ಲೇಖನ : ನಿಜ ಶ್ರಮಿಕ ರೈಲಿನ ಜಾಡಿನಲ್ಲಿ..

ನಿಜ ಶ್ರಮಿಕ ರೈಲಿನ ಜಾಡಿನಲ್ಲಿ…..

ಇಂದಿನ ಪ್ರಜಾವಾಣಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜರ ಲೇಖನ

ಅನೇಕಲ್ ಪೋಲಿಸ್ ಠಾಣೆಯ ವ್ಯವಸ್ಥೆಯಲ್ಲಿ ಬಿ ಎಮ್ ಟಿ ಸಿ ಬಸ್ಸು ಹತ್ತಿ , ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಹೊರಡಲು ಕಾಯುತ್ತಿದ್ದ ಜಾರ್ಖಂಡ್ ನ ರಂಜಿತ್ ಸಾಹು ಎಂಬ 22ವರ್ಷದ ಯುವಕನ ಹೆಗಲುಚೀಲದ ಜೊತೆಗೆ ಕೈಯಲ್ಲಿ ಇದ್ದದ್ದು ಕ್ರಿಕೆಟ್ ಬ್ಯಾಟು . ಸಿಮೆಂಟು – ಕಾಂಕ್ರೀಟ್ ಧೂಳಿನ ನಡುವೆಯೂ ರಂಜಿತನಲ್ಲೊಬ್ಬ ಧೋನಿ ಜೀವಿಸುತ್ತಿದ್ದನೇನೋ ?

ಅತ್ತಿಬೆಲೆಯ ಸಮೀಪ ಅರ್ಧಕ್ಕೆ ನಿಂತ ಬೃಹತ್ ವಸತಿ ಸಮುಚ್ಛಯದ ಹಿಂಭಾಗದಲ್ಲಿ 40ಕ್ಕೂ ಹೆಚ್ಚು ಶೆಡ್ ಗಳು . ಚಂಡಮಾರುತದ ಸುದ್ದಿ ಕೇಳಿ ಪಶ್ಚಿಮ ಬಂಗಾಳದ ಮಾಂಡ್ಲಾ ತಲುಪುವ ಆಸೆ ಕೈ ಬಿಟ್ಟಿರುವ ಪೂರ್ಣಶೇಷ ಮಂಡಲ್ ಅಲ್ಲೇ ಇದ್ದಬದ್ದ ವ್ಯವಸ್ಥೆಯಲ್ಲೇ ತನ್ನ ಜೊತೆಗಿರುವ ಹೆಂಡತಿಗೊಂದು ಶೌಚಾಲಯ ಕಟ್ಟಿದ್ದಾನೆ .

ಮಂಗಳೂರಿನಿಂದ ಉತ್ತರಪ್ರದೇಶಕ್ಕೆ ಹೊರಡುವ ರೈಲು ಎರಡು ತಾಸು ಕಾಯಬೇಕಾಯಿತು . ಏಕೆಂದರೆ ಬೆಳ್ತಂಗಡಿ ಸಮೀಪದ ಉಜಿರೆಯಿಂದ ವಿನೋದ್ ಮಸ್ಕರೇನ್ಸ್ ಎಂಬ ಕೃಷಿಕ ತಮ್ಮ ಜೀಪಿನಲ್ಲಿ ಸುರೇಂದ್ರ ಯಾದವ್ , ಅಖಿಲೇಶ್ ಸಹಾನಿ , ಸುನೀಲ್ ಸಹಾನಿ , ಶಂಭು ಸಹಾನಿರವರನ್ನು ಕರೆತರುತ್ತಿದ್ದರು .

ಮಂಗಳೂರಿನಿಂದ ಜಾರ್ಖಂಡ್ ಗೆ ಹೊರಟಿದ್ದ ರೈಲು ಹತ್ತಿಸಲು ದೂರದ ಶಿರಸಿ , ಮುಂಡಗೋಡಿನಿಂದ ಮೂವರು ಕಾರ್ಮಿಕರನ್ನು ಪೋಲಿಸರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದರು .

