ಮುಂದುವರಿದ ಯತಿಗಳ ಪಾದಯಾತ್ರೆ

ಪೇಜಾವರ ಶ್ರೀ ವಿಶ್ವೇಶತೀರ್ಥಗಳು ಚಿತ್ರದುರ್ಗದ ದಲಿತ ಕೇರಿಗೆ ಭೇಟಿ ನೀಡಿದ ಸಂದರ್ಭ

ಲೇಖಕರು: ಸಂತೋಷ್ ಜಿ.ಆರ್., ತಾಂಜೇನಿಯಾ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠ ಕರ್ನಾಟಕದ ಸಾಮಾಜಿಕ ಜಿಂತನೆ ಮತ್ತು ಸಂರಚನೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದಕ್ಕೆ ಕಾರಣ  ಈ ಹಿಂದಿನ ಮಠಾಧೀಶರಾಗಿದ್ದ ಬೃಂದಾವನಸ್ಥ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು. ಶ್ರೀಗಳಿಗಿದ್ದ ಹಿಂದುತ್ವ ಕುರಿತ ಬದ್ಧತೆ ಎಲ್ಲರಿಗೂ ತಿಳಿದದ್ದೆ. ಹಿಂದು ಎನ್ನಲು ಸಂಕೋಚಗೊಳ್ಳುತ್ತಿದ್ದ, ಜಾತಿ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದ ಅನೇಕ ಸ್ವಾಮೀಜಿಗಳ ಮಧ್ಯೆ ವಿಶ್ವೇಶ ತೀರ್ಥರು ಧೈರ್ಯವಾಗಿ ಹಿಂದುತ್ವದ ಕೆಲಸಕ್ಕೆ ಧುಮಕಿದರು. ಸಾರ್ವಜನಿಕವಾಗಿ ಹಿಂದೂ ಪರಿವಾರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿಶ್ವಹಿಂದೂ ಪರಿಷತ್ತಿನ ಸ್ಥಾಪನೆಯಿಂದ ಹಿಡಿದು ತಮ್ಮ ಜೀವನದ ಕೊನೆಯವರೆಗೆ ಹಿಂದೂಗಳಲ್ಲಿ ಏಕತೆಯನ್ನು ಮೂಡಿಸಲು ದುಡಿದರು. ಸಹಸ್ರಾರು ವೇದಿಕೆಗಳನ್ನು ಹತ್ತಿದರು, ಸಮಾಜೋತ್ಸವದಲ್ಲಿ ಮಾರ್ಗದರ್ಶನ ಮಾಡಿದರು. ಹೋರಾಟಗಳಲ್ಲಿ, ಅಭಿಯಾನ ಹಾಗೂ ಕರಸೇವೆಗಳಲ್ಲಿ ಪಾಲ್ಗೊಂಡರು. ಗ್ರಾಮಗ್ರಾಮಗಳಿಗೂ ನಡೆದರು. ಬಳಿ ಬಂದವರಿಗೆಲ್ಲ ಜಾತಿಮತಗಳ ಚಿಂತೆ ಬಿಟ್ಟು ಕೃಷ್ಣದೀಕ್ಷೆಯನ್ನು ನೀಡುವೆನೆಂದು ಘೋಷಿಸಿದರು.

