ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು?” ಎಂಬ ಪ್ರಶ್ನೆಯ ಸುತ್ತ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ಅವರ ವಿಶ್ಲೇಷಣೆ.

ಮಲೆಗಳಲ್ಲಿ ಮದುಮಗಳು, ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಮೊದಲ ಮೂರು ಸ್ಥಾನ ಗಳಿಸಿವೆ. ಕುವೆಂಪು ಮತ್ತು ಎಸ್.ಎಲ್. ಬೈರಪ್ಪ ಅವರ ಕೃತಿಗಳು ಶೇಕಡಾ 17ಮತಗಳನ್ನು ಗಳಿಸಿ ಮೊದಲ ಸ್ಥಾನದಲ್ಲೇ ಇವೆ. ತ.ರಾ.ಸು. ಅವರ ದುರ್ಗಾಸ್ತಮಾನ ಶೇಕಡಾ 15 ಮತಗಳನ್ನು ಗಳಿಸಿದೆ. ಈ ಮೂರು ಕಾದಂಬರಿಗಳು ಅರ್ಧದಷ್ಟು ಮತಗಳನ್ನು ಗಳಿಸಿವೆ. ಸಮೀಕ್ಷೆಯಲ್ಲಿ ಇನ್ನೂ ಏಳು ಕಾದಂಬರಿಗಳಿದ್ದವು. ಆ ಕಾದಂಬರಿಗಳು – ಮಹಾಕ್ಷತ್ರಿಯ, ಚೋಮನ ದುಡಿ, ಕರ್ವಾಲೋ, ತುಳಸೀದಳ, ಅಜೇಯ, ಸಂಸ್ಕಾರ, ಮತ್ತು ಚಿಕವೀರ ರಾಜೇಂದ್ರ ಕೃತಿಗಳು – ಉಳಿದ ಅರ್ಧ ಮತಗಳನ್ನು ಗಳಿಸಿವೆ.

ಎಸ್.ಎಲ್. ಬೈರಪ್ಪ ಮತ್ತು ತ.ರಾ.ಸು ಅವರುಗಳು ತಮ್ಮ ಅಭಿವ್ಯಕ್ತಿಯನ್ನು ಕಾದಂಬರಿ ಪ್ರಕಾರ ಒಂದರ ಮೂಲಕವೇ ಮಾಡುವ ಲೇಖಕರು. ಅಷ್ಟೇ ಅಲ್ಲ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಮತ್ತು ನಿಯಮಿತವಾಗಿ ಕಾದಂಬರಿಗಳನ್ನು ರಚಿಸಿದವರು. ಬಹು ಪ್ರಸಿದ್ಧರು. ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಈ ಲೇಖಕರ ಮುಖ್ಯ ಕೃತಿಗಳಲ್ಲಿ ಒಂದು. ಈ ದೃಷ್ಟಿಯಿಂದ ಈ ಎರಡೂ ಕೃತಿಗಳು ಮೊದಲ ಮೂರುಸ್ಥಾನದಲ್ಲಿ ಇರುವುದು ಸಹಜವಾಗಿ ಕಾಣುತ್ತದೆ. ‘ಮಲೆಗಳಲ್ಲಿ ಮದುಮಗಳು’ ಕುವೆಂಪು ಅವರು ಬರೆದಿರುವ ಕೇವಲ ಎರಡು ಕಾದಂಬರಿಗಳಲ್ಲಿ ಒಂದು. ‘ಕಾನೂರು ಹೆಗ್ಗಡತಿ’ಯ ನಂತರದ ಪ್ರಾಮುಖ್ಯತೆ ಇದರದ್ದು ಎಂಬುದು ವಿಮರ್ಶಕರ ನಿಲುವು. ಅಧಿಕೃತ ಅಭಿಪ್ರಾಯ. ಆದರೆ, ಕಥಾ ಹಂದರ, ವಸ್ತು ಮತ್ತು ಶೈಲಿಗಳಿಂದ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಹೆಚ್ಚು ಆಕರ್ಷಕ ಎನ್ನುವ ಅಭಿಪ್ರಾಯವನ್ನು ಸಮೀಕ್ಷೆಯು ಸಮರ್ಥಿಸಿದೆ. ಸೃಜನಶೀಲತೆಯನ್ನು ಸಂಖ್ಯೆಯಲ್ಲಿ ಅಳೆಯಲಾಗುವುದಿಲ್ಲ ಎಂಬುದನ್ನೂ ಮತ್ತು ಸಾಹಿತಿಯ ಅನುಭವ, ಕೃತಿಯ ಗುಣಮಟ್ಟವನ್ನು ಸೂಚಿಸುತ್ತದೆ ಎಂಬುದನ್ನೂ ತಿಳಿಸುತ್ತಿದೆ.

