ಸಂಸ್ಕೃತಂ ಪಠ! ಆಧುನಿಕೋ ಭವ!! ವಿಶ್ವ ಸಂಸ್ಕೃತ ದಿವಸಕ್ಕೆ ವಿಶೇಷ ಲೇಖನ

ಸಂಸ್ಕೃತಂ ಪಠ! ಆಧುನಿಕೋ ಭವ!!

ಶ್ರಾವಣ ಪೂರ್ಣಿಮೆಯನ್ನು ವಿಶ್ವ ಸಂಸ್ಕೃತ ದಿವಸವೆಂದು ಆಚರಿಸಲಾಗುತ್ತದೆ. ತನ್ನಿಮಿತ್ತ ಈ ಲೇಖನ,
ಕೃಪೆ: ಹೊಸ ದಿಗಂತ 

ಲೇಖಕರು: ಡಾ. ವಿಶ್ವನಾಥ ಸುಂಕಸಾಳ, ಸಹ ಪ್ರಾಧ್ಯಾಪಕರು, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ಶೃಂಗೇರಿ

ನಮ್ಮ ಮಕ್ಕಳ ಪ್ರಜ್ಞಾವಿಕಾಸಕ್ಕೆ ಹಾಗೂ ಅವರ ವ್ಯಕ್ತಿತ್ವದ ಪರಿಪೋಷಣೆಗೆ ಕಾರಣವಾಗುವ ಶಿಕ್ಷಣ ಇಂದು ದುರ್ಲಭವಾಗುತ್ತಿದೆ. ಮಕ್ಕಳು ಏನಾಗಬೇಕು ಎಂದು ಯಾರಾದರೂ ಕೇಳಿದರೆ, ಆತ ಒಳ್ಳೆಯ ನಾಗರಿಕನಾಗಬೇಕು, ಸಂಸ್ಕೃತನಾಗಬೇಕು ಎಂದು ಹೇಳುವ ಕಾಲ ಈಗಿಲ್ಲ. ನಾವಿಂದು ವ್ಯಕ್ತಿಯನ್ನು ಆತನ ಉದ್ಯೋಗದಿಂದ ಅಳೆಯಲು ತೊಡಗಿದ್ದೇವೆ. ನಮ್ಮ ಮಗ ಇಂಜಿನಿಯರೋ ಡಾಕ್ಟರೋ ಆಗಬೇಕೆಂಬುದು ಎಲ್ಲ ಪಾಲಕರ ಉತ್ತರ. ಹುಟ್ಟಿದ ಮನುಷ್ಯ ಏನಾದರೊಂದು ಉದ್ಯೋಗವನ್ನು ಮಾಡಲೇಬೇಕಾಗುತ್ತದೆ. ಆದರೆ ಹಾಗೆ ಉದ್ಯೋಗಿಯಾಗುವುದೇ ಜೀವನದ ಲಕ್ಷ್ಯವಲ್ಲ. ಉದ್ಯೋಗವೇ ಒಬ್ಬ ವ್ಯಕ್ತಿಯ ಗುರುತಲ್ಲ. ಪ್ರತಿ ವ್ಯಕ್ತಿಗೂ ಒಂದು ವ್ಯಕ್ತಿತ್ವವಿರುತ್ತದೆ. ವ್ಯಕ್ತಿ ಗುರುತಿಸಲ್ಪಡುವುದು ಆತನ ವ್ಯಕ್ತಿತ್ವದಿಂದ. ಅದು ಅನೇಕ ವಿಧದ ಇಷ್ಟಾನಿಷ್ಟಗಳು, ರಾಗ-ದ್ವೇಷಗಳು, ಉಚ್ಚಾವಚಭಾವಗಳಿಂದ ನಿರ್ಮಿತವಾದದ್ದಾಗಿರುತ್ತದೆ. ಜನ್ಮತಃ ಪಡೆದು ಬಂದಿರುವ ಅನೇಕ ಸ್ವಭಾವಗಳನ್ನು ಪರಿಷ್ಕರಿಸಿ ಒಬ್ಬ ಉತ್ತಮ ರಾಷ್ಟ್ರಕನಾಗಬೇಕು. ಆಂತರ್ಯದಲ್ಲೂ, ಬಾಹ್ಯದಲ್ಲೂ ಆತ ಶುದ್ಧನಾಗಿರಬೇಕು. ಆತನ ಚಾರಿತ್ರ್ಯ, ಬದುಕಿನ ಹೆಜ್ಜೆಗಳೆಲ್ಲ ಅಕಳಂಕವಾಗಿರಬೇಕು. ಅಂಥ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುವುದೇ ಪಾಲಕರ ಮತ್ತು ಶಿಕ್ಷಣದ ಕರ್ತವ್ಯ.
