ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ : ಹರಿಪ್ರಕಾಶ ಕೋಣೆಮನೆ

ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ

ಲೇಖನ : ಹರಿಪ್ರಕಾಶ ಕೋಣೆಮನೆ, ಸಂಪಾದಕರು, ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆ.

ಕೃಪೆ: ಲೇಖಕರು ಹಾಗೂ ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆ.

ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಅಶೋಕ ಗಸ್ತಿ, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಕರ್ನಾಟಕ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಾಯಬಣ್ಣ ತಳವಾರ್‌ ಹಾಗೂ ಬುಡಕಟ್ಟು ಸಮದಾಯದ ಶಾಂತಾರಾಮ್‌ ಸಿದ್ದಿ ಅವರ ಆಯ್ಕೆ ವಿಚಾರದಲ್ಲಿ ಒಂದು ರೀತಿಯ ಸದಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಶಾಸನ ಸಭೆಗಳಲ್ಲಿ , ಅಧಿಕಾರದ ಆಯಕಟ್ಟಿನ ತಾಣಗಳಲ್ಲಿ ಸರ್ವರಿಗೂ ಪ್ರಾತಿನಿಧ್ಯ ಇರಬೇಕೆಂದು ನಂಬಿಕೆ ಹೊಂದಿರುವ ಪ್ರತಿಯೊಬ್ಬರಿಗೂ ಇಂಥಾ ರಾಜಕೀಯ ನಡೆಗಳು ನಿಜಕ್ಕೂ ಖುಷಿ ನೀಡುತ್ತವೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಬೆಳಗಾವಿಯ ಈರಣ್ಣ ಕಡಾಡಿ ವೃತ್ತಿಯಲ್ಲಿ ವಕೀಲ. ಪ್ರವೃತ್ತಿಯಲ್ಲಿ ರಾಜಕಾರಣಿ. ಸವಿತಾ ಸಮಾಜದ ಅಶೋಕ ಗಸ್ತಿ ಅನೇಕ ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಎಂದು ವರದಿಯಾಗಿದೆ. ಈಗ ಪರಿಷತ್ತಿಗೆ ನಾಮಕರಣಗೊಂಡಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್‌ ಆಗಿರುವ ಸಾಯಬಣ್ಣ ತಳವಾರ್‌ ಅವರು ಹಿಂದುಳಿದ ಕೋಳಿ ಸಮಾಜಕ್ಕೆ ಸೇರಿದವರು.
ಒಬ್ಬ ಸಾಮಾನ್ಯ ರಾಜಕೀಯ ಕಾರ್ಯಕರ್ತ, ಮತ್ತೊಬ್ಬ ವಕೀಲ, ಮಗದೊಬ್ಬ ಪ್ರೊಫೆಸರ್‌-ಹೀಗೆ ಎಲ್ಲ ಸ್ತರದವರು ಅತ್ಯಂತ ಸುಲಭವಾಗಿ ಶಾಸನ ಸಭೆ ಪ್ರವೇಶಿಸುವುದು ಪ್ರಜಾಪ್ರಭುತ್ವದ ಬಹುದೊಡ್ಡ ಸೊಬಗು. ಸಮ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಈ ಹೆಜ್ಜೆಗಳು ಕೂಡ ಮಹತ್ತರವಾದವೆ.
ಈ ಎಲ್ಲದಕ್ಕಿಂತ, ಶಾಂತಾರಾಮ್‌ ಸಿದ್ದಿ ಅವರು ಮೇಲ್ಮನೆಗೆ ನಾಮನಿರ್ದೇಶನಗೊಂಡಿರುವುದು, ನಾನು ಮೇಲೆ ಹೇಳಿದ ಎಲ್ಲ ರಾಜಕೀಯ-ಸಾಮಾಜಿಕ ಮೌಲ್ಯಗಳಿಗೆ ತಿಲಕವಿಟ್ಟಂತೆ ಗಮನ ಸೆಳೆಯುತ್ತಿದೆ. ಬುಡಕಟ್ಟು ಜನರು ವಾಸಿಸುವ ದುರ್ಗಮ ಅರಣ್ಯದಿಂದ ಸದ್ಯ ಅವರು ತಲುಪಿರುವ ಪರಿಷತ್‌ ಎಂಬ ಅಧಿಕಾರದ ಅಂಗಳದವರೆಗಿನ ಅವರ ಪಯಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ಎಂಬ ಪರಿವಾರ ಸಂಘಟನೆಯ ಹೆಜ್ಜೆಗಳೂ ಇವೆ. ಇದೆಲ್ಲವನ್ನೂ ನಾವು ಅವಲೋಕಿಸಿದರೆ, ಅಲ್ಲಿ ನಾವೆಲ್ಲರೂ ಕಲಿಯಬೇಕಾದ ಸಾರ್ವಜನಿಕ ಬದುಕಿನ ರೀತಿ ನೀತಿಗಳಿವೆ. ವಿಶೇಷವಾಗಿ ತಳಸಮುದಾಯಗಳಿಗೆ ಸೇರಿದ ಹತ್ತಾರು ಜಾತಿ ಸಮುದಾಯಗಳು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ.