ತಮಿಳುನಾಡಿನ ವೆಲ್ಲೂರಿನ ಹತ್ತಿರ ಉತ್ತರಪ್ರದೇಶಕ್ಕೆ ನೆಡೆದು ಹೋಗುತ್ತಿದ್ದ 7 ವಲಸೆ ಕಾರ್ಮಿಕರನ್ನು ರಸ್ತೆಯಲ್ಲಿ ಕಂಡ ಗಿರಿಧರ್ ಗೋಪಾಲ್ ಬೆಂಗಳೂರಿಗೆ ಕರೆತಂದು ಪ್ರಯಾಗರಾಜ್ ರೈಲು ಹತ್ತಿಸಿ ನಿಟ್ಟುಸಿರು ಬಿಟ್ಟರು .

ಹರಸಹಾಸದಿಂದ ಉತ್ತರಪ್ರದೇಶದ ತನ್ನ ಹಳ್ಳಿ ತಲುಪಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದ ತ್ರಿಭುವನ್ ಕಳುಹಿಸಿದ್ದ ಮನೆಯಂಗಳದ ಫೋಟೊವನ್ನು ಗೆಳೆಯರೊಬ್ಬರು ಫೇಸ್ ಬುಕ್ ನಲ್ಲಿ ಹಂಚಿದ್ದರು . ‘ ದಟ್ಟ ಹಸಿರಿನ ಪರಿಸರ ಬಿಟ್ಟು ಕಾಂಕ್ರೀಟ್ ಕಾಡಿಗೆ ದುಡಿಯಲು ಬರುವವರ ಸಂಕಟ ಏನಿದ್ದೀತು ? ‘ – ಇದು ಅಲ್ಲಿಯೆ ಕೆಳಗಿದ್ದ ಕಾಮೆಂಟು .

ಇವು ವಲಸೆ ಕಾರ್ಮಿಕರ ಪ್ರಪಂಚದ ಕಳೆದ ವಾರದ ಕೆಲ ಚಿತ್ರಗಳು .

* * * * *

ಅಜ್ಞಾತವಾಗಿ ಕಳೆದು ಹೋಗಿದ್ದ ವಲಸೆ ಕಾರ್ಮಿಕರ ಜಗತ್ತೊಂದು ಕರೋನಾ ಪೀಡೆಯಿಂದಾಗಿ ಬಯಲಿಗೆ ಬಂದಿದೆ . ಸಣ್ಣ ಸಂಬಳ ಕೊಟ್ಟು ಮತ್ಯಾವ ಸೌಲಭ್ಯವೂ ಕೊಡದೆ ಅವರನ್ನು ದುಡಿಸಿಕೊಳ್ಳುತ್ತಿದ್ದ ನಾಗರಿಕ ಸಮಾಜ ಕಟಕಟೆಯಲ್ಲಿ ನಿಂತಿದೆ . ನೈತಿಕ ಪ್ರಜ್ಞೆ , ಅಪರಾಧಿಭಾವ ಹಲವರನ್ನು ಕಾಡಿದೆ . ಸರ್ಕಾರಗಳ ನಿರಂತರ ನಿರ್ಲಕ್ಷ್ಯ , ದೊಡ್ಡ, ದೊಡ್ಡ ಸಿದ್ಧಾಂತಗಳ ಟೊಳ್ಳೂ ಬೀದಿಗೆ ಬಂದಿದೆ .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 50 ಸಾವಿರ ಜನಸಂಖ್ಯೆಯ ಪುಟ್ಟ ಪಟ್ಟಣ . ಬೃಹತ್‌ ನಗರ , ಮಹಾನಗರ , ಬೆಳೆಯುತ್ತಿರುವ ನಗರ ಇಂತಹ ಯಾವ ವಿಶೇಷಣಗಳೂ ಈ ತಣ್ಣನೆಯ ಪಟ್ಟಣಕ್ಕೆ ತಾಗುವುದಿಲ್ಲ . ಆಂತಹ ಪುತ್ತೂರಿನಿಂದ ಮೇ 12 ರಂದು ಬಿಹಾರದ ಮೋತಿಹಾರಿಗೆ 1428 ವಲಸೆ ಕಾರ್ಮಿಕರಿದ್ದ ಶ್ರಮಿಕ್ ವಿಶೇಷ ರೈಲು ಹೊರಟಿತು . ಇನ್ನೂ ಸಾವಿರದಷ್ಟು ಬಿಹಾರ , ಬಂಗಾಳ ಮೂಲದ ಕಾರ್ಮಿಕರು ರೈಲಿನಲ್ಲಿ ಜಾಗ ಸಿಗದೆ ಉಳಿದರು . ಅವರನ್ನು ಮಂಗಳೂರು , ಹಾಸನಕ್ಕೆ ಕರೆದೊಯ್ದು ರೈಲು ಹತ್ತಿಸಲಾಯಿತು . ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು . 8 – 10 ಸಾವಿರದಿಂದ ಇಪ್ಪತ್ತು ಸಾವಿರ ಮೀರಿದ ತಿಂಗಳ ದುಡಿಮೆಯವರೂ ಇದ್ದರು .
ದೊಡ್ಡ ನಗರಗಳು ಮಾತ್ರ ವಲಸೆ ಕಾರ್ಮಿಕರನ್ನು ಸಲಹುತ್ತವೆ ಎಂದು ನಂಬಿದ್ದವರಿಗೆ ಪುತ್ತೂರಿಂದ ರೈಲು ಹೊರಟಾಗಲೇ ಸಮಸ್ಯೆ ಯಾವ ಮೂಲೆಯವರಗೆ ಹರಡಿ ನಿಂತಿದೆ ಎಂದು ಗೊತ್ತಾದದ್ದು .

