ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಯು ನಾರದರ ಸಂವಹನದ ಮೂಲ ಆದ್ಯತೆ : ದು.ಗು. ಲಕ್ಷ್ಮಣ

ಮೇ 9 ಬೆಂಗಳೂರು: ತ್ರಿಲೋಕ ಸಂಚಾರಿ ಎಂಬ ಬಿರುದನ್ನು ಪಡೆದಿರುವ ನಾರದ ಮಹರ್ಷಿಗಳು ಈ ಲೋಕ ಕಂಡ ಮೊದಲ ಪತ್ರಕರ್ತ ಎಂದು ಡಿ.ವಿ. ಗುಂಡಪ್ಪ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಮೊದಲ ಹಿಂದಿ ಪತ್ರಿಕೆ ‘ಉದಂತ ಮಾರ್ತಾಂಡ’ದಲ್ಲಿ ಸಹ ನಾರದ ಮಹರ್ಷಿ ಲೋಕದ ಮೊದಲ ಪತ್ರಕರ್ತ ಎಂದು ಉಲ್ಲೇಖಿಸಿದ್ದಾರೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರರಾದ ದು.ಗು.ಲಕ್ಷ್ಮಣ ಹೇಳಿದರು.

ನಾರದ ಜಯಂತಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರ ಪ್ರಾಂತ ಮತ್ತು ಪ್ರಜ್ಞಾಪ್ರವಾಹ ಕರ್ನಾಟಕ ಜಂಟಿಯಾಗಿ ಶನಿವಾರ ಆಯೋಜಿಸಲಾದ ಆನಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾರದ ಮಹರ್ಷಿ ನಾರಾಯಣನ ಭಕ್ತ, ಉತ್ತಮ ಸಂಗೀತಕಾರ, ಶ್ರೇಷ್ಠ ಸಂವಹನಕಾರ, ತ್ರಿಲೋಕ ಸಂಚಾರಿ, ಸಂತ, ಬ್ರಹ್ಮಚಾರಿ ಹೀಗೆ ಭಿನ್ನ ಭಿನ್ನ ಗುಣಗಳಿಂದ ಪ್ರಸಿದ್ಧರಾಗಿದ್ದಾರೆ.

ನಾರದರು ದೇವಲೋಕ, ಪಾತಾಳಲೋಕ ಮತ್ತು ಭೂಲೋಕ ಹೀಗೆ ಎಲ್ಲೆಡೆ ಸಂಚರಿಸುವ ಮೂಲಕ ಒಂದೆಡೆಯ ಸುದ್ದಿಯನ್ನು ಮತ್ತೊಂದೆಡೆ ಹೋಗಿ ತಿಳಿಸುವ ಅವರನ್ನು ಸುದ್ದಿ ವಾಹಕ ಎಂದು ಕೂಡಾ ಕರೆಯಲಾಗುತ್ತದೆ. ನಾರದರು ತಮ್ಮ ಸುದ್ದಿ ವಾಹಕ ಮತ್ತು ಸಂವಹನ ಕೌಶಲಗಳನ್ನು ಲೋಕದ ಕಲ್ಯಾಣ ಮತ್ತು ಧರ್ಮ ಕಾರ್ಯಗಳಿಗಾಗಿ ಬಳಸುತ್ತಿದ್ದರು. ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಯು ನಾರದರ ಸಂವಹನದ ಮೂಲ ಆದ್ಯತೆಯಾಗಿತ್ತು ಎಂಬುದು ರಾಮಾಯಣ, ಮಹಾಭಾರತ ಮತ್ತು ಇತರೆ ಪುರಾಣಗಳಿಂದ ತಿಳಿಯುತ್ತದೆ : ದು.ಗು. ಲಕ್ಷ್ಮಣ

ನಾರದ ಜಯಂತಿ ನಿಮಿತ್ತ ಕನ್ನಡ ಪತ್ರಿಕಾರಂಗದ ಅನೇಕ ಮಹನೀಯರನ್ನು ನೆನೆಯುವುದು ಕೂಡಾ ಮುಖ್ಯವಾಗಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ನಾಡಿನ ಪ್ರಮುಖ ದೈನಿಕವನ್ನಾಗಿ ರೂಪಿಸಿದ ಶ್ರೀ ಮೊಹರೆ ಹನುಮಂತರಾಯರು ನಾಡು ಕಂಡ ಶ್ರೇಷ್ಠ ಪತ್ರಕರ್ತರು. ತಿಲಕರ ಆದರ್ಶಗಳನ್ನು ನಾಡಿನಲ್ಲಿ ಪ್ರಚಾರಗೊಳಿಸುವುದು ಮತ್ತು ದೇಶಕ್ಕೆ ಸ್ವಾತಂತ್ರ್ಯ ಗಳಿಸುವ ಮಹಾನ್ ಉದ್ದೇಶಕ್ಕಾಗಿ ಗಾಂಧಿವಾದಿಯಾಗಿದ್ದ ಮೊಹರೆ ಹನುಮಂತರಾಯರು ಯಾವುದೆ ಸಂಬಳ, ವರಮಾನವನ್ನು ಅಪೇಕ್ಷಿಸಿದೆ, ಹಗಲಿರುಳು ದುಡಿದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಕಟ್ಟಿ ಬೆಳೆಸಿದರು.