ಸಮೀಕ್ಷೆಯಲ್ಲಿದ್ದ ಇತರ ಕೃತಿಗಳ ಮಹತ್ವ ಎಲ್ಲರಿಗೂ ತಿಳಿದಿರುವುದೇ. ಆಧ್ಯಾತ್ಮವನ್ನು ಅಧಿಕೃತವಾಗಿ ಕಥಾವಸ್ತುವಿನಲ್ಲಿ ಸೇರಿಸುವ ಮಹಾಕ್ಷತ್ರಿಯ, ಐತಿಹಾಸಿಕ ವ್ಯಕ್ತಿತ್ವಗಳ ಸುತ್ತಾ ಹೆಣೆದ ಅಜೇಯ ಮತ್ತು ಚಿಕವೀರ ರಾಜೇಂದ್ರ, ಕಾರಂತರ ನುರಿತ ಬರಹದ ಚೋಮನ ದುಡಿ, ತೇಜಸ್ವಿ ಅವರ ಬಿ.ಜಿ.ಎಲ್. ಸ್ವಾಮಿ ಶೈಲಿಯ ಕರ್ವಾಲೋ, ಅನುವಾದಿತ ಥ್ರಿಲ್ಲರ್ ತುಳಸಿದಳ ಮತ್ತು ನವ್ಯದ ದಿಗ್ಗಜ ಅನಂತ ಮೂರ್ತಿಯವರ ಪ್ರಸಿದ್ದ ಕೃತಿಗಳು ಸಮೀಕ್ಷೆಯಲ್ಲಿ ಸಹಜವಾಗಿ ಸೇರಿಕೊಂಡಿದೆ. ಅವುಗಳ ಜನಪ್ರಿಯತೆಯನ್ನು ಹೇಳುತ್ತಿದೆ. ಆದರೆ, ಈ ಕೃತಿಗಳು ವಾಸ್ತವತೆಯನ್ನು ನಿಭಾಯಿಸುವ, ಶೈಲಿಯನ್ನು ಅನ್ವೇಷಿಸುವ, ತತ್ವಗಳ ಅಥವಾ ನವ್ಯದ ಅಮೂರ್ತತೆಯನ್ನು ಕೃತಿಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಜನರ ಮೆಚ್ಚುಗೆಯನ್ನು ಮೊದಲ ಮೂರು ಕೃತಿಗಳಿಗೆಗೆ ಬಿಟ್ಟು ಕೊಟ್ಟಿವೆ.

ಗಟ್ಟಿ ಕಥಾನಕಗಳನ್ನು ಹೊಂದಿರುವ, ಸಾಂಪ್ರದಾಯಿಕ ಶೈಲಿ ಎನ್ನಬಹುದಾದ ಕಾದಂಬರಿಗಳೇ ಮೊದಲ ಮೂರು ಸ್ಥಾನಗಳಲ್ಲಿ ಇರುವುದು ಸಾಹಿತ್ಯ ಕ್ಷೇತ್ರದ ಕೆಲವು ಆಸಕ್ತಿಕರ ಚರ್ಚೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಸಮೀಕ್ಷೆಯಲ್ಲಿ ಪರಿಗಣಿತವಾದ ಎಲ್ಲಾ ಹತ್ತೂ ಕಾದಂಬರಿಗಳೂ ಸಹ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಇವೆ. ವಿವಿಧ ಕಾಲಘಟ್ಟದಲ್ಲಿ ಬಂದ ಹಲವು ಕಾದಂಬರಿ ಶೈಲಿಗಳು – ನವ್ಯ, ಬಂಡಾಯ, ದಲಿತ ಮತ್ತು ಶೂದ್ರ – ಕಾಲದ ಪರೀಕ್ಷೆಯಲ್ಲಿ ನಪಾಸಾಗುತ್ತಿವೆಯೋ? ಜನರ ಮನಸ್ಸನ್ನು ಗೆಲ್ಲಲು ಸೋತಿವೆಯೇ? ಸೈದ್ಧಾಂತಿಕ ಹೊರೆಯನ್ನು ಅನಿವಾರ್ಯವಾಗಿ ಹೊರುವ ಆಧುನಿಕ ಕಾದಂಬರಿ ಶೈಲಿಗಳು ಕಥಾ ಹಂದರಕ್ಕೆ ನ್ಯಾಯ ಒದಗಿಸಲು ಶಕ್ತವಾಗುತ್ತವೆಯೇ? ಸಮೀಕ್ಷೆಯು ‘ಇಲ್ಲ’ ಎಂಬ ಉತ್ತರವನ್ನು ನೀಡುತ್ತಿದೆ. ನೇರವಾಗಿ ಜನರನ್ನು ತಲುಪುತ್ತಿದ್ದ ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ಆ.ನ.ಕೃ ಅವರ ಕೃತಿಗಳು ಸಮೀಕ್ಷೆಯಲ್ಲಿ ಇಲ್ಲ – ಸಮೀಕ್ಷೆಗೆ ಸೇರಲು ಇದ್ದ ಮಿತಿಯೊಳಗೆ ಬರಲು ಅವುಗಳಿಗೆ ಆಗಿಲ್ಲ. ಈ ಅಂಶವು ವಿಮರ್ಶಕರ ಮತ್ತು ಜನ ಸಾಮನ್ಯರ ನಿಲುವುಗಳಲ್ಲಿ ಹಲವು ಸಾಮ್ಯತೆಗಳು ಇವೆ ಎಂದು ತೋರುತ್ತಿದೆ. ಆದರೆ ತರಾಸು, ಕುವೆಂಪು ಮತ್ತು ಬೈರಪ್ಪನವರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಸಮೀಕ್ಷೆಯ ಬಗ್ಗೆ ವಿಮರ್ಶಾ ಲೋಕದಲ್ಲಿ ಕೆಲವಾದರೂ ಆಕ್ಷೇಪಗಳು ಇರಬಹುದು. ಈ ಸಮೀಕ್ಷೆಯು ವಿಮರ್ಶೆಯ ಜಗತ್ತಿನ ಚೌಕಟ್ಟನ್ನು ಈ ದೃಷ್ಟಿಯಲ್ಲಿ ಮೀರಿದೆ.

