ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ..

ಲೇಖನ: ಚಂದ್ರಶೇಖರ ಆಚಾರ್ಯ
(ಅಕ್ಟೊಬರ್ ೨೫ ರಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ)

ಶ್ರೀ ರಾಮ ನಡೆದ ದಾರಿ ರಾಮಾಯಣ. ಸೂರ್ಯನ ಗತಿ ಆದರಿಸಿದ ಚಲನೆ ಉತ್ತರಾಯಣ, ದಕ್ಷಿಣಾಯನ.. ಅದೇ ದೃಷ್ಟಿಯಲ್ಲಿ ಯೋಚಿಸುವುದಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ತೊಂಬತ್ತೈದು ವರ್ಷಗಳ ಸುಧೀರ್ಘ ಪಯಣವನ್ನು ಸಂಘಾಯಾನ ಎಂದು ಗುರುತಿಸುವುದಾದರೆ ತಪ್ಪೇನಿಲ್ಲ. ಈ ಸಂಘಾಯಾನ ಒಪ್ಪಿ ಆದರಿಸುವವರಿಗೆ ಹೇಗೆ ಶ್ರದ್ಧೆಯ ವಿಷಯವೋ, ಅಂತೆಯೇ ಸಂಘವನ್ನು ವೈಚಾರಿಕವಾಗಿ ವಿರೋಧಿಸುವವರಿಗೂ ಅಧ್ಯಯನ ವಿಷಯ. ಪ್ರತಿಕೂಲ, ಅನಾನುಕೂಲ ಪರಿಸ್ಥಿತಿ ಮತ್ತು ಸಂಧರ್ಭಗಳಲ್ಲೂ ಸಂಘದ ಕಾರ್ಯ ಮತ್ತು ಕಾರ್ಯಕರ್ತರ ವಿಶ್ವಾಸ ಎಳ್ಳಿನೀತೂ ಬದಲಾಗದೆ ಇರಲೂ ಕಾರಣವಾದ ಗಟ್ಟಿಯಾದ ವಿಚಾರ ಶಕ್ತಿ ಯಾವುದು? ಆ ಕುರಿತಂತೆ ಸ್ವಲ್ಪ ಆಲೋಚಿಸೋಣಾ..

ಈ ವಿಜಯದಶಮಿಗೆ ಸಂಘಕ್ಕೆ ಸರಿಯಾಗಿ ತೊಂಬತ್ತೈದು ವರ್ಷ. ಒಂದು ಸಂಘಟನೆಯಾಗಲಿ ಒಂದು ವ್ಯವಸ್ಥೆಗೆ ಆಗಲಿ ತೊಂಬತ್ತೈದು ವರ್ಷ ಎಂಬುದು ಸಣ್ಣ ಅವಧಿ ಅಲ್ಲ. ಇನ್ನೂ ಐದು ವರ್ಷ ಕಳೆದರೆ ಒಂದು ಶತಮಾನವಾಗುತ್ತದೆ ಸಂಘಕ್ಕೆ. ಆದರೆ ಇವತ್ತಿಗೂ ತನ್ನ ಕಾರ್ಯ ಶುದ್ಧತೆ, ಬದ್ಧತೆಯಲ್ಲಿ ಯಾವ ವ್ಯತ್ಯಾಸವನ್ನು ಕಂಡಿಲ್ಲ ಮಾಡಿಲ್ಲ. ಕಾರ್ಯ ಶೈಲಿಯಲ್ಲಿ, ಗಣವೇಷ(ಸಮವಸ್ತ್ರ) ದಲ್ಲಿ ಬದಲಾವಣೆ ಆಗಿರಬಹುದು. ಅದೇ ಸಂಘ ಕಾರ್ಯದ ವಿಶೇಷ.