ಒಬ್ಬ ವ್ಯಕ್ತಿ, ತಾನು ಒಳಗೂ ಹೊರಗೂ ಗಟ್ಟಿಯಾಗದೇ ಮುಂದೆ ಸಮಾಜದಲ್ಲಿ ಪ್ರತಿಷ್ಠಿತನಾಗುವುದಾದರೂ ಹೇಗೆ? ಯಾವುದೇ ಕ್ಷೇತ್ರದಲ್ಲಾದರೂ ಆತ ಯಶಸ್ಸನ್ನು ಪಡೆಯುವುದು ಹೇಗೆ? ಜಗತ್ತನ್ನೂ, ಜೀವನವನ್ನೂ ನೋಡುವ ದೃಷ್ಟಿವೈಶಾಲ್ಯವೇ ಪ್ರಾಪ್ತಿಯಾಗದ ಒಂದು ಮಗು ಮುಂದೆ ಬೆಳೆದು ಏನು ಸಾಧನೆ ಮಾಡೀತು? ಬದುಕಿನಲ್ಲಿ ಬರುವ ಸಂದಿಗ್ಧಸ್ಥಿತಿಗಳಲ್ಲಿ ‘ಇತ್ಥಮೇವ’ ಎಂದು ನಿರ್ಧರಿಸುವಂಥ ದಾರ್ಢ್ಯವನ್ನು ಬೆಳೆಸುವ ಶಿಕ್ಷಣವು ಪ್ರತಿಯೊಬ್ಬನಿಗೂ ಪ್ರಾಪ್ತವಾಗಬೇಕು. ಅನ್ಯಥಾ ಬದುಕಿನ ನಾನಾ ಸೆಳೆತಗಳಿಗೆ ಒಳಗಾಗಿ ಬದುಕೊಂದು ದಿಕ್ಕುತಪ್ಪಿದ ನೌಕೆಯಂತಾದೀತು. ಹಾಗಾಗಿ ಯುಕ್ತಾಯುಕ್ತ-ಕರ್ತವ್ಯಾಕರ್ತವ್ಯ-ಗ್ರಾಹ್ಯಾಗ್ರಾಹ್ಯ ವಿವೇಕವನ್ನರಳಿಸುವ, ಸುಸಂಸ್ಕಾರೋದ್ದೀಪಕವಾದ ಶಿಕ್ಷಣವನ್ನು ಮಗುವಿಗೆ ಕೊಡಬೇಕು. ಸ್ವಯಂಪ್ರಜ್ಞೆ ಇಲ್ಲದ ಯಾವುದೇ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದೇ ಇಲ್ಲ. ಒಬ್ಬನು ಬಾಲ್ಯಾದಾರಭ್ಯ ಮರಣಾಂತವಾಗಿ ಸತ್ಪ್ರೇರಣೆ, ಸದ್ವಾಸನೆಗಳಿಂದ ಕೂಡಿ, ತನಗೂ, ತನ್ನವರಿಗೂ, ಸಮಾಜಕ್ಕೂ, ದೇಶಕ್ಕೂ ಹಿತಸಾಧಕನಾಗಬೇಕೆಂದರೆ ಅದಕ್ಕೆ ಒಂದೇ ಒಂದು ಸಾಧನ – ‘ಸಂಸ್ಕೃತ ಶಿಕ್ಷಣ’.
