ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಮತಚಲಾವಣೆಯಾದ ಆಯ್ಕೆಗಳಿಗೆ ಶ್ರೀ ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು ಇವರು ಮಾಡಿರುವ ವಿಶ್ಲೇಷಣೆ

ಕನ್ನಡ ಚಲನಚಿತ್ರ ಕುರಿತು ಮಾಧ್ಯಮದಲ್ಲಿ ವಿಸ್ತ್ರತವಾಗಿ ನಡೆದಿರುವ ಸಮೀಕ್ಷೆಗಳು ಬಲು ಅಪರೂಪ ಎನ್ನಬಹುದು.ಸಂವಾದ ನಡೆಸಿರುವ ಈ ಸಮೀಕ್ಷೆ ಚಿತ್ರ ರಂಗದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಬಲ್ಲಷ್ಟು ಸಮರ್ಥವಾಗಿದೆ. ಚಲನಚಿತ್ರ ಹೊಸ ಹೊಳಹುಗಳನ್ನು ಕಂಡು ಕೊಳ್ಳುತ್ತಿರುವ ಈ ನವ ಯುಗದಲ್ಲಿ, ನೋಡುಗನ ರುಚಿ ಕುರಿತಾಗಿಯೂ, ಚಿತ್ರ ರಂಗ ಅರಿಯಲು ಇದು ಸಹಾಯಕವಾಗಬಲ್ಲದು.


ಕರ್ನಾಟಕವನ್ನು ಪ್ರಭಾವಿಸಿದ ಸಿನೆಮಾಗಳ ಸಮೀಕ್ಷೆಯಲ್ಲಿ, ನಾಗರಹಾವು. ಬಂಗಾರದ ಮನುಷ್ಯ, ಮುಂಗಾರು ಮಳೆ, ಪ್ರೇಮಲೋಕ, ಸಾಂಗ್ಲಿಯಾನ, ಗೌರಿ ಗಣೇಶ, ಗಂಧದ ಗುಡಿ, ಜನುಮದ ಜೋಡಿ, ಅಂತ, ದ್ವೀಪ, ಚಿತ್ರಗಳನ್ನು ಓದುಗರ ಮುಂದೆ ಇಡಲಾಗಿತ್ತು. ಇವುಗಳಲ್ಲಿ ಬಂಗಾರದ ಮನುಷ್ಯ, ನಾಗರ ಹಾವು ಮತ್ತು ಗಂಧದ ಗುಡಿ ಚಿತ್ರಗಳು ಮೊದಲ ಮೂರು ಸ್ಥಾನ ಪಡೆದಿವೆ. ಎಲ್ಲ ಸಿನೆಮಾಗಳು ಪಡೆದಿರುವ ಮತವನ್ನು ಬದಿಗಿಟ್ಟು ನೋಡುವುದಾದರೇ, ಈ ಎಲ್ಲಾ ಚಿತ್ರ ಗಳು ತಮ್ಮದೇ ಆದ ಪ್ರಭಾವವನ್ನು ನೋಡುಗನ ಮೇಲೆ ಕಾಯಂ ಆಗಿ ಮೂಡಿಸಿದವು. ಪ್ರೇಮಲೋಕ, ಜನುಮದ ಜೋಡಿ ಚಿತ್ರಗಳು ಮೊದಲ್ ಮೂರು ಸ್ಥಾನ ಪಡೆಯಲು ವಿಫಲವಾಗಿದ್ದರೂ, ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರಗಳು ಮಾಡಿದ ಮೋಡಿಯನ್ನು ಮರೆಯಲಾಗದು. ರವಿಚಂದ್ರ ಈ ಚಿತ್ರದ ಮುಖಾಂತರ ನಾಡಿನ ರಸಿಕರ ಮುಂದೆ ಒನ್ದು ಹೊಸ ಸಾಧ್ಯತೆಯನ್ನೇ ತೆರೆದಿಟ್ಟರು. ಪೊಪ್ಯುಲರ ಸಿನೆಮಾಕ್ಕೆ ಆದ ಒಂದು ವಾಖ್ಯೆಯನ್ನು ಪ್ರೇಮಲೋಕ ನೀಡಿದ್ದು ಸುಳ್ಳಲ್ಲ. 

