“ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ.)

ಕನ್ನಡದ ಭಾವಗೀತೆಗಳಲ್ಲಿ, ಜಾನಪದ ಗೀತೆಗಳಲ್ಲಿ ನಿಮಗೆ ಇಷ್ಟವಾಗುವ ಹಾಗೂ ಕನ್ನಡತನವನ್ನು ಹೆಚ್ಚಿಸುವ ಗೀತೆ ಯಾವುವು ಎಂಬವು ಪ್ರಶ್ನೆಗಳಾಗಿದ್ದವು. ನಮಗೆಲ್ಲರಿಗೂ ತಿಳಿದಂತೆ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತದ ಪ್ರಾಕಾರದಂತೆ ಭಾವಗೀತೆಯ ಪ್ರಾಕಾರ ನಮ್ಮಲ್ಲಿವೆ. ಅವುಗಳನ್ನು ಇಷ್ಟ ಪಡುವ, ಅವುಗಳನ್ನೇ ಹೆಚ್ಚಾಗಿ ಕೇಳುವ ವರ್ಗ ನಮ್ಮಲ್ಲಿದೆ. ಬೇರೆಯ ಭಾಷೆಗಳಲ್ಲಿ ಬಹುಶಃ ಇಷ್ಟು ಮಟ್ಟದ ಅಭಿಮಾನವಿಲ್ಲದ ಆದರೆ ನಮ್ಮಲ್ಲಿ ಅವುಗಳನ್ನು ಅತಿಯಾಗಿ ಪ್ರೀತಿಸುವ ಭಾವ ಜೀವಿಗಳನ್ನು ಗಮನಿಸಿರುತ್ತೇವೆ. ಸಂಗೀತ ಸ್ಪರ್ಧೆಯೊಂದು ನಡೆದರೆ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ಭಾವಗೀತೆಯ, ಜಾನಪದ ಗೀತೆಯ ಗಾಯನವೂ ಇದ್ದೇ ಇರುತ್ತದೆ. ಎಫ್ ಎಂ ಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವುದರ ಜೊತೆ ಭಾವಗೀತೆಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುತ್ತದೆ. ಹೀಗೆ ಹೇಳುವಾಗ ಜಾನಪದ ಹಾಡುಗಳನ್ನು ಮರೆಯುವಂತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಈ ಜಾನಪದ ಗೀತೆಗಳಲ್ಲಿ ದೇವರ ಆರಾಧನೆ, ಪ್ರಕೃತಿಯ ಆರಾಧನೆ, ಹೆಣ್ಣು ಮಗಳೊಬ್ಬಳ ಬಯಕೆ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಜೀವನದ ಪಾಠ ಕಲಿಸುವ ಸಾಲುಗಳೇ ಹೆಚ್ಚು. ಭಾರತೀಯತೆಯ ತತ್ತ್ವವನ್ನು ಸಾರುವ, ಶ್ರೇಷ್ಠ ನೀತಿಯನ್ನು ಎತ್ತಿಹಿಡಿಯುವ ಈ ಜಾನಪದ ಸಾಹಿತ್ಯದಿಂದ ಕಲಿಯಲಿಕ್ಕೆ, ಜೀವನದಲ್ಲಿ ಅಳವಡಿಸಲಿಕ್ಕೆ ಸಾಕಷ್ಟು ಅವಕಾಶಗಳಿವೆ.

