ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು : ಶ್ರೀ ಮ ವೆಂಕಟರಾಮು

ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು :
ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ

ಭಾರತದ ಸ್ವಾತಂತ್ರ್ಯ ಆಂದೋಲನ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಭಾರತದ ಮಾನವೀಯ ವಿಕಾಸಕ್ಕೆ ಒತ್ತು ನೀಡಿತ್ತು. ಗಾಂಧೀಜಿಯವರ ಕನಸಿನಲ್ಲಿ ರಾಮರಾಜ್ಯವಿತ್ತು. ಅದಕ್ಕಾಗಿ ಇಡೀ ಭಾರತದ ಜನಮಾನಸವನ್ನು ಸಿದ್ಧಗೊಳಿಸಬೇಕಿತ್ತು. ಮರ್ಯಾದಾಪುರುಷೋತ್ತಮ ಶ್ರೀರಾಮ ಬೆಸ್ತರ ಮುಖಂಡನಾದ ಗುಹನಿಗೆ ಆಪ್ತನಾದವನು ಪಕ್ಷಿ ಪ್ರಮುಖನಾದ ಜಟಾಯುವಿಗೆ ಸಂಸ್ಕಾರ ಕರ್ಮವನ್ನು ಮಾಡಿದವನು, ಶಬರಿ ತಾನು ಕಚ್ಚಿ ನೋಡಿ ಸಿಹಿಯಾದ ಹಣ್ಣುಗಳನ್ನು ಆಯ್ದುಕೊಟ್ಟಾಗ ಆ ಹಣ್ಣುಗಳನ್ನು ತಿಂದವನು. ಕಪಿರಾಜನಾದ ಸುಗ್ರೀವನಲ್ಲಿ ಸ್ನೇಹವನ್ನು ಬೆಳೆಸಿದವನು, ರಕ್ಕಸರ ಅರಸನಾದ ವಿಭೀಷಣನೂ ರಾಮನಿಗೆ ಪ್ರೀತಿಪಾತ್ರನಾದವನು. ರಾಮನಿಗೆ ನಗರ ಗ್ರಾಮ ಅರಣ್ಯ ಎಲ್ಲೂ ಭೇದ ಕಾಣಲಿಲ್ಲ. ಬಡತನ ಸಿರಿತನಗಳು ಮಾನವೀಯ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. ಹಾಗೇ ಮನುಷ್ಯರ ನಡುವೆ ಭೇದವಿಲ್ಲದ ಭಾರತವನ್ನು ನಿರ್ಮಿಸುವ ಹಂಬಲ ಗಾಂಧೀಜಿಯವರದಾಗಿತ್ತು.

Mahatma Gandhi

ನಮ್ಮ ದೇಶದಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಅಸ್ಪೃಷ್ಯತೆ ಅತ್ಯಂತ ಅಮಾನವೀಯ ಮತ್ತು ಅನಿಷ್ಟದ ರೂಢಿ. ಅದನ್ನು ತೊಡೆದುಹಾಕಿದಲ್ಲದೇ ಮಾನವೀಯ ಭಾರತದ ನಿರ್ಮಾಣ ಸಾಧ್ಯವಿಲ್ಲ ಎಂಬ ದೃಢವಾದ ಚಿಂತನೆ ಗಾಂಧೀಜಿಯವರದ್ದು. ಒಂದು ಹಂತದಲ್ಲಿ ಸ್ವಾತಂತ್ರ್ಯಾಂದೋಲನಕ್ಕಿಂತ ಅಸ್ಪೃಷ್ಯತೆಯ ನಿವಾರಣೆ ಮುಖ್ಯ ಎಂದೆನಿಸಿತ್ತು ಮಹಾತ್ಮ ಅವರಿಗೆ. ಒಂದಿಷ್ಟು ಕಾಲ ರಾಜಕೀಯ ಚಟುವಟಿಕೆಗಳನ್ನು ಗೌಣವಾಗಿಸಿ ಉಪೇಕ್ಷಿತ ಬಂಧುಗಳಲ್ಲಿ ಆತ್ಮವಿಶ್ವಾಸ ತುಂಬುವ ಉಳಿದವರಲ್ಲಿರುವ ಶ್ರೇಷ್ಠತೆಯ ವ್ಯಸನವನ್ನು ಅಳಿಸುವ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.