ಎಲ್ಲಾ ಹತ್ತೂ ಕಾದಂಬರಿಗಳೂ ದಶಕಗಳಷ್ಟು ಹಳತು. ಹಾಗಾದರೆ, ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆಯೇ? ಹೊಸ ಕೃತಿಗಳು, ಲೇಖಕರು, ಓದುಗರು ಬರುತ್ತಿಲ್ಲವೇ? ವಿಮರ್ಶಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೇ? ಹೊಸ ಮಾಧ್ಯಮಗಳ ಉಗಮದೊಂದಿಗೆ ಕನ್ನಡ ಕಾದಂಬರಿ ಲೋಕದ ಪ್ರಭಾವ ಕ್ಷೀಣಿಸುತ್ತಿರುವುದರ ಪರಿಣಾಮವೇ? ಅಥವಾ ಗುಣಮಟ್ಟದ ದೃಷ್ಟಿಯಿಂದ ಇವು ಸಾರ್ವಕಾಲಿಕ ಕೃತಿಗಳೇ ಆದ್ದರಿಂದ ಈ ಪ್ರಶ್ನೆಗಳು ಅನಗತ್ಯವೇ?

ಏನೇ ಇರಲಿ, ಈ ಸಮೀಕ್ಷೆ ಸಾಹಿತ್ಯ ಪ್ರಶ್ನೆಯತ್ತ ಜನರ ಮನಸ್ಸನ್ನು ಯಶಸ್ವಿಯಾಗಿ ಸೆಳೆಯುವುದರಲ್ಲಿ ಸಫಲವಾಗಿರುವುದು ನಿಜ. ಒಳ್ಳೆಯ ಬೆಳವಣಿಗೆ. ನವೆಂಬರ್ ನಲ್ಲಿ ಇಂತಹ ಪ್ರಯತ್ನಗಳು ಮುಂದುವರೆದರೆ, ಕೃತಿಗಳ ಬೆಲೆಯ ಬಗ್ಗೆ ನಿರ್ದಿಷ್ಟ ಅಭಿಪ್ರಾಯಗಳನ್ನು ರೂಪಿಸುವುದು ಸಾಧ್ಯವಾಗುತ್ತದೆ. ವಿಮರ್ಶೆ ಮತ್ತು ಜನಾಭಿಪ್ರಾಯಗಳ ಮಧ್ಯದ ಅಂತರ ಕಡಿಮೆ ಆಗಲೂ ಬಹುದು.

ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ವಿ ಎಸ್ ಕೆ ತಂಡ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು? ಪ್ರಶ್ನೆಯ ಸುತ್ತ ವಿಶ್ಲೇಷಣೆ. #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Mon Nov 30 , 2020
ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು?” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ). ಸಿನಿಮಾ ಎಲ್ಲರಿಗೂ ಎಟುಕದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಿರುತೆರೆ ಜನರನ್ನು ಆಕರ್ಷಿಸತೊಡಗಿತು. ದೂರದರ್ಶನವೆಂಬ ಒಂದೇ ವಾಹಿನಿಯಿದ್ದಾಗಿನಿಂದ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳು ಪ್ರಕಟವಾಗಿವೆ. ಧಾರವಾಹಿ ರೂಪಾರಲ್ಲಿ ೧೩ ವಾರಗಳಿಗೆಂದೇ […]