ನಮ್ಮ ಪಟ್ಟಿಯಲ್ಲಿ ಇದ್ದ ೧೦ ಭಾವಗೀತೆಗಳು ಒಂದಕ್ಕಿಂತಲೂ ಮತ್ತೊಂದು ಮಿಗಿಲಾದ ಹಾಡುಗಳೇ. ಈ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ, ಗಾಯನದ ಮೂಲಕ ಪ್ರಸ್ತುತ ಪಡಿಸಿ, ಪ್ರಸಿದ್ಧಿಗೊಂಡ ಹಾಡುಗಳು ಭಾವಗೀತೆಗಳೋ ಜಾನಪದವೋ ಎನ್ನುವಷ್ಟು ಪ್ರಸಿದ್ಧಿ ಹೊಂದಿವೆ. ಕವಿಗಳು ರಚಿಸಿರುವ ಹಾಡುಗಳಿಗೆ ಮೈಸೂರು ಅನಂತಸ್ವಾಮಿ, ಸಿ ಅಶ್ವತ್ಥ, ಸೇರಿದಂತೆ ಹಲವು ಅತ್ಯುನ್ನತ ರಾಜ ಸಂಯೋಜಕರು ನಿಜಾರ್ಥದಲ್ಲಿ ಭಾವ ತುಂಬಿದ್ದಾರೆ. ಹೀಗೆ ಇರುವ ಹಾಡುಗಳು ಸಾವಿರಾರು ದಾಟಬಹುದು. ಹಿಂದೊಮ್ಮೆ ಸಿ ಅಶ್ವತ್ಥ ಅವರು ಸಾವಿರಾರು ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕುವೆಂಪು ಅವರ ಭಾವಗೀತೆಗಳ ಸಂಗೀತ ಕಚೇರಿಯನ್ನು ಪ್ರಸ್ತುತ ಪಡಿಸಿದ್ದರು. ಭಾವಗೀತೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗೆ ಜನರು ಸಿನಿಮಾ ಹಾಡುಗಳನ್ನು ಕೇಳಲು ಮುಗಿಬೀಳುವುದಕ್ಕಿಂತಲೂ ಹೆಚ್ಚು ಸೇರುತ್ತಿದ್ದ ಕಾಲವೊಂದಿತ್ತು.

ಆಯ್ಕೆಗಳಲ್ಲಿ ಹೆಚ್ಚು ಮತ ಪಡೆದ ಭಾವಗೀತೆ – “ಜೋಗದ ಸಿರಿ ಬೆಳಕಿನಲ್ಲಿ…” ಕವಿ ನಿಸಾರ್ ಅಹಮದ್ ಅವರ ಲೇಖನಿಯಿಂದ ಹೊರಹೊಮ್ಮಿರುವ ಈ ಗೀತೆ ಕರ್ನಾಟಕದ ನಾಡಗೀತೆಯಷ್ಟೇ ಪ್ರಸಿದ್ಧ. ಜೋಗದ ವೈಭವವನ್ನು ಸಾರುವ ಈ ಕವಿತೆಯನ್ನು ನಿತ್ಯೋತ್ಸವ ಎಂದು ಕವಿಗಳು ಕರೆದಿದ್ದಾರೆ. ಜೋಗದ ವೈಭವವೇ, ಪರಿಸರ ಆರಾಧನೆಯನ್ನೇ ನಿತ್ಯ ಉತ್ಸವ ಎಂದು ಬರೆಯುವ ಕವಿಗಳು ಮುಸ್ಲಿಮರಾದರೂ ಅವರನ್ನು ‘ಕನ್ನಡಿಗರು, ಶ್ರೇಷ್ಠ ಕವಿಗಳಲ್ಲಿ ಒಬ್ಬರು’ ಎಂದಷ್ಟೇ ಹೆಮ್ಮೆಯಿಂದ ನೋಡಿದ ಜನರು ನಾವು.
ಎರಡನೆಯ ಸ್ಥಾನದಲ್ಲಿದ್ದ ಗೀತೆ ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ದೀಪವು ನಿನ್ನದೇ, ಗಾಳಿಯು ನಿನ್ನದೇ. ಜೀವನದಲ್ಲಿ ಸರ್ವಶಕ್ತನಾದ ಭಗವಂತನಿಗಿರುವ ಶಕ್ತಿಯಲ್ಲಿ ನಂಬಿಕೆಯಿಡುತ್ತಾ, ಜೀವನ ಹಳಿ ತಪ್ಪದಿರಲಿ ಎಂಬ ಸಾರ ಈ ಕವನದ್ದು. ಇನ್ನು ಅಷ್ಟೇ ಶ್ರೇಷ್ಠವೆನಿಸುವ “ಯಾವ ಮೋಹನ ಮುರಳಿ ಕರೆಯಿತು…” ಕವಿ ಎಂ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಜೀವನದಲ್ಲಿ ಇರುವ ಸುಖಗಳನ್ನು ಬಿಟ್ಟು ಮತ್ತೆಲ್ಲಿಯದೋ ಸುಖಕ್ಕಾಗಿ ಹಂಬಲಿಸುವುದನ್ನು ಕುರಿತು ಗೀತೆ ರಚನೆಯಾಗಿದೆ. ಅಧ್ಯಾತ್ಮದ ಸಾರವನ್ನು ಸಾರುವ ಈ ಕವನದಲ್ಲಿ ಬರುವ ಸಾಲುಗಳಲ್ಲಿ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ನಿಜಾರ್ಥದಲ್ಲಿ ಮನುಷ್ಯನ ಸಹಜ ವರ್ತನೆಯನ್ನು ಬಿಂಬಿಸಿದ್ದಾರೆ.