‌ಕರ್ನಾಟಕದಲ್ಲಿ ಬಿಹಾರ , ಉತ್ತರಪ್ರದೇಶದಿಂದ ವಲಸೆ ಬಂದ ಕಾರ್ಮಿಕರ ಸಂಖ್ಯೆ ಲಕ್ಷ ದಾಟಿದೆ . ಪಶ್ಚಿಮ ಬಂಗಾಳ , ಒರಿಸ್ಸಾ , ಜಾರ್ಖಂಡ್ ರಾಜ್ಯದವರದ್ದು 50 ಸಾವಿರ ಮೀರಿದೆ . ಲಾಕ್ ಡೌನ್ ಸ್ವಲ್ಪ ಸಡಿಲಗೊಳ್ಳುತ್ತಿದ್ದಂತೆಯೇ ವಲಸೆ ಕಾರ್ಮಿಕರು ವಾಪಸ್ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಕೊಳ್ಳಲು ಸರ್ಕಾರ ಸೇವಾಸಿಂಧು app ಬಿಡುಗಡೆ ಮಾಡಿತು . ಸೇವಾಸಿಂಧುವಿನಲ್ಲಿ ದಾಖಲಾದ ಅಂಕೆ – ಸಂಖ್ಯೆಗಳ ಆಧಾರದಲ್ಲೇ ಶ್ರಮಿಕ್ ರೈಲುಗಳು ನಿಯೋಜನೆ ಆಗುತ್ತಿದೆ .

ಬೆಂಗಳೂರಿನಲ್ಲಿ 3.14 ಲಕ್ಷ , ಬೆಂಗಳೂರಿನ ಸುತ್ತಮುತ್ತ 79 ಸಾವಿರ ಹೊರರಾಜ್ಯಗಳ ವಲಸೆ ಕಾರ್ಮಿಕರಿದ್ದಾರೆ .
ಮಂಗಳೂರು 40510 , ಬಳ್ಳಾರಿ14136 , ಬೆಳಗಾವಿ 15693 , ಹುಬ್ಬಳ್ಳಿ 9643, ಮೈಸೂರು12158 , ಉಡುಪಿ 10442 , ಹಾಸನ 8894 ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ಸಲಹುತ್ತಿದೆ .

ಕರ್ನಾಟಕದಲ್ಲಿ ಬಾಗಲಕೋಟೆ , ವಿಜಾಪುರ , ಕಲಬುರ್ಗಿ , ರಾಯಚೂರು , ಯಾದಗಿರಿ ಜಿಲ್ಲೆಗಳಿಂದ ಅತ್ಯಂತ ಹೆಚ್ಚು ಕಾರ್ಮಿಕರು ಮು‌ಂಬೈ , ಗೋವಾ , ಮಂಗಳೂರು , ಬೆಂಗಳೂರಿನತ್ತ ವಲಸೆ ಹೋಗುತ್ತಾರೆ . ಆದರೆ ಇದೇ ಜಿಲ್ಲೆಗಳಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಹೊರ ರಾಜ್ಯದ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ .

ಶ್ರಮಿಕ ರೈಲುಗಳು ಎಲ್ಲಿಂದ ಎಲ್ಲಿಗೆ ಹೊರಟವು ಎಂಬುದು ಈ ಅಂಕೆ- ಸಂಖ್ಯೆಗಳನ್ನು ಧೃಢ ಪಡಿಸುತ್ತವೆ . ಮಂಗಳೂರು 18 , ಹುಬ್ಬಳ್ಳಿ 9 , ಮೈಸೂರು 5 , ಬಳ್ಳಾರಿ 4 ,ಹಾಸನ 2, ಪುತ್ತೂರಿಂದ 1 ಶ್ರಮಿಕ್ ರೈಲು ಹೊರಟಿದೆ .ಬೆಂಗಳೂರಿನಿಂದಲೇ 220 ರೈಲುಗಳು ಹೊರಟಿವೆ .

ಕರ್ನಾಟಕದಿಂದ ಬಿಹಾರಕ್ಕೆ 62 , ಉತ್ತಪ್ರದೇಶಕ್ಕೆ 52 , ಜಾರ್ಖಂಡಕ್ಕೆ 25 ರೈಲುಗಳು ಹೊರಟಿವೆ . ಹಾಗೆ ನೋಡಿದರೆ ಊರು ಕಾಣುವುದು ದುಸ್ತರವಾಗಿರುವುದು ಪಶ್ಚಿಮ ಬಂಗಾಳ , ಒರಿಸ್ಸಾ ರಾಜ್ಯಗಳ ಕಾರ್ಮಿಕರಿಗೆ . ಪಶ್ಚಿಮ ಬಂಗಾಳದವರು 73 ಸಾವಿರ , ಒರಿಸ್ಸಾದವರು 40 ಸಾವಿರಕ್ಕೂ ಮಿಕ್ಕು ಕಾರ್ಮಿಕರಿದ್ದಾರೆ . ಬಂಗಾಳಕ್ಕೆ 7 , ಒರಿಸ್ಸಾಕ್ಕೆ 9 ರೈಲುಗಳಿಗಷ್ಟೆ ಚಾಲನೆ ಸಿಕ್ಕಿದೆ . ರೈಲುಗಳ ನಿಯೋಜನೆಯಲ್ಲಿ ಮೊದಲೇ ಹಿಂದಿದ್ದ ಈ ಎರಡು ರಾಜ್ಯಗಳಲ್ಲಿ ಚಂಡಮಾರುತದ ಹಾವಳಿಯಿಂದ ಶ್ರಮಿಕ್ ರೈಲಿನ ವ್ಯವಸ್ಥೆ ಕುಸಿದಿದೆ .

ಇಲ್ಲಿಂದ ಹೊದವರನ್ನು ಅಲ್ಲಿನ ರಾಜ್ಯ ಸರ್ಕಾರಗಳು ಸುಧಾರಿಸ ಬೇಕಿರುವುದರಿಂದ ಅವಸರದಲ್ಲಿ ಹೆಚ್ಚು ರೈಲುಗಳನ್ನು ಓಡಿಸಲೂ ಬರುವುದಿಲ್ಲ . ಹೀಗಾಗಿ ಶ್ರಮಿಕ್ ರೈಲುಗಳ ಸಂಚಾರ ಜೂನ್ ಕೊನೆವರೆಗೂ ಮುಂದುವರೆದೀತು . ಆನಂತರ ಮುಂದೇನು ಎಂಬುದು ದೊಡ್ಡ ಪ್ರಶ್ನೆಯಾಗಿ ಎಲ್ಲರ ಮುಂದಿದೆ .

