ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

ಸ್ವದೇಶಿ ಬಳಸಿ – ಚೀನಾ ಬಹಿಷ್ಕರಿಸಿ

ಲೇಖನ: ಸತ್ಯನಾರಾಯಣ ಶಾನಭಾಗ್, ಜಮ್ಮ ಕಾಶ್ಮೀರ ಅಧ್ಯಯನ ಕೇಂದ್ರ, ಬೆಂಗಳೂರು.

(15 ಜೂನ್ 2020ರ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ)

ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಈ ಸಂದರ್ಭದಲ್ಲಿ ವಿಶ್ವಕ್ಕೇ ಕೊರೊನಾ ಸೋಂಕಿನ ಕೊಡುಗೆ ನೀಡಿದ ಕಮ್ಯುನಿಸ್ಟ್ ಚೀನಾ ಮಾತ್ರ ತನ್ನ ಸ್ವಾರ್ಥ ಸಾಧನೆಯ ಹಳೆಯ ಚಾಳಿಯನ್ನು ಮುಂದುರವರಿಸಿದೆ.

೨೦೧೯ರ ನವೆಂಬರ್-ಡಿಸೆಂಬರ್ ವೇಳೆಗೆ ಚೀನಾದ ವುಹಾನ್ ಪ್ರಾಂತದಲ್ಲಿ ಪತ್ತೆಯಾದ ಕೊರೊನಾ ಮಹಾಮಾರಿಯನ್ನು ಮೊದಲು ಮುಚ್ಚಿಡಲು ಪ್ರಯತ್ನಿಸಿ, ನಂತರ ಮಾನವರಿಂದ ಮಾನವರಿಗೆ ಹರಡುವುದಿಲ್ಲ ಎಂದ ಚೀನಾ ಸರ್ಕಾರ ವಿಶ್ವದ ಉಳಿದ ದೇಶಗಳಿಗೆ ಸಮಯದಲ್ಲಿ ಜಾಗೃತವಾಗುವಂತೆ ಮುನ್ನೆಚ್ಚರಿಕೆ ನೀಡಲು ವಿಳಂಬ ಮಾಡಿತು. ವುಹಾನ್‌ನಿಂದ ತನ್ನ ದೇಶದ ಉಳಿದ ನಗರಗಳಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಂಡ ಚೀನಾ ಇತರೆ ದೇಶಗಳಿಗೆ ಈ ಸೋಂಕು ಹರಡುವುದನ್ನು ತಡೆಗಟ್ಟುವ ವಿಷಯದಲ್ಲಿ ತಲೆಕೆಡಿಸಿಕೊಳ್ಳಲೇ ಇಲ್ಲ. ಈಗಲೂ ಈ ವೈರಸ್ ಕುರಿತು ಜಾಗತಿಕ ಮಟ್ಟದ ಸ್ವತಂತ್ರವಾದ ತನಿಖೆಯಾಗಬೇಕೆಂದರೆ ಚೀನಾ ಮಾಹಿತಿ ನೀಡಲು ತಯಾರಿಲ್ಲ. ಚೀನಾದಲ್ಲಿ ಕೊರೊನಾ ಹರಡಿರುವ ಕುರಿತು ಮತ್ತು ಅದರಿಂದಾದ ಸಾವುನೋವಿನ ಕುರಿತು ಅಂಕಿಅಂಶಗಳನ್ನೇ ಮುಚ್ಚಿಟ್ಟಿದೆ. ಇವೆಲ್ಲ ವಾಸ್ತವಾಂಶಗಳಿಗೆ ಬಲವಾದ ಆಧಾರಗಳು ವರದಿಯಾಗಿವೆ.

