‘100 ವರ್ಷದ ಮ್ಯಾರಥಾನ್’ ನಲ್ಲಿ ಕಮ್ಯುನಿಸ್ಟ್ ಚೀನಾ ದ ಮೋಸದ ಓಟ !

100 ವರ್ಷದ  ಮ್ಯಾರಥಾನ್’ ನಲ್ಲಿ ಕಮ್ಯುನಿಸ್ಟ್ ಚೀನಾ ದ ಮೋಸದ ಓಟ !

ಪು . ರವಿವರ್ಮ, ಉಪನ್ಯಾಸಕ, ಹವ್ಯಾಸಿ ಬರಹಗಾರ.
(ಈ ಲೇಖನವನ್ನು ಮೊದಲು ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.)

ಎಂಬತ್ತರ ದಶಕದ ಚೀನಾದ ಒಂದು ಸಿನಿಮಾ, ಸಿನಿಮಾದುದ್ದಕ್ಕು ಖಳನಾಯಕನ ಪಾತ್ರವನ್ನು ವಿಪರೀತವಾಗಿ ವೈಭವಿಕರಿಸಲಾಗಿತ್ತು, ಒಂದು ಪಾತ್ರವಾಗಿ ಆತನ ಕುತಂತ್ರಗಳು, ನಾಯಕನೆದುರು ಗೆಲುವು ಸಾಧಿಸುವ ಪರಿ ಯಾರಿಗಾದರು ಸಹ್ಯವೆನಿಸಲಾರದು, ಆದರೆ ಆತನ ಜೊತೆಗಿದ್ದ, ಎದುರಿಗಿದ್ದ ಇತರೆ ಪಾತ್ರಗಳು ಅವನ ಅಟಾಟೋಪವನ್ನು ಸಹಜವೆಂಬಂತೆ, ಘನಕಾರ್ಯವೆಂಬಂತೆ ಮೆಚ್ಚಿಕೊಳ್ಳುತ್ತಿರುವುದನ್ನು ನೋಡಿ ಆಶ್ಚರ್ಯವಾಯ್ತು, ನಾಯಕನ ಪಾತ್ರಕ್ಕೆ ಎಲ್ಲು ಮೈಲೆಜ್ ಇಲ್ಲ ! ಚಿತ್ರದ ನಾಯಕನನ್ನು, ಖಳನಾಯಕನೆದುರು ನಿಕೃಷ್ಟವಾಗಿ ತೋರಿಸಿದ್ದಾರೆ ಎನಿಸಿತು. ಇದೆಂಥಾ ಸಿನಿಮಾ ಎಂದುಕೊಳ್ಳುತ್ತಿರುವಾಗ ಸಿನಿಮಾದ ಕೊನೆಯಲ್ಲಿ ತಿಳಿದ ಸತ್ಯವೆಂದರೆ, ಯಾರನ್ನು ನಾನು ಖಳನಾಯಕ ಎಂದು ನಂಬಿದ್ದೆನೊ ಅವನೆ ಆ ಸಿನಿಮಾದ ನಾಯಕ! ಖಳನಾಯಕನ ಎಲ್ಲ ಗುಣಗಳಿದ್ದುದು ಚಿತ್ರದ ನಾಯಕನಲ್ಲಿ. ಇದನ್ನಿಲ್ಲಿ ಹೇಳಲು ಕಾರಣವಿದೆ.

ಚೀನಾದ ಸ್ವಭಾವಕ್ಕೆ ಹೊಲಿಸಿ ನೋಡಿದಾಗ ಈ ಸಿನಿಮಾ ಹೇಗೆ ಚಿತ್ರಿತವಾಗಿದೆಯೊ, ವಾಸ್ತವ ಅದಕ್ಕಿಂತ ಭಿನ್ನವಾಗಿಲ್ಲ. ‘Hallmark of Chinese statecraft’ ಎಂದು ಒಮ್ಮೆ ಗೂಗಲ್ ಮಾಡಿನೋಡಿ ಅಲ್ಲಿ ಪುಟಗಟ್ಟಲೆ ಸಿಗುವ ಉತ್ತರ ’Deception’. ಹೌದು, ಮೋಸ ಮಾಡುವುದೇ ಕಮ್ಯುನಿಸ್ಟ್ ಚೀನಾ ಸರ್ಕಾರದ ಅನಧಿಕೃತ ಮುದ್ರೆಯಾಗಿಹೊಗಿದೆ. ಚೀನಾದ ಎಲ್ಲ ನಿರೂಪಣಾ ಕಲೆಗಳಲ್ಲಿ (narrative arts) ’ಕುತಂತ್ರ’ ಸರ್ವಸಾಮಾನ್ಯ ಧಾತುವಿನಂತೆ ಸೇರಿಕೊಂಡಿದೆ. ಯುದ್ಧನೀತಿ, ವಿದೇಶಾಂಗ ನೀತಿ, ರಾಜಕೀಯ ನಿರ್ಧಾರಗಳು, ಆಂತರಿಕ ಅಭಿವೃದ್ಧಿ, ವಿಶ್ವ ಸೌಹಾರ್ದತೆ ಹೀಗೆ ವಿಷಯ ಯಾವುದೇ ಆಗಿರಲಿ, ಅಲ್ಲಿ ಚೀನಾದ ’ಹಿಡನ್ ಅಜೆಂಡ’  ಇಲ್ಲದೆ ಹೋಗುವುದಿಲ್ಲ. ಯಾವುದೇ ವಿಷಯದ ಬಗ್ಗೆ, ಯಾವುದೇ ಸಂದರ್ಭದಲ್ಲಿ ಚೀನಾವನ್ನು ನಂಬುವುದು ಸಾಧ್ಯವಿಲ್ಲವೆಂದೆ ಎಲ್ಲ ಅನುಭವಗಳು ಹೇಳುತ್ತಿವೆ.

