ಆ ವಿಜಯದಶಮಿಯಂದು ‘ಸಂಘ’ ಮಾತ್ರವೇ ಪ್ರಾರಂಭವಾಗಲಿಲ್ಲ…
ಲೇಖನ : ಪ್ರಕಾಶ್ ಮಲ್ಪೆ, ಮಂಗಳೂರು ವಿಭಾಗದ ಧರ್ಮ ಜಾಗರಣದ ಕಾರ್ಯಕರ್ತರು
(ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ)

ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು.. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ ಕೇವಲ ನಲವತ್ತೈದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪತ್ರಿಕೆಯೊಂದು ಆ ರೀತಿ ಬರೆಯಬೇಕಾದರೆ ಸಂಘದ ಶಕ್ತಿ ಇವತ್ತು ಯಾವ ಮಟ್ಟಿಗಿದೆ ಎಂದು ನಾವು ಕಲ್ಪಿಸಿಕೊಳ್ಳಬಹುದು .

ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾರವರು (ಮಾರ್ಗರೇಟ್ ಎಲಿಜಬೆತ್ ನೊಬೆಲ್) ನೀಡಿದ್ದ “ಭಾರತವು ಪಾರತಂತ್ರ್ಯದಿಂದ ವಿಮೋಚನೆಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯವೂ ಸ್ವಲ್ಪ ಸಮಯವನ್ನು ರಾಷ್ಟ್ರಕ್ಕಾಗಿ ತೆಗೆದಿಡಬೇಕು” ಎಂಬ ಕರೆಯು ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರಲ್ಲಿ ‘ಸಂಘ’ ಪ್ರಾರಂಭಿಸುವ ಚಿಂತನೆಯ ಬೀಜವನ್ನು ಹಾಕಿತು. ಫಲವಾಗಿ ಇವತ್ತು ಜಗತ್ತಿನ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆಯಾಗಿ ಸಂಘ ನಮ್ಮ ಕಣ್ಮುಂದೆ ನಿಂತಿದೆ. ಗೌರವಾನ್ವಿತ ಸ್ಥಾನಮಾನಗಳನ್ನು ಪಡೆದು ಅಧಿಕಾರದ ಫಲವನ್ನು ಸವಿಯುವ ಸುಲಭದ ಹಾಗೂ ಆಕರ್ಷಕ ಹಾದಿಯನ್ನು ಬಿಟ್ಟು ಅತಿ ಕಷ್ಟದ ಸಾಮಾಜಿಕ ಸಂಘಟನೆಯ ಹಾದಿಯನ್ನು ಹೆಡಗೇವಾರ್ ಹಿಡಿದರು. ಈ ಸಂಘಟನೆಯ ನಿರ್ಮಾಣಕ್ಕೆ ಅವರು ವಿನೂತನ ಸಾಧನವಾದ ನಿತ್ಯ ಶಾಖೆಯ ಕಾರ್ಯಪದ್ಧತಿಯನ್ನು ಹುಟ್ಟುಹಾಕಿದರು. ಈ ಹಾದಿ ಸುಧೀರ್ಘ ಮತ್ತು ಕಠಿಣವಾದ ಹಾದಿ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಡಾಕ್ಟರ್ ಹೆಡಗೇವಾರರ ಅಚಲ ವಿಶ್ವಾಸ ಹಾಗೂ ಸೇವೆಯನ್ನು ಸ್ವಯಂ ಇಚ್ಛೆಯಿಂದ ಅಪ್ಪಿಕೊಂಡ ಕೋಟ್ಯಂತರ ದೇವದುರ್ಲಭ ಕಾರ್ಯಕರ್ತರ ಕಾರಣದಿಂದ ಸಂಘ ಇವತ್ತು ವಿಶ್ವಾದ್ಯಂತ ಸರ್ವ ವ್ಯಾಪಿ ಸರ್ವಸ್ಪರ್ಶಿ ಯಾಗಿದೆ.