Sri Shantharam Siddi
Sri Prakash Kamath

ನನ್ನೂರು ಉತ್ತರ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ಫಲವತ್ತಾದ ಪ್ರದೇಶ. ವೈವಿಧ್ಯಮಯವಾದ ಬುಡಕಟ್ಟು ಸಮುದಾಯಗಳ ತವರು. ಕುಮಟಾ, ಅಂಕೋಲ ಭಾಗದಲ್ಲಿ ಹಾಲಕ್ಕಿ ಒಕ್ಕಲಿಗರು, ಮುಂಡಗೋಡ, ಹಳಿಯಾಳ, ದಾಂಡೇಲಿ ಭಾಗದ ಅರಣ್ಯದ ಅಂಚಿನಲ್ಲಿ ಗೌಳಿಗರು, ಯಲ್ಲಾಪುರ, ದಾಂಡೇಲಿ, ಹಳಿಯಾಳ ಭಾಗದಲ್ಲಿ ಕುಣಬಿ ಮತ್ತು ಸಿದ್ದಿ ಬುಡಕಟ್ಟಿನ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ಆ ಪೈಕಿ ಸಿದ್ದಿ ಸಮುದಾಯದ ಒಟ್ಟು ಜನಸಂಖ್ಯೆ ಅಬ್ಬಬ್ಬಾ ಎಂದರೆ 25 ಸಾವಿರ ಇರಬಹುದು. ಮಹಾರಾಷ್ಟ್ರದ ಜತೆ ನಂಟಿರುವ ಗೌಳಿಗರ ಆಡುಭಾಷೆ ಮರಾಠಿ. ಈ ಕುಣಬಿ ಮತ್ತು ಸಿದ್ದಿ ಬುಡಕಟ್ಟು ಜನರು ಕೊಂಕಣಿ ಮಾತನಾಡುತ್ತಾರೆ. ಜೊತೆಯಲ್ಲಿ ಕನ್ನಡ ಅವರ ಪಾಲಿಗೆ ವ್ಯಾವಹಾರಿಕ ಭಾಷೆ. ಗೌಳಿಗರಿಗೆ ಪಶುಪಾಲನೆಯೇ ಜೀವನಾಧಾರವಾದರೆ, ಮರಮಟ್ಟು ಸಂಗ್ರಹಿಸುವುದು, ಕಾಡಲ್ಲಿ ಜೇನು ಕೊಯ್ಯುವುದು ಸಿದ್ದಿ ಜನಾಂಗದ ಕುಲಕಸುಬು. ಕಾಲಾನುಕ್ರಮದಲ್ಲಿ ಜೀವನೋಪಾಯಕ್ಕಾಗಿ ಕೃಷಿ ಕೂಲಿ ಕೆಲಸವನ್ನೂ ಒಗ್ಗಿಸಿಕೊಂಡಿದ್ದಾರೆ. ಕಾಡೊಳಗೆ ಇಲ್ಲವೇ ಕಾಡಂಚಿನಲ್ಲೇ ಸಿದ್ಧಿಗಳ ವಾಸ. ಮುಖ್ಯವಾಗಿ ಒಂದು ಕಾಲಕ್ಕೆ ಈ ಕುಣಬಿ, ಗೌಳಿ, ಸಿದ್ದಿ ಸಮುದಾಯದ ಜನ ವಸತಿಗಳಲ್ಲಿ ಪಕ್ಕಾ ಮನೆಗಳೂ ಇರಲಿಲ್ಲ. ಬದುಕು ಕಟ್ಟಿಕೊಳ್ಳುವಷ್ಟು ಸ್ವಂತದ ಜಮೀನು ಅವರಿಗೆ ಇರಲಿಲ್ಲ. ಹಾಗೆ ನೋಡಿದರೆ, ಮನೆ, ಜಮೀನು, ಆಸ್ತಿ- ಈ ಎಲ್ಲವೂ ಸಮುದಾಯಕ್ಕೆ ಸೇರಿದ್ದು ಎಂದು ಬಾಳಿ ಬದುಕಿದವರು ಈ ಜನ. ಇವರ ಮನೆಗಳಿರುವ ಹಾಡಿಯಂಥ ಪ್ರದೇಶಗಳಿಗೆ ಹೋಗಬೇಕೆಂದರೆ ಎಷ್ಟೋ ವರ್ಷಗಳವರೆಗೆ ರಸ್ತೆಗಳೇ ಇರಲಿಲ್ಲ. ಶಾಲೆ, ಶಿಕ್ಷ ಣದಿಂದ ಈ ಸಮುದಾಯಗಳು ಬಲುದೂರ. ಸಿದ್ದಿ ಸಮುದಾಯದವರು ದೈಹಿಕವಾಗಿ ಸದೃಢರಾದರೂ, ಸ್ವಭಾವತಃ ನಾಚಿಕೆ, ಹಿಂಜರಿಕೆ ಸ್ವಭಾವದವರು. ನಾಗರಿಕತೆಯಿಂದ ದೂರವೇ ಉಳಿದಿದ್ದು, ಅರಣ್ಯವಾಸ, ಬಡತನದಂಥ ಕಾರಣಗಳಿಂದ ವನವಾಸಿಗಳ ಮಕ್ಕಳಿಗೆ ಇತ್ತೀಚಿನ ಅನೇಕ ವರ್ಷಗಳವರೆಗೂ ಔಪಚಾರಿಕ ಶಾಲಾ ಶಿಕ್ಷ ಣ ಗಂಧವೇ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲವರು ಶಾಲೆಯ ಮುಖ ನೋಡುತ್ತಿದ್ದರಾದರೂ, ಅವರಲ್ಲಿ ಬಹುಪಾಲು ಮಂದಿ ಐದು, ಆರು, ಏಳನೇ ತರಗತಿಗೇ ಶಿಕ್ಷಣವನ್ನೇ ಮೊಟಕುಗೊಳಿಸಿ, ಕಾಡಂಚು ಸೇರುತ್ತಿದ್ದರು. ಇಂಥ ಸವಾಲು ಸಂಕಷ್ಟಗಳ ಪರಿಸರದಲ್ಲಿ ಬೆಳೆದ ಬುಡಕಟ್ಟು ಸಮುದಾಯದ ಶಾಂತಾರಾಮ ಸಿದ್ದಿ ಅವರು ಪದವಿವರೆಗೆ ಓದಿದ್ದೇ ಅನನ್ಯ ಸಾಧನೆ ಎನ್ನಬೇಕು !

