ನಾವೇಕೆ ಅವರಂತಿರಬಾರದೆಂದು ನಮ್ಮನ್ನು ಪ್ರಶ್ನಿಸುವ ಪುಸ್ತಕ – ‘ಇದ್ದರಿಂಥವರೆಮ್ಮ ನಡುವಲಿ’

ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್

“ಇದ್ದರಿಂಥವರೆಮ್ಮ ನಡುವಲಿ” ಎಂಬುದು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ನಾನಾ ಪುಸ್ತಕಗಳ ಕರ್ತೃ ಡಾ. ಎಚ್ ಆರ್ ವಿಶ್ವಾಸ ಅವರ ನೂತನ ಕೃತಿ. ತಮ್ಮನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿರುವ  ಮಹನೀಯರ ಬಗೆಗಿನ ಬರಹಗಳುಳ್ಳ ಕೃತಿ “ಇದ್ದರಿಂಥವರೆಮ್ಮ ನಡುವಲಿ” ಆಗಿದೆ. ಪ್ರಸ್ತುತ, ಡಾ. ವಿಶ್ವಾಸರು ಸಂಸ್ಕೃತ ಭಾರತೀಯ ಅಖಿಲ ಭಾರತೀಯ ಶಿಕ್ಷಣ ಪ್ರಮುಖ್ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. 

ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದು ಸಂಸ್ಕೃತ ಸರಳ ಭಾಷೆ, ಅದನ್ನು ಎಲ್ಲರೂ ನಿತ್ಯ ವ್ಯವಹಾರದಲ್ಲಿ ಬಳಸಬಹುದು ಹಾಗೂ ಎಲ್ಲರೂ ಸಂಸ್ಕೃತದಲ್ಲಿ ಸಂವಾದ ನಡೆಸುವಂತಾಗಲಿ ಎಂಬ ಉದ್ದೇಶದಿಂದ. ಸಂಸ್ಕೃತ ಭಾರತೀಯ ಆರಂಭದ ದಿನಗಳಿಂದ ಅನ್ಯಾನ್ಯ ಜವಾಬ್ದಾರಿಗಳಲ್ಲಿ ಹಲವರನ್ನು ಡಾ. ವಿಶ್ವಾಸರು ಸಂದರ್ಶಿಸಿದ್ದಾರೆ. ೮೦ರ ದಶಕದಲ್ಲಿ ಚ.ಮು. ಕೃಷ್ಣಶಾಸ್ತ್ರಿಗಳು, ಜನಾರ್ದನ ಹೆಗಡೆ ಇವರ ಜೊತೆ ಡಾ. ವಿಶ್ವಾಸರು ಸಂಸ್ಕೃತವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದರು.

ಸಂಘಟನೆಯ ಕೆಲಸದ ವೈಖರಿ, ಸಂಸ್ಕೃತವನ್ನು ಜನಪ್ರಿಯಗೊಳಿಸುವುದಷ್ಟೇ ಅಲ್ಲದೇ, ಆ ಭಾಷೆಯನ್ನು  ಜನರಿಗೆ ಪ್ರಿಯಗೊಳಿಸುವ ಪಾವನ ಪುಣ್ಯ ಕೆಲಸವನ್ನು ಸಂಘಟನಾತ್ಮಕವಾಗಿ ರೂಪಿಸುವುದು ಹೇಗೆ ಎಂಬ ಬಗ್ಗೆ ಆರೆಸ್ಸೆಸ್ ನ ಹಿರಿಯರ ಸಂಪರ್ಕ, ಒಡನಾಟ, ಮಾರ್ಗದರ್ಶನ, ಡಾ. ವಿಶ್ವಾಸ ಅವರಿಗೆ ದೊರೆಯತೊಡಗಿತು. ಈ ಒಡನಾಟ ವಿಶ್ವಾಸರಿಗೆ ದೊರೆತದ್ದು ತಮ್ಮ ಸಂಸ್ಕೃತದ ಕೆಲಸವನ್ನು ಹೆಗಲಿಗೆ ಹೊತ್ತ ಮೇಲೆಯೇ. ಪ್ರತಿಯೊಬ್ಬರಿಂದಲೂ ಕಲಿಯಲು ಅಂಶಗಳಿದ್ದವಾದ್ದರಿಂದ, ಆ ಅಂಶಗಳನ್ನು ರೂಢಿಸಿಕೊಂಡಲ್ಲಿ  ಓದುಗರೂ ಲಾಭ ಪಡೆಯುತ್ತಾರೆಂಬ ಉದ್ದೇಶ ಈ ಪುಸ್ತಕದ್ದು ಎಂಬುದು ನನ್ನ ಅನಿಸಿಕೆ. ಅಲ್ಲದೆ ಇಡಿಯ ಪುಸ್ತಕದಲ್ಲಿ ಆ ಅಂಶಗಳನ್ನು ರಸವತ್ತಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ.