 
ಸಂಸ್ಕೃತವೆಂದ ಕೂಡಲೇ ಕೆಲವರು ಹಾವನ್ನು ಮೈಮೇಲೆ ಎಸೆದವರಂತೆ ಆಡುತ್ತಾರೆ. ಅವರ ಅಜ್ಞಾನ ಅಷ್ಟು ದಪ್ಪಗಿದೆ ಎಂದಷ್ಟೇ ಭಾವಿಸಿ ನಾವು ಮುಂದಕ್ಕೆ ಹೋಗೋಣ. ನಮ್ಮನ್ನು ಬೌದ್ಧಿಕ ನಂಪುಂಸಕತೆಗೆ ತಳ್ಳುವ ಯಾವುದೇ ‘ಇಸಂ’ಗಳಿಗೆ ಒಳಗಾಗಿ ಪ್ರಜ್ಞಾಂಧರಾದವರಿಗೆ ಎಷ್ಟು ಹೇಳಿದರೂ ಅಷ್ಟೇ. ಇರಲಿ, ಇನ್ನು ಕೆಲವರಿಗೆ ‘ಸಂಸ್ಕೃತ ಶಿಕ್ಷಣ’ವೆಂದ ಕೂಡಲೇ ನೆನಪಾಗುವುದು ‘ರಾಮಃ ರಾಮೌ ರಾಮಾಃ’ ಎಂದು ಪರೀಕ್ಷೆಗಾಗಿ ಬಾಯಿಪಾಠ ಮಾಡಿಸುವ ಶಾಲೆಯ ಶಿಕ್ಷಣ. ಇಲ್ಲಿ ಉದ್ದಿಷ್ಟವಾಗಿರುವುದು ಅದಲ್ಲ. ಸಂಸ್ಕೃತವೆಂದರೆ ಅದೊಂದು ಶಬ್ದಗಳ ಗೊಂಡಾರಣ್ಯವಾಗಿರುವ ಭಾಷೆ ಮಾತ್ರವಲ್ಲ. ಹಾಗೆ ಅನಿಸುವಂತೆ ಮಾಡಿದ್ದು ಈಗಿನ ಶಿಕ್ಷಣವ್ಯವಸ್ಥೆ. ಅದು ಒಬ್ಬರಿಂದೊಬ್ಬರಿಗೆ ಸಂವಹನಕ್ಕಷ್ಟೇ ಮೀಸಲಾಗಿರುವ ‘ಲ್ಯಾಂಗ್ವೇಜ್’ ಅಲ್ಲ, ಬದಲಿಗೆ ಅದು ಸಂಸ್ಕೃತಿಯ ವಾಹಕವೂ ಆಗಿದೆ. ವಿಶ್ವದ ಬೇರೆಲ್ಲ ಭಾಷೆಗಳಿಗಿಂತ ಈ ವಿಷಯದಲ್ಲಿ ಪ್ರಭಾವಕಾರಿಯೂ, ಸಂಪದ್ಭರಿತವೂ ಆಗಿದೆ. ಆತ್ಮಕಲ್ಯಾಣವನ್ನು ಬಯಸುವ ಎಲ್ಲರಿಗೂ ಇದು ಸ್ವಾತ್ಮೋದ್ಧಾರದ ಮಾರ್ಗವನ್ನು ದರ್ಶಿಸುವ ಜ್ಞಾನದ ಶೇವಧಿಯೇ ಆಗಿದೆ.