ಚೀನಾದ ಮೋಸದ ಪಟ್ಟುಗಳನ್ನು ಅರಿಯುವಲ್ಲಿ ಶ್ರಮಿಸಿದ ಕೆಲವರಲ್ಲಿ ಅಮೆರಿಕದ ಮೈಕೆಲ್ ಪಿಲ್ಸ್ ಬರಿ ಮುಖ್ಯ ಹೆಸರು. ಆತ ಬರೆದಿರುವ ’THE HUNDRED YEAR MARATHON’ ಪುಸ್ತಕದಲ್ಲಿ ಚೀನಾದ ಯೊಜನೆಗಳು, ಕಾರ್ಯತಂತ್ರಗಳು, ಕುಂತಂತ್ರಗಳನ್ನು ಸಾಕ್ಷಿ ಸಮೇತ ವಿವರಿಸಲಾಗಿದೆ. ’ಹಿಂದಿ – ಚೀನಿ ಭಾಯಿ ಭಾಯಿ ’ ಎನ್ನುತ್ತಲೆ ಬೆನ್ನಹಿಂದೆ ಚೂರಿ ಇರಿಸಿಕೊಂಡ ಭಾರತದ ಅನುಭವಗಳು ಎಂದು ಮರೆಯಲಾಗದಂತವು. ಅಲ್ಲಿಂದ ಇಲ್ಲಿಯವರೆಗೆ ಗಡಿ ವಿಷಯದಲ್ಲಿ ಪದೆ ಪದೆ ಕ್ಯಾತೆ ತೆಗೆಯುತ್ತ ತನ್ನ ಹಳೆ ಚಾಳಿಯನ್ನು ಮುಂದುವರೆಸುತ್ತಿರುವ ಕಮ್ಯುನಿಸ್ಟ್ ಚೀನಾವನ್ನು ಕೊಂಚಮಟ್ಟಿಗೆ ಬಗ್ಗಿಸಲು ಇಂದಿನ ಮೋದಿ ಸರ್ಕಾರ ಯಶಸ್ವಿಯಾಗಿದೆಯೆಂದೆ ಹೇಳಬೇಕು, ಅದರರ್ಥ ಸಮಸ್ಯೆಗಳೆಲ್ಲ ಬಗೆಹರಿದಿವೆಯೆಂದಲ್ಲ. ಸರ್ಕಾರ ಮಾಡಬಹುದಾದ ಕೆಲಸವನ್ನು ಅದು ತನ್ನ ಚೌಕಟ್ಟಿನೊಳಗೆ ನಿರ್ವಹಿಸುತ್ತದೆ. ಆದೆ ಸಮಯಕ್ಕೆ ಸಮಾಜದ್ದು ಒಂದು ಪ್ರಮುಖವಾದ ಪಾತ್ರ ಇದೆಯಲ್ಲ ಅದರ ಕುರಿತು ಸ್ವಲ್ಪ ಆಲೋಚಿಸುವುದು ಇಂದಿನ ತುರ್ತು. ಚೀನಾವನ್ನು ಅರ್ಥ ಮಾಡಿಕೊಳ್ಳದೆ, ಕಮ್ಯುನಿಸಮ್ ಅನ್ನು ಗ್ರಹಿಸದೆ ಚೀನಾವನ್ನು ಎದುರಿಸುವುದು ಅಸಾಧ್ಯವೆಂದೇ ಹೇಳಬೇಕು.

ಪಿಲ್ಸ್ ಬರಿ ಸುಮಾರು 4 ದಶಕದ ಕಾಲ ಚೀನಾ ಹಿಂದೆ ಬಿದ್ದು ಅದನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಯಾರಿಗು ಅರ್ಥವಾಗದೇ ಉಳಿದಿದ್ದ ಚೀನಾ ರಹಸ್ಯವನ್ನು ತನ್ನ ಪುಸ್ತಕದಲ್ಲಿ ಜಗತ್ತಿನ ಮುಂದೆ ಬಿಡಿಸಿಟ್ಟಿದ್ದಾನೆ. ಪ್ರಸ್ತುತ ಡೊನಾಲ್ಡ್ ಟ್ರಂಪ್ ಗೆ ಸಲಹೆಗಾರನಾಗಿರುವ ಈತ ರಿಚರ್ಡ್ ನಿಕ್ಸಾನ್ ನಿಂದ, ಬರಾಕ್ ಒಬಾಮ ವರೆಗೆ ಎಲ್ಲ ಅಮೆರಿಕಾದ ಅಧ್ಯಕ್ಷರುಗಳು ಹೇಗೆ ಚೀನಾದಿಂದ ಮೋಸಹೊಗಿದ್ದಾರೆ ಎಂಬುದನ್ನು ಬಹಿರಂಗವಾಗಿಯೆ ಚರ್ಚಿಸುತ್ತಾನೆ.ಅಮೇರಿಕ ಹೇಗೆ ಚೀನಾಕ್ಕೆ ಸಹಾಯ ಮಾಡುತ್ತಲೆ ಸಾಗಿತ್ತು ಮತ್ತು ಪ್ರತಿಯಾಗಿ ಚೀನಾ ಹೇಗೆ ತನ್ನ ಧೂರ್ತತನದಿಂದ ಮೋಸಮಾಡಿತು ಎಂಬುದನ್ನು ಆತ ಆಶ್ಚರ್ಯದಿಂದ ಹೇಳುತ್ತಾನೆ. ನೋಡ ನೋಡುತ್ತಿದ್ದಂತೆ ಪಾರಿವಾಳದಂತೆ ಇದ್ದ ಚೀನಾ ಗಿಡುಗನಾಗಿ ಬದಲಾಗಿದ್ದು ಹೇಗೆಂದು ಆತ ವಿವರಿಸುವ ರೀತಿ ಮಾರ್ಮಿಕವಾಗಿದೆ.