ಅದೇ ರೀತಿ ದ್ವೀಪದ ಮುಖಾಂತರ ನಿಜವಾಗಿಯೂ ನಿಂತ ನೀರಾಗಿದ್ದ ಕನ್ನಡ ಚಿತ್ರ ರಂಗಕ್ಕೆ, ಒಂದು ಆಶಾದ್ವೀಪವನ್ನುತೋರಿಸಿದವರು ಕಾಸರವಳ್ಳ್.  ಇದರಲ್ಲಿ ಸೌಂದರ್ಯ ಅಭಿನಯ ಒನ್ದು ಮಾದರಿ ಎನೆಸಿದರೇ, ಗಿರೀಶ ನಿರ್ದೇಶನವೇ ಇನ್ನೊಂದು ಮಾದರಿ ಎಂದರೇ ಆಶ್ಚರ್ಯವಿಲ್ಲ. ಸಾಂಗ್ಲಿಯಾನ, ಗೌರಿ ಗಣೇಶದಲ್ಲಿ ಅನಂತ ನಾಗ ಮತ್ತು ಶಂಕರ ನಾಗ ಅಭಿನಯ ಮಧ್ಯಮವರ್ಗವನ್ನು ಕಟ್ಟಿ ಹಾಕಿದ್ದಲ್ಲದೇ, ಗಣೇಶ ಸಿರೀಸ್ ಗಳ ಮುಖಾಂತರ ಫಣಿ ರಾಮಚಂದ್ರ ಕನ್ನಡಕ್ಕೆ ಇನ್ನೊಂದು ಸಾಧ್ಯತೆಯನ್ನು ತೋರಿಸಿದರು. ಇವೆಲ್ಲ್ದರ ಮಧ್ಯ ಸಮೀಕ್ಷೆಯನ್ನೇ ಮೂಲವಾಗಿಟ್ಟುಕೊಂಡು ನೊಡುವುದಾದರೇ, ರಾಜ್ ಯುಗ ಕನ್ನಡ ದ ಚಿತ್ರರಂಗದ ಪಾಲಿಗೆ ಸುವರ್ಣ ಯುಗವೆಂದೇ ಹೇಳಬಹುದು. ೬೦ ರಿಂದ ೯೦ ರ ಆದಿ ಭಾಗದವರೆಗೆ, ರಾಜ್ ಕಾಲದಲ್ಲಿ ಮೂಡಿಬಂದ ಚಿತ್ರಗಳು ಒಂದು ಪ್ರೇಕ್ಷಕ ವರ್ಗವನ್ನೇ ನಿರ್ಮಾಣಮಾಡಿದ್ದವು. ಸಿದ್ದಲಿಂಗಯ್ಯ ನಿರ್ದೇಶಿಸಿದ, ಬಂಗಾರದ ಮನುಷ್ಯ, ೧೦೪ ವಾರಗಳಕಾಲ ನಿರಂತರವಾಗಿ  ಪ್ರದರ್ಶನಗೊಂಡು, ಹೊಸ ದಾಖಲೆಯನ್ನೇ ಹುಟ್ಟುಹಾಕಿದವು. ಅದೇ ರೀತಿ, ತಾರಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ದಿಗ್ದರ್ಶನದಲ್ಲಿ ಮೂಡಿಬಂದ ವಿಷ್ಣುವರ್ಧನ ಅಭಿನಯದ ಮೊದಲ ಚಿತ್ರ ನಾಗರಹಾವು ಕೂಡ ತನ್ನ ನಟನೆ ಹಾಗು ಬಿಗು ಕಥಾಹಂದರಕ್ಕಾಗಿ ಪ್ರೇಕ್ಷಕನನ್ನು ಕಟ್ಟಿ ಹಾಕುವಂತಹದು. ಆದರೆ, ನವ ಹಾಗು ಇಂಟರ್ ನೆಟ್ ಯುಗದ ಚಿತ್ರಗಳಾದ ಮುಂಗಾರು ಮಳೆ, ತನ್ನ ಕಥೆ, ಹಾಡು