rss-path-sanchalan-bengaluru

ಆರೆಸ್ಸೆಸ್ ಪ್ರಾರಂಭವಾಗಿದ್ದು ಸಾವಿರದೊಂಬೈನೂರ ಇಪ್ಪತ್ತೈದರಂದು. ಅದೀಗ ತೊಂಭತ್ತೈದು ವಸಂತಗಳನ್ನು ಪೂರೈಸಿದೆ. ಆದರೆ ಸಂಘ ಎಂದಿಗೂ ಎರಡಾಗಿಲ್ಲ ಬದಲಿಗೆ ನಿರಂತರವಾಗಿ ಬೆಳೆಯುತ್ತಾ ಬಂದಿತು, ವಿಕಾಸಗೊಂಡಂತೆಲ್ಲ ಸಮಾಜದ ಪರಿಸ್ಥಿತಿಯು ‘ಸಂಘದ ಸ್ವಯಂಸೇವಕರು ಹೊಸದನ್ನೇನಾದರೂ ಮಾಡಬೇಕೆಂದು’ ಅಪೇಕ್ಷಿಸಿತ್ತು. ಅದರ ಪರಿಣಾಮವಾಗಿ ವಿವಿಧ ಕ್ಷೇತ್ರಗಳ ಮೂಲಕ ಕ್ರಮಬದ್ಧ ವಿಕಾಸ ಪ್ರಾರಂಭ ಆಯ್ತು .
ಅಂದರೆ ಆ ವಿಜಯದಶಮಿಯಂದು ಪ್ರಾರಂಭವಾಗಿದ್ದು ಸಂಘ ಮಾತ್ರವಲ್ಲ… ಅದು ತನ್ನ ಅನೇಕಾನೇಕ ಆಯಾಮಗಳಿಗೆ ಜನ್ಮನೀಡಿತು. ಸಂಘ ತನ್ನ ವಿವಿಧ ಕ್ಷೇತ್ರಗಳ ಮೂಲಕ ವಿಸ್ತಾರವನ್ನು ಪ್ರಾರಂಭಿಸಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂಲಕ. ಆಭಾವಿವಿಪ ರಾಷ್ಟ್ರೀಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಮತ್ತು ಶೈಕ್ಷಣಿಕ ಹಾಗೂ ರಾಷ್ಟ್ರೀಯ ಸುರಕ್ಷತೆಯ ಸಮಸ್ಯೆಗಳಿಗಾಗಿ ಸ್ಪಂದಿಸುವ ಸಂಘಟನೆಯಾಗಿ 1948 ರಲ್ಲಿ ಪ್ರಾರಂಭವಾಯಿತು. ಇವತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಗತ್ತಿನಲ್ಲಿ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ.

1936 ರಲ್ಲಿ ಆರಂಭವಾದ ರಾಷ್ಟ್ರ ಸೇವಿಕಾ ಸಮಿತಿ ಈಗ ದೇಶಾದ್ಯಂತ 5200ಕ್ಕೂ ಹೆಚ್ಚು ಅಧಿಕ ಶಾಖೆಗಳ ಮೂಲಕ ಮಹಿಳೆಯರಿಗೆ ಭಾರತೀಯ ಸಂಸ್ಕೃತಿ ಮತ್ತು ಅದರ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿದೆ. ಇದರ ಸ್ವಯಂ ಸೇವಕಿಯರು 700ಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಹಿಳಾ ಸ್ವಯಂ ಸೇವಾ ಸಂಘಟನೆಯಾಗಿ ಇಂದು ನಮ್ಮ ಕಣ್ಣ ಮುಂದಿದೆ.

ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಾರದ ಬುಡಕಟ್ಟು ಜನರನ್ನು ರಾಷ್ಟ್ರೀಯ ಮುಖ್ಯಧಾರೆಗೆ ತರುವ ಪ್ರಯತ್ನವಾಗಿ 1952ರಲ್ಲಿ ಪ್ರಾರಂಭವಾದ ವನವಾಸಿ ಕಲ್ಯಾಣ ಆಶ್ರಮ ಭಾರತದಲ್ಲಿರುವ ಸುಮಾರು 10ಕೋಟಿ ವನವಾಸಿಗಳ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಿದೆ.

ಭಾರತೀಯ ಜನಸಂಘ ‘ಸಂಘ’ದ ಯೋಜನೆಯಂತೆ ಟಿಸಿಲೊಡೆದ ಸಂಘಟನೆಯಲ್ಲದಿದ್ದರೂ ಪ್ರಖರ ರಾಷ್ಟ್ರವಾದಿ ಆಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಪೇಕ್ಷೆಯ ಮೇರೆಗೆ ಸಂಘದ ಅತ್ಯುತ್ತಮ ಪ್ರತಿಭೆಗಳನ್ನು ಭಾಜಪ ಕ್ಕೆ ಕಳುಹಿಸಿಕೊಡಲಾಯಿತು. ಭಾರತೀಯ ಜನತಾಪಕ್ಷವಾಗಿ ಪರಿವರ್ತನೆಗೊಂಡ ಸಂಘಟನೆ ಇಂದು ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಇಂದು ದೇಶದ ಚುಕ್ಕಾಣಿ ಹಿಡಿವ ನಾಯಕರಿಂದ ಪ್ರಾರಂಭಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಸಂಘದ ಸ್ವಯಂಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂಘಟನೆಯ ನಿಜವಾದ ಶಕ್ತಿಯ ಪರಿಚಯ ಮಾಡಿಸುತ್ತದೆ.