The Hundred Year Marathon by Michael Pillsbury

ಚೀನಾದ ಅತ್ಯಂತ ಕ್ರೂರಿ ಸರ್ವಾಧಿಕಾರಿ ಎನಿಸಿದ್ದ  ಮಾವೋ ತ್ಸೆ ತುಂಗ್ 1949 ರಲ್ಲಿ ಅಧಿಕಾರಕ್ಕೆರುತ್ತಾನೆ, ಅಲ್ಲಿಂದ ಅವನ ಆಳ್ವಿಕೆಗೆ 100 ವರ್ಷಗಳು ತುಂಬುವರೆಗಿನ ಚೀನಾದ ಓಟವೆ ಈ 100 ವರ್ಷದ ಮ್ಯಾರಥಾನ್. ಚೀನಾದ ಈ ಓಟವನ್ನು ಮ್ಯಾರಥಾನ್ ಎಂದು ಕರೆದಿರುವುದಕ್ಕು ಕಾರಣವಿದೆ. ಒಲಂಪಿಕ್ಸ್ ನ ಯಾವುದೇ ಸ್ಪ್ರಿಂಟ್ ಓಟವನ್ನು ಒಮ್ಮೆ ಕಲ್ಪಿಸಿಕೊಳ್ಳಿ ಅದು ಶುರುವಾಗುವುದು ತಿಳಿಯುವ ಮೊದಲೇ ಮುಗಿದುಹೋಗಿರುತ್ತದೆ, ಅಲ್ಲಿ ಓಟಗಾರ ತನ್ನ ಮೊದಲನೇ ಹೆಜ್ಜೆಯಲ್ಲೆ ಅತ್ಯಂತ ವೇಗದಲ್ಲಿರುತ್ತಾನೆ. ಅದೇ 20 ಕಿ.ಮೀ. ನ ಮ್ಯಾರಥಾನ್ ಅನ್ನು ಒಮ್ಮೆ ಗಮನಿಸಿ ಅಲ್ಲಿ ಪ್ರಾರಂಭದಲ್ಲಿ ಅತ್ಯಂತ ನಿಧಾನಗತಿಯನ್ನು ಅನುಸರಿಸುವ ಓಟ ಇರುತ್ತದೆ, ಸ್ಪರ್ದೆಯ ಆರಂಭದಲ್ಲಿ ಯಾರು ಕೊನೆಯಲ್ಲಿ ಓಡುತ್ತಿದ್ದ ಸ್ಪರ್ದಿ ಓಟದ ಕೊನೆಯ ವೇಳೆಗೆ ತಾನೆ ಮುಂದಿರುತ್ತಾನೆ. ಇದೇ ನೀತಿಯನ್ನು ಚೀನಾ ಕೂಡ ಅವಲಂಬಿಸುತ್ತಿದೆ ಎನ್ನುವುದು ಇಲ್ಲಿ ಸೂಚ್ಯವಾಗಿ ಹೇಳಿರುವ ಸಂಗತಿ.

ಇದನ್ನೆ ART OF WAR ಪುಸ್ತಕದಲ್ಲಿ ಸುನ್ ಜು ಹೇಳಿರುವುದು. HIDE YOUR CAPABALITIES ಎನ್ನುವ ಅವನ ಸೂತ್ರವನ್ನು ಚೀನಾ ಪಾಲಿಸಿಕೊಂಡು ಬಂದಿದೆ, ತನ್ನ ಮ್ಯಾರಥಾನ್ ಓಟ ಆರಂಭವಾಗಿ 71 ವರ್ಷದ ವರೆಗೆ ಸಾಗಿ ಬಂದಿರುವ ಚೀನಾ ತನ್ನ ಶಕ್ತಿಯನ್ನು ಜಗತ್ತಿನೆದುರು ತೋರ್ಪಡಿಸಿಕೊಳ್ಳುವ ಪ್ರಲೋಭನೆಗೆ ಎಂದು ಬಲಿಯಾಗಿರಲಿಲ್ಲ. ಎಲ್ಲವನ್ನು ಮೌನವಾಗಿ ಮಾಡುವ, ಕುತಂತ್ರದಿಂದ ಸಾಧಿಸುವ ಅದರ ಮನೋಗತ ಜಿಯೋ ಪಾಲಿಟಿಕ್ಸ್ ನಲ್ಲಿ ಯಾರಿಗು ಅರ್ಥವೇ ಆಗಿರಲಿಲ್ಲ. 2049 ರಲ್ಲಿ ಮ್ಯಾರಥಾನ್ ಮುಗಿಯುವ ಹೊತ್ತಿಗೆ ಚೀನಾ ದ ಕಮ್ಯುನಿಸಮ್ ನ ಆಧಾರದಲ್ಲಿ ಜಗತ್ತಿನ ಚಿತ್ರಣವನ್ನೇ ಬದಲಿಸಬೇಕು, ಜಗತ್ತಿನ ಎಲ್ಲ ಸೂಪರ್ ಪವರ್ ರಾಷ್ಟ್ರಗಳ ಜುಟ್ಟು ತನ್ನ ಕೈಯಲ್ಲಿರಬೇಕೆಂಬ ಗುರಿ ಚೀನಾದ್ದು.