1925 ರ ಇದೇ ವಿಜಯದಶಮಿಯ ದಿನ ನಾಗಪುರದ ರೇಶಂಭಾಗ್ ನ ಮೈದಾನದಲ್ಲಿ ಪರಮ ಪೂಜನೀಯ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಜೀ ಯವರು ಬಿತ್ತಿದ ಬೀಜವೊಂದು ಇಂದು ದೇಶದ ಗಡಿ ರೇಖೆಗಳನ್ನು ಮೀರಿ ವಿಶ್ವದ 40 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಫಲ ನೀಡುತ್ತಿದೆ. ವಾಸ್ತವವಾಗಿ ಡಾ. ಹೆಗಡೇವಾರ್ ಜೀ ಕಲಿತಿದ್ದು ವೈದ್ಯಕೀಯ ಶಿಕ್ಷಣ, ಆದರೆ ಚಿಕಿತ್ಸೆ ನೀಡಲು ಆಯ್ದುಕೊಂಡಿದ್ದು ಮಾತ್ರ ರೋಗಗ್ರಸ್ತ ಹಿಂದು ಸಮಾಜವನ್ನು. ಚಿಕಿತ್ಸೆ ವಿಧಾನ ಮಾತ್ರ ಅತೀ ಸರಳ, ಸುಂದರ. ಒಂದು ನಿಶ್ಚಿತ ಸ್ಥಾನದಲ್ಲಿ, ನಿಶ್ಚಿತ ಸಮಯದಲ್ಲಿ ಒಟ್ಟು ಸೇರುವುದೇ ಈ ಸರಳ ಸೂತ್ರ. ಹೇಳುವುದಕ್ಕೆ ತುಂಬಾ ಸರಳ, ಆದರೆ ಅನುಷ್ಠಾನಕ್ಕೆ ತರುವುದು ಇದೆಯಲ್ಲ ಅದೇ ಸವಾಲು.. ಯಾಕೆಂದರೆ ಒಟ್ಟುಗೂಡಿಸಲು ಹೊರಟಿದ್ದು ಹಿಂದು ಸಮಾಜವನ್ನು.. ! ಆದರೆ ಅದು ಸಾಧ್ಯ ಆಯಿತು ಎಂಬುದೇ ಒಂದು ದೊಡ್ಡ ಪವಾಡ, ಮಾಯಾಜಾಲ.

ಇವತ್ತು ಸಂಘದ ತನ್ನದೇ ಆದ 42 ಕ್ಕೂ ಹೆಚ್ಚಿನ ಅಖಿಲ ಭಾರತೀಯ ಸ್ವರೂಪದ ವಿವಿಧಕ್ಷೇತ್ರ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಅವೆಲ್ಲವೂ ತಮ್ಮದೇ ಕ್ಷೇತ್ರದಲ್ಲಿ ಅತ್ತ್ಯುಚ್ಛ ಶ್ರೇಣಿಯಲ್ಲಿ ಕೆಲಸ ಮಾಡುತ್ತಿದೆ.ಆಶ್ಚರ್ಯವೆಂದರೆ ಈ ಪರಿವಾರ ಸಂಘಟನೆಯನ್ನು ಸಂಘ ತಾನೇ ಆರಂಭಿಸಿದಲ್ಲ. ಸಂಘದ ಸ್ವಯಂಸೇವಕರು ಆಯಾಯ ಸಂಧರ್ಭಗಳಲ್ಲಿ ಈ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು.ಹೀಗೆ ಬೆಳೆದ ಸಂಘಟನೆಗಳಿಗೆ ಸಂಘ ಮಾತೃ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿ ಪೋಷಿಸಿತು. ಆಶ್ಚರ್ಯಎಂದರೆ ಈ ಎಲ್ಲ ಸಂಘಟನೆಗಳು ಆಯಾಯ ಕ್ಷೇತ್ರಗಳಲ್ಲಿ ಅತೀ ದೊಡ್ಡ ಮತ್ತು ಶ್ರೇಷ್ಠ ಸಂಘಟನೆಗಳಾಗಿ ರೂಪುಗೊಂಡಿದೆ. ಸಂಘ ಎಂಬ ಮಹಾ ಛತ್ರದ ಅಡಿಯಲ್ಲಿ ಈ ಎಲ್ಲವೂ ರಾಷ್ಟ್ರ ಕಾರ್ಯ ಮಾಡುತ್ತಿದೆ. ದಾರಿ ಬೇರೆ ಬೇರೆ, ಗುರಿ ಮಾತ್ರ ಒಂದೇ. ಪರಮ್ ವೈಭವನ್ ನೇತುಮ್ ಏತತ್ ಸ್ವರಾಷ್ಟ್ರಮ್..