ನಮ್ಮ ಪಟ್ಟಿಯಲ್ಲಿ ಇದ್ದ ಆಯ್ಕೆಗಳೆಲ್ಲವೂ ಹಳೆಯ ಭಾವಗೀತೆಗಳೇ. ಇಂದು ಭಾವಗೀತೆಗಳು, ಕವನಗಳು ರಚಿತವಾಗುತ್ತಿವೆಯಾದರೂ, ಅವುಗಳು ಜನರನ್ನು ಸೆಳೆಯುತ್ತಿರುವುದು ಕಡಿಮೆಯೇ ಎಂದನಿಸದಿರದು. ಇಂದಿನ ಕಾಲ ಘಟ್ಟಕ್ಕೆ ಹಳೆಯ ಹಾಡುಗಳ ಜೊತೆಗೆ ಇಂದಿನ ಕಾಲಕ್ಕೆ ಸರಿಹೊಂದುವ ಅರ್ಥಪೂರ್ಣ ಅಧ್ಯಾತ್ಮ, ಭಾವನೆಗಳ ಮಿಶ್ರಿಸಿದ ಕವನಗಳು, ಅದಕ್ಕೆ ಸರಿಯಾದ ರಾಗ ಸಂಯೋಜನೆ, ಗಾಯನ ರೂಪದಲ್ಲಿ ಮೂಡಿಬಂದರೆ ಈ ಗೀತೆಗಳು ಹೊಸ ತಲೆಮಾರಿಗೆ ಒಳ್ಳೆಯ ಸಂದೇಶ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಷ್ಟು ಭಾವಗೀತೆಗಳನ್ನು ಕೇಳುವಂತಾಗಲಿ, ಹೆಚ್ಚು ಕವಿಗಳು, ರಾಗ ಸಂಯೋಜಕರು, ಗಾಯಕರು ಪರಿಚಯವಾಗುವುದರಿಂದ ಕನ್ನಡಕ್ಕೆ, ಹಾಗೂ ಕರ್ನಾಟಕಕ್ಕೇ, ಹಾಗೂ ಸಾಹಿತ್ಯ-ಸಂಗೀತ ಲೋಕಕ್ಕೆ ಉತ್ತಮ ಕೊಡುಗೆಯಾದೀತು.

ಇನ್ನು ಜಾನಪದ ಹಾಡುಗಳಾದ ಚೆಲ್ಲಿದರು ಮಲ್ಲಿಗೆಯಾ, ಮಾಯದಂಥ ಮಳೆ ಬಂತಣ್ಣಾ, ಭಾಗ್ಯದ ಬಳೆಗಾರ ಕ್ರಮವಾಗಿ ಜನರ ಮತಗಳನ್ನು ಹೆಚ್ಚಾಗಿ ಪಡೆದ ಮೂರು ಗೀತೆಗಳು.

ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

"ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು" ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Tue Dec 1 , 2020
ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ಕರ್ನಾಟಕದ ನಿಮ್ಮ ನೆಚ್ಚಿನ ಪ್ರವಾಸಿ ತಾಣ ಯಾವುದು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ.) ಕರ್ನಾಟಕದಲ್ಲಿನ ನಯನ ಮನೋಹರ ಪ್ರವಾಸಿ ತಾಣಗಳಲ್ಲಿ ನಿಮ್ಮ ಮತ ಯಾವುದಕ್ಕೆ ಎಂಬ ಪ್ರಶ್ನೆಗೆ ಮೈಸೂರು ಅರಮನೆ, ಹಂಪಿ, ಹಾಗೂ ಜೋಗ ಜಲಪಾತ ಮೊದಲ ಮೂರು […]