ಈ ನಡುವೆ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ ಮತ್ತಿತರ ದೇಶಗಳೊಂದಿಗೆ ತಕರಾರು ತೆಗೆದ ಚೀನಾ ಅಲ್ಲಿನ ಚಿಕ್ಕಪುಟ್ಟ ದ್ವೀಪ-ನಡುಗಡ್ಡಗಳಿಗೆ ನಾಮಕರಣ ಮಾಡಿ ಹಕ್ಕು ಸ್ಥಾಪನೆಗೆ ಮುಂದಾಯಿತು. ಕೊರೊನಾ ವೈರಸ್ ಕುರಿತು ತನಿಖೆಯಾಗಬೇಕು ಎಂದು ಪಟ್ಟು ಹಿಡಿದ ಆಸ್ಟ್ರೇಲಿಯಾ ಮೇಲೆ ಗರಂ ಆಗಿ ಆಸ್ಟ್ರೇಲಿಯಾದಿಂದ ಚೀನಾಕ್ಕೆ ರಫ್ತಾಗುತ್ತಿದ್ದ ಬಾರ್ಲಿಯ ಮೇಲೆ ನಿರ್ಭಂದ ಹೇರಿ ಹೆದರಿಸಿತು. ಕಳಪೆ ಗುಣಮಟ್ಟದ ಪರೀಕ್ಷಾ ಕಿಟ್‌ಗಳು, ಮಾಸ್ಕ್‌ಗಳು, ಪಿಪಿಇ ಕಿಟ್‌ಗಳನ್ನು ವಿದೇಶಗಳಿಗೆ ರವಾನೆ ಮಾಡಿ ಮುಖಭಂಗವನ್ನೂ ಅನುಭವಿಸಿತು. ಟಿಬೆಟ್, ತೈವಾನ್‌ಗಳ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಜೊತೆಗೆ, ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವವಾದಿ ಆಂದೋಲನ ಮಟ್ಟಹಾಕಲು ಕೋವಿಡ್‌ನ ಸಂಕಷ್ಟದ ಸಂದರ್ಭವನ್ನು ಬಳಕೆ ಮಾಡಿಕೊಳ್ಳುತ್ತಿದೆ.

ಭಾರತದ ವಿರುದ್ಧವೂ ಮತ್ತೆ ತಕರಾರು ತೆಗೆದಿರುವ ಚೀನಾ ನಮ್ಮನ್ನು ಬೆದರಿಸುವ ಚೇಷ್ಟೆಗಳನ್ನು ಮತ್ತೆ ಶುರುಮಾಡಿದೆ. ಈಗಾಗಲೇ ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದ ಮೂಲಕ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನಿರ್ಮಿಸಿರುವ ಚೀನಾ ಗಿಲ್ಗೀಟ್ ಬಾಲ್ಟಿಸ್ತಾನದಲ್ಲಿ ೪೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಝೇಲಮ್ ನದಿಗೆ ಡೈಮರ್-ಭಾಷಾ ಅಣೆಕಟ್ಟನ್ನು ಕಟ್ಟಲು ನೆರವು ನೀಡಲು ಮುಂದಾಯಿತು. ೪೫೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಈ ಜಲವಿದ್ಯುತ್ ಯೋಜನೆ ಚೀನಾ ಸರ್ಕಾರದ ವಿದ್ಯುತ್ ಕಂಪನಿ ಮತ್ತು ಪಾಕಿಸ್ತಾನ ಸೈನ್ಯದ ಗಡಿ ಕಾಮಗಾರಿ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. ಭಾರತ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.

ಇತ್ತೀಚೆಗೆ ಭಾರತದೊಂದಿಗೆ ಗಡಿ ವಿವಾದ ಎತ್ತಿದ ನೇಪಾಳ ಹೊಸ ನಕ್ಷೆಯನ್ನು ಪ್ರಕಟಿಸಿ ಉತ್ತರಾಖಂಡ ರಾಜ್ಯದ ಕಾಲಾಪಾನಿ, ಲಿಂಪಿಯುಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನವೆಂದು ವಾದಿಸಿತು. ನೇಪಾಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಈ ಕ್ರಮದ ಹಿಂದೆ ಚೀನಾದ ಕುಮ್ಮಕ್ಕಿದೆ ಎಂದು ಬಲವಾಗಿ ಕೇಳಿಬರುತ್ತಿದೆ.