ಓದಿ ಪದವಿಯೊಂದನ್ನು ಪಡೆಯಲೇಬೇಕೆಂಬ ಜನ್ಮಜಾತ ಹಠವೊಂದನ್ನು ಬಿಟ್ಟು, ಕಲಿಯಲು ಸಹಕಾರಿಯಾದ ವಾತಾವರಣವಾಗಲಿ, ರವಷ್ಟು ಅನುಕೂಲಗಳಾಗಲಿ ಅವರಿಗೆ ಇರಲಿಲ್ಲ. ಈ ಕೊರತೆಗಳ ನಡುವೆಯೇ ಅವರು ಡಿಗ್ರಿ ಪಡೆದರು. ಸಿದ್ದಿ ಸಮುದಾಯದ ಮೊದಲ ಪದವೀಧರರಾದ ಶಾಂತಾರಾಮ್‌ ಅವರಿಗೆ ಒಂದು ಸರಕಾರಿ ನೌಕರಿ ಪಡೆದುಕೊಳ್ಳುವುದು ಕಷ್ಟದ ಕೆಲಸವೇನು ಆಗಿರಲಿಲ್ಲ. ಸಾಂವಿಧಾನಿಕ ಹಕ್ಕಾಗಿ ತನ್ನನ್ನು ಅರಸಿಕೊಂಡ ಬಂದ ಅಂಥದ್ದೊಂದು ಅವಕಾಶವನ್ನು ಬದಿಗಿರಿಸಿದರು. ತಾನು ಹುಟ್ಟಿದ ಬುಡಕಟ್ಟು ಸಮುದಾಯದ ಎಲ್ಲರೂ ತನ್ನಂತೆಯೇ ಆಗಬೇಕೆಂಬ ಚಿಂತನೆಗೆ ಒತ್ತಾಸೆಯಾದರು. ತನ್ನ ಜನರ ಸಂಸ್ಕೃತಿ, ತಾನು ಬೆಳೆದ ಶ್ರೀಮಂತ ಪರಿಸರವನ್ನು ಸಂರಕ್ಷ ಣೆ ಮಾಡಬೇಕೆಂದು ಬಯಸಿ, ಆ ಕೆಲಸಕ್ಕಾಗಿ ಟೊಂಕ ಕಟ್ಟಿದರು.