ಒಬ್ಬ ಶಿಷ್ಟನ ಜೀವನವನ್ನೂ, ಸಂಸ್ಕೃತವನ್ನೂ ಬೇರೆಯಾಗಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ ಜಗತ್ತಿನ ಒಳಿತುಗಳನ್ನೆಲ್ಲ ಒಳಗೊಂಡಿರುವ, ತನ್ಮೂಲಕ ಇಹ-ಪರವೆರಡರಲ್ಲೂ ಶ್ರೇಯಸ್ಸಾಧನವಾಗಿರುವ ಸಂಸ್ಕೃತವು ಪೂರ್ಣತೆಯನ್ನು ಸಿದ್ದಿಸಿಕೊಂಡ ಎಲ್ಲ ಮಹಾತ್ಮರ ಪದಚಿಹ್ನೆಯೇ ಆಗಿದೆ. ಸಂಸ್ಕೃತವೆಂದರೆ ಅದೊಂದು ಜೀವನದ ಮಾರ್ಗ. ಹಾಗಾಗಿ ನಮ್ಮ ಮಕ್ಕಳು ಸಂಸ್ಕೃತವನ್ನು ಯಾವಾಗಿನಿಂದ ಕಲಿಯಲು ಆರಂಭಿಸಬೇಕು ಎಂಬ ಪ್ರಶ್ನೆಯೇ ಸಾಧುವಲ್ಲ. ಎಲ್ಲ ವಯಸ್ಸಿನವರಿಗೂ ಆಯಾ ಹಂತದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯ, ಅನುಸರಿಸಬೇಕಾದ ಪದ್ಧತಿಗಳು, ಮಾಡಬೇಕಾದ ಕರ್ತವ್ಯಗಳು ಇದ್ದೇ ಇರುತ್ತವೆ. ಅವನ್ನೆಲ್ಲ ಬೋಧಿಸುವ ಸಂಸ್ಕೃತದ ಸಾರವನ್ನು ನಾವು ಮಕ್ಕಳಿಗೆ ಜನ್ಮತಃ ಕೊಡುತ್ತ ಬರಬೇಕು. ಸಂಸ್ಕೃತವನ್ನು ಕಲಿಯುವುದೆಂದರೆ ಅದು ಭಾಷೆಯನ್ನು ಕಲಿಯುವುದೆಂದಷ್ಟೇ ಅಲ್ಲ, ಅದು ಆರಂಭಿಕ ಹಂತ.
ನಾವು ಭಾಷೆಗಿಂತಲೂ ಮೊದಲೇ ಸಂಸ್ಕೃತದ ಮೌಲ್ಯಗಳನ್ನು ಕಲಿಯಲು ಆರಂಭಿಸುತ್ತೇವೆ. ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳಲು ತೊಡಗುವುದರಿಂದಲೇ ಇದು ಆರಂಭವಾಗಬಹುದು.
ವೇದ, ಪುರಾಣ, ರಾಮಾಯಣ-ಮಹಾಭಾರತ, ಕಾವ್ಯಗಳು, ಸ್ಮೃತಿಗಳು, ಉಪನಿಷತ್ತುಗಳು ಇವುಗಳೇ ನಮ್ಮ ಜೀವನದ ಪಥದರ್ಶಕಗಳು. ಇವುಗಳ ಜೊತೆಗೆ ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ, ಮೀಮಾಂಸಾ, ವೇದಾಂತ, ಬೌದ್ಧ, ಜೈನ ಮುಂತಾದ ದರ್ಶನಗಳು. ಆಯುರ್ವೇದ, ಧನುರ್ವೇದ, ಆರೋಗ್ಯ, ರಾಜಕೀಯ, ಅರ್ಥ, ರಕ್ಷಣೆ, ರಾಜ್ಯಾಂಗ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಶಾಸ್ತ್ರಗಳು, ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೌತಿಷ, ಕಲ್ಪ ಎಂಬ ವೇದಾಂಗಗಳು, ಇನ್ನೂ ಅಸಂಖ್ಯ ಜ್ಞಾನಶಾಖೆಗಳು.