ಅದರಲ್ಲೂ ಮೂಖ್ಯವಾಗಿ ಸಾಮರಸ್ಯದ ಕುರಿತ ಅವರ ಪ್ರಾಮಾಣಿಕ ಕಳಕಳಿ ಎಲ್ಲರಿಗೂ ಆದರ್ಶ. ಆಗಿನ ಕಾಲದಲ್ಲಿ ಕಲ್ಪನೆಗೂ ನಿಲುಕದ್ದು ಎಂಬುವಂತಹ ಅನೇಕ ಉಪಕ್ರಮಗಳನ್ನು ಹಿಂದಿನ ಪೇಜಾವರ ಸ್ವಾಮಿಗಳು ಕೈಗೊಂಡರು. ‘ದಲಿತ ಕೇರಿಗಳಲ್ಲಿ ಶ್ರೀಗಳ ಪಾದಯಾತ್ರೆ’ ಅಂತಹ ಒಂದು ಕಾರ್ಯಕ್ರಮ. ಅವರ  ಈ ನಡಿಗೆ ಎಲ್ಲರೂ ಕಣ್ಣರಳಿಸುವಂತೆ ಮಾಡಿತು. ಅದು ದಲಿತ-ಬ್ರಾಹ್ಮಣ ಆಗಿರಲಿ, ಅವರ್ಣೀಯ-ಸವರ್ಣೀಯ ಆಗಿರಲಿ ಯಾವುದೇ ಜಾತಿಗಳ ನಡುವಿನ ವಿದ್ವೇಷದಿಂದ ಹಾಳಾಗುವುದು ಹಿಂದೂ ಧರ್ಮವೇ. ಈ ಬೇಧಭಾವಗಳಿಗೆ ಅಜ್ಞಾನ ಒಂದು ಕಾರಣವಾದರೆ, ಸ್ವಾರ್ಥ ರಾಜಕೀಯವೂ ಸೇರಿದಂತೆ ಅನೇಕ ವಿವಿಧ ಕಾರಣಗಳೂ ಇದ್ದವು. ಶತಮಾನಗಳಿಂದ ನಿಮ್ಮಲ್ಲಿ ತರತಮಭಾವವಿದೆ, ಬ್ರಾಹ್ಮಣರು ದಬ್ಬಾಳಿಕೆ ನಡೆಸುತ್ತಾರೆ ಮತ್ತು ದಲಿತರು ಶೋಷಣೆಗೊಳಗಾಗುತ್ತಿದ್ದಾರೆ ಎಂಬ ಮೆಕಾಲೆ ಶಿಕ್ಷಣದ ಭಾಗವೂ ಜನರ ತಲೆಯಲ್ಲಿ ಭದ್ರವಾಗಿ ಕುಳಿತಿತ್ತು. ಇನ್ನು ಹಿಂದು ಸಮಾಜದಲ್ಲಿ ಅಳಿದುಳಿದಿರುವ ಏಕತೆಯೂ ನಾಶವಾದರೆ ಸಾಕು ಜನರನ್ನು ತಮ್ಮೆಡೆಗೆ ಸೆಳೆಯಬಹುದೆಂಬ ಕ್ರೈಸ್ತ ಮಿಷನರಿಗಳ ಮತ್ತು ಜಿಹಾದಿಗಳ ಹೊಂಚು. ಇದಕ್ಕೆಲ್ಲ ದೊಡ್ಡ ಹೊಡೆತ ಕೊಟ್ಟದ್ದು, ವೈಚಾರಿಕ ಹೊಸ ಅಲೆಯನ್ನು ರಾಜ್ಯದಲ್ಲಿ ಎಬ್ಬಿಸಿದ್ದು ವಿಶ್ವೇಶ ತೀರ್ಥರ ದಲಿತ ಕಾಲೋನಿಗಳಲ್ಲಿನ ಪಾದಯಾತ್ರೆ.

ನಮ್ಮೆಡೆಗೆ ಬರುವುದಿಲ್ಲ, ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ, ನಮ್ಮನ್ನು ದೂರವೇ ಇಟ್ಟಿರುತ್ತಾರೆ ಇತ್ಯಾದಿ ತಥಾಗಥಿತ ಕೆಳಜಾತಿಗಳೆಂದು ಕೊಂಡವರ ಆರೋಪ ಮತ್ತು ಆಕ್ಷೇಪಗಳಿಗೆ ಉಡುಪಿಯ ಯತಿಗಳು ನೀಡಿದ ಕ್ರಿಯಾತ್ಮಕ ಉತ್ತರ ನೀವಿರುವಲ್ಲಿಗೆ ನಾವು ಬರುತ್ತೇವೆ ಎಂಬುದೇ ಆಗಿತ್ತು. ನಮ್ಮ ನಾಡು ಕಂಡ ಎಲ್ಲ ಸಂತ ಮಹಂತ, ದಾಸ ಶರಣರ ಇಚ್ಛೆಯೂ ಅದೇ ಆಗಿತ್ತಲ್ಲವೆ? ನೂರಾರು ಭಾಷಣಗಳು ಮಾಡದಿದ್ದ ಕೆಲಸವನ್ನು ಸ್ವಾಮೀಜಿಗಳ  ಒಂದು ಪಾದಯಾತ್ರೆ ಮಾಡಿತು. ಸಾಮರಸ್ಯದ ಗ್ರಾಮ, ಸಮಾಜ, ಧರ್ಮ ಮತ್ತು ದೇಶ ಕಟ್ಟಲು ಇದೊಂದು ಮಹತ್ವದ ಅಡಿಗಲ್ಲು ಆಯಿತು. ಸನ್ಯಾಸತ್ವ ಸ್ವೀಕರಿಸಿದ ಮೇಲೆ ಯಾವುದೇ ಜಾತಿಗೆ ಅವರು ಸೀಮಿತರಾಗಿರುವುದಿಲ್ಲ. ಆದರೂ ತಾವು ನಿರ್ವಹಿಸುವ ಮಠ, ಕ್ಷೇತ್ರಗಳ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ ಆಚಾರ ವ್ಯವಹಾರಗಳನ್ನು ಅದರ ಪ್ರಮುಖರಾಗಿ ನಡೆಸಲೇ ಬೇಕಾಗುತ್ತದೆ. ಅಲ್ಲಿ ಬಹುಕಾಲದಿಂದ ಬಂದ ಕಟ್ಟುಪಾಡು, ಮಡಿ ಮೈಲಿಗೆಯಂತಹ ವಿಚಾರಗಳು ಆ ಸಂಪ್ರದಾಯಗಳಿಂದ ಹೊರಗಿರುವವರಿಗೆ ಅಸ್ಪೃಶ್ಯತೆ, ಅಸಮಾನತೆ ಇತ್ಯಾದಿಯಾಗಿ ಕಾಣುವುದು ಅಸಹಜವೇನಲ್ಲ. ಅದರಲ್ಲೂ ಪೇಜಾವರಮಠದಂತಹ ಕೆಲವು ಮಠಗಳು ಬ್ರಾಹ್ಮಣ ಸಮುದಾಯದವರ ಮಠವೆಂಬ ಭಾವ ಸಮಾಜದಲ್ಲಿ ಆಗ ಹರಡಿದ್ದರಿಂದ ಈ ಪಾದಯಾತ್ರೆಗಳು ಹೊಸಕ್ರಾಂತಿಯೇ ಆಯಿತೆಂದರೆ ಉತ್ಪ್ರೇಕ್ಷೆ ಖಂಡಿತ ಅಲ್ಲ.