ಹಾಗು ಗಣೇಶ್ ಅಭಿನಯ ಮತ್ತು ಭಟ್ಟರ ಕರ್ಣಧಾರತ್ವದ ಮುಖಾಂತರ ಗಲ್ಲಾ ಪಟ್ಟಿಗೆಯನ್ನು ಸೂರು ಮಾಡಿಹಾಕಿದರೂ, ಯಾಕೋ ಈ ಸಮೀಕ್ಷೆಯಲ್ಲಿ ಸ್ಥಾನಗಳಿಸಿಲ್ಲ. ಇದರ ಅರ್ಥ, ನಾಡಿನ ಚಿತ್ರ ವೀಕ್ಷಕ ಇವತ್ತಿಗೂ, ಪುಟ್ಟಣ್ಣ, ರಾಜ್, ವಿಷ್ಣು, ಅಥವಾ ಶಂಕರ್ ನಾಗ್ ತರಹದ ಆದರ್ಶವಾದಿ ನಟನೆಯನ್ನು ತೆರೆ ಮೇಲೆ ಇಶ್ಟಪಡುತ್ತಾನೆ ಎಂದು ಕಾಣಿಸುತ್ತದೆ.


ಆದರೆ ಜನಪ್ರೀಯ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ ತಮ್ಮ ಸಮಕಾಲೀನ ಹಾಗು ನಂತರದ ಪೀಳಿಗೆಯ ದಿಗ್ದರ್ಶಕರನ್ನು ಬದಿಗೊತ್ತಿ, ಇವತ್ತಿಗೂ, ನಂಬರ್ ೧ ಸ್ಥಾನವನ್ನು ಉಳಿಸಿಕೊಂಡಿದ್ದು. ಇಂದಿನ ತಲೆಮಾರಿನ ಬಹುತೇಕ ಕನ್ನಡ ಚಿತ್ರ ನಿರ್ದೇಶಕರಿಗೆ ಪುಟ್ಟಣ್ಣ ಆದರ್ಶವಾಗಿ ಕಂಡಿರಲು ಸಾಕು. ತಮ್ಮ ಪ್ರತಿ ಚಿತ್ರವನ್ನೂ ಒಂದು ಪ್ರಯೋಗವಾಗಿ ಮುಂದಿಟ್ಟ ಪುಟ್ಟಣ್ಣ ಅವರಿಗೆ ಅವರೇ ಸಾಟಿ. ಚಲನಚಿತ್ರ ನಿರ್ದೇಶನ ಮತ್ತು ಅಧ್ಯಯನದಲ್ಲಿ ಜಪಾನ್, ಇರಾನಿ, ಫ್ರೆಂಚ್ ಮತ್ತು ಭಾರತೀಯ ಭಾಷೆಗಳಲ್ಲಿ ಬೆಂಗಾಲಿಗೆ ಪ್ರಾಶಸ್ತ ಕೊಡುವ ನಮ್ಮ ಶಿಕ್ಷಣ ಪಂಡಿತರಿಗೆ, ಪುಟ್ಟಣ್ಣ ಕಾಣದೇ ಇರುವುದೇ ನಮ್ಮ ದೌರ್ಭಾಗ್ಯ. ಮೂಲ ವಾಹಿನಿ ಹಾಗು ಕಲಾತ್ಮಕ ಎರಡಲ್ಲೂ ನವ ಭಾಷ್ಯ ಬರೆದ ಪುಟ್ಟಣ್ಣ  ಸಿನಿ ಜೀವನವೇ ನಿಜವಾಗಿಯೂ ಒಂದು ಅಧ್ಯಯನವೇ ಸರಿ. ಉಳಿದಂತೆ ಏ ಅನ್ನುತ್ತಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಉಪೇಂದ್ರ ಕೇವಲ ಬುದ್ಡಿವಂತರಿಗೆ ಮಾತ್ರವೇ ಉಳಿದಿಕೊಳ್ಳದೇ ಜನಮಾನಸದಲ್ಳಿ ಶ್ !!! ಎನ್ನುತ್ತಲೇ ಹೊಸ ಸದ್ದು ಮಾಡಿದವರು. ದೊರೆ-ಭಗವಾನ್ ಜೋಡಿ ಕನ್ನಡ ಸಿನೇಮಾದ ಕೋಟಿ ಚನ್ನಯ್ಯರೇ ಸರಿ. ೧೯೬೫ ರಿಂದ ೯೦ ರ ಆದಿ ಭಾಗದವರೆಗೆ ಸಂಧ್ಯಾರಾಗ, ಚಂದನದ ಗೊಂಬೆ, ಕಸ್ತೂರಿ ನಿವಾಸ ಮತ್ತು ಜೀವನ ಚೈತ್ರ ಮುಂತಾದವುಗಳು ಮುಖಾಂತರ ಬಾಕ್ಸ್ ಆಫೀಸನಲ್ಲಿ ಸಾಕಷ್ಟು ಸಂಚಲನ ತಂದಿದ್ದು, ಆದರೆ ತಾಂತ್ರಿಕವಾಗಿ ಚಿತ್ರಗಳನ್ನು ನೋಡಿದಾಗ ಅಷ್ಟೊಂದು ಮಹತ್ವ ಕೊಡದೇ, ಮಧ್ಯಮ ವರ್ಗ ಕುಳಿತು ನೋಡಬಹುದಾದ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿದ್ದು ಕಂಡುಬರುತ್ತದೆ. ಸಿದ್ದಲಿಂಗಯ್ಯ ಸ್ಥಾನವನ್ನು ಏಕೆ ಪಡಿಲಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ಭಾಗವಹಿಸಿದವರ ವಿಮರ್ಶೆಗೆ ಬಿಟ್ಟಿದ್ದು.


ನೆಗೆಟಿವ್ ಪರ್ಸಾನಾಲಿಟಿಯನ್ನು ಹೋಲುವ ಅವಕಾಶವನ್ನು ಪಡೆದ ವಜ್ರಮುನಿ ಕನ್ನಡ ಚಿತ್ರರಂಗ ಕಂಡ ಅಂಬರೀಶ್ ಪುರಿ ಎನ್ನಬಹುದು. ತಮ್ಮ ಪ್ರತಿಚಿತ್ರದಲ್ಲೂ ನಾಯಕನಿಗೆ ಸಮನಾಗಿ ಛಾಪನ್ನು ಒತ್ತಿದ ಶ್ರೇಯಸ್ಸು ವಜ್ರಮುನಿ ಅವರದ್ದೂ. ಇನ್ನು ಪ್ರೋಫೆಸರ ಹುಚ್ಚುರಾಯರದ ನರಸಿಂಹ ರಾಜು, ನಟನೆ ಇವತ್ತಿಗೂ ಯಾರಿಗೂ ತುಂಬಲು ಸಾಧ್ಯವಾಗಿಲ್ಲ. ಚಾರ್ಲಿ ಚಾಪ್ಲಿನ್ ಹೋಲುವ ದೇಹ ಸೌಷ್ಟವ ಅವರದ್ದಾಗಿದ್ದೂ ಅಲ್ಲದೇ ನಟನೆ ಕೂಡ ಚಾಪ್ಲಿನ್ ಗೆ ಸಮಾನಾಂತರವೇ ಆಗಿತ್ತು, ಹಾಸ್ಯವನ್ನು ಯಾವುದೇ ಅಪಾರ್ಥಕ್ಕೆ ಎಡೆ ಮಾಡದೇ ಮುಂದಿಡುವಲ್ಲಿ ನರಸಿಂಹ ರಾಜು ನಿಜಕ್ಕೂ ಎತ್ತಿದ ಕೈ.