ಭಾರತೀಯ ಮಜ್ದೂರ್ ಸಂಘ
1955ರಲ್ಲಿ ಕುಶಲ ಸಂಘಟಕರು, ಹಾಗೂ ತತ್ವಜ್ಞಾನಿಯಾಗಿದ್ದ ಶ್ರೀ ದತ್ತೋಪಂತ ಠೇಂಗಡಿಯವರ ಪ್ರಾರಂಭಿಸಿದರು. “ರಾಷ್ಟ್ರವನ್ನು ಔದ್ಯೋಗೀಕರಣ ಗೊಳಿಸಿ, ಉದ್ಯೋಗವನ್ನು ಶ್ರಮಿಕೀಕರಣಗೊಳಿಸಿ, ಶ್ರಮಿಕರನ್ನು ರಾಷ್ಟ್ರೀಕರಣಗೊಳಿಸಿ” (Industrialize the nation, labourize the industry, nationalise the labour) ಎನ್ನುವ ಘೋಷವಾಕ್ಯದೊಂದಿಗೆ ಕಾರ್ಮಿಕ ಕ್ಷೇತ್ರದ ಬಗೆಗಿನ ಅವರ ಚಿಂತನೆಗಳು ಹೊಸ ಸಿದ್ಧಾಂತಕ್ಕೆ ನಾಂದಿಯಾದವು. ಪ್ರಸ್ತುತ 85ಲಕ್ಷ ಸದಸ್ಯತ್ವ ಹೊಂದಿರುವ ಭಾರತೀಯ ಮಜ್ದೂರ್ ಸಂಘ ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಸಾಂಸ್ಕೃತಿಕ ಮೌಲ್ಯಾಧಾರಿತ ಸಂಸ್ಕಾರವು ಸಿಗುವಂತಾಗಬೇಕೆಂಬ ಹಂಬಲದಿಂದ 1977ರಲ್ಲಿ ಪ್ರಾರಂಭಗೊಂಡ ವಿದ್ಯಾಭಾರತಿ ಇಂದು ಇಪ್ಪತ್ತ್ 29 ಸಾವಿರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸುಮಾರು 37 ಸಾವಿರ ಶಿಕ್ಷಕರು ಹಾಗೂ ಮೂವತ್ತು ಲಕ್ಷ ವಿದ್ಯಾರ್ಥಿಗಳು ವಿದ್ಯಾಭಾರತಿಯ ಯೋಜನೆಯಡಿ ಸಂಪರ್ಕ ಹೊಂದಿದ್ದಾರೆ. ದೇಶದ ಅತಿದೊಡ್ಡ ಸರಕಾರೇತರ ಶೈಕ್ಷಣಿಕ ಸಂಘಟನೆ ಎಂಬ ಗರಿಮೆ ಇಂದು ವಿದ್ಯಾಭಾರತಿ ಯದ್ದಾಗಿದೆ.

ಭಾರತೀಯ ಕಿಸಾನ್ ಸಂಘ
ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸುವುದಕ್ಕಾಗಿ ಕೃಷಿ ಸಂಶೋಧನೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ರೈತರ ಕಲ್ಯಾಣದ ವಿವಿಧ ಸಂಕಲ್ಪಗಳೊಂದಿಗೆ ಪ್ರಾರಂಭವಾಗಿ ಇವತ್ತು 8 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.

ಗುಡ್ಡಗಾಡು ಗ್ರಾಮೀಣ ಹಾಗೂ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಅವಕಾಶವಂಚಿತರಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭವಾಗಿದ್ದು ಸೇವಾಭಾರತಿ 1ಲಕ್ಷಕ್ಕೂ ಅಧಿಕ ಸೇವಾ ಯೋಜನೆಗಳನ್ನು ಇಂದಿಗೂ ಮುನ್ನಡೆಸುತ್ತಿದೆ.

ಪ್ರಕಾಶ್ ಮಲ್ಪೆ, ಮಂಗಳೂರು ವಿಭಾಗದ ಧರ್ಮ ಜಾಗರಣದ ಕಾರ್ಯಕರ್ತರು