ಇದಕ್ಕೆ ಪೂರಕವಾಗಿ 2012ರಲ್ಲಿ ಕ್ಸಿ ಜಿನ್ ಪಿಂಗ್ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾದ ನಂತರ ಆತ ‘qiang zhongguo meng’ ಎಂಬ ಒಂದು ಹೊಸ ಕಲ್ಪನೆಯನ್ನು ತನ್ನ ದೇಶದ ಮುಂದಿರಿಸುತ್ತಾನೆ, ಅದರರ್ಥ ‘Strong Nation Dream’ ಆರ್ಥಿಕತೆ, ಮಿಲಿಟರಿ ಶಕ್ತಿ, ಸಂಸ್ಕೃತಿ ಈ ಮೂರು ಕ್ಷೇತ್ರದಲ್ಲು ಚೀನಾದ ಪ್ರಭಾವ ಜಗತ್ತಿನ ಮೇಲೆ ಆಗಬೇಕು ಎಂಬುದು ಆತನ ಸ್ಪಷ್ಟವಾದ ಯೋಜನೆ.  ಇಲ್ಲಿಯವರೆಗೆ ಚೀನಾ ಎಂದು ಇಂಥ ಘೊಷಣೆಗಳನ್ನು, ಕಲ್ಪನೆಗಳನ್ನು ಜಗತ್ತಿನೆದುರು ಪ್ರದರ್ಶಿಸಿರಲ್ಲಿಲ್ಲ, ಈ ರೀತಿಯ ಘೊಷಣೆಯು ಅಮೆರಿಕದಂತಹ ಕೆಲ ರಾಷ್ಟ್ರಗಳ ಘೊಷಣೆಯಾಗಿಯೆ ಉಳಿದಿತ್ತು. ಈಗ ಮ್ಯಾರಥಾನ್ ನ ನೂರನೆ ವರ್ಷಕ್ಕೆ ಸಮೀಪಿಸುತ್ತಿರುವ ಸಮಯದಲ್ಲಿ ಈ ಘೊಷಣೆಯು ಮಹತ್ವನ್ನು ಪಡೆದುಕೊಳ್ಳುತ್ತದೆ.

