್ಮು- ಕಾಶ್ಮೀರದ ಸಂವಿಧಾನ ಸಭೆಯಲ್ಲಿ ಕಣಿವೆ ರಾಜ್ಯವನ್ನು ಪ್ರತ್ಯೇಕ ಮಾಡುವ ಪ್ರತ್ಯೇಕ ಧ್ವಜ ಅಳವಡಿಸಿಕೊಳ್ಳುವ ನಿರ್ಣಯವನ್ನು ಮಂಡಿಸಲು ಶೇಕ್ ಯೋಚಿಸಿದ್ದರು. ಅವರನ್ನು ಜಮ್ಮು ಕಾಶ್ಮೀರದ ಪ್ರಧಾನಿ ಎಂದೇ ಕರೆಯಲಾಗುತ್ತಿತ್ತು. ಆ ಮೂಲಕ 2 ಪ್ರಧಾನ್, 2 ನಿಶಾನ್, 2 ವಿಧಾನ್ ಎಂಬಂತೆ ಭಾರತದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದೇ ದೇಶದಲ್ಲಿ ಎರಡು ರಾಷ್ಟ್ರದ ಕಲ್ಪನೆ, ಇಬ್ಬರು ಪ್ರಧಾನಿಗಳು, 2 ಸಂವಿಧಾನದ ಮೂಲಕ ದೇಶವನ್ನು ಪ್ರತ್ಯೇಕ ಮಾಡುವ ಕಾರ್ಯದಲ್ಲಿ ಶೇಕ್ ಮತ್ತವರ ಸಹಚರರು ಗೆಲುವು ಸಾಧಿಸಿದ್ದರು. ಪ್ರಪ್ರಥಮವಾಗಿ ಪ್ರತ್ಯೇಕ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸಿಯೇ ಬಿಟ್ಟರು.

ಆದರೆ ಈ ನಿರ್ಣಯಕ್ಕೆ ಭಾರತದ ಶ್ಯಾಮ ಪ್ರಸಾದ್ ಮುಖರ್ಜಿ ಅವರಂತಹ ಅನೇಕ ದೇಶಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್ ಮೂಲಕ ಏಕ ರಾಷ್ಟ್ರದ ಪರಿಕಲ್ಪನೆ ಹೊಂದಿದ್ದ ಅದೆಷ್ಟೋ ದೇಶಭಕ್ತರಿಗೆ ಪ್ರತ್ಯೇಕ ಕಾಶ್ಮೀರ ನೋವಿನ ಸಂಗತಿಯಾಗಿತ್ತು. ಜನ ಸಂಘದ ಸ್ಥಾಪಕ ಮುಖರ್ಜಿ ಅವರು, ಸಭೆಯಲ್ಲಿಯೇ ಇದನ್ನು ವಿರೋಧಿಸಿದ್ದರು. ಪ್ರಧಾನಿ ನೆಹರೂ ಅವರು ಕಾಶ್ಮೀರಕ್ಕೆ ನೀಡಿದ ಪ್ರತ್ಯೇಕತೆಯ ದನಿ ಆರ್ಟಿಕಲ್ 370ಯಿಂದಲೇ ದೇಶ ಅನೇಕ ಕಷ್ಟವನ್ನೆದುರಿಸಲಾರಂಭಿಸಿದೆ‌. ಇನ್ನು ಪ್ರತ್ಯೇಕ ಧ್ವಜ ಒಂದು ರಾಷ್ಟ್ರದೊಳಗೆ ಮತ್ತೊಂದು ರಾಷ್ಟ್ರವನ್ನು ನಿರ್ಮಿಸಿದಂತಾಗಿ ಏಕತೆಯ ಸಂದೇಶಕ್ಕೆ ಧಕ್ಕೆ ಉಂಟುಮಾಡುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂಬುದಾಗಿಯೂ ಮುಖರ್ಜಿ ಅವರು ವಾದಿಸಿದ್ದರು. ಆದರೆ ನೆಹರೂ ಅವರ ಮಾತನ್ನು ಪರಿಗಣಿಸದೆ, ಅವರ ಸ್ನೇಹಿತನಿಗೆ ಬೇಕಾದಂತೆ ಕಾನೂನು ಬದಲಿಸಿದರು. ಅಲ್ಲಿಗೆ ಏಕರಾಷ್ಟ್ರದ ಏಕತೆಯ ಧ್ಯೇಯ ಛಿದ್ರವಾಯಿತು.