ತೊಂಬತ್ತರ ದಶಕದಲ್ಲಿ ಬೆಂಗಳೂರಿನ ಜಬ್ಬಾರ್ ಕಾಲೋನಿಯಲ್ಲಿ  ವಾಮನ ಗಾತ್ರದ ಪುಟ್ಟ ಸಂತ ಇರಿಸಿದ ಹೆಜ್ಜೆಗಳು ಇಡೀ ದೇಶದಲ್ಲಿ ಬೃಹತ್ ಸಂಚಲನವನ್ನೇ ಸೃಷ್ಟಿಸಿಬಿಟ್ಟವು. ದಲಿತ, ಹಿಂದುಳಿದವರೆಂದು ಗುರುತಿಸಲ್ಪಟ್ಟವರೇ ಹೆಚ್ಚಿದ್ದ ಪ್ರದೇಶವದು. ನಾವು ನೋಡುತ್ತಿರುವುದು ಸತ್ಯವೇ? ಇದು ವಾಸ್ತವವೇ? ಎಂಬ ಅತ್ಯಾನಂದದ ಗೊಂದಲದಲ್ಲಿ ಆ ಬಡಾವಣೆಯ ನಿವಾಸಿಗಳು ಸಿಲುಕಿದರು. ನಾಡಿನ ಆಧುನಿಕ ಚರಿತ್ರೆಯಲ್ಲಿ ಇದೊಂದು ಮಹ್ವದ ಘಟನೆ. ನಂತರ ಅನೇಕ ಯತಿವರ್ಯರು ಮುಂದೆ ಬಂದರು. ದಲಿತರ ಮನೆಗಳಿಗೆ ಪ್ರವೇಶಿದರು.  ವಿಶಾಲ ಹೃದಯಿಗಳು ವಾಸವಿದ್ದ  ಆ ಪುಟ್ಟ ಮನೆಯ  ಗೂಡುಗಳಲ್ಲಿದ್ದ ದೇವರ ಪಟದ ಮುಂದೆ ದೀಪ ಬೆಳಗಿದರು. ಮಂತ್ರಾಕ್ಷತೆ ನೀಡಿದರು. ಹಿಂದೂ ಸಮಾಜ ಎದುರಿಸುತ್ತಿದ್ದ ಬಹುತೇಕ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದ್ದ ಜಾತಿಗಳ ನಡುವೆ ಇದ್ದ ದೂರವನ್ನು ಈ ಪಾದಯಾತ್ರೆಗಳು ಇಲ್ಲವಾಗಿಸಿದವು. ಇದು ದೂರದೃಷ್ಟಿಯುಳ್ಳ ಶ್ರೇಷ್ಠ ಸಂತನೊಬ್ಬನ ಯೋಗದಾನ.         