ಭಾರತೀಯ ಜೀವನದ ಪ್ರತಿಪದನಿಕ್ಷೇಪದಲ್ಲೂ ಇವುಗಳು ಪ್ರತಿಪಾದಿಸಿಕೊಂಡು ಬಂದಿರುವ ತತ್ತ್ವಗಳಿವೆ. ಸಂಸ್ಕೃತವೆಂದರೆ ಇವುಗಳೆಲ್ಲದರ ಒಟ್ಟಂದ. ಇವುಗಳು ನಮ್ಮ ಇಹ-ಪರಗಳೆರಡರ ಕಲ್ಯಾಣದ ಮಾರ್ಗವನ್ನು ಬೋಧಿಸುತ್ತವೆ. ಒಬ್ಬ ಜೀವವಾಗಿಯಷ್ಟೇ ಹುಟ್ಟುವವನನ್ನು ವ್ಯಕ್ತಿಯನ್ನಾಗಿಸುವ ಸಂಸ್ಕಾರಕಗಳಿವು. ಒಂದೆಡೆ ವೇದವೆಂದರೆ ಪೂಜೆ-ಮಂತ್ರಗಳೆಂದಷ್ಟೇ ಭಾವಿಸುವಂಥ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ಹುಟ್ಟಿಕೊಂಡ ಮೌಢ್ಯಾವೃತ ಪ್ರಭೃತಿಗಳು, ಇನ್ನೊಂದೆಡೆ ತಮ್ಮ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವೇದ-ಶಾಸ್ತ್ರಗಳಲ್ಲಿ ನಿಗೂಹಿತವಾಗಿರುವ ಜ್ಞಾನರಾಶಿಯನ್ನು ಕಂಡುಕೊಳ್ಳಲು ಸಂಸ್ಕೃತದ ಅಧ್ಯಯನ ಕೇಂದ್ರವನ್ನು ತೆರೆದು ಸಂಶೋಧನೆಗೆ ತೊಡಗಿಕೊಂಡಿರುವ ವೈದೇಶಿಕರು. ಇಲ್ಲಿ ಸಂಸ್ಕೃತವನ್ನು ಓದಿದವನೆಂದರೆ ಅಸಡ್ಡೆಯಿಂದ ಕಾಣುವ ಆತ್ಮವಿಸ್ಮೃತಿಯ, ಪಾಶ್ಚಾತ್ತ್ಯದ ಅಂಧಾನುಕರಣೆಯ, ಸ್ವನಿರಭಿಮಾನಿ ಮನಃಸ್ಥಿತಿಯ ಕೂಪಮಂಡೂಕರು ತುಂಬಿ ತುಳುಕುತ್ತಿದ್ದರೆ, ಭಾರತೀಯತೆಯಲ್ಲಿ ಆತ್ಮಕಲ್ಯಾಣದ ನಿಜವಾದ ಸತ್ತ್ವ ಕಂಡು ಅದರತ್ತ ಸೆಳೆಯಲ್ಪಡುತ್ತಿರುವ ಪಾಶ್ಚಾತ್ತ್ಯರು ಮತ್ತೊಂದೆಡೆ. ಹೀಗಿರುವಾಗ ನಾವು ಕಳೆದುಕೊಳ್ಳುತ್ತಿರುವುದರ ಪರಿಜ್ಞಾನವೂ ಇಲ್ಲದೇ ಅದೆಷ್ಟೊಂದರಿಂದ ವಂಚಿತರಾಗುತ್ತಿದ್ದೇವೆ!
ನಾವಂತೂ ಸಂಸ್ಕೃತದ ಗಂಧ ಆಘ್ರಾಣಿಸಲು ಸಾಧ್ಯವಾಗಲಿಲ್ಲ. ಆದರೆ ಸಂಸ್ಕೃತದಲ್ಲಿರುವ ಜ್ಞಾನಶಾಖೆಗಳ ಪರಿಚಯಕ್ಕಾಗಿಯಾದರೂ ನಮ್ಮ ಮಕ್ಕಳಿಗೆ ಸಂಸ್ಕೃತವನ್ನು ಬೋಧಿಸೋಣ. ಭಾಷೆ ಅದರ ಮೊದಲ ಹಂತವಷ್ಟೆ, ಅದು ಒಂದು ಸೇತುವೆ. ಅದರ ಜೊತೆಗೇ ಸಂಸ್ಕೃತದ ಶಾಸ್ತ್ರಗಳ, ದರ್ಶನಪ್ರಪಂಚದ ಪ್ರವೇಶವಾಗಬೇಕು. ಬದುಕಿನ ಯಾವ ಆಯಾಮವನ್ನೂ ಬಿಡದಂತೆ ಆವರಿಸಿರುವ ಈ ಕಾವ್ಯ-ಶಾಸ್ತ್ರಪ್ರಪಂಚದ ಅಧ್ಯಯನವು ಪ್ರತಿ ವ್ಯಕ್ತಿಯ ಸಮಗ್ರ ವಿಕಾಸಕ್ಕೆ ನೆರವಾಗಬಲ್ಲುದು. ಬದುಕಿನ ವಿಸ್ತಾರ, ಔದಾರ್ಯಗಳೆಲ್ಲ ಮನದಟ್ಟಾಗುವುದು. ಸೋಲಿನ ಹತಾಶ ಮನಃಸ್ಥಿತಿಯಿಂದ ಗೆಲುವಿನತ್ತ ಸಾಗಲಿಕ್ಕೆ ಇವೆಲ್ಲ ಸಾಧನಗಳು. ಬದುಕಿನ ರಂಗುರಂಗಿನ ಚಾಕಚಕ್ಯತೆಗೆ ಮರುಳಾಗದೇ, ಇದರ ಅಶಾಶ್ವತತೆಯನ್ನು ಅರ್ಥೈಸಿಕೊಂಡು ನಿತ್ಯತ್ವದೆಡೆಗೆ ತುಡಿಯಲು, ನಿತ್ಯೋತ್ಸಾಹಿಯಾಗಿರಲು ಈ ಅಧ್ಯಯನ ಖಂಡಿತವಾಗಿಯೂ ಸಹಾಯಕವಾಗಬಲ್ಲುದು.