ಸಂಘದ ಪ್ರಚಾರಕರು ಹೇಗಿರುತ್ತಾರೆ ಎಂಬುದು ಸಂಘವನ್ನು ಹತ್ತಿರದಿಂದ ನೋಡಿದವರಿಗಷ್ಟೇ ತಿಳಿದಿರುತ್ತದೆ. ತಮ್ಮ ಇಡಿಯ ಜೀವನವನ್ನು ದೇಶದ ಕೆಲಸಕ್ಕೆ ಹವಿಸ್ಸಾಗಿ ಅರ್ಪಿಸಿರುವ ಹಲವಾರು ಸಂಘದ ಪ್ರಚಾರಕರಿದ್ದಾರೆ. ತಾವು ಹತ್ತಿರದಿಂದ ಕಂಡ ಪ್ರಚಾರಕರನ್ನು ಕುರಿತು ತಮ್ಮ ಪುಸ್ತಕದಲ್ಲಿ ಕಿರು ಲೇಖನಗಳ ಮೂಲಕ ಡಾ. ವಿಶ್ವಾಸ ಬರೆದಿದ್ದಾರೆ. ಹಾಗೆಂದು ಕೇವಲ ಸಂಘದ ಪ್ರಚಾರಕರನ್ನೇ ಕುರಿತು ಬರೆದ ಲೇಖನಗಳು ಪುಸ್ತಕದಲ್ಲಿಲ್ಲ. ವಿದ್ವಾನ್ ರಂಗನಾಥಶರ್ಮ, ಪ್ರೊ. ಮುಡಂಬಡಿತ್ತಾಯ, ಪತ್ರಕರ್ತ ಮಾಗಡಿ ಗೋಪಾಲಕಣ್ಣನ್, ಬಿ.ಎಸ್. ರಾಮಕೃಷ್ಣ ರಾವ್, ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಕುರಿತಾದ ಲೇಖನಗಳೂ ಇವೆ. ಒಟ್ಟಿನಲ್ಲಿ ಡಾ. ವಿಶ್ವಾಸಾರ ಸುದೀರ್ಘ ಸಂಸ್ಕೃತ ಪಯಣದಲ್ಲಿ ಬಂದ ವಿವಿಧ ಸಹಪ್ರಯಾಣಿಕರ ಕಥೆಗಳು ಚೆನ್ನಾಗಿ ಮೂಡಿಬಂದಿವೆ. 

ಕರ್ನಾಟಕದಲ್ಲಿ ಸಂಘಕಾರ್ಯವನ್ನು ಬೆಳೆಸಿದ ಯಾದವರಾವ್ ಜೋಶಿ ಅವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಬಹುದಾಗಿದ್ದವರು. ಡಾಕ್ಟರ್ ಜಿ ಅವರ ಸಂಪರ್ಕಕ್ಕೆ ಬಂದು ದೇಶದ ಕೆಲಸದಲ್ಲಿ ಮುಂದಾದವರು. ಅವರಿಗಿದ್ದ ಸಂಸ್ಕೃತ ಸುಭಾಷಿತ, ಲೋಕೋಕ್ತಿಗಳ ಪರಿಚಯ, ಜ್ಞಾನದ ಕಿರು ಪರಿಚಯ ಡಾ. ವಿಶ್ವಾಸ ಮಾಡಿಕೊಡುತ್ತಾರೆ.