ಚೀನಾದ ಮತ್ತೊಂದು Hallmark ಎಂದರೆ Inconsistency. ಮೋಸ ಮತ್ತು ಅನಿಶ್ಚಿತತೆ. ತನ್ನ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನು, ಯಾವುದನ್ನು ಬೇಕಾದರು ಬದಲಾಯಿಸಿಬಿಡುವ ಅದರ ಸ್ವಭಾವ ಚೀನಾದ ಮತ್ತೊಂದು ಮುಖ್ಯ ಲಕ್ಷಣ. ಯಾವುದೇ ಸಿದ್ದಾಂತವನ್ನು ತನಗೆ ಬೇಕಾದಂತೆ ವಿನಾಯಿತಿ ತೆಗೆದುಕೊಂಡು ಆಚರಿಸುವುದು ಅದರ ಸಮಯ ಸಾಧಕತನವನ್ನು ತೊರಿಸುತ್ತದೆ. ’’ವೈರಿಯು ನಿನ್ನ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವಂತೆ ತಂತ್ರ ರೂಪಿಸು’’ ಎಂಬ ಸುನ್ ಜು ಸೂತ್ರದಲ್ಲಿ ಅಲ್ಲಿನ ನಾಯಕರೆಲ್ಲರು ವಿಶ್ವಾಸವಿರಿಸಿದ್ದಾರೆ. 1969 ರಲ್ಲಿ ಮಾವೋ ಅಂದಿನ ಅಮೆರಿಕದ ಅಧ್ಯಕ್ಷ ನಿಕ್ಸಾನ್ ನನ್ನು ಭೇಟಿ ಮಾಡುವ ಮುಖೇನ ತಾನು ಸೋವಿಯತ್ ನ ವಿರೋಧಿ ಎಂಬಂತೆ ಬಿಂಬಿಸಿದ್ದ. ಮುಂದುವರೆದು 1979 ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ದ ಅಧ್ಯಕ್ಷನಾಗಿದ್ದ ಟಂಗ್ ಷೊಪಿಂಗ್ (Deng Xiaoping) ಚೀನಾದ ಮೂಲಸೌಕರ್ಯಗಳ ಅಭಿವೃದ್ದಿಯ ಯೋಜನೆಯ ಭಾಗವಾಗಿ ತಾನು ಇಷ್ಟು ಸಮಯ ವಿರೋಧಿಸುತ್ತಿದ್ದ, ಬಂಡವಾಳಶಾಹಿ ಎಂದು ಮೂಗುಮುರಿಯುತ್ತಿದ್ದ ಅದೇ ಪಶ್ಚಿಮದ ದೇಶಗಳ ಮೊರೆಹೋಗಿ ತನ್ನ ಬೇಡಿಕೆಗಳನ್ನು ಮುಂದಿಡುತ್ತಾನೆ, ವಿಶ್ವಬ್ಯಾಂಕ್ ಮತ್ತು ಗೊಲ್ಡ್ಮನ್ ಸ್ಯಾಕ್ಸ್ನಂತಹ ಮಧ್ಯವರ್ತಿ ಕಂಪನಿಗಳ ಸಹಾಯದಿಂದ ಚೀನಾ ಪ್ರಜಾಪ್ರಭುತ್ವದೆಡೆಗೆ ಮನಸು ಮಾಡುತ್ತಿರಬಹುದೆಂಬ ಭ್ರಮೆಯಲ್ಲಿದ್ದ ಅಮೆರಿಕ ಮೊದಲಾದ ದೇಶಗಳು ನಾ ಮುಂದು ತಾ ಮುಂದು ಎಂದು ಧಾವಿಸಿ ಬಂದು ಚೀನಾ ದ ರಸ್ತೆಗಳು, ವಿಮಾನನಿಲ್ದಾಣಗಳು, ದೊಡ್ಡ ದೊಡ್ಡ ಕೈಗಾರಿಕೆಗಳು, ಸೇತುವೆಗಳನ್ನು ಕಟ್ಟತೊಡಗಿದವು. ಪಶ್ಚಿಮದ (Technology) ತಂತ್ರಜ್ನಾನ ಮತ್ತು (Intellectual Property) ಬೌದ್ದಿಕ ಆಸ್ತಿಯನ್ನು ಚೀನಾ ತನ್ನದಾಗಿಸಿಕೊಂಡಿತು. ಚೀನಾದ ಕೆಲ ನಾಯಕರು, ಟಂಗ್ ಷೊಪಿಂಗ್ ನ ಈ ಕೃತ್ಯವನ್ನು ವಿರೋಧಿಸಿದರು, ಆಗ ಟಂಗ್ ಷೊಪಿಂಗ್ ಹೇಳಿದ್ದಿಷ್ಟು “ಅವರೆಲ್ಲ ಬರಲಿ, ನಮಗೆ ಬೇಕಿರುವ ಎಲ್ಲ ವ್ಯವಸ್ಥೆಗಳ ನಿರ್ಮಾಣವಾಗಲಿ ಆ ನಂತರ ಅವರನ್ನು ಇಲ್ಲಿಂದ ಓಡಿಸೋಣ, ಆಗ ಅವರು ಕಟ್ಟಿರುವ ರಸ್ತೆ, ವಿಮಾನ ನಿಲ್ದಾಣ, ಕಟ್ಟಡಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಸಾಧ್ಯವಿಲ್ಲ ಅವೆಲ್ಲವನ್ನು ನಾವು ಉಪಯೊಗಿಸೋಣ”. ಇದು ಚೀನಾದ ಮನಸ್ಥಿತಿಗೆ ಒಂದು ಉದಾಹರಣೆ. ಚೀನಾದ One child policy  ವಿಷಯದಲ್ಲಿ ಸಹ ಅದು ತನ್ನ ನಿರ್ಧಾರದಲ್ಲಿರುವ ಅನಿಶ್ಚಿತತೆ ತೋರಿಸಿದೆ. ಮ್ಯಾರಥನ್ ಮುಗಿಯುವ ಹಂತಕ್ಕೆ ತಲುಪುವಾಗ ನಮ್ಮಲ್ಲಿ ಯುವಕರಿಲ್ಲದೆ ಹೋದರೆ ಕಷ್ಟಪಟ್ಟು ಸಂಪಾದಿಸಿದ ಆ ಸ್ಥಿತಿಯಯಲ್ಲಿ ಅವರು ಬಹುಕಾಲದವರೆಗೆ ಉಳಿಯಲು ಸಾಧ್ಯವಾಗದೆ ಹೋಗಬಹುದು ಎಂಬ ಲೆಕ್ಕಾಚಾರದ ಪರಿಣಾಮವಾಗಿ ಸುಮಾರು ಮೂರು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಯೊಜನೆಯನ್ನು ಕೈಬಿಟ್ಟು ಪರಿಸ್ತಿತಿಗೆ ತಕ್ಕಂತೆ ಬದಲಾಗಿದೆ. ತನ್ನ ಗುರಿಯ ಸಾಧನೆಯ ಮಾರ್ಗದಲ್ಲಿ ಯಾವ ಭಾವನೆಗಳಿಗು ಬೆಲೆ ನೀಡದ ಶುಷ್ಕ ಮನಸ್ಥಿತಿಯನ್ನು ಚೀನಾ ತೋರುತ್ತಲೆ ಇದೆ.

‘The 100 Year Marathon’ ಪುಸ್ತಕದ ಲೇಖಕ ಮೈಕೆಲ್ ಪಿಲ್ಸ್ ಬರಿ ತಾನು ಎರಡು ವರ್ಷಗಳ ಕಾಲ ಚೀನಾ ಸಂಸ್ಕೃತಿಯ ಕುರಿತ ಪಿ ಎಚ್ ಡಿ ಅಧ್ಯಯನಕ್ಕಾಗಿ ತೈವಾನ್ ನಲ್ಲಿದ್ದಾಗ ಅಲ್ಲಿ ಪದೆ ಪದೆ ಆತನಿಗೆ ಕಾಣಿಸುವ, ಕೇಳಿಸುವ ಚೀನಾದ ಒಂದು ಗಾದೆ “On the outside be benevolent; on the inside be ruthless”. ಈ ಮಾತನ್ನು ಚೀನಾ ಅತ್ಯಂತ ಗಂಭೀರವಾಗಿ ತನ್ನ ಆಚರಣೆಯಲ್ಲಿ ಇಳಿಸಿರುವುದು ಇಂದು ಢಾಳು ಢಾಳಾಗಿ ಕಾಣುತ್ತಲಿದೆ.