ಸಂಸ್ಕೃತದ ಅಧ್ಯಯನ ಯಾವಾಗ ಹೇಗೆ?:
ಸಂಸ್ಕೃತವು ವಯಸ್ಸಿನ ನಿರ್ಬಂಧವುಳ್ಳದ್ದಲ್ಲ, ಬದಲಿಗೆ ಆಯುಷ್ಯಪೂರ್ತಿ ಉಪಾಸಿಸಬೇಕಾದ ಸಂಗತಿ ಎಂದದ್ದು ಸರಿಯಷ್ಟೆ. ಶಾಲೆಯ ಮತ್ತು ಮನೆಯ ಒಳಗೂ, ಹೊರಗೂ ಸಂತತವಾಗಿ ನಡೆಯಬೇಕಾದ ಪ್ರಕ್ರಿಯೆಯಿದು. ಮಗು ಚಿಕ್ಕದಾಗಿದ್ದಾಗಲೇ ಸ್ತೋತ್ರಗಳು, ಅಮರಕೋಶಗಳನ್ನೆಲ್ಲ ಕಂಠಸ್ಥ ಮಾಡುವುದರಿಂದಾರಂಭಿಸಿ, ಪಂಚತಂತ್ರದಂಥ ನೀತಿಕಥೆಯನ್ನು ಕೇಳುವ, ಬೇಸಗೆಶಿಬಿರದಲ್ಲಿ ಪೂಜೆಯ ಮಂತ್ರಗಳನ್ನು ಕಲಿಯುವ, ಭಗವದ್ಗೀತೆಯ ಶ್ಲೋಕಗಳನ್ನು ಅಭ್ಯಸಿಸುವ ಮೂಲಕ ಮನೆಯಲ್ಲಿ ಸಂಸ್ಕೃತದ ಸಂಸ್ಕಾರವಾಗಬೇಕು. ಪದಗಳ ಉಚ್ಚಾರಣೆಯ ಶುದ್ಧಿ, ಪದಸಂಗ್ರಹದಿಂದಾರಂಭಿಸಿ, ಶಬ್ದಾರ್ಥ ಜಿಜ್ಞಾಸೆಯ ಹಂತಕ್ಕೆ ಮಗು ಏರುವ ಹೊತ್ತಿನಲ್ಲಿ ಶಾಲೆಯಲ್ಲೂ ಒಂದು ಪಠ್ಯವಿಷಯವಾಗಿ ಸಂಸ್ಕೃತವನ್ನು ಸ್ವೀಕರಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತವನ್ನು ಅವಶ್ಯವಾಗಿ ಓದಬೇಕು. ಯಾವ ಶಾಲೆಯಲ್ಲಿ ಈ ವಿಷಯವಿಲ್ಲವೋ, ಅಲ್ಲಿ ಪಾಲಕರು ಆಗ್ರಹದಿಂದ ಆರಂಭಿಸುವಂತೆ ಮಾಡಬೇಕು.
