ಇಸ್ಲಾಂ ಮೂಲಭೂತವಾದ, ಭಯೋತ್ಪಾದನೆಯನ್ನು ಜಗತ್ತಿಗೆ ಸಾರಬೇಕಿದೆ

ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್‌ಭೈರಸಂದ್ರದ ಗಲಭೆ ಘಟನೆಗೆ ಸಂಬಂಧಿಸಿದಂತೆ ‘ಬೆಂಗಳೂರು ಗಲಭೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇಸ್ಲಾಂ’ ಎಂಬ ವಿಚಾರದಲ್ಲಿ ಪ್ರಜ್ಞಾ ಪ್ರವಾಹವು ಇಂದು ಅಂತರ್ಜಾಲ‌ದ ಮೂಲಕ ಸಂವಾದ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿತು.

ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ರಾಜ್ಯದ ಹೈಕೋರ್ಟ್ ವಕೀಲ ಶ್ರೀಧರ ಪ್ರಭು ಮತ್ತು ವಿಯೆಟ್ನಾಂ‌ನ ವಿವೇಕಾನಂದ ಕಲ್ಚರಲ್ ಸೆಂಟರ್‌ನ ನಿರ್ದೇಶಕ ಜಿ.ಬಿ. ಹರೀಶ್ ಅವರು ವಿಚಾರ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಅನಿರೀಕ್ಷಿತ. ಯಾರೊಬ್ಬರೂ ನಿರೀಕ್ಷೆ ಮಾಡದೇ ಇರುವಂತಹ ರೀತಿಯಲ್ಲಿ ಗಲಭೆ ನಡೆದು ಹೋಗಿದೆ. ಈ ಗಲಭೆಗೆ ಬೇರೆ ಬೇರೆ ರಾಜಕೀಯ ಪಕ್ಷಗಳು ತಮ್ಮದೇ ನೆಲೆಯಲ್ಲಿ ವ್ಯಾಖ್ಯಾನ ನೀಡುವ ಕೆಲಸವನ್ನು ಮಾಡುತ್ತಿವೆ. ಕೆಲವು ಪಕ್ಷಗಳು ಈ ಗಲಭೆಯನ್ನು ಪೊಲೀಸರ ವೈಫಲ್ಯ ಎಂಬಂತೆ ಬಿಂಬಿಸುವುದರತ್ತಲೂ ಚಿತ್ತ ಹರಿಸಿದ್ದಾರೆ. ಆದರೆ ನಾವೆಲ್ಲರೂ ಐತಿಹಾಸಿಕ ಹಿನ್ನೆಲೆಯ ಆಧಾರದಲ್ಲಿ ಈ ಘಟನೆಯನ್ನು ವಿಶ್ಲೇಷಣೆ ಮಾಡಿದಾಗ ಇದರ ಕಾರಣ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಿಂದ ತೊಡಗಿದಂತೆ ವಿಶ್ಲೇಷಿಸುತ್ತಾ ಹೋದಂತೆ ಮುಸ್ಲಿಂ ಲೀಗ್ ಆರಂಭ, ಖಿಲಾಫತ್ ಚಳುವಳಿ, ಮಾಪಿಳ್ಳ ಹತ್ಯಾಕಾಂಡ ಇವೆಲ್ಲವೂ ದೇಶದ ಸ್ವಾತಂತ್ರ್ಯದ ದೃಷ್ಟಿಯಿಂದ ಸಂಭವಿಸಿದ ಘಟನೆಯಲ್ಲ. ಬದಲಾಗಿ ಹಾಗೆ ಬಿಂಬಿಸಿಕೊಳ್ಳುವ ಮೂಲಕ ತಮ್ಮ ಬೇರುಗಳನ್ನು ಭದ್ರವಾಗಿ ಊರುವ ಪ್ರಯತ್ನ ಇಸ್ಲಾಂ ನಡೆಸುತ್ತಲೇ ಬಂದಿದೆ. ಸ್ವಾತಂತ್ರ್ಯದ ಬಳಿಕ ಇಂದಿನವರೆಗೂ ಈ ಧೋರಣೆಯನ್ನು ನಾವು ಗಮನಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ರಾಮ ಮಂದಿರ ನಿರ್ಮಾಣದ ಘಟನೆ‌. ಯಾವ ರಾಮ ಇಡೀ ದೇಶದ ಸಂಸ್ಕೃತಿಯ ಪ್ರತೀಕವಾಗಿ ಬಿಂಬಿಸಿಕೊಳ್ಳಬೇಕಿತ್ತೋ, ಧಾರ್ಮಿಕತೆಯ ಚೌಕಟ್ಟನ್ನು ಮೀರಿ ಎಲ್ಲಾ ಭಾರತೀಯರೂ ಸಂಭ್ರಮಿಸಬೇಕಿತ್ತೋ ಅದು ಧರ್ಮದ ಆಧಾರದಲ್ಲಿ ಬಿಂಬಿಸಿಕೊಳ್ಳುವ ಕೆಲಸ ನಡೆಯಿತು. ಇವೆಲ್ಲವೂ ಕೆಲವು ಆಡಳಿತಗಾರರ ವಿಭಜನೆಯ ಮೂಲಕ ತಮ್ಮ ಬುಡವನ್ನು ತಾವು ಭದ್ರಗೊಳಿಸುವ ಸಂಚಿನ ಫಲ ಎಂದು ಅವರು ಹೇಳಿದರು. ಈ ಸಂಚಿನ ಭಾಗವಾಗಿಯೇ ಇಂತಹ ಗಲಭೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ನಮ್ಮಲ್ಲಿ ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆ ಎಲ್ಲಾ ನಾಯಕರಲ್ಲಿಯೂ ಇಲ್ಲ. ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ವಿಭಜನೆಯ ಹೊರತಾಗಿ ನಾವೆಲ್ಲರೂ ಒಂದು ಎಂಬ ಒಗ್ಗೂಡಿಸುವ ಮನಸ್ಥಿತಿ ನಮ್ಮಲ್ಲಿ ಜಾಗೃತವಾದಾಗ ಮಾತ್ರ ಇಂತಹ ಘಟನೆಗಳ ಹಿಂದಿನ ಮನಸ್ಥಿತಿ, ಕಾರಣಗಳು ನಮ್ಮ ಅರಿವಿಗೆ ಬರುವುದಾಗಿ ಅವರು ಹೇಳಿದರು. ಈ ಘಟನೆಯನ್ನು ಅವಲೋಕಿಸಿದಾಗ ಮುಸ್ಲಿಂ ನಾಯಕತ್ವ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವಗಳ ನಡುವಿನ ತಿಕ್ಕಾಟದಿಂದಲೇ ಈ ಗಲಭೆ ನಡೆದಿದೆ ಎಂದು ತಿಳಿದುಕೊಳ್ಳಬಹುದು. ತಮ್ಮತನ ಬಂದಾಗ ಇಸ್ಲಾಂ‌ಗೆ ತಮ್ಮನ್ನು ಓಲೈಕೆ ಮಾಡುವವರೇ ಆದರೂ ಶತ್ರುಗಳೇ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ. ಅದಲ್ಲದೆ ರಾಜಕೀಯ ಸ್ವಾರ್ಥಕ್ಕಾಗಿ ಪ್ರತ್ಯೇಕ‌ವಾದದ ಓಲೈಕೆ ಮಾಡಿದರೆ ಮುಂದೊಮ್ಮೆ ಅದಕ್ಕೆ ಕಾಂಗ್ರೆಸ್ ಸಹ ಬಲಿಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಮಗೆ ಭಾರತೀಯ ಸಂಸ್ಕೃತಿ ಬೇಕೋ, ವಿಭಜಕ ಶಕ್ತಿಗಳು ಬೇಕೋ ಎಂಬುದನ್ನು ನೀವು ನಿರ್ಧರಿಸಬೇಕಾಗಿದೆ ಎಂದು ಕೋಣೆಮನೆ ತಿಳಿಸಿದರು.

ಅಲ್ಲದೆ ಮುಖವಾಡ ತೊಟ್ಟುಕೊಂಡು ಇಂತಹ ಕೆಲಸಗಳಿಗೆ ಕುಮ್ಮಕ್ಕು ನೀಡುವವರ ನೈಜತೆ ಸಮಾಜಕ್ಕೆ ಅರಿವಾಗಬೇಕಿದೆ. ಬೆಂಗಳೂರು ಗಲಭೆ ಕೇವಲ ಕಿಡಿಯಷ್ಟೇ. ಇಂತಹ ಘಟನೆಗಳು ದೇಶದೆಲ್ಲೆಡೆ ಕಂಡುಬರುತ್ತದೆ. ಸಮಯ ಬಂದಾಗಲೇ ಇಂತಹ ದುರಂತ ಘಟನೆಗಳು ಸ್ಪೋಟವಾಗುವುದು. ಆದ್ದರಿಂದ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ ಪ್ರಭು, ಹಿಂದುತ್ವ ಎಂದರೆ ಬಹುತ್ವದ ರಕ್ಷಣೆ, ಬದುಕುವ ವಿಧಾನ, ಪ್ರಕೃತಿಯ ವೈವಿಧ್ಯತೆಯ ಬಗ್ಗೆ ತಿಳಿಸಿಕೊಡುವ ಒಂದು ವಿಷಯವಾಗಿದೆ. ಹಿಂದೂ ಧರ್ಮದಲ್ಲಿ ಏಕತೆಯ ಬಗ್ಗೆ ಹೇಳಲಾಗಿದೆ. ವಿಭಜನೆಗೆ ಇಲ್ಲಿ ಅವಕಾಶವಿಲ್ಲ. ಆದರೆ ಇಸ್ಲಾಂ ಹಾಗಲ್ಲ. ತಮ್ಮನ್ನು ತಾವು ಭದ್ರಪಡಿಸಿಕೊಳ್ಳುವ ನಡುವೆ ಅವರಿಗೆ ಉಳಿದದ್ದೆಲ್ಲವೂ ಗೌಣ. ಮುಸ್ಲಿಂ ಮೂಲಭೂತವಾದಿಗಳ ಚಿಂತನೆಯೇ ಹಾಗೆ. ಮುಸ್ಲಿಂ ಲೀಗ್, ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಇನ್ನೂ ಅನೇಕ ಇಸ್ಲಾಮಿಕ್ ಸಂಘಟನೆಗಳು ಈ ವಿಭಜನೆಯನ್ನು ಬೆಂಬಲಿಸುವುದರ ಭಾಗವೇ ಹೌದು ಎಂದು ಅವರು ತಿಳಿಸಿದರು. ಅಲ್ಲದೆ ಇಂತಹ ಇಸ್ಲಾಂ ಸಂಘಟನೆಗಳ ನಿಷೇಧವಾದರೂ, ಮತ್ತೆ ಬೇರೆ ಹೆಸರಿನಲ್ಲಿ ನಿಷೇಧಕ್ಕೊಳಗಾದ ಸಂಘಟನೆಗಳ ತಾತ್ವಿಕ ಚಿಂತನೆಗಳನ್ನು ಬಿತ್ತುವ ಸಂಘಟನೆಗಳು ಸೃಷ್ಟಿಯಾಗುತ್ತವೆ. ಈ ವರೆಗೆ ಆಗಿರುವುದೂ ಅದೇ. ಆದ್ದರಿಂದ ನಾವು ಜಾಗೃತರಾಗಬೇಕು. ಹಾಗಾದಲ್ಲಿ ಮಾತ್ರ ಇಂತಹ ಘಟನೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಈ ಸಂಬಂಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಉದಾಹರಣೆಯಾಗಿ ನೀಡಿದ ಅವರು, ಮುಸ್ಲಿಂ ಸಂಘಟನೆಗಳು ಜಾಗತಿಕ ಸಹೋದರತ್ವದ ಕಲ್ಪನೆ ಹೊಂದಿದೆ ಎಂಬ ವಾದ ತಪ್ಪು. ಬದಲಾಗಿ ಅವರದ್ದು ವಿಶ್ವ ಭ್ರಾತೃತ್ವದ ಕಲ್ಪನೆಯಲ್ಲ. ಮುಸ್ಲಿಂ ರಿಂದ ಮುಸ್ಲಿಮರಿಗಾಗಿ ಮಾತ್ರವೇ ಇರುವ ಭ್ರಾತೃತ್ವದ ಚಿಂತನೆಯಾಗಿದೆ ಎಂದು ಹೇಳಿದರು. ಈ ಸಂಘಟನೆಗಳಿಗೆ ತಮ್ಮ ನಾಯಕತ್ವವೇ ಅಂತಿಮವಾಗಿರಬೇಕು ಎಂಬ ತಾತ್ವಿಕ ಚಿಂತನೆ ಇದೆ. ಇದನ್ನು ಸಾಧಿಸಲು ಇಂತಹ ಗಲಭೆಗಳನ್ನು ನಡೆಸುತ್ತಿದ್ದಾರೆ. ಧರ್ಮದ ವಿಚಾರ ಬಂದಾಗ ಅವರಿಗೆ ತಮಗೆ ಬೆಂಬಲ ನೀಡುವ ಪಕ್ಷಗಳು, ತಾವು ತಳ ವರ್ಗದ ಅಭಿವೃದ್ಧಿ ಆಶಯ ಹೊಂದಿದವರು ಎಂಬ ಸೋ ಕಾಲ್ಡ್ ಪರಿಕಲ್ಪನೆ ಮುಖ್ಯವಾಗುವುದಿಲ್ಲ. ಬೆಂಗಳೂರು ಗಲಭೆಯಲ್ಲಿ ನಡೆದಿರುವುದೂ ಇದೇ ಆಗಿದೆ ಎಂದು ಪ್ರಭು ತಿಳಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ತಾತ್ವಿಕ ಹಿನ್ನೆಲೆಯಲ್ಲಿ ಮಾತನಾಡಿದ ಜಿ.ಬಿ. ಹರೀಶ್ ಅವರು, ಈ ಗಲಭೆ ಇಸ್ಲಾಂ‌ನ ಮೂಲತತ್ವದ ಬಗ್ಗೆ ಯಾರೂ ಸೊಲ್ಲೆತ್ತಬಾರದು ಎಂಬ ಭಯವನ್ನು ಜನಸಾಮಾನ್ಯರ‌ಲ್ಲಿ ನಿರ್ಮಾಣ ಮಾಡುವ ಉದ್ದೇಶವನ್ನಿಟ್ಟುಕೊಂಡು ನಡೆದಿದೆ. ಅಲ್ಲದೆ ಮಾಪಿಳ್ಳ ದಂಗೆ ನಡೆದು 100 ವರ್ಷಗಳ ಆಚರಣೆಯ ಭಾಗವಾಗಿಯೂ ನಾವು ಬೆಂಗಳೂರು ಗಲಭೆ, ಕೆಲ ಸಮಯದ ಹಿಂದಷ್ಟೇ ನಡೆದ ದೆಹಲಿ ಗಲಭೆಯನ್ನೂ ಪರಿಗಣಿಸಬಹುದಾಗಿದೆ ಎಂದು ಹೇಳಿದರು.