1970 ರ RAND ಕಾರ್ಪೊರೇಷನ್ ನ ಒಂದು ವರದಿ ಹೀಗಿದೆ ಚೀನಾ ಯುದ್ದ ತಂತ್ರಗಳಿಂದ ಹಿಡಿದು ರಾಜಕೀಯ ನಿರ್ಧಾರದವರೆಗೆ ಅದರ ಪ್ರಾಚೀನ ಸಾಹಿತ್ಯದಲ್ಲಿರುವಂತೆ, ಸುನ್ ಜು ನಿಂದ ಮಾವೋ ವರೆಗೆ ಆನಂತರವು ಎಲ್ಲರು ಪಾಲಿಸಿದ್ದು, ಬೋಧಿಸಿದ್ದು ಮೋಸದ ಸಿದ್ಧಾಂತವನ್ನೇ.  “ನೀನು ನಡೆಸಬೇಕಾಗಿರುವ ಯುದ್ಧಕ್ಕೆ ನಿನ್ನ ಸೈನ್ಯವನ್ನು ಬಳಸಬೇಡ ಇನ್ನೊಬ್ಬರ ಸೈನ್ಯವನ್ನು, ಆಸ್ತಿಯನ್ನು ಉಪಯೊಗಿಸಿ ಯುದ್ದ ಮಾಡುವುದು ನಷ್ಟವಿಲ್ಲದ ಯುದ್ದವೆನಿಸುತ್ತದೆ” ಸುನ್ ಜು ಹೇಳಿರುವ ಈ ತಂತ್ರವನ್ನು ಚೀನಾ ಇಂದಿಗು ಪಾಲಿಸುತ್ತ ಬರುತ್ತಿದೆ. ಭಾರತದ ವಿರುದ್ಧ ತನ್ನ ಯುದ್ದಕ್ಕೆ ಪಾಕಿಸ್ತಾನವನ್ನು ಉಪಯೊಗಿಸುವುದು ಚೀನಾ ಸುನ್ ಜು ಇಂದ ಕಲಿತಿರುವ ತಂತ್ರ.

ಯಾವುದೇ ವಿಷಯದಲ್ಲಿ ಚೀನಾ ಗೆಲುವು ಸಾಧಿಸಲು ಹೆಣೆಯುವ ತಂತ್ರದಲ್ಲಿ ’ಮೋಸ ಮತ್ತು ನಿರ್ದಯೆ’ ಇದ್ದೇ ಇರುತ್ತದೆ. 2016 ರ United Nations Dispute Tribunal ಎದುರು ಪಿಲಿಪೈನ್ಸ್, ಚೀನಾದ ವಿರುದ್ಧ ತಂದಿದ್ದ, ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ವ್ಯಾಜ್ಯವನ್ನು ನ್ಯಾಯಾಧಿಕರಣವು ಚೀನಾದ ವಿರುದ್ಧ ಪಿಲಿಪೈನ್ಸ್ ಪರವಾಗಿ ನಿರ್ಣಯ ನೀಡುವುದರ ಮುಖಾಂತರ ಚೀನಾಕ್ಕೆ ಎಚ್ಚರಿಕೆ ನೀಡಿತ್ತು, ಇಷ್ಟಾಗ್ಯು ಚೀನಾ ನ್ಯಾಯಾಧಿಕರಣದ ತೀರ್ಪನ್ನು ಒಪ್ಪದೆ ತನ್ನಿಷ್ಟದಂತೆ ವರ್ತಿಸುತ್ತ ಪಿಲಿಪೈನ್ಸ್ ಗೆ ಸಂಬಂಧಿಸಿದ ಪ್ರಾಕೃತಿಕ ಸಂಪತ್ತಿನಲ್ಲಿ ತನ್ನ ಪಾಲಿಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಲೆ ಇದೆ.

