ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ

ಕೊರೊನಾ ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಅನುಭವ

ಬೆಂಗಳೂರು 9 ಮೇ 2020:

ಆದ್ಯಪತ್ರಕರ್ತ ಮಹರ್ಷಿ ನಾರದ ಜಯಂತಿಯ ಅಂಗವಾಗಿ “ಕೊರೊನಾ (ಕೊವಿಡ್‌-19) ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ” ಎನ್ನುವ ವಿಷಯದ ಬಗ್ಗೆ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಆನ್‌ಲೈನ್‌ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಈ ಗೋಷ್ಠಿಯಲ್ಲಿ ಸುವರ್ಣ ನ್ಯೂಸ್‌ ಸುದ್ದಿ ಮತ್ತು ಕಾರ್ಯಕ್ರಮಗಳ ಮುಖ್ಯಸ್ಥ ಶ್ರೀ ಅಜಿತ್‌ ಹನಮಕ್ಕನವರ್‌, ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ಹರಿಪ್ರಕಾಶ್‌ ಕೋಣೆಮನೆ, ಮೈಸೂರು ಮೂಲದ “ಸಾಧ್ವಿ” ಸಂಜೆ ದಿನಪತ್ರಿಕೆಯ ಸಂಪಾದಕ ಶ್ರೀ ಸಿ ಮಹೇಶ್ವರನ್‌. ಇಂಗ್ಲೀಷ್‌ ದಿನಪತ್ರಿಕೆ ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಬೆಂಗಳೂರು ಬ್ಯುರೋ ಮುಖ್ಯಸ್ಥರಾದ ಶ್ರೀ ರಾಮು ಪಾಟೀಲ್‌ ಪಾಲ್ಗೊಂಡು ವಿಚಾರಗಳನ್ನು ಮಂಡಿಸಿದರು. ವಿಜಯವಾಣಿ ದಿನಪತ್ರಿಕೆ ಉಪ ಮುಖ್ಯ ವರಿದಿಗಾರ ಶ್ರೀ ರಮೇಶ್‌ ದೊಡ್ಡಪುರ ಚರ್ಚೆಯನ್ನು ನಿರ್ವಹಿಸಿದರು.

“ಕೊರೊನಾ ಸಂದರ್ಭದಲ್ಲಿ ಮಾಧ್ಯಮದವರು ಕಲಿತಿರುವ ಪಾಠ ಒಂದು ಐತಿಹಾಸಿಕವಾದ ಅನುಭವವನ್ನು ನೀಡಿದೆ. ಹಿಂದೆಲ್ಲ ಯುದ್ಧ ಕಾಲದಲ್ಲಿ ಪತ್ರಕರ್ತರು ವರದಿ ಮಾಡುತ್ತಿದ್ದರು ಆದರೆ ಪ್ರತ್ಯಕ್ಷ ಭಾಗವಹಿಸುವುದ ಕಡಿಮೆ ಇತ್ತು. ನಾವು ಪ್ರತ್ಯಕ್ಷ ಮುಂದೆ ನಿಂತು ಒಗ್ಗಟ್ಟಿನಿಂದ ಕೆಲಸ ಮಾಡುವುದು ಹೇಗೆ ಎನ್ನುವುದನ್ನು ಈ ಸಂದರ್ಭ ಕಲಿಸಿದೆ.” ಎಂದು ವಿಜಯಕರ್ನಾಟಕದ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.

“ದೈನಂದಿನ ವರದಿಗಳನ್ನು ಬಿಟ್ಟು ಕೊರೊನಾದ ವರದಿಯನ್ನೇ ಮಾಡಿ ಜನರನ್ನು ಮಾಧ್ಯಮಗಳು ಜನರನ್ನು ಹಿಡಿದಿಟ್ಟಿಕೊಂಡಿವೆ ಅಂದರೆ ನಮ್ಮ ಕೆಲಸದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಬಹುದು.” ಮಹಾರಾಷ್ಟ್ರ, ದೆಹಲಿ ಮೊದಲೆಡೆ ಪತ್ರಿಕೆ ವಿತರಣೆ ನಿಂತುಹೋಗಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೇಗೆ ದಿನಪತ್ರಿಕೆಗಳ ಮುದ್ರಣ ಮತ್ತು ವಿತರಣೆ ಒಂದೇ ದಿನವೂ ತಪ್ಪದಂತೆ ನಡೆಸಿದ ಕುರಿತು ವಿಚಾರವನ್ನು ಹಂಚಿಕೊಂಡರು. “ಇದು ಪತ್ರಿಕೆಗಳಿಗೆ ಅಗ್ನಿಪರೀಕ್ಷೆಯ ಕಾಲ, ಈ ಕಾಲದಲ್ಲಿ ಸಮಾಜದಲ್ಲಿ ವಿಶ್ವಾಸವನ್ನು ತುಂಬುವ ಕೆಲಸವನ್ನು ಮತ್ತು ಸರ್ಕಾರ ಮತ್ತು ಸಮಾಜವನ್ನು ಬೆಸೆಯುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ” ಎಂದು ಹರಿಪ್ರಕಾಶ ಕೋಣೆಮನೆ ಹೇಳಿದರು.