ಜೀವನದಲ್ಲಿ ತಿರುವು ತಂದ ವರ್ಷ.

ಸಿದ್ದಿಯುವಕ ಶಾಂತಾರಾಮ್‌ ಅವರ ಪಾಲಿಗೆ 1988, ಜೀವನದಲ್ಲಿ ಹೊಸ ತಿರುವು ತಂದ ವರ್ಷ. ಶ್ರೀಮಂತ ಬುಡಕಟ್ಟು ಸಂಸ್ಕೃತಿ, ವಿಶಿಷ್ಟ ಭಾಷೆ ಹೊಂದಿರುವ ಸಿದ್ದಿ ಜನಾಂಗದ ಮೇಲೆ ಕ್ರೈಸ್ತ ಮಿಷಿನರಿಗಳ ಕಣ್ಣು ಬಿದ್ದಿತ್ತು. ಆ ವೇಳೆಗಾಗಲೇ ಅವರು ಸಿದ್ಧಿಗಳನ್ನು ಮತಾಂತರ ಮಾಡುವ ಮೂಲಕ, ಬುಡಕಟ್ಟು ಸಂಸ್ಕೃತಿಯನ್ನೇ ನಾಶ ಮಾಡುವ ಕೃತ್ಯಕ್ಕೆ ಕೈಹಾಕಿದ್ದರು. ಪರಿಣಾಮ ಯಲ್ಲಾಪುರ ತಾಲೂಕಿನ ಮಂಚಿಕೇರಿ, ಉಮ್ಮಚಗಿ ಭಾಗದ ಹಲವು ಸಿದ್ದಿ ಕುಟುಂಬಗಳು ಕ್ರೈಸ್ತಮತಕ್ಕೂ, ಇನ್ನೂ ಕೆಲವು ಕುಟುಂಬಗಳು ಇಸ್ಲಾಮಿಗೂ ಮತಾಂತರಗೊಂಡಿದ್ದವು.

ಕಣ್ಣೆದುರೇ ಅಳಿದು ಹೋಗುತ್ತಿರುವ ಒಂದು ಬುಡಕಟ್ಟು ಸಂಸ್ಕೃತಿಯೊಂದರ ಆತಂಕಕಾರಿ ವಿದ್ಯಮಾನ ಸಿದ್ಧಿ ಸಮುದಾಯದ ಶಾಂತಾರಾಮ್‌ ಅವರಂಥವರಿಗೆ ಅರ್ಥವಾಗುತ್ತಿರಲಿಲ್ಲ ಎಂದೇನಿಲ್ಲ. ಅವರು ಅಸಹಾಯಕರಾಗಿದ್ದರು. ಈ ವಿಷಯ ಆರ್‌ಎಸ್‌ಎಸ್‌ನ ಪರಿವಾರ ಸಂಘಟನೆಯಾದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾಗಿದ್ದ ಅಜಿತ್‌ ಕುಮಾರ್‌ ಅವರಿಗೆ ತಿಳಿಯಿತು. ಬಳಿಕ ಅವರು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದರು. ಆಗ ಜನ್ಮತಾಳಿದ್ದೇ ವನವಾಸಿ ಕಲ್ಯಾಣ ಸಂಸ್ಥೆ. ಸಿದ್ಧಿಗಳು ಸೇರಿದಂತೆ ಎಲ್ಲ ಗಿರಿಜನರ ಕಲ್ಯಾಣಕ್ಕಾಗಿ ಆರಂಭವಾದ ಈ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಶೃಂಗೇರಿ ಮೂಲದ ಪ್ರಕಾಶ್‌ ಕಾಮತರ ಹೆಗಲಿಗೆ ಹಾಕಲಾಯಿತು. ಪ್ರಕಾಶ ಕಾಮತ್‌ ಓರ್ವ ತಪಸ್ವಿ, ಭವಿಷ್ಯವನ್ನು ಮುಂಗಾಣುವ ವ್ಯಕ್ತಿತ್ವದ ಮಹನೀಯ. ಅಂಥ ಕಾಮತರು ಹೆಕ್ಕಿ ತೆಗೆದು, ಬೆಳೆಸಿದ ಹಲವು ಪ್ರತಿಭೆಗಳಲ್ಲಿ ಶಾಂತಾರಾಮ್‌ ಮೊದಲಿಗರು. ಇದೆಲ್ಲವನ್ನೂ ಯಾಕೆ ಹೇಳುತ್ತಿದ್ದೇನೆ ಎಂದರೆ, ಶಾಂತಾರಾಮ್‌ ಅವರ ಒಟ್ಟಾರೆ ವನವಾಸಿ ಕಲ್ಯಾಣದ ಬದುಕಿನ ಪಯಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯ ಕಾಮತ್‌ ಕೂಡ ಇದ್ದಾರೆ !