ಹಾಗೆ ನೋಡಿದರೆ ಕಾರ್ಮಿಕ ಇಲಾಖೆ ಜಾಗತಿಕರಣದ ಹೊಡೆತದಲ್ಲಿ ಅಪ್ರಸ್ತುತವಾಗಿ ಹೋಗಿತ್ತು . ಈಗಲೂ ಕೇಂದ್ರದ್ದೋ , ರಾಜ್ಯದ್ದೋ ಕಾರ್ಮಿಕ ಸಚಿವರು ಯಾರು ಎಂದು ಥಟ್ಟನೆ ಕಣ್ಣ ಮುಂದೆ ಬಾರದಷ್ಟು ಇಲಾಖೆ ಮಸುಕಾಗಿದೆ . ವಲಸೆ ಕಾರ್ಮಿಕರನ್ನು ಈಗಲೂ ನಿಭಾಯಿಸುತ್ತಿರುವುದು ಪೋಲಿಸ್ ಇಲಾಖೆ ! ಲಕ್ಷಾಂತರ ಕಾರ್ಮಿಕರನ್ನು ನಿಭಾಯಿಸುವಷ್ಟು ಇಲಾಖೆಯನ್ನು ಎಲ್ಲ ಮುಖಗಳಲ್ಲಿ ಬಲಪಡಿಸಬೇಕು . ಗೃಹ , ರಕ್ಷಣೆ , ವಿದೇಶಾಂಗ , ವಿತ್ತ ಖಾತೆಗಳಿಗಿದ್ದಷ್ಟೇ ಮಹತ್ವ – ಹಣಕಾಸಿನ ನೆರವು ಕಾರ್ಮಿಕ ಖಾತೆಗೆ ಸಿಗಬೇಕು . ಡಾ ಬಾಬಾಸಾಹೇಬ್ ಅಂಬೇಡ್ಕರ್ 1937 ರಲ್ಲಿ ಕಾರ್ಮಿಕ ಸಚಿವರಾದಾಗ ‘ ಕಾರ್ಮಿಕ ಕಲ್ಯಾಣ ‘ ಖಾತೆ ಎಂದು ಬದಲಾಯಿಸಿದ್ದರು . ಅದು ಈಗಲೂ ನಮಗೆ ಮಾದರಿಯಾಗಬೇಕು .

ಉದ್ಯೋಗಾವಕಾಶಗಳಿಗಾಗಿ ವಲಸೆ ಅನಿವಾರ್ಯ , ನಿಜ . ಈಗ ವಲಸೆ ವಿದ್ಯಾಭ್ಯಾಸಕ್ಕೂ ಅಂಟಿಕೊಂಡಿದೆ . ಕರ್ನಾಟಕದತ್ತ ಬಿಹಾರ , ಬಂಗಾಳದವರು ಉದ್ಯೋಗ ಅರಸಿ ಬಂದರೆ ಈಶಾನ್ಯ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೇ ಬಂದು ಇಲ್ಲಿಯೇ ನೆಲೆ ಹುಡುಕಿಕೊಳ್ಳುತ್ತಿದ್ದಾರೆ . ಅನಿವಾರ್ಯವೆನಿಸಿದ್ದು ಮಿತಿ ಮೀರಿದರೆ ಅಪಾಯ ತೆರೆದುಕೊಳ್ಳುತ್ತದೆ . ಅನಿವಾರ್ಯತೆಯ ಮಿತಿಯನ್ನು ಗುರುತಿಸಲು , ಅರ್ಥಮಾಡಿಕೊಳ್ಳಲು ಈ ಸಂಕಟ ಅವಕಾಶವೂ ಆಗಬೇಕು .

ವಲಸಿಗರು ಎರಡು ರಾಜ್ಯಗಳ ಪ್ರಜೆಗಳು . ಹೀಗಾಗಿಯೇ ಅವರು ಎಲ್ಲಿಯೂ ಸಲ್ಲದೆ ಕಳೆದು ಹೋಗುತ್ತಿದ್ದಾರೆ . ದುಡಿಯುತ್ತಿರುವ ರಾಜ್ಯದ ಆಡಳಿತಕ್ಕೆ ಇವರು ಬೇಕಾಗಿಲ್ಲ , ಏಕೆಂದರೆ ಇವರು ಇಲ್ಲಿ ಮತದಾರರಲ್ಲ , ಹೊರಟು ಬಂದ ರಾಜ್ಯದ ಆಡಳಿತಕ್ಕೆ ಇವರು ಕಣ್ಣೆದುರಿಲ್ಲ .