೧೯೩೩ರ ನವೆಂಬರ್‌ನಿಂದ ೧೯೩೪ರ ಆಗಸ್ಟ್ ತಿಂಗಳವರೆಗೆ ಆಸ್ಪೃಷ್ಯತೆಯ ನಿವಾರಣೆ ಜಾಗೃತಿಗಾಗಿಯೇ ಭಾರತ ಯಾತ್ರೆ ಕೈಗೊಂಡರು. ಹನ್ನೆರಡು ಸಾವಿರದ ಐನೂರು ಮೈಲಿಗಳ ಉದ್ದಕ್ಕೂ ಯಾತ್ರೆ ಮಾಡಿದರು. ಅವರ ಯಾತ್ರೆಯನ್ನು ಬಹುಮಟ್ಟಿಗೆ ಎಲ್ಲರೂ ಸ್ವಾಗತಿಸಿದರು. ಕೆಲವರು ಮನಸ್ಸು ಸಣ್ಣದಾಗಿಸಿಕೊಂಡರು. ಪುಣೆಯಲ್ಲಿ ಅವರ ಯಾತ್ರೆಯ ಮೇಲೆ ಬಾಂಬೊಂದನ್ನು ಎಸೆಯಲಾಯಿತು. ದೈವವಾಶಾತ್ ಮಾಹಾತ್ಮಾಜೀಯವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಆಗ ಗಾಂಧಿಜೀ ಹೇಳಿದರು, "ಮಾನವ ಜಗತ್ತಿಗೆ ಹೇಳಬೇಕಾದ ಸಮಾನತೆಯ ಸತ್ಯವನ್ನು ಉಚ್ಚ ಸ್ವರದಲ್ಲಿ ಹೇಳುವುದು ನನ್ನ ಆದ್ಯ ಕರ್ತವ್ಯ. ಇದಕ್ಕಾಗಿ ಜೀವ ತೆರಬೇಕಾಗಿ ಬಂದರೆ ಅದಕ್ಕೂ ಸಿದ್ಧನಿದ್ದೇನೆ."

ಭಾರತದಲ್ಲಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿದ್ದರೂ ಅಸ್ಪೃಷ್ಯತೆ ಅಷ್ಟು ಹಿಂದಿನದಲ್ಲ. ಭಾರತೀಯ ಇತಿಹಾಸವನ್ನು ಗಮನಿಸಿದರೆ ಎಲ್ಲ ವರ್ಣದವರಿಗೂ ಶಿಕ್ಷಣ ಸಿಗುತ್ತಿತ್ತು. ಶೂದ್ರವರ್ಗದಿಂದ ಬಂದ ಅನೇಕರು ಆಳರಸರಾಗಿದ್ದರು ಎನ್ನುವುದು ತಿಳಿಯುತ್ತದೆ. ಮತಾಂಧರ ಆಕ್ರಮಣ, ಶ್ರೇಷ್ಟತೆಯ ಅತಿವ್ಯಸನಿಗಳಾದ ಪಾಶ್ಚಾತ್ಯ ಪ್ರಭುಗಳ ಆಡಳಿತದಲ್ಲಿ ಭಾರತದ ಸಂಪತ್ತಿನ ಸೂರೆ ಮುಂದುವರಿದಂತೆ ಅನೇಕ ರೀತಿಯ ಅನಿಷ್ಟಗಳು ತಲೆದೋರಿದವು. ನಾರಾಯಣ ಗುರುಗಳು, ವಿವೇಕಾನಂದರು, ಶ್ರದ್ಧಾನಂದರು ಇನ್ನೂ ಅನೇಕ ಸಂತರು ಇದರ ವಿರುದ್ಧ ದನಿಯೆತ್ತಿದರು. ಮಹಾತ್ಮಾ ಗಾಂಧೀಜಿಯವರು ಅದಕ್ಕೆ ರಾಜಕೀಯ ಇಚ್ಚಾಶಕ್ತಿಯನ್ನು ತುಂಬಿದರು, ನೈತಿಕ ಒತ್ತಡವನ್ನು ಹಾಕಿದರು. ಸ್ವತಂತ್ರ ಭಾರತದಲ್ಲಿ ಅಸ್ಪೃಷ್ಯತೆಯ ವಿರುದ್ಧ ಕಾನೂನು ಮಾಡಿದೆವು.