ಸಂಘದ ಕಾರ್ಯಕರ್ತರಲ್ಲಿ ಈ ಪರಿಯ ಶುದ್ಧತೆ, ಬದ್ಧತೆ ಕಂಡು ಬರುವುದಕ್ಕೆ ಏನು ಕಾರಣ? ಇಲ್ಲಿ ಯಾವ ಬಗೆಯ ಮೌಲಿಕ, ನೈತಿಕ ಶಿಕ್ಷಣ ದೊರೆಯುತ್ತದೆ? ಈಶಾನ್ಯ ರಾಜ್ಯಗಳಿಂದ ಮಕ್ಕಳನ್ನು ನಮ್ಮ ರಾಜ್ಯಕ್ಕೆ ಸಂಘದ ಮೂಲಕ ವಿದ್ಯಾಭ್ಯಾಸಕ್ಕಾಗಿ ಕರೆ ತರುವ ವ್ಯವಸ್ಥೆ ಇದೆ. ಇಲ್ಲಿ ಆ ಮಕ್ಕಳು ಅವರು ಸಂಘದ ಕಾರ್ಯಕರ್ತರ ಮನೆಗಳಲ್ಲಿ, ಸಂಘದ ಕಾರ್ಯಾಲಯಗಳಲ್ಲಿ ಇದ್ದು ಓದುತ್ತಾರೆ. ಆಲೋಚಿಸಿ ನೋಡಿ ನಾಗಾಲ್ಯಾಂಡ್ ಗೋ, ಮಣಿಪುರಕ್ಕೊ ಇಲ್ಲಿಂದ ಹೋಗಲು ರೈಲಿನಲ್ಲಿ 3-4 ದಿನಗಳ ಪಯಣ. ಅಷ್ಟು ದೂರದಿಂದ ಬರುವ ಆ ವಿದ್ಯಾರ್ಥಿಗಳನ್ನು ಇಲ್ಲಿ ತಮ್ಮ ಮನೆ ಮಕ್ಕಳಂತೆ ಪಾಲಿಸಿ ಪೋಷಿಸುವ ಭಾವ ನಿರ್ಮಾಣವಾಗುವುದು ಹೇಗೆ? ದೈಹಿಕ ಚರ್ಯೆ ಬೇರೆ, ಭಾಷೆ ಗೊತ್ತಿಲ್ಲ, ಜಾತಿಯ ವಿಷಯವೇ ಇಲ್ಲ,ಅಷ್ಟೇಕೆ ಆ ಮಕ್ಕಳ ಹೆಸರು ಹಿಡಿದು ಕರೆಯುವುದೇ ದೊಡ್ಡ ಸವಾಲು.ಆದರೂ ಇಲ್ಲಿ ಆ ಮಕ್ಕಳು ಇಲ್ಲಿಯವರ ಹಾಗೆ ಎಲ್ಲರೊಂದಿಗೆ ಅರಿತು ಬೆರೆತು ಚೆನ್ನಾಗಿ ಓದುವ ಹಾಗೆ ವಾತಾವರಣ ನಿರ್ಮಾಣ ಮಾಡಿ ಕೊಡುತ್ತಾರಲ್ಲ, ಎಲ್ಲಿಂದ ಬಂತು ಈ ಸಂಸ್ಕಾರ? ತಮ್ಮ ಸೋದರ ಸಂಬಂಧಿ ಮಕ್ಕಳನ್ನೇ ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲದ ಈ ಕಾಲಘಟ್ಟದಲ್ಲಿ ಇದು ಹೇಗೆ ಸಾಧ್ಯವಾಗುತ್ತದೆ? ಯಾವ ವಿಶ್ವವಿದ್ಯಾಲಯದಲಿ ಈ ಬಗೆಯ ರಾಷ್ಟ್ರ ಜಾಗರಣದ ಅಂದರೆ ಈ ರಾಷ್ಟ್ರ ತನ್ನದು, ಇಲ್ಲಿ ಬಾಳಿ ಬದುಕುವ ಎಲ್ಲರೂ ತನ್ನವರೇ ಎಂಬ ಭಾವ ನಿರ್ಮಾಣದ ಶಿಕ್ಷಣ ದೊರೆಯುತ್ತದೆ?