ಶಿರಸಿಯನ್ನು ಕೇಂದ್ರವಾಗಿರಿಸಿಕೊಂಡು ವನವಾಸಿ ಕಲ್ಯಾಣದ ಸಂಕಲ್ಪದ ಸಾಕಾರಕ್ಕೆ ವಿಧ್ಯುಕ್ತರಾದ ಪ್ರಕಾಶ ಕಾಮತ್‌ ಮೊದಲು ಆಯ್ಕೆ ಮಾಡಿಕೊಂಡದ್ದು ಸಿದ್ದಿ ಜನಾಂಗ ಹೆಚ್ಚಾಗಿರುವ ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ಚಿಪಗೇರಿ ಗ್ರಾಮವನ್ನು. ಚಿಪಗೇರಿಯಲ್ಲಿ ಸಿದ್ದಿ, ಗೌಳಿ ಜನರಿಗಾಗಿ ಮೊದಲ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ವಿದ್ಯಾರ್ಥಿ ನಿಲಯದ ನಿರ್ವಹಣೆ ಜವಾಬ್ದಾರಿಯ ಉಸ್ತುವಾರಿಯನ್ನು ಪ್ರಕಾಶ ಕಾಮತರು ಶಾಂತಾರಾಮ್‌ ಅವರಿಗೆ ವಹಿಸಿದರು. ವಿದ್ಯಾರ್ಥಿನಿಲಯಕ್ಕೆ ಕುಟೀರ ನಿರ್ಮಿಸುವುದರಿಂದ ಹಿಡಿದು, ನಂತರ ದಿನವೂ ಅದನ್ನು ಗುಡಿಸಿ, ತೊಳೆದು ಬಳಿದು, ಅಡುಗೆ ಮಾಡಿ ಮಕ್ಕಳ ಹೊಟ್ಟೆ ತಣಿಸಿ, ನಿಲಯದ ಮಕ್ಕಳಿಗೆ ಆಟ, ಪಾಠ ಮಾಡಿಸುವ ಕೆಲಸವನ್ನು ಶಾಂತಾರಾಮ್‌ ಒಂದು ವ್ರತದಂತೆ ಮುಂದುವರೆಸಿದರು. ಬಿದಿರಿನ ಹಂದರದ ಗೋಡೆ, ಸೆಗಣಿಯಿಂದ ಸಾರಿಸಿದ ನೆಲ, ಹುಲ್ಲಿನ ಹೊದಿಕೆಯ ವಿದ್ಯಾರ್ಥಿ ನಿಲಯ ಸೇರಿದ ಅನೇಕ ಸಿದ್ದಿ ವಿದ್ಯಾರ್ಥಿಗಳು ಶಾಲೆ ಕಲಿತದ್ದು ಮಾತ್ರವಲ್ಲ, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ, ಏಷ್ಯನ್‌ ಗೇಮಿನಲ್ಲಿ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡರು, ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ದಾಖಲೆ ಬರೆದರು. ಮುಂದೆ ಶಿರಸಿ ನಗರ, ದಾಂಡೇಲಿ, ಯಲ್ಲಾಪುರ, ಕುಮಟಾ, ಸಾಗರ, ಗುಂಡ್ಲುಪೇಟೆ, ಮೈಸೂರಿನಲ್ಲಿ ಹಾಸ್ಟೆಲ್‌ಗಳು ಶುರುವಾದವು. ಈಗ ಕರ್ನಾಟಕದ 16 ಜಿಲ್ಲೆಗಳಲ್ಲಿ 28 ವಿವಿಧ ಹಿಂದುಳಿದ ಜನಜಾತಿಗಳ ವಿದ್ಯಾರ್ಥಿಗಳಿಗಾಗಿ ವನವಾಸಿ ಕಲ್ಯಾಣ ಸಂಸ್ಥೆ ಹಗಲಿರುಳು ಕೆಲಸ ಮಾಡುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಶಿಕ್ಷಣ, ಅನ್ನ, ಆರೋಗ್ಯದ ಕಾಳಜಿ ವಹಿಸಿದೆ. ಆ ಎಲ್ಲ ಮಹಾನ್‌ ಕಾಯಕದ ಹಿಂದೆ ಮೊದಲ ದಿನದಿಂದ ಪ್ರಕಾಶ್‌ ಕಾಮತ್‌ ಅವರಿಗೆ ಹೆಗಲು ನೀಡಿದ್ದು ಇದೇ ಶಾಂತಾರಾಮ್‌ ಸಿದ್ಧಿ. ಮುಂದೆ ವನವಾಸಿ ಕಲ್ಯಾಣ ಕರ್ನಾಟಕದಲ್ಲಿ ಪರಿಣಾಮಕಾರಿ ಬಲಿಷ್ಠ ವನವಾಸಿ ಸಂಸ್ಥೆಯಾಗಿ ಬೆಳೆದದ್ದು ಮಾತ್ರವಲ್ಲ, ಉತ್ತರ ಭಾರತದ ಬಿಹಾರ್‌, ಜಾರ್ಖಂಡ್‌ಗಳಲ್ಲೂ ತನ್ನ ಕಾರ್ಯವನ್ನು ಅಗಾಧವಾಗಿ ವಿಸ್ತರಿಸಿ ಅಖಿಲ ಭಾರತ ಸಂಘಟನೆಯಾಗಿ ರೂಪ ತಾಳಿದೆ.