ನಿಮ್ಮ ಮಗು ಬೆಳೆದು ಮುಂದೆ ಯಾವ ಉದ್ಯೋಗವನ್ನೇ ಮಾಡಿದರೂ ಧರ್ಮಮಾರ್ಗ ಬಿಡದೇ, ನ್ಯಾಯಮಾರ್ಗದಲ್ಲಿ ನಡೆಯುವಂತಾಗಲು ಆ ಮಗುವಿನ ಎಲ್ಲ ಹಂತದಲ್ಲೂ ಸಂಸ್ಕೃತದ ಸಂಬಂಧ ಬೆಳೆದೇ ಇರುವಂತೆ ನೋಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ನಿಮ್ಮ ಮಗನೋ ಮಗಳೋ ಆಸಕ್ತಿ ತೋರಿದರೆ ಸಾಕ್ಷಾತ್ ಶಾಸ್ತ್ರಾಧ್ಯಯನಕ್ಕೆ ಕಳಿಸಬಹುದು. ಆ ಮೂಲಕ ಒಬ್ಬ ವಿದ್ವಾಂಸನನ್ನೂ, ನಿಜವಾದ ಪ್ರಜ್ಞಾವಂತನನ್ನೂ ಸಮಾಜಕ್ಕೆ ಕೊಟ್ಟಂತಾಗುತ್ತದೆ. ಈಗಂತೂ ದೇಶದಲ್ಲಿ ಬೇಕಾದಷ್ಟು ಸಂಸ್ಕೃತ ಗುರುಕುಲ, ಮಹಾವಿದ್ಯಾಲಯಗಳು, ವಿಶ್ವವಿದ್ಯಾಲಯಗಳಿವೆ. ಶಾಸ್ತ್ರ-ದರ್ಶನಗಳ ಬೇಕಾದಷ್ಟು ವಿಭಾಗಗಳಲ್ಲಿ ಒಳ್ಳೊಳ್ಳೆಯ ವಿದ್ವಾಂಸರುಗಳಿದ್ದಾರೆ. ಅವರ ಬಳಿ ಶಾಸ್ತ್ರಾಧ್ಯಯನ ಕೈಗೊಂಡು ಪ್ರಾಚ್ಯವಿದ್ಯೆಯನ್ನು ಅರಿತುಕೊಳ್ಳಬಹುದು. ಸಂಸ್ಕೃತವನ್ನು ಕಲಿತು ಅಧ್ಯಾಪಕನೇ ಆಗಬೇಕೆಂದಿಲ್ಲ. ಯಾವ ಉದ್ಯೋಗವನ್ನಾದರೂ ಮಾಡಬಹುದು.
ಪ್ರಾಚ್ಯ-ಪಾಶ್ಚಾತ್ತ್ಯ ವಿದ್ಯೆಗಳೆರಡರಲ್ಲೂ ಪ್ರಾವೀಣ್ಯ ಗಳಿಸಿದವರಿಗೆ ಇಂದು ಜಗತ್ತಿನಲ್ಲಿ ಬೇಕಾದಷ್ಟು ಸ್ಥಾನ-ಮಾನಗಳಿವೆ. ಪ್ರಾಚೀನಜ್ಞಾನವನ್ನು ಆಧುನಿಕತೆಗೆ ಬೇಕಾದಂತೆ ಬಾಗಿಸುವ ನಿಪುಣರು ಇಂದಿನ ಅಗತ್ಯ.
ಯೋಗ, ಆಯುರ್ವೇದ, ದರ್ಶನ, ಶಾಸ್ತ್ರಗಳನ್ನೆಲ್ಲ ಓದಿಕೊಂಡವರು ಅದೆಷ್ಟು ಜನ ಇಂದು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿಲ್ಲ? ಸಂಸ್ಕೃತವನ್ನು ಓದಿಕೊಂಡವರ ಬಗ್ಗೆ ಮೂಗು ಮುರಿಯುವ ಕಾಲ ಹೋಯಿತು. ಇನ್ನೇನಿದ್ದರೂ ‘ಸಂಸ್ಕೃತಂ ಪಠ, ಆಧುನಿಕೋ ಭವ’ ಎಂಬುದೇ ಮೂಲಮಂತ್ರ.