ತಂತ್ರಜ್ಞಾನ , ಕೌಶಲಗಳು ಮೈಮುರಿದು , ಬೆವರು ಸುರಿಸಿ ದುಡಿಯುವವರ ಬದುಕನ್ನು ಸಹ್ಯವಾಗಿಸಬೇಕು . ಆ ದಿಕ್ಕಿನಲ್ಲಿ ಸಂಶೋಧನೆಗಳು ದೊಡ್ಡ ಹೆಜ್ಜೆ ಇಡಬೇಕು .

ನಮ್ಮೆದುರು ಕೇಂದ್ರ , ರಾಜ್ಯ ಎಂಬ ಎರಡೇ ಸರ್ಕಾರಗಳಿವೆ . ಪಂಚಾಯತ್ ರಾಜ್ಯದ ಮೂರನೇ ಸರಕಾರ ಪ್ರಬಲಗೊಳ್ಳಬೇಕು . 8 – 10 ಗ್ರಾಮ ಸಮುಚ್ಛಯಗಳು ಕೃಷಿ , ಗ್ರಾಮೀಣ ಉದ್ಯೋಗ , ಆರ್ಥಿಕತೆ , ಸಾಮಾಜಿಕ ನ್ಯಾಯದ ವಿಷಯದಲ್ಲಿ ನಿಜಾರ್ಥದಲ್ಲಿ ಸ್ವಾವಲಂಬನೆ ಸಾಧಿಸಬೇಕು .

ಈಗ ದಿಲ್ಲಿ , ಬೆಂಗಳೂರು , ಕೊಲ್ಕತ್ತಾ , ಪಾಟ್ನಾಗಳು ಇಂಜಿನ್ ಗಳಾಗಿವೆ . ಕಾರ್ಮಿಕರು , ಗ್ರಾಮೀಣರು ಬೋಗಿಗಳಾಗಿ ಅವರು ಎಳೆದೊಯ್ದಲ್ಲಿ ಹೋಗುವಂತಾಗಿದೆ . ಇದು ಬದಲಾಗಬೇಕು . ಕಾರ್ಮಿಕರು , ಗ್ರಾಮೀಣರು ಇಂಜಿನ್ ಆಗಬೇಕು . ಅದೇ ನಿಜವಾದ ಲೋಕಲ್ಲು . ಅದೇ ನಿಜವಾದ
ಶ್ರಮಿಕ್ ರೈಲು !

ವಾದಿರಾಜ್ , ಬೆಂಗಳೂರು ,
ಸಾಮಾಜಿಕ ಕಾರ್ಯಕರ್ತ .

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ವೆಬಸೈಟ್ ಲೋಕಾರ್ಪಣೆ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ - ಜೂನ್ ೫

Sat May 30 , 2020
ಬೆಂಗಳೂರು, ೩೦ ಮೇ ೨೦೨೦: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಹಾಗೂ ಶ್ರೀ ಜ್ಞಾನಾಕ್ಷಿ ಪ್ರಕಾಶನ ಗ್ರಂಥ ಬಿಡುಗಡೆ ಹಾಗೂ ವೆಬಸೈಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಜೂನ್ ೫ ರಂದು ಫೇಸ್ಬುಕ್ ಲೈವ್ ಮೂಲಕ ಆಯೋಜಿಸಿದ್ದಾರೆ. ಡಾ. ಎಸ್ ಆರ್ ಲೀಲಾ ರಚಿಸಿರುವ ‘ಆಪರೇಷನ್ ರೆಡ್ ಲೋಟಸ್ ಮತ್ತು ಇತರೆ ಬರಹಗಳು’ , ‘ಜೀವಂತ ದುರ್ಗಾಪೂಜೆ’,’ ನಡುಗುಡಿಯ ಪೂಜಾರಿಗಳು ಇತ್ಯಾದಿ ಹಾಗು ಎರಡು ತೆರನಾದ ಭಾರತೀಯರು’ ಎಂಬ ಪುಸ್ತಕಗಳು ಹಾಗೂ […]