ಇಷ್ಟು ದಿವಸ ಅರುಣಾಚಲ ಪ್ರದೇಶದಲ್ಲಿ ಗಡಿತಂಟೆ ನಡೆಸುತ್ತಿದ್ದ ಚೀನಾ ಈ ಬಾರಿ ಪೂರ್ವ ಲಢಾಕ್‌ನಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ (Line of Actual Control)ಯ ಬಳಿ ಭಾರತ ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟುಮಾಡುವ ಸಲುವಾಗಿ ತಗಾದೆ ತೆಗೆದಿದೆ. ಗಡಿಯಲ್ಲಿ ಸಾವಿರಾರು ಚೀನಿ ಸೈನಿಕರು ಜಮಾವಣೆಗೊಂಡಿದ್ದಾರೆ. ಅವರನ್ನು ದಿಟ್ಟವಾಗಿ ತಡೆದಿರುವ ಭಾರತೀಯ ಸೈನಿಕರೊಂದಿಗೆ ಕಳೆದ ಅನೇಕ ದಿನಗಳಿಂದ ನೂಕು ನುಗ್ಗಲು ಘರ್ಷಣೆ, ಕಲ್ಲು ತೂರಾಟ ನಡೆದ ವರದಿಯಾಗಿದೆ. ಯುದ್ಧದ ಸಂಭವಿಸಬಹುದೇನೋ ಎನ್ನುವ ಪರಿಸ್ಥಿತಿ ಲಢಾಕಿನ ಗಡಿಯಲ್ಲಿ ನಿರ್ಮಾಣವಾದುದಕ್ಕೆ ಚೀನಾ ನೇರ ಕಾರಣ. ಈಗಿನ ಲಢಾಕ್ ಕೇಂದ್ರಾಡಳಿತ ಪ್ರದೇಶದ (ಹಿಂದಿನ ಜಮ್ಮು ಕಾಶ್ಮೀರ ರಾಜ್ಯ) ೪೨,೭೩೫ಚ.ಕಿಮೀ ಪ್ರದೇಶ ಈಗಾಗಲೇ ಚೀನಾದ ವಶದಲ್ಲಿದೆ. ಇದರಲ್ಲಿ ಅಕ್ಸಾಚಿನ್ ಪ್ರದೇಶದ ೩೭,೫೫೫ಚಕಿಮೀ ಪ್ರದೇಶ ೧೯೬೨ ಯುದ್ಧದಲ್ಲಿ ಆಕ್ರಮಿಸಿಕೊಂಡಿದ್ದಾದರೆ ಉಳಿದ ೫,೧೮೦ ಚಕಿಮೀ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಶಕ್ಸಗಾಮ್ ಕಣಿವೆ ಪ್ರದೇಶ ೧೯೬೩ರಲ್ಲಿ ಪಾಕಿಸ್ತಾನದಿಂದ ಉಡುಗೊರೆಯಾಗಿ ಪಡೆದದ್ದು.

ಗಡಿಯಲ್ಲಿ ಭಾರತದ ಸೈನಿಕರು ಸಮರ್ಥವಾಗಿ ಚೀನಿಯರನ್ನು ತಡೆದಿದ್ದಾರೆ, ಚೀನಾಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶವನ್ನು ಸರ್ಕಾರ ಕೂಡ ಸ್ಪಷ್ಟವಾಗಿ ರವಾನಿಸಿದೆ. ಗಡಿಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳೂ ನಿಲ್ಲದೇ ನಡೆಯಲಿವೆ ಎಂದು ಭಾರತ ದೃಢ ನಿಲುವು ತಾಳಿದೆ. ಹೀಗಿರುವಾಗ ದೇಶದೊಂದಿಗೆ ನಿಲ್ಲಬೇಕಾದುದು ನಾಗರಿಕರ ಕರ್ತವ್ಯವಾಗಿದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಮತ್ತು ಆ ಮೂಲಕ ಪರೋಕ್ಷವಾಗಿ ಚೀನಾಕ್ಕೆ ಲಾಭ ಮಾಡಿಕೊಟ್ಟು ಬೆಂಬಲ ನೀಡುವುದನ್ನು ನಿಲ್ಲಿಸಬೇಕೆಂಬ ಆಂದೋಲನ ಭಾರತದೆಲ್ಲಡೆ ವೇಗ ಪಡೆದುಕೊಳ್ಳುತ್ತಿದೆ. ಒಮ್ಮೆಲೇ ಎಲ್ಲಾ ಚೀನಾ ನಿರ್ಮಿತ ವಸ್ತುಗಳನ್ನು-ಉದಾಹರಣೆಗೆ ಮೊಬೈಲ್ ಫೋನ್‌ಗಳನ್ನು ತ್ಯಜಿಸುವುದು ಕಷ್ಟವಾಗಬಹುದು. ಆದರೆ ಹಂತಹಂತವಾಗಿ ಒಂದೆರಡು ವರ್ಷಗಳ ಅವಧಿಯಲ್ಲಿ ಚೀನಾ ವಸ್ತುಗಳನ್ನು ತ್ಯಜಿಸುತ್ತ ಸ್ವದೇಶಿ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದು ಖಂಡಿತಾ ಸಾಧ್ಯವಿದೆ. ಉದಾಹರಣೆಗೆ ಚೀನಾದ ವಿದೇಶ ನೀತಿಯ ಸಾಧನವಾದ ಟಿಕ್‌ಟಾಕ್ ಆಪ್‌ನ್ನು ಈಗಲೇ ತೆಗೆದುಹಾಕಬಹುದು. ಸ್ವದೇಶಿ ಮತ್ತು ಆತ್ಮನಿರ್ಭರವಾಗುವ ಯಜ್ಞದಲ್ಲಿ ನಾಗರಿಕರೆಲ್ಲರೂ ಪಾಲ್ಗೊಳ್ಳಬೇಕಿದೆ.