ನಿಮ್ಮ ಮಗುವಿಗೆ ಸಂಸ್ಕೃತದ ಸಂಸ್ಕಾರವಿಲ್ಲದಿದ್ದರೆ ಮುಂದೊಂದು ದಿನ ನಿಜಾರ್ಥದಲ್ಲಿ ಬಹಳ ವಿಷಯಗಳಲ್ಲಿ ಹಿಂದೆ ಬೀಳಬಹುದು ಎಂದು ಅನಿಸುತ್ತದೆ. ನೈತಿಕತೆ, ಸಂಸ್ಕಾರ, ಧರ್ಮಪ್ರಜ್ಞೆ, ದೇಶಭಕ್ತಿ, ಕರ್ಮನಿಷ್ಠೆ, ತ್ಯಾಗಬುದ್ಧಿ, ವಿನೀತತೆ ಇತ್ಯಾದಿ ಎಲ್ಲ ಗುಣಗಳಿಂದ ನಮ್ಮನ್ನು ಮಂಡಿಸುವ ಸಂಸ್ಕೃತವನ್ನು ಕಲಿಯದೇ ಈ ವಿಷಯಗಳಲ್ಲಿ ನಾವು ನಮ್ಮನ್ನೇ ಹಿಂದಕ್ಕಿಟ್ಟುಕೊಂಡಂತೆ. ಹಾಗೆ ಆಗುವುದು ಬೇಡ. ಬಾಲ್ಯದಿಂದ ವೃದ್ಧಾಪ್ಯದವರೆಗೆ ಈ ಸಂಸಾರವೃಕ್ಷದ ಸುಮಧುರ ಫಲದಂತಿರುವ ಸಂಸ್ಕೃತವನ್ನು ನಾವೆಲ್ಲ ಆಸ್ವಾದಿಸೋಣ.
Dr. Vishwanth Sunkasala

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಂಸ್ಕೃತವನ್ನು ಕಾಪಾಡಿಕೊಂಡು ಬರುವುದು ಈ ದೇಶದ ವಿದ್ಯಾವಂತರ ಕರ್ತವ್ಯ : ವಿಶೇಷ ಲೇಖನ

Mon Aug 3 , 2020
ಸಂಸ್ಕೃತವನ್ನು ಕಾಪಾಡಿಕೊಂಡು ಬರುವುದು ಈ ದೇಶದ ವಿದ್ಯಾವಂತರ ಕರ್ತವ್ಯ (ಶ್ರಾವಣಪೂರ್ಣಿಮೆ ರಕ್ಷಾಬಂಧನ, ಉಪಾಕರ್ಮ ಹಬ್ಬಗಳಿಗೆ ಪ್ರಸಿದ್ಧವಾಗಿರುವಂತೆ ‘ಸಂಸ್ಕೃತ ದಿನ’ವಾಗಿಯೂ ಪ್ರಸಿದ್ಧಿ ಹೊಂದಿದೆ. ಭಾರತೀಯ ಸಭ್ಯತೆಯ ಮೂರ್ತರೂಪವಾದ ಸಂಸ್ಕೃತವು ಈ ದೇಶದ ವಿಭಿನ್ನ ಜನರನ್ನು ಏಕಸೂತ್ರದಲ್ಲಿ ಕಟ್ಟುವ ಶಕ್ತಿ ಹೊಂದಿದೆ. ಇಂತಹ ಸಂಸ್ಕೃತ ಭಾಷೆ ಹಾಗೂ ಇದನ್ನು ಪ್ರಚುರಪಡಿಸಿದ ‘ಸಂಸ್ಕೃತ ಭಾರತೀ’ಕುರಿತು ಈ ಲೇಖನ.)\ ಲೇಖಕರು: ಶ್ರೀ ಲಕ್ಷ್ಮೀನಾರಾಯಣ, ಶೃಂಗೇರಿ, ಸಂಸ್ಕೃತ ಭಾರತೀ ಪ್ರಾಂತ ಸಂಘಟನಾ ಮಂತ್ರಿ, ಉತ್ತರ ಕರ್ನಾಟಕ. “ಗ್ರೀಕ್ […]