ಇದು ಒಂದು ದಿನದಲ್ಲಿ ಎರಡು ದಿನದಲ್ಲಿ ಆದುದಲ್ಲ.ನಿತ್ಯ ನಿರಂತರವಾದ ತಪಸ್ವಿ, ನಿಸ್ವಾರ್ಥ ಮನೋಧರ್ಮದ ಗೃಹಸ್ಥ ಮತ್ತು ಸಂತ ಸದೃಶ ಪ್ರಚಾರಕ್ ಕಾರ್ಯಕರ್ತರಿಂದ ನಿರ್ಮಾಣವಾದುದು.. ಸಂಘ ಕಾರ್ಯಕ್ಕಾಗಿ ತಮ್ಮ ಇಡೀ ಬದುಕನ್ನು ಮೀಸಲಿಟ್ಟ ಒಬ್ಬ ಒಬ್ಬ ಪ್ರಚಾರಕರ ಬದುಕು ಅಂತೂ ಅಸದಳ.ಈ ಕಾರ್ಯಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಶ್ರೀಗಂಧದ ಕೊರಡಿನಂತೆ ತಾವು ಸವೆದರು ಸವೆಸಿದರು.ಲೊಕ್ಕಕ್ಕೆ ಮಾತ್ರ ಸುಗಂಧ ನೀಡಿದರು.ಆದರೆ ತಾವು ಮಾತ್ರ ಅನಾಮದೇಯರಾಗಿ, ಅಜ್ಞಾತವಾಗಿಯೇ ಉಳಿದರು. ಸಿದ್ಧಿ, ಪ್ರಸಿದ್ಧಿಗಳ ಹಂಬಲವಿಲ್ಲ, ಅಧಿಕಾರ, ಪ್ರಶಸ್ತಿ, ಪುರಸ್ಕಾರ, ಮನ್ನಣೆಗಳ ದಾಹವಿಲ್ಲ.ಹೆಸರು, ಕೀರ್ತಿ, ಸಂಪತ್ತು ಯಾವುದು ಇಲ್ಲದ ನಿಜ ಸಂತರಂತೆ ಬಾಳಿ ಬದುಕಿದ, ಬದುಕುತ್ತಿರುವ ಈ ತಪಸ್ವಿಗಳ ತಪೋ ಮಹಿಮೆಯಿಂದ ಸಂಘ ಈ ನೆಲೆಯಲ್ಲಿ ಗಟ್ಟಿಯಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಸಾವಿರ ಉದಾಹರಣೆಗಳು ಈ ಕುರಿತಂತೆ ಸಿಗುತ್ತದೆ.ಒಂದು ನಿದರ್ಶನ ಇಲ್ಲಿ ಕೊಟ್ಟರೆ ಅಪ್ರಸ್ತುತ ಆಗಲಾರದೇನೋ..!

ಅವರು ಹುಟ್ಟಿದ್ದು ಪುಣ್ಯಕ್ಷೇತ್ರ ಶೃಂಗೇರಿಯಲ್ಲಿ, ಬಾಲ್ಯದಿಂದಲೇ ಸ್ವಯಂಸೇವಕರಾಗಿದ್ದ ಅವರು ತಮ್ಮ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಮಂಗಳೂರು ಬಳಿಯ ಸುರತ್ಕಲ್ ಎನ್ ಐ ಟಿ ಕೆ ಸೇರಿದರು.ಅದು ಎಪ್ಪತ್ತರ ದಶಕ, ಅವತ್ತಿಗೆ ಎನ್ ಐ ಟಿ ಕೆ ಯಲ್ಲಿ ಪ್ರವೇಶ ಸಿಗುವುದೇ ದೊಡ್ಡ ಪ್ರತಿಷ್ಠೆಯ ವಿಷಯ. ಚಿನ್ನದ ಪದಕದೊಂದಿಗೆ ಅವರು ತಮ್ಮ ಇಂಜಿನಿಯರಿಂಗ್ ಮುಗಿಸಿದರು. ಅಷ್ಟು ಪ್ರತಿಭಾವಂತ ವಿದ್ಯಾರ್ಥಿ. ಬೆಳ್ಳಿಯ ತಟ್ಟೆಯಲ್ಲಿ ಚಿನ್ನದ ಚಮಚದಲ್ಲಿ ಉಣ್ಣುವಷ್ಟು ಸಂಪಾದಿಸುವ ಎಲ್ಲ ಅವಕಾಶಗಳು ಅವರ ಮುಂದೆ ಆಗ ಇತ್ತು.