File photo : Sri Du Gu Laxman addressing Narada Jayanti gathering

1928ರಲ್ಲಿ ಬಾಗಲಕೋಟೆಯಲ್ಲಿ ಡಿವಿಜಿಯವರ ಅಧ್ಯಕ್ಷತೆಯಲ್ಲಿ ಪತ್ರಕರ್ತರ ಪರಿಷತ್ ಸಂಘಟಿಸಿದ್ದರು. 1950ರ ಮುಂಬೈನ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣವು ಉದಯೋನ್ಮುಖ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ದಾರಿದೀಪ.

ಪತ್ರಕರ್ತರ ಲೇಖನಿಯು ರಾಷ್ಟ್ರ ಮತ್ತು ಸಮಾಜದ ಏಳ್ಗೆಯನ್ನೆ ಬಯಸಬೇಕು. ಆ ಲೇಖನಿ ಸ್ವಾರ್ಥಹಿತಕ್ಕಾಗಿ ಬಳಕೆಯಾಗಿ ರಾಷ್ಟ್ರ ಮತ್ತು ಸಮಾಜ ವಿರೋಧಿ ಕಾರ್ಯದಲ್ಲಿ ಉಪಯೋಗಿಸಬಾರದು. ‘ಮನಬಂದಂತೆ ಟೀಕೆ ಟಿಪ್ಪಣಿಗೆ ಲೇಖನಿಯನ್ನು ಉಪಯೋಗಿಸುವ ಪತ್ರಕರ್ತರು ಸಮಾಜ ಕಂಟಕರು’ ಎಂದು ಮೊಹರೆ ಹನುಮಂತರಾಯರು ಭಾಷಣದಲ್ಲಿ ಹೇಳಿದ್ದರು ಎಂದು ಮುಂಬೈನ್ ಭಾಷಣದ ಕೆಲ ಸಂಗತಿಗಳನ್ನು ಉಲ್ಲೇಖಿಸಿದರು.

ಮೈಸೂರು ಟೈಮ್ಸ್, ಸೂರ್ಯೋದಯ, ವೀರ ಕೇಸರಿ ಹೀಗೆ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಶ್ರೀ ಡಿ.ವಿ.ಗುಂಡಪ್ಪ ಅವರ ಜೀವನ ಕೂಡಾ ಆದರ್ಶಮಯವಾಗಿದೆ. ಡಿವಿಜಿ ಅವರು ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಸತ್ಯ ಪ್ರತಿಪಾದನೆಗೆ ಮಹತ್ವ ನೀಡಿ ತಮ್ಮ ಪತ್ರಿಕಾ ವೃತ್ತಿಯನ್ನು ಪಾಲನೆ ಮಾಡಿಕೊಂಡು ಬಂದರು. ಡಿವಿಜಿ ನಿಧನ ಹೊಂದಿದ ಬಳಿಕ ಅವರ ಟ್ರಂಕ್ ತೆಗೆದು ನೋಡಿದಾಗ ಅದರಲ್ಲಿ ಅನೇಕ ಚೆಕ್‍ಗಳಿದ್ದವು. ಅನೇಕ ಸಂಘಸಂಸ್ಥೆಗಳು ಅವರಿಗೆ ಬಹುಮಾನ ಮತ್ತು ಗೌರವ ರೂಪದಲ್ಲಿ ನೀಡಿದ ಚೆಕ್‍ಗಳನ್ನು ಅವರು ಎಂದು ಬಳಿಸಿಕೊಳ್ಳಲಿಲ್ಲ. ಡಿವಿಜಿ ಅವರ ಅದರ್ಶಗಳು ಇಂದಿನ ಪತ್ರಕರ್ತರಲ್ಲಿ ಕಾಣಲು ದೊರೆಯದಿರುವುದು ಸೋಜಿಗದ ಸಂಗತಿ ಎಂದರು.