ವಿಶ್ವದ ದೊಡ್ಡಣ್ಣನಾಗಿ ಮೆರೆಯಬೇಕೆಂಬ ಕಮ್ಯುನಿಸ್ಟ್ ಚೀನಾದ ಮಹತ್ವಾಕಾಂಕ್ಷೆ ಮತ್ತು ಈ ಉದ್ದೇಶಪೂರ್ತಿಗಾಗಿ ಚೀನಾ ಕಮ್ಯುನಿಸ್ಟ್ ಪಕ್ಷ ಅನುಸರಿಸುತ್ತಿರುವ ಮಾರ್ಗಗಳು ವಿಶ್ವಶಾಂತಿ ಮತ್ತು ಸಮತೋಲನಕ್ಕೆ ಅಪಾಯಕಾರಿಯಾಗಿವೆ. ವಿಶ್ವಶಾಂತಿಗೇ ಕಮ್ಯನಿಸ್ಟ್ ಚೀನಾದ ಮಹತ್ವಾಕಾಂಕ್ಷಿ ಧೋರಣೆ ಮಾರಕವಾಗುತ್ತಿದೆಯೇ? ಎನ್ನುವುದು ಇಲ್ಲಿ ಹುಟ್ಟುವ ಪ್ರಶ್ನೆ. ಸಣ್ಣಪುಟ್ಟ ದೇಶಗಳ ಸಾರ್ವಭೌಮತೆಯೊಂದಿಗೇ ಆಟವಾಡುವ ಚೀನಾದ ವಿದೇಶ ವ್ಯವಹಾರ ನೀತಿ ಭಾರತದಂತಹ ದೊಡ್ಡ ದೇಶದ ಆಂತರಿಕ ವಿಷಯದಲ್ಲಿ ಕೈಯಾಡಿಸುವ ಮಟ್ಟಕ್ಕೂ ಮುಂದುವರಿದಿದೆ. ಇಂತಹ ವಿಕ್ಷಿಪ್ತ ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕೈಜೋಡಿಸುವುದು ನಾಗರಿಕರ ಕರ್ತವ್ಯ. ಅದಕ್ಕಾಗಿ ದೇಶದ ನಾಗರಿಕರ ಕೈಯಲ್ಲಿರುವ ಸಮರ್ಥ ಅಸ್ತ್ರ ಬಾಯ್ಕಾಟ್ ಚೈನಾ ಚೀನಾದ ಎಲ್ಲ ಉತ್ಪನ್ನಗಳ ಬಹಿಷ್ಕಾರ.

 

ಚೀನಾ ಗಡಿ ಖ್ಯಾತೆಗೆ ನಮ್ಮ ಸೇನೆ ಬುಲೆಟ್ ಮೂಲಕ ಉತ್ತರ ನೀಡಲಿದೆ. ಜೊತೆಗೆ ಭಾರತೀಯರಾದ ನಾವು ವ್ಯಾಲೆಟ್ ಮೂಲಕ ಉತ್ತರ ನೀಡಬೇಕಿದೆ. ಇದಕ್ಕೆ ನಾವು ಚೀನಿ ವಸ್ತುಗಳನ್ನು ಬಹಿಷ್ಕರಿಸಿ. ಗ್ರಾಮ, ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸಿ ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನೇ ಬಳಸೋಣ. ಬುಲೆಟ್ ಶಕ್ತಿಗಿಂತ ವ್ಯಾಲೆಟ್ ಶಕ್ತಿ ಹೆಚ್ಚು. ಭಾರತದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಚೀನಾ ಪ್ರತಿ ವರ್ಷ ೫ ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಹೀಗಾಗಿ ನಾವು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ನಮ್ಮ ದೇಶವನ್ನು ಬಲಪಡಿಸಬೇಕಿದೆ.

ಸೋನಮ್ ವಾಂಗ್‌ಚುಕ್

ಲಢಾಕ್ ಮೂಲದ ವಿಜ್ಞಾನಿ, ಶಿಕ್ಷಣ ತಜ್ಞ

 

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Veteran BMS leader and one among the first batch of Kerala RSS Pracharaks R Venugopal is no more

Thu Jun 11 , 2020
Veteran BMS leader and one among the first batch of Kerala RSS Pracharaks R Venugopal is no more Courtesy : Organiser Kerala’s senior most Sangh Pracharak and former national working president of Bharatiya Mazdoor Sangh (BMS) R Venugopal breathed his last in the wee hours of June 11, Thursday, 2020. […]