ಇಂದು ಓದುಗರಿಗೆ ಪುಸ್ತಕ ಕೊಳ್ಳಲು ಅನೇಕ ಅವಕಾಶಗಳು ಲಭ್ಯವಿವೆ. ಅನೇಕ ಪುಸ್ತಕದಂಗಡಿಗಳು, ಆನ್ಲೈನ್ ಮಾರಾಟ ಮಳಿಗೆಗಳು, ಕಿಂಡಲ್ ರೀತಿಯ ಉಪಕರಣಗಳು, ಆಡಿಯೋ ಬುಕ್ಸ್, ನಗರಕೇಂದ್ರ ಗ್ರಂಥಾಲಯಗಳು, ವಿಕಿಪೀಡಿಯ, ಆನ್ಲೈನ್ ಎನ್ಸೈಕ್ಲೋಪಿಡಿಯಾ, ವೆಬ್ಸೈಟ್ಗಳು ಇತ್ಯಾದಿ ಇತ್ಯಾದಿ. ಆದರೆ ಸುಮಾರು 65 ವರ್ಷಗಳ ಹಿಂದೆ ಅದಾವುದೂ ಇರಲಿಲ್ಲ. ಸಾಹಿತ್ಯವನ್ನುಕೊಂಡು ಓದಬೇಕೆನ್ನುವ ಹಂಬಲ ಇರುವವರಿಗೆ ಸಾಹಿತ್ಯದ ಲಭ್ಯತೆ ಬಹಳ ಕಡಿಮೆ ಇತ್ತು. ಶಿವಮೊಗ್ಗದ ಓದುಗರಿಗೆ ಪುಸ್ತಕಗಳು ಮರೀಚಿಕೆಯೇ ಆಗಿದ್ದವು. ಆ ಕಾಲದಲ್ಲಿ ಶಿವಮೊಗ್ಗದ ಓದುಗರಿಗೆ ಉತ್ತಮ ರೀತಿಯ ಎಲ್ಲ ಅಭಿರುಚಿಯ ಸಾಹಿತ್ಯಗಳು, ಪುಸ್ತಕಗಳು ಲಭ್ಯವಾಗುವಂತಹ ಒಂದು ಪುಸ್ತಕದ ಅಂಗಡಿಯನ್ನು ಶಿವಮೊಗ್ಗದ ಪ್ರಖ್ಯಾತ ಗಾಂಧಿ ಬಜಾರ್ ಪ್ರವೇಶದ್ವಾರದಲ್ಲಿಯೇ ಪ್ರಾರಂಭ ಮಾಡಿದವರು ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಕಾರ್ಯಕರ್ತರಾಗಿದ್ದಂತಹ ಶ್ರೀ ಕ. ನಾಗರಾಜರಾವ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಬಿಹಾರದ ರಾಜ್ಯಪಾಲರಾಗಿ ನಿವೃತ್ತರಾದ ಗೌರವಾನ್ವಿತ ಶ್ರೀ ರಾಮಾಜೋಯಿಸ್ ರವರು. ಕ.ನಾಗರಾಜ ಹೆಸರಿನ ಉತ್ತರಾರ್ಧವನ್ನು ಮತ್ತು ರಾಮಾಜೋಯಿಸ್ ಹೆಸರಿನ ಪೂರ್ವಾರ್ಧವನ್ನು ಸೇರಿಸಿ “ರಾಜಾರಾಮ್ ಬುಕ್ ಹೌಸ್” ಪ್ರಾರಂಭ ಮಾಡಿದರು.

ಹೀಗೆ ಶಿವಮೊಗ್ಗದ ಮೊದಲ ಪುಸ್ತಕದ ಅಂಗಡಿಯಾಗಿ ಪ್ರಾರಂಭವಾದದ್ದು, ಕಳೆದ 65 ವರ್ಷಗಳಿಂದ ಶಿವಮೊಗ್ಗದ ಸಾಹಿತ್ಯಾಸಕ್ತರ, ಓದುಗರ ನೆಚ್ಚಿನ ಮೆಚ್ಚಿನ ಆಕರವಾಗಿ ಇಂದಿಗೂ ತನ್ನ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಇಂದು ಶ್ರೀ ಕ.ನ ಮಂಜುನಾಥ್, ದಿವಂಗತ ನಾಗರಾಜರವರ ಮಗ, ಈ ಪುಸ್ತಕದ ಅಂಗಡಿಯನ್ನು ನಡೆಸುತ್ತಿದ್ದಾರೆ. ತನ್ನ ಮೂಲಸ್ಥಾನದಿಂದ ಹೊಸ ಸ್ಥಳಕ್ಕೆ ಸ್ಥಿತ್ಯಂತರವಾಗಿ ಹೊಸರೂಪದೊಂದಿಗೆ, ಆಧುನಿಕ ಸೌಲಭ್ಯಗಳೊಂದಿಗೆ ಇಂದಿಗೂ ಶಿವಮೊಗ್ಗದ ಬಹು ಮೆಚ್ಚಿನ ಪುಸ್ತಕದ ಅಂಗಡಿಯಾಗಿ ಗ್ರಾಹಕರನ್ನು, ಓದುಗರನ್ನು ಸೆಳೆಯುತ್ತಲೇ ಇದೆ. 1943-44 ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾದ ಆರೆಸ್ಸೆಸ್ನ ದುರ್ಗಿ ಶಾಖೆಯ ಮೂಲಕ ಸಂಘ ಪ್ರವೇಶ ಮಾಡಿದ ಶ್ರೀ ನಾಗರಾಜರಾವ್ ಮೈಸೂರಿನಲ್ಲಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಸಂಘಕ್ಕೆ ಇನ್ನಷ್ಟು ಹತ್ತಿರವಾದರು.