ಅದೇ ರೀತಿ ರಾಷ್ಟ್ರೀಯ ವಿಚಾರಧಾರೆಯ ಪ್ರೇರಿತ ವಿಕ್ರಮ ಸಾಪ್ತಾಹಿಕ ಪತ್ರಿಕೆಯ 40 ಕ್ಕೂ ಹೆಚ್ಚು ವರ್ಷ ಸಂಪಾದಕರಾಗಿದ್ದ ಶ್ರೀ ಬಿ.ಎಸ್.ಎನ್ ಮಲ್ಯ ಅವರು ತಮ್ಮ ಪೂರ್ಣ ಜೀವನ ಅತ್ಯಂತ ಸರಳ ಉಡುಗೆ ತೊಡುಗೆಯಲ್ಲಿ ಕಳೆದರು. ಒಮ್ಮೆ ಪಂಚತಾರಾ ಹೊಟೇಲ್ ಒಂದರಲ್ಲಿ ಪತ್ರಿಕಾಗೋಷ್ಠಿಗೆ ಹೋದಾಗ ಇವರು ತೊಟ್ಟ ಬಟ್ಟೆ ಮತ್ತು ಚಪ್ಪಲ್ಲಿಯನ್ನು ನೋಡಿ, ಹೊಟೇಲ್ ಗಾರ್ಡ ಮಲ್ಯ ಅವರನ್ನು ಒಳಗಡೆ ಪ್ರವೇಶ ಮಾಡಲು ಅವಕಾಶ ನೀಡಲಿಲ್ಲ. ಆಗ ಉಳಿದೆಲ್ಲ ಪತ್ರಕರ್ತರೂ ಕೂಡಾ ಮಲ್ಯ ಅವರಿಗೆ ಇಲ್ಲದ ಅವಕಾಶ ನಮಗೂ ಬೇಡ ಎಂದು ಹೇಳಿ ಪತ್ರಿಕಾಗೋಷ್ಠಿಯನ್ನು ತೊರೆದರು. ಆಗ ಪತ್ರಿಕಾಗೋಷ್ಠಿ ಆಯೋಜಕರು ಕ್ಷಮೆಯಾಚಿಸಿ ಎಲ್ಲರಿಗೂ ಪ್ರವೇಶ ದೊರೆಯುವಂತೆ ಮಾಡಿದರು. ಈ ಘಟನೆ ನಂತರ ಬಿಎಸ್‍ಎನ್ ಮಲ್ಯ ಅವರು ಪತ್ರಕರ್ತನಿಗೆ ಅವಶ್ಯವಿರುವುದು ಬರಹ ಮತ್ತು ಸುದ್ದಿ ಗ್ರಹಿಕೆ. ಆದರೆ ಇಂದು ಸಮಾಜದಲ್ಲಿ ಪತ್ರಕರ್ತನನ್ನು ಕೂಡಾ ಆತ ತೊಟ್ಟ ಬಟ್ಟೆ ಮೇಲೆ ತೂಗುತ್ತಿರುವುದು ಸರಿಯಲ್ಲ ಎಂದು ಲೇಖನ ಬರೆದರು ಎಂದು ತಿಳಿಸಿದರು.

ನಾರದ ಮಹರ್ಷಿ, ಮೊಹರೆ ಹನುಮಂತರಾಯರು, ಡಿ.ವಿ.ಗುಂಡಪ್ಪ ಅವರ ಆದರ್ಶಗಳನ್ನು ಪ್ರಸಕ್ತ ದಿನಮಾನದ ಪತ್ರಕರ್ತರಲ್ಲಿ ಕಾಣುತ್ತಿಲ್ಲ. ಸಮಾಜ ಸಂರಕ್ಷಣೆ ಮತ್ತು ಏಳ್ಗೆಗೆ ಆದ್ಯತೆ ನೀಡುವ ಬದಲಾಗಿ, ಮಾಧ್ಯಮಗಳು ಉದ್ಯಮಗಳಾಗಿ ರೂಪಗೊಂಡು ಲಾಭ ನಷ್ಟದ ಎಣಿಕೆಗೆ ಮಹತ್ವ ನೀಡುತ್ತಿವೆ. ಈ ಎಲ್ಲ ಸಂಗತಿಗಳ ಹೊರತಾಗಿಯೂ ಸಮಾಜದಲ್ಲಿ ಕೆಲ ಉತ್ತಮ ಪತ್ರಕರ್ತರು ಮತ್ತು ಮಾಧ್ಯಮಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಓದುಗರು ಮತ್ತು ವೀಕ್ಷಕರು ಕೂಡಾ ಸಮಾಜದ ರಚನಾತ್ಮಕ ಸಂಗತಿಗಳಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ, ಮಾಧ್ಯಮಗಳು ತಮ್ಮ ವೃತ್ತಿಯ ಶೈಲಿಯನ್ನು ಬದಲಿಸಬಹುದು ಎಂದು ಅಭಿಪ್ರಾಯಪಟ್ಟರು.