ಆದರೂ ನಮ್ಮ ಮನಸ್ಸಿನ ಸಣ್ಣತನ ಪೂರ್ಣ ಅಳಿದಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿಲ್ಲ. ಗಾಂಧೀಜಿಯವರಿನ ಕನಸಿನ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಮರ್ಯಾದೆಯುತ ಬದುಕು ಸಿಗಬೇಕು. ನಮ್ಮ ಬದುಕಿಗೊಂದು ಘನತೆ ಪ್ರಾಪ್ತವಾಗುವುದು ದೇವಸೃಷ್ಟಿಯ ಎಲ್ಲರನ್ನೂ ಗೌರವಿಸುವ ಭಾವ ಬೆಳೆದಾಗ. ಮನೆಯ ನಾಯಿ ಬೆಕ್ಕುಗಳನ್ನು ಮಡಿಲಲ್ಲಿಟ್ಟು ಮುದ್ದಿಸುವ ನಮಗೆ ಮನುಷ್ಯರು ಅಸ್ಪೃಷ್ಯರಾಗುವುದು ಅಕ್ಷಮ್ಯ ಅಪರಾಧ. ನಮ್ಮೆಲ್ಲ ಮಂದಿರಗಳು, ಕೆರೆಬಾವಿಗಳು, ಸಾರ್ವಜನಿಕ ಸ್ಥಳಗಳು ಎಲ್ಲ ಸಾರ್ವಜನಿಕರಿಗೂ ಮುಕ್ತವಾಗುವವರೆಗೂ ಇಡೀ ಹಿಂದೂ ಸಮಾಜ ಸಮಾನತೆಯನ್ನು ಆಚರಿಸುವವರೆಗೂ ಗಾಂಧೀಜಿಯವರ ಆತ್ಮಕ್ಕೆ ಮುಕ್ತಿ ಇಲ್ಲ, ನಮ್ಮ ಬದುಕಿಗೂ ಘನತೆ ಬರುವುದಿಲ್ಲ.

Ma Venkataramu, Pranth Sanghachalak, RSS Karnataka Dakshin

(ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ)

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಸ್ವಾತಂತ್ರ್ಯ ಹೋರಾಟ: ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ

Sat Oct 3 , 2020
ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಸ್ವಾತಂತ್ರ್ಯ ಹೋರಾಟ: ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರುಗಳ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಡಿ ಶುಕ್ರವಾರ ಹುಬ್ಬಳ್ಳಿಯ ಆರ್‍ಎಸ್‍ಎಸ್ ನ ಕೇಶವಕುಂಜದಲ್ಲಿ ಹಮ್ಮಿಕೊಂಡಿದ್ದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣನವರಿಂದ ರಚಿತವಾದ ಸ್ವಾತಂತ್ರ ಹೋರಾಟ ‘ಹಿನ್ನೋಟ ಮುನ್ನೋಟ’ ಪುಸ್ತಕದ ಬಿಡುಗಡೆ ಸಮಾರಂಭ ನೆರವೇರಿತು. ಜೆಎನ್‍ಯು ವಿಶ್ವವಿದ್ಯಾಲಯ ನವದೆಹಲಿಯ […]