ಸಂಗೀತಕ್ಕೆ ಚಲನ ಚಿತ್ರ ನೀಡಿರುವ ಕಾಣಿಕೆಯೇ ಅದ್ಭುತ. ದಾಸರ ಪದಗಳು, ವಚನಗಳು, ನವೋದಯ, ನವ್ಯದ  ಸಾಕಷ್ಟು ರಚನೆಗಳನ್ನು ಜನಮಾನಸದಲ್ಲಿ ಜೀವಂತವಾಗಿರಿಸಿದ್ದೇ ಚಿತ್ರರಂಗ. ಅವುಗಳಿಗೆ ಬಹುತೇಕ ಯೋಗ್ಯಸ್ಥಾನ್ವನ್ನು ಕೊಟ್ಟ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಕುಲದಲ್ಲಿ ಮೇಲಾವುದೋ ಹುಚ್ಚಪ್ಪ ಇದು ಯಾವ ಕಾಲಕ್ಕೂ ಹೋಲುವ ಅಪರೂಪದ ಹಾಡು. ಮನುಷ್ಯ ಜೀವ ಹಾಗೂ ಜೀವನ ಪ್ರೀತಿ ಉಳಿದೆಲ್ಲವುಕ್ಕಿಂತಲೂ ಮಿಗಿಲಾದದ್ದು ಎನ್ನುವ ಸಂದೇಶದ ಈ ಗೀತೆ, ಮಾಹಾಮಾರಿಯ ಸಂಕಷ್ಟದ ಈ ಕಾಲಕ್ಕಿಂತಲೂ ಬೇರೆ ಯಾವಗ ಪ್ರಸ್ತುತವಾಗಿರಲು ಸಾಧ್ಯ?ಮೂಲ ಕನ್ನಡಿಗರು ಅಲ್ಲದೇ ಇದ್ದರೂ, ಎಸ್ ಜಾನಕಿ, ವಾಣಿ ಜಯರಾಂ, ಪಿ ಸುಶೀಲಾ ಚಿತ್ರ ವೀಕ್ಷಕರು ಮನಸ್ಸಿನಲ್ಲಿ ಅಲ್ಲದೇ ಸಾಮಾನ್ಯ ಜನತೆಯ ಮನದಲ್ಲೂ ಖಾಯಂ ನಿವಾಸಿಗಳಾಗಿರುವರು.

ಏನೇ ಇರಲಿ, ವ್ಯಕ್ತಿಯೊಬ್ಬನ ಸಾಧನೆಗೆ ಒಂದು ಸಮೀಕ್ಷೆ ಮಾನದಂಡವಾಗಲು ಸಾಧ್ಯವಿಲ್ಲ. ಆದರೆ ಇಂತಹ ಪ್ರಯತ್ನಗಳ ಮುಖಾಂತರ ಗತ, ಪ್ರಸ್ತುತ ಹಾಗುಮುಂದಿನ ತಲೆಮಾರನ್ನು ಜೋಡಿಸುವ ಪ್ರಯತ್ನಕ್ಕೆ ಜೈ ಎನ್ನಲೇಬೇಕು. ಆದರೆ ಇದು ಕೇವಲ ನವೆಂಬರ ಪ್ರಯತ್ನವಾಗಿ ಮಾತ್ರ ಉಳಿಯದಿರಲಿ ಎಂಬುದೇ ಒಂದು ಆಶಯ.

ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ : 92% ಹೌದು ಎನ್ನುತ್ತಾರೆ! #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Tue Dec 1 , 2020
‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ ಎಂಬುದು ನಮ್ಮ ಕಡೆಯ ಹಾಗೂ ಮಹತ್ವದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ವಿ ಎಸ್ ಕೆ ತಂಡ ಹೀಗೆ ವಿಶ್ಲೇಷಿಸುತ್ತಾರೆ. ಶೇಕಡಾ 92 ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ. ಶೇಕಡಾ 8ರಷ್ಟು ಕೆಲವೇ ಕೆಲವು ಜನ ‘ಇಲ್ಲ’ ಎಂದಿದ್ದಾರೆ. ‘ಇಲ್ಲ’ ಎನ್ನುವವರಲ್ಲೂ ಕೂಡ ‘ಕಡ್ಡಾಯ’ಕ್ಕೆ ಇಲ್ಲ ಎಂದು ಹೇಳಿರಬಹುದೇ ಹೊರತು, […]