ಜೈಷೆ ಮೊಹಮದ್ ಉಗ್ರ ಸಂಘಟನೆಯ ಪ್ರಮುಖ ಭಯೊತ್ಪಾದಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಬೇಕೆಂಬ ಭಾರತದ ಬೇಡಿಕೆಯನ್ನು ವಿಶ್ವ ಭದ್ರತಾ ಸಂಸ್ಥೆಯಲ್ಲಿ ವಿರೋಧಿಸಿ ಆ ಮೂಲಕ ಭಾರತದ ನಿರ್ಣಯವನ್ನು ವೀರೊಧಿಸುವ ಜೊತೆಗೆ ಪಾಕಿಸ್ಥಾನಕ್ಕೆ ಬೆಂಬಲ ಸೂಚಿಸುವ ಭಂಡ ಧೈರ್ಯವನ್ನು ಚೀನಾ ತೋರಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಚೀನಾದ ಹೆಸರನ್ನು ಉಲ್ಲೇಖಿಸದೆ ಖಂಡಿಸಿತ್ತು. ಭಾರತ ಚೀನದ ಹೆಸರನ್ನು ಉಲ್ಲೇಖಿಸದಿರುವದರ ಹಿಂದಿರುವ ಉದ್ದೇಶ ಚೀನಾ ಒಂದಲ್ಲ ಒಂದು ದಿನ ಭಾರತದ ಸ್ನೇಹಿತನಾಗಿ ಮುಂದುವರೆಯಬಹುದು ಎಂಬುದಲ್ಲ, ಬದಲಿಗೆ ವಿಶ್ವದ ಇತರೆ ರಾಷ್ಟ್ರಗಳು ಇದನ್ನು ಉಲ್ಲೆಖಿಸಿ ವಿರೋಧಿಸುವಂತಾಗಲಿ ಎಂಬುದಾಗಿತ್ತು. ವಿಶ್ವ ಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳು ಚೀನಾದ ಹೆಸರನ್ನು ಉಲ್ಲೆಖಿಸಿ ಚೀನಾದ ಹೇಳಿಕೆಯನ್ನು ವೀರೋಧಿಸಿದ್ದವು. ಚೀನವನ್ನು ಖಳನಾಯಕನಾಗಿ ಬಿಂಬಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.

Asia Times Website ನಲ್ಲಿ ಲೇಖಕ ಡೇವಿಡ್ ಹಟ್ ಬರೆದಿರುವ ವಿಸ್ತೃತ ವರದಿಯಲ್ಲಿ ಚೀನಾ, ಯುರೋಪಿಯನ್ ಯುನಿಯನ್ (EU) ಗೆ ಮಾಡಿರುವ ಮೋಸದ ಕುರಿತು ಉಲ್ಲೇಖಿಸಿದ್ದಾನೆ. ಕರೋನದ ವಿಷಮ ಸ್ಥಿತಿಯ ಹೊಡೆತಕ್ಕೆ ಸಿಕ್ಕಿಕೊಂಡ ಇಟಲಿ, ಸ್ಪೇನ್ ನಂತಹ ಯೂರೋಪಿನ ರಾಷ್ಟ್ರಗಳು ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದದ ಎಡವಟ್ಟುಗಳಲ್ಲಿ ಚೀನಾದ ಮೋಸ ಕಣ್ಣಿಗೆ ರಾಚುವಂತಿದೆ.  ಸಹಾಯಕ್ಕಾಗಿ ಕೈಚಾಚಿದ್ದ ಸ್ಪೇನ್ ಗೆ ವೈದ್ಯಕೀಯ ಸಹಾಯದ ನೆಪದಲ್ಲಿ ಚೀನಾ ಮಾಡಿರುವ ಮೋಸ ಅಲ್ಪಪ್ರಮಾಣದ್ದಲ್ಲ. ಸ್ಪೈನ್ US$ 467 ಮಿಲಿಯನ್ ಗಳ ಒಪ್ಪಂದವನ್ನು ಚೀನಾ ಕೈಗಿಟ್ಟಿತ್ತು. ಇದರಲ್ಲಿ 550 ಮಿಲಿಯನ್ ಮಾಸ್ಕ್ ಗಳು, 5.5 ಮಿಲಿಯನ್ ತ್ವರಿತ ಚಿಕಿತ್ಸಾ ಕಿಟ್ ಗಳು 950 ಕೃತಕ ಉಸಿರಾಟದ ಸಲಕರಣೆಗಳು ಇದ್ದವು. ಇವುಗಳಲ್ಲಿ ಬಹುತೇಕ ದೋಷಪೂರಿತವಾಗಿದ್ದವೆಂಬ ವರದಿಗಳು ಹೊರಬಿದ್ದಿವೆ.

Global brand counterfeiting ನ 2018 ರ ವರದಿ ಪ್ರಕಾರ $1.8 ಟ್ರಿಲಿಯನ್ ಉತ್ಪನ್ನಗಳು ಚೀನಾದಲ್ಲೆ ಉತ್ಪಾದನೆಗೊಳ್ಳುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ ಇದು ಜಗತ್ತಿನಲ್ಲಿ ಉತ್ಪಾದನೆಯಾಗುತ್ತಿರುವ ಶೇಕಡ 80 ರಷ್ಟಿದೆ. ಇದರಲ್ಲಿ ಯುದ್ದ ಸಲಕರಣೆಗಳಿಂದ ಮೊದಲುಗೊಂಡು ಕೈಗಡಿಯಾರದವರೆಗೆ ಎಲ್ಲವು ಚೀನಾದಲ್ಲಿ ನಕಲಾಗಿ ಉತ್ಪಾದನೆಗೊಳ್ಳುತ್ತಿವೆ. ಭಾರತದಂತಹ ಮಾರುಕಟ್ಟೆಗೆ ತಾನು ಉತ್ಪಾದಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರುತ್ತಿರುವ ಚೀನಾ ತಾನು ನಷ್ಟ ಮಾಡಿಕೊಂಡಾದರು ಸರಿಯೇ ಭಾರತದ ಸಣ್ಣ – ಗುಡಿ ಕೈಗಾರಿಕೆಗಳನ್ನು ಉಸಿರುಗಟ್ಟಿಸಬೇಕು ಎಂಬ ಚೀನಾದ cunning ಮಾನಸಿಕತೆ ಸುಲಭದಲ್ಲಿ ಅರ್ಥವಾಗಲಾರದು, ಇಂದಿನಂತೆಯೇ ಸಾಗಿದರೆ ಚೀನಾದಿಂದ ವಸ್ತುಗಳು ಬಾರದೆ ಹೋದರೆ ನಮ್ಮ ಮನೆ ನಿಭಾಯಿಸುವುದು ಸಾಧ್ಯವೇ ಇಲ್ಲ ಎನ್ನುವ ಒಂದು ದಿನ ಬರಲಿದೆ ಅಂದು ಚೀನಾ ಹೇಳಿದಷ್ಟು ಹಣ ನೀಡಿ ಖರೀದಿಸಬೇಕಾದ ದರ್ದು ಭಾರತಕ್ಕೆ ಬರಬಹುದು ಎಂಬುದು ಚೀನಾದ ಅಚಲ ವಿಶ್ವಾಸ. ಬಹುಶಃ ಇದಕ್ಕಿಂತ ಹೆಚ್ಚಾಗಿ ಇನ್ನಾವ ಉದಾಹರಣೆಗಳು ಚೀನಾದ ಮೋಸವನ್ನು ಬಯಲುಮಾಡಲು ಬೇಕಾಗಿಲ್ಲವೆನಿಸುತ್ತದೆ.