Prajna Pravah

ಬೆಂಗಳೂರು ಗಲಭೆ ದೇಶದ ಸ್ವಾತಂತ್ರ್ಯ ದಿನದ ಆಚರಣೆಯ ಕೆಲವೇ ದಿನಗಳ ಹಿಂದೆ ನಡೆದಿದೆ. ಇದನ್ನು ಅಮಾಯಕ ಕೃತ್ಯ ಎಂದು ಪರಿಗಣಿಸಲಾಗದು. ಪೈಗಂಬರ್ ಬಗೆಗಿನ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಒಂದರಿಂದ ಈ ಕಿಡಿ ಹತ್ತಿಕೊಂಡಿತು ಎಂದು ಹೇಳಲಾಗುತ್ತದೆ. ಅಂದರೆ ಇಸ್ಲಾಂ ಅನುಯಾಯಿಗಳಿಗೆ ಪೈಗಂಬರ್ ಅಂತಿಮ. ಆತ ಹೇಳಿದ್ದನೆಂದು ನಂಬಲಾದ ವಿಚಾರಗಳೇ ಸರ್ವಶ್ರೇಷ್ಠ. ಅದನ್ನು ಪಾಲಿಸಬೇಕು. ಇಲ್ಲವೇ ತೆಪ್ಪಗಿರಬೇಕು. ಪ್ರಶ್ನಿಸುವ ಕೆಲಸ ಮಾಡಬಾರದು. ಹಾಗಾದಲ್ಲಿ ಅದು ಅಪರಾಧ ಎಂದೇ ಬಿಂಬಿಸಲಾಗುತ್ತದೆ. ಇದೊಂದು ರೀತಿಯ ಸಮಯಸಾಧಕತನಕ್ಕೆ ಸಾಕ್ಷಿ. ಆ ಸಮಯಸಾಧಕತನವೇ ಬೆಂಗಳೂರಿನ ಗಲಭೆಗೂ ಕಾರಣ ಎಂದು ತಿಳಿಸಿದರು.