ಸಂತಸದ ಸಂಗತಿ ಎಂದರೆ ಇದೇ ಸತ್ಸಂಪ್ರದಾಯವನ್ನು ಪೇಜಾವರ ಪೀಠದ ಈಗಿನ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಹ ಮುಂದುವರೆಸಿದ್ದಾರೆ. ಡಿಸೆಂಬರ್ ತಿಂಗಳ 20ನೇ ತಾರೀಖಿನಂದು ಉಡುಪಿ ಸಮೀಪದ ಕೊಡವೂರು ಗ್ರಾಮದ ಪಾಳೆಕಟ್ಟೆಯ ದಲಿತ ಕೇರಿಗೆ ಶ್ರೀಗಳು ಭೇಟಿ ನೀಡಿದ್ದರು. ಅಲ್ಲಿರುವ ಸುಮಾರು 120 ಪರಿಶಿಷ್ಟ ಕುಟುಂಬಗಳಲ್ಲಿರುವ ಬಹುತೇಕ ಎಲ್ಲರೂ ಅದೇ ಕೇರಿಯ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಸೇರಿದ್ದಾರೆ. ಅಲ್ಲಿನ ದಲಿತ ಕುಟುಂಬಗಳೊಂದಿಗೆ ಸ್ವಾಮೀಜಿ ಸಂವಾದ ನಡೆಸಿ, ಆಶೀರ್ವಾದಿಸಿದ್ದಾರೆ. ಇದರೊಟ್ಟಿಗೆ ಮತ್ತೊಂದು ಮಹತ್ವದ ಉದ್ದೇಶವೂ ಜೊತೆಗೂಡಿದೆ. ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಹೆಗಲು ನೀಡಬೇಕೆಂದು ಸಹಕಾರವನ್ನೂ ಕೋರಿದ್ದಾರೆ.

ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥರು ಇತ್ತೀಚೆಗೆ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆಎಂಬ ಪರಿಶಿಷ್ಟರ ಬಡಾವಣೆಗೆ ಭೇಟಿ ನೀಡಿದರು.

ಪೇಜಾವರ ಮಠದ ಇಂದಿನ ಯತಿಗಳ ಈ ನಡೆ ನಿಜಕ್ಕೂ ಆಶಾದಾಯಕ. ಹಿರಿಯ ಯತಿಗಳ ಸತ್ಸಂಪ್ರಾದಾಯವನ್ನು ಮುಂದುವರೆಸುವ ಸಂಕಲ್ಪವನ್ನು ಈ ಮೂಲಕ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಎಲ್ಲ ಮಠಮಂದಿರಗಳ ಸ್ವಾಮೀಜಿಗಳೂ ತಮ್ಮ ಹಿರಿಯರು ಕೈಗೊಂಡಿದ್ದ ಧರ್ಮದ ಬುನಾದಿಯನ್ನು ದೃಢಗೊಳಿಸುವ ಕಾರ್ಯಗಳನ್ನು ಮುಂದುವರೆಸಿದರೆ ಅದಕ್ಕಿಂತ ಮಹತ್ವದ ರಾಷ್ಟ್ರಕಾರ್ಯ, ಧರ್ಮಕಾರ್ಯ ಮತ್ತೊಂದಿಲ್ಲ.

ಲೇಖಕರು: ಸಂತೋಷ್ ಜಿ.ಆರ್., ನಿರ್ದೇಶಕರು,  ಸ್ವಾಮಿ ವಿವೇಕಾನಂದ ಸಾಂಸ್ಕ್ರತಿಕ ಕೇಂದ್ರ,  ಡರ್-ಎಸ್-ಸಲಾಂ,  ತಾಂಜೇನಿಯಾ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕುವೆಂಪು ಸ್ಮರಣೆ : ವರ್ತಮಾನದ ಅಗತ್ಯ

Tue Dec 29 , 2020
ಲೇಖಕರು:  ಡಾ.ರೋಹಿಣಾಕ್ಷ ಶಿರ್ಲಾಲು ಕುವೆಂಪು ಕನ್ನಡ ಸಾಹಿತ್ಯಲೋಕ ಕಂಡ ಶ್ರೇಷ್ಠ ಸಾಹಿತಿ, ದಾರ್ಶನಿಕ. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಸಣ್ಣ ಕಥೆ, ಮಹಾಕಾವ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಅನ್ಯಾನ್ಯ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾದವರು ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕುವೆಂಪು ಅವರು ಬರವಣಿಗೆಯನ್ನು ನಡೆಸಿದ ಕಾಲ ಭಾರತದ ಇತಿಹಾಸದಲ್ಲಿ ಬಹುಮುಖ್ಯ ಸಂಘರ್ಷದ ಕಾಲಘಟ್ಟವದು. ಬ್ರಿಟಿಷ್ ಗುಲಾಮಿತನದಿಂದ ಪಾರಾಗಲು ನಡೆಯುತ್ತಿದ್ದ ಹೋರಾಟದ ನಿರ್ಣಾಯಕ ಕಾಲವದು. ಇನ್ನೊಂದೆಡೆ ಬ್ರಿಟಿಷರ ಒಡೆದು ಆಳುವ […]