ಸಂಘದ ಮೇಲೆ ಪ್ರತಿಬಂಧ ಇದ್ದ ಸಂದರ್ಭದಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ಇವರು ಜೈಲುವಾಸವನ್ನೂ ಅನುಭವಿಸಿದರು. ನಂ ಮಧ್ವರಾವ್, ಮೈ ಚ ಜಯದೇವ್ ಮೊದಲಾದವರ ಸಹವಾಸ ಸಿಕ್ಕಿತ್ತು. ನಂತರ ನಾಗಮಂಗಲದಲ್ಲಿ ವಿಸ್ತಾರಕ್ಕಾಗಿ ಕೂಡ ಕೆಲಸ ಮಾಡಿದರು. ಮದ್ರಾಸಿನಲ್ಲಿ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ ಪೂರೈಸಿದರು. ಭದ್ರಾವತಿಯಲ್ಲಿ ನಡೆದ ಜನಸಂಘದ ಕಾರ್ಯಕ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದರು. ಸ್ವರ್ಗೀಯ ಯಾದವರಾವ್ ಜೋಶಿಯವರು ಸಂಘದ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜಿಯವರಿಗೆ ಇವರನ್ನು ‘ಕರ್ನಾಟಕದ ಬುದ್ಧಿಜೀವಿ’ ಎಂದೇ ಪರಿಚಯ ಮಾಡಿಕೊಡುತ್ತಿದ್ದರು. ಇವರೊಬ್ಬರು ಕವಿ, ರಾಗ ಸಂಯೋಜಕ ಮತ್ತು ಹಾಡುಗಾರ. ಅನೇಕ ದೇಶಭಕ್ತಿಗೀತೆಗಳ ರಚನೆಕಾರರು.

ಸರ್ವ ಸುಂದರ ನಾಡು ವೀರವರ್ಯರ ಬೀಡುಕರ್ಮಭೂಮಿಯ ನೋಡು ಭಾರತದೊಳಿಲ್ಲಿ… ಅವರ ಪ್ರಖ್ಯಾತ ರಚನೆ. ಶ್ರೀ ಗುರೂಜಿ ಅವರು ಶಿವಮೊಗ್ಗಕ್ಕೆ ಬಂದಾಗ ಯಾದವರಾವ್ ಜೋಶಿಯವರ ಅಪೇಕ್ಷೆಯಂತೆ ‘ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು ‘ ಗೀತೆಯನ್ನು ರಚಿಸಿ ಶ್ರೀ ಗುರೂಜಿ ಅವರ ಮುಂದೆ ಅವರೇ ಹಾಡಿದ್ದರು. ಹಿಂದೂಸ್ತಾನ್ ಸಮಾಚಾರ ಪತ್ರಿಕೆಗೆ ಪ್ರತಿನಿಧಿಯಾಗಿದ್ದರು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಾಗ ವಿಶೇಷ ಬಾತ್ಮೀದಾರರಾಗಿ ಭಾಗವಹಿಸಿ ವಿಶ್ಲೇಷಣೆಯನ್ನು ಆರ್ಗನೈಸರ್ ಪತ್ರಿಕೆಗೆ ಬರೆದಿದ್ದರು. ಅದು ಮುಖಪುಟದಲ್ಲಿಯೇ ಪ್ರಕಟವಾಗಿತ್ತು. ಆರ್ಗನೈಸರ್ ಮತ್ತು ವಿಕ್ರಮ ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ನಾಗರಾಜರಾವ್ ರವರೇ ಪ್ರಾರಂಭಮಾಡಿದ ‘ಮಲ್ನಾಡ್ ವಾರ್ತಾ’ ಪತ್ರಿಕೆಗೆ ತಾವೇ ಪ್ರಕಾಶಕರು ಮತ್ತು ಸಂಪಾದಕರಾಗಿ ಹಾಗೂ ಶ್ರೀ ರಾಮಾಜೋಯಿಸ್ ರವರು ಸಹ ಸಂಪಾದಕರಾಗಿ ಕೆಲಸ ಮಾಡಿದ್ದರು. 1965-66ರಲ್ಲಿ ಅಮೆರಿಕಾ ಪ್ರವಾಸ ಮಾಡಿ ಅಲ್ಲಿನವರಿಗೆ ಕನ್ನಡ ಕಲಿಸಲು ಆರು ತಿಂಗಳುಗಳ ಕಾಲ ಅಮೆರಿಕದಲ್ಲಿ ಉಳಿದಿದ್ದರು. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಭಾರತ-ಭಾರತಿ ಪುಸ್ತಕ ಸಂಗ್ರಹದಲ್ಲಿ ಶ್ರೀ ಬಾಯಿ ಪರಮಾನಂದ ರ ಬಗ್ಗೆ ಪುಸ್ತಕವನ್ನು ಕ.ನಾಗರಾಜರು ಬರೆದಿದ್ದಾರೆ. ಹೀಗೆ 50- 60ರ ದಶಕದಲ್ಲಿಯೇ ಕನ್ನಡದ ಸೇವೆಯನ್ನು ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರೀರ್ವರು ಮಾಡಿದ್ದರು. ಇಂದು ಕನ್ನಡ ರಾಜ್ಯೋತ್ಸವ, ಹಾಗಾಗಿ ಇದೆಲ್ಲ ಮತ್ತೆ ನೆನಪಾಯಿತು.

  • ಮಧುಕರ ಮತ್ತೂರು, ಶಿವಮಗ್ಗ