ಪುಸ್ತಕ ಖರೀದಿಸಲು:

ಇನ್ನು ಸಂಘದ ಸರಕಾರ್ಯವಾಹರಾಗಿದ್ದ ಹೊ.ವೆ. ಶೇಷಾದ್ರಿಗಳ ಧ್ಯೇಯತಪಸ್ವಿ ಸ್ವಭಾವ, ಪ್ರಚಾರಕ್ಕೆ ಎಂದೂ ಗಂಟು ಬೀಳದೇ, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದ,  ಸಾಹಿತ್ಯ ಸೃಷ್ಟಿಗಾಗಿ ಬರೆಯದೇ ಕಾರ್ಯಕರ್ತರನ್ನು ರೂಪಿಸುವ ಸಲುವಾಗಿ ಉತ್ಕೃಷ್ಟ ಬರಹಗಳನ್ನು ಕೊಟ್ಟ ಶೇಷಾದ್ರಿಗಳ ಬಗ್ಗೆ, ಸಂಘದ ಜವಾಬ್ದಾರಿಗಳನ್ನು ಹೊಸ ತಲೆಮಾರಿನವರು ಹೊತ್ತುಕೊಳ್ಳಬೇಕು ಎಂದು ಪ್ರತಿಪಾದಿಸಿ, ತಾವೊಬ್ಬ ಸಂಘದ ನಿಷ್ಠಾವಂತ ಕಾರ್ಯಕರ್ತರಷ್ಟೇ ಎಂದು ಬದುಕಿದ್ದ ಕೃ. ಸೂರ್ಯನಾರಾಯಣ ರಾವ್, ಸಂನ್ಯಾಸಿಯಾಗದಿದ್ದರೂ ಅವರಂತೆ ಮಾರ್ಗದರ್ಶನ ಮಾಡಬಲ್ಲ, ಗೃಹಸ್ಥಾಶ್ರಮ ಕಾಣದಿದ್ದರೂ ಕುಟುಂಬಗಳಿಗೆ ಹಿಂದೂ ಸಂಸ್ಕೃತಿಯನ್ನು ಬೋಧಿಸುವ, ಹಲವರಿಗೆ ಪ್ರೇರಕ ಶಕ್ತಿಯಾದ, ಸಂಘದ ವಲಯವಲ್ಲದೇ ಸಮಾಜವೇ ಬಹುವಾಗಿ ಇಷ್ಟಪಡುತ್ತಿದ್ದ ನ ಕೃಷ್ಣಪ್ಪನವರ ಬಗ್ಗೆ ತಲಾ ಒಂದು ಲೇಖನವಿದೆ.

ಎರಡು ಇಂಜಿನಿಯರಿಂಗ್ ಚಿನ್ನದ ಪದಕ ಗಳಿಸಿದ್ದ, ದೊಡ್ಡ ಕೆಲಸಕ್ಕೆ ಸೇರಿಕೊಂಡು ಜೀವನ ಸುಗಮವಾಗಿಸಿಕೊಳ್ಳಬಹುದಾಗಿದ್ದರೂ, ಜೀವನವನ್ನು ಸಮಾಜದ, ಸಂಘಟನೆಯ ಕೆಲಸಕ್ಕೆ ತೊಡಗಿಸಿಕೊಂಡು, ಯೋಗ ಶಿಕ್ಷಕರಿಗೆ ಅತ್ಯುತ್ತಮ ಪಠ್ಯವೆನಿಸುವ ‘ಯೋಗಪ್ರವೇಶ’ ವೆಂಬ ಪುಸ್ತಕ ಬರೆದ, ಅಜಿತ್ ಕುಮಾರ್, ಸಂಘದ, ಕಾರ್ಯಾಲಯದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ, ಕೆ.ಎಸ್. ನಾಗಭೂಷಣ, ಅಮೋಘ ಪಾಂಡಿತ್ಯ, ಜ್ಞಾನ, ವಾಕ್ಪಟುತ್ವ ಬಳಸಿ ಇಡಿಯ ದೇಶಕ್ಕೆ ಭಾರತ ದರ್ಶನ ನೀಡಿದ ವಿದ್ಯಾನಂದ ಶೆಣೈ, ಹೊಸ ಪರಿಕಲ್ಪನೆಗಳನ್ನು ಯೋಜಿಸಿ, ದೂರದರ್ಶನದ ಖಾಸಗಿ ವಾಹಿನಿಯವರು ಆ ಯೋಜನೆಗಳನ್ನು ಕಾರ್ಯಕ್ರಮಗಳನ್ನಾಗಿ ಪರಿವರ್ತಿಸುವಲ್ಲಿ ಸಾಧಿಸಿದ ಚಕ್ರವರ್ತಿ ತಿರುಮಗನ್ ಜೊತೆಗಿನ ಡಾ. ವಿಶ್ವಾಸರ ಒಡನಾಟ ಪುಸ್ತಕದಲ್ಲಿ ಓದಲು ದೊರೆಯುತ್ತದೆ.