ಈ ಸಂದರ್ಭದಲ್ಲಿ ಪ್ರಕಾಶ ಕಾಮತರ ಬಗ್ಗೆಯೂ ಒಂದೆರಡು ಮಾತುಗಳನ್ನು ಉಲ್ಲೇಖಿಸುವೆ. ಗೌರವಸ್ಥ ಅನುಕೂಲಕರ ಮನೆತನದ ಕೃಷ್ಣ ಕಾಮತ್‌ ಅವರ ಪುತ್ರ ಪ್ರಕಾಶ ಕಾಮತ್‌ ಓದಿದ್ದು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌. 40 ವರ್ಷಗಳ ಹಿಂದೆ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದು ವಿವಿಯಿಂದ ಹೊರಬಿದ್ದ ಅವರು. ಮನಸ್ಸು ಮಾಡಿದ್ದರೆ ಕೈ ತುಂಬ ಸಂಬಳ ಪಡೆಯುವ ನೌಕರಿ ಹಿಡಿಯಬಹುದಿತ್ತು, ವಿದೇಶಗಳಿಗೆ ಹೋಗಿ ಐಷಾರಾಮಿ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ, ಈ ಎರಡನ್ನೂ ಆಯ್ಕೆ ಮಾಡಿಕೊಳ್ಳದೇ ಅವರು ಕಾಡಂಚಿನ ದಾರಿ ತುಳಿದರು. ವನವಾಸಿ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡಿದರು. ಕರ್ನಾಟಕದಲ್ಲಿ ವನವಾಸಿ ಕೆಲಸ ಸದೃಢವಾಗಿ ಬೆಳೆದ ನಂತರ ಇಲ್ಲಿನ ಕೆಲಸವನ್ನು ಶಾಂತಾರಾಮ್‌ ಮತ್ತು ಕೆಲ ಸಹಕಾರಿಗಳಿಗೆ ವಹಿಸಿ ಉತ್ತರ ಭಾರತದ ಕಡೆ ಮುಖ ಮಾಡಿದರು.