ಕೊರೋನಾ ಸಂದರ್ಭದಲ್ಲಿ ಟಿವಿ ಮೀಡಿಯಾದ ವರಿಗಾರರು, ಕ್ಯಾಮೆರಾಮೆನ್‌ಗಳು ಸ್ಥಳಗಳಿಗೆ ಪ್ರತ್ಯಕ್ಷ ಹೋಗಿ ವರದಿ ಮಾಡುವಾಗ ಆದ ಅನುಭವಗಳನ್ನು ಮತ್ತು ಸವಾಲುಗಳನ್ನು ಅಜಿತ್‌ ಹನಮಕ್ಕನವರ್‌ ಹಂಚಿಕೊಂಡರು. ‘ಕೊರೊನಾ ಅನುಭವದ ನಂತರ ಮುಂದಿನ ದಿನಗಳಲ್ಲಿಯೂ ಮಾಧ್ಯಮ ಕಡಿಮೆ ಸಿಬ್ಬಂದಿಯೊಂದಿಗೆ ವರ್ಕ್‌ ಫ್ರಮ್ ಹೋಮ್‌ಗೆ ಬದಲಾಗುವಂತರ ಪರಿಸ್ಥಿತಿ ಬರಬಹುದು ಎಂದು” ಅಜಿತ್‌ ಹನಮಕ್ಕನವರ ಹೇಳಿದರು.

ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಬ್ಯುರೋ ಮುಖ್ಯಸ್ಥರಾದ ರಾಮು ಪಾಟಿಲ್‌ ಮಾತನಾಡುತ್ತ “ಕೊರೊನಾ ಕಾರಣದಿಂದ ಸರ್ಕಾರ ಲಾಕ್‌ಡೌನ್‌ ಜಾರಿಮಾಡಬೇಕಾದ ಸಂದರ್ಭ ಬಂದಾಗ ಜನರಿಗೆ ವಾಸ್ತವ ಸಂಗತಿಗಳನ್ನು ತಲುಪಿಸಿ ಸಮಾಜದಲ್ಲಿ ಗಾಬರಿ ಆಗದ ಹಾಗೆ, ಎಲ್ಲರೂ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ದ ಮಾಡಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದವು, ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬುವ ಸುಳ್ಳು ಸುದ್ದಿಗಳ ಸವಾಲು ಎದುರಿಸುವಲ್ಲಿಯೂ ಮಾಧ್ಯಗಳ ಪಾತ್ರ ಹಿರಿದು” ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ಪತ್ರಿಕೆಗಳು ಈ ಸಂದರ್ಭದಲ್ಲಿ ನಿರ್ವಹಿಸಿದ ಪಾತ್ರ ಮತ್ತು ಎದುರಿಸಿದ ಸವಾಲುಗಳನ್ನು ಮೈಸೂರು ಮೂಲದ “ಸಾಧ್ವಿ” ಪತ್ರಿಕೆಯ ಸಂಪಾದಕ ಮಹೇಶ್ವರನ್‌ ಹಂಚಿಕೊಂಡರು. “ಈ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಕೆಲಸವನ್ನು ಮಾಡಿವೆ. ದೇಶವನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯವನ್ನು ಮಾಡಬೇಕು ಎನ್ನುವ ಭಾವನೆ ಎಲ್ಲರಲ್ಲಿ ಬೆಳೆಸಲು ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿದವು” ಎಂದು ಅವರು ಅನಿಸಿಕೆ ವ್ಯಕ್ತ ಪಡಿಸಿದರು.

ಒಟ್ಟಾರೆಯಾಗಿ ಕೊವಿಡ್‌-19ರ ಕಾರಣದಿಂದ ದೇಶ ಎದುರಿಸುತ್ತಿರುವ ಸನ್ನಿವೇಶದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆಯು ಹೆಚ್ಚಿದೆ ಎನ್ನುವುದು ಮಾತನಾಡಿದ ಹಿರಿಯ ಪತ್ರಕರ್ತರ ಅನುಭವವಾಗಿದೆ ಹಾಗೆಯೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸರೀತಿಯ ಅಭಿವ್ಯಕ್ತಿ ಕೊಟ್ಟ ಸಾಮಾಜಿಕ ಜಾಲ ಮಾಧ್ಯಮಗಳ ನಡುವೆ ಈ ವಿಶ್ವಾಸಾರ್ಹತೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮಾಧ್ಯಮಗಳ ಮೇಲೆ ಇದೆ ಎನ್ನುವ ಅನಿಸಿಕೆಯೂ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

ವೈಶಾಖ ಕೃಷ್ಣ ಪಕ್ಷ ದಿವಸ ಪರಬ್ರಹ್ಮನ ಮಾನಸ ಪುತ್ರ ಮಹರ್ಷಿ ನಾರದರು ಜನಿಸಿದರು ಎಂದು ಹೇಳಲಾಗುತ್ತದೆ. ತ್ರಿಲೋಕ ಸಂಚಾರಿಯಾದ ನಾರದ ಮಹರ್ಷಿಗಳು ಆದ್ಯಪತ್ರಕರ್ತ ಎಂದೇ ಗೌರವಿಸಲಾಗುತ್ತದೆ.

ವರದಿ: ಸತ್ಯನಾರಾಯಣ ಶಾನುಭಾಗ್