ಸಂಸ್ಕೃತ ವಿದ್ವಾಂಸರಾದ ರಂಗನಾಥ ಶರ್ಮರ ಪಾಂಡಿತ್ಯ, ಮಾಗಡಿ ಗೋಪಾಲಕಣ್ಣನ್ ಎಂಬ ಅಪರೂಪದ ಸೌಮ್ಯ ಸ್ವಭಾವದ ಪತ್ರಕರ್ತ, ಶಿಕ್ಷಣ ಕ್ಷೇತ್ರದ ಸಾಧಕ ಮುಡಂಬಡಿತ್ತಾಯ (ನನ್ನಂಥಹ ಸ್ಟೇಟ್ ಸಿಲಬಸ್ ನಲ್ಲಿ ಓದಿದವರಿಗೆ ಪ್ರತಿ ವರ್ಷದ ಪಠ್ಯ ಪುಸ್ತಕದಲ್ಲಿ ಕಾಣುತ್ತಿದ್ದ ಹೆಸರು), ಸಂಸ್ಕೃತ ಆಂದೋಲನ, ಭಾಷೆಯ ಬಗೆಗಿನ ಚಟುವಟಿಕೆಗಳಿಗೆ ನಿಷ್ಠುರವಾಗಲೂ  ಸಿದ್ಧರಿದ್ದ ಬಿ.ಎಸ್. ರಾಮಕೃಷ್ಣ ರಾವ್, ತಾವು ನಡೆದದ್ದೇ ದಾರಿ ಎಂಬಂತೆ ಬದುಕಿಯೂ, ಸಾಧನೆಯ ಹಾದಿಯಲ್ಲಿ ಮುನ್ನಡೆದ ಜಿ.ವಿ. ಅಯ್ಯರ್ ಬಗ್ಗೆ ಲೇಖನಗಳಿವೆ. 

ಲೇಖಕರೇ ನಿವೇದಿಸಿಕೊಂಡಂತೆ ಈ ಲೇಖನಗಳು ಹಿಂದೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂಥವು. 14 ಲೇಖನಗಳಲ್ಲಿ 13 ವಿಶೇಷ ವ್ಯಕ್ತಿಗಳ ಗುಣಗಳ ಸಂಕ್ಷಿಪ್ತ ಪರಿಚಯ ಈ ಕೃತಿ ಮಾಡಿಕೊಡುತ್ತದೆ (ಕನ್ನಡದ ಸಿನಿಮಾ ನಿರ್ದೇಶಕರಾದ ಜಿ ವಿ ಅಯ್ಯರ್ ಕುರಿತಾಗಿ 2 ಲೇಖನಗಳಿವೆ). ಲೇಖಕರು ಬರೆದಿರುವ ಮಹನೀಯರ ಬಗ್ಗೆ ಹಲವಾರು ಲೇಖನ ಪುಸ್ತಕಗಳು ಪ್ರಕಟವಾಗಿವೆ. ಆದರೆ ಈ ಪುಸ್ತಕ ವಿಶೇಷವೆನಿಸುವುದು ಆ ಮಹನೀಯರ ಕೆಲ ಗುಣಗಳು ಹಾಗೂ ಅವು ನಮ್ಮನ್ನು ಕಾಡುವ ಬಗ್ಗೆ. ನಾವೇಕೆ ಅವರಂತಿರಬಾರದೆಂಬುದು ಆಗ್ಗಾಗ್ಗೆ ಪ್ರಶ್ನಿಸುವಂತೆ ಮಾಡುತ್ತದೆ. ಬಿಡಿ ಬಿಡಿ ಲೇಖನಗಳಾದ್ದರಿಂದ ಒಂದ್ಕಕೊಂದು ಸೇರಿಸಿಕೊಳ್ಳದೆಯೇ ಓದಬಹುದಾಗಿದೆ. ಸಂಪೂರ್ಣ ಪುಸ್ತಕ ಓದಿದ ಮೇಲೆ, ವಿಷಯ ಪುನರಾವರ್ತಿಸಿದೆ ಎಂಬ ಅಂಶ ಒಂದೆರಡು ಕಡೆ ಅನಿಸುತ್ತದಾದರೂ, ಬಿಡಿ ಲೇಖನಗಳಾದ್ದರಿಂದ ಈ ಆವರ್ತನೆ ಅಗತ್ಯವೆನಿಸುತ್ತದೆ. 

ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನ ಮಂತ್ರಿ ಶ್ರೀ ದಿನೇಶ್ ಕಾಮತರ ಮುನ್ನುಡಿ ಈ ಪುಸ್ತಕಕ್ಕಿದೆ. ಪ್ರತಿ ವ್ಯಕ್ತಿಯ ರೇಖಾ ಚಿತ್ರಗಳನ್ನು ಒದಗಿಸಿರುವ ಶ್ರೀ ಸುಧಾಕರ ದರ್ಬೆಯವರ ಅಮೋಘ ಮುಖಪುಟ ವಿನ್ಯಾಸ ಲೇಖನಕ್ಕೂ ಸರಿಯಾಗಿ ಹೊಂದುತ್ತವೆ. 

ಮುಂದಿನ ದಿನಗಳಲ್ಲಿ ಇದೇ ಶೀರ್ಷಿಕೆಯಲ್ಲಿ ತಮ್ಮ ಪ್ರಯಾಣದ ಇನ್ನಷ್ಟು ಪಯಣಿಗರನ್ನು ಡಾ. ವಿಶ್ವಾಸರು ಪರಿಚಯಿಸುತ್ತಾರೆಂದು ನಂಬುತ್ತೇನೆ.

ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್

ಪ್ರವೀಣ್ ಪಟವರ್ಧನ್

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮುಂದುವರಿದ ಯತಿಗಳ ಪಾದಯಾತ್ರೆ

Mon Dec 28 , 2020
ಲೇಖಕರು: ಸಂತೋಷ್ ಜಿ.ಆರ್., ತಾಂಜೇನಿಯಾ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠ ಕರ್ನಾಟಕದ ಸಾಮಾಜಿಕ ಜಿಂತನೆ ಮತ್ತು ಸಂರಚನೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದಕ್ಕೆ ಕಾರಣ  ಈ ಹಿಂದಿನ ಮಠಾಧೀಶರಾಗಿದ್ದ ಬೃಂದಾವನಸ್ಥ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು. ಶ್ರೀಗಳಿಗಿದ್ದ ಹಿಂದುತ್ವ ಕುರಿತ ಬದ್ಧತೆ ಎಲ್ಲರಿಗೂ ತಿಳಿದದ್ದೆ. ಹಿಂದು ಎನ್ನಲು ಸಂಕೋಚಗೊಳ್ಳುತ್ತಿದ್ದ, ಜಾತಿ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದ ಅನೇಕ ಸ್ವಾಮೀಜಿಗಳ ಮಧ್ಯೆ ವಿಶ್ವೇಶ ತೀರ್ಥರು ಧೈರ್ಯವಾಗಿ ಹಿಂದುತ್ವದ ಕೆಲಸಕ್ಕೆ ಧುಮಕಿದರು. ಸಾರ್ವಜನಿಕವಾಗಿ […]