ಕೊನೆಗೂ ಅಧಿವೇಶನದಲ್ಲಿ ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಬಂತು. ಕೆಂಪು ಬಣ್ಣದ, 2.3 ಇಂಚು ಉದ್ದದ, ಮಧ್ಯೆ 3 ಲಂಬ ಗೆರೆಗಳು ಮತ್ತು ನೇಗಿಲಿನ ಚಿತ್ರದ ಬಾವುಟ ಕಾಶ್ಮೀರದಲ್ಲಿ ಹಾರಿಯೇ ಬಿಟ್ಟಿತು. ಇದು ಕಾಶ್ಮೀರವನ್ನು ಸ್ವಲ್ಪ ವಿಶೇಷ ಎನ್ನುವ ಸ್ಥಾನಕ್ಕೆ ಕೊಂಡೊಯ್ಯಿತು. ಕೊನೆಗೂ ನೆಹರು ಸಹಾಯದಿಂದ ಕೋಟ್ಯಂತರ ಜನರ ಏಕತೆಯ ಮಂತ್ರಕ್ಕೆ ಬೆಂಕಿ ಇಟ್ಟು ಶೇಕ್ ತಮ್ಮ ಆಸೆ ನೆರವೇರಿಸಿಕೊಳ್ಳುವಲ್ಲಿ ಯಶಸ್ವಿ ಹೆಜ್ಜೆ ನೆಟ್ಟರು. ಇದು ಶೇಕ್ ರಿಗೆ ನಾಯಕನ ಪಟ್ಟ ಮತ್ತು ಭಾರತದ ಸಾರ್ವಭೌಮತೆ ಪ್ರಶ್ನಿಸುವ ಅಧಿಕಾರವನ್ನು ತಂದುಕೊಟ್ಟಿತು.

ಮುಖರ್ಜಿ ಅವರಂತಹ ನೂರಾರು ದೇಶಭಕ್ತರ ಕನಸು ಕಳೆದ ಆರೇಳು ದಶಕಗಳಿಂದ ನನಸಾಗಲೇ ಇಲ್ಲ. ಏಕತೆ ಕೇವಲ ಮಾತಾಗಿಯೇ ಉಳಿಯಿತಲ್ಲದೆ ನಿಜಾರ್ಥವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಆದರೆ 2019 ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಜಾರಿಗೊಳಿಸುವ ಸಲುವಾಗಿ ಕೆಲಸ ಮಾಡಲಾರಂಭಿಸಿತು. ಸಾಂವಿಧಾನಿಕ ಬದಲಾವಣೆಯ ಮೂಲಕ ಭಾರತದ ಏಕತೆ, ಸಾರ್ವಭೌಮತೆ ಗೆ ಮತ್ತೆ ಗೌರವ ನೀಡಿತು. ಆರ್ಟಿಕಲ್ 370 ಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನವನ್ನು ಹಿಂಪಡೆದುಕೊಂಡಿತು. ಆ ಮೂಲಕ ಭಾರತದ ಇತರ ರಾಜ್ಯಗಳಂತೆಯೇ ಕಣಿವೆ ರಾಜ್ಯ ಎಂಬುದನ್ನು ಜಗತ್ತಿಗೆ ಸಾರಿತು. ನೆಹರೂ ಬೇಜವಾಬ್ದಾರಿ ಯಿಂದಾಗಿ ಆಗಿದ್ದ ತಪ್ಪನ್ನು ಮೋದಿ ಸರ್ಕಾರ ವಿರೋಧದ ನಡುವೆಯೂ ಸರಿಪಡಿಸಿತು.

1952 ಜೂನ್ 7 ರಂದು ಕಾಶ್ಮೀರದ ಕಛೇರಿ, ಕಟ್ಟಡ, ವಾಹನ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಹಾರಾಡಲಾರಂಭಿಸಿದ ಪ್ರತ್ಯೇಕ ಧ್ವಜ, ಜಾರಿಯಲ್ಲಿದ್ದ ಪ್ರತ್ಯೇಕ ಸಂವಿಧಾನಕ್ಕೆ ಮೋದಿ ಸರ್ಕಾರ ಕೊನೆ ಹಾಡಿತು. 2 ನಿಶಾನ್ 2 ವಿಧಾನ್ ಪರಿಕಲ್ಪನೆಯನ್ನು ರದ್ದುಗೊಳಿಸಿರುವ ಬಗ್ಗೆ ಪ್ರತಿಪಕ್ಷ ಗಳ ವಿರೋಧದ ನಡುವೆಯೂ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ನಲ್ಲಿ ಘೋಷಣೆ ಮಾಡಿದರು. ಆ ಮೂಲಕ ಭಾರತ ಒಂದು ಅಭೂತಪೂರ್ವ ಬದಲಾವಣೆಯತ್ತ ತೆರೆದುಕೊಂಡಿತು. ಈ ಸಂದರ್ಭವನ್ನು ಅಮಿತ್ ಶಾ ಅವರು ನಿಭಾಯಿಸಿದ ಚಾಕಚಕ್ಯತೆ ಮಾತ್ರ ಇಡೀ ದೇಶವನ್ನೇ ನಿಬ್ಬೆರಗು ಮಾಡಿತು.