ಚೀನಾ ಗಡಿಯಲ್ಲಿ ಮಾಡುತ್ತಿರುವ ಆಟಾಟೋಪವನ್ನು ಸಮರ್ಥವಾಗಿ ಎದುರಿಸಲು ಸೈನ್ಯ ಸರ್ಕಾರಗಳೆರಡು ಸಜ್ಜಗಿವೆ. ಆದರೆ ಆಂತರಿಕವಾಗಿ ಚೀನಾ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು ಸಮಾಜವೆಷ್ಟು ಸಿದ್ದವಾಗಿದೆ ಎಂಬುದೆ ಪ್ರಶ್ನೆ. 1945 ರಲ್ಲಿ ಜಪಾನ್ ಸಮಾಜ ಅಮೇರಿಕಾದೊಂದಿಗೆ ನಡೆದುಕೊಂಡ ರೀತಿ ಭಾರತಕ್ಕೆ ನಿಜಕ್ಕು ಪಾಠವಾಗಬಲ್ಲುದು, ಅಮೇರಿಕಾ ಹಿರೊಶಿಮಾ ಮೇಲೆ ಅಣುಬಾಂಬ್ ದಾಳಿ ನಡೆಸಿ ಜಪಾನ್ ಗೆ ಮರ್ಮಾಘಾತವನ್ನು ಕೊಟ್ಟ ನಂತರವೂ ಸ್ಯಾನ್ ಫ್ರಾನ್ಸಿಸ್ಕೋ ಇಂದ ತಾನು ಬೆಳೆದ ಅಕ್ಕಿಯನ್ನು ಜಪಾನ್ ಗೆ ಕಡಿಮೆ ಬೆಲೆಯಲ್ಲಿ ಕಳಿಸಿ ಕೊಡುತ್ತಲಿತ್ತು, ಸರ್ಕಾರದ ಒಪ್ಪಂದದ ಕಾರಣಕ್ಕೆ ಅದನ್ನು ನಿರ್ಬಂದಿಸುವುದು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ ಆದರೆ ಸಮಾಜ ಸುಮ್ಮನಿರಲಿಲ್ಲ ’ನಮ್ಮ ಮನೆಗೆ ಬೆಂಕಿ ಕೊಟ್ಟು, ಸರ್ವನಾಶ ಮಾಡಿದ ನಂತರವು ನಿಮ್ಮ ಅಕ್ಕಿಯನ್ನು ತಿನ್ನುವ ಗುಲಾಮರು ನಾವಲ್ಲ’ ಎಂಬಂತೆ ನಿರ್ಧರಿಸಿದರು You can enter the markets of Japan but not the houses ಎಂದು ಸರ್ಕಾರ ಮಾಡಲು ಆಗದ್ದನ್ನು ಸಮಾಜವೇ ಅನುಷ್ಟಾನಗೊಳಿಸಿತ್ತು, ಅಂದಿನಿಂದ ಅಮೆರಿಕಾದಲ್ಲಿ ಉತ್ಪಾದನೆಗೊಂಡ ಒಂದು ಸೂಜಿಯನ್ನು ಸಹ ಜಪಾನ್ ನಲ್ಲಿ ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಕಷ್ಟ.   ನಂತರ ಚೀನಾವನ್ನು ಅರಿಯದಿದ್ದರೆ ನಾವದನ್ನು ಎದುರಿಸಲಾರೆವು ಎಂಬುದು ಅಕ್ಷರಶಃ ಸತ್ಯ. ಮ್ಯಾರಥಾನ್ ನೂರುಕ್ಕೆ ಸಮೀಪಿಸುತ್ತಿದ್ದಂತೆ ಅದರ ಶಕ್ತಿ, ವೇಗ, ಕುತಂತ್ರ ತೀವ್ರವಾಗುವುದರಲ್ಲಿ ಯಾವ ಅನುಮಾನವು ಇಲ್ಲ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

New Domicile Policy for J&K: Relief to lakhs of refugees

Thu Jul 9 , 2020
New Domicile Policy for J&K: A big relief to lakhs of refugees in camps and people of rest of India residing in the region Author: A S Yeshwanth, Jammu Kashmir Study Centre, Karnataka Introduction It is established beyond doubt that the separatist element in Jammu and Kashmir not concerned with […]