ಇಸ್ಲಾಂ ಸಂಘಟನೆಗಳ ತಾತ್ವಿಕ‌ತೆ ರಾಜಕೀಯ ಪ್ರೇರಿತ ತಾತ್ವಿಕತೆಯಾಗಿದೆ. ಅವುಗಳು ಕೊಂಚ ಕಾಲ ಶಾಂತವಾಗಿದೆ ಎಂದರೆ, ಮುಂದೆ ಏನೋ ಒಂದು ಕುಕೃತ್ಯ ನಡೆಸಲು ಸಂಚು ಹೂಡುತ್ತಿದೆ ಎಂದೇ ಅರ್ಥ. ಯಾವುದೇ ವಿಚಾರವಾಗಲಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಅವರಲ್ಲಿಲ್ಲ. ಅವರಲ್ಲಿ ಇರುವುದು ಈ ಹಿಂದೆ ತಮ್ಮ ಧರ್ಮೀಯರು ಸ್ಥಾಪಿಸಿದ ಭಯವನ್ನು ಈಗಿನ ಜನರಲ್ಲಿಯೂ ಜೀವಂತವಿರಿಸುವಂತೆ ನೋಡಿಕೊಳ್ಳುವುದು. ಹಾಗಾಗಿ ಆಗಾಗ್ಗೆ ಇಂತಹ ಕೃತ್ಯಗಳನ್ನು ನಡೆಸುವ ಮೂಲಕ ಸ್ಥಾಪಿತ ಭಯವನ್ನು ನೆನಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇಂತಹ ಒಂದು ಹಿಡನ್ ಅಜೆಂಡಾ ಇದ್ದಾಗಲೇ ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿರಾರು ಜನ ಸೇರಿಸಲು ಸಾಧ್ಯ ಎಂದು ಅವರು ನುಡಿದರು.

ಇತಿಹಾಸದಿಂದ ಈ ವರೆಗೆ ನಡೆದಿರುವ ಯಾವ ಘಟನೆಗಳೂ ಆಕಸ್ಮಿಕವಲ್ಲ. ಬದಲಾಗಿ ಪೂರ್ವಯೋಜಿತವಾಗಿದೆ. ಇದೊಂದು ಸರಪಳಿಯಂತೆ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ. ಈಗಿನ ಕಾಲಘಟ್ಟದಲ್ಲಿ ಆನ್‌ಲೈನ್‌ನಲ್ಲಿಯೂ ಇಂತಹ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ಜನಸಾಮಾನ್ಯರು ಇಂತಹ ಮನಸ್ಥಿತಿಯ ಹಿಂದಿರುವ ಕಾರಣಗಳನ್ನು ತಾವೇ ಅಧ್ಯಯನ ನಡೆಸಿ ಅರಿತುಕೊಳ್ಳಬೇಕು. ಆ ಮೂಲಕ ಜಾಗೃತ ಸಮಾಜ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ ಇಂದು ಯುರೋಪ್ ಹೇಗೆ ಇಸ್ಲಾಮಿಕರಣಕ್ಕೆ ತುತ್ತಾಗುತ್ತಿದೆಯೋ, ಅಂತಹದೇ ದುರಂತ ನಮ್ಮ ಸಮಾಜಕ್ಕೂ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.

ವಿಚಾರಮಂಡನೆಯ ಬಳಿಕ ಸಂವಾದ ನಡೆಯಿತು. ವಿಕ್ರಮ ವಾರ ಪತ್ರಿಕೆಯ ಸಂಪಾದಕ ವೃಶಾಂಕ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Samskrita speaking students while playing marbles at Adichunchanagiri Mutt

Mon Aug 24 , 2020
Journalist Ramesh Doddapura has documented his experience of the Samskrita speaking students at Adichunchanagiri Mutt while playing marbles! The FB story is brought to English by Latha Bhat.   These children casually conversing in Sanskrit while playing with marbles, is like a slap on those intellectuals drawing one and a […]