ಕರ್ನಾಟಕದಲ್ಲಿ ವನವಾಸಿ ಕಲ್ಯಾಣ ಕಾರ್ಯಕ್ಕೆ ಭದ್ರ ಬುನಾದಿ ಹಾಕಿದ ನಂತರ ರಾಂಚಿಯನ್ನು ಕೇಂದ್ರವಾಗಿಸಿಕೊಂಡು ಬಿಹಾರ್‌, ಜಾರ್ಖಂಡ್‌ ರಾಜ್ಯಗಳಲ್ಲಿ ವನವಾಸಿ ಕಲ್ಯಾಣದ ಕಾರ್ಯವನ್ನು ಭದ್ರವಾಗಿ ಬೆಳೆಸಿದರು. ನಂತರ ಗ್ರಾಮ ವಿಕಾಸ ಪ್ರಕಲ್ಪದ ಅಖಿಲ ಭಾರತ ಪ್ರಮುಖರಾಗಿ ಮಾಡಿದ ಕೆಲಸವಂತೂ ಅಗಾಧ. ಜಾರ್ಖಂಡ್‌, ಬಿಹಾರ ರಾಜ್ಯಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳನ್ನು ಪ್ರಾರಂಭಿಸಿ ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಹಿಂದುಳಿದ ಜನರಲ್ಲಿ ಸ್ವಾವಲಂಬಿ ಜೀವನಕ್ಕೆ ನೀರೆರೆದು ಬೆಳೆಸಿದರು. ದೇಶದ ಉದ್ದಗಲಕ್ಕೆ ಆರಂಭಿಸಿದ ಹಾಸ್ಟೆಲುಗಳಲ್ಲಿ ಪಶುಪಾಲನೆಯನ್ನು ಆಗ್ರಹದಿಂದ ಕಲಿಸುವ ಪರಿಪಾಠ ಆರಂಭಿಸಿದರು. ಒಂದು ಜೊತೆ ಪಂಚೆ, ಎರಡು ಅಂಗಿ ತೊಟ್ಟು ಸುಮಾರು 45 ವರ್ಷಗಳ ಕಾಲ ಹಸಿವು, ಆಸರೆ, ದಣಿವು ಯಾವುದನ್ನು ಲೆಕ್ಕಿಸದೆ ಅವರು ಮಾಡಿದ ಕೆಲಸ ಅನನ್ಯವಾದುದು. ಕಾಲ್ನಡಿಗೆಯಲ್ಲಿ, ಸೈಕಲ್‌ ತುಳಿದು, ಸರಕಾರಿ ಬಸ್ಸು ಏರಿ ಕಾಡು ಮೇಡುಗಳನ್ನು ಸುತ್ತಾಡಿ ಸಮಾಜಕಾರ್ಯ ಬೆಳೆಸಿದ ಪ್ರಕಾಶ ಕಾಮತರು, ತಮ್ಮ ಬದುಕಿನ ಕಡೆ ಆರೇಳು ವರ್ಷಗಳನ್ನು ಮತ್ತೆ ಉತ್ತರಕನ್ನಡದಲ್ಲೇ ಕಳೆದರು. ತಾವೇ ನಿರ್ಮಿಸಿದ ಉತ್ತರ ಕನ್ನಡದ ಕುಮಟಾದ ವನಬಂಧು ವಿದ್ಯಾರ್ಥಿ ನಿಲಯದಲ್ಲಿದ್ದ ಪ್ರಕಾಶ್‌ ಕಾಮತರು, ಎರಡು ವರ್ಷದ ಹಿಂದೆ ಕೊನೆಯುಸಿರೆಳೆದರು. ಅವರ ದೇಹ ಅಳಿಯಿತು ನಿಜ, ದೇಹವಳಿದರೆ ಏನಾಯಿತು ಧ್ಯೇಯ ಶಾಶ್ವತವಾಗಿ ನೆಲೆಸುವಂತಾಗಿದೆಯಲ್ಲ!

ವಿಧಾನ ಪರಿಷತ್ತಿಗೆ ಶಾಂತಾರಾಮ್‌ ನಾಮ ನಿರ್ದೇಶನಗೊಂಡಿದ್ದಾರೆಂದು ಸ್ನೇಹಿತರೊಬ್ಬರು ಕರೆ ಮಾಡಿ ತಿಳಿಸಿದಾಗ ಅತೀವ ಖುಷಿಯಾಯಿತು. ಬೆನ್ನಲ್ಲಿಯೇ ಪ್ರಕಾಶ ಕಾಮತರ ಜೊತೆಗಿನ ಒಡನಾಟ, ಅವರು ಸವೆಸಿದ ಹಾದಿಯ ನೆನಪಿನ ಮೆರವಣಿಗೆ ನನ್ನ ಕಣ್ಣಮುಂದೆ ಹಾದುಹೋಗಿ ಪುಳಕವುಂಟಾಯಿತು.