ಆದರೆ ಅವರು ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಬೇರಯೇ. ಸಂಘದ ಪ್ರಚಾರಕರಾದರು.ತಮ್ಮ ಸಂಘಟನಾ ಕುಶಲತೆಯಿಂದ ಹಂತ ಹಂತವಾಗಿ ತಾವು ಬೆಳೆದರು, ಸಂಘಟನೆಯನ್ನು ಬೆಳೆಸಿದರು.ಕರ್ನಾಟಕದಲ್ಲಿ ವನವಾಸಿ ಜನಗಳ ಮಧ್ಯೆ ಸಂಘ ಕಾರ್ಯ ನಡೆಸಬೇಕು ಎಂದು ಹಿರಿಯರು ಯೋಚಿಸಿದಾಗ ಆ ಜವಾಬ್ದಾರಿ ಹೆಚ್ಚುವರಿಯಾಗಿ ಇವರ ಹೆಗಲ ಮೇಲೆ ಬಂತು.ಮೊನ್ನೆ ಮೊನ್ನೆ ಕರ್ನಾಟಕ ವಿಧಾನಪರಿಷತ್ ಗೆ ನಾಮಕರಣ ಗೊಂಡ ಶ್ರೀ ಶಾಂತಾರಾಮ ಸಿದ್ದಿಯವರನ್ನು ಅವರ ಹೈಸ್ಕೂಲ್ ಹಂತದಲ್ಲೇ ಕಂಡು ಇವ ಮುಂದಕ್ಕೆ ತಯಾರು ಆದಾನು ಎಂದು ಗುರುತಿಸಿ ಅವರ ಪದವಿ ಶಿಕ್ಷಣ ಮುಗಿಯುವರೆಗೆ ಕಾದು, ಅವರ ಮೂಲಕ ಕರ್ನಾಟಕದಲ್ಲಿ ವನವಾಸಿ ಕಲ್ಯಾಣದ ಕಾರ್ಯಕ್ಕೆ ಶ್ರೀ ನಾಮ ಹಾಕಿಸಿದರು.ಆ ಕಾಲಕ್ಕೆ ಪಟ್ಟಣ,ನಗರಗಳಲ್ಲೇ ಸಂಘ ಕಾರ್ಯ ಮಾಡುವುದು ಕಷ್ಟ ಇತ್ತು.ಅಂಥವುದರಲ್ಲಿ ಸಾರಿಗೆ ಸಂಚಾರ ಸರಿ ಇಲ್ಲದ, ಬೆಟ್ಟ, ಗುಡ್ಡಗಳಲ್ಲಿ, ಕಾಡಿನಲ್ಲಿ ತಮ್ಮದೇ ಗುಂಪಿನಲ್ಲಿ ತಮ್ಮದೇ ಆಚಾರ, ಸಂಸ್ಕೃತಿಯೊಂದಿಗೆ ಬಾಳಿ ಬದುಕುತಿದ್ದ ಜನರೊಂದಿಗೆ ಕೆಲಸ ಆರಂಭಿಸುವುದು ಹೇಗೆ ಸಾಧ್ಯ? ಗದ್ದೆಯ ಬದುವಿನಲ್ಲಿ ರಾತ್ರಿ ಕಳೆದರು, ದೇವಸ್ಥಾನ, ಶಾಲೆಯ ಕಟ್ಟೆಯ ಮೇಲೆ ತೋಳನ್ನು ತಲೆ ದಿಂಬಾಗಿಸಿ ಒರಗಿದರು.. ಊಟ ತಿಂಡಿಗಳನ್ನು ಮರೆತರು.ಸತತವಾಗಿ ಓಡಾಡಿದರು, ನಗರ, ಗ್ರಾಮ, ವನವಾಸಿಗಳನ್ನು ಪರಸ್ಪರ ಜೋಡಿಸಿದರು.ನಾವೆಲ್ಲರೂ ಈ ಪವಿತ್ರ ಭಾರತ ಮಾತೆಯ ಮಕ್ಕಳು ಎಂಬುದು ಕೇವಲ ಘೋಷ ವಾಕ್ಯ ಅಲ್ಲ, ಅಕ್ಷರಶ: ನಿಜ ಗೊಳಿಸಿದರು. ತಮ್ಮ ಕೃತಿ ಯಿಂದ ನಡೆ ನುಡಿಯಿಂದ.ಎಷ್ಟೇ ಕಷ್ಟವಾದರೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಲಿಲ್ಲ.ಉದ್ಯೋಗ ಸೇರಿಕೊಂಡಿದ್ದರೆ ಅರಮನೆಯಲ್ಲೇ ಬದುಕಬಹುದಿತ್ತು.ಆದರೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಈ ಸೇವಾ ಮಾರ್ಗ.. ಕಳೆದ ಎರಡು ವರ್ಷಗಳ ಹಿಂದೆ ಅವರು ತೀರಿಕೊಳ್ಳುವವರೆಗೂ ಅವರದ್ದು ಅವಿಶ್ರಾಂತ ದುಡಿಮೆ, ಜೀವನ, ಸತತ ಸಂಪರ್ಕ, ಪ್ರವಾಸ. ಇಡೀ ತಮ್ಮ ಜೀವ, ಜೀವನವನ್ನು ವನವಾಸಿಗಳ ಕಲ್ಯಾಣಕ್ಕಾಗಿಯೇ ಮುಡುಪಾಗಿಸಿದರು, ಇಡೀ ರಾಷ್ಟ್ರ ಸುತ್ತಾಡಿದರು. ಆದರೆ ಪ್ರಕಾಶ ಕಾಮತರೆಂಬ ಆ ಮಹಾಪುರುಷನ ಹೆಸರು ಬಲ್ಲವರು ಎಷ್ಟು ಮಂದಿ ಇರಬಹುದು? ಗೊತ್ತಿಲ್ಲ. ಇಂತಹ ಸಾವಿರ ಸಾವಿರ ವ್ಯಕ್ತಿಗಳ ತ್ಯಾಗ ಬಲಿದಾನಗಳ ಮೂಲಕವೇ ಸಂಘ ಸೌಧ ನಿಂತಿರುವುದು…

ಸಂಘ ಇಂದು ಒಂದು ನೆಲೆಯಲ್ಲಿ ಹೇಳುವುದಾದರೆ ಪರಮ ವೈಭವದ ಸ್ಥಿತಿಯಲ್ಲಿ ಇದೆ ಎನ್ನಬಹುದೇನೋ? ಈ ರಾಷ್ಟ್ರದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಕ್ಷಣಾ, ಗೃಹ ಮಂತ್ರಿ ಸೇರಿದಂತೆ ಉನ್ನತ ಸ್ಥಾನಮಾನದಲ್ಲಿ ಸಂಘದ ಸ್ವಯಂಸೇವಕರೇ ಇದ್ದಾರೆ.ಸ್ವಯಂಸೇವಕರೆಲ್ಲರಿಗೂ ಇದು ಹೆಮ್ಮೆಯ ಸಂಗತಿಯೇ ಹೌದು. ಯಾವುದನ್ನು ಸಂಘ ಅತ್ಯಂತ ಪ್ರಭಲವಾಗಿ ಪ್ರತಿಪಾದಿಸುತ್ತ ಬಂದಿದ್ದೇವೆಯೋ ಅದರಲ್ಲಿ ಆನೇಕ ಕಾರ್ಯಗಳು ಇಂದು ಕಾರ್ಯಗತಗೊಳ್ಳುವ ಹಂತದಲ್ಲಿ ಇದೆ.ಆದರೆ ಸಂಘದ ಯೋಚನೆ, ಯೋಜನೆ ಇದನ್ನು ಮೀರಿ ಇರುವುದು.ಯಾವ ಸಮಾಜ ತನ್ನನ್ನು ತಾನು ಹಿಂದು ಎಂದು ಕರೆಸಿಕೊಳ್ಳುವುದಕ್ಕೆ, ಕೇಸರಿಯನ್ನು ಧರಿಸಿ ಹೊರಗೆ ಬರುವುದಕ್ಕೆ ಅಂಜುತ್ತಿತ್ತೋ, ಅಳುಕುತಿತ್ತೋ ಆ ಸಮಾಜ ಇಂದು ಹೆಮ್ಮೆಯಿಂದ, ಗರ್ವದಿಂದ ತಾನೊಬ್ಬ ಹಿಂದು ಎಂದು ಹೇಳಿಕೊಳ್ಳುವ ಸ್ಥಿತಿಗೆ ಬಂದಿದೆ.ಇದು ಪರಿವರ್ತನೆ ತಾನೇ? ಯಾವ ದೂರಾಲೋಚನೆಯಿಂದ ಸಂಘವನ್ನು ಡಾಕ್ಟರ್ ಜೀ ಆರಂಭಿಸಿದ್ದರೋ, ಅದು ಇಂದು ಸಾಫಲ್ಯವನ್ನು ಹೊಂದಿದೆ.ಹಾಗಾಗಿ ಇವತ್ತು ನಾವು ಗರ್ವದಿಂದ ಕೂಗಿ ಕರೆಯಬಹುದು ಡಾಕ್ಟರ್ ಜೀವರನ್ನು, ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ ಎಂಬಂತೆ…

ಚಂದ್ರಶೇಖರ ಆಚಾರ್ಯ