ಶೇಕ್ ಅವರ ಆಶಯ ಮತ್ತು ಅದಕ್ಕೆ ನೆಹರೂ ಬೆಂಬಲ ಇದೆರಡನ್ನೂ ರದ್ದುಗೊಳಿಸಲು ಮುಖರ್ಜಿ ನೇತೃತ್ವದ ದೇಶಭಕ್ತ ಬಣ ಅಂದಿನಿಂದಲೆ ಕೆಲಸ ಆರಂಭಿಸಿತ್ತು. ಆದರೆ ಈ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ್ದ ಶೇಕ್ ಪ್ರತ್ಯೇಕ ಬಾವುಟದ ಕೆಂಪು ಬಣ್ಣ ಕಾರ್ಮಿಕರನ್ನು ಪ್ರತಿನಿಧಿಸುತ್ತದೆ‌, ಲಂಬ ರೇಖೆಗಳು ಸಮಾನಾಂತರ ಮತ್ತು ಸಮವಾದ ಮಂಡಿಸುತ್ತದೆ ಮತ್ತು ನೇಗಿಲು ರೈತರನ್ನು ಪ್ರತಿಬಿಂಬಿಸುತ್ತದೆ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಅಂದು ಅಬ್ದುಲ್ ಗನಿಗೋನಿ ಅವರು ತಮ್ಮ ಭಾಷಣದಲ್ಲಿ ಕಾಶ್ಮೀರಕ್ಕೆ ಪ್ರತ್ಯೇಕ ರಾಷ್ಟ್ರೀಯ ಚಿಹ್ನೆ ಬಳಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬಕ್ಷಿ ಗುಲಾಂ ಮೊಹಮ್ಮದ್ ಅವರು ಎಲ್ಲರೂ ಈ ಪ್ರತ್ಯೇಕವಾದವನ್ನು ಬೆಂಬಲಿಸುವಂತೆಯೂ ಸೂಚಿಸಿದ್ದರು. ಜೊತೆಗೆ ಕಾಶ್ಮೀರ ಪ್ರತ್ಯೇಕತಾ ಇರಾದೆ ಹೊಂದಿದ್ದ ಎಲ್ಲರೂ, ರಾಷ್ಟ್ರ ಎಂಬ ಶಬ್ದ ಪ್ರಯೋಗ ಮಾಡುತ್ತಿದ್ದದ್ದು, ಅವರು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಯೋಜನೆ ಹೊಂದಿದ್ದರು ಎಂಬುದಕ್ಕೆ ಸ್ಪಷ್ಟ ನಿದರ್ಶನ.

ಇವೆಲ್ಲದರ ನಡುವೆ ಮಿರ್ ಖಾಸಿಂ ಅವರು ಇದರ ವಿರುದ್ಧ ತಮ್ಮ ಅಭಿಪ್ರಾಯ ಮಂಡಿಸುವಾಗ ಈ ನಿರ್ಣಯದಿಂದ ಪ್ರತ್ಯೇಕ ಪತಾಕೆ, ಪ್ರತ್ಯೇಕ ರಾಷ್ಟ್ರ ಎಂಬ ಶಬ್ಧವನ್ನು ತೆಗೆದು ಹಾಕುವಂತೆ ಸೂಚಿಸಿದರು. ಅದಕ್ಕೆ ಸರ್ದಾರ್ ಹರ್ಬಜನ್ ಸಿಂಗ್ ಅಜಾದ್ ಅವರು ಅನುಮೋದನೆಯನ್ನೂ ನೀಡಿದರು.

ಅಂದು ಕಾಶ್ಮೀರವನ್ನು ದೇಶದೊಳಗೆಯೇ ಉಳಿಸಿಕೊಳ್ಳುವ, ಅದನ್ನು ಭಾರತದ ಇತರ ರಾಜ್ಯಗಳಂತೆಯೇ ನೋಡುವ ಒಟ್ಟಿನಲ್ಲಿ ಹೇಳುವುದಾದರೆ, ಏಕ ಪ್ರಧಾನ್, ಏಕ ನಿಶಾನ್, ಏಕ ವಿಧಾನ್ ಪರಿಕಲ್ಪನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಮೋದಿ ಪಡೆ ಕಾರ್ಯ ತತ್ಪರವಾಗಿದೆ. ಆ ಮೂಲಕ ಏಕತೆಯ ಸಂದೇಶವನ್ನು, ಏಕ ರಾಷ್ಟ್ರ, ಏಕ ಸಂವಿಧಾನದ ಮಹತ್ವವನ್ನು ದೇಶದ ಜನರಿಗೆ ತಿಳಿಸುವ ಮೂಲಕ, ವಿಶ್ವಕ್ಕೇ ಏಕತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Atma Nirbhar Bharath: Freedom from the despondency created by Covid-19

Mon Jun 8 , 2020
Atma Nirbhar Bharath: Freedom from the despondency created by Covid-19. Opinion: Shantaram Lal As innovation being the enabler of economy, the first pillar, putting soil & water sensors, weather trackers, satellite imaging, vertical farming, farm automation & robotics into use will create increased crop productivity, decreased chemical usage, positive impact […]