ಶಾಂತಾರಾಮ್‌ ಬದುಕು ಹಾಗೂ ವನವಾಸಿ ಕಲ್ಯಾಣ ಸಂಘದ ಚಟುವಟಿಕೆಯ ಸಂದರ್ಭದಲ್ಲಿ ಆಲೋಚನೆ ಮಾಡಲೇ ಬೇಕಾದ ಇನ್ನೊಂದು ಸಂಗತಿಯಿದೆ. ನಮ್ಮ ಸಶಕ್ತೀಕರಣಕ್ಕೆ ನಮ್ಮ ಸಂವಿಧಾನವೇ ಅದ್ಭುತ ಅಸ್ತ್ರ. ಮೀಸಲು ನೀತಿಯ ಪರಿಣಾಮ ಒಂದಿಷ್ಟು ಸಮುದಾಯಗಳು ಸಬಲೀಕರಣಗೊಂಡಿವೆ. ಇಂಥಾ ನೀತಿಯ ಲಾಭ ಎಲ್ಲರಿಗೂ ದೊರಕಿದರೆ ಅದೆಷ್ಟು ಚಂದದ ಸಮಾಜ ನಿರ್ಮಾಣ ಆದೀತು? ಮೀಸಲಾತಿಯ ಗರಿಷ್ಠ ಪ್ರಯೋಜನ ಪಡೆದಿರುವ ತಳ ಸಮುದಾಯದ ಕ್ರೀಮಿ ಲೇಯರ್‌ ಮಹಾನುಭವರು, ಸತತವಾಗಿ ಮೂವತ್ತು ನಲವತ್ತು ವರ್ಷಗಳಿಂದ ಮೀಸಲು ಕ್ಷೇತ್ರಗಳಿಂದಲೇ ಸಂಸದ, ಶಾಸಕರಾಗುತ್ತಿರುವವರು, ಮೀಸಲಿನ ಪ್ರಯೋಜನವನ್ನು ತಮ್ಮದೇ ಸಮುದಾಯದ ಅಂಚಿನ ಜನರಿಗೆ ಬಿಟ್ಟುಕೊಡಲು ಮುಂದೆ ಬಾರದೆ ಇರುವುದು ಸೋಜಿಗವೆ. ಅದೇ ವೇಳೆ ಡಿಗ್ರಿ ಪಡೆದಿದ್ದ ಶಾಂತಾರಾಮ್‌ ಸರಕಾರಿ ನೌಕರಿ ಹಿಡಿಯಲಿಲ್ಲ. ಇಂಜಿನಿಯರಿಂಗ್‌ನಲ್ಲಿ ಗೋಲ್ಡ್‌ ಮೆಡಲ್‌ ಪಡೆದ ಕಾಮತರು ಇಡೀ ಜೀವನವನ್ನು ಬುಡಕಟ್ಟು ಜನರ ಶಿಕ್ಷಣಕ್ಕಾಗಿ ಟೊಂಕಕಟ್ಟಿದರು. ಸಮಸಮಾಜ ನಿರ್ಮಾಣಕ್ಕೆ ಇದಲ್ಲವೇ ಮಾದರಿ!

ಶಾಂತಾರಾಮ್‌ ವಿಷಯದಲ್ಲಿ ಕೊನೇ ಮಾತು. ಅವರು ಕಳೆದ 35 ವರ್ಷಗಳಿಂದಲೂ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಆಟ, ಪಾಠ, ಹಾಡು, ಭಾಷಣ, ನಾಟಕ, ರುಚಿಯಾದ ಅಡುಗೆ -ಹೀಗೆ ಎಲ್ಲ ಕಲೆ ಕಾಯಕದಲ್ಲೂ ನಿಸ್ಸೀಮರು. ಕನ್ನಡ, ಕೊಂಕಣಿ, ಸಂಸ್ಕೃತ, ಹಿಂದಿಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. ಅಡುಗೆ ರುಚಿಯೊಂದನ್ನು ಬಿಟ್ಟು ಬೇರೆಲ್ಲವೂ ಇನ್ನು ಮುಂದೆ ಮೇಲ್ಮನೆಯ ಸಹೋದ್ಯೋಗಿಗಳಿಗೆ ಲಭ್ಯ.

ಹಾಟ್ಸ್ ಆಫ್ ಶಾಂತಾರಾಂ ಮತ್ತು ಅಂಥ ಹತ್ತಾರು ಮಂದಿಯನ್ನು ತಯಾರು ಮಾಡಿದ ಮಹಾನುಭಾವರಿಗೆ…

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Story of a Govt school of Hosa Yalanadu village developing at par with its city counterparts

Sat Jul 25 , 2020
Story of a govt school of Hosa Yalanadu village developing at par with its city counterparts There is a visible aversion towards government schools. We feel cozy with the benefits at private schools which provide multiple amenities including high class quality education, sports facilities, posh equipment and what not. The […]